ವಿಷಯಕ್ಕೆ ಹೋಗು

ಚಯಾಪಚಯೀ ರೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಗಡ್ಡಿ ರೋಗದ ಉದಾಹರಣೆ

ಚಯಾಪಚಯೀ ರೋಗಗಳು ಎಂದರೆ ದೇಹದಲ್ಲಿ ನಿರಂತರವಾಗಿಯೂ, ವ್ಯವಸ್ಥಿತವಾಗಿಯೂ ನಡೆಯಬೇಕಾಗಿರುವ ರಾಸಾಯನಿಕ ಪರಿವರ್ತನೆಗಳ ಏರುಪೇರುಗಳೇ ಪ್ರಧಾನವಾಗಿ ಕಂಡುಬರುವ ರೋಗಸ್ಥಿತಿಗಳು (ಮೆಟಬಾಲಿಕ್ ಡಿಸೀಸಸ್). ಜೀವವನ್ನು ಗುರುತಿಸುವ ಸಂತಾನೋತ್ಪತ್ತಿ, ಬೆಳವಣಿಗೆ, ಚಲನೆ ಮುಂತಾದ ಎಲ್ಲ ಜೀವಕ್ರಿಯೆಗಳ ಮೂಲ ರಸಾಯನ ಕ್ರಿಯೆ. ಜೀವಕ್ರಿಯೆಯು ಲಕ್ಷಾಂತರ ರಸಾಯನ ಕಾರ್ಯಗಳ ವ್ಯವಸ್ಥೆಯ ಫಲ; ಇಂಥ ಕಾರ್ಯಗಳ ಚಯಾಪಚಯ ಕ್ರಿಯೆ ಬಹುವಾಗಿ ವ್ಯವಸ್ಥಿತ ರಸಾಯನ ಕಾರ್ಯಗಳ ಸರಣಿಗಳಾಗಿರುತ್ತವೆ. ಈಗ, ಅವಶ್ಯಕವಾದ ಒಂದು ರಸಾಯನ ಕಾರ್ಯದ ವೇಗ ಹೆಚ್ಚುಕಡಿಮೆಯಾದಾಗ ಅದು ರೋಗದಲ್ಲಿ ಪರ್ಯವಸಾನವಾಗುವುದು ಸಾಧ್ಯ. ಅಲ್ಲದೆ ಅನೇಕ ರೋಗಗಳಲ್ಲೂ ರೋಗದಿಂದಾಗಿಯೇ ಈ ರೀತಿ ವೇಗ ವ್ಯತ್ಯಾಸವಾದ ರಸಾಯನ ಕ್ರಿಯೆ ಇರುತ್ತದೆ. ಅಂದರೆ ಕಾರ್ಯಕಾರಣಗಳು ಯಾವುವೇ ಇರಲಿ, ಎಲ್ಲ ಕಾಯಿಲೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಚಯಾಪಚಯ ವ್ಯತ್ಯಾಸವಾಗಿ ಇದ್ದೇ ಇರುತ್ತದೆ ಎಂದೆನ್ನಬಹುದು.

ದೇಹದಲ್ಲಿನ ಅಪಸಾಮಾನ್ಯ ರಾಸಾಯನಿಕ ಕ್ರಿಯೆಗಳು ಸಾಮಾನ್ಯ ಚಯಾಪಚಯೀ ಪ್ರಕ್ರಿಯೆಯನ್ನು ಮಾರ್ಪಡಿಸಿದಾಗ ಚಯಾಪಚಯಿ ರೋಗಗಳು ಉಂಟಾಗಬಹುದು.[]

ರಸಾಯನ ಕಾರ್ಯ ಸಾಧ್ಯವಾಗಲು ಕನಿಷ್ಠ ಮೂರು ಅವಶ್ಯಕ ವಸ್ತುಗಳು ಬೇಕು:

  • ರಸಾಯನ ವಸ್ತುಗಳು,
  • ರಸಾಯನ ಕ್ರಿಯೆಗಳ ವೇಗೋತ್ಕರ್ಷಕಗಳು ಮತ್ತು
  • ಈ ಕಾರ್ಯಗಳ ನಿಯಂತ್ರಣ ಕಾರ್ಯಭಾರ ಹೊಂದಿರುವ ದೂತವಸ್ತುಗಳು.

ಇವು ಮೂರೂ ಇದ್ದಾಗ ರಸಾಯನ ವಸ್ತುಗಳು ಬದಲಾವಣೆ ಹೊಂದಿ ಉದ್ದೇಶಿತ ವ್ಯವಸ್ಥೆಯ ಸರಣಿಯಲ್ಲಿ ಪಾಲ್ಗೊಳ್ಳುವುದು ಸಾಧ್ಯ. ಈ ಅವಶ್ಯಕ ವಸ್ತುಗಳಲ್ಲಿ ಯಾವುದಾದರೊಂದು ಹೆಚ್ಚುಕಡಿಮೆಯಾದರೂ ರಸಾಯನ ಕಾರ್ಯದ ವೇಗ ಕುಂಠಿತವಾಗಿ ರೋಗ ಪ್ರಾರಂಭವಾಗಬಹುದು.

ಚಯಾಪಚಯೀ ರೋಗಗಳ ರೀತಿಗಳು

ಚಯಾಪಚಯೀ ರೋಗಗಳು ಮೂರು ರೀತಿಯವಾಗಿವೆ:

  • ಪೌಷ್ಟಿಕಗಳ ಕೊರತೆಯಿಂದಾದವು,
  • ಆಜನ್ಮವಾಗಿ ಎಂಜೈಮುಗಳ ಕೊರತೆಯಿಂದಾದವು ಮತ್ತು
  • ನಿಯಂತ್ರಿಸುವ ರಸದೂತಗಳ ಕೊರತೆಯಿಂದಾದವು.

ಇವಲ್ಲದೆ ಅವ್ಯಕ್ತ ಕಾರಣಗಳಿಂದಲೂ ಚಯಾಪಚಯೀ ರೋಗಗಳುಂಟಾಗಬಹುದು. ಒಗ್ಗದಿಕೆ (ಅಲರ್ಜಿ), ಸಂಧಿವಾತ ಇತ್ಯಾದಿಗಳು ಆಹಾರದಲ್ಲಿರಬೇಕಾದ ಕಾರ್ಬೋಹೈಡ್ರೇಟುಗಳು, ಕೊಬ್ಬು, ಪ್ರೋಟೀನ್, ಜೀವಸತ್ತ್ವ, ಲವಣ ಮುಂತಾದವು ಸಾಕಷ್ಟು ಇರದೆ ತಲೆದೋರಬಹುದು. ಆಹಾರದಲ್ಲಿ ಉತ್ತಮ ಪ್ರೋಟೀನ್ ಬೇಕಾಗಿರುವಷ್ಟು ಇಲ್ಲದೆ ಬರುವ ಕ್ವಾಷಿಯಾರ್ಕರ್ ಎಂಬ ಕೈಕಾಲು ಸಣ್ಣ, ಹೊಟ್ಟೆ ದಪ್ಪವಾದ, ಊದಿದ ಯಕೃತ್ (ಲಿವರ್) ಮುಂತಾದ ರೋಗ ಚಿಹ್ನೆಗಳಿರುವ ಚಿಕ್ಕಮಕ್ಕಳ ಕಾಯಿಲೆ, ಜೀವಸತ್ತ್ವಗಳ ಅಭಾವದಿಂದ ಆಗುವ ಹಕ್ಕಿಕಡಪು, ಚರ್ಮರೋಗಗಳು ಮುಂತಾದವು ಈ ಗುಂಪಿಗೆ ಸೇರಿದವು.

ಜೀವರಸಾಯನ ಕಾರ್ಯಗಳ ವೇಗವನ್ನು ಹೆಚ್ಚಿಸುವ ಎಂಜೈಮುಗಳು ಪ್ರೋಟೀನುಗಳು. ಆದ್ದರಿಂದ ಅವುಗಳ ತಯಾರಿಕೆ ತತ್ಸಂಬಂಧ ಆಲೇಖ್ಯವನ್ನು ಒದಗಿಸುವ ನ್ಯೂಕ್ಲಿಯಿಕ್ ಆಮ್ಲದ ಗುಂಪಿಗೆ ಸೇರಿರುವ ಜೀನುಗಳನ್ನು ಅವಲಂಬಿಸಿದೆ. ಒಂದು ಪ್ರೋಟೀನಿಗೆ ಅಥವಾ ಅದರ ಭಾಗವಾದ ಒಂದು ಪಾಲಿಪೆಪ್ಟೈಡಿಗೆ ಒಂದು ಜೀನ್ ಎಂಬುದು ಬಹುಪಾಲು ಸತ್ಯ. ಈ ಜೀನ್ ತಂದೆತಾಯಿಯರಿಂದ ಅವರ ಸಂತಾನಕ್ಕೆ ಬರುತ್ತದೆ. ಆದ್ದರಿಂದ ಸಂತಾನದ ಕ್ರೋಮೊಸೋಮಿನಲ್ಲಿ ಯಾವುದಾದರೊಂದು ಜೀನ್ ಇಲ್ಲದಿದ್ದರೆ ಅದರಿಂದಲೇ ಉತ್ಪತ್ತಿಯಾಗಬೇಕಾಗಿದ್ದ ಎಂಜೈಮ್ ಪ್ರೋಟೀನಿನ ತಯಾರಿಕೆ ನಡೆಯುವುದಿಲ್ಲ. ತತ್ಪರಿಣಾಮವಾಗಿ ಈ ಎಂಜೈಮ್ ವೇಗೋತ್ಕರ್ಷಕವಾಗಿ ಮಾಡಬೇಕಾದ ರಸಾಯನಕಾರ್ಯದ ವೇಗದಲ್ಲಿ ವ್ಯತ್ಯಾಸ ಉಂಟಾಗಿ ಚಯಾಪಚಯ ಕ್ರಿಯೆಯ ವ್ಯವಸ್ಥೆ ಏರುಪೇರಾಗಬಹುದು ಮತ್ತು ಕಾಯಿಲೆ ಬರಬಹುದು. ತಂದೆತಾಯಿಯರಿಂದ ದತ್ತವಾಗಿ ಬರುವ ಈ ರೀತಿಯ ಕಾಯಿಲೆ ಬಲು ಅಪರೂಪ. ಸೋದರಿಕೆಯ ಸಂಬಂಧದ ಸಂತಾನಗಳಲ್ಲಿ ಈ ಲೋಪಗಳು ಮೇಲೇಳುವುದು ಹೆಚ್ಚು ಸಾಧ್ಯ. ಆದ್ದರಿಂದಲೇ ಸೋದರಿಕೆ ಸಂಬಂಧ ಈ ದೃಷ್ಟಿಯಲ್ಲಿ ಅಷ್ಟು ಯೋಗ್ಯವಲ್ಲ.

ಜೀನಿನ ಲೋಪದೋಷಗಳಿಂದ ಬರುವ ರೋಗಗಳು

[ಬದಲಾಯಿಸಿ]
                          ಚಯಾಪಚಯೀ ರೋಗಗಳು

             ಪಟ್ಟಿ 1 ಜೀನಿನ ಲೋಪದೋಷಗಳಿಂದ ಬರುವ ರೋಗಗಳು
   ಹೆಸರು	    ಲೋಪವಾದ ಅಥವಾ ದೋಷಪೂರಿತವಾದ ಎಂಜೈಮ್, ಪ್ರೋಟೀನ್ ಅಥವಾ ವಿವರಣೆ
ಹೀಮೊಫಿಲಿಯ	            ರಕ್ತ ಹೆಪ್ಪುಗಟ್ಟಲು ಬೇಕಾದ ಗ್ಲೋಬುಲಿನ್ನಿನ (8ನೆ ಅಂಶ) ಅಭಾವ
ಹೀಮಗ್ಲೋಬಿನೊಪತೀಸ್	                  ವಿಶೇಷ ಹೀಮಗ್ಲೋಬಿನ್ನುಗಳು
ಪಾರ್‌ಫೀರೀಯ	                     ಯೂರೊಪಾರ್‌ಪೈರಿನಿನ ಹೆಚ್ಚಿದ ವಿಸರ್ಜನೆ[]
ಮೆಥಿಮೊಗ್ಲೋಬಿನೀಮಿಯ	                 ಮೆಥಿಮೊಗ್ಲಾಬಿನ್ ರಿಡಕ್ಟೇಸ್
ಕ್ರಿಗ್‌ಲರ್-ನಜ್ಜಾರ್ ಕಾಯಿಲೆ	             ಬಿಲಿರುಬಿನನ್ನು ಗ್ಲೂಕರೊನೈಡನ್ನಾಗಿಸುವ ಎಂಜೈಮ್
ಸಿಸ್ಟೀನ್‌ಯೂರಿಯ	          ಮೂತ್ರದಲ್ಲಿ ಸಿಸ್ಟೀನ್, ಲೈಸೀನ್, ಆರ್ನಿಥೀನ್ ಅಮೈನೋ ಆಮ್ಲಗಳ ಹೆಚ್ಚಿದ ವಿಸರ್ಜನೆ[]
ಫಾನ್ಕೊನೀ ಕಾಯಿಲೆ	                      ಅಮೈನೋ ಆಮ್ಲಗಳ ಹೆಚ್ಚಿನ ವಿಸರ್ಜನೆ
ಹೊಮೊಸಿಸ್ಟೀನ್‍ಯೂರಿಯ	               ಸಿಸ್ಟಥಯೋನ್ ತಯಾರಿಕಾ ಎಂಜೈಮ್
ಮೇಪಲ್ ಪಾಕರೂಪದ	                ಅಮೈನೋ ಆಮ್ಲ ಡಿಕಾರ್ಬಾಕ್ಸಿಲೇಸ್
ಮೂತ್ರದ ಕಾಯಿಲೆ
ಹೈಪೊಫಾಸ್ಫಟೇಸಿಯ	                             ಆಲ್ಕಲೈನ್ ಫಾಸ್ಟಟೇಸ್[]
ಕ್ಸಾನ್‌ತೀನ್‍ಯೂರಿಯ	                             ಕ್ಸಾನ್‌ತೀನ್ ಆಕ್ಸಿಡೇಸ್[]
ಅನಾಲ್ಬಮಿನಿಮಿಯ	                             ವಸೆಯಲ್ಲಿನ ಆಲ್ಬಮಿನ್[]
ಗೌಚರ್ ಕಾಯಿಲೆ	                   ಅಂಗಾಂಶಗಳಲ್ಲಿ (ಊತಕ) ಸೆರಿಬ್ರೊಸೈಡಿನ ಶೇಖರಣೆ
ನೀಮನ್-ಪಿಕ್ ಕಾಯಿಲೆ	              ಅಂಗಾಂಶಗಳಲ್ಲಿ ಸ್ಫಿಂಗೊಮೈಲಿನ್ ಶೇಖರಣೆ[]
ಟೆ-ಸಾಕ್ಸ್ ಕಾಯಿಲೆ	                           ಗ್ಯಾಂಗ್ಲಿಯೊಸೈಡಿನ ಶೇಖರಣೆ[]
ಗಾರ್‌ಗಾಯ್‌ಲಿಸಮ್	                      ಕಾನ್ಡ್ರಾಯ್ಟಿನ್ ಸಲ್ಫೇಟ್ H ಯ ವಿಸರ್ಜನೆ
(ಹರ್ಲರ್ ಕಾಯಿಲೆ)
ಪೆಂಟೋಸ್‍ಯೂರಿಯ	                         ಕ್ಸೈಲುರೋಸ್ ಡಿ ಹೈಡ್ರೋಜಿನೇಸ್
ಫ್ರಕ್ಟೋಸ್‍ಯೂರಿಯ	                                   ಫ್ರಕ್ಟೊಕೈನೇಸ್[]

                        ಗ್ಲೈಕೊಜನ್ ಶೇಖರಣೆಯ ಕಾಯಿಲೆಗಳು
1. ವಾನ್‌ಗಿರ್ಕಿ ಕಾಯಿಲೆ	                   ಗ್ಲೂಕೋಸ್-6-ಫಾಸ್ಟಟೇಸ್[೧೦]
2. ಹರ್ಸ್ ಕಾಯಿಲೆ	                        ಯಕೃತ್ತಿನ ಗ್ಲೈಕೊಜನ್ ಫಾಸ್ಫೊರೈಲೇಸ್[೧೧]
3. ಪಾಂಪೆ ಕಾಯಿಲೆ	                            ಅಮೈಲೊ ಗ್ಲೂಕೋಸಿಡೇಸ್
4. ಆಂಡರ್‌ಸನ್ ಕಾಯಿಲೆ               ಗ್ಲೈಕೊಜೆನ್ ತಯಾರಿಕೆಗೆ ಬೇಕಾದ ಟ್ರಾನ್ಸ್‌ಗ್ಲೈಕೊಸಿಲೇಸ್

ಜೀನುಗಳ ಲೋಪದೋಷಗಳಿಂದಾಗುವ ರೋಗಗಳು ತೀರ ಅಪರೂಪವಾದರೂ ಆ ರೀತಿಯ ನೂರಾರು ಕಾಯಿಲೆಗಳು ಆಗಲೇ ಬೆಳಕಿಗೆ ಬಂದಿವೆ. ಫೀನೈಲ್ಅಲನೀನ್ ಎಂಬ ಅಮೈನೋ ಆಮ್ಲವನ್ನು ಟೈರೋಸೀನ್ ಆಗಿ ಪರಿವರ್ತಿಸುವ ಎಂಜೈಮಿನ ಅಭಾವದಿಂದ ಫೀನೈಲ್‍ಪೈರುವಿಕ್ ಆಮ್ಲ ದೇಹದಲ್ಲಿ ಶೇಖರಣೆ ಆಗಿ ಮೂತ್ರದಲ್ಲಿ ಹೊರಟುಹೋಗುತ್ತಿರುವುದು; ಫೀನೈಲ್‍ಪೈರುವಿಕ್ ಆಮ್ಲದ ಶೇಖರಣೆಯಿಂದಾಗಿ ಬೌದ್ಧಿಕ ಬೆಳೆವಣಿಗೆ ಕುಂಠಿತವಾಗುವುದು;[೧೨] ಚರ್ಮ, ಕೂದಲು, ಕಣ್ಣುಗಳಲ್ಲಿ ವರ್ಣಾಭಾವದಿಂದ ಬಿಳಿಚಿಕೊಂಡಿರುವ ಆಲ್ಬಿನೋಗಳಿಗೆ ಕಾರಣ ಈ ರೀತಿಯ ಜೀನಿನ ಅಭಾವವೇ. ಇಂಥ ಕಾಯಿಲಸ್ಥರಲ್ಲಿ ಚರ್ಮದ ಬಣ್ಣದ ತಯಾರಿಕೆಗೆ ಬೇಕಾಗುವ ಎಂಜೈಮಿನ ಅಭಾವವಿರುತ್ತದೆ. ಕೆಲವರಲ್ಲಿ ಅವರ ಮೂತ್ರವನ್ನು ವಾಯುವಿಗೆ ತೆರೆದಿಟ್ಟಾಗ ಅದು ಸ್ವಲ್ಪ ಹೊತ್ತಿನಲ್ಲಿಯೇ ಕಂದು ಬಣ್ಣ ತಳೆಯುವುದು.[೧೩] ಇಂಥವರಲ್ಲಿ ಹೋಮೊಜೆಂಟಿಸಿಕ್ ಆಮ್ಲದ ಉತ್ಕರ್ಷಣೆಗೆ ಬೇಕಾದ ಎಂಜೈಮ್ ಇಲ್ಲದೆ, ದೇಹದಲ್ಲಿ ಅದು ವಿಲೇವಾರಿ ಆಗದೆ ಶೇಖರಣೆಯಾಗಿ ಈ ರಸಾಯನವಸ್ತು ಮೂತ್ರದಲ್ಲಿ ಹೋಗುವುದು. ಇದು ವಾಯು ಸಂಪರ್ಕದಲ್ಲಿ ಕಂದುಬಣ್ಣದ ವಸ್ತುವಾಗುತ್ತದೆ. ಈ ರೋಗದಿಂದ ಅಂಥ ತೊಂದರೆಯಿಲ್ಲ. ಆದರೆ ಹಾಲಿನ ಸಕ್ಕರೆಯಾದ ಲ್ಯಾಕ್ಟೋಸಿನಲ್ಲಿ ಒಂದು ಅಂಶವಾಗಿರುವ ಗೆಲಾಕ್ಟೋಸ್ ಎಂಬ ಸಕ್ಕರೆಯನ್ನು ಗ್ಲೂಕೋಸಾಗಿ ಪರಿವರ್ತನೆಮಾಡಲು ಬೇಕಾಗುವ ಎಂಜೈಮಿನ ಅಭಾವವಿದ್ದರೆ ಬರುವ ಕಾಯಿಲೆ ಬಲು ಅಪಾಯಕಾರಿ.[೧೪] ಅಂಥ ಮಕ್ಕಳ ಬುದ್ಧಿಯ ಬೆಳೆವಣಿಗೆ ಕಡಿಮೆಯಾಗಿ ಕಣ್ಣಿನ ಪರೆ ತನ್ನ ಪಾರಕತೆಯನ್ನು ಕಳೆದುಕೊಂಡು ಕುರುಡಾಗಬಹುದು. ಇವಲ್ಲದೆ ಸಿಸ್ಟೀನ್ ಅಮೈನೋ ಅಮ್ಲವನ್ನೂ, ಪೆಂಟೋಸ್ ಮುಂತಾದ ಕಾರ್ಬೊಹೈಡ್ರೇಟುಗಳನ್ನೂ ಉಪಯೋಗಿಸಿಕೊಳ್ಳಲಾಗದೆ ಮೂತ್ರದಲ್ಲಿ ಕಳೆದುಕೊಳ್ಳುವ ರೋಗಗಳೂ, ರಕ್ತ ಹೆಪ್ಪುಗಟ್ಟಲು ಬೇಕಾದ ರಸಾಯನ ವಸ್ತುಗಳ ಅಭಾವ, ಸ್ಟಿರಾಯ್ಡ್ ಗುಂಪಿಗೆ ಸೇರಿದ, ಅತ್ಯಾವಶ್ಯಕ ಹಾರ್ಮೋನುಗಳ ಸಿದ್ಧತೆಗೆ ಬೇಕಾದ ಎಂಜೈಮುಗಳ ಲೋಪದಿಂದಾಗುವ ರೋಗಗಳೂ ಮೇಲೆ ಹೇಳಿದ ಕಾಯಿಲೆಗಳ ಗುಂಪಿಗೆ ಸೇರಿದವು. ಈ ರೀತಿಯ ಜೀನಿನ ಲೋಪದೋಷಗಳ ಪರಿಣಾಮದಿಂದ ಉಂಟಾದ ಕೆಲವು ರೋಗಗಳ ಪಟ್ಟಿಯನ್ನು ಕೊಟ್ಟಿದೆ. ಮೊದಲು ವಿವರಿಸಿದ ರೋಗಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.

ರಸಾಯನಕಾರ್ಯದ ನಿಯಂತ್ರಣದಲ್ಲಿ ಏರುಪೇರು ಆದಾಗ ಬರುವ ರೋಗಗಳು

[ಬದಲಾಯಿಸಿ]

ರಸಾಯನಕಾರ್ಯದ ನಿಯಂತ್ರಣದಲ್ಲಿ ಏರುಪೇರು ಆದಾಗ ಬರುವ ರೋಗಗಳು ಮೂರನೆಯ ಗುಂಪಿಗೆ ಸೇರಿದವು. ಈ ನಿಯಂತ್ರಣ ವ್ಯವಸ್ಥೆಯ ಕಾರ್ಯ ಮುಖ್ಯವಾಗಿ ಹಾರ್ಮೋನುಗಳಿಗೆ ಸೇರಿದ್ದು ಮೇದೋಜೀರಕಾಂಗದ ಅಂತಃಸ್ರಾವವಾದ ಇನ್ಸುಲಿನ್ ಕಡಿಮೆಯಾದರೆ ಬರುವ ಸಕ್ಕರೆ ಕಾಯಿಲೆ, ಥೈರಾಯಿಡ್ ಗ್ರಂಥಿಯ ಸ್ರವಿಕೆಯ ಕೊರತೆಯಿಂದ ಕುಬ್ಜತನದೊಂದಿಗಿರುವ ಹೆಡ್ಡತನ ಮತ್ತು ಮಿಕ್ಸಡೀಮ ಎಂಬ ವಯಸ್ಕರ ಕಾಯಿಲೆ, ಪಿಟ್ಯುಟರಿ ಗ್ರಂಥಿಯ ಮತ್ತು ಲೈಂಗಿಕ ಹಾರ್ಮೋನುಗಳ ತಯಾರಿಕೆ ಹೆಚ್ಚುಕಡಿಮೆಯಾದಾಗ ಬರುವ ಕಾಯಿಲೆಗಳು-ಇವೆಲ್ಲವೂ ಈ ಚಯಾಪಚಯ ರೋಗಗಳ ಗುಂಪಿಗೆ ಸೇರಿವೆ. ವಿಷಕ್ರಿಮಿಗಳು ತರುವ ರೋಗಗಳಲ್ಲೂ ಹೀಗೆಯೇ. ಅವು ಬೆಳೆಯುವಾಗ ನೇರವಾಗಿ ಅಥವಾ ಪರೋಕ್ಷವಾಗಿ ಒಂದು ಅಥವಾ ಹಲವಾರು ರಸಾಯನ ಕಾರ್ಯಗಳ ವೇಗವನ್ನು ಹೆಚ್ಚುಕಡಿಮೆ ಮಾಡಿ ವಿಶಿಷ್ಟವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ. ಇವಲ್ಲದೆ ಮೇಲೆ ಹೇಳಿದ ನಿರ್ದಿಷ್ಟ ಗುಂಪಿಗೆ ಸೇರದ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಲರ್ಜಿ, ಏಡಿಗಂತಿ ರೋಗಗಳು, ಆರ್ತರೈಟಿಸ್ ಮುಂತಾದವುಗಳೂ ಚಯಾಪಚಯೀ ರೋಗಗಳು.

ಅಂಗದೋಷರೋಗಗಳ ಮೂಲವೂ ಈ ರೀತಿ ಏರುಪೇರಾದ ಚಯಾಪಚಯ ಕ್ರಿಯೆಯೇ ಆಗಿರುತ್ತದೆ. ಜೀವಕೋಶದಲ್ಲಿನ ಘಟಕಗಳೂ, ಅವುಗಳ ಹೊರಮೈ ಮತ್ತು ಜೀವಕೋಶಗಳ ಸಮುದಾಯದ ವ್ಯವಸ್ಥೆ ಹೊಂದಿರುವ ಯಕೃತ್ತು, ಮೂತ್ರಜನಕಾಂಗ, ಹೃದಯ, ರಕ್ತನಾಳಗಳು ಮುಂತಾದ ಅಂಗಾಂಗಗಳೂ ಅವುಗಳ ಬೆಳೆವಣಿಗೆ ಮತ್ತು ಆರೋಗ್ಯ ಸಹಜವಾಗಿಯೇ ರಸಾಯನ ಕಾರ್ಯಗಳನ್ನು ಅವಲಂಬಿಸಿವೆ. ಆದ್ದರಿಂದ ರಸಾಯನ ಕಾರ್ಯದ ವೇಗ ಹೆಚ್ಚು ಅಥವಾ ಕಡಿಮೆಯಾದ ಪರಿಸ್ಥಿತಿ ಉತ್ತಮಗೊಳ್ಳದೆ, ವಾಸಿಯಾಗದೆ ಇದ್ದರೆ ಅಂಗರಚನೆಯಲ್ಲಿ ದೋಷಬಂದು ಅಂಗ ದೋಷರೋಗಗಳಿಗೆ ಬಲಿಯಾಗಬೇಕಾಗಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Metabolic Disorders". MedlinePlus. National Library of Medicine. Archived from the original on 4 July 2016. Retrieved 27 July 2015.
  2. "porphyria". MedlinePlus. July 2009. Retrieved 31 March 2021.
  3. Ahmed, K.; Dasgupta, P.; Khan, M. S. (2006). "Cystine calculi: Challenging group of stones". Postgraduate Medical Journal. 82 (974): 799–801. doi:10.1136/pgmj.2005.044156. PMC 2653923. PMID 17148700.
  4. "Hypophosphatasia". Genetics Home Reference.
  5. Ichida K, Amaya Y, Kamatani N, Nishino T, Hosoya T, Sakai O (1997). "Identification of two mutations in human xanthine dehydrogenase gene responsible for classical type I xanthinuria". J. Clin. Invest. 99 (10): 2391–7. doi:10.1172/JCI119421. PMC 508078. PMID 9153281.
  6. Watkins S, Madison J, Galliano M, Minchiotti L, Putnam FW (1994). "Analbuminemia: three cases resulting from different point mutations in the albumin gene". Proc. Natl. Acad. Sci. U.S.A. 91 (20): 9417–21. Bibcode:1994PNAS...91.9417W. doi:10.1073/pnas.91.20.9417. PMC 44823. PMID 7937781.
  7. "Neimann-Pick Disease". Genetics Home Reference. NIH. January 2008. Retrieved 2 October 2012.
  8. "Tay–Sachs disease". Genetics Home Reference. October 2012. Archived from the original on 13 May 2017. Retrieved 29 May 2017.
  9. Steinmann B, Santer R (2012). "Disorders of Fructose Metabolism". In Saudubray JM, van den Berghe G, Walter JH (eds.). Inborn Metabolic Diseases: Diagnosis and Treatment (5th ed.). New York: Springer. pp. 157–165. ISBN 978-3-642-15719-6.
  10. Stryer, Lubert; Berg, Jeremy Mark; Tymoczko, John L. (2007). Biochemistry. San Francisco: W.H. Freeman. ISBN 978-0-7167-8724-2.
  11. Glycogen-Storage Disease Type VI at eMedicine
  12. Cannon Homaei S, Barone H, Kleppe R, Betari N, Reif A, Haavik J (November 2021). "ADHD symptoms in neurometabolic diseases: Underlying mechanisms and clinical implications". Neuroscience and Biobehavioral Reviews. 132: 838–856. doi:10.1016/j.neubiorev.2021.11.012. PMID 34774900. S2CID 243983688.
  13. Ranganath LR, Jarvis JC, Gallagher JA (May 2013). "Recent advances in management of alkaptonuria (invited review; best practice article)". J. Clin. Pathol. 66 (5): 367–73. doi:10.1136/jclinpath-2012-200877. PMID 23486607. S2CID 24860734.
  14. Berry GT (1993). "Classic Galactosemia and Clinical Variant Galactosemia". Nih.gov. University of Washington, Seattle. PMID 20301691. Retrieved 17 May 2015.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: