ಚಾಂಗ್ಷಾ
ಚಾಂಗ್ಷಾ ಎನ್ನುವುದು ಚೀನದ ಒಂದು ನಗರ, ಹೂನಾನ್ ಪ್ರಾಂತ್ಯದ ಮುಖ್ಯ ಪಟ್ಟಣ. ಷಿಯಾಂಗ್ ನದಿಯ ಪೂರ್ವದ ದಂಡೆಯ ಮೇಲೆ ಉ.ಅ. 280 12' ಮತ್ತು ಪೂ.ರೇ. 1120 59' ರಲ್ಲಿದೆ. ಜನಸಂಖ್ಯೆ ಸುಮಾರು 10,513,100 (2022).[೧] ಮಧ್ಯ ಯಾಂಗ್ಸ್‌ಟೀ ಕಣಿವೆಯ ಮಹಾದ್ವಾರದಂತಿರುವುದರಿಂದ ಹಿಂದಿನಿಂದಲೂ ಇದರ ಪ್ರಾಶಸ್ತ್ಯ. ಯಾಂಗ್ಸ್‌ಟೀ ನದಿಯಲ್ಲಿ ಉಗಿ ಜಹಜುಗಳು ಇಲ್ಲಿಯವರೆಗೂ ಸಂಚರಿಸುತ್ತವೆ. ಚೀನದ ಚಹಕ್ಕಾಗಿ ಮತ್ತು ಈ ಸುತ್ತಿನ ಜನರಿಗೆ ತಮ್ಮ ರೇಷ್ಮೆ ಕಸೂತಿ ಚಿತ್ರಗಳು, ಬೆಣ್ಣೆ ಕಾಗದದ ಕೊಡೆಗಳು, ಲಿನೆನ್, ಕುಂಚ ಲೇಖನಿಗಳು, ಬೊಂಬಿನಲ್ಲಿ ಕಡೆದ ಚಿತ್ರಗಳು - ಇವುಗಳಿಗಾಗಿ ಚಾಂಗ್‌ಷಾ ಪ್ರಸಿದ್ಧ. ಅಕ್ಕಿಗಿರಣಿ, ಮರ ಕೊಯ್ಯುವುದು, ದೋಣಿ ರಚನೆ, ಆಂಟಿಮೊನಿ, ಮ್ಯಾಂಗನೀಸ್, ಸೀಸ ಮತ್ತು ಸತುಗಳನ್ನು ಕರಗಿಸುವುದು - ಇವು ಇಲ್ಲಿದ್ದ ಕೈಗಾರಿಕೆಗಳು. ಈ ಕೈಗಾರಿಕೆಗಳ ಸರಕುಗಳು ಬಹುತೇಕ ರಫ್ತಾಗುತ್ತಿದ್ದುವು. ಯಂತ್ರೋಪಕರಣ, ಗಣಿಗಾರಿಕೆ, ಕೃಷಿ ಸಲಕರಣೆ, ಔಷಧ, ರಸಗೊಬ್ಬರ ಮತ್ತು ರಬ್ಬರ್ ಉತ್ಪನ್ನಗಳ ಕೈಗಾರಿಕೆಗಳು ಈಚೆಗೆ ಆರಂಭವಾಗಿವೆ. ಚಾಂಗ್‌ಷಾದಿಂದ ಚೀನದ ಇತರ ಸ್ಥಳಗಳಿಗೆ ಭೂಜಲ ಸಂಪರ್ಕವುಂಟು. ಪೀಕಿಂಗ್, ಕ್ವಾಂಗ್‌ಜೋ (ಕ್ಯಾಂಟನ್), ಜಜಿಯಾಂಗ್, ಗ್ವೇಜೋಗಳಿಗೆ ರೈಲ್ವೆ ಮಾರ್ಗಗಳಿವೆ. ರಸ್ತೆಗಳ ಪೈಕಿ ಚಾಂಗ್‌ಷಾ-ಸಚ್ಚಾನ್ ಹೆದ್ದಾರಿ ಮುಖ್ಯವಾದದ್ದು.
ಇತಿಹಾಸ, ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಚಾಂಗ್‍ಷಾ ನಗರ ನಿರ್ಮಾಣದಲ್ಲಿ ೨,೪೦೦ ವರ್ಷಗಳಿಗಿಂತ ಹೆಚ್ಚಿನ ಇತಿಹಾಸವನ್ನು ಹೊಂದಿದೆ.[೨] ಚಾಂಗ್ಷಾ ಹಿಂದೆ ಚು ರಾಜ್ಯದ ರಾಜಧಾನಿಯಾಗಿತ್ತು. ಚು ರಾಜ್ಯವು ಹ್ಯಾನ್ ಚಕ್ರಾಧಿಪತ್ಯದಲ್ಲಿ ವಿಲೀನವಾದ ಅನಂತರವೂ ಸ್ವತಂತ್ರ ರಾಜನೊಬ್ಬನಿಂದ ಆಳಲ್ಪಡುವ ಮಾನ್ಯತೆ ಪಡೆದಿತ್ತು. ಚಾಂಗ್‌ಷಾ ನಗರದ ಕೋಟೆಯ ಗೋಡೆಗಳ ಹೊರಭಾಗದಲ್ಲಿ ಕ್ರಿ.ಪೂ.3 ಮತ್ತು 2ನೆಯ ಶತಮಾನಗಳಿಗೆ ಸೇರಿದ ಕೆಲವು ಸಮಾಧಿಗಳಿವೆ. ಈ ಪ್ರದೇಶದ ಭೂಮಿಯ ತಂಪುಗುಣದಿಂದ ಮರ ಮತ್ತು ಅರಗಿನಿಂದ ಮಾಡಿದ ಅನೇಕ ವಸ್ತುಗಳು ನಾಶಗೊಳ್ಳದೆ ಉಳಿದುಕೊಂಡಿವೆ. ಈ ಸಮಾಧಿಗಳಲ್ಲಿ ದೊರಕಿದ ಅವಶೇಷಗಳು ಪರಸಂಸ್ಕೃತಿಯೊಂದಕ್ಕೆ ಸಂಬಂಧಪಟ್ಟುವೆಂಬುದನ್ನು ಸೂಚಿಸುತ್ತವೆ. ಇದರ ಅನೇಕ ಅಂಶಗಳು ಸೈಬೀರಿಯಾ ಪ್ರದೇಶದ ಯೂರಲ್ ಅಲ್ಟಾಯಿ ಜನಾಂಗದ ಪ್ರಾಚೀನ ಮತಪದ್ಧತಿಗಳನ್ನು ಹೋಲುತ್ತವೆ. ಈ ಅವಶೇಷಗಳಲ್ಲಿ ಮುಖ್ಯವಾದವೆಂದರೆ ಮರದ ಪ್ರತಿಮೆಗಳು. ಮಾನವನ ತಲೆ, ಉದ್ದ ನಾಲಗೆ ಮತ್ತು ಗುಡ್ಡೆಗಣ್ಣುಗಳಿರುವಂತೆ ಇವನ್ನು ಕಡೆಯಲಾಗಿದೆ. ಮೃತರ ಸಮಾಧಿಗಳಲ್ಲಿ ಸೇವಕರ ಪ್ರತಿಮೆಗಳೂ, ಅರಗಿನ ವಸ್ತುಗಳೂ ಇದ್ದುವು. ಅರಗಿನ ವಸ್ತುಗಳು ಹ್ಯಾನ್ ಕಾರ್ಖಾನೆಗಳಲ್ಲಿ ಮಾಡಿದ್ದವೆಂದು ಊಹಿಸಲು ಆಧಾರಗಳುಂಟು. ಸಮಾಧಿಯೊಂದರಲ್ಲಿ ಅತ್ಯಂತ ಪ್ರಾಚೀನವಾದ ಬರೆಯುವ ಕುಂಚ ದೊರೆತಿದೆ. ಅರ್ವಾಚೀನ ಕಿಂಗ್ ರಾಜವಂಶದಲ್ಲಿ, ಚಾಂಗ್‍ಷಾ ಅಕ್ಕಿ ಮತ್ತು ಚಹಾಕ್ಕೆ ಚೀನಾದಲ್ಲಿನ ನಾಲ್ಕು ಪ್ರಮುಖ ವ್ಯಾಪಾರ ನಗರಗಳಲ್ಲಿ ಒಂದೆನಿಸಿತ್ತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "2024年长沙市人口第七次人口普查和历史人口数据 年龄金字塔结构 民族组成情况-红黑人口库". www.hongheiku.com. Retrieved 2025-01-15.
- ↑ Changsha Municipal Institute of Cultural Relics and Archaeology. Archaeological Discoveries and Studies of Ancient City Sites in Changsha. Hunan Yuelu Publishing House. 1 December 2016.
- ↑ Institute of Changsha Culture, Changsha University. The prosperity of commerce in ancient Changsha and its causes (below) Journal of Changsha University. 2011 No. 1.
