ಚಿರಿಯಾತ

ವಿಕಿಪೀಡಿಯ ಇಂದ
Jump to navigation Jump to search


ಚಿರಿಯಾತ[ಬದಲಾಯಿಸಿ]

ಸಂ : ಕಿರಾತಿಕ್ತ

ಹಿಂ : ಚಿರಯಾತ

ಮ : ಚಿರಯಿತ

ಗು : ಚಿರ್‍ಯಾತ

ತೆ : ನೀಲಾವೇಮು

ತ : ನೀಲವೆಂಬು

ವರ್ಣನೆ[ಬದಲಾಯಿಸಿ]

ಪುಟ್ಟಗಿಡ, 12 ರಿಂದ 18 ಅಂಗುಲ ಉದ್ದ ಬೆಳೆದಿರುವುದು. ಪುಟ್ಟ ಪುಟ್ಟ ಎಲೆಗಳು ಹಸಿರಾಗಿರುವವು. ಮತ್ತು ಕಂಟಿಗಳಿಗೆ ಅಂಟಿಕೊಂಡಿರುವವು. ಕಾಂಡದ ತುದಿಯಲ್ಲಿ ಹೂಗೊಂಚಲುಗಳಿರುವವು. ಪುಷ್ಪಪಾತ್ರೆಯಲ್ಲಿ 4-4 ಹೂ ದಳವಿರುವವು. ಮತ್ತು ತಿಳಿ ಹಸಿರಾಗಿ ಹಳದಿಯಾಗಿದ್ದು ಮದ್ಯದಲ್ಲಿ ಅಲ್ಲಲ್ಲಿ ನೀಲಿ ವರ್ಣ ಹೊಂದಿರುವವು. ಹೂ ಕಹಿಯಾಗಿರುವುದು. ರಾಸಾಯನಿಕ ವಿಶ್ಲೇಷಣೆಯಂತೆ ಇದರಲ್ಲಿ ‘‘ಚಿರಾಯಿತಿನ್’’ ಅನ್ನುವ ಕಹಿಯಾದ ಹಳದೀ ವರ್ಣವುಳ್ಳ ವಸ್ತುವಿರುವುದು, ಹೂ ಬಿಡುವ ಕಾಲದಲ್ಲಿ ಸಂಗ್ರಹಿಸಿ, ಒಣಗಿಸಿ ವನೌಷಧವಾಗಿ’ ಉಪಯೋಗಿಸುತ್ತಾರೆ. ಇದರಲ್ಲಿ ಬಪೆಲಿಕ್ ಆಮ್ಲವಿದೆ. ಬಾಬಬುಡನ್‍ಗಿರಿಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಅರ್ಧತಲೆನೋವಿಗೆ

ಚಿರಿಯಾತ, ಬೇವಿನ ತೊಗಟೆ, ತ್ರಿಫಲಚೂರ್ಣ ಅಮೃತಬಳ್ಳಿ, ಅರಿಶಿನ ಕೊಂಬು ಇವೆಲ್ಲವನ್ನು ಸಮವಾಗಿ ಸೇರಿಸಿ, ಚೆನ್ನಾಗಿ ಕುಟ್ಟಿ, ನೀರಿನಲ್ಲಿ ಹಾಕಿ, ಕಾಯಿಸಿ 1/8 ಭಾಗ ಕಷಾಯ ಮಾಡುವುದು. ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ ಶೇಖರಿಸುವುದು. 1/4 ಟೀ ಚಮಚ ಕಷಾಯಕ್ಕೆ, ಒಂದಿಷ್ಟು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಸೆದು, ಮೂಗಿನ ಹೊಳ್ಳೆಗಳಿಗೆ ನಶ್ಯದಂತೆ ನಿಧಾನವಾಗಿ ಏರಿಸುವುದು. ಸೀನುಗಳು ಬಂದು ಅರ್ಧ ತಲೆನೋವು ಶಾಂತವಾಗುವುದು.

ತೀವ್ರವಾದ ಜ್ವರ

ಚಿರಾಯಿತ, ಒಣದ್ರಾಕ್ಷಿ, ಕಚೂರ, ಮರದರಶಿನ, ಏಲಕ್ಕಿ, ಶುಂಠಿ, ಅಮೃತಬಳ್ಳಿ, ಓಮ, ಹಿಪ್ಪಲಿ, ದೇವದಾರು ಐದೈದು ಗ್ರಾಂ ಸೇರಿಸಿ ನುಣ್ಣಗೆ ಕುಟ್ಟಿ, ಎರಡು ಬಟ್ಟಲು ನೀರಿಗೆ ಹಾಕಿ, ಕಾಯಿಸಿ ಅಷ್ಠಾಂಶ ಕಷಾಯ ಮಾಡುವುದು. ಕಷಾಯ ತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಎರಡು ಟೀ ಚಮಚ ಸೇವಿಸುವುದು. ದಿವಸಕ್ಕೆ ಎರಡು ವೇಳೆ ಸಾಕು.

ಚಳಿ ಜ್ವರದಲ್ಲಿ

ಚಿರಿಯಾತ ಸಪ್ತಪರ್ಣಿ ಚಕ್ಕೆ, ಕರಿಜೀರಿಗೆ ಇವೆಲ್ಲ ತಲಾ ಎರಡೆರೆಡು ಗ್ರಾಂ ತೆಗೆದುಕೊಂಡು ಚೆನ್ನಾಗಿ ಜಜ್ಜಿ, ನೀರಿಗೆ ಹಾಕಿ ಅಷ್ಠಾಂಶ ಕಷಾಯ ಮಾಡುವುದು. ದಿವಸಕ್ಕೆ ಎರಡು ವೇಳೆ ಎರಡೆರಡು ಟೀ ಚಮಚ ಸೇವಿಸುವುದು. ಅಥವಾ ಮೇಲಿನ ಕಷಾಯ ಮಾಡುವಾಗ ಲಾಮಂಚ ಮತ್ತು ಕಟುಕರೋಹಿಣಿಯ ಎರಡು ಗ್ರಾಂ ನಯವಾದ ಚೂರ್ಣ ಸೇರಿಸುವುದು. ಜ್ವರದ ತಾಪವು ತಗ್ಗಿ ಜ್ವರ ಪರಿಹಾರವಾಗುವುದು. ಎದೆ ಉರಿ, ಆಮ್ಲ ಪಿತ್ತ ಮತ್ತು ತಲೆಸುತ್ತುವಿಕೆ 1/4 ಟೀ ಚಮಚ ಒಣಗಿದ ಚಿರಿಯಾತದ ನಯವಾದ ಚೂರ್ಣಕ್ಕೆ 10 ಗ್ರಾಂ ಸಕ್ಕರೆ ಪುಡಿ ಸೇರಿಸಿ, ಸೇವಿಸಿ ನೀರು ಕುಡಿಯುವುದು.

ಹಳೇ ಜ್ವರಕ್ಕೆ

ಚಿರಿಯಾತ, ಅಮೃತಬಳ್ಳಿ ಮತ್ತು ಶುಂಠಿ ತಲಾ 5-5 ಗ್ರಾಂ ತೆಗೆದುಕೊಂಡು ನುಣ್ಣಗೆ ಚೂರ್ಣಿಸುವುದು. 5 ಗ್ರಾಂ ಚೂರ್ಣವನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ, ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ ಅರ್ಧ ಟೀ ಚಮಚ ಕಷಾಯವನ್ನು ಪ್ರತಿದಿವಸ ಎರಡು ವೇಳೆ ಸೇವಿಸುವುದು.

ರಕ್ತ ಕೆಟ್ಟು ಉಂಟಾಗುವ ಕಜ್ಜಿ, ತುರಿ ಮುಂತಾದ ಚರ್ಮ ವ್ಯಾಧಿಗಳಿಗೆ

ಚಿರಿಯಾತ ಮೂಲಿಕೆಯ ಕಷಾಯ ಮಾಡಿ, ಎರಡು ಟೀ ಚಮಚ ಕಷಾಯಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಪ್ರತಿನಿತ್ಯ ಸೇವಿಸುವುದು.

ಅಜೀರ್ಣ ಜ್ವರಕ್ಕೆ

10 ಗ್ರಾಂ ಚಿರಾಯಿತ ಮತ್ತು 10 ಗ್ರಾಂ ಒಣಗಿದ ಬೇವಿನ ತೊಗಟೆಯನ್ನು ನುಣ್ಣಗೆ ಚೂರ್ಣ ಮಾಡುವುದು. ಒಂದು ಹೊತ್ತಿಗೆ 2 ಗ್ರಾಂ ನಷ್ಟು ಚೂರ್ಣವನ್ನು ಬಿಸಿ ನೀರಿನೊಂದಿಗೆ ಕದಡಿ ಸೇವಿಸುವುದು.

ಶಕ್ತಿ ಬರಲು

10 ಗ್ರಾಂ ಚಿರಾಯಿತ ಮತ್ತು 10 ಗ್ರಾಂ ಅತಿಮಧುರವನ್ನು ಚೆನ್ನಾಗಿ ಕುಟ್ಟಿ ನುಣ್ಣಗೆ ಪುಡಿ ಮಾಡುವುದು. ಹೊತ್ತಿಗೆ 2 1/2 ಗ್ರಾಂ ಚೂರ್ಣವನ್ನು ಸೇವಿಸಿ ಮೇಲೆ ಸಕ್ಕರೆ ಸೇರಿಸಿದ ಬಿಸಿಯಾದ ಹಾಲು ಕುಡಿಯುವುದು.

"https://kn.wikipedia.org/w/index.php?title=ಚಿರಿಯಾತ&oldid=843189" ಇಂದ ಪಡೆಯಲ್ಪಟ್ಟಿದೆ