ವಿಷಯಕ್ಕೆ ಹೋಗು

ಚಮತ್ಕಾರೋಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಮತ್ಕಾರೋಕ್ತಿ ಎಂದರೆ ಚಮತ್ಕಾರದ ಮಾತು, ಚಿಕ್ಕ ಪದ್ಯ. ಪಾಶ್ಚಾತ್ಯರು ಇದನ್ನು ಎಪಿಗ್ರಾಂ ಎಂದು ಕರೆದಿದ್ದಾರೆ. ಇದಕ್ಕೆ ನಮ್ಮಲ್ಲಿ ಮುಕ್ತಕ, ಸುಭಾಷಿತ, ಚಾಟೂಕ್ತಿ, ಚಾಟುಪದ್ಯ ಎಂದಿದ್ದಾರೆ; ವಚನ ಎಂದು ಕರೆದರೂ ತಪ್ಪಾಗುವುದಿಲ್ಲ.

ಉದಾಹರಣೆ

[ಬದಲಾಯಿಸಿ]

ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯನ್ನರಿವ ಸತಿಯಾಗಿ,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಇದು ದಿಟವಾಗಿ ಎಪಿಗ್ರಾಂ. ತನ್ನ ಒಂದು ವಿಶಿಷ್ಟ ಚಮತ್ಕಾರದಿಂದ ಅದು ಕೇಳಿದವರ ಆಂತರ್ಯಕ್ಕೆ ನಾಟಿ ನಿಲ್ಲುವುದರಿಂದ ಇಂಥ ಉಕ್ತಿಗೆ ನಾಟುನುಡಿ ಎಂಬ ಅಂಕಿತವೂ ಸಮರ್ಪಕ. ಚಿಕ್ಕ ಶರೀರದಲ್ಲಿ ದೊಡ್ಡ ಚಮತ್ಕಾರವನ್ನು ಬಯ್ತಿಟ್ಟಿರುವುದೇ ಇದರ ಹಿರಿಮೆ. ಇದು ಜೇನುಹುಳುವಿನಂತೆ ಮಕರಂದ ಶೇಖರಿಸುವುದರ ಜೊತೆಗೆ ಮೂತಿಯ ತುದಿಯ ಮುಳ್ಳಿನಿಂದ ಚುಚ್ಚುವುದೂ ಉಂಟು. ಮಾತಿನ ಕೊನೆಯಲ್ಲಿ ಬರುವ ಚುಚ್ಚು, ಕಟಕಿ ಚಮತ್ಕಾರದಿಂದ ಕೂಡಿದ್ದು ಬೆರಗುಗೊಳಿಸುವಂತಿರುತ್ತದೆ.

ಇನ್ನಷ್ಟು ಉದಾಹರಣೆಗಳು, ಲಕ್ಷಣಗಳು

[ಬದಲಾಯಿಸಿ]

ಬ್ವಾಲೊ

[ಬದಲಾಯಿಸಿ]

ಬ್ವಾಲೊವಿನಶ್ಲೋಕವನ್ನು ಪರೀಕ್ಷಿಸಿ-

ಈ ಶಿಲೆಯ ಕೆಳಗೆ ಮಲಗಿದ್ದಾಳೆ ನನ್ನ ಕಾಂತೆ;
ಅವಳಿಗೀಗ ನಿಶ್ಚಿಂತೆ - ನನಗೂ ಅಂತೆ.

ಇದು ಬ್ವಾಲೊ ತಾನು ನೋಡಿದ ಒಂದು ಸಮಾಧಿಲೇಖದ ಆಧಾರದ ಮೇಲೆ ಕಟ್ಟಿದ್ದು. ಮೊದಲನೆಯ ಪಂಕ್ತಿ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಸಂಗತಿಯನ್ನು ವರದಿಗೈಯುತ್ತದೆ. ಎರಡನೆಯ ಅರ್ಧ ಪಂಕ್ತಿ ಅವಳಿಗೀಗ ನಿಶ್ಚಿಂತೆ-ಎಂಬುದನ್ನು ನಾವು ಆಲಿಸಿ, ಪಾಪ, ಗೃಹಿಣಿ ಬಾಳಿನುದ್ದಕ್ಕೂ ಎಷ್ಟು ಕಷ್ಟನಷ್ಟ ಅನುಭವಿಸಿದಳೊ ಸತ್ತಮೇಲೆಯೇ ಆಕೆಗೆ ಶಾಂತಿ!- ಎಂದು ಅನುಕಂಪೆ ತಾಳುತ್ತೇವೆ. ನನಗೂ ಅಂತೆ ಎಂಬ ಸಮಾಪ್ತಿಯ ಉದ್ಗಾರ ಆ ಹೆಂಗಸು ಎಂಥ ಚಂಡಿಯಾಗಿದ್ದಳೊ ಎಂಬ ಊಹೆಯನ್ನು ಹುಟ್ಟಿಸಿ ನಮ್ಮ ಅನುಕಂಪೆಯೆಲ್ಲ ಸಹಿಷ್ಣು ಗಂಡನ ಕಡೆಗೆ ಹರಿಯುವಂತೆ ಮಾಡುತ್ತದೆ.

ಅಮರುಕ

[ಬದಲಾಯಿಸಿ]

ಅಮರುಕನ ಈ ಮುಕ್ತಕವನ್ನು ನೋಡಬಹುದು-

ಹುಬ್ಬುಗಂಟಿಕ್ಕುವುದ ಕಲಿತು ಬಂದಿರುವೆ; ಕಣ್ಣು
ಮುಚ್ಚಲು ಅಭ್ಯಾಸ ನಿಂದಿರುವೆ;
ತಕ್ಷಣ ಮೂಡಲೆಳಸುವ ಮಂದಹಾಸವ ತಡೆದು
ನಿಲ್ಲಿಸಲು ಶಿಕ್ಷಣ ಹೊಂದಿರುವೆ;
ಮೌನ ತಾಲುವುದ ಬಳಕೆಗೆ ತಂದಿರುವೆ; ಚಿತ್ತಕ್ಕೆ
'ಚಪಲಿ, ಎಚ್ಚರಿಕೆ' ಎಂದಿರುವೆ;
ಸ್ವಾಭಿಮಾನದ ಹಗ್ಗದಿಂದೆಲ್ಲವನ್ನು ಕಟ್ಟಿನೊಳಕ್ಕೆ
ತಂದಿರುವೆ: ಸಿದ್ಧಿ ದೈವೇಚ್ಛೆ!

ಒಳ್ಳೆಯ ದಾಂಪತ್ಯದ ಅನ್ಯೋನ್ಯ ಪ್ರೇಮಕ್ಕೆ ಯಾವಾಗಲೂ ಇದೇ ಕಥೆ, ಇದೇ ಶುಚಿ ತಂತ್ರ, ಇದೇ ಸುಗಂಧ, ಸೊಗಸು!

ಗ್ರೀಕರು

[ಬದಲಾಯಿಸಿ]

ಈ ಸ್ವರೂಪದ ನಾಟುನುಡಿಯೇ ಪ್ರಸಿದ್ಧವಾಗಿದ್ದರೂ ನಾಟುನುಡಿಯ ಆರಂಭವೂ, ಪ್ರಾಚೀನ ಗ್ರೀಕರ ಮಧ್ಯೆ ಅದರ ಬೆಳವಣಿಗೆಯೂ ಕೊಂಚ ಬೇರೆಯಾಗಿತ್ತು. ದೇವತೆಗೆ ಮುಡಿಪು ಒಪ್ಪಿಸುವಾಗ ಆ ಪದಾರ್ಥದ ಮೇಲೆ ಈ ಕಾರಣಕ್ಕಾಗಿ ಈ ದಿವಸ ಇದನ್ನು ಇಂಥವನು ಅರ್ಪಿಸಿದ ಎಂದು ಲಿಪಿ ಕೊರೆಸುವುದೇ ಎಪಿಗ್ರಾಂ (ಎಪಿ-ಮೇಲೆ, ಗ್ರಮ್ಮಾ-ಬರೆಹ) ಆಗಿತ್ತು.[] ದೇವೋತ್ತಮ ಜ಼್ಯೂಸನ ವಿಗ್ರಹದ ಪೀಠದಲ್ಲಿ ಕೆತ್ತಿದ ವಾಕ್ಯ: "ಫೀಡಿಯಸ್, ಕಾರ್ಮಿಡೀಸನ ಮಗ, ಆಥೆನ್ಸಿನ ಪೌರ, ನನ್ನನ್ನು ಮಾಡಿದ." ಹಾಗೆಯೇ ಗೋರಿ, ಗೋಪುರ, ಸ್ಮಾರಕ, ಸ್ತಂಭ ಮೊದಲಾದುವುಗಳನ್ನೂ ಎಪಿಗ್ರಾಂ ಆಕ್ರಮಿಸಿತು. ಕೊರೆದು ಬರೆದದ್ದು, ಬಹುಕಾಲ ಉಳಿಯತಕ್ಕದ್ದು ಎಂಬ ಅದರ ಹುಟ್ಟುಗುಣ ಈಗಲೂ ಅಂಟಿಕೊಂಡಿದೆ. ಅದಕ್ಕೆ, ಅದರ ರೂಪ ಎಷ್ಟೇ ಬೇರೆಯಾದರೂ, 'ಎಲಿಜಿಯಾಕ್ ದ್ವಿಪದಿ' ಹುಟ್ಟಿ ಬಂದ ತರುವಾಯ ಅದೇ ಚಮತ್ಕಾರೋಕ್ತಿಗೆ ವಾಹಕವಾಯಿತು. ಗ್ರೀಕರ ಎಪಿಗ್ರಾಂ ಎಲ್ಲವೂ ಭಾವಪೂರ್ಣವಾದ ಉತ್ಕೃಷ್ಟ ಭಾವನೆಯನ್ನು ಅಡಕವಾಗಿ ಸುಂದರವಾಗಿ ನಿರೂಪಿಸಿರುವ ಸುಭಾಷಿತ; ಕೊನೆಗೊಂದು ಚಮತ್ಕಾರ ಸ್ಫುರಿಸಬೇಕಾಗಿಲ್ಲ. ಯಾವ ವಿಷಯ, ಯಾವ ರಸವನ್ನಾದರೂ ಅವು ಪರಿಪೋಷಿಸಬಹುದಾಗಿತ್ತು.

ಗರ್ವದಲಿ ಯಾರು ಗ್ರೀಸನ್ನು ಕಡೆಗಣಿಸಿ ನಕ್ಕಳೊ,
ಯಾರ ಬಾಗಿಲಲಿ ವಿಟತಂಡ ನಿಟ್ಟುಸಿರು ಬಿಟ್ಟಿತೊ
ಆ ಲೆಯಿಸು - ಈ ದರ್ಪಣವ ಮಿನಸ್ಸಳಿಗೆ ಕೊಟ್ಟೆ.
ನಾನಿದುವರೆ ಎಂತಿರುವೆನೆಂಬುದ ನೋಡಲಾರೆ;
ಇನ್ನು ಮುಂದೆ ಎಂತಿರುವೆನೆಂಬುದ ನೋಡಲೊಲ್ಲೆ.
"ಕೇಳಿ, ಕುರುಬರೆ! ಹರ್ಮಿಸನ ಒಲಿಸುವುದು
ಸುಲಭವೇ ಸರಿ;
ಕೊಂಚ ಮಧುವನ್ನೊ ಹಾಲನ್ನೊ ಮೀಸಲಿಟ್ಟರೆ
ಅವನಿಗೆ ಸಾಕು.
ಆ ತೆರನಲ್ಲ ಆಲ್ಕೆಡೀಸು : ಅವನಿಗೆ ಟಗರೇ
ಬೇಕು,
ಒಂದು ಪೂರ್ತಿ; ಕನಿಷ್ಠಪಕ್ಷ ಒಂದು ಕೊಬ್ಬಿದ
ಕುರಿಮರಿ.
ತೋಳಗಳ ತಡೆಯುತ್ತಾನೆ, ದಿಟ. ಎರಡೂ ಒಂದೆ
ಎನ್ನುವೆ ನಾನು;
ಕುರಿ ಮಂದೆಯನು ತೋಳ ತಿಂದರೇನು ಆತ
ತಿಂದರೇನು!
ಸ್ಮೃತಿದೇವತೆಗೆ ಅತಿಬೆರಗು ಬಡಿಯಿತು
ಸ್ಯಾಫೋಳ ಮಧುಮಧುರ ಗೀತವ ಕೇಳಿ;
ನುಡಿದಳು; ನರವರ್ಗವೆಂತು ಪಡೆಯಿತು
ಹತ್ತನೆಯ ಕಲಾದೇವಿಯನು ಹೇಳಿ!

ಶಾಲೆಮಾಸ್ತರ ಮಗಳು ಕದ್ದೋಡಿದಳೊಬ್ಬ ನಲ್ಲನ ಸಂಗ;
ಹುಟ್ಟಿದ ಶಿಶುಗೆ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗ!

ರೋಮನ್ನರು

[ಬದಲಾಯಿಸಿ]

ಪ್ರಾಚೀನ ರೋಮನರ ಲಘು ಕಾವ್ಯಗಳಲ್ಲಿ ವೈಯಕ್ತಿಕತೆಯೂ, ಸ್ವಂತರಾಗಗಳ ಆವೇಶವೂ, ಸ್ವಾಚ್ಛಂದ್ಯವೂ ಹೆಚ್ಚಾಗಿ ಕಂಡುಬರುತ್ತವೆ.

ಕ್ಯಾಟಲಸ್

ಕ್ಯಾಟಲಸ್ ಎಂಬ ಕವಿಶ್ರೇಷ್ಠ ಈ ಧ್ಯೇಯವನ್ನು ಸಾರಿದ:

"ನೈಜ ಕವಿಗಳು ಶುಚಿರ್ಭೂತರಾಗಿರಬೇಕು. ಗೊತ್ತು;
ಅವರ ಪಂಕ್ತಿಗಳ ಬಂಧಿಸಲೇಕೆ ಅದೇ ವಿಧಿಯನಿತ್ತು?"

ಅವನ ಮನೋರಥದ ಹಲವು ಮುಖಗಳನ್ನು ಈ ಚತುಷ್ಪದಿಯಲ್ಲಿ ನೋಡಬಹುದು

ಹಲಕೆಲರು ಓದುಗರು ಪ್ರಾಯಶಃ ಸಿಕ್ಕುವರೆನಗೆ.
ಅವರನಂಜಿಸದು ನಾನೀ ಅಸಂಬದ್ಧ ಹಾಡಿದ್ದು,
ನನ್ನ ಮಸಿಯನಿಂತು ನಾ ಹಾಳು ಮಾಡಿದ್ದು.
ಮನಕಿದನು ತಾರದೆ ದಯದಿ ಕ್ಷಮೆಯಿಕ್ಕುವರೆನಗೆ.

ಕ್ಯಾಟಲಸ್ ಗೀತಕವಿ.

ಮಾರ್ಷಲ್

ಮಾರ್ಷಲ್ ಆದರೊ ಅಪ್ಪಟ ನಾಟುನುಡಿಯ ಕವಿ. 1171 ನಾಟುನುಡಿಗಳ ಜನಕ ಅವನು. ಇವನನ್ನು ಲ್ಯಾಟಿನ್ ನಾಟುನುಡಿಯ ಪ್ರವೀಣನೆಂದು ಪರಿಗಣಿಸಲಾಗಿದೆ.[][][] ಅಶ್ಲೀಲಪಟುವೆಂದು ಅವನನ್ನು ಅವಧಿ ಅವಧಿಗಳಲ್ಲಿ ಶಿಷ್ಟ ಮಂದಿ ಆಕ್ಷೇಪಿಸಿ ಬಹಿಷ್ಕರಿಸಿದರು. ಆದರೆ ನಾಚಿಕೆ ಹುಟ್ಟಿಸುವ ಭಾಗ ಅವನ ಒಟ್ಟು ಬರವಣಿಗೆಯ ಆರನೇ ಒಂದರಷ್ಟು, ಅಥವಾ ಐದನೇ ಒಂದರಷ್ಟು ಮಾತ್ರ. 'ಉಳಿದದ್ದಾವುದೂ ದೂಷಣೀಯವಲ್ಲ. ಅವನೇ ಒಮ್ಮೆ ಹೀಗೆ ಹೇಳಿದ:

ಖಂಡನೆಯ ಮಾತ ಆಡದಿರಲಿ ಎನ್ನ ನಿರಪರಾಧಿ ವಿನೋದದ ವಿರುದ್ಧ;
ಎನ್ನ ಪುಟಗಳಲ್ಲಿ ಚೆಲ್ಲಾಟವಿದ್ದರು ಎನ್ನ ಬಾಳು ಪರಿಶುದ್ಧ.

ಹಿಂದೆ ಬಣ್ಣಿಸಿದ ಚುಚ್ಚುಮುಳ್ಳಿನ ನಾಟುನುಡಿಯನ್ನು ಬಳಕೆಗೆ ತಂದವ ಮಾರ್ಷಲ್; ನಾಟುನುಡಿಯೆಂದೇ ಅದಕ್ಕೆ ಅಡ್ಡ ಹೆಸರು ಬಂದುಬಿಟ್ಟಿದೆ. ಇವು ಮೂರನ್ನು ಪರಿಶೀಲಿಸಿ:

ನನ್ನ ವರಿಸಲು ಪಾಲಳಿಗೆ ಅಪೇಕ್ಷೆ;
ನನಗಾದರೊ ಅವಳ ಕುರಿತು ಉಪೇಕ್ಷೆ,
ಆಕೆ ವೃದ್ಧೆ. ಬಹುಶಃ ಒಪ್ಪುತ್ತಿದ್ದೆ
ಅವಳಾಗಿದ್ದಲ್ಲಿ ಇನ್ನೂ ವೃದ್ಧೆ.

ದೊಡ್ಡವರಿಂದ ಅಲ್ಪವಸ್ತುವನು ಬೇಡುವೆ ಎಂದು;
ಅದಕೂಡ ಆ ದೊಡ್ಡ ಜನ ನಿನಗೆ ನೀಡರು ತಂದು.
ಬರಲೆಂದು, ಮ್ಯಾಥೊ ಆದಷ್ಟು ಕಡಮೆ ಅವಮಾನ
ಅವರ ಬಳಿ ಹೋಗಿ ಕೇಳಿನೋಡೊಂದು ದೊಡ್ಡ ದಾನ.
ಕವಿ ಥಿಯೋಡರನ ನಿಲಯ ಪೂರ್ತಿ ನಾಶಹೊಂದಿತು ಬೆಂಕಿಯಿಂದ.
ಅದು ನಿಮಗೆ ಸಂತಸವೆ, ಕಲಾದೇವಿಯರೆ, ಸ್ವಾಮಿ ಫೀಬಸನೆ?
ಎಂತ ಘನಪಾತಕ, ಅನ್ಯಾಯ, ದೈವಾಪವಾದವಾಯಿತು, ನೋಡಿ;
ಅಯ್ಯೊ, ಬೆಂದು ಬೂದಿಯಾಗಲಿಲ್ಲ ಮನೆಯೊಡನೆ ಯಜಮಾನ!

ಹೀಗೆ ಸುಭಾಷಿತ, ಚುಚ್ಚುನುಡಿ ಎಂಬ ಎರಡು ಬಗೆಯ ಮುಕ್ತಕವೂ ಪಾಶ್ಚಾತ್ಯ ಸಾಹಿತಿಗಳಿಗೆ ಮಾದರಿಯಾದುವು. ಎರಡು ಬಗೆಯನ್ನೂ ಅವರು ಆಸಕ್ತಿಯಿಂದ ಬಿತ್ತಿ ಹುಲುಸು ಬೆಳೆ ತೆಗೆದಿದ್ದಾರೆ. ಹಿಂದಿನವರನ್ನು ಸರಿಗಟ್ಟಿದ್ದಾರೆ, ಅಲ್ಲಲ್ಲಿ ಮೀರಿಸಿದ್ದಾರೆ.

ಲೆಸ್ಸಿಂಗ್

[ಬದಲಾಯಿಸಿ]

ಲೆಸ್ಸಿಂಗನ ಒಂದೇ ಪಂಕ್ತಿಯ ನಾಟುನುಡಿಯನು ನೋಡಿ: ಗಲ್ಲಿಗೇರಿಸಿರುವ ಕೊಲೆಪಾತಕಿಯನ್ನು ಕುರಿತದ್ದು, ಈ ನುಡಿ.

ಶಾಂತಿಯಲಿ ಅವಗೆ ವಿಶ್ರಾಂತಿ-ಗಾಳಿ ಬೀಸದೆ ನಿಂತಾಗ.

ಪೀರೋನ್

[ಬದಲಾಯಿಸಿ]

ಫ್ರೆಂಚರ ಪೀರೋನ್ ಅಕಾಡೆಮಿಯ ಸದಸ್ಯನಾಗಲೂ ಪ್ರಯತ್ನಪಟ್ಟರೂ ವಿಜಯಿಯಾಗಲಿಲ್ಲ. ರೋಸಿ ಹೋಗಿ ತನ್ನನ್ನೇ ಕುರಿತು ಸುಳ್ಳು ಸಮಾಧಿಲೇಖವನ್ನು ಕಟ್ಟಿ ಪ್ರಚಾರಮಾಡಿದ.

ಇಲ್ಲಿ ಮಲಗಿರುವ ಪೀರೋನ್, ಅವನಾವೊತ್ತೂ ಅಕಾಡೆಮಿಯ ಸದಸ್ಯನಲ್ಲ.

ಈ ಮಾತಿನ ವ್ಯಂಗ್ಯ, ರಸೋತ್ಕರ್ಷ ಇಡೀ ಪ್ಯಾರಿಸ್ ಪಟ್ಟಣವನ್ನೇ ಕುಣಿದಾಡಿಸಿದಂತೆ.

ವಾಲ್ಟೇರ್

[ಬದಲಾಯಿಸಿ]

ವಾಲ್ಟೇರನ ಗ್ರಂಥಗಳ ತುಂಬ ನಾಟುನುಡಿಗಳು ತುಂಬಿಕೊಂಡಿವೆ:

ನನ್ನ ಮಿತ್ರರಿಂದ ನನ್ನನ್ನು ರಕ್ಷಿಸಲಿ ದೇವರು;
ನನ್ನ ಶತ್ರುಗಳನ್ನು ನಾನೇ ನೋಡಿಕೊಳ್ಳಬಲ್ಲೆ.
ದೇವರು ಒಂದು ಪಕ್ಷ ಇಲ್ಲದಿದ್ದರೆ ಅವನನ್ನು
ಕಲ್ಪಿಸಿಕೊಳ್ಳಲೇಬೇಕು ನಾವು!

ಯಾವುದನ್ನು ಬೇಕಾದರೂ ಸಮರ್ಥಿಸಬಹುದೆಂಬುದನ್ನು ಸಮರ್ಥಿಸುತ್ತದೆ ಚರಿತ್ರೆ.

ಫ್ರಾನ್ಸಿನ ಜನರು, ಅವರ ಭಾಷೆ, ಅವರ ಸಾಹಿತ್ಯ ಎಲ್ಲವೂ ನಾಟುನುಡಿಯಂತೆ ಹ್ರಸ್ವ, ಅರ್ಥಪೂರ್ಣ, ಅನ್ಯಾದೃಶ. ಸೈತಾನ ಪರಿಶುದ್ಧ ಎಂಬ ಬೆಂಕಿಮಾತು ಫ್ರೆಂಚರಿಗೇ ಸಾಧ್ಯ.

ರಾಬರ್ಟ್ ಬರ್ನ್ಸ್

[ಬದಲಾಯಿಸಿ]

ನಾಟುನುಡಿಯ ಮೂಲಕ ಬಿಡಿ ವ್ಯಕ್ತಿಗಳ ಆತ್ಮೀಯ ಪರಿಚಯವನ್ನೂ, ಜನಾಂಗಗಳ ಮುಖ್ಯ ಲಕ್ಷಣಗಳ ನಿಕಟ ಪರಿಚಯವನ್ನೂ ಪಡೆದುಕೊಳ್ಳಬಹುದು. ರಾಬರ್ಟ್ ಬರ್ನ್ಸ್ ಕತ್ತಿಹಿರಿದ ಯೋಧನಂತೆ ಈ ಮಾತನಾಡುತ್ತಾನೆ:

ನಿನ್ನ ವಂಶ ನಡೆಯಿತು, ಗ್ಯಾಲೊವೆ, ಪ್ರಕಾಶ ತೋರಿ,
ಬಹು ವಿಖ್ಯಾತ ಪೂರ್ವಜರು ಹೆಚ್ಚೆ.
ಅಂತೆ ನಡೆಯಿತು ಬಹು ವಿಖ್ಯಾತ ರೋಮನ್ ಹೆದ್ದಾರಿ.
ತನ್ನ ಕೊನೆಯಲದು ಮುಟ್ಟಿತು ಕೊಚ್ಚೆ.

ಷಿಲರ್

[ಬದಲಾಯಿಸಿ]

ಷಿಲರ್ ಕವಿಯ ವಾಣಿ:

ಜೀವವುಳ್ಳ ಭಾವವುಳ್ಳ ಪ್ರಪಂಚದಲ್ಲಿ ಎಲ್ಲಿ
ಹುಡುಕಿದರು ನವ್ಯತೆ ಮೆರೆವ
ಪದಾರ್ಥವೊಂದಿಲ್ಲ, ಹೂವನ್ನು ಬಿಟ್ಟು.
ಅದೇ ಜೀವನದ ಶ್ರೇಷ್ಠ ಸೃಷ್ಟಿ;
ನನ್ನ ಮತಧರ್ಮ ಯಾವುದೆಂದು ಕೇಳುವೆಯ?
ನೀ ಹೆಸರಿಸುವುದೊಂದೂ ಅಲ್ಲ.
ನಾ ಹೆಸರಿಸುವುದೊಂದೂ ಅಲ್ಲವೆ! ಏತಕ್ಕೆ?
ಏತಕ್ಕೆ; ಮತಧರ್ಮಕೋಸುಗ.

ಆಸ್ಕರ್ ವೈಲ್ಡ್

[ಬದಲಾಯಿಸಿ]

ಆಸ್ಕರ್ ವೈಲ್ಡನ ವಿರೋಧಾಭಾಸದ ವಚನ ಶೈಲಿ ಇದು:

ಒರಟುತನವೆನ್ನುವುದು ಇತರರ ನಡತೆ
ಮುಖಕ್ಕಿಂತ ಹೆಚ್ಚು ಸಂಗತಿಯನ್ನು ನಮಗೆ
ಸೂಚಿಸುತ್ತದೆ. ಮುಖವಾಡ
ಸುಂದರ ವಸ್ತುಗಳೆಲ್ಲ ಒಂದೇ ಅವಧಿಗೆ ಸೇರಿದುವು.

ಚೆಸ್ಟರ್‌ಟನ್

[ಬದಲಾಯಿಸಿ]

ಚೆಸ್ಟರ್‌ಟನ್ನನ ಮಾತು:

ಯಾಂತ್ರಿಕ ನಾಗರಿಕತೆಯನ್ನು ಮೆಚ್ಚಬೇಕಾದರೆ
ರೋಮ್ಯಾಂಟಿಕ್ ನೇತ್ರ ಅವಶ್ಯಕ
ಸರಿಯಾದದ್ದು ಸರಿಯೆ, ಯಾರೂ ಅದನ್ನು ಮಾಡದಿದ್ದರೂ
ಹಣವೊಂದು ಅತೀಂದ್ರಿಯ ರಹಸ್ಯ

ಶ್ರೀನಾಥ ಕವೀಶ್ವರ

[ಬದಲಾಯಿಸಿ]

ಆಯಾ ನಾಡಿನವರ ಸ್ವಭಾವವನ್ನು ಸ್ವಲ್ಪಮಟ್ಟಿಗೆ ಸ್ಥೂಲವಾಗಿ ಗುರುತಿಸುವುದಕ್ಕೆ ನಾಟುನುಡಿಯಿಂದ ಸಹಾಯ ದೊರಕೀತು. ಆಂಧ್ರದೇಶದ ಈ ಪದ್ಯಗಳನ್ನು ಪರಿಗಣಿಸಿ: ನೀರಿಲ್ಲದೆ ಧಾವಂತಪಡುತ್ತಿದ್ದಾಗ ಶ್ರೀನಾಥ ಕವೀಶ್ವರ ಆಡಿದ ದ್ವಂದ್ವಾರ್ಥದ ಚಮತ್ಕಾರೋಕ್ತಿ ಇದು.

ಸಿರಿವಂತನಿಗೆ ಸರಿಯಹರು ಹದಿನಾರು ಸಹಸ್ರ
ತರುಣಿಯರು ಹೆಂಡತಿಯರು|
ತಿರುಕನಿಗೆ ಹೆಂಡರಿಬ್ಬರೆ ಪರಮೇಶಾ, ಗಂಗೆ
ಯನು ಬಿಡು ಪಾರ್ವತಿ ಸಾಕು||

ಇದರ ಖಡಾಕಂಡಿತವನ್ನೂ ಬಿರುಸನ್ನೂ ನೋಡಿ.

ಆಡಿದ ಮಾತ ತಪ್ಪಿದನ
ನೋಡಿದವರು ಕತ್ತೆಯ ಮಗನೆಂದರು ಅಯ್ಯೋ|
ಪಾಡೆ, ಮಗನಿವನೇ? ಎಂದು
ಕೂಡೆ ಅತ್ತಿತಂತೆ ಕತ್ತೆ ಘನಸಂಪನ್ನಾ||

ತಮಿಳುನಾಡು

[ಬದಲಾಯಿಸಿ]

ತಮಿಳುನಾಡಿನ ಕೆಲವು ವಚನ ಮಾಣಿಕ್ಯಗಳಿವು.

ನಾಡಾಗು ಇಲ್ಲಿ ಕಾಡಾಗು ಅಲ್ಲಿ.
ಹಳ್ಳವಾಗಿಲ್ಲಿ ತಿಟ್ಟಾಗು ಅಲ್ಲಿ;
ಎಲ್ಲಿ ಮಂದಿ ಒಳ್ಳಿದರೊ ನೀನಲ್ಲಿ
ಒಳ್ಳಿದಳು, ಬೇರಲ್ಲ. ಬಾಳು, ಭೂಮಿ!
ಎಸೆದ ಭಲ್ಲೆಯವ ಹುಡುಕ ಹೋಗಿ ಆನೆಮೆಯ್ಯಿಂ ಭಲ್ಲೆ ಕಿತ್ತು ನಗುವ. ಇರುವೆನೆಂಬುದಾದರೆ
ಹೇಳೆನಗೆ, ಬೇಗ ಹಿಂತಿರುಗುವೆನೆಂಬುದ ಜೀವಂತರಿಗೆ
ಹೇಳು.
ವೇಣು ಇನಿದು ವಾದ್ಯ ಇನಿದು ಎನ್ನುವರು ಮಕ್ಕಳಾಡುವ ತೊದಲ್ನುಡಿಯ
ಕೇಳದವರು.

ಪರ್ಷಿಯ

[ಬದಲಾಯಿಸಿ]

ಪರ್ಷಿಯದ ಕವಿಗಳ ಕೆಲವು ಸಾಲಂಕೃತ ಪದ್ಯಗಳಿವು:

ನನ್ನ ಕಣ್ಣಿನ ಪಾಪೆ ತನ್ನ ಗೂಡೆಂದು
ಆಲೋಚಿಸಿತು ನಿದ್ದೆಹಕ್ಕಿ ನೋಡಿಂದು;
ಅಲ್ಲಿ ರೆಪ್ಪೆ ಕಾಣಿಸಲು ಕೆದರಿ
ನಡುನಡುಗಿತು ಬಲೆಯೆಂದು ಬೆದರಿ
ಓರೆಯೊಳಗಿರುವ ಚಿಕ್ಕ ನದಿ ಖಡ್ಗ; ಅದರ
ತೀರವ ಪಾರಿ
ಮೃತ್ಯು ತಾ ಬರುವುದು ಬಾಯಾರಿ.
ಭರ್ಜಿಯೆ ಕೊಂಬೆ; ಅದರಿಂದ ಸುರಿಯುವುದು
ಕೆಂಪಗೆ ತೋರುತ್ತ
ಹಾಲು ಹಣ್ಣು ರಕ್ತ ಸೋರುತ್ತ.

ಜಪಾನ್

[ಬದಲಾಯಿಸಿ]

ಜಪಾನೀಯರ ಹಾಯ್ಕು ಎಂಬ ನಾಟುನುಡಿಯ ನಮೂನೆಯಿದು-

ಪುರಾತನವಾದ ಕುಂಟೆ
ಕಪ್ಪೆಯೊಂದು ಕುಪ್ಪಳಿಸುತ್ತದೆ
ಜಲದ ಸಪ್ಪುಳ.
ಗುಡಿಯ ಘಂಟೆಯ ಮೇಲೆ
ವಿಶ್ರಾಂತಗೊಳುತ, ಮಲಗಿಹುದು
ಒಂದು ಚಿಟ್ಟೆ
ಈಗಿರುವನೆ, ಎನಗೆ ಕುತೂಹಲ,
ಕೈಯಿನಲ್ಲಿ ಲೇಖನಿ ಪಿಡಿಯದಿಹ ಓರ್ವ ಮನುಷ್ಯ-
ಚಂದ್ರ, ಈ ರಾತ್ರಿ!

ಇದು ಜಪಾನೀಯರಿಗೆ ಒಗ್ಗಿಬಂದ ಕಾವ್ಯಪ್ರಕಾರ, ನಿಜವಾಗಿ ಅನುಕರಣೀಯ. ಅಮೆರಿಕ ಸಂಯುಕ್ತ ಸಂಸ್ಥಾನದ ಕೆಲವು ಕವಿಗಳು ಎಪಿಗ್ರಾಮನ್ನು ತಮ್ಮ ಭಾಷೆಗೆ ತಂದುಕೊಳ್ಳಲು ಶ್ರಮವಹಿಸಿದರು. ಅವರು ಸೋತು ಹೋಗಿದ್ದಾರೆಂದೇ ಬಲ್ಲವರ ಅಭಿಮತ.

ಉಪಸಂಹಾರ

[ಬದಲಾಯಿಸಿ]

ನಾಟುನುಡಿಯ ಮೂಲಗುಣವನ್ನು ಕಂಡುಹಿಡಿದು ಅದರ ದೃಷ್ಟಿಯಿಂದ ಸಮಂಜಸ ವರ್ಗೀಕರಣವನ್ನು ಸ್ಥಾಪಿಸುವುದಕ್ಕೆ ವಿಮರ್ಶಕರು ಪ್ರಯತ್ನಿಸಿದರು. ಸ್ಕ್ಯಾಲಿಜರ್ ಐದು ಗುಂಪಾಗಿ ವಿಂಗಡಿಸಿದ: ಮೆಲ್-ಸಿಹಿ, ಫೆಲ್-ಕಡುಕಹಿ, ಆಸಿಟಮ್-ಹುಳಿ, ಸ್ಯಾಲ್-ಉಪ್ಪು, ಮಲ್ಟಿಪ್ಲೆಕ್ಸ್-ಸಮ್ಮಿಶ್ರ. ಹರ್ಡರ್ ಎಂಬ ಮಹಾಮೇಧಾವಿ ಏಳು ವಿಶೇಷಣಗಳ ಮೂಲಕ ನಾಟುನುಡಿಗಳನ್ನು ಹೀಗೆ ವಿಭಾಗಿಸಿದ: ವಿವರಣಾತ್ಮಕ, ಮಾದರಿ ಕ್ರಮದ, ಚಿತ್ರಾತ್ಮಕ, ರಾಗೋದ್ರೇಕದ, ಕಲಾತಂತ್ರಪೂರಿತ, ಭ್ರಾಂತಿಕಾರಕ ಮತ್ತು ತ್ವರಿತ. ಇಂಥ ವಿಶ್ಲೇಷಣೆಗಳು ಕೂದಲು ಸೀಳಿಕೆಯ ಪಾಂಡಿತ್ಯವನ್ನು ಪ್ರದರ್ಶಿಸುತ್ತವೆ, ಅಷ್ಟೆ.

ಉಲ್ಲೇಖಗಳು

[ಬದಲಾಯಿಸಿ]
  1. "epigram" Archived 2016-05-08 ವೇಬ್ಯಾಕ್ ಮೆಷಿನ್ ನಲ್ಲಿ.. Online Etymology Dictionary.
  2. William Fitzgerald (21 February 2013). How to Read a Latin Poem: If You Can't Read Latin Yet. OUP Oxford. p. 81. ISBN 978-0-19-163204-4.
  3. Kristina Milnor (2014). Graffiti and the Literary Landscape in Roman Pompeii. OUP Oxford. p. 64. ISBN 978-0-19-968461-8.
  4. Sir John Harington (2009). The Epigrams of Sir John Harington. Ashgate Publishing, Ltd. p. 25. ISBN 978-0-7546-6002-6.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: