ವಿಷಯಕ್ಕೆ ಹೋಗು

ಚರಣವ್ಯೂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದೊಂದು ವೇದವನ್ನೂ ಮಂತ್ರಬ್ರಾಹ್ಮಣಾತ್ಮಕವಾದ ಆಯಾ ಶಾಖೆಯಲ್ಲಿ ಕಲಿಸುವ ಹಾಗೂ ಕಲಿಯುವ ಗುರುಶಿಷ್ಯರ ಗುಂಪಿನ ಒಂದು ಪರಂಪರೆಯೇ ಚರಣ (ಚರಣ ಶಬ್ದಃ ಶಾಖಾವಿಶೇಷಾಧ್ಯಯನಪರೈಕತಾಪನ್ನಜನ ಸಂಘವಾಚೀ-ಜಗದ್ಧರನ ಮಾಲತೀಮಾಧವ ವ್ಯಾಖ್ಯೆ).[] ಸಂಹಿತೆಗಳಿಗೆ, ಬ್ರಾಹ್ಮಣಗಳಿಗೆ ಮತ್ತು ವೇದಾಂಗಗಳಿಗೆ ಅನ್ವಯಿಸುವಂತೆ ಚರಣಗಳಿವೆ. ಶಾಖೆ ಎಂದರೆ ಇಷ್ಟೆ.[][] ಒಂದು ವೇದದ ಮಂತ್ರಬ್ರಾಹ್ಮಣಗಳ ಅಧ್ಯಯನದಲ್ಲಿ ಬೇರೆ ಬೇರೆ ಗುರುಗಳಿದ್ದು, ಅಂಥ ಭಿನ್ನ ಪರಂಪರೆಗಳಲ್ಲಿ ಪರಸ್ಪರವಾಗಿ ಪಾಠಾದಿ ವ್ಯತ್ಯಾಸಗಳು ತೋರಿಬಂದು ಒಂದೊಂದು ಪರಂಪರೆಯೂ ಒಂದೊಂದು ಶಾಖೆಯೆನಿಸಿಕೊಂಡಿದೆ. (ಸ್ವಾಧ್ಯಾಯೈಕ ದೇಶೋ ಮಂತ್ರಬ್ರಾಹ್ಮಣಾತ್ಮಕಃ ಶಾಖೇತ್ಯುಚ್ಚಯತೇ- ಮಹಾದೇವನ ಹಿರಣ್ಯಕೇಶಿ ಭಾಷ್ಯ). ಆಯಾ ವೇದದ ಶಾಖೆಗಳಲ್ಲಿ ಕಂಡುಬರುವ ಪರಸ್ಪರ ವ್ಯತ್ಯಾಸಗಳು ಬಾಹ್ಯವೇ ಹೊರತು ಮೂಲಭೂತವಲ್ಲ. ಆಯಾ ವೇದದ ಶಾಖೆಗಳು, ಅವುಗಳ ಪರಸ್ಪರ ವ್ಯತ್ಯಾಸ-ಇವನ್ನು ಗುರುಪರಂಪರೆಯನ್ನು ಸರಿಸಿ ಬಂದ ಚರಣರೂಪದಲ್ಲಿ ಪ್ರತಿಪಾದಿಸುವ ರಚನೆಯೇ ಚರಣವ್ಯೂಹ. ಉದಾ: ಋಗ್ವೇದಕ್ಕೆ ಸಂಬಂಧಪಟ್ಟ ಒಂದು ಚರಣವ್ಯೂಹ. ಇದರಲ್ಲಿ ಶಾಕಲ, ಬಾಷ್ಕಲ, ಆಶ್ವಲಾಯನ, ಶಾಂಖಾಯನ, ಮಾಂಡೂಕೇಯ ಎಂಬುದಾಗಿ ಆ ವೇದದ ಐದು ಶಾಖೆಗಳ ವಿಚಾರವಿದೆ.

ವೈದಿಕ ಸಾಹಿತ್ಯದ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕ, ಉಪನಿಷತ್ತುಗಳು ಶ್ರುತಿಯಲ್ಲೂ, ಅವುಗಳ ವಿವರಣೆಗಳನ್ನೊಳಗೊಂಡ ಶಿಕ್ಷಾದಿ ವೇದಾಂಗಗಳು ಸ್ಮೃತಿಯಲ್ಲೂ ಸಾಂಪ್ರದಾಯಿಕವಾಗಿ ಸೇರಿಸಲ್ಪಟ್ಟಿವೆಯಷ್ಟೆ. ವೇದಾಂಗಗಳ ಕಾಲದಲ್ಲೇ ರಚಿತವಾಗಿ ಅವುಗಳ ಜೊತೆಯಲ್ಲಿ ಸಾಮಾನ್ಯವಾಗಿ ಅನುಬಂಧಗಳಂತೆ ಸೇರಿಕೊಂಡು ಬಂದಿರುವ ಪರಿಶಿಷ್ಟಗಳು ಮಂತ್ರ ಮುಂತಾದವುಗಳ ಅಕಾರಾದಿ ಪಟ್ಟಿಗಳಾದ ಅನುಕ್ರಮಣಿಕೆಗಳು[] ಮತ್ತು ವೇದ ಶಾಖೆಗಳ ವಿವರಗಳನ್ನೊಳಗೊಂಡ ಚರಣವ್ಯೂಹಗಳು ವೇದವಿವರಣೆಯ ದೃಷ್ಟಿಯಿಂದ ಮಹತ್ತ್ವವನ್ನು ಪಡೆದಿವೆ.

ಉಲ್ಲೇಖಗಳು

[ಬದಲಾಯಿಸಿ]
  1. V. S. Apte. A Practical Sanskrit Dictionary. p. 429, middle column
  2. V. S. Apte. A Practical Sanskrit Dictionary, p. 913, left column.
  3. Monier-Williams, A Sanskrit-English Dictionary, p. 1062, right column.
  4. Max Müller, F. (1860) A History of Ancient Sanskrit Literature So Far As It Illustrates the Primitive Religion of the Brahmans, London:Williams and Norgate, pp.215-29
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: