ವಿಷಯಕ್ಕೆ ಹೋಗು

ಚರ್ಮರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಮರೋಗ ಎಂದರೆ ಚರ್ಮ ವ್ಯವಸ್ಥೆಯನ್ನು (ದೇಹವನ್ನು ಆವರಿಸುವ ಅಂಗವ್ಯವಸ್ಥೆ. ಇದು ಚರ್ಮ, ಉಗುರುಗಳು, ಮತ್ತು ಸಂಬಂಧಿತ ಸ್ನಾಯುಗಳು ಹಾಗೂ ಗ್ರಂಥಿಗಳನ್ನು ಒಳಗೊಳ್ಳುತ್ತದೆ) ಬಾಧಿಸುವ ಯಾವುದೇ ರೋಗ.[]

ಚರ್ಮರೋಗಗಳ ವಿಭಜನೆ

[ಬದಲಾಯಿಸಿ]

ಆಯುರ್ವೇದದಲ್ಲಿ ಚರ್ಮರೋಗಗಳನ್ನು ಮಹಾಕುಷ್ಠ ಮತ್ತು ಕ್ಷುದ್ರಕುಷ್ಠಗಳೆಂದು ವಿಭಜಿಸಿದ್ದಾರೆ.[] ಆಧುನಿಕ ವೈದ್ಯದಲ್ಲಿ (ಅಲೋಪತಿ) ಚರ್ಮರೋಗಗಳನ್ನು ರೋಗಮೂಲ ಮತ್ತು ಇತರ ಪ್ರಮುಖ ಲಕ್ಷಣಗಳನ್ನು ಅವಲಂಬಿಸಿ ವಿವಿಧವಾಗಿ ವಿಭಜನೆ ಮಾಡಲಾಗಿದೆ.

1. ಆಜನ್ಮರೋಗಗಳು: ಇವುಗಳಲ್ಲಿ ಮುಖ್ಯವಾಗಿ ಮೀನ್ದೊಗಲು (ಇಕ್ತಿಯೋಸಿಸ್), ಪಾಂಡುರೋಗ ಅಥವಾ ತೊನ್ನು (ವಿಟಿಲಿಗೊ, ಲ್ಯೂಕೊಡರ್ಮ), ಎಪಿಡರ್ಮೋಲೈಸಿಸ್ ಬುಲ್ಲೋಸ, ಡಾರಿಯರಿನ ರೋಗ, ಸ್ಕ್ಲೀರೋಡರ್ಮ ಪಿಗ್ಮೆಂಟೋಸ ಮತ್ತು ಇತರ ಬಣ್ಣ ವ್ಯತ್ಯಾಸಗಳನ್ನು ತೋರುವ ರೋಗಗಳು - ಇವನ್ನು ಉದಾಹರಿಸಬಹುದು. ಈ ರೋಗಗಳು ಆನುವಂಶಿಕವಾಗಿ (hereditary) ಬರುತ್ತವೆ. ಮೈಯೆಲ್ಲ ಹರಡಿ ವಿಕಾರಗೊಳಿಸಬಹುದು. ಕೆಲವು ಸಂದರ್ಭಗಳಲ್ಲಿ ಇವು ಮಾರಕ ರೋಗಗಳಾಗಿಯೂ ಇರುತ್ತವೆ.

2. ವಿಷಾಣುಕೃತ ರೋಗಗಳು (ವೈರಲ್ ಡಿಸೀಸಸ್): ಇವುಗಳಲ್ಲಿ ಸಿಡುಬು (ಸ್ಮಾಲ್‌ಪಾಕ್ಸ್), ಸೀತಾಳೆಸಿಡುಬು (ಚಿಕನ್‌ಪಾಕ್ಸ್) ಮತ್ತು ದಡಾರಗಳು ಸೇರಿವೆ. ಹರ್ಪಿಸ್ ಸಿಂಪ್ಲೆಕ್ಸ್, ಹರ್ಪಿಸ್ ಜ಼ಾಸ್ಟರ್, ಮೊಲಸ್ಕಮ್ ಕನ್‌ಟೇಜಿಯೋಸಮ್, ಕಾಲುಬಾಯಿರೋಗ (ಫುಟ್ ಅಂಡ್ ಮೌತ್ ಡಿಸೀಸ್), ಹುಲ್ಲುರಿ (ವಾರ್ಟ್), ಬೆಕ್ಕು ಕೆರೆತದ ರೋಗ ಇವು ಇನ್ನಿತರ ಮುಖ್ಯ ರೋಗಗಳು. ಅಲ್ಪವಾಗಿ ಇಲ್ಲವೆ ಅಧಿಕವಾಗಿ ದೇಹಬಾಧೆಯನ್ನು ಉಂಟುಮಾಡುತ್ತವೆ. ಒಂದು ಸಲ ರೋಗದಿಂದ ಚೇತರಿಸಿಕೊಂಡರೆ ಸಾಮಾನ್ಯವಾಗಿ ಪುನಃ ರೋಗ ಅಂಟುವುದಿಲ್ಲ.

3. ಏಕಾಣುಕೃತ ರೋಗಗಳು (ಬ್ಯಾಕ್ಟೀರಿಯಲ್ ಡಿಸೀಸಸ್): ಉರಿಯೂತ, ಬಾವುಗಳಿಂದ ಉಲ್ಬಣಗೊಂಡು ಕಾಣಿಸಿಕೊಳ್ಳುವ ರೋಗಗಳಿವು. ಸಾಮಾನ್ಯವಾದ ಕೀವುಕುರುಗಳು ರಕ್ತಕುರುಗಳು ಇಂಥವು. ಕ್ಷಯರೋಗ, ಕುಷ್ಠರೋಗ, ಸಿಫಿಲಿಸ್ ಮತ್ತು ಡಿಫ್ತೀರಿಯಾ ರೋಗ ಕ್ರಿಮಿಗಳು ಅನೇಕ ರೀತಿಯ ಕುರು ಮತ್ತು ಹುಣ್ಣುಗಳನ್ನು ಉಂಟುಮಾಡುತ್ತವೆ.

4. ಅಣಬೆ ಬೂಷ್ಟುಕೃತ ರೋಗಗಳು (ಫಂಗಲ್ ಡಿಸೀಸಸ್): ಮಧುರಾ ಪಾದ (ಮದುರಾ ಫುಟ್[][]) ಎಂಬುದು ಇವುಗಳಲ್ಲಿ ಮುಖ್ಯ. ಅಂಗಾಲು ದಪ್ಪವಾಗಿ ಗುಳ್ಳೆಗಳಾಗಿ, ಗುಳ್ಳೆಗಳು ಒಡೆದು ಕಂಡಿಬಿದ್ದು ವಿಕಾರವಾಗುವುದು ಇದರ ಲಕ್ಷಣ. ಹುಳುಕಡ್ಡಿಯೂ (ರಿಂಗ್‌ವರ್ಮ್) ಒಂದು ತರಹದ ಬೂಷ್ಟಿನಿಂದ ಉಂಟಾಗುವ ರೋಗವೇ.

5. ಪರಾವಲಂಬೀಕೃತ ರೋಗಗಳು (ಪ್ಯಾರಾಸೈಟಿಕ್ ಡಿಸೀಸಸ್): ತುರಿ (ಸ್ಕೇಬೀಸ್), ಕಜ್ಜಿ (ಇಂಪೆಟಿಗೊ), ಇಸಬು (ಎಕ್ಸಿಮಾ), ಸೋರಿಯಾಸಿಸ್ ಇತ್ಯಾದಿ.

ಇವಲ್ಲದೆ ಜಿಡ್ಡುಗ್ರಂಥಿಗಳ ಊತದಿಂದ ಉಂಟಾಗುವ ಮೊಡವೆ, ಏಡಿಗಂತಿ ಮತ್ತಿತರ ಗೆಡ್ಡೆಗಳು, ಮಚ್ಚೆಗಳು (ಮೋಲ್ಸ್), ನೀಲಿಗಟ್ಟುವಿಕೆ (ಪರ್ಪುರ), ನೀರ್ಗುಳ್ಳೆ ರೋಗಗಳು (ಪೆಂಫಿಗಸ್), ರೋಮ ರೋಗಗಳು, ಉಗುರು ರೋಗಗಳು, ಜೀವಸತ್ತ್ವ ಕೊರತೆಯಿಂದ ಉಂಟಾಗುವ ಚರ್ಮ ವ್ಯತ್ಯಾಸಗಳು ಇತ್ಯಾದಿ ಚರ್ಮರೋಗಗಳೂ ಉಂಟು. ಅವ್ಯಕ್ತ ಕಾರಣದಿಂದ ಚರ್ಮ ಶೈಥಿಲ್ಯಗೊಂಡೂ ಚರ್ಮರೋಗ ಉಂಟಾಗಬಹುದು. ಕ್ರಮಾಗತ ಅಧ್ಯಯನ ಮತ್ತು ಅನುಭವದಿಂದ ಚರ್ಮರೋಗಪ್ರವೀಣ ಸರಿಯಾಗಿ ರೋಗನಿರ್ಣಯ ಮಾಡಿ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದಲ್ಲದೆ ಪ್ರತಿಬಂಧಕ ಕ್ರಮಗಳನ್ನೂ ಸಮಯೋಚಿತವಾಗಿ ಉಪಯೋಗಿಸಬಹುದು.

ಕೆಲವು ಚರ್ಮರೋಗಗಳು

[ಬದಲಾಯಿಸಿ]

ಕೆಲವು ಚರ್ಮರೋಗಗಳ ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ.

ಮೀನ್ದೊಗಲು

[ಬದಲಾಯಿಸಿ]

ಹೊರತ್ವಚದ ಕೊಂಬಿನಂಥ ಪದರ ಅತಿಯಾಗಿ ಶುಷ್ಕ, ಒರಟು ಹಾಗು ಕಾಂತಿಹೀನವಾದ ಬೂದು ಬಣ್ಣದ್ದಾಗಿ, ಅಲ್ಲಲ್ಲಿ ಸೀಳಿ, ಪೊರೆಗಳು ನಿರಂತರವಾಗಿ ಹುರುಪೇಳುತ್ತಿರುವ ಚರ್ಮರೋಗ.[] ಮುಂಡ ಮತ್ತು ಕೈಕಾಲುಗಳ ಹಿಂಭಾಗದ ಚರ್ಮವು ರೋಗದಿಂದ ಅವೃತವಾಗವುದೇ ಹೆಚ್ಚು. ರೋಗ ತಗುಲಿದ ಚರ್ಮ ಮೀನಿನ ಚರ್ಮದಂತೆ ಕಾಣುವುದರಿಂದ ಈ ಹೆಸರು ಬಂದಿದೆ.[] ರೋಗಗೊಂಡ ಚರ್ಮದಲ್ಲಿ ಸ್ವೇದ ಗ್ರಂಥಿಗಳಾಗಲಿ, ಜಿಡ್ಡುಗ್ರಂಥಿಗಳಾಗಲೀ ಇರುವುದಿಲ್ಲ. ರೋಗದ ಕಾರಣ ಗೊತ್ತಿಲ್ಲ. ಇದು ಆನುವಂಶಿಕವಾಗಿ ಬರುವುದೆಂದು ಮಾತ್ರ ಗೊತ್ತಿದೆ. ಆದ್ದರಿಂದ ಬಹುಶಃ ಜೀನುಗಳು ಕಾರಣವಿರಬಹುದು. ಹುಟ್ಟಿದ ಮೇಲೆ ಸ್ವಲ್ಪ ಕಾಲದಲ್ಲಿ ರೋಗ ಸಾಮಾನ್ಯವಾಗಿ ಕಂಡುಬರುವುದಾದರೂ ಹುಟ್ಟುವಾಗಲೇ ರೋಗವಿದ್ದು ಹುಟ್ಟುವುದೂ, ವಯಸ್ಸಾದ ಮೇಲೆ ರೋಗ ಹೊಮ್ಮುವುದೂ ಉಂಟು. ರೋಗ ತೀವ್ರವಾಗಿದ್ದಲ್ಲಿ ಮಗು ಸತ್ತು ಜನಿಸುತ್ತದೆ. ಇಲ್ಲವೆ ಚಕ್ಕಳದಂಥ ಚಕ್ಕೆಗಳು ಚರ್ಮದಲ್ಲಿ ಕಂಡುಬಂದು ಅವುಗಳಲ್ಲಿ ಬಿರುಕು ಉಂಟಾಗಿರುತ್ತದೆ. ಇಂಥ ಮಕ್ಕಳ ತುಟಿ, ಕಣ್ಣು, ರೆಪ್ಪೆಗಳು ಹೀಗಾಗಿರುವುದು ಸಾಮಾನ್ಯ. ಕೆಲವೇ ದಿವಸಗಳಲ್ಲಿ ಮಗು ಸತ್ತು ಹೋಗುತ್ತದೆ. ಆದರೆ ಸಾಧಾರಣವಾಗಿ ರೋಗ ಸೌಮ್ಯವಾಗಿರುವುದು. ಕಡಿತ ಬಿರುಕುಗಳಿಂದಾಗುವ ಬಾಧೆ ಚಳಿಗಾಲದಲ್ಲಿ ಹೆಚ್ಚು. ದೇಹದ ಇತರ ಆರೋಗ್ಯ ಸ್ಥಿತಿಗೆ ಕುಂದಿರುವುದಿಲ್ಲ. ಚರ್ಮವನ್ನು ಮೆತುಗೊಳಿಸುವ ಲೇಪನಗಳನ್ನು ಬಿಟ್ಟರೆ ಇದಕ್ಕೆ ಬೇರೆ ಮದ್ದೇ ಇಲ್ಲ. ಇದಕ್ಕೆ ಒಣ ದೊಗಲು (ಸೀರೊಡರ್ಮ), ಮೊಸಳೆ ಚರ್ಮ ಎಂದೂ ಹೆಸರಿದೆ.

ತೊನ್ನು

[ಬದಲಾಯಿಸಿ]

ಇದು ಆನುವಂಶಿಕವಾದ ಇನ್ನೊಂದು ಚರ್ಮರೋಗ. ಹುಟ್ಟುವಾಗ ಕಾಣಬರದಿದ್ದರೂ ಆಮೇಲೆ ಯಾವಾಗಲಾದರೂ ವ್ಯಕ್ತವಾಗಿ ಚರ್ಮ ಬಣ್ಣವನ್ನು ಕಳೆದುಕೊಂಡು ಮೈಯೆಲ್ಲ ಅಲ್ಲಲ್ಲಿ ಬೆಳ್ಳಗಾಗಿ ವಿಕಾರ ಕಲೆಗಳು ಉಂಟಾಗುತ್ತವೆ.[] ಮುಖ ಕೈಗಳಲ್ಲಿ ಮೊದಲು ಪ್ರಾರಂಭವಾಗಬಹುದು.[][] ಚರ್ಮದಲ್ಲಿ ಮೆಲನಿನ್ ಎಂಬ ಬಣ್ಣದ ಕಣಗಳು ತಯಾರಾಗದಿರುವುದೇ ತೊನ್ನಿಗೆ ಕಾರಣ. ತೊನ್ನು ಅಂಟುರೋಗವಲ್ಲ. ಸೊರೇಲಿನ್ ಎಂಬ ಮಾತ್ರೆಗಳನ್ನು ಸೇವಿಸುವುದರಿಂದಾಗಲಿ, ಸೊರೇಲಿನ್ ಮುಲಾಮನ್ನು ಲೇಪಿಸಿ ಅತಿನೇರಿಳೆ ಕಿರಣಗಳಿಗೆ ಒಡ್ಡುವುದರಿಂದಾಗಲಿ ಬಿಳಿಯ ಕಲೆಗಳಲ್ಲಿ ಬಣ್ಣ ಹುಟ್ಟುವಂತೆ ಮಾಡಬಹುದು.[೧೦]

ಮಚ್ಚೆ (ಮೋಲ್)

[ಬದಲಾಯಿಸಿ]

ಚರ್ಮದ ಬೆಳೆವಣಿಗೆಯ ನ್ಯೂನತೆಯಿಂದ ಉಂಟಾಗುವ ರೋಗ. ಹುಟ್ಟಿದಾಗ, ಬಾಲ್ಯದಲ್ಲಿ ಅಥವಾ ದೊಡ್ಡವರಾದ ಮೇಲೆ ಯಾವಾಗಲಾದರೂ ಹೊರದೋರಬಹುದು. ಮಚ್ಚೆಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಮೇಲ್ಪೊರೆಯ ಮಚ್ಚೆಗಳು, ರಕ್ತನಾಳದ ಮಚ್ಚೆಗಳು, ವರ್ಣಕದ ಮಚ್ಚೆಗಳು.

  • ಮೇಲ್ಪೊರೆಯ ಮಚ್ಚೆಗಳು ಹೊರತ್ವಚದಿಂದ ಅಥವಾ ಹೊರತ್ವಚದ ಕೂಡಿಕೆಗಳಿಂದ ಬೆಳೆಯಬಹುದು. ಚರ್ಮವರ್ಣದ ಮಿಟ್ಟಿದದ್ದೆ ಮತ್ತು ಬಿಲ್ಲೆಗಳಾಗಿ ಕಾಣಿಸುವುವು. ಇವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುತ್ತದೆ.
  • ರಕ್ತನಾಳದ ಮಚ್ಚೆಗಳಲ್ಲಿ ಎರಡು ವಿಧ: ಒಂದು ಕಗ್ಗೆಂಪು ಮಚ್ಚೆ, ಇನ್ನೊಂದು ನೆಲಮುಳ್ಳಿ ಮಚ್ಚೆಗಳು. ಕಗ್ಗೆಂಪು ಮಚ್ಚೆಗಳು ಚಪ್ಪಟೆಯಾಗಿರುತ್ತವೆ. ಇವು ಹೆಚ್ಚಾಗಿ ಮುಖ ಮತ್ತು ಎದೆಯ ಮೇಲಿರುವುವು. ಇವುಗಳ ಚಿಕಿತ್ಸೆ ಅನಾವಶ್ಯಕ. ನೆಲಮುಳ್ಳಿ ಮಚ್ಚೆಗಳು ಉಬ್ಬಿರುತ್ತವೆ. ಹುಟ್ಟುವಾಗಲೇ ಇಲ್ಲವೆ ಹುಟ್ಟಿದ ಕೆಲವು ತಿಂಗಳುಗಳಲ್ಲೇ ಇವು ಗೋಚರಿಸಬಹುದು. ಇವು ನೇರಿಳೆ ಬಣ್ಣಕ್ಕಿವೆ. ಹೆಚ್ಚಾಗಿ ಮುಖ ಮತ್ತು ಕತ್ತಿನ ಮೇಲೆ ಕಾಣಿಸುವುವು. 6-10ರ ವಯಸ್ಸಿನಲ್ಲಿ ಈ ಮಚ್ಚೆಗಳು ತಾವಾಗಿಯೇ ಅದೃಶ್ಯವಾಗುತ್ತವೆ. ಇಳಿ ಬಣ್ಣದ ಮಚ್ಚೆಗಳು ಹುಟ್ಟುವಾಗಲೇ ಅಥವಾ ಹುಟ್ಟಿದ ಕೆಲವು ದಿವಸಗಳಲ್ಲೇ ಕಾಣಬಹುದು. ಇವನ್ನು ತೊನ್ನೆಂದು ತಪ್ಪು ತಿಳಿಯುತ್ತಾರೆ. ಇವಕ್ಕೆ ಚಿಕಿತ್ಸೆ ಅನಗತ್ಯ.
  • ವರ್ಣಕದ ಮಚ್ಚೆಗಳು ಚಪ್ಪಟೆಯಾಗಿರಬಹುದು. ತೊಟ್ಟಿಲ್ಲದಿರಬಹುದು, ತೊಟ್ಟುಗಾಲಿಕೆಯಾಗಿರಬಹುದು, ದೇಹದ ಯಾವ ಭಾಗದಲ್ಲಿಯಾದರೂ ಕಾಣಿಸಬಹುದು. ಸಾಮಾನ್ಯವಾಗಿ ಇವು ಕಪ್ಪಗಿರುತ್ತವೆ. ಬಹುಮಂದಿಗೆ ಒಂದು ಅಥವಾ ಕೆಲವು ವರ್ಣಕದ ಮಚ್ಚೆಗಳಿರುತ್ತವೆ. ಇವು ನಿರುಪದ್ರವಿಯಾಗಿದ್ದು ಇವಕ್ಕೆ ಯಾವ ಚಿಕಿತ್ಸೆಯೂ ಬೇಕಾಗುವುದಿಲ್ಲ. ಆದರೆ ಕೆಲವು ವಿಷಮ ಪರಿವರ್ತನೆ ಹೊಂದಿದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗುವುದು. ಇದ್ದಕ್ಕಿದ್ದ ಹಾಗೆ ದೊಡ್ಡದಾಗುವುದು, ಬಣ್ಣದಲ್ಲಿ ಬದಲಾವಣೆ, ನೋವು, ರಕ್ತ ಸುರಿಯುವುದು, ಒಡೆದು ಹುಣ್ಣಾಗುವುದು ಇವು ವಿಷಮ ಪರಿವರ್ತನೆಯನ್ನು ಸೂಚಿಸುತ್ತವೆ.

ಸರ್ಪಸುತ್ತು

[ಬದಲಾಯಿಸಿ]

ಸರ್ಪಸುತ್ತು ಮತ್ತು ಸೀತಾಳೆಸಿಡುಬು (ಚಿಕನ್‌ಪಾಕ್ಸ್) ಒಂದೇ ವಿಷಕಣದಿಂದ ಉಂಟಾಗುತ್ತವೆ. ಪ್ರಥಮ ವಿಷಕಣ ಸೋಂಕಿನಿಂದ ಸೀತಾಳೆಸಿಡುಬು ಉಂಟಾಗುತ್ತದೆ. ಆ ತರುವಾಯ ವಿಷಕಣಗಳು ನರಗಂಟುಗಳಲ್ಲಿ (ನರ್ವ್ ಗ್ಯಾಂಗ್ಲಿಯ) ಚೇತನರಹಿತವಾಗಿರುತ್ತವೆ.[೧೧] ದುರ್ಬಲತೆ, ಏಡಿಗಂತಿ, ಎಕ್ಸ್‌ಕಿರಣ ಚಿಕಿತ್ಸೆ, ಕಾರ್ಟಿಕೋಸ್ಟೀರಾಯ್ಡ್ ಚಿಕಿತ್ಸೆ ಮತ್ತು ಪ್ರತಿರಕ್ಷೆಯಿಂದ ಹತ್ತಿಕ್ಕುವ (ಇಮ್ಯುನೋ ಸಪ್ರೆಸ್ಸಿವ್) ಔಷಧ ಚಿಕಿತ್ಸೆಗಳಿಂದ ಎದುರುಬಲ ಕಡಿಮೆಯಾದಾಗ ವಿಷಕಣಗಳು ಚೇತನಗೊಳ್ಳುತ್ತವೆ. ಕೆಂಪು ನೀರ್ಗುಳ್ಳೆಗಳ ಗುಂಪುಗಳು ನರಗಳುದ್ದಕ್ಕೂ ಕಂಡು ಬರುತ್ತವೆ. ರೋಗಿ ನರದುರಿಯ ಬೇನೆಯಿಂದ ನರಳುತ್ತಾನೆ.[೧೨] ಕೆರಟೈಟಿಸ್ ಬೇನೆ ವಿಕಸಿಸಬಹುದು.[೧೩] ಈ ನೀರ್ಗುಳ್ಳೆಗಳು 2-4 ವಾರಗಳಲ್ಲಿ ಒಣಗಿ ಹೋಗುತ್ತವೆ. ವೃದ್ಧರಲ್ಲಿ ತದ್ದುಬಳಿಕದ ನರದುರಿ ಬಹು ಕಾಲವಿರುತ್ತದೆ.

ಹುಲ್ಲುರಿ (ವಾರ್ಟ್)

[ಬದಲಾಯಿಸಿ]

ಇದು ಮಕ್ಕಳಲ್ಲಿ ಹೆಚ್ಚು, ಪ್ರಾಯದವರಲ್ಲೂ ಇರುವುದುಂಟು. ಚರ್ಮಸಂಪರ್ಕದಿಂದ ವಿಷಕಣಗಳು ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಈ ರೋಗದಲ್ಲಿ ಚಪ್ಪಟೆಯಾದ ನವಿರೆಳೆಯ, ಕಾರಳ್ಳಾದ (ವಾರ್ಟಿ) ಮಿಟ್ಟಿದದ್ದುಗಳು ಏಳುತ್ತವೆ. ಇವು ಚರ್ಮದ ಎಲ್ಲ ಭಾಗಗಳಲ್ಲಿಯೂ ಬೆಳೆಯಬಹುದು. ಅಂಗಾಲುಗಳ ವಿನಾ ಇತರ ಭಾಗಗಳಲ್ಲಿ ಹುಲ್ಲುರಿಯಿಂದ ಯಾವ ತೊಂದರೆಯೂ ಆಗುವುದಿಲ್ಲ. ಸಾಮಾನ್ಯವಾಗಿ ಇವು ತಾವಾಗಿಯೇ ಅದೃಶ್ಯವಾಗುತ್ತವೆ. ಚಿಕಿತ್ಸೆಯೂ ಉಂಟು.[೧೪]

ಮೆಲುಗಂತಿ (ಮೊಲ್ಲಸ್ಕಮ್ ಕಂಟೇಜಿಯೋಸಮ್)

[ಬದಲಾಯಿಸಿ]

ಇದು ವಿಶೇಷವಾಗಿ ಮಕ್ಕಳಲ್ಲಿ ಕಾಣುತ್ತದೆ.[೧೫] ಚರ್ಮಸಂಪರ್ಕದಿಂದ ಇದರ ವಿಷಕಣಗಳು ಒಬ್ಬರಿಂದೊಬ್ಬರಿಗೆ ಹರಡುತ್ತವೆ.[೧೬] ಅರೆಗುಂಡಾಕಾರದ ಗುಳಿಬಿದ್ದ ಮುಸುಕು ಮಿಟ್ಟಿದದ್ದೆಗಳು ಮೆಲುಗಂತಿಯ ಲಕ್ಷಣಗಳು. ಇವು ತಾವಾಗಿಯೇ ಅದೃಶ್ಯವಾಗಬಹುದು.

ಕಜ್ಜಿ (ಇಂಪೆಟಿಗೊ)

[ಬದಲಾಯಿಸಿ]

ಸ್ಟ್ಯಾಫಿಲೋಕಾಕೈ ಮತ್ತು ಸ್ಟ್ರೆಪ್ಟೋಕಾಕೈ ಎಂಬ ಸೂಕ್ಷ್ಮಜೀವಿಗಳಿಂದ ಉಂಟಾಗುವ ಅಂಟು ಜಾಡ್ಯವಿದು.[೧೭] ಇದು ಹೆಚ್ಚಾಗಿ ಮಕ್ಕಳ ಜಾಡ್ಯ.[೧೮] ಚರ್ಮದ ಎಲ್ಲ ಭಾಗಗಳಲ್ಲಿ ಅದರಲ್ಲೂ ಹೆಚ್ಚಾಗಿ ಮುಖದ ಮೇಲೆ ಕಾಣಿಸುತ್ತದೆ.[೧೯] ಕೆಂಪು ನೀರ್ಗುಳ್ಳೆಗಳು ಮತ್ತು ಕೀವ್ಗುಳ್ಳೆಗಳು ಬೆಳೆಯುತ್ತವೆ. ಇವು ಒಡೆದು ಕೀವು, ರಸಿಕೆ ಸುರಿದು ಒಣಗಿ ಜೇನುತುಪ್ಪ ಬಣ್ಣದ ಹೆಕ್ಕಳಿಕೆಗಳು ಕಟ್ಟುತ್ತವೆ. ಜೀವಿರೋಧಕ ಔಷಧಿಗಳ ಸೇವನೆ ಇಲ್ಲವೆ ಮುಲಾಮುಗಳನ್ನು ಹಚ್ಚುವುದೇ ಇದರ ಚಿಕಿತ್ಸೆ.

ತುರಿ (ಸ್ಕ್ಯಾಬೀಸ್)

[ಬದಲಾಯಿಸಿ]

ಸಾರ್ಕಾಪ್ಟಿಸ್ ಸ್ಕೇಬಿ ಎಂಬ ಕೀಟದಿಂದ ಉಂಟಾಗುವ ಸಾಂಕ್ರಾಮಿಕ ರೋಗ.[೨೦][೨೧] ಇದರಿಂದ ನರಳುತ್ತಿರುವ ಮನುಷ್ಯನ ಅಥವಾ ಪ್ರಾಣಿಯ ಸಂಪರ್ಕದಿಂದ ಇದು ಪ್ರಸರಿಸುತ್ತದೆ.[೨೨] ತುರಿ ಎಲ್ಲರಿಗೂ ಅಂಟಬಹುದು, ಆದರೆ ಹೆಚ್ಚಾಗಿ ಇದು ಅಸ್ವಚ್ಛ ಮಕ್ಕಳ ರೋಗ.[೨೩] ತೀವ್ರ ಕಡಿತ ಅದರಲ್ಲೂ ರಾತ್ರಿಯಲ್ಲಿ, ಮೈಮೇಲೆ ಡೊಗತೆಗಳು, ನೀರ್ಗುಳ್ಳೆಗಳು, ಮಿಟ್ಟಿದದ್ದೆಗಳು, ಹೆಕ್ಕಳಿಕೆಗಳು ಮತ್ತು ಕೆರೆದ ಗುರುತುಗಳು ಇದರ ಲಕ್ಷಣ. ಬೊಕ್ಕೆಗಳು ಹೆಚ್ಚಾಗಿ ಬೆಟ್ಟುಗಳ ಸಂದಿಗಳಲ್ಲಿ, ಮಣಿಕಟ್ಟು, ಮೊಣಕೈ, ಕಂಕುಳು, ಮೊಲೆಗಳು, ಸೊಂಟ, ಬಾಹ್ಯಜನನಾಂಗಗಳು ಮತ್ತು ಮೇಲು ತೊಡೆಗಳ ಮೇಲೆ ಏಳುತ್ತವೆ.[೨೪] ಬೊಕ್ಕೆಗಳ ಮೇಲೆ ಕೀವಾಣುಗಳು ಬೆಳೆದು ಕೀವು ತುಂಬಬಹುದು. ಇದರಿಂದ ಮಕ್ಕಳಲ್ಲಿ ಮೂತ್ರಜನಕಾಂಗಗಳ ಉರಿ ಉತ್ಪನ್ನವಾಗಬಹುದು.

ನಾಪಿತನ ವ್ರಣ (ಬಾರ್ಬರ್ಸ್ ಇಚ್)

[ಬದಲಾಯಿಸಿ]

ಕ್ಷೌರ ಮಾಡಿಕೊಳ್ಳುವ ಗಡ್ಡ, ಮೀಸೆಗಳ ಕೂದಲ ಕೋಶಿಕೆಗಳಿಗೆ ಕ್ರಿಮಿ ಇಲ್ಲವೇ ಬೂಜು ಆವರಿಸುವುದರಿಂದ ಆಗುವ ಚರ್ಮದ ಬದಲಾವಣೆ. ಕ್ಷೌರ ಅಥವಾ ಕ್ಷೌರಿಕನೇ ಇದಕ್ಕೆ ಯಾವಾಗಲೂ ಕಾರಣವಲ್ಲ. ಆದ್ದರಿಂದ ಈ ಹೆಸರು ಸರಿಯಲ್ಲ. ಬೂಜೂ ಕ್ರಿಮಿಗಳೂ ಕೂದಲ ಕೋಶಿಕದ ಆಳದಲ್ಲಿ ಆವರಿಸಿ ಸುಲಭವಾಗಿ ಜಗ್ಗದ ಉರಿಯೂತವಾಗಿಸುವುವು. ಸೊಂಕು ಹತ್ತಿದ ಕೂದಲ ಕೋಶಿಕದಲ್ಲಿ ಕೀವು ಸೇರುತ್ತ ಬರುವುದು. ಮೊದಲಿಗೆ ಕೆಂಪು ಮೊಡವೆಯಂತೆ ಕಂಡು ಅನಂತರ ಕೀವುಗುಳ್ಳೆಯ ಮಧ್ಯೆ ಕೂದಲು ಎದ್ದು ಕಾಣುವುದು. ಸಾಕಷ್ಟು ನೋವು ಕೂಡ ಇರುತ್ತದೆ. ಕ್ಷೌರ ಮಾಡಿಕೊಳ್ಳುವುದು ಕಷ್ಟ. ಇಂಥ ಚರ್ಮದ ಮೇಲೆ ಕ್ರಿಮಿನಾಶಕ ಔಷಧಿಗಳನ್ನು ಹಚ್ಚುವುದರಿಂದ ಪ್ರಯೋಜನವಿಲ್ಲ. ಏಕೆಂದರೆ ಮೇಲೆ ಹಚ್ಚುವ ಔಷಧಿಗಳು ಆಳದಲ್ಲಿರುವ ರೋಗಾಣುಗಳನ್ನು ತಟ್ಟುವುದಿಲ್ಲ. ಚರ್ಮವನ್ನು ಸಾಬೂನು ನೀರಿನಿಂದ ತೊಳೆದು ಚೊಕ್ಕಗೊಳಿಸಿ, ಬಿಸಿನೀರಿನಿಂದ ಶಾಖ ಕೊಡುವುದರಿಂದ ಉರಿಯೂತವೂ, ನೋವೂ ತಗ್ಗುವುವು. ಜೊತೆಗೆ ಪೆನಿಸಿಲಿನ್ ಮೊದಲಾದ ಸೂಕ್ತ ಕ್ರಿಮಿನಾಶಕ ಔಷಧಿಗಳನ್ನು ಕೊಡಬೇಕು.

ಚರ್ಮರೋಗಗಳಲ್ಲಿ ಇದೇ ಅರ್ಧಪಾಲಿನಷ್ಟಿರುತ್ತದೆ. ಚರ್ಮದ ಉರಿತದಿಂದಾಗುವ ಬದಲಾವಣೆಗಳು ಗೊತ್ತಾದ ಕ್ರಮದಲ್ಲಾದರೂ ಇಸಬು ಹುಟ್ಟಿ ಬೆಳೆಯಲು ಕಾರಣಗಳು ಅನೇಕ. ಚರ್ಮದ ಕೋಶಗಳಲ್ಲೂ, ಅವುಗಳ ಎಂಜ಼ೈಮುಗಳಲ್ಲೂ ಆಗುವ ಬದಲಾವಣೆಗಳೆಲ್ಲವೂ ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೂ ರಾಸಾಯನಿಕ ಸ್ಪರ್ಶದಿಂದ ಆಗುವ ಚರ್ಮದ ಉರಿತದಲ್ಲಿ ಈ ಅಂಶಗಳು ಎದ್ದು ಕಾಣುತ್ತವೆ. ಇಸಬು ಎನ್ನುವ ಪದಕ್ಕೆ ಗೊತ್ತಾದ ಒಂದು ಅರ್ಥವಿಲ್ಲ. ಒಬ್ಬೊಬ್ಬ ವೈದ್ಯನೂ ಬೇರೆ ಬೇರೆ ಅರ್ಥಹೇಳುವನು. ಅದರಿಂದಾಗಿ ಈ ಪದಕ್ಕೆ ವೈದ್ಯಕೀಯ ಪ್ರಾಮುಖ್ಯವಿಲ್ಲ. ಹಲವಾರು ತೆರನ ಬೇರೂರಿದ ಚರ್ಮದ ಉರಿತಗಳಿಗೆ ಬಳಸುವ ಸಾಮಾನ್ಯ ಹೆಸರಿದು. ಇದನ್ನು ಜನಸಾಮಾನ್ಯರ ಬಳಕೆಗೆ ಬಿಟ್ಟು ವೈದ್ಯರಲ್ಲಿ ಹಸುಗೂಸುಗಳ ಬೇರೂರಿದ ಚರ್ಮದ ಉರಿತಕ್ಕೆ ಮಾತ್ರ ಅನ್ವಯಿಸುವುದು ಸೂಕ್ತವಾಗಬಹುದು. ಇಸಬಿನಲ್ಲಿ ಒಳಜನಿತ ಮತ್ತು ಹೊರಜನಿತವೆಂಬ ಬಗೆಗಳಿವೆ.

  • ಒಳಜನಿತ ಇಸುಬಿಗೆ, ಚಿಕ್ಕವಯಸ್ಸಿನಲ್ಲೇ ತಲೆದೋರುವ ಏಟೋಪಿ ಎಂಬ ಒಗ್ಗದಿರುವಿಕೆಯ (ಅಲರ್ಜಿಯ) ತೊಂದರೆ, ಮೈಜಿಡ್ಡುಸುರಿತ, ನಿಲುವಿನ ಚರ್ಮದುರಿತ, ಹೀಗೆ ಅನೇಕ ಕಾರಣಗಳಿರಬಹುದು.
  • ಹೊರಜನಿತ ಇಸಬಿಗೆ, ಸೋಂಕು, ಸ್ಪರ್ಶದುರಿತ (ಕಾಂಟ್ಯಾಕ್ಟ್ ಡರ್ಮಟೈಟಿಸ್) ಮೊದಲಾದ ಕಾರಣಗಳಿರಬಹುದು.

ಸ್ಪರ್ಶದುರಿತ, ಕುಂಕುಮ, ಕನ್ನಡಕ, ಪಾದರಕ್ಷೆ, ಮೊದಲಾದವುಗಳನ್ನು ಧರಿಸುವುದರಿಂದ, ಹಾಗೂ ಮನೆಗೆಲಸ ಮಾಡುವಾಗ ಸಾಬೂನು, ಪುಡಿಗಳ ಸ್ಪರ್ಶದಿಂದ ಕೆಲವರಲ್ಲಿ ಉಂಟಾಗುತ್ತದೆ. ಆನುವಂಶಿಕ ಇಸಬು ಚಿಕ್ಕವಯಸ್ಸಿನಲ್ಲಿ ಪ್ರಾರಂಭಿಸಿ ಜೀವನಪರ್ಯಂತ ಬಿಟ್ಟು ಬಿಟ್ಟು ಬರುತ್ತದೆ. ಅರ್ಜಿತ ಇಸಬು ಕೆರಳಿಸುವ ಪದಾರ್ಥಗಳಿಂದ ಉಂಟಾಗುತ್ತದೆ. ಆಹಾರ ಪದಾರ್ಥಗಳ ಸೇವನೆಯಿಂದ, ಇಲ್ಲವೆ ಉಸಿರಾಡುವುದರಿಂದ, ಕುಂಕುಮ, ಕನ್ನಡಕ, ಪಾದರಕ್ಷೆ ಮುಂತಾದವುಗಳ ಸ್ಪರ್ಶದಿಂದ ಇಸಬು ಬರಬಹುದು. ಇವು ಸಾಮಾನ್ಯವಾಗಿ ಮನುಷ್ಯನಿಗೆ ಹಾನಿಯನ್ನು ಉಂಟು ಮಾಡುವುದಿಲ್ಲವಾದ ಕಾರಕಗಳೇ ಆದರೂ ವ್ಯಕ್ತಿಯಲ್ಲಿ ಇವಕ್ಕೆ ಸೂಕ್ಷ್ಮಪ್ರತಿಕ್ರಿಯೆ ಉತ್ಪನ್ನವಾಗಿ ಇಸಬು ಬರುತ್ತದೆ. ಇಸಬು ದೀರ್ಘಕಾಲವಿದ್ದಲ್ಲಿ ಚರ್ಮ ಪದರು ಪದರಾಗಿ ದಪ್ಪವಾಗಿ ಕಪ್ಪಾಗಿ ಒರಟಾಗುತ್ತದೆ.

ಚರ್ಮದ ಉರಿತದಲ್ಲಿ ಕಾಣಬರುವ ರೂಪವ್ಯತ್ಯಾಸಗಳು ಇತರ ಚರ್ಮ ಬದಲಾವಣೆಗಳಿಗಿಂತಲೂ ಸ್ಪಷ್ಟವಾದವು. ಈ ಬದಲಾವಣೆಗಳ ಕ್ರಮ ಹೀಗಿದೆ: ಕೆಂಗಂದೆ ಮತ್ತು ಚರ್ಮದ ಊತದೊಂದಿಗೆ ಮೊದಲಾಗುತ್ತವೆ; ಕೆಲ ತಾಸುಗಳ ತರುವಾಯ ನೀರ್ಗುಳ್ಳೆಯಾಗಿ ಅವುಗಳಿಂದ ರಸಿಕೆ ಸುರಿವುದು; ಕೆಲವು ದಿವಸಗಳ ಮೇಲೆ ಹೊಟ್ಟು ಮತ್ತು ಸಿಪ್ಪೆಗಟ್ಟುವುದು-ಇದಿಷ್ಟೂ ಕೂರಾದ ಚರ್ಮದ ಉರಿತದಲ್ಲಿ ಕಾಣುವುದು. ಆದರೆ ಉರಿತ ಹೀಗೆಯೇ ಮುಂದುವರಿದರೆ ಕೆರೆತದಿಂದಲೋ ಉಜ್ಜುವುದರಿಂದಲೋ ಚರ್ಮ ಮಂದವಾಗಿ ಕಲೆಯ ಗುರುತು ಕಾಣಿಸುವುದು. ಬಣ್ಣವೇರುತ್ತ ಬಂದು ಕೆರೆದುಕೊಳ್ಳುವುದರಿಂದ ಮಿಟ್ಟಿದದ್ದುಗಳೆದ್ದು ಚರ್ಮ ಮಂದಗಟ್ಟುವುದು. ಉರಿತ ಬೇರೂರಿದಂತೆಲ್ಲ ಈಚಿನ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಸಬು ಮತ್ತು ಚರ್ಮದ ಉರಿತಗಳನ್ನು ಕೇವಲ ಸಾಮಾನ್ಯ ಲಕ್ಷಣಗಳಿಂದ ವಿಂಗಡಿಸುವುದಾಗದು. ಆದರೂ ಗೊತ್ತಾದ ಕಾರಣಗಳಿಂದ ಆದವನ್ನು ಅವುಗಳ ಚಿಹ್ನೆ ಲಕ್ಷಣಗಳಿಂದ, ರೋಗಿಯಲ್ಲಿ ಹೇಗೆ ಹರಡಿಕೊಂಡು ಹೇಗೆ ಕೊನೆಗಾಣಬಹುದೆಂದು ಮುಂಗಾಣಬಹುದು.

ಚರ್ಮದ ಉರಿತದ ಕೆಲವು ಮುಖ್ಯರೂಪಗಳು

  1. ಕೂರಾದ ತಾಕು ಚರ್ಮದ ಉರಿತ: ದಿನ ಜೀವನದಲ್ಲಿ ಚರ್ಮಕ್ಕೆ ತಾಕುವ ಅನೇಕ ಬಗೆಗೆಳ ಬಳಕೆಯ ವಸ್ತುಗಳು, ಚರ್ಮದಲ್ಲಿ ಸೂಕ್ಷ್ಮತೆಯನ್ನುಂಟುಮಾಡಿಯೋ, ಚರ್ಮವನ್ನೇ ಕೆರಳಿಸುವುದರಿಂದಲೋ ತಾಕಿದೆಡೆಯಲ್ಲಿ ಉರಿತವೇಳಿಸುತ್ತವೆ. ಇಂಥ ಸ್ಥಿತಿಗಳಲ್ಲಿ ಉರಿತದ ನಿಜವಾದ ಕಾರಣವನ್ನು ಕಂಡುಹಿಡಿಯಬಹುದು. ಕಾರಣ ತಪ್ಪಿಸುವಂತಿದ್ದರೆ ಇದರ ಚಿಕಿತ್ಸೆಯೂ ಸುಲಭ, ತೃಪ್ತಿಕರ.
  2. ಹಸುಗೂಸುಗಳ ಇಸಬು: ಇದು ಸಾಮಾನ್ಯವಾಗಿ ಏಟೋಪಿಯ ಚರ್ಮದುರಿತವಾಗಿರುತ್ತದೆ. ಏಟೋಪಿ ಎಂದರೆ, ಅನುವಂಶಿಕವಾಗಿ ಒಗ್ಗದಿರುವಿಕೆ (ಅಲರ್ಜಿ) ಯಾಗುವ ಸಾಧ್ಯತೆಯಿರುವುದೆಂದು ಅರ್ಥ.[೨೫] ಚರ್ಮ, ಶ್ವಾಸನಾಳ, ಮತ್ತು ಮೂಗಿನ ಲೋಳೆಪೊರೆಗಳು ಕೆಲವು ವಸ್ತುಗಳಿಗೆ ಹುಟ್ಟಿನಿಂದಲೇ ಸಂವೇದಕತೆ ಪಡೆದಿದ್ದು ಚರ್ಮದಲ್ಲಿ ಇಸಬಾಗಿಯೋ, ಶ್ವಾಸನಾಳದ ಕುಗ್ಗುವಿಕೆಯಿಂದ ಗೂರಲು ಕೆಮ್ಮಾಗಿಯೋ, ಮೂಗಿನ ಲೋಳೆಪೊರೆಯ ಉರಿತದಿಂದ ನೆಗಡಿಯಾಗಿಯೋ ಯಾವುದಾದರೂ ಒಂದು ರೂಪದಲ್ಲಿ ಹೊರತೋರಬಹುದು. ಇಂಥ ಇಸಬಿನ ಲಕ್ಷಣಗಳು ಗೊತ್ತಾಗಿರುತ್ತವೆ. ಮುಂದೆ ಹೀಗೆಯೇ ಆಗುವುದೆಂದು ಹೇಳಲಾಗದಿದ್ದರೂ ಸಾಮಾನ್ಯವಾಗಿ ಇದರ ಕಾಟ ಬಹುಕಾಲದ್ದು. ಹಸುಗೂಸಿನ ಇಸಬು ಸಾಮಾನ್ಯವಾಗಿ ಕೆನ್ನೆ, ಕುತ್ತಿಗೆಗಳ ಮೇಲೆ ತುರಿಸುವ ಕೆಂಪು ಕಲೆಗಳಾಗಿ ಕಾಣುತ್ತವೆ. ಇದು, ಮೂರು ತಿಂಗಳು ವಯಸ್ಸಿನಿಂದ ಎರಡು ವರ್ಷಗಳವರೆಗಿರುತ್ತದೆ. ಇದು, ಮಕ್ಕಳ ಹಂತಕ್ಕೆ ಮುಂದುವರೆಯಬಹುದು, ಇಲ್ಲವೇ ಮಕ್ಕಳ ಹಂತವೇ ಮೊದಲು ಬರಬಹುದು. ಇದು 2 ರಿಂದ 12 ವರ್ಷಗಳವರೆಗಿರುತ್ತದೆ, ಹಾಗೂ ಈ ಅವಧಿಯಲ್ಲಿ ಮೊಣಕೈ, ಮೊಣಕಾಲುಗಳ ಹಿಂಭಾಗದಲ್ಲಿ ಇಸಬು ಸಾಮಾನ್ಯ. 12 ರಿಂದ 23 ವರ್ಷದಲ್ಲಿ ವಯಸ್ಕ ಹಂತ-ಇಲ್ಲಿ, ಚರ್ಮ ಒರಟಾಗಿ ಕಪ್ಪಾಗುತ್ತದೆ. ಎಲ್ಲಾ ಹಂತಗಳಲ್ಲೂ ತುರಿಸುವಿಕೆ, ಒಣಗುವಿಕೆ ಬಹಳ ಸಾಮಾನ್ಯ.
  3. ಮೈ ಜಿಡ್ಡುಸುರಿವ ಚರ್ಮದ ಉರಿತ: ಮೈಜಿಡ್ಡುಗ್ರಂಥಿಗಳ ಸುರಿಕೆ ಅತಿಯಾಗಿರುವವರಲ್ಲಿ ಗ್ರಂಥಿಗಳು ಹೆಚ್ಚಾಗಿರುವ  ಭಾಗಗಳಲ್ಲಿ ಕಾಣುವುದಲ್ಲದೆ ಅಣು ಜೀವಿಗಳ ಸೋಂಕಿಗೆ ಸುಲಭವಾಗಿ ಈಡಾಗುವ ಬೇನೆಯಿದು.
  4. ನಾಣ್ಯರೂಪ ಚರ್ಮದ ಉರಿತ: ಇದರಲ್ಲಿ ಮೈಮೇಲಿನ ಅನೇಕ ಕಡೆ ಚರ್ಮದ ಉರಿತ ಗುಂಡುಗುಂಡಾಗಿ ಕಾಣಬರುವುದು. ಇದಕ್ಕೆ ಕಾರಣ ತಿಳಿದಿಲ್ಲ.
  5. ಬೇರೂರಿದ ಮಂದಗಟ್ಟಿದ ಚರ್ಮ ಉರಿತ: ಎಷ್ಟೋ ವರ್ಷಗಳು ಜಗ್ಗದೆ ಬೇರೂರಿ ನಿಂತಿರುವ ಚರ್ಮದ ಉರಿತದಿಂದ  ಚರ್ಮ ದಪ್ಪವಾಗಿರುವ ರೂಪ.
  6. ನಿಲುವಿನ ಚರ್ಮದ ಉರಿತ: ಕಾಲಿನ ಉಡಿಕಟ್ಟಿದ ಸಿರಗಳ ನಿರ್ಬಲತೆಯಿಂದ ರಕ್ತದ ಹರಿವು ಸರಿಯಾಗಿ ಆಗದ ಕಾರಣ, ಕೋಲಾಣುಗಳ ಸೋಂಕಿಗೆ ಸುಲಭವಾಗಿ ಈಡಾಗಿ ಆಗುವ ಉರಿತವಿದು.
  7. ಬೇರೂರಿದ ಇಸಬಿನ ಚರ್ಮದ ಉರಿತ: ಗೊತ್ತುಮಾಡಲಾಗದ ಅನೇಕ ಕಾರಣಗಳಿಂದಾದ ಬೇರೂರಿದ ಚರ್ಮದ ಉರಿತವಿದು.
  8. ಕೈಕಾಲುಗಳ ಬೇರೂರದ ಚರ್ಮದ ಉರಿತ: ಬೆವರು ಕಟ್ಟುವುದರಿಂದಲೂ, ಅಣುಜೀವಿಗಳಿಂದಾಗುವ ಮರುಚಲದ ಸೋಂಕಿನ ಚರ್ಮದ ಉರಿತ, ಇಲ್ಲವೇ ಚಿಕಿತ್ಸೆಗಾಗಿ ಬಳಸುವ ಮದ್ದುಗಳಿಂದಲೂ ಆಗುವ ತಾಕು ಚರ್ಮದ ಉರಿತವಿದು.

ಚರ್ಮತವೆ

ಚರ್ಮ ಸವೆದುಹೋಗುವುದು ಎಂದು ಇದರ ಅರ್ಥ. ಅನೇಕ ರೋಗಗಳಿಂದ ಈ ರೀತಿ ಆಗಬಹುದು. ಇವುಗಳಲ್ಲಿ ಮುಖ್ಯವಾದವು:

1. ಸಾಮಾನ್ಯ ಚರ್ಮತವೆ; 2. ಕೆಂಗಂದೆ ಚರ್ಮತವೆ.

1. ಸಾಮಾನ್ಯ ಚರ್ಮತವೆ: ಮೈಗೆ ಹತ್ತಿದ ಕ್ಷಯರೋಗ ಚರ್ಮಕ್ಕೆ ಹರಡಿ, ಅದರಲ್ಲಿ ಸಣ್ಣ ಸಣ್ಣ ಗಂಟುಗಳಾಗಿ ಬರಬರುತ್ತ ಅವು ಒಟ್ಟುಗೂಡಿ ಹುಣ್ಣಾಗಿ, ಮಾಯುವಾಗ ತೀವ್ರ ವಿಕಾರ ಮಾಡುವ ಬೇರೂರಿದ ಚರ್ಮರೋಗವಿದು. ಅನೇಕರಲ್ಲಿ ಮುಖ ಮತ್ತು ಕತ್ತನ್ನು ಆವರಿಸುವುದು. ಚರ್ಮತವೆಯ ಗಂಟುಗಳು ನಿಜತ್ವಚದಲ್ಲಿರುತ್ತವೆ. ಹೊಸಗಂಟುಗಳ ಮಧ್ಯೆ ಒತ್ತಾಗಿ ಸೇರಿಸಿದ ಒಳಪೊರೆ ಕೋಶಗಳೂ, ಅವುಗಳ ಜೊತೆಗೆ ಕೆಲವೇ ಲ್ಯಾಂಗರ್‌ಹ್ಯಾನನ ಭೂತಕೋಶಗಳೂ ಇರುತ್ತವೆ. ಬಾಹ್ಯಾವರಣದಲ್ಲಿ ಉರಿತದ ದುಗ್ಧರಸ ತೆರನ ಮಂಡಲವಿರುವುದು. ಸಾಮಾನ್ಯವಾಗಿ ಲೋಮನಾಳಗಳು ಕಾಣದಂತಾಗಿ ಗಂಟುಗಳಲ್ಲಿ ರಕ್ತನಾಳಗಳಿರುವುದಿಲ್ಲ. ಅಂಟುಜನಕ ಪೂರ್ತಿ ಕಳಲಾಗಿ ಮತ್ತು ಎಲ್ಯಾಸ್ಟಿನ್ ಬಲ ತಗ್ಗಿ ನುಚ್ಚುನೂರಾಗುವುದು. ಕೆಲವು ವೇಳೆ ಹುಣ್ಣಾಗಬಹುದು ಅಥವಾ ಗಂಟು ಕರಗಿಹೋಗಬಹುದು. ಗಂಟುಗಳಿಂದ ತಪ್ಪದೆ ಬೆಳ್ಳನೆಯ ಮೆತುವಾದ ಕಲೆ ನಿಲ್ಲುವುದು. ಈ ರೋಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬರುತ್ತದೆ. ಕೆನ್ನೆ, ತುಟಿ, ಬಾಯಿ, ಮೂಗಿನ ಲೋಳೆಪೊರೆಗಳ ಮೇಲೆ ಅಂಕುರಿಸುವುದು. ಚಿಕಿತ್ಸೆ ಮಾಡದಿದ್ದರೆ ಹೆಚ್ಚು ಹೆಚ್ಚು ಗಂಟುಗಳು ಹರಡುತ್ತ ಮಧ್ಯದಲ್ಲಿ ಹಿಂಗುತ್ತ ಕಲೆ ಬೀಳುವುದು. ಅನೇಕರಲ್ಲಿ ಸೂಕ್ತ ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸಬಹುದು. ಈ ರೋಗದ ಕಲೆಗಳಲ್ಲಿ ಏಡಿಗಂತಿ ಏಳಬಹುದೆಂಬುದನ್ನು ಮರೆಯಬಾರದು. ಚಿಕಿತ್ಸೆಯಾಗಿ ಪ್ಯಾರಾ ಅಮೈನೋ ಸ್ಯಾಲಿಸಿಲಿಕ್ ಆಮ್ಲ ಮತ್ತು ನಿಕೋಟಿನಿಕ್ ಆಮ್ಲ, ಹೈಡ್ರೋಸೈಡ್ ಮದ್ದುಗಳನ್ನೂ ಒಟ್ಟಾಗಿ ಚಿಹ್ನೆಗಳು ಹೋದಮೇಲೂ 6 ತಿಂಗಳು ಕೊಡಬೇಕು.

2. ಕೆಂಗಂದೆ ಚರ್ಮತವೆ: ಇದು ಸೂರ್ಯಕಿರಣಗಳಿಂದ ಉಲ್ಬಣಿಸುವ ರೋಗ. ಕಾರಣ ತಿಳಿದಿಲ್ಲ. ಮೂಗು, ಕೆನ್ನೆ ಮತ್ತು ನೆತ್ತಿಗಳ ಮೇಲೆ ಬೇರೂರಿದ ಚರ್ಮತವೆಯಲ್ಲಿ ಕೆಂಪು ಕಲೆಗಳಾಗುತ್ತವೆ. ಅವುಗಳ ಅಂಚಿನಲ್ಲಿ ಕಂದುಬಣ್ಣದ ಹುರಕು ಅಗಲಿಸಿದ ಕೂಪಗಳ ಬಾಯಿಗಳೊಳಗೆ ಹೊಕ್ಕಿರುತ್ತವೆ. ಮಾದು ನಿಂತ ಕಲೆಗಳೂ ಇರಬಹುದು. ಮಲೇರಿಯಾ ರೋಗದಲ್ಲಿ ಬಳಸುವ ಕೃತಕ ರಾಸಾಯನಿಕ ಮದ್ದುಗಳಾದ ಅಟೆಬ್ರಿನ್ ಮತ್ತು ಕ್ಲೋರೋಕ್ವಿನ್ ಈ ರೋಗಚಿಕಿತ್ಸೆಯಲ್ಲಿ ಗುಣಕಾರಿಗಳಾಗಿವೆ.[೨೬][೨೭] ಇದಕ್ಕೂ ವಿಷಮವಾದ ರೂಪವೆಂದರೆ ಕೂರಾದ ಚರ್ಮತವೆ. ಇದು ದೇಹಾದ್ಯಂತ ಇರುವ ಕೂಡಿಸುವ ಊತಕ ಮತ್ತು ರಕ್ತನಾಳಗಳಲ್ಲೆಲ್ಲ ಇರುವ ಅಂಟುಜನಕದ ರೋಗ, ಊತಕ ಅಂಗಾಯಗಳಿಂದಾಗಬಹುದಾದ ಪರಿಣಾಮಗಳಾದ ಜ್ವರ, ಕೀಲುನೋವು ಮುಂತಾದವು ಮುಖ, ಎದೆ ಮತ್ತು ಕೈಗಳ ಮೇಲೆ ಚರ್ಮದಲ್ಲಿ ಕೆಂಪುಕಲೆಗಳೂ ಕಾಣಬಹುದು. ರೋಗ ಅನೇಕರಲ್ಲಿ ಮಾರಕವಾಗುವುದುಂಟು. ಕಾರ್ಟಿಕೋಸ್ಟೀರಾಯಿಡ್ ಗುಂಪಿನ ಮದ್ದುಗಳಿಂದ ಈ ರೋಗದ ಲಕ್ಷಣಗಳನ್ನು ಮಾತ್ರ ಶಮನಮಾಡಬಹುದು.

ಮೊಡವೆ

[ಬದಲಾಯಿಸಿ]

ಇದು ಹರೆಯದ ಕಾಯಿಲೆ. ಮುಖದ ಮೇಲೇ ಗ್ರಂಥಿನಾಳದ ತುದಿಯಲ್ಲಿ ಜಿಡ್ಡು ಕೂಡಿ ಕಪ್ಪಾದ ಕಲೆಯಂತಿರುವುದೆ ಮೊಡವೆ (ಮಡಮೆ). ಮಿಟ್ಟಿದದ್ದೆ ಮತ್ತು ಕುರುಗಳು ಇದರ ಲಕ್ಷಣಗಳು. ಇವು ವಿಶೇಷವಾಗಿ ಮುಖ, ಎದೆ ಮತ್ತು ತೋಳುಗಳ ಮೇಲೆ ಏಳುತ್ತವೆ. ಮೊಡವೆಯುಳ್ಳವರ ಚರ್ಮದ ಮೇಲೆ ಜಿಡ್ಡು ಹೆಚ್ಚಾಗಿರುತ್ತದೆ. ಮೈ ಜಿಡ್ಡಿನ ಗ್ರಂಥಿಗಳು ಜನನ ಗ್ರಂಥಿಗಳ ಹಾರ್ಮೋನುಗಳಿಗೆ ಹರೆಯದಲ್ಲಿ ಚುರುಕಾಗಿರುವುದೇ ಮೊಡವೆಗಳಿಗೆ ಕಾರಣ. ಸಾಮಾನ್ಯವಾಗಿ ಇವು ಮೂವತ್ತನೆಯ ವಯಸ್ಸಿನಲ್ಲಿ ಗುಣವಾಗುತ್ತವೆ. ಕೆಲವರಲ್ಲಿ ಸ್ವಲ್ಪಮಾತ್ರವೇ ಇದ್ದರೆ ಇತರರಲ್ಲಿ ಅಧಿಕ ಪ್ರಮಾಣದಲ್ಲಿದ್ದು ಒಡೆದು ಗಂಟಾಗಿ ಕಲೆಗಳು ಉಳಿದು ಮುಖವನ್ನು ವಿಕಾರಗೊಳಿಸಬಹುದು. ನೀರು ಮತ್ತು ಸಾಬೂನಿನಿಂದ ತೊಳೆದು ಮೊಡವೆಯ ಪೂಸುದ್ರವವನ್ನು (ಲೋಷನ್) ಹಚ್ಚುವುದರಿಂದ ಇವನ್ನು ಶಮನಗೊಳಿಸಬಹುದು.

ನೀರ್ಗುಳ್ಳಿಕ

[ಬದಲಾಯಿಸಿ]

ಇದು ಬೇರೂರಿದ ಮರುಕಳಿಸುವ ಮಾರಕರೋಗ. ಇದರ ಕಾರಣ ತಿಳಿದಿಲ್ಲ. ತಾಮರವಣೆ ರೋಗವೆಂದು ಹೇಳುತ್ತಾರೆ. ಇದರಲ್ಲಿ ನಾಲ್ಕು ಬಗೆಗಳಿವೆ[೨೮] - ಪೆಂಫಿಗಸ್ ವಲ್ಗೇರಿಸ್, ಪೆಂಫಿಗಸ್ ವೆಜಿಟಾನ್ಸ್, ಪೆಂಫಿಗಸ್ ಫೋಲಿಯೇಸಿಯಸ್ ಮತ್ತು ಪೆಂಫಿಗಸ್ ಎರಿಥಿಮೆಟೋಸಸ್. ಇವುಗಳಲ್ಲಿ ಪೆಂಫಿಗಸ್ ವಲ್ಗೇರಿಸ್ ಅತಿ ಸಾಮಾನ್ಯವಾದದ್ದು. ಇದು ಹೆಚ್ಚಾಗಿ ಮಧ್ಯವಯಸ್ಕರಲ್ಲಿ ತಲೆದೋರುತ್ತದೆ. ಬಾಯಿಯ ಲೋಳೆಪೊರೆ ಹಾಗೂ ಚರ್ಮದ ಮೇಲೆ ಕೆಂಪಿಲ್ಲದೆ ನೀರ್ಗುಳ್ಳೆಗಳು ಏಳುತ್ತವೆ. ಈ ಗುಳ್ಳೆಗಳು ಒಡೆಯಬಹುದು ಇಲ್ಲವೆ ಒಡೆದು ಹೆಪ್ಪುಗಟ್ಟಬಹುದು. ಒಣಗಿದ ಮೇಲೆ ಕಪ್ಪು ಬಣ್ಣದ ಕಲೆಗಳು ಉಳಿಯುತ್ತವೆ. ಆಗಾಗ್ಗೆ ನೀರ್ಗುಳ್ಳೆಗಳು ಮರಕಳಿಸುತ್ತವೆ. ನುಂಗುವಾಗ ಲೋಳೆಪೊರೆಯಲ್ಲಿನ ಗುಳ್ಳೆಗಳು ನೋವನ್ನು ಉಂಟುಮಾಡುತ್ತವೆ. ಇದಕ್ಕೆ ಚಿಕಿತ್ಸೆ ಮಾಡದಿದ್ದಲ್ಲಿ ಎರಡು ವರ್ಷಗಳಲ್ಲಿಯೇ ಮಾರಕವಾಗಬಹುದು. ರಗಟೆ ಸ್ಟೀರಾಯ್ಡ್ ಮಾತ್ರೆಗಳನ್ನು ಸೇವಿಸುವುದರಿಂದ ಈ ನೀರ್ಗುಳ್ಳೆಗಳು ಏಳುವುದನ್ನು ತಡೆಗಟ್ಟಬಹುದು.

ಬಿರಿತ

[ಬದಲಾಯಿಸಿ]

ಮೇಲ್ಚರ್ಮದ ಕೋಡಿನ ಪದರ ಅತಿ ಹೆಚ್ಚಾಗಿ ನೀರು ಕಳೆದುಕೊಳ್ಳುವುದರಿಂದ ಚರ್ಮ ಬಿರಿಯುತ್ತದೆ. ಚಳಿಗಾಲದಲ್ಲಿ ಗಾಳಿಯ ತೇವ ಕಡಿಮೆಯಾಗಿ ಕೋಡಿನ ಪದರದಿಂದ ನೀರು ಹೆಚ್ಚಾಗಿ ಹೊರಬರುವುದರಿಂದ ಮತ್ತು ಬೇಸಿಗೆಯಲ್ಲಿ ಹೆಚ್ಚಾಗಿ ನೀರು, ಸಾಬೂನು ಬಳಸುವುದರಿಂದ ಚರ್ಮ ಬಿರಿಯುತ್ತದೆ. ಚರ್ಮ ಒಣಗಿ ಒಡೆದು ಪೊರೆಬಿಡುತ್ತದೆ. ಇದರಿಂದ ಸ್ವಲ್ಪ ಕಡಿತವಾಗುವುದು.

ಹೊರತ್ವಚದ ಕೋಡಿನ ಪದರದಲ್ಲಿ ನೆಲೆಸಿದ ಹೆಬ್ಬೆಳೆತವಿದು. ಕೋಡಿನ ಪದರ ದಪ್ಪಗೆ ಶಂಖಾಕಾರವಾಗಿರುತ್ತದೆ. ಇದರ ತುದಿ ಒಳಮುಖವಾವಾಗಿದ್ದು ಆಗಾಗ್ಗೆ ಇದರ ಮೇಲೆ ಬೀಳುವ ಒತ್ತಡದಿಂದ ಆಣಿ ಉಂಟಾಗುತ್ತದೆ. ಆದ್ದರಿಂದ ಬಿಗಿಯಾದ ಪಾದರಕ್ಷೆಗಳನ್ನು ಬಳಸಬಾರದು. ಸ್ಯಾಲಿಸೈಲಿಕ್ ಆಮ್ಲದ ಮುಲಾಮು ಹಚ್ಚುವುದರಿಂದ ಆಣಿ ಮೆತ್ತಗಾಗುತ್ತದೆ. ಅನಂತರ ಇದನ್ನು ಸುಲಿಯಬೇಕು.

ದ್ಯುತಿಸಂವೇದಕತೆ (ಫೋಟೋ ಸೆನ್ಸಿಟಿವಿಟಿ)

[ಬದಲಾಯಿಸಿ]

ಅತಿನೇರಿಳೆ ಕಿರಣಗಳಿಗೆ ಚರ್ಮದ ಅಸಹಜ ಪ್ರತಿಕ್ರಿಯೆಯೇ ದ್ಯುತಿಸಂವೇದಕತೆ. ಮೂರು ಕಾರಣಗಳಿಂದ ಇವು ಉಂಟಾಗಬಹುದು:

  1. ಇಯೋಸಿನ್ (ಲಿಪ್‌ಸ್ಟಿಕ್), ಬೆರ್ಗಮೆಟ್ ಎಣ್ಣೆ (ಸೆಂಟುಗಳು, ಯು-ಡಿ-ಕಲೋನ್),[೨೯] ಡಾಂಬರ್ ಎಣ್ಣೆ ಮೊದಲಾದ ರಾಸಾಯನಿಕ ಪದಾರ್ಥಗಳನ್ನು ಚರ್ಮದ ಮೇಲೆ ಲೇಪಿಸುವುದರಿಂದ;
  2. ಸಲ್ಫನಮೈಡ್, ಟೆಟ್ರಸೈಕ್ಲಿನ್, ಟ್ರಾಂಕ್ವಿಲೈಸರ್ ಮುಂತಾದ ಔಷದಿಗಳನ್ನು ಸೇವಿಸುವುದರಿಂದ;
  3. ಪಾರ್ಫೀರಿಯ, ಪೆಲಗ್ರಾ ಎಂಬ ಚಯಾಪಚಯೀ ರೋಗಗಳಿಂದ.

ಈ ರೋಗಿಗಳು ಸೂರ್ಯನ ಬೆಳಕಿಗಾಗಲಿ, ಕೃತಕ ಅತಿನೇರಿಳೆ ಕಿರಣಗಳಿಗಾಗಲಿ ಮೈ ಒಡ್ಡಿದರೆ ಚರ್ಮದ ಮೇಲೆ ಇಸಬು, ಮಿಟ್ಟಿದದ್ದೆಗಳು, ನೀರ್ಗುಳ್ಳೆಗಳು ಮತ್ತು  ತುರಿದದ್ದೆಗಳು ಕಂಡುಬರುವುವು.

ಉಲ್ಲೇಖಗಳು

[ಬದಲಾಯಿಸಿ]
  1. Miller JH, Marks JG (2006). Lookingbill and Marks' Principles of Dermatology. Saunders. ISBN 1-4160-3185-5.
  2. https://www.easyayurveda.com/2017/08/07/maha-kushta-major-skin-diseases/
  3. Kutzner, Heinz; Kempf, Werner; Feit, Josef; Sangueza, Omar (2021). "2. Fungal infections". Atlas of Clinical Dermatopathology: Infectious and Parasitic Dermatoses (in ಇಂಗ್ಲಿಷ್). Hoboken: Wiley Blackwell. pp. 77–108. ISBN 978-1-119-64706-5. Archived from the original on 10 June 2021. Retrieved 9 June 2021.
  4. Barlow, Gavin; Irving, Irving; moss, Peter J. (2020). "20. Infectious diseases". In Feather, Adam; Randall, David; Waterhouse, Mona (eds.). Kumar and Clark's Clinical Medicine (in ಇಂಗ್ಲಿಷ್) (10th ed.). Elsevier. p. 561. ISBN 978-0-7020-7870-5. Archived from the original on 13 June 2021. Retrieved 13 June 2021.
  5. James, William D.; Elston, Dirk; Treat, James R.; Rosenbach, Misha A.; Neuhaus, Isaac (2020). "27. Genodermatoses and congenital anomalies". Andrews' Diseases of the Skin: Clinical Dermatology (in ಇಂಗ್ಲಿಷ್) (13th ed.). Edinburgh: Elsevier. pp. 563–565. ISBN 978-0-323-54753-6.
  6. "Ichthyosis". Health Information Library. Johns Hopkins Medicine. Archived from the original on 2 February 2009.
  7. James WD, Elston D, Treat JR, Rosenbach MA, Neuhaus I (2020). "36. Disturbances of pigmentation". Andrews' Diseases of the Skin: Clinical Dermatology (in ಇಂಗ್ಲಿಷ್) (13th ed.). Edinburgh: Elsevier. pp. 871–874. ISBN 978-0-323-54753-6.
  8. National Institute of Arthritis and Musculoskeletal and Skin Diseases (March 2007). "What Is Vitiligo? Fast Facts: An Easy-to-Read Series of Publications for the Public Additional". Archived from the original on 15 July 2010. Retrieved 2010-07-18.
  9. Halder RM, Taliaferro S (2007). "72. Vitiligo". In Wolff K, Goldsmith L, Katz S, Gilchrest B, Paller A, Lefell D (eds.). Fitzpatrick's dermatology in general medicine (7th ed.). New York: McGraw-Hill Professional. ISBN 978-0-07-146690-5. OCLC 154751587.
  10. Whitton ME, Ashcroft DM, González U (October 2008). "Therapeutic interventions for vitiligo". Journal of the American Academy of Dermatology. 59 (4): 713–717. doi:10.1016/j.jaad.2008.06.023. PMID 18793940.
  11. Pan CX, Lee MS, Nambudiri VE (2022). "Global herpes zoster incidence, burden of disease, and vaccine availability: a narrative review". Therapeutic Advances in Vaccines and Immunotherapy. 10. doi:10.1177/25151355221084535. PMC 8941701. PMID 35340552.
  12. Lopez A, Harrington T, Marin M (2015). "Chapter 22: Varicella". In Hamborsky J, Kroger A, Wolfe S (eds.). Epidemiology and Prevention of Vaccine-Preventable Diseases (13th ed.). Washington D.C.: U.S. Centers for Disease Control and Prevention (CDC). ISBN 978-0990449119. Archived from the original on 30 December 2016. Retrieved 9 January 2020.Public Domain This article incorporates text from this source, which is in the public domain.
  13. Shaikh S, Ta CN (2002). "Evaluation and management of herpes zoster ophthalmicus". Am. Fam. Physician. 66 (9): 1723–1730. PMID 12449270. Archived from the original on 14 May 2008.
  14. Lipke, M. M. (2006). "An armamentarium of wart treatments". Clinical Medicine & Research. 4 (4): 273–93. doi:10.3121/cmr.4.4.273. PMC 1764803. PMID 17210977.
  15. "Risk Factors | Molluscum Contagiosum". U.S. Centers for Disease Control and Prevention (CDC) (in ಅಮೆರಿಕನ್ ಇಂಗ್ಲಿಷ್). 11 May 2015. Archived from the original on 10 June 2017. Retrieved 10 June 2017.
  16. "Transmission | Molluscum Contagiosum". U.S. Centers for Disease Control and Prevention (CDC). 11 May 2015. Archived from the original on 10 June 2017. Retrieved 10 June 2017.
  17. Stevens, Daniel L. (2022). "18. Impetigo". In Jong, Elaine C.; Stevens, Dennis L. (eds.). Netter's Infectious Diseases (in ಇಂಗ್ಲಿಷ್) (2nd ed.). Philadelphia: Elsevier. pp. 78–80. ISBN 978-0-323-71159-3.
  18. Hartman-Adams H, Banvard C, Juckett G (August 2014). "Impetigo: diagnosis and treatment". American Family Physician. 90 (4): 229–235. PMID 25250996.
  19. Ibrahim F, Khan T, Pujalte GG (December 2015). "Bacterial Skin Infections". Primary Care. 42 (4): 485–499. doi:10.1016/j.pop.2015.08.001. PMID 26612370. S2CID 29798971.
  20. Gates RH (2003). Infectious disease secrets (2nd ed.). Philadelphia: Elsevier, Hanley Belfus. p. 355. ISBN 978-1-56053-543-0.
  21. "Parasites - Scabies: Epidemiology & Risk Factors". Centers for Disease Control and Prevention. November 2, 2010. Archived from the original on 29 April 2015. Retrieved 1 January 2024.
  22. Dressler C, Rosumeck S, Sunderkötter C, Werner RN, Nast A (November 2016). "The Treatment of Scabies". Deutsches Ärzteblatt International. 113 (45): 757–762. doi:10.3238/arztebl.2016.0757. PMC 5165060. PMID 27974144.
  23. Andrews RM, McCarthy J, Carapetis JR, Currie BJ (December 2009). "Skin disorders, including pyoderma, scabies, and tinea infections". Pediatric Clinics of North America. 56 (6): 1421–1440. doi:10.1016/j.pcl.2009.09.002. PMID 19962029.
  24. Hay RJ (2009). "Scabies and pyodermas--diagnosis and treatment". Dermatologic Therapy. 22 (6): 466–474. doi:10.1111/j.1529-8019.2009.01270.x. PMID 19889132. S2CID 41376428.
  25. Ralston, Stuart H., Herausgeber. Penman, Ian D., Herausgeber. Strachan, Mark W. J., Herausgeber. Hobson, Richard P., Herausgeber. Britton, Robert, Illustrator. Davidson, Leybourne S. 1894-1981 Begründer des Werks. (2018-04-23). Davidson's principles and practice of medicine. Elsevier. ISBN 978-0-7020-7028-0. OCLC 1040673074.{{cite book}}: CS1 maint: multiple names: authors list (link) CS1 maint: numeric names: authors list (link)
  26. Baird JK (2011). "Resistance to chloroquine unhinges vivax malaria therapeutics". Antimicrob. Agents Chemother. 55 (5): 1827–1830. doi:10.1128/aac.01296-10. PMC 3088196. PMID 21383088.
  27. "Aralen Phosphate". The American Society of Health-System Pharmacists. Archived from the original on 8 December 2015. Retrieved 2 December 2015.
  28. Stanley, John R. (2003). "Chapter 59: Pemphigus". In Freedberg; et al. (eds.). Fitzpatrick's Dermatology in General Medicine (6th ed.). McGraw-Hill. p. 559. ISBN 0-07-138067-1.
  29. Kaddu, S.; Kerl, H.; Wolf, P. (2001). "Accidental bullous phototoxic reactions to bergamot aromatherapy oil". J Am Acad Dermatol. 45 (3): 458–461. doi:10.1067/mjd.2001.116226. PMID 11511848. Cited in CIR 2013.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚರ್ಮರೋಗ&oldid=1312831" ಇಂದ ಪಡೆಯಲ್ಪಟ್ಟಿದೆ