ಚಾರ್ಲ್ಸ್ I

ಚಾರ್ಲ್ಸ್ I (1600-1649) ಸ್ಟೂವರ್ಟ್ ಮನೆತನದ ಎರಡನೆಯ ದೊರೆ.
ಆರಂಭಿಕ ಜೀವನ
[ಬದಲಾಯಿಸಿ]ಈತ 1ನೆಯ ಜೇಮ್ಸನ (ಸ್ಕಾಟ್ಲೆಂಡಿನ 6ನೆಯ ಜೇಮ್ಸ್) ಮಗನಾಗಿ 1600ರಲ್ಲಿ ಹುಟ್ಟಿದ. 1616ರಲ್ಲಿ ವೇಲ್ಸ್ ರಾಜಕುಮಾರನಾಗಿ ಅಭಿಷಿಕ್ತನಾದ.[೧] ಚಾರ್ಲ್ಸ್ ಪಟ್ಟವೇರುವ ಮೊದಲು ರಾಜಕಾರಣದಲ್ಲಿ ವಿಶೇಷ ಆಸ್ಥೆ ವಹಿಸಿದವನಲ್ಲ. ಸ್ಪೇನಿನ ರಾಜಕುಮಾರಿಯನ್ನು ವರಿಸುವ ಉದ್ದೇಶದಿಂದ ಸ್ಪೇನಿಗೆ ಭೇಟಿ ನೀಡಿದ್ದೊಂದೇ ಈತನ ಆ ಕಾಲದ ಉಲ್ಲೇಖನೀಯ ಕಾರ್ಯ.[೨] ಈ ಯಾತ್ರೆ ಯಶಸ್ವಿಯಾಗಲಿಲ್ಲ.[೩]
ಇದರಿಂದಾಗಿ ಸ್ಪೇನಿನ ಮೇಲೆ ಯುದ್ಧ ಮಾಡಬೇಕೆಂದು ತಂದೆಗೆ ಒತ್ತಾಯ ಹಾಕಿದ.
ಆರಂಭಿಕ ಆಳ್ವಿಕೆ
[ಬದಲಾಯಿಸಿ]ಮುಂದೆ 1624ರಲ್ಲಿ ಇವನು ಫ್ರಾನ್ಸಿನ ರಾಜಕುಮಾರಿ ಹೆನ್ರಿಯೆಟ್ಟ ಮರೀಯಳನ್ನು ವರಿಸಲು ಒಪ್ಪಂದವಾಯಿತು. 1625ರಲ್ಲಿ ಪಟ್ಟಕ್ಕೆ ಬಂದ ಮೇಲೆ ಆಕೆಯನ್ನು ಮದುವೆಯಾದ.[೪] 1625ರಲ್ಲಿ ಕರೆಯಲಾದ ಪಾರ್ಲಿಮೆಂಟ್‌ನ ಕಾಮನ್ಸ್ ಸಭೆಯಲ್ಲಿ ಪ್ಯುರಿಟನರೇ ಹೆಚ್ಚು ಸಂಖ್ಯೆಯಲ್ಲಿದ್ದರು. ದೊರೆ ಕ್ಯಾತೊಲಿಕ್ ಕನ್ಯೆಯನ್ನು ವರಿಸಿದ ಬಗ್ಗೆಯೂ, ಸ್ಪೇನ್ ಮುಂದುವರಿಸುತ್ತಿದ್ದ ಯುದ್ಧದ ಕುರಿತು ತಮಗೆ ವಿವರಣೆಗಳನ್ನು ನೀಡದ ಬಗ್ಗೆಯೂ ಅವರು ಕ್ರುದ್ಧವಾಗಿದ್ದರು. ರಾಜನಿಗೆ ಟನ್ನೇಜ್ ಮತ್ತು ಪೌಂಡೇಜ್ ಅಧಿಕಾರವನ್ನು (ಸುಂಕ ಸಂಗ್ರಹಿಸುವ ಅಧಿಕಾರ) ನೀಡಲು ಅವರು ನಿರಾಕರಿಸಿದರು.[೫] 1626ರಲ್ಲಿ ಅವನು ಕರೆದ ಎರಡನೆಯ ಪಾರ್ಲಿಮೆಂಟ್ ಇನ್ನಷ್ಟು ಕ್ರುದ್ಧವಾಗಿತ್ತು. ಸ್ಪೇನಿನೊಡನೆ ನಡೆದ ಯುದ್ಧದಲ್ಲಿ ಕ್ಯಾಡಿಸ್‌ನ ವಿರುದ್ಧ ನಡೆಸಲಾದ ನೌಕಾ ಕಾರ್ಯಾಚರಣೆಯಲ್ಲಿ ಬ್ರಿಟನ್ನಿಗೆ ಸೋಲಾಗಿತ್ತು.[೬][೭] ಇದಕ್ಕೆ ಬಕಿಂಗ್‌ಹ್ಯಾಮ್ ಕಾರಣವೆನ್ನಲಾಗಿದ್ದರಿಂದ ಅವನನ್ನು ರಾಜದ್ರೋಹದ ಆಪಾದನೆಗಾಗಿ ವಿಚಾರಣೆಗೆ ಗುರಿಪಡಿಸಬೇಕೆಂದು ಕಾಮನ್ಸ್ ಸಭೆ ಪ್ರಯತ್ನಿಸಿತು.[೮] ಇದನ್ನು ತಪ್ಪಿಸಲು ದೊರೆ ಪಾರ್ಲಿಮೆಂಟನ್ನು ವಿಸರ್ಜಿಸಿದ.[೯] ಆ ಸಮಯದಲ್ಲಿ ಯೂರೋಪಿನಲ್ಲಿ ಮೂವತ್ತು ವರ್ಷಗಳ ಯುದ್ಧ (1618-48) ನಡೆಯುತ್ತಿತ್ತು. ಧರ್ಮನಿಮಿತ್ತವಾಗಿ ಪ್ರಾಟೆಸ್ಟಂಟ್ ಮತ್ತು ಕ್ಯಾತೊಲಿಕ್ ಶಕ್ತಿಗಳ ನಡುವೆ ನಡೆಯುತ್ತಿದ್ದ ಯುದ್ಧವದು. ಫ್ರಾನ್ಸ್ ಮತ್ತು ಸ್ಪೇನ್‌ಗಳೊಡನೆ ಯುದ್ಧದಲ್ಲಿ ಅವನು ಆ ವೇಳೆಗೆ ಸಿಲುಕಿಕೊಂಡಿದ್ದ. ಹಣದ ತೊಂದರೆ ಹೆಚ್ಚಿತು. ಬಲವಂತದ ಸಾಲ ವಿಧಿಸಿದ. ಇದು ನ್ಯಾಯಬಾಹಿರವೆಂದು ನ್ಯಾಯಮೂರ್ತಿಗಳು ತೀರ್ಪಿತ್ತರು. ದೊರೆ ಶ್ರೇಷ್ಠ ನ್ಯಾಯಾಧೀಶನನ್ನೇ ವಜಾ ಮಾಡಿದ. ತನ್ನ ಕ್ರಮಕ್ಕೆ ಒಪ್ಪದ 70 ಜನರನ್ನು ಬಂಧಿಸಿದ. ಇವರಲ್ಲಿ ಕೆಲವು ನೈಟ್‌ಗಳೂ ಇದ್ದರು. ಸ್ಪೇನ್ ವಿರುದ್ಧ ನಡೆಸಿದ ಆಕ್ರಮಣ ಕಾರ್ಯದಲ್ಲಿ ಬಕಿಂಗ್‌ಹ್ಯಾಂ ಹಿಮ್ಮೆಟ್ಟಬೇಕಾಯಿತು. ರಾಜನಾಗಿ ಆಯ್ಕೆಯಾದ ತನ್ನ ಭಾವ ಫ್ರೆಡರಿಕ್‌ಗೆ ನೆರವು ನೀಡಲು ಚಾರ್ಲ್ಸ್ ಉತ್ಸುಕನಾಗಿದ್ದ. ಈ ಕಾರಣಗಳಿಂದಾಗಿ ಆತ 1628ರಲ್ಲಿ ಮೂರನೆಯ ಪಾರ್ಲಿಮೆಂಟನ್ನು ಆಮಂತ್ರಿಸಿದ. ದೊರೆ ಸ್ವೇಚ್ಛಾನುಸಾರವಾಗಿ ತೆರಿಗೆ ವಿಧಿಸುತ್ತಿದ್ದದ್ದನ್ನೂ, ಜನರನ್ನು ಬಂಧಿಸುತ್ತಿದ್ದದ್ದನ್ನೂ ವಿರೋಧಿಸಿ ಕಾಮನ್ಸ್ ಸಭೆ ಕೂಡಲೇ ನಿರ್ಣಯಗಳನ್ನು ಮಾಡಿತು.[೧೦] ಹಕ್ಕುಗಳ ಮನವಿಯಲ್ಲಿ (ಪೆಟಿಷನ್ ಆಫ್ ರೈಟ್) ತನ್ನ ದೂರುಗಳನ್ನೆಲ್ಲ ಉಲ್ಲೇಖಿಸಿತು. ಈ ಮನವಿಗೆ ಒಪ್ಪಿಗೆ ನೀಡಲು ದೊರೆ ಇಷ್ಟಪಡಲಿಲ್ಲವಾದರೂ ಖಾಸಗಿ ವಿಧೇಯಕದಂತೆ ಅದಕ್ಕೆ ಸಮ್ಮತಿ ನೀಡಲೇಬೇಕಾಯಿತು. ಇದು ಮ್ಯಾಗ್ನಕಾರ್ಟದಲ್ಲಿರುವ ವಿಚಾರಗಳ ಪುನರ್ಘೋಷಣೆಯೆಂದು ಭಾವಿಸಲ್ಪಟ್ಟಿದೆ. ಇದಾದೊಡನೆ ಬಕಿಂಗ್‌ಹ್ಯಾಮನನ್ನು ಅಧಿಕಾರದಿಂದ ವಜ ಮಾಡಬೇಕೆಂದು ಪಾರ್ಲಿಮೆಂಟ್ ಒತ್ತಾಯಿಸಿದಾಗ ದೊರೆ ಪಾರ್ಲಿಮೆಂಟನ್ನು ಮುಂದೂಡಿದ.[೧೧] ಅನಂತರ ಬಕಿಂಗ್‌ಹ್ಯಾಂ ಕೊಲೆಗೆ ಈಡಾದ.[೧೨]
ವೈಯಕ್ತಿಕ ಆಳ್ವಿಕೆ
[ಬದಲಾಯಿಸಿ]1629ರಲ್ಲಿ ಚಾರ್ಲ್ಸ್ ನಾಲ್ಕನೆಯ ಪಾರ್ಲಿಮೆಂಟನ್ನು ಕರೆದ. ಟನ್ನೇಜ್ ಮತ್ತು ಪೌಂಡೇಜನ್ನು ದೊರೆ ಸಂಗ್ರಹಿಸುವುದನ್ನು ಪಾರ್ಲಿಮೆಂಟ್ ವಿರೋಧಿಸಿತು. ಅವನು ಕ್ಯಾತೊಲಿಕ್ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಯತ್ನಿಸುತ್ತಿರುವನೆಂಬ ಆಪಾದನೆಗೆ ಗುರಿಯಾದ. ಅವನ ಕೆಲವು ಧಾರ್ಮಿಕ ಸುಧಾರಣೆಗಳನ್ನು ಪಾರ್ಲಿಮೆಂಟ್ ಕಟುವಾಗಿ ಟೀಕಿಸಿತು. ದೊರೆ ಆ ಪಾರ್ಲಿಮೆಂಟನ್ನೂ ವಿಸರ್ಜಿಸಿ ಆಜ್ಞೆ ನೀಡಿದ.[೧೩] ಅದು ಸಭಾಪತಿಯನ್ನು ಬಲಾತ್ಕಾರದಿಂದ ಅವನ ಪೀಠದಲ್ಲಿ ಕುಳ್ಳಿರಿಸಿ ಮೂರು ನಿರ್ಣಯಗಳನ್ನು ಮಾಡಿತು.[೧೪] ಈ ಪೈಕಿ ಒಂದು ಹಕ್ಕುಗಳ ಮನವಿಯ ಸಿಂಧುತ್ವವನ್ನು ಪುನರುಚ್ಚರಿಸಿತು. ದೇಶದ ಧರ್ಮ ವ್ಯವಸ್ಥೆಯನ್ನು ಬದಲಾಯಿಸಲು ಯತ್ನಿಸುವವನು ದೇಶದ ಶತ್ರು ಎಂಬುದು ಇನ್ನೊಂದು ನಿರ್ಣಯದ ಒಕ್ಕಣೆ.
ಮುಂದೆ ಹನ್ನೊಂದು ವರ್ಷಗಳ ಕಾಲ (1629-40) ಚಾರ್ಲ್ಸ್ ಪಾರ್ಲಿಮೆಂಟಿನ ನೆರವಿಲ್ಲದೆ, ಅದನ್ನು ಕರೆಯದೆ ಆಳಿದ.[೧೫] ಹನ್ನೊಂದು ವರ್ಷಗಳ ಪೀಡಕ ಪ್ರಭುತ್ವ (rule of tyranny) ಎಂದು ಅದನ್ನು ಕರೆಯಲಾಗಿದ್ದರೂ ವಾಸ್ತವವಾಗಿ ಆಗ ಅಂಥ ದುರಾಡಳಿತವೇನೂ ನಡೆದಿರಲಿಲ್ಲ. ದೇಶ ಆ ಕಾಲದಲ್ಲಿ ಸಮೃದ್ಧಿಯ ಪಥದಲ್ಲಿತ್ತು. ಫ್ರಾನ್ಸ್ ಮತ್ತು ಸ್ಪೇನ್‌ಗಳೊಂದಿಗೆ 1630ರಲ್ಲಿ ಶಾಂತಿ ಕೌಲುಗಳಾದುವು. ಪ್ಯೂರಿಟನ್ನರೂ, ಕ್ಯಾತೊಲಿಕರೂ ಅನುಕ್ರಮವಾಗಿ ಅಮೆರಿಕದ ಮ್ಯಾಸಚೂಸೆಟ್ಸ್ ಮತ್ತು ಮೇರಿಲ್ಯಾಂಡ್‌ಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ವಿದೇಶಿ ವಾಣಿಜ್ಯ ಹೆಚ್ಚುತ್ತಿತ್ತು.
ಧಾರ್ಮಿಕ ಸಂಘರ್ಷಗಳು
[ಬದಲಾಯಿಸಿ]1638ರಲ್ಲಿ ಸ್ಕಾಟ್‌ಲೆಂಡ್‌ನಲ್ಲಿ ಬಂಡಾಯ ಸಂಭವಿಸಿತು.[೧೬] ದೊರೆಯ ಧಾರ್ಮಿಕ ನೀತಿಯ ವಿರುದ್ಧ ಸ್ಕಾಟ್ ಜನ ಮಾಡಿದ ಬಿಷಪ್‌ಗಳ ಯುದ್ಧಗಳಲ್ಲಿ (1639, 1640) ದೊರೆಗೆ ಸೋಲಾಗಿ ಆತ ಕದನವಿರಾಮಕ್ಕೆ ಒಪ್ಪಿಕೊಂಡು, ಧನಸಹಾಯ ಕೇಳಲು 1640ರ ಏಪ್ರಿಲ್‌ನಲ್ಲಿ ಪಾರ್ಲಿಮೆಂಟನ್ನು ಕರೆದ.[೧೭][೧೮] ಅಲ್ಪಾವಧಿಯ ಪಾರ್ಲಿಮೆಂಟ್ ಎಂದು ಪರಿಚಿತವಾದ ಈ ಅಧಿವೇಶನದಲ್ಲಿ ರಾಜ 12 ಬಗೆಯ ಕರಗಳ ಸಂಗ್ರಹಕ್ಕೆ ಅನುಮತಿ ಕೇಳಿದ. ಜನರ ಕುಂದುಕೊರತೆಗಳ ಚರ್ಚೆ ನಡೆಯಬೇಕೆಂದು ಜಾನ್ ಪಿಮ್ ಎಂಬ ನಾಯಕ ಒತ್ತಾಯಿಸಿದನಲ್ಲದೆ ಸ್ಕಾಟ್ಲೆಂಡ್ ಜೊತೆ ಯುದ್ಧವನ್ನು ಮತ್ತೆ ಆರಂಭಿಸುವುದನ್ನು ವಿರೋಧಿಸಿದ. ದೊರೆ ಪಾರ್ಲಿಮೆಂಟನ್ನು ವಿಸರ್ಜಿಸಿ[೧೯] ಷಿಪ್ ಮನಿ ಎಂಬ ಯುದ್ಧ ಕಾಲದಲ್ಲಿನ ಕರವನ್ನು ಕರಾವಳಿಯ ನಿವಾಸಿಗಳಿಂದ ಸಂಗ್ರಹಿಸುತ್ತಿದ್ದ.[೨೦] ಕರದ ಆಕರಣೆಯನ್ನು ಮುಂದುವರಿಸಿದ. ಸ್ಕಾಟ್ಲೆಂಡ್ ಜೊತೆ ಯುದ್ಧ ಮುಂದುವರಿಸಿ ಸೋಲನ್ನುಂಡ.[೨೧]
ದೀರ್ಘ ಪಾರ್ಲಿಮೆಂಟ್
[ಬದಲಾಯಿಸಿ]ತಿರುಗಿ ನವೆಂಬರ್ 1640ರಲ್ಲಿ ಪಾರ್ಲಿಮೆಂಟನ್ನು ಕರೆದ. ದೀರ್ಘ ಪಾರ್ಲಿಮೆಂಟ್ ಎಂದು ಇದು ಪ್ರಸಿದ್ಧವಾಗಿದೆ. ಷಿಪ್ ಮನಿಯ ವಸೂಲಿಯನ್ನು ಅದು ಖಂಡಿಸಿತು. ದೊರೆಯ ಧರ್ಮನೀತಿಯನ್ನು ಪ್ರತಿಭಟಿಸಿತು. ಐರ್ಲೆಂಡಿನಲ್ಲಿ ದೊರೆ ನೇಮಿಸಿದ್ದ ಪ್ರತಿನಿಧಿ ಸ್ಟ್ರ್ಯಾಫರ್ಡನ ವಿಚಾರಣೆಯಾಗಬೇಕೆಂದು ಹೇಳಿಕೆ ಮುಂದಿಟ್ಟಿತು. ಸ್ಟ್ರ್ಯಾಫರ್ಡ್ ವಿಚಾರಣೆಗೆ ಒಳಗಾದ. ಅವನ ವಿಚಾರಣೆಯಲ್ಲಿ ಗೆಲುವು ದೊರಕದೆನಿಸಿದಾಗ ಪಾರ್ಲಿಮೆಂಟು ಸರ್ವನಾಶದ ಮಸೂದೆಗೆ (ಬಿಲ್ ಆಫ್ ಅಟೇಂಡರ್) ಮಂಜೂರಾತಿ ನೀಡಿತು.[೨೨] ಇದರ ಜೊತೆಗೆ, ಸದ್ಯದ ಪಾರ್ಲಿಮೆಂಟು ತನ್ನ ಸ್ವಂತ ನಿರ್ಣಯದ ವಿನಾ ವಿಸರ್ಜಿತವಾಗಲಾರದು ಎಂಬ ಒಂದು ನಿರ್ಣಯವನ್ನೂ ಮಂಜೂರು ಮಾಡಿ ದೊರೆಯ ಸಹಿಗಾಗಿ ಒತ್ತಾಯಪಡಿಸಿತು. ದೊರೆ ವಿಧಿಯಿಲ್ಲದೆ ಸಹಿ ಹಾಕಿದ. ಸ್ಟ್ರ್ಯಾಫರ್ಡ್ ಮರಣದಂಡನೆಗೆ ಗುರಿಯಾದ.[೨೩]
1641ರ ನವೆಂಬರಿನಲ್ಲಿ ಕಾಮನ್ಸ್ ಸಭೆ ಮತ್ತೆ ಸೇರಿ, ಚಾರ್ಲ್ಸ್ ಪಟ್ಟವೇರಿ ಬಂದಾಗಿನಿಂದ ಅದುವರೆಗಿನ ಅವನ ಎಲ್ಲ ಕೃತಿಗಳಿಗಾಗಿ ಅವನ್ನು ಖಂಡಿಸುವ ಗ್ರ್ಯಾಂಡ್ ರೆಮಾನ್‌ಸ್ಟ್ರೆನ್ಸ್ ಎಂಬ ನಿರ್ಣಯವನ್ನು 159 ಪರ, 148 ವಿರುದ್ಧ ಮತಗಳಿಂದ ಸ್ವೀಕರಿಸಿತು.[೨೪][೨೫] ಇದೇ ಕಾಲಕ್ಕೆ ಐರ್ಲೆಂಡಿನಲ್ಲಿ ಬಂಡಾಯವಾಯಿತು. ದೊರೆ ತನ್ನ ಸೇನಾಧಿಕಾರವನ್ನು ಬಿಟ್ಟುಕೊಡಬೇಕೆಂಬುದು ಪಾರ್ಲಿಮೆಂಟಿನ ಕೇಳಿಕೆಯಾಗಿತ್ತು. ರಾಣಿಯನ್ನೂ ವಿಚಾರಣೆಗೊಳಪಡಿಸುವುದು ಅದರ ಯೋಜನೆ. ಇದನ್ನರಿತ ದೊರೆ, ಕಾಮನ್ಸ್ ಸಭೆಯ ಸದಸ್ಯರನ್ನೇ ಬಂಧಿಸಬೇಕೆಂದು ಸೇನೆಯೊಡನೆ ಪಾರ್ಲಿಮೆಂಟಿಗೆ ಬಂದ.[೨೬] ಆದರೆ ಆ ಸದಸ್ಯರು ತಲೆತಪ್ಪಿಸಿಕೊಂಡಿದ್ದರು.[೨೭] ಇದರಿಂದ ಅಂತರ್ಯುದ್ಧಕ್ಕೆ ಹಾದಿಯಾಯಿತು. ಪಾರ್ಲಿಮೆಂಟರಿ ಸೇನೆಗಳು ದೊರೆಯ ಪಡೆಗಳನ್ನು ಹಲವು ಕದನಗಳಲ್ಲಿ ಸೋಲಿಸಿದುವು. 1649ರಲ್ಲಿ ದೊರೆ ಸೆರೆಸಿಕ್ಕಿದ.
ಅಂತ್ಯ
[ಬದಲಾಯಿಸಿ]ವಿಶೇಷ ಉಚ್ಚ ನ್ಯಾಯಾಲಯವೊಂದು ಅವನನ್ನು ವಿಚಾರಣೆಗೆ ಗುರಿಪಡಿಸಿ, 1649ರ ಜನವರಿ 27ರಂದು ಅವನಿಗೆ ಮರಣದಂಡನೆ ವಿಧಿಸಿತು.[೨೮] ದೊರೆಯನ್ನು ಈ ಲೋಕದಲ್ಲಿ ಯಾವ ನ್ಯಾಯಾಲಯವೂ ವಿಚಾರಣೆಗೆ ಗುರಿಪಡಿಸಲಾರದೆಂದು ವಾದಿಸಿದ ಚಾರ್ಲ್ಸ್ ತಾನೊಬ್ಬ ಹುತಾತ್ಮನೆಂದೇ ಭಾವಿಸಿ ಮರಣವನ್ನಪ್ಪಿದ. ಕುಳ್ಳನಾಗಿದ್ದ, ಕೊಂಚ ಉಗ್ಗುತ್ತಿದ್ದ ಚಾರ್ಲ್ಸ್ ಚಿತ್ರಕಲೆಯ ಆರಾಧಕನಾಗಿದ್ದ. ವ್ಯಾನ್ ಡೈಕ್, ರೂಬೆನ್ಸ್ ಮುಂತಾದ ಕಲಾವಿದರಿಗೆ ಆತ ಆಶ್ರಯ ನೀಡಿದ್ದ. ಕುದುರೆ ಸವಾರಿಯಲ್ಲೂ, ಬೇಟೆಗಳಲ್ಲೂ ಅವನಿಗೆ ಆಸಕ್ತಿಯಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Gregg 1981, p. 47.
- ↑ Cust 2005, p. 5; Hibbert 1968, pp. 49–50.
- ↑ Coward 2003, p. 152.
- ↑ Gregg 1981, p. 114; Hibbert 1968, p. 86; Weir 1996, p. 252.
- ↑ Carlton 1995, pp. 68–69; Gregg 1981, p. 129.
- ↑ "The Crisis of 1626, 1625". Archived from the original on 11 ಮಾರ್ಚ್ 2007. Retrieved 31 ಮಾರ್ಚ್ 2007.
- ↑ Manning, An Apprenticeship in Arms, pg 114
- ↑ Carlton 1995, pp. 71–75; Cust 2005, pp. 50–52; Gregg 1981, pp. 138–147; Quintrell 1993, pp. 21–28.
- ↑ Carlton 1995, pp. 75, 81; Quintrell 1993, p. 29.
- ↑ Gregg 1981, pp. 170–173.
- ↑ Cust 2005, p. 75; Gregg 1981, p. 175; Quintrell 1993, p. 40.
- ↑ Carlton 1995, pp. 103–104; Cust 2005, p. 76; Gregg 1981, pp. 175–176; Kenyon 1978, p. 104.
- ↑ Cust 2005, p. 118; Gregg 1981, p. 185; Quintrell 1993, p. 43.
- ↑ Cust 2005, p. 118; Gregg 1981, p. 186; Robertson 2005, p. 35.
- ↑ Carlton 1995, pp. 153–154; Sharpe 1992, p. xv.
- ↑ Cust 2005, pp. 236–237.
- ↑ Cust 2005, p. 251; Gregg 1981, p. 294.
- ↑ Adamson 2007, p. 11.
- ↑ Carlton 1995, pp. 211–212; Cust 2005, pp. 253–259; Gregg 1981, pp. 305–307; Loades 1974, p. 402.
- ↑ Carlton 1995, p. 191; Quintrell 1993, p. 62.
- ↑ Cust 2005, pp. 262–263; Gregg 1981, pp. 313–315.
- ↑ Carlton 1995, p. 222; Hibbert 1968, p. 154 and Sharpe 1992, p. 944 assume that Pym was involved with the launch of the bill; Russell 1991, p. 288, quoting and agreeing with Gardiner, suspects that it was initiated by Pym's allies only.
- ↑ Coward 2003, p. 191; Gregg 1981, p. 334; Hibbert 1968, pp. 156–157.
- ↑ Starkey 2006, p. 112.
- ↑ Gregg 1981, pp. 340–341; Loades 1974, p. 415; Smith 1999, p. 127; Starkey 2006, p. 113.
- ↑ Cust 2005, pp. 321–324; Gregg 1981, p. 343; Hibbert 1968, p. 178; Starkey 2006, pp. 113–114.
- ↑ Carlton 1995, p. 232; Cust 2005, pp. 320–321; Hibbert 1968, p. 179.
- ↑ Gregg 1981, pp. 440–441.
ಗ್ರಂಥಸೂಚಿ
[ಬದಲಾಯಿಸಿ]- Gregg, Pauline (1981), King Charles I, London: Dent, ISBN 0-4600-4437-0
- Cust, Richard (2005), Charles I: A Political Life, Harlow: Pearson Education, ISBN 0-5820-7034-1
- Hibbert, Christopher (1968), Charles I, London: Weidenfeld & Nicolson
- Coward, Barry (2003), The Stuart Age (3rd ed.), London: Longman, ISBN 978-0-5827-7251-9
- Weir, Alison (1996), Britain's Royal Families: A Complete Genealogy (Revised ed.), London: Pimlico, ISBN 978-0-7126-7448-5
- Carlton, Charles (1995), Charles I: The Personal Monarch (2nd ed.), London: Routledge, ISBN 0-4151-2141-8
- Roger Manning, Oxford (2006), ''An Apprenticeship in Arms: The Origins of the British Army 1585–1702''
- Quintrell, Brian (1993), Charles I: 1625–1640, Harlow: Pearson Education, ISBN 0-5820-0354-7
- Kenyon, J. P. (1978), Stuart England, London: Penguin Books, ISBN 0-7139-1087-9
- Robertson, Geoffrey (2005), The Tyrannicide Brief, London: Chatto & Windus, ISBN 0-7011-7602-4
- Sharpe, Kevin (1992), The Personal Rule of Charles I, New Haven & London: Yale University Press, ISBN 0-3000-5688-5
- Adamson, John (2007), The Noble Revolt, London: Weidenfeld & Nicolson, ISBN 978-0-2978-4262-0
- Loades, D. M. (1974), Politics and the Nation, London: Fontana, ISBN 0-0063-3339-7
- Russell, Conrad (1991), The Fall of the British Monarchies 1637–1642, Oxford: Clarendon Press, ISBN 0-1982-0588-0
- Starkey, David (2006), Monarchy, London: HarperPress, ISBN 978-0-0072-4750-9
- Smith, David L. (1999), The Stuart Parliaments 1603–1689, London: Arnold, ISBN 0-3406-2502-3
