ಚಾರ್ಲ್ಸ್ II

ಚಾರ್ಲ್ಸ್ II (1630-1685) ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್‍ನ ಒಬ್ಬ ದೊರೆ (1660-1685). ಈತ 1ನೆಯ ಚಾರ್ಲ್ಸ್‌ನ ಮಗ.
ಜೀವನ
[ಬದಲಾಯಿಸಿ]ಆರಂಭಿಕ ಜೀವನ
[ಬದಲಾಯಿಸಿ]ಈತ ಬ್ರಿಟನಿನ ಅಂತರ್ಯುದ್ಧದ ಅನಂತರ ದೇಶಭ್ರಷ್ಟನಾಗಿದ್ದು, ರಕ್ಷಕ ಶಾಸನ (ಪ್ರೊಟೆಕ್ಟೊರೇಟ್) ಕೊನೆಗೊಂಡು ರಾಜತ್ವ ಮತ್ತೆ ಸ್ಥಾಪನೆಯಾದಾಗ 1660ರಲ್ಲಿ ಪಟ್ಟಕ್ಕೆ ಬಂದ.[೧][೨] ತಂದೆ 1ನೆಯ ಚಾರ್ಲ್ಸನ ಆಳ್ವಿಕೆಯ ಕಾಲದಲ್ಲಿ ಈತ ದೇಶತ್ಯಾಗ ಮಾಡಬೇಕಾಯಿತು. ಅಲ್ಲಲ್ಲಿ ಅಲೆದಾಡಿ 1646ರಲ್ಲಿ ಪ್ಯಾರಿಸಿಗೆ ಬಂದ. ಅಲ್ಲಿ ತನ್ನ ತಾಯಿಯ ಮೇಲ್ವಿಚಾರಣೆಯಲ್ಲಿ ಶಿಕ್ಷಣ ಪಡೆದ. ತಂದೆಯ ಜೀವವನ್ನು ಉಳಿಸಲು ಇವನು ಮಾಡಿದ ಪ್ರಯತ್ನಗಳೂ, ಮನವಿಗಳೂ ಫಲಿಸಲಿಲ್ಲ. ಒಂದನೆಯ ಚಾರ್ಲ್ಸ್ ಮರಣದಂಡನೆಗೆ ಗುರಿಯಾದ ಮೇಲೆ ಇವನನ್ನು ರಾಜಪಕ್ಷದವರು ದೊರೆಯೆಂದು ಘೋಷಿಸಿದರಾದರೂ ಇವನು ಅಸಹಾಯಕ ಸ್ಥಿತಿಯಲ್ಲೇ ಇದ್ದ. ಸ್ಕಾಟ್ಲೆಂಡಿಗೆ ತೆರಳಿ ಅಲ್ಲಿಯ ದೊರೆಯೆಂದು ಕಿರೀಟಧಾರಣೆ ಮಾಡಿಸಿಕೊಂಡ.[೩] ಅಲ್ಲಿಂದ ಇಂಗ್ಲೆಂಡಿನ ಮೇಲೆ ನಡೆಸಿದ ದಂಡಯಾತ್ರೆ ವಿಫಲವಾಯಿತು. ಆಲಿವರ್ ಕ್ರಾಮ್ವೆಲ್ ಇವನನ್ನು ಸೋಲಿಸಿದ. ಇವನು ಫ್ರಾನ್ಸಿಗೆ ಪಲಾಯನ ಮಾಡಿದ. ತಾಯಿಯೊಂದಿಗೂ ಜಗಳವಾಡಿದ. ಕ್ರಾಮ್ವೆಲನ ರಾಜತಂತ್ರ ಕುಶಲತೆಯಿಂದಾಗಿ ಇವನಿಗೆ ಫ್ರಾನ್ಸ್ ಮತ್ತು ನೆದರ್ಲೆಂಡ್‌ಗಳ ಬೆಂಬಲ ದೊರಕಲಿಲ್ಲ. ಸ್ಪೇನಿನ ಸಹಾಯ ಪಡೆದು ಸ್ಪ್ಯಾನಿಷ್ ನೆದರ್ಲೆಂಡ್ಸಿನಲ್ಲಿ ನೆಲೆನಿಂತ.[೪]
ಪುನಃಸ್ಥಾಪನೆ
[ಬದಲಾಯಿಸಿ]ಕ್ರಾಮ್ವೆಲನ ಮರಣಾನಂತರ ಇಂಗ್ಲೆಂಡಿನಲ್ಲಿ ಆದ ಬದಲಾವಣೆಗಳ ಪರಿಣಾಮವಾಗಿ ಪಾರ್ಲಿಮೆಂಟ್ ಇವನನ್ನು ಮತ್ತೆ ಇಂಗ್ಲೆಂಡಿಗೆ ಬಂದು ಆಳಬೇಕೆಂದು ಆಮಂತ್ರಿಸಿತು.[೫] ಮೇ 1660ರಲ್ಲಿ ಇವನನ್ನು ಇಂಗ್ಲೆಂಡಿನ ದೊರೆಯೆಂದು ಘೋಷಿಸಲಾಯಿತು.[೬] ಏಪ್ರಿಲ್ 1661ರಲ್ಲಿ ಇವನಿಗೆ ಕಿರೀಟಧಾರಣೆಯಾಯಿತು.[೭] ಪೋರ್ಚುಗಲ್ ರಾಜಕುಮಾರಿ ಕ್ಯಾಥರಿನ್ ಬ್ರಗಾಂಜ಼ಳನ್ನು ಈತ ವರಿಸಿದ. 3 ಲಕ್ಷ ಪೌಂಡುಗಳ ವರದಕ್ಷಿಣೆಯ ಜೊತೆಗೆ ಮುಂಬೈ, ಟಾಂಜಿಯರ್‌ಗಳು ಉಡುಗೊರೆಯಾಗಿ ಬಂದವು. ಎಡ್ವರ್ಡ್ ಹೈಡನನ್ನು ಚಾರ್ಲ್ಸ್ ತನ್ನ ಚಾನ್ಸಲರ್ ಆಗಿ ಆಯ್ಕೆ ಮಾಡಿ ಅವನನ್ನು ಕ್ಲ್ಯಾರೆಂಡನಿನ ಅರ್ಲ್ ಆಗಿ ನೇಮಿಸಿದ.[೮] ಆದರೆ ರಾಜನಿಗೂ ಪಾರ್ಲಿಮೆಂಟಿಗೂ ನಡುವೆ ರಾಜಕೀಯ ವಿಚಾರಗಳಲ್ಲೂ, ಧಾರ್ಮಿಕ ವಿಚಾರಗಳಲ್ಲೂ ತೀವ್ರ ಭಿನ್ನಾಭಿಪ್ರಾಯಗಳಿದ್ದುವು. ಪಾರ್ಲಿಮೆಂಟ್ ಉಗ್ರವಾಗಿ ಆಂಗ್ಲಿಕನ್ ಸಂಪ್ರದಾಯವನ್ನು ಎತ್ತಿ ಹಿಡಿದು ಇನ್ನೆಲ್ಲ ಪಂಥಗಳನ್ನೂ ಹತ್ತಿಕ್ಕುವ ವಿಚಾರ ಹೊಂದಿತ್ತು. ಚಾರ್ಲ್ಸ್ ಕ್ಯಾತೊಲಿಕ್ ಸಂಪ್ರದಾಯದ ಬಗ್ಗೆ ಸಹಾನುಭೂತಿಯುಳ್ಳವನಾಗಿದ್ದು, ಧಾರ್ಮಿಕ ಸಹಿಷ್ಣುತೆಯನ್ನು ಜಾರಿಗೆ ತರಬೇಕೆಂದಿದ್ದ. ಆದರೆ ಪಾರ್ಲಿಮೆಂಟು 1672ರಲ್ಲಿ ಮತ್ತು 1673ರಲ್ಲಿ ಎರಡು ಅಧಿನಿಯಮಗಳನ್ನು ಸ್ವೀಕರಿಸಿ, ಆಂಗ್ಲಿಕನರಲ್ಲದವರ ಧಾರ್ಮಿಕ ಸ್ವಾತಂತ್ರ್ಯಗಳನ್ನು ಕಸಿದುಕೊಂಡಿತು. ಇದೇ ಕಾಲಕ್ಕೆ 1665ರಲ್ಲಿ ಹಾಲೆಂಡಿನ ವಿರುದ್ಧ ಇಂಗ್ಲೆಂಡು ಯುದ್ಧ ಘೋಷಿಸಿ ಸೋಲನ್ನುಂಡಿತು. ಡಚ್ ನೌಕಾದಳ ಥೇಮ್ಸ್ ನದಿಯನ್ನು ಪ್ರವೇಶಿಸಿ ಲಂಡನ್ನಿನ ಚಟುವಟಿಕೆಯನ್ನು ಸ್ಥಗಿತಗೊಳಿಸಿತು. ಈ ಸೋಲಿಗಾಗಿ ರಾಜನನ್ನು ಆತನ ಸೋದರನೂ, ಬ್ರಿಟನಿನ ನೌಕಾ ಸೇನಾನಿಯೂ ಆಗಿದ್ದ ಜೇಮ್ಸ್‌ನನ್ನೂ ಟೀಕಿಸಲಾಯಿತು. ಯುದ್ಧ ಮುಂದುವರಿಯುತ್ತಿದ್ದಂತೆ ಬ್ರಿಟನಿನಲ್ಲಿ ವ್ಯಾಪಕವಾಗಿ ಪ್ಲೇಗ್ ಪಿಡುಗು ಕಾಣಿಸಿಕೊಂಡು ಸಾವಿರಾರು ಜನರು ಸತ್ತರು.[೯] ಮರುವರ್ಷ ಲಂಡನ್ನಿನಲ್ಲಿ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಿಂದಾಗಿ ಸೇಂಟ್ ಪಾಲ್ಸ್ ಕಥೀಡ್ರಲ್ಲೂ ಸೇರಿ ಲಂಡನ್ನಿನ ಬಹುಭಾಗ ನಾಶವಾಯಿತು.[೧೦] ಜನ ತೀರ ಅಸಮಾಧಾನಗೊಂಡರು. ಡಚ್ ಯುದ್ಧ ಮುಗಿದಾಗ ಕ್ಲ್ಯಾರೆಂಡನನನ್ನು ಚಾರ್ಲ್ಸ್ ಕಿತ್ತೊಗೆಯಬೇಕಾಯಿತು.
ವಿದೇಶ ನೀತಿ
[ಬದಲಾಯಿಸಿ]ಪಾರ್ಲಿಮೆಂಟಿನ ಹಿಡಿತದಿಂದ ಬೇಸತ್ತು ರಾಜ 1670ರ ಮೇ ತಿಂಗಳಲ್ಲಿ ಇಂಗ್ಲೆಂಡಿನ ವೈರಿಯಾದ, ಫ್ರಾನ್ಸಿನ ದೊರೆ 14ನೆಯ ಲೂಯಿಯ ಜೊತೆ ಡೋವರ್ ಗುಪ್ತ ಕೌಲು ಮಾಡಿಕೊಂಡ. ಈ ಕೌಲಿನಂತೆ ಕ್ಯಾತೊಲಿಕರಿಗೆ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯ ನೀಡಲು ರಾಜ ಒಪ್ಪಿಕೊಂಡ; ಫ್ರಾನ್ಸಿಗೆ ಅನುಕೂಲವಾದ ವಿದೇಶ ನೀತಿಯನ್ನು ಅನುಸರಿಸಲು ಸಮ್ಮತಿಸಿದ. ಲೂಯಿ ಚಾರ್ಲ್ಸನಿಗೆ ಆರ್ಥಿಕ ನೆರವು ನೀಡಲು ಮುಂದಾದ. ಇದರಿಂದ ಹಣಕ್ಕಾಗಿ ಚಾರ್ಲ್ಸ್ ಪಾರ್ಲಿಮೆಂಟನ್ನು ಅವಲಂಬಿಸಬೇಕಾಗಿರಲಿಲ್ಲ. ಈ ದೇಶಘಾತಕ ಒಪ್ಪಂದವೇ 2ನೆಯ ಜೇಮ್ಸನ ಕಾಲದ ಅಪಾಯಕರ ಬೆಳೆವಣಿಗೆಗಳಿಗೆ ಕಾರಣವಾಯಿತೆಂದು ಒಬ್ಬ ಇತಿಹಾಸಕಾರ ಹೇಳಿದ್ದಾನೆ.
ಪಾರ್ಲಿಮೆಂಟಿನೊಂದಿಗೆ ಸಂಘರ್ಷ
[ಬದಲಾಯಿಸಿ]1672ರಲ್ಲಿ ಲೂಯಿಯ ಇಚ್ಛೆಯಂತೆ ಚಾರ್ಲ್ಸ್ ಹಾಲೆಂಡಿನ ವಿರುದ್ದ ಯುದ್ಧ ಘೋಷಿಸಿದ.[೧೧] ಇದನ್ನು ಬ್ರಿಟನ್ನಿನ ಜನ ಮೆಚ್ಚಲಿಲ್ಲ. ಡೋವರ್ ಕೌಲಿನ ಗೌಪ್ಯ ಶೀಘ್ರವೇ ಬಯಲಾಯಿತು. ಇದರಿಂದ ಪಾರ್ಲಿಮೆಂಟ್ ಮತ್ತು ಆಂಗ್ಲಿಕನ್ ಪಕ್ಷದವರು ರಾಜನ ವಿರುದ್ಧ ಸಿಡಿದೆದ್ದರು. ಕ್ಯಾತೊಲಿಕರಿಗೆ ಸ್ವಾತಂತ್ರ್ಯ ನೀಡುವ ರಾಜನ ಯತ್ನವನ್ನು ಅವರು ವಿಫಲಗೊಳಿಸಿದರು. ಕ್ಯಾತೊಲಿಕರ ವಿರುದ್ಧ ಅಪಪ್ರಚಾರ ಆರಂಭವಾಯಿತು. ಲಂಡನ್ನಿನ ಅಗ್ನಿಕಾಂಡಕ್ಕೆ ಕ್ಯಾತೊಲಿಕರೇ ಕಾರಣವೆಂದು ಹೇಳಲಾರಂಭವಾಯಿತು. ಟೈಟಸ್ ಓಟ್ಸ್ ಎಂಬ ಒಬ್ಬ ಆಂಗ್ಲಿಕನ್ ಪಾದ್ರಿ ಪೋಪಿಕ್ ಪಿತೂರಿ ಎಂಬ ವದಂತಿಯೊಂದನ್ನು ಹುಟ್ಟಿಸಿದ. ರಾಜನನ್ನೂ, ಪ್ರಾಟೆಸ್ಟಂಟ್ ರಾಜಕಾರಣಿಗಳನ್ನೂ ಕೊಲೆ ಮಾಡಿ ಇಂಗ್ಲೆಂಡನ್ನು ಜೆಸುಯಿಟರಿಗೆ ಒಪ್ಪಿಸಲು ಕ್ಯಾತೊಲಿಕರು (ಪೋಪನ ಅನುಯಾಯಿಗಳು) ಪಿತೂರಿ ನಡೆಸಿದ್ದಾರೆಂದು ಆಪಾದಿಸಲಾಯಿತು.[೧೨]
ನಂತರದ ವರ್ಷಗಳು
[ಬದಲಾಯಿಸಿ]ಇದೇ ಕಾಲಕ್ಕೆ ರಾಜನ ಸೋದರನೂ, ಸಿಂಹಾಸನದ ಉತ್ತರಾಧಿಕಾರಿಯೂ, ಕ್ಯಾತೊಲಿಕನೂ ಆದ ಜೇಮ್ಸನನ್ನು ಸಿಂಹಾಸನಾರೋಹಣ ಮಾಡದಂತೆ ತಡೆಯಬೇಕೆಂಬ ಉದ್ದೇಶದಿಂದ ಎಕ್ಸ್‌ಕ್ಲೂಷನ್ ಮಸೂದೆಯನ್ನು ಮಂಡಿಸಲು ಪಾರ್ಲಿಮೆಂಟಿನಲ್ಲಿ ಯತ್ನ ನಡೆಯಿತು. 1679ರಲ್ಲಿ ಮಂಡಿಸಿದ ಈ ಮಸೂದೆ ಕಾಮನ್ಸ್ ಸಭೆಯಲ್ಲಿ ಮಂಜೂರಾದರೂ ಲಾರ್ಡ್ಸ್ ಸಭೆಯಲ್ಲಿ ತಿರಸ್ಕೃತವಾಯಿತು. ಮಸೂದೆಯ ಸಮರ್ಥಕರನ್ನು ವಿಗ್‌ಗಳೆಂದೂ, ವಿರೋಧಿಗಳನ್ನು ಟೋರಿಗಳೆಂದೂ ಹೀಗಳೆಯಲಾಯಿತು.[೧೩] ಇದೇ ಮುಂದಿನ ಪಕ್ಷಪದ್ಧತಿಗೆ ತಳಹದಿ. ಈ ಚಟುವಟಿಕೆಯಿಂದ ಬೇಸತ್ತ ಚಾರ್ಲ್ಸ್ ಪಾರ್ಲಿಮೆಂಟನ್ನು ವಿಸರ್ಜಿಸಿದ (1681), ತನ್ನ ಜೀವನದ ಉಳಿದ ವರ್ಷಗಳಲ್ಲಿ ಚಾರ್ಲ್ಸ್ ಪಾರ್ಲಿಮೆಂಟಿನ ನೆರವಿಲ್ಲದೆ ಆಳಿದ.[೧೪] ಫ್ರಾನ್ಸಿನ ಲೂಯಿಯ ಜೊತೆಗೆ ಮತ್ತೆ ಒಪ್ಪಂದ ಮಾಡಿಕೊಂಡು ಅವನಿಂದ ಧನಸಹಾಯ ಪಡೆದ. ಈ ನಡುವೆ ಪೋಪಿಕ್ ಪಿತೂರಿ ಕಟ್ಟುಕತೆಯೆಂಬುದು ಮನವರಿಕೆಯಾಗಿ ವಿಗ್ ಪಕ್ಷದವರು ಗೌರವ ಕಳೆದುಕೊಂಡರು. ರಾಜನ ಪರವಾಗಿ ಸಾರ್ವಜನಿಕಾಭಿಪ್ರಾಯ ರೂಪಿತವಾಯಿತು. 1685ರಲ್ಲಿ ಆತ ತೀರಿಕೊಂಡಾಗ ಅವನ ಸೋದರ ಜೇಮ್ಸ್ ಪಟ್ಟಕ್ಕೆ ಬರಲು ಕಷ್ಟವಾಗಲಿಲ್ಲ.
ಕೊಡುಗೆ
[ಬದಲಾಯಿಸಿ]ಚಾರ್ಲ್ಸನಿಗೆ ಸ್ವಪತ್ನಿಯಲ್ಲಿ ಮಕ್ಕಳಿರಲಿಲ್ಲವಾದರೂ ಅವನ ಉಪಪತ್ನಿಯರ ಮೂಲಕ ಅವನಿಗೆ ಕನಿಷ್ಠಪಕ್ಷ 12 ಜನ ಮಕ್ಕಳಿದ್ದರು.[೧೫] ಎತ್ತರದ ಆಧಾರದ, ಸುಂದರನಾದ ಮತ್ತು ವಿನೋದಪರನಾದ ಚಾರ್ಲ್ಸ್ ವಿಲಕ್ಷಣ ವ್ಯಕ್ತಿ. ಸ್ಟುವರ್ಟ್ ದೊರೆಗಳಲ್ಲೇ ಈತ ಸಮರ್ಥನಾದವನು. ಟ್ಯೂಡರ್ ದೊರೆಗಳ ಕಾಲದಲ್ಲಿ ಆರಂಭವಾದ ಪುನರುಜ್ಜೀವನ ಇವನ ಕಾಲದಲ್ಲಿ ಮುಂದುವರಿಯಿತು. ರಾಯಲ್ ಸೊಸೈಟಿ ಆರಂಭವಾದದ್ದು ಇವನ ಕಾಲದಲ್ಲೇ (1662).[೧೬] ಇವನ ಆಳ್ವಿಕೆಯ ಸಮಯದಲ್ಲಿ ದೇಶದಲ್ಲಿ ವೈಜ್ಞಾನಿಕ ಚಟುವಟಿಕೆ ಹೆಚ್ಚಿತು. ವಾಣಿಜ್ಯ ಬೆಳೆವಣಿಗೆ, ವಸಾಹತು ಸ್ಥಾಪನೆಗಳು ಭರದಿಂದ ಮುಂದುವರಿದುವು.
ಉಲ್ಲೇಖಗಳು
[ಬದಲಾಯಿಸಿ]- ↑ Bucholz, R. O. (2020). Early modern England 1485–1714 : a narrative history (3rd ed.). Chichester, West Sussex: Wiley Blackwell. pp. 286. ISBN 978-1-118-53222-5.
- ↑ Diary of Samuel Pepys, 23 April 1661 Archived 29 April 2018 ವೇಬ್ಯಾಕ್ ಮೆಷಿನ್ ನಲ್ಲಿ.
- ↑ RPS, 1649/1/71.
- ↑ Hutton 1989, pp. 74–112.
- ↑ Hutton 1989, p. 131.
- ↑ Seaward 2004.
- ↑ Diary of Samuel Pepys, 23 April 1661 Archived 29 April 2018 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Fraser 1979, pp. 210–202; Hutton 1989, pp. 155–156; Miller 1991, pp. 43–44.
- ↑ Fraser 1979, p. 238.
- ↑ Porter 2007.
- ↑ Fraser 1979, pp. 305–308; Hutton 1989, pp. 284–285.
- ↑ Heald 1992, p. 605.
- ↑ Hutton 1989, pp. 373, 377, 391; Miller 1991, pp. 310–320.
- ↑ Hutton 1989, pp. 430–441.
- ↑ Fraser 1979, p. 411.
- ↑ Purver, M. (1967). The Royal Society, Concept and Creation. London: Routledge and Kegan Paul. pp. 21, 85, 189.
ಗ್ರಂಥಸೂಚಿ
[ಬದಲಾಯಿಸಿ]- Brown, K. M.; et al., eds. (2007–2017). "Proclamation: of King Charles II, 5 January 1649 (NAS. PA2/24, f.97r-97v.)". The Records of the Parliaments of Scotland to 1707. University of St Andrews. Retrieved 5 August 2016.
- Hutton, Ronald (1989). Charles II: King of England, Scotland, and Ireland. Oxford: Clarendon Press. ISBN 0-19-822911-9.
- Seaward, Paul (2004), "Charles II (1630–1685)", Oxford Dictionary of National Biography (online ed.), Oxford University Press, doi:10.1093/ref:odnb/5144
{{cite encyclopedia}}: Cite has empty unknown parameters:|HIDE_PARAMETER15=,|HIDE_PARAMETER13=,|HIDE_PARAMETER21=,|HIDE_PARAMETER30=,|HIDE_PARAMETER14=,|HIDE_PARAMETER17=,|HIDE_PARAMETER32=,|HIDE_PARAMETER16=,|HIDE_PARAMETER25=,|HIDE_PARAMETER24=,|HIDE_PARAMETER9=,|HIDE_PARAMETER3=,|HIDE_PARAMETER4=,|HIDE_PARAMETER2=,|HIDE_PARAMETER29=,|HIDE_PARAMETER18=,|HIDE_PARAMETER20=,|HIDE_PARAMETER5=,|HIDE_PARAMETER19=,|HIDE_PARAMETER10=,|HIDE_PARAMETER31=,|HIDE_PARAMETER11=,|HIDE_PARAMETER26=,|HIDE_PARAMETER8=,|HIDE_PARAMETER7=,|HIDE_PARAMETER23=,|HIDE_PARAMETER27=, and|HIDE_PARAMETER12=(help); Invalid|ref=harv(help) - Fraser, Antonia (1979). King Charles II. London: Weidenfeld and Nicolson. ISBN 0-297-77571-5.
- Miller, John (1991). Charles II. London: Weidenfeld and Nicolson. ISBN 0-297-81214-9.
- Porter, Stephen (January 2007), "The great fire of London", Oxford Dictionary of National Biography (online ed.), Oxford University Press, doi:10.1093/ref:odnb/95647
{{cite encyclopedia}}: Cite has empty unknown parameters:|HIDE_PARAMETER15=,|HIDE_PARAMETER13=,|HIDE_PARAMETER21=,|HIDE_PARAMETER30=,|HIDE_PARAMETER14=,|HIDE_PARAMETER17=,|HIDE_PARAMETER32=,|HIDE_PARAMETER16=,|HIDE_PARAMETER25=,|HIDE_PARAMETER24=,|HIDE_PARAMETER9=,|HIDE_PARAMETER3=,|HIDE_PARAMETER4=,|HIDE_PARAMETER2=,|HIDE_PARAMETER29=,|HIDE_PARAMETER18=,|HIDE_PARAMETER20=,|HIDE_PARAMETER5=,|HIDE_PARAMETER19=,|HIDE_PARAMETER10=,|HIDE_PARAMETER31=,|HIDE_PARAMETER11=,|HIDE_PARAMETER26=,|HIDE_PARAMETER8=,|HIDE_PARAMETER7=,|HIDE_PARAMETER23=,|HIDE_PARAMETER27=, and|HIDE_PARAMETER12=(help); Invalid|ref=harv(help) (Subscription or UK public library membership required.) - Heald, H. (1992). Chronicle of Britain: Incorporating a Chronicle of Ireland. Jacques Legrand. ISBN 978-1-872031-35-4.
