ವಿಷಯಕ್ಕೆ ಹೋಗು

ಜನಪದ ವೈದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಂಪ್ರದಾಯಿಕ ಔಷಧಿಗಳು

ಯಾವುದನ್ನು ಜನಸಾಮಾನ್ಯರು ಸಾಮಾನ್ಯವಾಗಿ ಹಳ್ಳಿವೈದ್ಯ, ನಾಟಿವೈದ್ಯ ಎಂದು ಕರೆಯುವರೋ ಅದನ್ನೇ ಶಾಸ್ತ್ರೀಯವಾಗಿ ಜನಪದ ವೈದ್ಯ ಎಂದು ಕರೆಯಬಹುದು.[೧] ಜಾನಪದದಲ್ಲಿ ಸಾಹಿತ್ಯಕ ಬಗೆ, ಭಾಷಿಕ ಬಗೆ ವೈಜ್ಞಾನಿಕ ಬಗೆ, ಕ್ರಿಯಾತ್ಮಕ ಬಗೆ ಎಂಬ ನಾಲ್ಕು ಬಗೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಜನಪದ ವೈದ್ಯ ವೈಜ್ಞಾನಿಕ ಬಗೆಗೆ ಸೇರುತ್ತದೆ. ಜನಪದರು ಕೆಲಸದ ಆಯಾಸ ನೀಗಿಕೊಳ್ಳಲು ಮತ್ತು ಸಂತೋಷಪಡಲು ಜನಪದ ಸಾಹಿತ್ಯ ಹಾಗೂ ಜನಪದ ಕಲೆಗಳನ್ನು ಸೃಷ್ಟಿಸಿದರು. ದೇವರಿಗೆ ಹೆದರಿ ಸಂಪ್ರದಾಯಗಳನ್ನು ಮತ್ತು ಹಬ್ಬಗಳನ್ನು ಆಚರಿಸಿದರು ; ಹಾಗೆಯೇ ತಮಗೆ ಬಂದ ರೋಗಗಳನ್ನು ಪರಿಹಾರ ಮಾಡಿಕೊಳ್ಳಲು ಜನಪದ ವೈದ್ಯವನ್ನು ಕಂಡುಕೊಂಡರು. ದಿನನಿತ್ಯದ ಜೀವನದಲ್ಲಿ ಜನಪದರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪ್ರಕೃತಿಯಲ್ಲಿ ದೊರೆಯುವ ಬಗೆಬಗೆಯ ಬೇರುಗಳು, ಎಲೆಗಳು, ಕಾಯಿಗಳು, ಹಣ್ಣುಗಳು, ಪ್ರಾಣಿಜನ್ಯವಾದ ವಸ್ತುಗಳು, ದಿನಬಳಕೆಯ ಸಾಮಾನ್ಯ ವಸ್ತುಗಳು ಎಲ್ಲವನ್ನೂ ಬುದ್ಧಿವಂತಿಕೆಯಿಂದ ಪ್ರಯೋಗಶೀಲತೆಯಿಂದ ಬಳಸಿಕೊಂಡು ರೋಗಗಳನ್ನು ಪರಿಹರಿಸಿಕೊಳ್ಳಲು ಅವರು ಯತ್ನಿಸಿದರು.[೨]

ಜನಪದ ವೈದ್ಯದ ಸ್ವರೂಪ[ಬದಲಾಯಿಸಿ]

ಮನೋವೈದ್ಯ, ಪಶುವೈದ್ಯ, ಮಕ್ಕಳ ವೈದ್ಯ, ಸಾಮಾನ್ಯ ವೈದ್ಯ ಎಂಬ ವಿಭಾಗಗಳಲ್ಲಿ ಜನಪದ ವೈದ್ಯದ ಸ್ವರೂಪವನ್ನು ವಿವರಿಸಬಹುದು. ಇವು ಮಾತ್ರವಲ್ಲದೆ ಚಿಕ್ಕಪುಟ್ಟ ಶಸ್ತ್ರಚಿಕಿತ್ಸೆಗಳನ್ನೂ ಜನಪದ ವೈದ್ಯದಲ್ಲಿ ಗುರುತಿಸಲು ಸಾಧ್ಯ. ಮನೋವೈದ್ಯ ಜನಪದ ವೈದ್ಯದಲ್ಲಿ ಪ್ರಧಾನವಾದ ಸ್ಥಾನ ಪಡೆದಿದೆ. ಮನಸ್ಸಿನ ಮೇಲೆ ಪ್ರೇರಣೆ ಉಂಟುಮಾಡುವ ಪರಿಣಾಮ ಎಷ್ಟೆಂಬುದು ಮನೋವಿಜ್ಞಾನವನ್ನು ಓದಿದ ಎಲ್ಲರಿಗೂ ತಿಳಿದಿರುವ ವಿಷಯ. ಜನಪದ ವೈದ್ಯದ ವಿವರಗಳನ್ನು ಪರಿಶೀಲಿಸಿದಾಗ ಅಲ್ಲಿನ ರೋಗಗಳಿಗೆ ಪ್ರೇರಣೆಯೇ ಮೂಲವಾಗಿದ್ದು. ಮನಸ್ಸಿನ ಪರಿಣಾಮ ದೇಹದ ಮೇಲೆ ಆಗಿರುವುದರಿಂದ ಉಂಟಾಗಿರುವ ಮನೋದೈಹಿಕ ರೋಗಗಳು ಸಾಕಷ್ಟಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯ ರೋಗಗಳ ಲಕ್ಷಣಗಳ ವಿವರಗಳು, ಚಿಕಿತ್ಸಾಕ್ರಮಗಳು-ಇವುಗಳ ಸಂಗ್ರಹ ಹಾಗೂ ಅಧ್ಯಯನ ಜನಪದ ವೈದ್ಯದಲ್ಲಿ ಪ್ರಮುಖವಾದ ಶಾಖೆಯಾಗುತ್ತದೆ. ಮಂತ್ರ, ಮಾಟ, ದೃಷ್ಟಿ ತೆಗೆಯುವುದು, ದೆವ್ವ ಬಿಡಿಸುವುದು, ದೇವರ ಪೂಜೆ ಮಾಡಿ ತೀರ್ಥ ಕೊಡುವುದು ಮೊದಲಾದ ಸಂದರ್ಭಗಳಲ್ಲೆಲ್ಲ ಜನಪದ ವೈದ್ಯರು ರೋಗಿಗಳಿಗೆ ಕೊಡುವುದು ಮನಶ್ಚಿಕಿತ್ಸೆ ಎಂದೇ ಹೇಳಬಹುದು. ಒಂದೊಂದು ಕಾಯಿಲೆಯನ್ನೂ ಗುಣಪಡಿಸಲು ಒಂದೊಂದು ಔಷಧಿ ಬಳಸಬೇಕೆಂಬುದನ್ನು ಅನುಭವದಿಂದ ಅರಿತ ಜನಪದರು ಇದರಿಂದ ಹೊಸ ವಿದ್ಯೆಯನ್ನು ತಿಳಿದಂತಾಯಿತು. ಈ ವಿದ್ಯೆಯಲ್ಲಿ ಪಾರಂಗತರಾದವರು ಆಯಾ ಪರಿಸರದಲ್ಲಿ ಹೆಚ್ಚು ಗೌರವ ಪಡೆದರು. ಜನಪದ ವೈದ್ಯ ಹುಟ್ಟಿದ, ಬೆಳೆದು ಬಂದ ಹಾಗೂ ಈವರೆಗೆ ಉಳಿದು ಬಂದಿರುವ ಕ್ರಮ ಹೀಗೆ ಎಂದು ಹೇಳಬಹುದು. ಇದೇ ಎಲ್ಲ ವೈದ್ಯದ, ಮುಖ್ಯವಾಗಿ ಆಯುರ್ವೇದದ ಮೂಲವೆನ್ನಬಹುದು.[೩]

ಜನಪದ ವೈದ್ಯದ ಸಂಗ್ರಹ[ಬದಲಾಯಿಸಿ]

ಶಿಷ್ಟ ವೈದ್ಯ ಜನಪದ ವೈದ್ಯದಿಂದ ಇಂದಿಗೂ ಕಲಿಯಬೇಕಾದ ವಿಷಯ ಅಗಾಧವಾಗಿದೆ. ಹೀಗಾಗಬೇಕಾದರೆ ಜನಪದ ವೈದ್ಯದ ಸಂಗ್ರಹ ಮತ್ತು ಸಂಶೋಧನೆ ಅನಿವಾರ್ಯವಾಗುತ್ತದೆ.[೪] ಜಾನಪದದ ಪ್ರತಿಯೊಂದು ಪ್ರಕಾರದ ಸಂಗ್ರಹಾಕಾರ್ಯವೂ ಕಠಿಣವಾದುದು; ಅದರಲ್ಲಿಯೂ ಜನಪದ ವೈದ್ಯದ ಸಂಗ್ರಹವಂತೂ ಇನ್ನೂ ಹೆಚ್ಚು ಕಠಿಣವಾದುದು. ಜನಪದ ವೈದ್ಯ ಕೆಲವು ಜನರ ಕಸುಬಾಗಿರುವುದರಿಂದ ಅವರ ಜೀವನ, ಸಾಮಾಜಿಕ ಮರ್ಯಾದೆ ಮೊದಲಾದ ಅಂಶಗಳು ಅವರ ಆ ವೈದ್ಯರ ಮೇಲೆ ಅವಲಂಬಿತವಾಗಿರುವುದರಿಂದ ಸಂಗ್ರಾಹಕರಿಗೆ ಅವರು ತಮಗೆ ತಿಳಿದಿರುವ ವೈದ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಸುಲಭವಾಗಿ ತಿಳಿಸುವುದಿಲ್ಲ.

ವೈದ್ಯದಲ್ಲಿ ಬಳಕೆಯಾಗುವ ವಸ್ತುಗಳು[ಬದಲಾಯಿಸಿ]

ಜನಪದ ವೈದ್ಯದಲ್ಲಿ ಬಳಕೆಯಾಗುವ ವಸ್ತುಗಳು ಸುಲಭವಾಗಿ ದೊರಕುತ್ತದೆ. ಅವುಗಳಲ್ಲಿ ಬಹುಪಾಲಿನವು ನಮ್ಮ ಸುತ್ತುಮುತ್ತಲೇ ಸಿಗುತ್ತದೆ. ಜೇನುತುಪ್ಪ, ನಿಂಬೆಹಣ್ಣು, ಬಗೆಬಗೆಯ ಸೊಪ್ಪುಗಳು, ತುಳಸಿ ತಾಮ್ರದ ತಗಡು, ಸಗಣಿ, ವೀಳ್ಯದೆಲೆ, ಬಾಲೆಯ ಕರೆ, ಶುಂಠಿ, ಹೊಗೆಸೊಪ್ಪು, ಹಾಲು, ಕೋಳಿಮೊಟ್ಟೆ, ಹರಳೆಣ್ಣೆ, ಉಪ್ಪು, ಮೆಣಸಿನಕಾಯಿ, ಲೋಳೆ ಸರ, ಅರಸಿನದ ಕೊನೆ, ಬಜೆ ಕೊನೆ, ಮಜ್ಜಿಗೆ, ದೊಡ್ಡಪತ್ರೆ, ತುಂಬೆಸೊಪ್ಪು, ಎಕ್ಕದ ಎಲೆ, ಜೇಡನಬಲೆ, ನಂದಿಬಟ್ಟಲ ಹೂ - ಮೊದಲಾದ ಹಲವಾರು ಪದಾರ್ಥಗಳು ಜನಪದ ವೈದ್ಯದಲ್ಲಿ ಬಳಕೆಯಾಗುತ್ತವೆ.[೫]

ಉಲ್ಲೇಖಗಳು[ಬದಲಾಯಿಸಿ]

  1. Fokunang, CN; Ndikum, V; Tabi, OY; Jiofack, RB; Ngameni, B; Guedje, NM; Tembe-Fokunang, EA; Tomkins, P; Barkwan, S; Kechia, F; Asongalem, E; Ngoupayou, J; Torimiro, NJ; Gonsu, KH; Sielinou, V; Ngadjui, BT; Angwafor, F; Nkongmeneck, A; Abena, OM; Ngogang, J; Asonganyi, T; Colizzi, V; Lohoue, J (2 April 2011). "Traditional Medicine: Past, Present and Future Research and Development Prospects and Integration in the National Health System of Cameroon". African Journal of Traditional, Complementary, and Alternative Medicines. pp. 284–295. Retrieved 11 January 2020.
  2. "Traditional, Complementary and Integrative Medicine". www.who.int. Retrieved 11 January 2020. {{cite news}}: Cite has empty unknown parameter: |1= (help)
  3. Sen, Saikat; Chakraborty, Raja; De, Biplab (2016). "Indian Traditional Medicinal Systems, Herbal Medicine, and Diabetes". Diabetes Mellitus in 21st Century. Springer Singapore. pp. 125–151. doi:10.1007/978-981-10-1542-7_10. Retrieved 11 January 2020. {{cite news}}: Cite has empty unknown parameter: |1= (help)
  4. "Traditional Indian medicine system, Ayurveda, Siddha, Unani, Ayurvedic medicines, traditional system of medicine, history of India traditional medicine". www.civilserviceindia.com. Archived from the original on 11 ಜನವರಿ 2020. Retrieved 11 January 2020.
  5. Pandey, M. M.; Rastogi, Subha; Rawat, A. K. S. (2013). "Indian Traditional Ayurvedic System of Medicine and Nutritional Supplementation". Evidence-Based Complementary and Alternative Medicine. pp. 1–12. doi:10.1155/2013/376327. Retrieved 11 January 2020. {{cite news}}: Cite has empty unknown parameter: |1= (help)CS1 maint: unflagged free DOI (link)