ಜನಮತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜನಮತ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ಸಹಕಾರಿ ಒಡೆತನದಲ್ಲಿ ಒಂದು ವಾರಪತ್ರಿಕೆ ಹಾಗೂ ಒಂದು ದಿನಪತ್ರಿಕೆ ನಡೆಸಬೇಕೆಂಬ ಉದ್ದೇಶದಿಂದ ಗುದ್ಲೆಪ್ಪ ಹಳ್ಳಿಕೇರಿ ಮತ್ತು ಗೆಳೆಯರು 1967ರ ಆಗಸ್ಟ್ 25ರಂದು ಸ್ಥಾಪಿಸಿದ ಗಾಂಧಿ ಸ್ಮಾರಕ ಸಹಕಾರಿ ವೃತ್ತಿಪತ್ರಿಕಾ ಸಂಘ ಜನಮತ ವಾರಪತ್ರಿಕೆಯನ್ನು 1969ರ ನವೆಂಬರ್ 1ರಂದು ಆರಂಭಿಸಿತು. ಗುದ್ಲೆಪ್ಪ ಹಳ್ಳಕೇರಿಯವರ ಪ್ರಯತ್ನದಿಂದ ಇದಕ್ಕೆ 35,000 ರೂ. ಷೇರು ಬಂಡವಾಳ ಸಂಗ್ರಹ ಆಯಿತು. ಸರ್ಕಾರ 30,000 ರೂ.ಗಳ ಬಂಡವಾಳ ತೊಡಗಿಸಿತು. ಪತ್ರಿಕೆಯನ್ನು ಮೊದಲು ಸಂಯುಕ್ತ ಕರ್ನಾಟಕ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. 1970ರ ನವೆಂಬರ್‍ನಿಂದ ಜನಮತ ತನ್ನ ಸ್ವಂತ ಮುದ್ರಣಾಲಯದಲ್ಲೇ ಅಚ್ಚಾಗತೊಡಗಿತು.

ಸಂಘದ ಅಧ್ಯಕ್ಷರಾದ ಗುದ್ಲೆಪ್ಪ ಹಳ್ಳಕೇರಿಯವರು ಅದರ ಪ್ರಥಮ ಕಾರ್ಯ ನಿರ್ವಾಹಕ ಸಂಪಾದಕರು. 1971ರ ಮೇ 14ರಂದು ಹಳ್ಳಿಕೇರಿಯವರು ನಿಧನರಾದ ಅನಂತರ ಬಿ.ವಿ.ಪೂರ್ಣೇಂದ್ರ ಹಾಗೂ ಎಸ್.ಎಂ. ಸಾಗರ್ ಅವರು ಅನುಕ್ರಮವಾಗಿ ಕಾರ್ಯನಿರ್ವಾಹಕ ಸಂಪಾದಕರಾದರು. ಪತ್ರಿಕೆಯ ಪ್ರಥಮ ಕಾರ್ಯನಿರತ ಸಂಪಾದಕರು ಕಲ್ಲೆ ಎನ್. ಶಿವೋತ್ತಮರಾವ್, ಅನಂತರ ಅನುಕ್ರಮವಾಗಿ ಪಿ.ಸಿದ್ದಪ್ಪ ಹಾಗೂ ವಿ.ಕೆ. ಜಾಗೀರದಾರೆ ಈ ಕೆಲಸ ನಿರ್ವಹಿಸಿದರು. ಉದ್ದಕ್ಕೂ ಎಸ್. ಎಂ. ಸಾಗರ್ ಅವರು ಪತ್ರಿಕೆಯ ಮುದ್ರಕರೂ ಪ್ರಕಾಶಕರೂ ಆಗಿದ್ದರು. ಪತ್ರಿಕೆಯ ಪುಟಗಳ ಸಂಖ್ಯೆ 12.

ಎಲ್ಲ ಪ್ರಾಥಮಿಕ ಸಹಕಾರ ಸಂಘಗಳೂ ಜನಮತವನ್ನು ತರಿಸಿಕೊಂಡು ಪ್ರೋತ್ಸಾಹ ನೀಡಿದ್ದರಿಂದ ಆರಂಭದಲ್ಲಿ ಹುರುಪಿನಿಂದ ಪ್ರಕಟವಾಗತೊಡಗಿದ ಜನಮತದ ಪ್ರಸಾರ 2,000 ವನ್ನು ಮುಟ್ಟಿತ್ತು. ಆದರೆ ಅನಂತರ ಹಣದ ಮುಗ್ಗಟ್ಟಿನಿಂದಾಗಿ ಪತ್ರಿಕೆಯ ಪ್ರಕಟಣೆ 1972ರ ಜನವರಿಯಲ್ಲಿ ನಿಂತುಹೋಯಿತು. (ಎಸ್.ಸಿ.ಜಿ.)

"https://kn.wikipedia.org/w/index.php?title=ಜನಮತ&oldid=759134" ಇಂದ ಪಡೆಯಲ್ಪಟ್ಟಿದೆ