ಚಲುವೆ ಕ್ರಿಯೆ

ಚಲುವೆ ಕ್ರಿಯೆ ಎಂದರೆ ಹತ್ತಿ, ಉಣ್ಣೆ, ಅವುಗಳಿಂದ ತೆಗೆದ ನೂಲುಗಳು ಮತ್ತು ತಯಾರಿಸಿದ ಬಟ್ಟೆಗಳ ಸಹಜ ಕಂದು, ಕಪ್ಪು, ಹಳದಿ ಮುಂತಾದ ಬಣ್ಣಗಳನ್ನು ಹೋಗಲಾಡಿಸಲು ರಾಸಾಯನಿಕಗಳ ಉಪಯೋಗದಿಂದ ಮಾಡುವ ಕ್ರಿಯೆ (ಬ್ಲೀಚಿಂಗ್). ಇದಕ್ಕೆ ಬಳಸುವ ರಾಸಾಯನಿಕಗಳನ್ನು ಚೆಲುವೆಕಾರಿಗಳು ಎಂದು ಕರೆಯಲಾಗುತ್ತದೆ. ಹೀಗೆ ಬಿಳಿಚಿಸಿದ ಬಳಿಕ ಅವುಗಳಿಗೆ ಆಕರ್ಷಕ ಬಣ್ಣಗಳನ್ನು ಕೊಡುತ್ತಾರೆ. ಹತ್ತಿ ನೂಲು ಮತ್ತು ಉಣ್ಣೆ ನೂಲುಗಳನ್ನು ಚಲುವೆ ಮಾಡುವ ಕ್ರಮಗಳು ಭಿನ್ನವಾಗಿವೆ.
ಹತ್ತಿ ನೂಲುಗಳು
[ಬದಲಾಯಿಸಿ]ಹತ್ತಿಯಲ್ಲಿ 6%-11% ಭಾಗ ಕಶ್ಮಲ ಉಂಟು. ಇದರಲ್ಲಿ ಸಸಾರಜನಕ ಪದಾರ್ಥ, ಲವಣಗಳು, ಮೇಣಗಳು, ರಾಳ ಪದಾರ್ಥಗಳು ಮತ್ತು ಬಣ್ಣಗಳಿರುವುವು. ಕೆಲವನ್ನು ನೀರಿನಲ್ಲಿ ನೆನೆಸಿ ತೆಗೆಯಬಹುದು. ಕೆಲವನ್ನು ಕ್ಷಾರದ್ರವದಲ್ಲಿ ಕುದಿಸಿ, ಮತ್ತೆ ಕೆಲವನ್ನು ಆಮ್ಲಗಳನ್ನು ಬಳಸಿ ತೆಗೆಯಬಹುದು. ಮೇಣಗಳನ್ನು ತೆಗೆಯುವುದು ಎಲ್ಲಕ್ಕಿಂತ ಕಷ್ಟವಾದುದು. ಕ್ಷಾರದಲ್ಲಿ ಪುನಃ ಪುನಃ ಕದಡಿ ಇವನ್ನು ತೆಗೆಯಬೇಕು.[೧] ಚಲುವೆ ಮಾಡುವ ಮೊದಲು ಮೇಲೆ ತಿಳಿಸಿದ ಸ್ಕೋರಿಂಗನ್ನು (ಅಂದರೆ ತೊಳೆಯುವ ಕ್ರಮಗಳನ್ನು) ಅನುಸರಿಸಬೇಕಾಗುತ್ತದೆ.[೨] ನೂಲನ್ನು ಮೊದಲು ನೀರಿನಲ್ಲಿ ಕುದಿಸಿ, ತೊಳೆದು, ಪುನಃ ಸಾರರಿಕ್ತ ಆಮ್ಲ ದ್ರಾವಣದಲ್ಲಿ ಸಂಸ್ಕರಿಸಿ, ತೊಳೆದು, ಮತ್ತೆ ಬಿಸಿ ಕ್ಷಾರದ್ರವದಲ್ಲಿ ನೆನೆಸಬೇಕು. ಕ್ಷಾರದ್ರವವನ್ನು ವಾಯುಸಂಪರ್ಕರಹಿತವಾಗಿ ನೂಲಿನ ಮೂಲಕ ಪುನಃಪುನಃ ಹಾಯಿಸಲಾಗುತ್ತದೆ. ವಾಯು ಬೆರೆತರೆ ಅಲ್ಲಿ ಆಕ್ಸಿಸೆಲ್ಯುಲೋಸ್ (oxycellulose) ಎಂಬ ಅನಪೇಕ್ಷಿತ ಪದಾರ್ಥ ಉಂಟಾಗುತ್ತದೆ. ಕಾದ ಲೋಹದ ಸಂಪರ್ಕವಾದರೆ ಬಟ್ಟೆಯಲ್ಲಿ ಇಲ್ಲವೇ ನೂಲಿನಲ್ಲಿ ಕಪ್ಪು ಸುಟ್ಟ ಕಲೆಗಳಾಗುತ್ತವೆ. ಈ ಸಂಸ್ಕಾರವಾದ ಬಳಿಕ ಪದಾರ್ಥವನ್ನು ಶುದ್ಧವಾಗಿ ತೊಳೆದಿಡಬೇಕು.
ಹೈಪೊಕ್ಲೋರೈಟ್ ವಿಧಾನದಿಂದ ಚಲುವೆ ಕ್ರಿಯೆ
[ಬದಲಾಯಿಸಿ]ಹತ್ತಿ ನೂಲನ್ನು ಬಿಳುಪು ಮಾಡಲು ಈ ವಿಧಾನವನ್ನು ಎಲ್ಲ ಕಡೆ ಉಪಯೋಗಿಸುತ್ತಾರೆ. ಕ್ಯಾಲ್ಸಿಯಮ್[೩] ಅಥವಾ ಸೋಡಿಯಮ್ ಹೈಪೊಕ್ಲೊರೈಟ್ ಇದಕ್ಕಾಗಿ ಉಪಯೋಗಿಸುವ ಮುಖ್ಯ ರಾಸಾಯನಿಕಗಳು.[೪][೫] ಕ್ಲೋರಿನ್ ಅನಿಲವನ್ನು ಸುಣ್ಣದ ತಿಳಿಯಲ್ಲಿ ಹಾಯಿಸುವುದರಿಂದ ಕ್ಯಾಲ್ಸಿಯಮ್ ಹೈಪೊಕ್ಲೋರೈಟ್ ಬರುತ್ತದೆ. ಹೆಚ್ಚು ಸುಣ್ಣ ಇದ್ದರೆ ಅದು ಕ್ಲೋರೈಟ್ ಪದಾರ್ಥ ಪುನಃ ವಿಭಜನೆಗೊಳ್ಳುವುದನ್ನು ತಡೆಯುತ್ತದೆ. ಹೈಪೊಕ್ಲೋರೈಟ್ ಪದಾರ್ಥವನ್ನು ನೀರಿನಲ್ಲಿ ಕದಡಿದಾಗ ಸುಣ್ಣ ಗಷ್ಟಿನಂತೆ ತಳದಲ್ಲಿ ನಿಲ್ಲುವುದು. ಮೇಲಿನ ತಿಳಿಯಲ್ಲಿ ಕ್ಯಾಲ್ಸಿಯಮ್ ಹೈಪೊಕ್ಲೋರೈಟ್ ವಿಲೀನವಾಗಿರುತ್ತದೆ. ಇದನ್ನು ಚಲುವೆ ಮಾಡಲು ಹಾಗೆಯೇ ಉಪಯೋಗಿಸಬಹುದು. ಅಥವಾ ಸೋಡವನ್ನು ಸೋಡಿಯಮ್ ಕಾರ್ಬೊನೇಟ್ ಬೆರೆಸಿ ಉಪಯೋಗಿಸಬಹುದು. ಸೋಡವನ್ನು ಬೆರೆಸಿದಾಗ ಸೋಡಿಯಮ್ ಹೈಪೊಕ್ಲೋರೈಟ್ ಉತ್ಪತ್ತಿಯಾಗಿ ಸುಣ್ಣಕಲ್ಲು ಬೇರ್ಪಡುತ್ತದೆ. ಉಪ್ಪು ನೀರಿನಲ್ಲಿ ವಿದ್ಯುತ್ತನ್ನು ಪ್ರವಹಿಸುವುದರಿಂದಲೂ ಸೋಡಿಯಮ್ ಹೈಪೊಕ್ಲೋರೈಟ್ ರಾಸಾಯನಿಕವನ್ನು ಪಡೆಯಬಹುದು.[೬][೭][೮] ಕ್ಲೋರಿನ್ ಧನ ಎಲೆಕ್ಟ್ರೋಡ್ ಬಳಿಯೂ, ಸೋಡಿಯಂ ಹೈಡ್ರಾಕ್ಸೈಡ್ ಋಣ ಎಲೆಕ್ಟ್ರೋಡ್ ಬಳಿಯೂ ಉತ್ಪತ್ತಿಯಾಗಿ ಬೆರೆತು ಹೈಪೊಕ್ಲೋರೈಟ್ ಆಗುತ್ತದೆ. ಕ್ಯಾಲ್ಸಿಯಮ್ ಅಥವಾ ಸೋಡಿಯಮ್ ಹೈಪೊಕ್ಲೋರೈಟ್ ಈ ಎರಡು ರಾಸಾಯನಿಕಗಳೂ ನೀರಿನ ಜೊತೆ ಹೈಪೊಕ್ಲೋರಸ್ ಆಮ್ಲ ಕೊಡುತ್ತವೆ. ಇದು ನಿಧಾನವಾಗಿ ವಿಭಜಿಸಲ್ಪಟ್ಟು ಆಕ್ಸಿಜನ್ ಬರುತ್ತದೆ. ಹೆಚ್ಚು ಕ್ಷಾರವಿದ್ದರೆ ಈ ಕ್ರಿಯೆ ತಡವಾಗಿ ಸಾಗುತ್ತದೆ. ಆಕ್ಸಿಜನ್ನಿನೊಡನೆ ಸಂಯೋಗವಾದಾಗ ಬಟ್ಟೆ ಅಥವಾ ನೂಲು ಬಿಳಿಚಿಕೊಳ್ಳುತ್ತದೆ. ಈ ಆಕ್ಸಿಜನ್ ಬರುವುದು ಹೈಪೊಕ್ಲೋರಸ್ ಆಮ್ಲದಿಂದ. ಇದರ ಉತ್ಪತ್ತಿಯ ಪ್ರಮಾಣ ಒಟ್ಟು ದ್ರವದ ಆಮ್ಲತ್ವವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಆಮ್ಲತ್ವ pH 5 ರಿಂದ 9 ಪ್ರಮಾಣದಲ್ಲಿ ಚಲುವೆ ಕ್ರಿಯೆ ನಡೆಯುತ್ತದೆ. ಹತ್ತಿ ಬಟ್ಟೆ ಅಥವಾ ನೂಲಿನ ಸೆಲ್ಯುಲೋಸ್ pH 7ರಲ್ಲಿ ಜಾಗ್ರತೆಯಾಗಿ ಆಕ್ಸಿಜನ್ನಿನೊಂದಿಗೆ ಸಂಯೋಜನೆ ಹೊಂದಿ ಕೆಡುತ್ತದೆ. ಇದನ್ನು ತಡೆಗಟ್ಟಲು ಚಲುವೆ ಸಂಸ್ಕರಣವನ್ನು pH 7ರ ಕೆಳಗೆ ಮಾಡುವುದು ಒಳ್ಳೆಯದು. ಬಣ್ಣ ಮತ್ತು ಸೆಲ್ಯುಲೋಸ್ ಪದಾರ್ಥ ಎರಡೂ ಆಕ್ಸಿಜನ್ನಿನಿಂದ ಉತ್ಕರ್ಷಣ ಹೊಂದುತ್ತವೆ. ಹೆಚ್ಚು ಬಿಳಿಚಿಕೊಂಡರೆ ಅದರ ಜೊತೆಗೆ ನೂಲು ಕೆಟ್ಟು ಅದರ ಸಾಮರ್ಥ್ಯ ಕುಗ್ಗುತ್ತದೆ. ಹೆಚ್ಚು ಹಾನಿ ಚಲುವೆ ಕ್ರಿಯೆಯ ಅಂತ್ಯದಲ್ಲೇ ಆಗುವುದು. ಇದನ್ನು ಪರಿಹರಿಸಲು ಒಂದು ಉಪಾಯವೆಂದರೆ ಚಲುವೆ ಸಂಸ್ಕರಣ ಪೂರ್ತಿಯಾಗುವ ಮೊದಲೇ ನೂಲನ್ನು ಹೊರತೆಗೆದು ವಾಯುವಿನಲ್ಲಿ ಆರಲು ತೂಗಹಾಕುವುದು. ಆಗ ವಾಯುವಿನಲ್ಲಿರುವ ಇಂಗಾಲಾಮ್ಲ ನಿಧಾನವಾಗಿ ಚಲುವೆ ಕ್ರಿಯೆಯನ್ನು ಸಂಪೂರ್ಣಗೊಳಿಸುತ್ತದೆ. ಉತ್ಪತ್ತಿಯಾದ ಸೋಡ ಮತ್ತು ಸುಣ್ಣಕಲ್ಲು ಆಮ್ಲದಿಂದ ವಿಭಜನೆಯಾಗುವುದನ್ನು ನಿಧಾನವಾಗಿಸುತ್ತವೆ.
ಅಸಿಟೇಟ್ ರೇಯಾನ್ ನೂಲು ಹೆಚ್ಚು ಉಷ್ಣ ಮತ್ತು ಕ್ಷಾರದಿಂದ ಕೆಡುತ್ತದೆ. ಆದ್ದರಿಂದ pH 4.5ರಿಂದ 5.5ರ ಒಳಗಿರಬೇಕು.
ಕ್ಲೋರೈಟಿನಿಂದ ಚಲುವೆ ಕ್ರಿಯೆ
[ಬದಲಾಯಿಸಿ]ಹತ್ತಿ ನೂಲಿಗೆ ಚಲುವೆ ಮಾಡಲು ಸೋಡಿಯಮ್ ಕ್ಲೋರೈಟನ್ನು (NaClO2) ಉಪಯೋಗಿಸುತ್ತಾರೆ. ಇದು ಕ್ಲೋರಿನ್ ಆಕ್ಸೈಡನ್ನು (ClO2) ಬಿಡುಗಡೆ ಮಾಡುತ್ತದೆ. ಹೆಚ್ಚು ಆಮ್ಲತ್ವ (ಕಡಿಮೆ pH), ಹೆಚ್ಚು ಉಷ್ಣತೆ ಮತ್ತು ಸಾಂದ್ರತೆಗಳಲ್ಲಿ ಇದು ಕೆಲಸ ಮಾಡಬಲ್ಲುದು. ಇಂಥ ಸ್ಥಿತಿಯಲ್ಲೂ, ಅಂದರೆ ಬಿಸಿ ಆಮ್ಲ ದ್ರವದಲ್ಲೂ ನೂಲಿನ ಸೆಲ್ಯುಲೋಸ್ ಪದಾರ್ಥಕ್ಕೆ ಯಾವ ಹಾನಿಯೂ ಆಗುವುದಿಲ್ಲ.
ಪೆರಾಕ್ಸೈಡಿನಿಂದ ಚಲುವೆ ಕ್ರಮ
[ಬದಲಾಯಿಸಿ]ಹೈಡ್ರೊಜನ್ ಪೆರಾಕ್ಸೈಡಿನಿಂದ (H2O2) ಚಲುವೆ ಮಾಡುವುದು ದಿನೇ ದಿನೇ ಜನಪ್ರಿಯವಾಗುತ್ತಿದೆ.[೯] ಇದನ್ನು ಎಲ್ಲ ಜಾತಿಯ ನೂಲುಗಳಿಗೂ ಉಪಯೋಗಿಸಬಹುದು. ಈ ರಾಸಾಯನಿಕವನ್ನು ಸೋಡಿಯಮ್ ಪೆರಾಕ್ಸೈಡ್ ರೂಪದಲ್ಲಿ (Na2O2) ಅಥವಾ ಸಾಂದ್ರೀಕರಿಸಿದ ರೂಪದಲ್ಲಿ ಪಡೆಯಬಹುದು. ಉಪಯೋಗಿಸುವಾಗ ನೀರು ಬೆರೆಸಿ ಸಾರರಿಕ್ತಗೊಳಿಸಬಹುದು. ಸೋಡಿಯಮ್ ಪೆರಾಕ್ಸೈಡಿನಿಂದ ಬೆಂಕಿ ಅನಾಹುತವಾಗುವ ಸಂಭವ ಉಂಟು. ಆದ್ದರಿಂದ ಹೈಡ್ರೊಜನ್ ಪೆರಾಕ್ಸೈಡ್ ಹೆಚ್ಚು ಉಪಯೋಗದಲ್ಲಿದೆ. ಇದನ್ನು 10-20-100-130 ಸಾಂದ್ರತೆಯಲ್ಲಿ ಪಡೆಯಬಹುದು. ದ್ರವದಿಂದ ಎಷ್ಟು ಆಕ್ಸಿಜನ್ನನ್ನು ಪಡೆಯಬಹುದು ಎನ್ನುವುದನ್ನು ಈ ಸಂಖ್ಯೆಗಳು ತಿಳಿಸುತ್ತವೆ. 100 ಘನಗಾತ್ರ ಸಾಂದ್ರತೆಯ ದ್ರವವೆಂದರೆ ಒಂದು ಘನ ಅಳತೆಯ ದ್ರವದಿಂದ ಅದರ ನೂರುಪಟ್ಟು ಆಕ್ಸಿಜನ್ ಪಡೆಯಬಹುದೆಂದು ಅರ್ಥ. ಈ ದ್ರವವನ್ನು ತಂಪಾದ ಸ್ಥಳದಲ್ಲಿ ಬೆಳಕು ತಾಕದಂತೆ ಇಡಬೇಕು. ಆಮ್ಲಗಳನ್ನು ಬೆರೆಸುವುದರಿಂದ ದ್ರವ ಕೆಟ್ಟು ಆಕ್ಸಿಜನ್ ಹೊರಟುಹೋಗುವುದನ್ನು ತಡೆಗಟ್ಟಬಹುದು. ಪೆರಾಕ್ಸೈಡಿನಿಂದ ನಡೆಸುವ ಚಲುವೆ ಕ್ರಿಯೆ ಹೆಚ್ಚು ಉಷ್ಣತೆಯಲ್ಲಿ ಸರಿಯಾಗಿ ಆಗುತ್ತದೆ. ಉಷ್ಣತೆ 800-850 C ಇರಬೇಕು. ಇದಕ್ಕಿಂತ ಕಡಿಮೆಯಿದ್ದರೆ ವರ್ತನೆ ನಿಧಾನವಾಗುತ್ತದೆ. ಹೆಚ್ಚಿದ್ದರೆ ಆಕ್ಸಿಜನ್ ಬೇಗ ಹೊರಟುಹೋಗುತ್ತದೆ. ಸೋಡಿಯಮ್ ಸಿಲಿಕೇಟ್ ಕ್ಷಾರಸ್ಥಿತಿಯಲ್ಲೂ ಪೆರಾಕ್ಸೈಡ್ ವಿಭಜಿಸುವುದನ್ನು ನಿಧಾನಗೊಳಿಸುತ್ತದೆ. ಪೆರಾಕ್ಸೈಡ್ ಕೆಲವು ಲೋಹಗಳಿಗೆ, ತಾಮ್ರ ಅಥವಾ ಅದರ ಸಂಯುಕ್ತಗಳಿಗೆ ಸುಲಭವಾಗಿ ಪ್ರತಿಕ್ರಿಯೆ ತೋರಿಸುತ್ತದೆ. ಆದರೆ ಸಿಲಿಕೇಟ್ ಇದ್ದರೆ ಕಬ್ಬಿಣ, ಸೀಸ ಅಥವಾ ಅಲ್ಯೂಮಿನಿಯಮ್ ಪಾತ್ರೆಗಳನ್ನು ಪೆರಾಕ್ಸೈಡ್ ಚಲುವೆ ಕ್ರಿಯೆಗೆ ಉಪಯೋಗಿಸಬಹುದು. ಉತ್ತಮ ಪರಿಣಾಮಕಾರಿಯಾದ ಒಂದು ಮಿಶ್ರಣದಲ್ಲಿ 0.5%-1% ಪೆರಾಕ್ಸೈಡ್ ದ್ರವವನ್ನು ಸಿಲಿಕೇಟ್ ಮತ್ತು ಸೋಡಿಯಮ್ ಹೈಡ್ರಾಕ್ಸೈಡ್ ಕ್ಷಾರದ (NaOH) ಜೊತೆಗೆ ಬೆರೆಸಿ 850 C ಉಷ್ಣತೆಯಲ್ಲಿ ಉಪಯೋಗಿಸಲಾಗುತ್ತದೆ. ಚಲುವೆ ಮಾಡಿದ ಮೇಲೆ ನೂಲನ್ನು ಚೆನ್ನಾಗಿ ತೊಳೆದರೆ ಅದರ ಸಾಮರ್ಥ್ಯಕ್ಕೆ ಯಾವ ಕುಂದೂ ಬರುವುದಿಲ್ಲ.
ಕೆಲವು ವಿಧಾನಗಳಲ್ಲಿ ನೂಲನ್ನು ನೆನೆಸಿ ಚಲುವೆ ಮಾಡುವುದು ತಡೆಯಿಲ್ಲದೆ ನಡೆಯುತ್ತದೆ. ಒಟ್ಟು ಎರಡು ಗಂಟೆಗಳಲ್ಲಿ ಕಂದು ಬಣ್ಣದ ಬಟ್ಟೆ ಸಂಪೂರ್ಣವಾಗಿ ಬಿಳಿಚಿಕೊಳ್ಳುವಂತೆ ಮಾಡಬಹುದು. ಮೊದಲು 3% ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ನೂಲನ್ನು ಅದ್ದಿ, ಹಿಂಡಿ, ಅನಂತರ 1000 C ಉಷ್ಣತೆಯಲ್ಲಿ ಹಬೆಯಿಂದ ಸ್ವಲ್ಪ ಹೊತ್ತು ಕಾಯಿಸಲಾಗುವುದು. ಈಗ ನೂಲನ್ನು 0.5 ಘನಗಾತ್ರ ಪೆರಾಕ್ಸೈಡ್ ದ್ರವದಲ್ಲಿ ಅದ್ದಿ ಪುನಃ 1000 C ಉಷ್ಣತೆಗೆ ಒಂದು ಗಂಟೆ ಹೊತ್ತು ಹಾಗೆಯೇ ಬಿಡಲಾಗುವುದು. ಅನಂತರ ತೊಳೆದು ಒಣಗಿಸುವರು.
ಉಣ್ಣೆ ನೂಲು
[ಬದಲಾಯಿಸಿ]ಹತ್ತಿ ನೂಲಿಗಿಂತ ಉಣ್ಣೆ ನೂಲಿಗೆ ಬೇಕಾಗುವ ಚಲುವೆ ಕ್ರಿಯೆ ಬಹಳ ಕಡಿಮೆಯಾದದ್ದು. ಹೈಪೊಕ್ಲೋರೈಟ್ ಉಪಯೋಗಿಸಿದರೆ ನೂಲು ಹಳದಿಯಾದಗುವುದಲ್ಲದೆ ಕೆಟ್ಟು ಹೋಗುವುದು ಕೂಡ. ಉಣ್ಣೆ ನೂಲಿನ ಬಣ್ಣವನ್ನು ಎರಡು ವಿಧಾನಗಳಿಂದ ತೆಗೆಯಲಾಗುವುದು: ಸಲ್ಫರ್ ಡೈಆಕ್ಸೈಡ್[೧೦] ಅಥವಾ ಪೆರಾಕ್ಸೈಡುಗಳಿಂದ ಸಂಸ್ಕರಿಸುವುದು. ಸಲ್ಫರ್ ಡೈಆಕ್ಸೈಡಿನಿಂದ ಸಂಸ್ಕರಿಸುವ ಕ್ರಿಯೆಗೆ ಸ್ಟೋವಿಂಗ್ ಎಂದು ಹೆಸರು. ಇದರಲ್ಲಿ ತೇವವಿರುವ ಮಾಲನ್ನು ಮರದ ಗೂಟಗಳ ಮೇಲೆ ಹರಡಲಾಗುವುದು. ಗೂಟಗಳನ್ನು ಸಲ್ಫ್ಯೂರಿಕ್ ಆಮ್ಲ ತುಂಬಿದ ಕೋಣೆಯಲ್ಲಿ ಇರಿಸಿರುತ್ತದೆ. ಕೋಣೆಯ ನೆಲದ ಮೇಲೆ ಸಲ್ಫರನ್ನು ಉರಿಸಿ ಅನಿಲವನ್ನು ಉತ್ಪತ್ತಿ ಮಾಡಲಾಗುತ್ತದೆ. ಕೋಣೆಯ ಬಾಗಿಲನ್ನು 12 ಗಂಟೆಗಳ ಕಾಲ ಮುಚ್ಚಿರಲಾಗುತ್ತದೆ. ನೂಲಿನಲ್ಲಿರುವ ತೇವ ಹೆಚ್ಚಾಗಕೂಡದು. ತೂಗುಹಾಕಿದ ನೂಲಿನ ತಳಭಾಗದಲ್ಲಿ ತೇವ ಹೆಚ್ಚಾಗಬಾರದು. ಹಾಗಾದರೆ ಅದು ಬಿಳಿಚುಕೊಳ್ಳುವುದು ಒಂದೇ ಸಮವಾಗಿರುವುದಿಲ್ಲ. ಮೊದಲು ಹೊಳಪಿನ ಬಿಳಿ ಬಣ್ಣ ಕಂಡರೂ ಅದು ಬೇಗ ಹಳದಿಗೆ ತಿರುಗುತ್ತದೆ. ಪೆರಾಕ್ಸೈಡನ್ನು ಉಪಯೋಗಿಸಿದರೆ ಅಷ್ಟು ಬಿಳುಪು ಬರುವುದಿಲ್ಲ. ಆದರೆ ಹೆಚ್ಚು ಕಾಲ ನಿಲ್ಲುತ್ತದೆ. ಮೊದಲು ತಿಳಿ ಕೆಂಪು ಮಿಶ್ರಿತ ಬಿಳಿಬಣ್ಣ ಬರುತ್ತದೆ. ಅನಂತರ ಸಲ್ಫ್ಯೂರಿಕ್ ಆಮ್ಲ ಅಥವಾ ಬೈಸಲ್ಫೇಟ್ ದ್ರಾವಣದಲ್ಲಿ ಸಂಸ್ಕರಿಸಿದರೆ ಬಣ್ಣ ಇನ್ನೂ ಉತ್ತಮವಾಗುತ್ತದೆ. ಪೆರಾಕ್ಸೈಡ್ ಚಲುವೆ ಕ್ರಮವನ್ನು ಯಾವಾಗಲೂ ಕ್ಷಾರಸ್ಥಿತಿಯಲ್ಲಿ ಮಾಡಲಾಗುವುದು. ಪೆರಾಕ್ಸೈಡ್ ದ್ರಾವಣವನ್ನು ಸೋಡಿಯಮ್ ಸಿಲಿಕೇಟ್ ಉಪಯೋಗಿಸಿ ಕ್ಷಾರತ್ವ 7.2-9ರ ವರೆಗೆ ಬರುವಂತೆ ಮಾಡಿ 1-2 ಘನಗಾತ್ರ ಆಕ್ಸಿಜನ್ ಬರುವ ಪ್ರಮಾಣದಲ್ಲಿ ಉಪಯೋಗಿಸಲಾಗುವುದು. 500 C ಉಷ್ಣತೆಯಲ್ಲಿ ಸಂಸ್ಕರಿಸಿ ಒಂದು ರಾತ್ರಿ ಹಾಗೇ ಬಿಡುತ್ತಾರೆ. ಹೆಚ್ಚು ಸಾಮರ್ಥ್ಯದ ಪೆರಾಕ್ಸೈಡನ್ನು ಉಪಯೋಗಿಸಿದರೆ (4 ಘನ ಗಾತ್ರಕ್ಕಿಂತ ಹೆಚ್ಚು) ಉಣ್ಣೆ ನೂಲು ಜೆಲಟಿನಿನಂತೆ ಅಂಟಂಟಾಗಿ ಕೆಡುತ್ತದೆ. ಉಷ್ಣತೆ 500 C ಗಿಂತ ಹೆಚ್ಚಾದರೆ ನೂಲು ಸಂಪೂರ್ಣವಾಗಿ ಕೆಟ್ಟು ಹೋಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Steven, A. B. (1947). Textile Bleaching. London: Isaac Pitman and Sons. p. 16.
- ↑ Barker, Aldred Farrer; Gardner, Walter Myers; Snow, R.; Cook, William H.; Bradbury, Fred (1910). Textiles. D. Van Nostrand Company. pp. 74–75. OL 24196864M.
- ↑ Vogt, H.; Balej, J; Bennett, J. E.; Wintzer, P.; Sheikh, S. A.; Gallone, P.; Vasudevan, S.; Pelin, K. (2010). "Chlorine Oxides and Chlorine Oxygen Acids". Ullmann's Encyclopedia of Industrial Chemistry. Wiley-VCH. doi:10.1002/14356007.a06_483.pub2. ISBN 978-3527306732. S2CID 96905077.
- ↑ "OxyChem Sodium Hypochlorite Handbook" (PDF). OxyChem. Archived from the original (PDF) on 18 April 2018. Retrieved 6 February 2015.
- ↑ "Pamphlet 96, The Sodium Hypochorite Manual". The Chlorine Institute.
- ↑ May, Paul. "Sodium Hypochlorite (Bleach)". University of Bristol. Archived from the original on 13 December 2016. Retrieved 13 December 2016.
- ↑ "Sodium hypochlorite as a disinfectant". Lenntech.com. Retrieved 2011-08-07.
- ↑ "How Products Are Made Volume 2". May 2011.
- ↑ Hage R, Lienke A (December 2005). "Applications of transition-metal catalysts to textile and wood-pulp bleaching". Angewandte Chemie. 45 (2): 206–222. doi:10.1002/anie.200500525. PMID 16342123. Archived from the original on 25 January 2022. Retrieved 14 February 2022.
- ↑ Phillips, H. (2008). "The Bleaching of Wool with Sulphur Dioxide and with Solutions of Sulphites". Journal of the Society of Dyers and Colorists. 54 (11): 503–512. doi:10.1111/j.1478-4408.1938.tb01992.x.