ಚಾಟೆಲ್ಪೆರ್ರಾನಿಯನ್
ಚಾಟೆಲ್ಪೆರ್ರಾನಿಯನ್ ಎನ್ನುವುದು ಯೂರೋಪಿನ ಹಳೆಯ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ ಕಲ್ಲಿನ ಆಯುಧಗಳ ಒಂದು ಸಂಸ್ಕೃತಿ. ಇದು ಮಧ್ಯ ಫ್ರಾನ್ಸಿನ ಅಲಿಯರ್ ಜಿಲ್ಲೆಯಲ್ಲಿರುವ ಚಾಟೆಲ್‍ಪೆರ‍್ರಾನ್ ಎಂಬಲ್ಲಿ ಮೊತ್ತಮೊದಲಿಗೆ ಕಂಡುಬಂದುದರಿಂದ ಈ ಸಂಸ್ಕೃತಿಯನ್ನು ಈ ಹೆಸರಿನಿಂದ ಕರೆಯಲಾಗಿದೆ. ಫ್ರಾನ್ಸಿನ ನೈಋತ್ಯ ಭಾಗದಲ್ಲಿ ಈ ಸಂಸ್ಕೃತಿ ಹೆಚ್ಚು ಬಳಕೆಯಲ್ಲಿತ್ತು. ಈ ಸಂಸ್ಕೃತಿಯ ಮುಖ್ಯ ಆಯುಧವೆಂದರೆ, ಕಲ್ಲು ಚಕ್ಕೆಯಿಂದ ಅದರ ಒಂದು ಅಂಚನ್ನು ಚೂಪಾಗಿಯೂ, ಮತ್ತೊಂದು ಅಂಚನ್ನು ಮೊಂಡಾಗಿಯೂ ಇರುವಂತೆ ಮಾಡಿದ ಚಾಕು. ಇದಲ್ಲದೆ ಕೊರೆಯುವ ಉಳಿ, ಹೆರೆಯುವ ಆಯುಧಗಳು ಮತ್ತು ಮೊನೆಗಳು ಉಪಯೋಗದಲ್ಲಿರುತ್ತಿದ್ದುವು. ಆಧುನಿಕ ಮಾನವ (ಹೊಮೋಸೇಪಿಯನ್) ರೂಢಿಗೆ ತಂದ ಶಿಲಾಯುಗ ಸಂಸ್ಕೃತಿಗಳಲ್ಲಿ ಇದೇ ಮೊದಲನೆಯದು. ಮೂಳೆ, ದಂತ ಮತ್ತು ಕೊಂಬಿನಿಂದ ತಯಾರಿಸಿದ ಆಯುಧಗಳ ಉಪಯೋಗವೂ, ಪೂರ್ವಶಿಲಾಯುಗಕಾಲದ ಕಲೆಯ ಸೃಷ್ಟಿಯೂ ಯೂರೋಪಿನ ಹಲವು ಭಾಗಗಳಲ್ಲಿ ಈ ಸಂಸ್ಕೃತಿಯೊಂದಿಗೆ ಪ್ರಾರಂಭವಾದುವು. ಚಾಟೆಲ್‍ಪೆರ್ರಾನಿಯನ್ ತಾಣಗಳಲ್ಲಿ ದಂತದ ಬಳಕೆಯು ನಂತರದ ಆರಿಗ್ನೇಸಿಯನ್ ಸಂಸ್ಕೃತಿಗಿಂತ ಹೆಚ್ಚು ಪದೇಪದೇ ಬರುತ್ತದೆ ಎಂದು ತೋರುತ್ತದೆ.[೧] ಬಲವಾದ ಮತ್ತು ಚೂಪಾದ ಮೊನೆಯುಳ್ಳ ಬ್ಯೂರಿನ್ ಎಂಬ ಕೆತ್ತುವ ಆಯುಧ ಬಳಕೆಗೆ ಬಂದುದೇ ಇದಕ್ಕೆ ಮುಖ್ಯ ಕಾರಣ. ಬದಲಾಗುತ್ತಿದ್ದ ವಾಯುಗುಣದಿಂದ ಅಸ್ತಿತ್ವಕ್ಕೆ ಬಂದ ಚಾಟೆಲ್‌ಪೆರ‍್ರಾನಿಯನ್ ಸಂಸ್ಕೃತಿಯ ಕಾಲದಿಂದ ಮಾನವನ ದೈನಂದಿನ ಜೀವನ ವಿಧಾನದಲ್ಲಿ ಸುಧಾರಣೆಯುಂಟಾಯಿತು. ರೇಡಿಯೋಕಾರ್ಬನ್ ವಿಧಾನದ ಮೂಲಕ ಗ್ರೋಟ್ ಡ್ಯು ರೆನೆಯಲ್ಲಿ ಈ ಸಂಸ್ಕೃತಿಯ ಕಾಲಗಳು ಕ್ರಿ.ಪೂ. 31,690+250 ಮತ್ತು 31,550+400 ಎಂದು ನಿರ್ಧರಿಸಲಾಗಿದೆ. ಇದು ಕ್ರಿ.ಪೂ. 35,000-34,00 ದಷ್ಟು ಹಿಂದೆಯೇ ಆರಂಭವಾಗಿದ್ದಿರಲೂಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ d'Errico, Francesco; Zilhão, João; Julien, Michèle; Baffier, Dominique; Pelegrin, Jacques (1998). "Neanderthal Acculturation in Western Europe? A Critical Review of the Evidence and Its Interpretation". Current Anthropology. 39: S1–S44. doi:10.1086/204689. S2CID 144799519.
