ಚಾರಣ (ಮನೋರಂಜನೆಗಾರ)

ಚಾರಣರು ಎನ್ನುವವರು ಆರಂಭದಲ್ಲಿ ಮಧ್ಯಯುಗದ ಯುರೋಪ್‍ನಲ್ಲಿದ್ದ ಮನೋರಂಜನೆಗಾರರು. ಚಾರಣ ವಿದ್ಯೆ ಎನ್ನುವುದು ಮಧ್ಯಯುಗದಲ್ಲಿ ಬ್ರಿಟನ್ ಮತ್ತು ಯೂರೋಪಿನ ಇತರ ದೇಶಗಳಲ್ಲಿ ಚಾರಣರು (ಮಿನ್‌ಸ್ಟ್ರಲ್ಸ್) ಪ್ರದರ್ಶಿಸುತ್ತಿದ್ದ ಗಾಯನ, ವಾದ್ಯವಾದನ ಮತ್ತು ಇನ್ನೂ ಹಲವು ಬಗೆಯ ಕೌಶಲಗಳು (ಮಿನ್‌ಸ್ಟ್ರಲ್ಸಿ). ಊರಿಂದೂರಿಗೆ ಪಾದಚಾರಿಗಳಾಗಿ ಸಂಚರಿಸುತ್ತಿದ್ದ ಈ ಚಾರಣರು ತಮ್ಮ ಆಕರ್ಷಕ ವಿದ್ಯೆಗಳನ್ನು ಪ್ರದರ್ಶಿಸಿ ತನ್ಮೂಲಕ ಜೀವನೋಪಾಯವನ್ನು ಸಂಪಾದಿಸಿಕೊಳ್ಳುವುದಲ್ಲದೆ ಮಾನಮರ್ಯಾದೆಗಳನ್ನೂ ಪಡೆಯುತ್ತಿದ್ದರು. ಮಧ್ಯಯುಗದ ಇಂಗ್ಲಿಷ್ ಸಾಹಿತ್ಯವಲ್ಲದೆ ಫ್ರೆಂಚ್, ಜರ್ಮನ್ ಮೊದಲಾದ ಇತರ ಯೂರೋಪಿಯ ಸಾಹಿತ್ಯಗಳಲ್ಲೂ ಚಾರಣರ ಉಲ್ಲೇಖಗಳು ಹೇರಳವಾಗಿವೆ. ಮೊದಲಿಗೆ ಇವರು ರಾಜಸಭೆಗಳಿಗೂ, ವರಿಷ್ಠ ವರ್ಗದವರ ಕುಟುಂಬಗಳಿಗೂ ಸೇರಿದ್ದರು. ಆಗ ಇವರು ಗಾಯನ, ವಾಚನ, ವಾದ್ಯವಾದನ ಮೊದಲಾದ ಕಲೆಗಳಲ್ಲೇ ವಿಶೇಷ ಕೌಶಲ ಪಡೆದಿದ್ದರು. ಆದ್ದರಿಂದ ಇವರಿಗೆ ರಾಜಸಭೆಗಳಲ್ಲೂ, ಉನ್ನತವರ್ಗದವರ ಮನೆತನಗಳಲ್ಲೂ ಬಹಳ ಗೌರವ ದೊರೆಯುತ್ತಿತ್ತು. ಕಾಲಕ್ರಮದಲ್ಲಿ ಇವರ ವಿದ್ಯೆಗಳಲ್ಲಿ ಅವನತಿಯುಂಟಾಗಿ ಸಂತೆ, ಜಾತ್ರೆಗಳಲ್ಲಿ ಇವರು ದೊಂಬರಾಟ, ಕೈಚಳಕದ ಪ್ರದರ್ಶನಗಳು, ಯಕ್ಷಿಣಿ ಇಂದ್ರಜಾಲಗಳ ಪ್ರದರ್ಶನಗಳು, ವಿವಿಧ ಬಗೆಯ ಕುಣಿತಗಳು ಮುಂತಾದುವನ್ನು ನಡೆಸಿ ತಮ್ಮ ಜೀವನೋಪಾಯ ಗಳಿಸಿಕೊಳ್ಳಬೇಕಾಯಿತು.
ಇತಿಹಾಸ
[ಬದಲಾಯಿಸಿ]1469ರಲ್ಲಿ ಇಂಗ್ಲೆಂಡಿನ ನಾಲ್ಕನೆಯ ಎಡ್ವರ್ಡ್ ದೊರೆ ಚಾರಣರ ಸಂಘವೊಂದನ್ನು ರಚಿಸುವ ಆಜ್ಞೆ ಮಾಡಿದ.[೧] ಇದರ ಒಂದು ಉದ್ದೇಶ ರಾಜಸಭೆಗಳಿಗೋ, ವರಿಷ್ಠರ ಸೌಧಗಳಿಗೋ ಇವರು ಯದ್ವಾತದ್ವಾ ನುಗ್ಗಿ ಹೆಚ್ಚು ಪ್ರಮಾಣದಲ್ಲಿ ಸಂಭಾವನೆಯನ್ನು ಒತ್ತಾಯವಾಗಿ ಕೇಳುತ್ತಿದ್ದುದನ್ನು ತಪ್ಪಿಸುವುದು. ಅಲ್ಲದೆ ಈ ಸಂಘ ಸ್ಥಾಪಿಸಿದುದರಿಂದ ಇವರು ಪ್ರದರ್ಶಿಸುತ್ತಿದ್ದ ಕಲೆಗಳ ಮಟ್ಟವನ್ನು ನಿರ್ಣಯಿಸಲು ಸಾಧ್ಯವಾಯಿತು.
ಮೊದಲನೆಯ ಎಲಿಜ಼ಬೆತ್ ರಾಣಿಯ ಆಳ್ವಿಕೆಯ ಹೊತ್ತಿಗೆ ಈ ವೃತ್ತಿ ಬಹು ಕೀಳುಮಟ್ಟಕ್ಕಿಳಿಯಿತು. ಹೀಗಾಗಿ ಪುಂಡರು, ಗೂಂಡಾಗಳು, ಅಲೆಮಾರಿಗಳು ಮುಂತಾದವರೊಡನೆ ಚಾರಣರನ್ನೂ ಹಲವೊಮ್ಮೆ ಶಿಕ್ಷಿಸುವ ಅಗತ್ಯ ಒದಗಿತು.
1656ರಲ್ಲಿ ಆಲಿವರ್ ಕ್ರಾಮ್‌ವೆಲ್ಲನ ಆಡಳಿತದಲ್ಲಿ ಒಂದು ಶಾಸನದ ಮೂಲಕ ಚಾರಣರ ಚಟುವಟಿಕೆಗಳಿಗೆ ಹೆಚ್ಚು ತಡೆಗಳನ್ನು ಹಾಕಲಾಯಿತು. ಇದರಿಂದ ಚಾರಣವೃತ್ತಿಗೇ ಬಹುಶಃ ಕೊಡಲಿ ಪೆಟ್ಟು ಬಿದ್ದಾಂತಾಯಿತು. ಫ್ರಾನ್ಸಿನಲ್ಲಿ ಮಿನ್‌ಸ್ಟ್ರಲ್‌ಗಳನ್ನು ಜಾಗ್ಲರ್‌ಗಳೆಂದು ಕರೆಯುತ್ತಿದ್ದರು.[೨]
ಭಾರತದಲ್ಲಿ
[ಬದಲಾಯಿಸಿ]ವೇದಗಳು, ಉಪನಿಷತ್ತುಗಳು ಮತ್ತು ಇತಿಹಾಸ ಪುರಾಣಗಳ ಕಾಲದಲ್ಲಿ ಪುರಾಣಿಕರೆಂಬ ಗಣ್ಯವ್ಯಕ್ತಿಗಳು ಭಾರತ ದೇಶದ ವಿವಿಧ ಭಾಗಗಳಲ್ಲಿ ಪಾದಚಾರಿಗಳಾಗಿ ಸಂಚರಿಸುತ್ತ ಗಾಯನ, ವಾಚನ, ಪ್ರವಚನಗಳಿಂದ ರಾಜಸಭೆಗಳಲ್ಲಿ ಮಾತ್ರವಲ್ಲದೆ, ಪುಣ್ಯಕ್ಷೇತ್ರಗಳು ಮೊದಲಾದ ಸ್ಥಳಗಳಲ್ಲಿ ಮನೋರಂಜನೆಯನ್ನು ಮಾತ್ರವಲ್ಲದೆ ಧರ್ಮ, ನೀತಿ ಮೊದಲಾದ ಉಪದೇಶಗಳನ್ನು ಮಾಡುತ್ತಿದ್ದರು.[೩] ಇವರಿಗೆ ಆಗಾಗ ರಾಜಮರ್ಯಾದೆಯೂ ದೊರೆಯುತ್ತಿತ್ತು ಎನ್ನಲಾಗಿದೆ. ಅಂದಂದಿನ ಬಹುಮಟ್ಟಿನ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬರುವಲ್ಲಿ, ಅವನ್ನು ಜನತೆಯಲ್ಲಿ ಪ್ರಸಾರ ಮಾಡುವಲ್ಲಿ ಚಾರಣರು ಮಾಡಿರುವ ಕೆಲಸ ಮರೆಯಲಾಗದಂಥದು.
ಉಲ್ಲೇಖಗಳು
[ಬದಲಾಯಿಸಿ]- ↑ https://www.wcomarchive.org.uk/the-charters
- ↑ Britannica Editors. "minstrel". Encyclopedia Britannica, 26 Aug. 2022, https://www.britannica.com/art/minstrel. Accessed 5 March 2026.
- ↑ https://ignca.gov.in/Online-Books-journals/Purana1998Vol-2.pdf
ಹೊರಗಿನ ಕೊಂಡಿಗಳು
[ಬದಲಾಯಿಸಿ]- Stella Fortuna: Medieval Minstrels (1370), from Ye Compaynye of Cheualrye Re-enactment Society. Photos and Audio Download.
- Essays on the Origin of Western Music. Word Document Download.
- Edward II and Minstrels (31 Jan 2009), Edward II Blog.
- Terry Jones' Medieval Lives (2004), Series 1, Episode 6.
