ಚೇರವ್ ನೃತ್ಯ
ಭಾರತದ ಏಳು ಸಹೋದರಿ ರಾಜ್ಯಗಳಲ್ಲಿ ಒಂದಾಗಿರುವ ಮಿಜೋರಂ ರಾಜ್ಯದ ಪ್ರಾಚೀನ ನೃತ್ಯ ಪ್ರಕಾರ ಚೇರವ್ ನೃತ್ಯ.[೧] ಬಿದಿರಿನ ಸಹಾಯದಿಂದ ಮಾಡಲ್ಪಡುವ ಈ ನೃತ್ಯ ಪ್ರಕಾರದಲ್ಲಿ ಬಿದಿರನ್ನು ಅಡ್ಡಲಾಗಿ ನೆಲದಲ್ಲಿ ಮಲಗಿಸಿ ಚೌಕಾಕಾರ ರಚಿಸಿರುತ್ತಾರೆ.[೨] ನರ್ತಕರು ಬಿದಿರನ್ನು ತಿರುಗಿಸಿದರೆ, ನರ್ತಕಿಯರು ಬಿದಿರಿನ ಚೌಕದಲ್ಲಿ ಒಳಹೊರಗೆ ಹೆಜ್ಜೆ ಹಾಕುತ್ತಾರೆ. ಮಿಜೋ ಪಂಗಡದ ಪ್ರಾಚೀನ ನೃತ್ಯ ಎಂದು ಕರೆಯಲ್ಪಡುವ ಚೇರವ್ ಅಲ್ಲಿನ ಜಾತ್ರಾ ಸಮಾರಂಭಗಳ ಕೇಂದ್ರ ಬಿಂದು. ಒಂದನೇ ಶತಮಾನದಲ್ಲಿಯೇ ಚೇರವ್ ನೃತ್ಯದ ಉಗಮವಾಯಿತು ಎಂಬ ಪ್ರತೀತಿ ಇದೆ. ಉದ್ದನೆಯ ಬಿದಿರಿನ ಸಹಾಯದಿಂದ ಮಾಡಲ್ಪದುವುದರಿಂದ ಬಿದಿರು ನೃತ್ಯ ಎಂಬ ಹೆಸರೂ ಇದ. ಪಿಲಿಫೈನ್ಸ್ ದೇಶದಲ್ಲೂ ಈ ನೃತ್ಯ ಪ್ರಕಾರ ಚಾಲ್ತಿಯಲ್ಲಿದ್ದು ಟಿನ್ಕ್ಲಿಂಗ್ ಎಂಬ ಹೆಸರಿನಲ್ಲಿ ಅಲ್ಲಿ ಪ್ರಚಲಿತದಲ್ಲಿದೆ.[೩] ತಾಳಬದ್ದವಾಗಿ ನರ್ತಕರು ಬಿದಿರನ್ನು ಎದುರುಬದುರಾಗಿ ಕುಳಿತು ತಿರುಗಿಸುವಾಗ ಬಹಳ ಎಚ್ಚರಿಕೆಯಿಂದ ನರ್ತಕಿಯರು ಚೌಕಾಕಾರದ ಒಳಹೊರಗೆ ಹಾರಿ ಕುಣಿಯುವುದೇ ಈ ನೃತ್ಯದ ವಿಶೇಷ. ಸಮತಲದಲ್ಲಿರಿಸಿದ ಬಿದಿರಿನ ಚೌಕಾಕಾರ ರಚನೆಗೆ ಅಡಿಪಾಯವಾಗಿ ಎರಡು ಬಿದಿರನ್ನು ಇಟ್ಟಿರುತ್ತಾರೆ. ಬಿದಿರುಗಳನ್ನು ಬಡಿದಾಗ ಬರುವ ಸದ್ದೇ ನೃತ್ಯಕ್ಕೆ ಲಯಬದ್ದವಾದ ಸಂಗೀತ. ಈ ಸದ್ದು ಸಮಯದ ಸೂಚ್ಯಂಕವೂ ಹೌದು.
ನರ್ತಕಿಯರು ತಿಹ್ನ, ವಾಕಿರಿಯ, ಕವರ್ಚೆ ಮತ್ತು ಪುಹಂಚೆ ಎಂಬ ಬಣ್ಣಬಣ್ಣದ ತೊಡುಗೆಗಳ ತೊಟ್ಟು ಪರಿಸರದ ರಂಗನ್ನೂ ಬದಲಿಸುತ್ತಾರೆ. ಹಿಂದೆ ಮಗುವಿಗೆ ಜನ್ಮ ನೀಡಿ ಮರಣ ಹೊಂದುವ ತಾಯಂದಿರ ನೆನಪಿಗಾಗಿ ಹುಟ್ಟಿಕೊಂಡವು. ಈಗ ಪ್ರತಿಯೊಂದೂ ಸಮಾರಂಭದ ಅವಿಭಾಜ್ಯ ಅಂಗವಾಗಿದೆ. ಚೇರವ್ ನೃತ್ಯದ ಕೆಲವು ಚಲನೆಗಳು ಗಾಳಿಗೆ ತೂಗಾಡುವ ಮರಗಳಂತೆ, ಹಾರುವ ಹಕ್ಕಿಯಂತೆ ಇದ್ದು ಪ್ರಕೃತಿಯ ತುಲನೆಯಾಗಿಯೂ ಹುಟ್ಟಿಕೊಂಡಿರಬಹುದು ಎಂಬ ಮಾತುಗಳೂ ಹರಿದಾಡುತ್ತವೆ. ಏನೇ ಆಗಲಿ ಪ್ರತಿಯೊಂದೂ ವಿಶೇಷ ಕಾರ್ಯಕ್ರಮಗಳಲ್ಲಿ ಅರ್ಥಹೀನವಾಗಿ ಕುಣಿಯುವ ಬದಲು ಮಿಜೋರಂ ಇಂತದ್ದೊಂದು ನೃತ್ಯವನ್ನು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ.