ಚರ್ಚೆಪುಟ:ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೫-೭-೨೦೧೬ರ ರ ಹೊಸ ಮಂತ್ರಿಗಳ ಪರಿಚಯ[ಬದಲಾಯಿಸಿ]

  • ಕ್ಯಾಬಿನೆಟ್ ವಿಶೇಷತೆಗಳು
  • 16 ಸಚಿವರು ಉತ್ತರಪ್ರದೇಶದವರು, ಇದು 78 ಸಚಿವರ ಪೈಕಿ ಅತಿ ಹೆಚ್ಚು. ಮಹಾರಾಷ್ಟ್ರದ 9, ಬಿಹಾರದ 8 ಸಚಿವರಿದ್ದಾರೆ.
  • 10 ಮೋದಿ ಕ್ಯಾಬಿನೆಟ್​ನಲ್ಲಿ ಮಹಿಳೆಯರ ಸಂಖ್ಯೆ, ಯುಪಿಎ-2 ಸರ್ಕಾರದಲ್ಲಿ 9 ಮಹಿಳಾ ಸಚಿವರಿದ್ದರು.
  • 4 ಸ್ಥಾನಗಳು ಖಾಲಿ ಇವೆ. ಸಂಪುಟದ ಗಾತ್ರ 82. ಈಗಿರುವ ಸಂಖ್ಯೆ 78.
  • 60ಎನ್​ಡಿಎ ಸರ್ಕಾರದ ಸಚಿವರ ಸರಾಸರಿ ವಯಸ್ಸು. ಯುಪಿಎ-2 ಸರ್ಕಾರದ ಸಚಿವರ ಸರಾಸರಿ ವಯಸ್ಸು 73 ಆಗಿತ್ತು.
  • 35 ವರ್ಷದ ಅನುಪ್ರಿಯಾ ಪಟೇಲ್ ಕಿರಿಯ ಸಚಿವೆಯಾಗಿದ್ದರೆ 75 ವರ್ಷದ ನಜ್ಮಾ ಹೆಫ್ತುಲ್ಲಾ ಹಿರಿಯ ಸಚಿವೆ.
ರಮೇಶ್ ಚಂದಪ್ಪ ಜಿಗಜಿಣಗಿ- ಕುಡಿಯುವ ನೀರು ಮತ್ತು ನೈರ್ಮಲ್ಯ (ರಾಜ್ಯ)
  • 1952 ಜೂ.28ರಂದು ಬಿಜಾಪುರದ ಅಥಾರ್ಗಾ ಗ್ರಾಮದಲ್ಲಿ ಜನಿಸಿದ ರಮೇಶ್ ಚಂದಪ್ಪ ಜಿಗಜಿಣಗಿ, ಬಿಜಾಪುರದ ಬಿಎಲ್​ಡಿಇಎಯ ಕಲಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡರು. ನಂತರ ಸ್ನಾತಕೋತ್ತರ ಶಿಕ್ಷಣವನ್ನೂ ಪೂರೈಸಿದರು. ಜನತಾ ದಳದಿಂದ ರಾಜಕೀಯಕ್ಕೆ ಕಾಲಿಟ್ಟ ರಮೇಶ್ ಜಿಗಜಿಣಗಿ ರಾಮಕೃಷ್ಣ ಹೆಗಡೆಯವರ ಆಪ್ತರಲ್ಲಿ ಗುರುತಿಸಿಕೊಂಡಿದ್ದರು. ಹೆಗಡೆ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಗೆ ಸೇರ್ಪಡೆಯಾದಾಗ ಜಿಗಜಿಣಗಿ ಕೂಡಾ ಅದಕ್ಕೆ ಸೇರಿದ್ದರು. ರಾಮಕೃಷ್ಣ ಹೆಗಡೆ ನಿಧನದ ಬಳಿಕ ಬಿಜೆಪಿ ಸೇರಿದ್ದರು. ಅವರು ಐದು ಬಾರಿ ಸಂಸದರಾಗಿ ಮತ್ತು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಎಸ್.ಎಸ್. ಅಹ್ಲುವಾಲಿಯಾ – ಕೃಷಿ ಕಲ್ಯಾಣ, ಸಂಸದೀಯ ವ್ಯವಹಾರಗಳು (ರಾಜ್ಯ)
  • 1951 ಜು.4ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್​ನಲ್ಲಿ ಜನಿಸಿದ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ಕಾಲೇಜು ದಿನಗಳಿಂದಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಅಹ್ಲುವಾಲಿಯಾ 2000ನೇ ಇಸವಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಡಾರ್ಜಿಲಿಂಗ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. ಅಹುಲ್​ವಾಲಿಯ ಕೇಂದ್ರದ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಪುರುಷೋತ್ತಮ್ಾಯ್ -ಕೃಷಿ, ಕೃಷಿಕರ ಕಲ್ಯಾಣ, ಪಂಚಾಯತ್ ರಾಜ್
  • 1954 ಅ.1ರಂದು ಗುಜರಾತ್​ನಲ್ಲಿ ಜನಿಸಿದ ಪುರುಷೋತ್ತಮ್ಾಯ್ ರುಪಾಲಾ ಸೌರಾಷ್ಟ್ರ ಮತ್ತು ಗುಜರಾತ್ ವಿವಿಯಲ್ಲಿ ಬಿಎಸ್ಸಿ, ಮತ್ತು ಬಿ.ಎಡ್ ಪದವಿ ಪಡೆದುಕೊಂಡರು. ರಾಜಕೀಯಕ್ಕೆ ಬರುವುದಕ್ಕೂ ಮೊದಲು 1977ರಿಂದ 1983ರವರೆಗೆ ಹಾಮಾಪುರದ ಶಾಲೆಯೊಂದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. 2002ರವರೆಗೆ ಸತತ ಮೂರು ಬಾರಿ ಗುಜರಾತ್ ವಿಧಾನಸಭೆ ಸದಸ್ಯರಾಗಿದ್ದ ರುಪಾಲ 2008ರಲ್ಲಿ ಮೊದಲ ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು. ರುಪಾಲಾ ಗುಜರಾತ್​ನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ.
ಎಂ.ಜೆ.ಅಕ್ಬರ್ – ವಿದೇಶಾಂಗ ವ್ಯವಹಾರ (ರಾಜ್ಯ)
  • 1951 ಜ.11ರಂದು ಕೋಲ್ಕತ್ತದಲ್ಲಿ ಜನಿಸಿದ ಮೋಬಾಶಾರ್ ಜಾವೇದ್ ಅಕ್ಬರ್ ಭಾರತೀಯ ಪ್ರತಿಕೋದ್ಯಮದ ದಿಗ್ಗಜರಲ್ಲಿ ಗುರುತಿಸಿಕೊಂಡವರು. 1976ರಲ್ಲಿ ತಮ್ಮ 25ನೇ ವಯಸ್ಸಿನಲ್ಲೇ ದಿ ಸಂಡೇ ವಾರಪತ್ರಿಕೆಯ ಸಂಪಾದಕರಾದರು. 1982ರಲ್ಲಿ ದಿ ಟೆಲಿಗ್ರಾಫ್ ಪತ್ರಿಕೆಯನ್ನು ಹುಟ್ಟುಹಾಕಿದರು. ಎಂ.ಜೆ. ಅಕ್ಬರ್ ದಿ ಏಶ್ಯನ್ ಏಜ್ ಮತ್ತು ದಿ ಡೆಕ್ಕನ್ ಕ್ರಾನಿಕಲ್​ನ ಸಂಪಾದಕರಾಗಿಯೂ ಸೇವೆಸಲ್ಲಿಸಿದ್ದಾರೆ. ವೃತ್ತಿಜೀವನದಲ್ಲಿ ಹಲವು ಪುಸ್ತಕಗಳನ್ನು ಬರೆದಿರುವ ಅಕ್ಬರ್, ಜವಾಹರಲಾಲ್ ನೆಹರು ಅವರ ಜೀವನಚರಿತ್ರೆ ‘ರಯೋಟ್ ಆಫ್ಟರ್ ರಯೋಟ್’ ಬರೆದಿದ್ದಾರೆ.
ಅರ್ಜುನ್ ರಾಮ್ ಮೇಘವಾಲ್ -ಹಣಕಾಸು, ಕಾರ್ಪೆರೇಟ್ ವ್ಯವಹಾರಗಳು (ರಾಜ್ಯ)
  • 1954 ಡಿ.7ರಂದು ರಾಜಸ್ಥಾನದ ಬಿಕಾನೇರ್​ನಲ್ಲಿ ಜನಿಸಿದ ಅರ್ಜುನ್ ರಾಮ್ ಮೇಘವಾಲ್ ರಾಜಕೀಯಕ್ಕೆ ಕಾಲಿಡುವ ಮೊದಲು ರಾಜಸ್ಥಾನ ಕೇಡರ್​ನ ಐಎಎಸ್ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದರು. 2009ರಲ್ಲಿ ಬಿಕಾನೇರ್​ನಿಂದ ಸ್ಪರ್ಧಿಸಿ ಗೆದ್ದ ಮೇಘವಾಲ್ 2013ರಲ್ಲಿ ಅತ್ಯುತ್ತಮ ಸಂಸದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದಲಿತ ನಾಯಕರಾಗಿರುವ ಮೇಘವಾಲ್, ಮಲಹೊರುವ ಪದ್ಥತಿ ವಿರುದ್ಧ ದನಿ ಎತ್ತಿದ್ದರು. ಜತೆಗೆ ಸೈಕಲಿನಿಂದಲೇ ಸುದ್ದಿಯಾಗಿರುವ ಮೇಘವಾಲ್ ಸರ್ಕಾರ ನೀಡಿರುವ ಕಾರನ್ನು ಬಳಸುವುದೇ ಇಲ್ಲ.
ರಾಮದಾಸ್ ಅಠಾವಳೆ- ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ (ರಾಜ್ಯ)
  • 1959 ಡಿ.25ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ರಾಮದಾಸ್ ಅಠಾವಳೆ ದಲಿತ ನಾಯಕರಾಗಿ ಗುರುತಿಸಿಕೊಂಡವರು. ಎನ್​ಡಿಎ ಮೈತ್ರಿಪಕ್ಷ ಆರ್​ಪಿಐ(ಎ)ಯ ಮುಖ್ಯಸ್ಥರಾಗಿರುವ ಅಠಾವಳೆ ಮೂರು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2011ರಲ್ಲಿ ಕಾಂಗ್ರೆಸ್​ನೊಂದಿಗಿನ ಮೈತ್ರಿ ಕಡಿದುಕೊಂಡ ಅಠಾವಳೆ ಬಿಜೆಪಿ ಜತೆಗೆ ಕೈಜೋಡಿಸಿದ್ದರು. ಸದ್ಯ ಅಠಾವಳೆ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮರಾಠಿ ಚಿತ್ರ ಅನ್ಯಾಯಾಛಾ ಪ್ರತೀಕಾರ್, ಜೋಶಿ ಕಿ ಕಾಂಬ್ಲೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಅನುಪ್ರಿಯಾ ಪಟೇಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ರಾಜ್ಯ)
  • 1981 ಏ.28ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಕುರ್ವಿು ಜನಾಂಗದ ಪ್ರಮುಖ ರಾಜಕೀಯ ನಾಯಕ ಸೋನೆಲಾಲ್ ಪಟೇಲ್ ಪುತ್ರಿಯಾಗಿ ಜನಿಸಿದ ಅನುಪ್ರಿಯಾ ಪಟೇಲ್ ಅಪ್ನಾದಳದಿಂದ ಉತ್ತರಪ್ರದೇಶ ಮಿರ್ಜಾಪುರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ತಂದೆ ನಿಧನರಾದ ಬಳಿಕ ಅನುಪ್ರಿಯಾ ಮತ್ತು ತಾಯಿ ಕೃಷ್ಣಾ ನಡುವೆ ಅಸಮಾಧಾನ ಹುಟ್ಟಿಕೊಂಡಿದ್ದು, ತಾಯಿಯೇ ಅವರನ್ನು ಪಕ್ಷದಿಂದ ತೆಗೆದುಹಾಕಿದ್ದಾರೆ. ಉತ್ತರಪ್ರದೇಶ ಕುರ್ವಿು ಜನಾಂಗ ನಾಯಕಿ ಯಾಗಿರುವ ಅನುಪ್ರಿಯಾಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.
ವಿಜಯ್ ಗೋಯೆಲ್- ಕ್ರೀಡೆ (ಸ್ವತಂತ್ರ), ಜಲ ಸಂಪನ್ಮೂಲ
  • 1954 ಜ.4ರಂದು ದೆಹಲಿಯಲ್ಲಿ ಜನಿಸಿದ ವಿಜಯ್ ಗೋಯೆಲ್ ಶ್ರೀರಾಮ್ ಕಾಮರ್ಸ್ ಕಾಲೇಜಿನಲ್ಲಿ ಎಂಕಾಮ್ ಪದವಿ ಪಡೆದರು. ಬಳಿಕ ದೆಹಲಿ ವಿವಿಯಲ್ಲಿ ಎಲ್​ಎಲ್​ಬಿ ಪದವಿ ಪಡೆದರು. ವಿದ್ಯಾರ್ಥಿಯಾಗಿರುವಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ ಗೋಯೆಲ್ 1977ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಇದಕ್ಕೆ ಪ್ರತ್ಯುತ್ತರ ನೀಡುವ ಉದ್ದೇಶದಿಂದಲೇ ಗೋಯೆಲ್ ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಪಿ.ಪಿ.ಚೌಧರಿ- ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ
  • 1953 ಜುಲೈ 12ರಂದು ಜೋಧಪುರದ ಭಾವಿಯಲ್ಲಿ ಬಡ ರೈತನ ಕುಟುಂಬದಲ್ಲಿ ಜನಿಸಿದ ಪಿ.ಪಿ.ಚೌಧರಿ 1961ರಲ್ಲಿ ತಮ್ಮ 8ನೇ ವಯಸ್ಸಿನಲ್ಲೇ ಬಾಲ ಸ್ವಯಂಸೇವಕರಾಗಿ ಆರೆಸ್ಸೆಸ್​ಗೆ ಸೇರ್ಪಡೆಯಾದರು. ಕಾನೂನು ಪದವಿ ಪೂರೈಸಿದ ಚೌಧರಿ ಸುಪ್ರೀಂಕೋರ್ಟ್​ನ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 11,000 ಪ್ರಕರಣಗಳಲ್ಲಿ ವಾದಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಪಾಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಬ್ರಿಟನ್​ನ ಕಾಮಲ್​ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್​ನ ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಜಯ್ ತಾಮ್ತಾ- ಜವಳಿ (ರಾಜ್ಯ)

1972 ಜು.16ರಂದು ಉತ್ತರಾಖಂಡದಲ್ಲಿ ಜನಿಸಿದ ಅಜಯ್ ತಮ್ತಾ ಅಲ್ಲಿನ ಪ್ರಮುಖ ದಲಿತ ನಾಯಕ. ಪಂಚಾಯತ್ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಉತ್ತರಾಖಂಡದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಅಲ್ಮೋರಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಮೊದಲ ಬಾರಿ ಲೋಕಸಭೆ ಸದಸ್ಯರಾಗಿರುವ ಅಜಯ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ. ತಾಮ್ತಾ 2007ರಿಂದ 2009ರವರೆಗೆ ರಾಜ್ಯ ಗೃಹ ಸಚಿವರಾಗಿದ್ದರು.

ಮಹೇಂದ್ರನಾಥ್ ಪಾಂಡೆ- ಮಾನವ ಸಂಪನ್ಮೂಲ ಅಭಿವೃದ್ಧಿ (ರಾಜ್ಯ)
  • 1957 ಅ.15ರಂದು ಉತ್ತರಪ್ರದೇಶದಲ್ಲಿ ಜನಿಸಿದ ಮಹೇಂದ್ರನಾಥ್ ಪಾಂಡೆ ರಾಜ್ಯದ ಪ್ರಮುಖ ಬ್ರಾಹ್ಮಣ ನಾಯಕರಲ್ಲಿ ಒಬ್ಬರು. ಮೊದಲಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಾಂಡೆಯನ್ನು ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣರ ಮತಗಳನ್ನು ಸೆಳೆಯಲೆಂದೇ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಉದ್ಯಮ ಸಲಹಾ ಸಮಿತಿ ಮತ್ತು ಅಧಿಕೃತ ಭಾಷೆಗಳ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ. ಈ ಹಿಂದೆ ಗ್ರಾಮೀಣ ಅಭಿವೃದ್ಧಿಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜೇನ್ ಗೋಹೆನ್- ರೈಲ್ವೆ (ರಾಜ್ಯ)
  • 1950 ನ.26ರಂದು ಅಸ್ಸಾಂನ ನಾಗಾಂವ್​ನಲ್ಲಿ ಜನಿಸಿದ ರಾಜೇನ್ ಗೋಹೆನ್ ಸಣ್ಣಮಟ್ಟ ಚಹಾ ಬೆಳೆಗಾರರ ಪರವಾದ ಅಭಿಯಾನದಿಂದಲೇ ಹೆಸರುವಾಸಿಯಾದವರು. 1980ರ ದಶಕದಲ್ಲಿ ಅಸ್ಸಾಂನಲ್ಲಿ ನಡೆಸಲಾದ ಅಕ್ರಮ ವಲಸಿಗರ ವಿರುದ್ಧದ ಪ್ರತಿಭಟನೆಯಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದ ರಾಜೇನ್ 1999ರಲ್ಲಿ ಮೊದಲ ಬಾರಿ ನಾಗಾಂವ್​ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಕಾನೂನು ಪದವಿ ಪಡೆದುಕೊಂಡಿರುವ ಗೋಹೆನ್ ಶಾಲಾ ದಿನಗಳಲ್ಲಿ ಹಾಕಿ ಆಟಗಾರರಾಗಿದ್ದರು. ಅಹೋಮ್ ಸಮುದಾಯದವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್​ಗೆ ಬೆಂಬಲಿಸುತ್ತಾರೆ.
ಜಸ್ವಂತ್ ಸಿನ್ಹಾ ಭಾಭೋರ್- ಬುಡಕಟ್ಟು ಜನರ ಕಲ್ಯಾಣ
  • 1966ರ ಆಗಸ್ಟ್​ನಲ್ಲಿ ಗುಜರಾತ್​ನ ದಾಹೊಡ್​ನಲ್ಲಿ ಜನಿಸಿದ ಜಸ್ವಂತ್ ಸಿನ್ಹಾ ಭಾಭೋರ್ ರಾಜ್ಯ ಪ್ರಮುಖ ಆದಿವಾಸಿ ನಾಯಕರಲ್ಲಿ ಗುರುತಿಸಿಕೊಂಡವರು. 90ರ ದಶಕದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಜಸ್ವಂತ್ ಅದಕ್ಕೂ ಮೊದಲು ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇವರು ಬಿಎ, ಬಿ.ಎಡ್ ಪದವಿ ಪಡೆದಿದ್ದಾರೆ. ಗುಜರಾತ್ ನಿಷ್ಪಾಪ ಮತ್ತು ಸರಳವಾದ ಜೀವನಶೈಲಿಯಿಂದಲೇ ಗುರುತಿಸಿಕೊಂಡವರು. ರಾಜ್ಯ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಜಸ್ವಂತ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಸಿಎಂ ಆನಂದಿಬೆನ್ ಪಟೇಲ್​ರ ಆಪ್ತವಲಯದಲ್ಲಿದ್ದವರು.
ಮನ್​ಸುಖ್ ಮಾಂಡವ್ಯ- ರಸ್ತೆ ಸಾರಿಗೆ, ಹೆದ್ದಾರಿ, ರಾಸಾಯನಿಕ ಮತ್ತು ರಸಗೊಬ್ಬರ
  • 1972 ಜೂ.1ರಂದು ಗುಜರಾತ್​ನ ಭಾವನಗರ್​ನಲ್ಲಿ ಜನಿಸಿದ ಮನ್​ಸುಖ್ ಮಾಂಡವ್ಯ ಪಟೇಲ್ ಸಮುದಾಯದ ಯುವ ನಾಯಕರಾಗಿ ಗುರುತಿಸಿಕೊಂಡವರು. ಕಾಲೇಜು ದಿನಗಳಿಂದಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ ಮಾಂಡವ್ಯ, 2002ರಲ್ಲಿ ಮೊದಲ ಬಾರಿ ಗುಜರಾತ್ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ಗುಜರಾತ್ ಬಿಜೆಪಿಯ ವಕ್ತಾರರಾಗಿ ಮತ್ತು ರಾಜ್ಯ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮತದಾರರನ್ನು ಉಳಿಸಿಕೊಳ್ಳುವ ಸಲುವಾಗಿ ಮಾಂಡವ್ಯ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಸಿ.ಆರ್.ಚೌಧರಿ- ಗ್ರಾಹಕ ಕಲ್ಯಾಣ, ಆಹಾರ ಮತ್ತು ಪಡಿತರ ವಿತರಣೆ
  • 1948 ಮಾ.1ರಂದು ರಾಜಸ್ಥಾನ ನಾಗೌರ್​ನಲ್ಲಿ ಜನಿಸಿದ ಸಿ.ಆರ್.ಚೌಧರಿ ಜಾಟ್ ಸಮುದಾಯದ ಪ್ರಮುಖ ನಾಯಕರು. ನಾಗೌರ್​ನಿಂದ ಮೊದಲ ಬಾರಿ ಸಂಸದರಾಗಿಯಾಗಿರುವ ಚೌದರಿ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ತಜ್ಞರು. ಬರ್ವಿುಂಗ್​ಹ್ಯಾಮ್ ವಿವಿಯಿಂದ ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಪದವಿ ಪಡೆದುಕೊಂಡಿರುವ ಚೌದರಿ, ಬಾರ್ಮರ್ ಮತ್ತು ಅಜ್ಮೇರ್​ನಲ್ಲಿ ಅದ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ್ದರು. 2014 ಲೋಕಸಭೆ ಚುನಾವಣೆಯಲ್ಲಿ ನಾಗೌರ್​ನಿಂದ ಸಂಸದರಾಗಿ ಆಯ್ಕೆಯಾದ ಚೌದರಿ, ಸಣ್ಣ ಗಣಿಗಳಲ್ಲಿ ಉತ್ತಮ ಕೆಲಸದ ವಾತಾವರಣ ಸೃಷ್ಟಿಸುವುದಕ್ಕೆ ಸಾಕಷ್ಟು ಶ್ರಮಿಸಿದ್ದಾರೆ.
ಕೃಷ್ಣಾ ರಾಜ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • 1967 ಫೆ.22 ರಂದು ಉತ್ತರಪ್ರದೇಶದಲ್ಲಿ ಜನಿಸಿದ ಕೃಷ್ಣಾ ರಾಜ್ ರಾಜ್ಯದ ದಲಿತ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. 1996ರಿಂದ 2007ರವರೆಗೆ ಸತತವಾಗಿ ಉತ್ತರಪ್ರದೇಶದ ಮೊಹಾಮಾದಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಶಹಜಹಾನ್​ಪುರದಿಂದ ಗೆದ್ದಿದ್ದರು. ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅವರು ಲೋಕಸಭೆಯಲ್ಲಿ ಸಕ್ರಿಯ ಸಂಸದರಾಗಿ ಗುರುತಿಸಿಕೊಂಡವರು. ಕೃಷ್ಣಾ ರಾಜ್ ಉ.ಪ್ರದ ರೋಹಿಲ್​ಖಾಂಡ್ ಭಾಗದವರಾಗಿದ್ದು, ಪಾಸಿ ಸಮುದಾಯದ ಮತಗಳನ್ನು ಸೆಳೆಯಲು ಇವರನ್ನು ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಸುಭಾಷ್ ಭಮ್ರೆ- ರಕ್ಷಣೆ
  • 1953 ಸೆ.11ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಸುಭಾಷ್ ಭಮ್ರೆಯನ್ನು ರಾವ್​ಸಾಹೇಬ್ ದಾನ್ವೆಯ ಬದಲಿಗೆ ಆಯ್ಕೆ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಜತೆಗೆ ಮಹಾರಾಷ್ಟ್ರದ ಜಲಗಾಂವ್ ಮತ್ತು ಧುಲೆ ಭಾಗದ ಬಿಜೆಪಿ ಬೆಂಬಲಿಗರು ರಾಜ್ಯ ಸರ್ಕಾರದಿಂದ ಏಕನಾಥ್ ಖಡ್ಸೆಯನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನ ಹೊಂದಿದ್ದು, ಇದನ್ನು ಸರಿಪಡಿಸುವ ಸಲುವಾಗಿ ಸುಭಾಷ್ ಆಯ್ಕೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಆಂಕಲಾಜಿಸ್ಟ್ ಆಗಿದ್ದ ಸುಭಾಷ್ 2014ರ ಲೋಕಸಭೆ ಚುನಾವಣೆಯಲ್ಲಿ ಧುಲೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ರೈಲ್ವೆ ಸಚಿವಾಲಯದ ಸಲಹಾ ಸಮಿತಿ ಸದಸ್ಯರೂ ಆಗಿದ್ದಾರೆ.
ಅನಿಲ್ ಮಾಧವ್ ದವೆ- ಪರಿಸರ, ಅರಣ್ಯ, ಹವಾಮಾನ ಬದಲಾವಣೆ (ಸ್ವತಂತ್ರ)
  • 1956 ಜು.6ರಂದು ಮಧ್ಯಪ್ರದೇಶದಲ್ಲಿ ಜನಿಸಿದ ದವೆ ಬಿಜೆಪಿಯಲ್ಲಿ ಸಂಘಟನಾ ನಿಪುಣರಾಗಿ ಗುರುತಿಸಿಕೊಂಡವರು. ಎರಡು ಬಾರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದ ದವೆ, ಸಾಮಾಜಿಕ ಕಾರ್ಯಗಳ ಮೂಲಕ ಹೆಸರು ಮಾಡಿದ್ದಾರೆ. ನದಿ ನೀರು ಸಂರಕ್ಷಣೆಗಾಗಿ ನರ್ಮದಾ ಸಮಗ್ರ ಎಂಬ ಎನ್​ಜಿಒವನ್ನು ನಡೆಸುತ್ತಿದ್ದಾರೆ. 2003ರಲ್ಲಿ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿ ಉಮಾ ಭಾರತಿಯನ್ನು ಸಿಎಂ ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದವೆ ಆ ಬಳಿಕ ಮುಖ್ಯಭೂಮಿಕೆಗೆ ಬಂದಿದ್ದರು. ಹವಾಮಾನ ಬದಲಾವಣೆ ಬಗೆಗಿನ ಸಂಸದೀಯ ಫೋರಂನ ಸದಸ್ಯರಾಗಿದ್ದಾರೆ.
ಫಗನ್ ಸಿಂದ್ ಕುಲಸ್ತೆ- ಅರೋಗ್ಯ ಮತ್ತು ಕುಟುಂಬ ಕಲ್ಯಾಣ(ರಾಜ್ಯ)
  • 1959 ಮೇ 18ರಂದು ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಜನಿಸಿದ ಫಗನ್ ಸಿಂದ್ ಕುಲಸ್ತೆ, ಬಿಜೆಪಿ ಆದಿವಾಸಿ ಸಮುದಾಯ ನಾಯಕರಲ್ಲಿ ಒಬ್ಬರು. 2008ರ ಮತಕ್ಕಾಗಿ ಹಣ ಹಗರಣದ ಮಾಹಿತಿ ನೀಡಿದ ಮೂವರಲ್ಲಿ ಒಬ್ಬರು. ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಕಾನೂನು ಪದವಿ ಪಡೆದುಕೊಂಡಿರುವ ಕುಲಸ್ತೆ ಕಾಲೇಜು ದಿನಗಳಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1996ರಲ್ಲಿ ಮಾಂಡ್ಲಾ ಲೋಕಸಭೆ ಕ್ಷೇತ್ರದಲ್ಲಿ ಜಯಗಳಿಸಿದ ಫಗನ್, 2009ರವರೆಗೆ ಸತತವಾಗಿ ಇಲ್ಲಿನ ಸಂಸದರಾಗಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಜಾವ್ಡೇಕರ್​ಗೆ ಪ್ರಮೋಶನ್
  • ಮೋದಿ ಸಂಪುಟದಲ್ಲಿ ಪ್ರಮೋಶನ್ ಪಡೆದ ಏಕೈಕ ಸಚಿವ ಎಂಬ ಹೆಗ್ಗಳಿಕೆಗೆ ಪ್ರಕಾಶ್ ಜಾವ್ಡೇಕರ್ ಪಾತ್ರರಾಗಿದ್ದಾರೆ. ಪರಿಸರ, ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸ್ವತಂತ್ರ ನಿರ್ವಹಣೆ (ರಾಜ್ಯ ಸಚಿವ) ಹೊಂದಿದ್ದ 65 ವರ್ಷದ ಜಾವ್ಡೇಕರ್ ಅವರು ಪರಿಸರ ಖಾತೆಯಲ್ಲಿನ ಕಾರ್ಯನಿರ್ವಹಣೆಯನ್ನು ಮೆಚ್ಚಿ ಕ್ಯಾಬಿನೆಟ್ ದರ್ಜೆಗೆ ಮುಂಬಡ್ತಿ ನೀಡಲಾಗಿದೆ. ಪ್ಯಾರಿಸ್​ನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗದಲ್ಲಿ ಭಾರತದ ದನಿಯನ್ನು ಪರಿಣಾಮಕಾರಿಯಾಗಿ ಇರಿಸಿದ್ದು, ಆ ಮೂಲಕ ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟದ ನೇತೃತ್ವ ಭಾರತಕ್ಕೆ ಸಿಗುವಲ್ಲಿ ಜಾವ್ಡೇಕರ್ ಕಾರ್ಯತಂತ್ರ ತುಂಬ ಕೆಲಸ ಮಾಡಿದೆ.
ಸಂಪುಟದಿಂದ ಐವರು ಹೊರಕ್ಕೆ..
ನಿಹಾಲ್​ಚಂದ್ ಚೌಹಾನ್

ರಾಜಸ್ಥಾನದ ಶ್ರೀಗಂಗಾನಗರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಸಂಸದರಾಗಿರುವ ಚೌಹಾನ್ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿದ್ದರು. 25ನೇ ವರ್ಷಕ್ಕೆ ಲೋಕಸಭೆ ಪ್ರವೇಶಿಸಿ ಯುವ ರಾಜಕಾರಣಿ ಎನಿಸಿಕೊಂಡಿದ್ದ ಚೌಹಾನ್ ರಾಜಸ್ಥಾನದ ದಲಿತ ಮುಖವೂ ಹೌದು. ಆದರೆ, ಅತ್ಯಾಚಾರದ ಆರೋಪ ಇದೀಗ ರಾಜಕೀಯ ಹಿನ್ನಡೆಗೆ ಕಾರಣವಾಗಿದೆ. ಮಹಿಳೆಯೊಬ್ಬಳು ನಿಹಾಲ್​ಚಂದ್ ಸೇರಿದಂತೆ 16 ಜನರ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದು, ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ, ಜಿಲ್ಲಾ ನ್ಯಾಯಾಲಯವು ಮಹಿಳೆಯ ಆರೋಪ ಆಧಾರರಹಿತವಾಗಿದೆಯೆಂದು ಆಕೆ ಅರ್ಜಿಯನ್ನು ವಜಾಗೊಳಿಸಿತ್ತು. ಆ ಮಹಿಳೆ ಈಗ ಮೇಲ್ಮನವಿ ಸಲ್ಲಿಸಿದ್ದಾಳೆ. ಉತ್ತಮ ಸಂಘಟಕ ಎಂದು ಗುರುತಿಸಿಕೊಂಡಿರುವ ನಿಹಾಲ್​ಚಂದ್​ಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

ರಾಮ್ಂಕರ್ ಕಟಾರಿಯಾ

ಉತ್ತರಪ್ರದೇಶದ ಆಗ್ರಾ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿರುವ ಇವರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿದ್ದರು. ರಾಜಕೀಯಕ್ಕೆ ಬರುವ ಮುನ್ನ 13 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು. ಕಟಾರಿಯಾ ಛತ್ತೀಸ್​ಗಢ, ಪಂಜಾಬ್ ರಾಜ್ಯಗಳ ಚುನಾವಣಾ ಉಸ್ತುವಾರಿ ಹೊಣೆಯನ್ನು ಹೊತ್ತಿದ್ದರು. ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಟಾರಿಯಾ ಅವರನ್ನು ಪಕ್ಷ ಮತ್ತೆ ಪಂಜಾಬ್​ಗೆ ನಿಯೋಜಿಸಲಿದೆ ಎನ್ನಲಾಗಿದೆ. ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಪಡೆದ ಆರೋಪ ಇವರ ಮೇಲಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಸನ್ವರ್ ಲಾಲ್ ಜಾಟ್

ರಾಜಸ್ಥಾನದ ಅಜ್ಮೇರ್​ನ ಹಾಲಿ ಸಂಸದ ಆಗಿರುವ ಇವರು ಜಲ ಸಂಪನ್ಮೂಲ ಖಾತೆಯ ರಾಜ್ಯ ಸಚಿವರಾಗಿದ್ದರು. ಈ ಮುನ್ನ ನಾಲ್ಕು ಬಾರಿ ಶಾಸಕರೂ ಆಗಿದ್ದ ಸನ್ವರ್ ಲಾಲ್ ರಾಜಸ್ಥಾನ ಸಂಪುಟದಲ್ಲಿ ನೀರಾವರಿ ಸೇರಿದಂತೆ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಾರೆ. ಜಾಟ್ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ ರಾಜಸ್ಥಾನದಿಂದ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಲು ಇವರನ್ನು ಸಂಪುಟದಿಂದ ಕೈಬಿಡಲಾಗಿದೆ.

ಮನ್​ಸುಖಭಾಯಿ ವಾಸ್ವಾ

ಗುಜರಾತ್​ನ ಹಿರಿಯ ಬುಡಕಟ್ಟು ನಾಯಕ ಮನ್​ಸುಖ್​ಭಾಯಿ ವಾಸ್ವಾ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ತಮ್ಮನ್ನು ಯಾಕೆ ಸಂಪುಟದಿಂದ ಕೈಬಿಡಲಾಯಿತು ಎಂಬುದು ತಿಳಿದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ವಿವರಣೆ ನೀಡಬೇಕು ಎಂದು ಆಗ್ರಹಿಸಿರುವ ಅವರು ತಮ್ಮ ಸಚಿವಾಲಯದಲ್ಲೇ ಪ್ರತಿಕೂಲ ಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಗುಜರಾತ್​ನಲ್ಲಿ ಬುಡಕಟ್ಟು ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ, ಏಕಲವ್ಯ ಕೇಂದ್ರಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದ ವಾಸ್ವಾ ಈ ಬಗ್ಗೆ ಗುಜರಾತ್ ಸಿಎಂಗೆ ಪತ್ರ ಬರೆದಿದ್ದರು.

ಮೋಹನ್​ಭಾಯಿ

ಗುಜರಾತ್​ನ ರಾಜಕೋಟ್ ಸಂಸದರಾಗಿರುವ ಇವರು ಮೋದಿ ಸಂಪುಟದಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದರು. ಆದರೆ, ನಿರೀಕ್ಷೆಗೆ ತಕ್ಕಂತೆ ಕೃಷಿ ಸಚಿವಾಲಯದಲ್ಲಿ ಕೆಲಸ ನಡೆಯದಿ ರುವುದು ಮತ್ತು ಗುಜರಾತ್​ನಿಂದ ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ ಕುಂದಾರಿಯ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಈ ಹಿಂದೆ ಶಾಸಕರೂ ಆಗಿದ್ದ ಇವರನ್ನು ಗುಜರಾತ್ ವಿಧಾನಸಭೆ ಚುನಾವಣೆ ಸಿದ್ಧತೆಗೆ ನಿಯೋಜಿಸುವ ಸಾಧ್ಯತೆ ಇದೆ.(BY ವಿಜಯವಾಣಿ ಸುದ್ದಿಜಾಲ · JUL 6, 2016)