ಚಮಚಮುಖಿ
| ಚಮಚಮುಖಿಗಳು | |
|---|---|
| ರೋಸಿಯೇಟ್ ಸ್ಪೂನ್‍ಬಿಲ್ | |
| Scientific classification | |
| ಕ್ಷೇತ್ರ: | ಯೂಕ್ಯಾರ್ಯೋಟಾ |
| ಸಾಮ್ರಾಜ್ಯ: | ಅನಿಮೇಲಿಯಾ |
| ವಿಭಾಗ: | ಕಾರ್ಡೇಟಾ |
| ವರ್ಗ: | ಏವೀಸ್ |
| ಗಣ: | ಪೆಲೆಕನಿಫ಼ಾರ್ಮಿಸ್ |
| ಕುಟುಂಬ: | ತ್ರೆಸ್ಕಿಯಾರ್ನಿತಿಡೀ |
| ಉಪಕುಟುಂಬ: | ಪ್ಲಾಟೇಲೆಯ್ನೇ Bonaparte, 1838 |
| ಕುಲ: | ಪ್ಲಾಟೇಲಿಯ Linnaeus, 1758 |
| Type species | |
| ಪ್ಲಾಟೇಲಿಯ ಲ್ಯೂಕೊರಾಡಿಯ (ಯೂರೇಷಿಯನ್ ಸ್ಪೂನ್‍ಬಿಲ್) Linnaeus, 1758
| |
ಚಮಚಮುಖಿ ಎನ್ನುವುದು ಕಬ್ಬಾರೆ, ಕ್ರೌಂಚ (ಹೆರಾನ್), ಕೆಂಪು ಕೊಕ್ಕರೆ, ಮತ್ತು ಐಬಿಸ್‌ಗಳಿಗೆ ಹತ್ತಿರ ಸಂಬಂಧಿಯಾದ ಮತ್ತು ನೀರಿನಲ್ಲಿ ನಡೆದಾಡುವ ಒಂದು ದೊಡ್ಡ ಹಕ್ಕಿ (ಸ್ಪೂನ್‌ಬಿಲ್). ಇದರಲ್ಲಿ ಸುಮಾರು 6 ಪ್ರಭೇದಗಳಿವೆ.[೧] ಇವು ಸಿಕೋನೈಯಿಫಾರ್ಮೀಸ್ (Ciconiiformes) ಗಣದ ತ್ರೆಸ್ಕಿಯಾರ್ನಿತಿಡೀ ಕುಟುಂಬಕ್ಕೆ ಸೇರಿವೆ. ಜೌಗುಪ್ರದೇಶಗಳ ಬಳಿಯೇ ಇವುಗಳ ವಾಸ. ಕೊಕ್ಕು ಉದ್ದವಾಗಿಯೂ, ತುದಿಯಲ್ಲಿ ಚಮಚದಂತೆ ಅಗಲವಾಗಿಯೂ ಇರುವುದರಿಂದ ಇವಕ್ಕೆ ಈ ಹೆಸರು.
ಆಹಾರ
[ಬದಲಾಯಿಸಿ]ಚಮಚದಂಥ ಕೊಕ್ಕಿರುವುದರಿಂದ ತಮ್ಮ ಆಹಾರವಾದ ಕಪ್ಪೆ, ಮೀನು, ಏಡಿ, ಕಠಿಣ ಚರ್ಮಿಗಳು, ಕೀಟಗಳು ಮುಂತಾದ ಜಲಚರ ಪ್ರಾಣಿಗಳನ್ನು ಹಿಡಿದು ತಿನ್ನಲು ಅನುಕೂಲ. ನೀರಿನಲ್ಲಿ ನಡೆದಾಡಲು ಸಹಾಯವಾಗುವಂತೆ ಇವುಗಳ ಕಾಲುಗಳು ಬಲು ಉದ್ದವಾಗಿವೆ. ತಮ್ಮ ಕೊಕ್ಕನ್ನು ಭಾಗಶಃ ತೆರೆದುಕೊಂಡು, ನೀರಿನಲ್ಲಿ ಮುಳುಗಿಸಿ ತಲೆಯನ್ನು ಅತ್ತಿತ್ತ ಆಡಿಸುತ್ತ ಆಹಾರವನ್ನರಸಿಕೊಂಡು ಅಲೆದಾಡುತ್ತವೆ. ಆಹಾರ ಸೇವನೆಯ ಕಾಲ ಬೆಳಗ್ಗೆ ಮತ್ತು ಸಂಜೆ.
ದೇಹರಚನೆ
[ಬದಲಾಯಿಸಿ]ಚಮಚಮುಖಿಗಳ ದೇಹದ ಗಾತ್ರ ಹೆಚ್ಚುಕಡಿಮೆ ಬಾತುಹಕ್ಕಿಯಷ್ಟು. ಭಾರತದಲ್ಲಿ ಕಾಣದೊರೆಯುವ ಪ್ಲಾಟೇಲಿಯ ಲ್ಯೂಕೊರಾಡಿಯ ಪ್ರಭೇದದ ಚಮಚಮುಖಿಯ ದೇಹದ ಬಣ್ಣ ಅಚ್ಚ ಬಿಳಿ, ಕಾಲುಗಳು ಕಪ್ಪು. ಅಮೆರಿಕ ಸಂಯುಕ್ತ ಸಂಸ್ಥಾನ, ವೆಸ್ಟ್ ಇಂಡೀಸ್, ಅರ್ಜೆಂಟೀನ ಮುಂತಾದೆಡೆ ವಾಸಿಸುವ[೨][೩][೪] ಅಜಾಯಿಯ ಅಜಾಜ (ರೋಸಿಯೇಟ್ ಸ್ಪೂನ್‍ಬಿಲ್) ಎಂಬ ಪ್ರಭೇದದ ಚಮಚಮುಖಿಯ ದೇಹದ ಬಣ್ಣ ಗುಲಾಬಿ, ಕಾಲುಗಳು ಕೆಂಪು. ಭಾರತದ ಬಗೆಯಲ್ಲಿ ಹೆಗ್ಗತ್ತಿನ ಮೇಲೆ ಪುಕ್ಕ ಮಕುಟವೊಂದಿದೆ. ಅಮೆರಿಕದ ಚಮಚಮುಖಿಯ ಎದೆಯ ಭಾಗದಲ್ಲಿ ಪುಕ್ಕಗಳ ಗುಚ್ಛವಿದೆ.
ನಡುವಳಿಕೆ
[ಬದಲಾಯಿಸಿ]ಚಮಚಮುಖಿಗಳು ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. V – ಆಕಾರದ ಸಾಲುಗಳಲ್ಲಿ ಹಾರುವುದು ಇವುಗಳ ವಿಶೇಷ ಲಕ್ಷಣ. ನೀರಿನಲ್ಲಿ ಬೆಳೆಯುವ ಜೊಂಡು, ಸಣ್ಣಗಾತ್ರದ ಮರ ಮುಂತಾದವುಗಳಲ್ಲಿ ಒರಟು ಕಡ್ಡಿಗಳನ್ನು, ಎಲೆಗಳನ್ನು ಬಳಸಿಕೊಂಡು ಗೂಡು ಕಟ್ಟುತ್ತವೆ. ಮೆಲ್ದನಿಯ ಗುರುಗುಟ್ಟುವಿಕೆ ಅಥವಾ ಕೊಕ್ಕುಗಳನ್ನು ಪರಸ್ಪರ ತಾಡಿಸಿದಾಗ ಉಂಟಾಗುವ ಲಟಪಟ ಶಬ್ದಗಳನ್ನು ಬಿಟ್ಟರೆ ಇನ್ನಾವ ರೀತಿಯ ಸದ್ದನ್ನೂ ಇವು ಮಾಡವು.
ಸಂತಾನವೃದ್ಧಿ
[ಬದಲಾಯಿಸಿ]ಇವು ಮೊಟ್ಟೆಯಿಡುವ ಕಾಲ ಜುಲೈ-ನವೆಂಬರ್. ಮೊಟ್ಟೆಗಳ ಬಣ್ಣ ಮಾಸಲು ಬಿಳಿ; ಮೇಲೆಲ್ಲ ಕಂದು ಮಚ್ಚೆಗಳುಂಟು; ಸಂಖ್ಯೆ 4-5.
ಇತರ ಪ್ರಭೇದಗಳು
[ಬದಲಾಯಿಸಿ]ಮೇಲೆ ಹೇಳಿದ ಎರಡು ಬಗೆಗಳಲ್ಲದೆ ಇನ್ನಿತರ ಚಮಚಮುಖಿಗಳ ವ್ಯಾಪ್ತಿ ಈ ರೀತಿ ಇದೆ: ಪ್ಲಾಟಿಬಿಸ್ ಫ್ಲೇವಿಪಸ್-ಆಸ್ಟ್ರೇಲಿಯದಲ್ಲಿ ವಾಸಿಸುತ್ತದೆ;[೫] ಪ್ಲಾಟೇಲಿಯ ರೀಜಿಯ-ಆಸ್ಟ್ರೇಲಿಯ, ನ್ಯೂಜೀಲೆಂಡ್, ಪ್ಯಾಪುವಾ ನ್ಯೂ ಗಿನಿ, ಮುಂತಾದೆಡೆ ಕಾಣದೊರೆಯುತ್ತವೆ; ಪ್ಲಾ. ಮೈನರ್-ಕೊರಿಯ, ದಕ್ಷಿಣ ಜಪಾನ್, ದಕ್ಷಿಣ ಚೀನಾ, ಫಿಲಿಪೀನ್ಸುಗಳಲ್ಲಿ ಜೀವಿಸುತ್ತದೆ; ಪ್ಲಾ. ಆಲ್ಬ-ಆಫ್ರಿಕದ ಸಹಾರಾ ಮರುಭೂಮಿಯ ದಕ್ಷಿಣ ಭಾಗ ಮತ್ತು ಮಡಗಾಸ್ಕರ್‌ಗಳಲ್ಲಿ ವಾಸಿಸುತ್ತದೆ.[೬]
ಅಮೆರಿಕದ ಗುಲಾಬಿ ಚಮಚಮುಖಿಯನ್ನು ಚೆಲುವಾದ ರೆಕ್ಕೆಪುಕ್ಕಗಳಿಗಾಗಿ ಬೇಟೆಯಾಡುತ್ತಿದ್ದುದರಿಂದ ಅದು ನಿರ್ವಂಶವಾಗುವ ಸ್ಥಿತಿಗೆ ಬಂದಿತ್ತು. ಆದರೆ ಈಗೀಗ ಕಾನೂನಿನ ರಕ್ಷಣೆ ದೊರೆತಿರುವುದರಿಂದ ಫ್ಲಾರಿಡದ ಕೆಲವು ಪ್ರದೇಶಗಳಲ್ಲಿ ಸಣ್ಣಪುಟ್ಟ ಗುಂಪುಗಳನ್ನು ಕಾಣಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Gill, Frank; Donsker, David; Rasmussen, Pamela, eds. (July 2021). "Ibis, spoonbills, herons, Hamerkop, Shoebill, pelicans". IOC World Bird List Version 11.2. International Ornithologists' Union. Retrieved 12 August 2021.
- ↑ "Roseate Spoonbill". Audubon (in ಇಂಗ್ಲಿಷ್). 2014-11-13. Retrieved 2022-12-31.
- ↑ "Roseate Spoonbill". Waterbird Conservation. National Audubon Society. Archived from the original on 2008-10-24. Retrieved 2009-07-23.
- ↑ Dumas, Jeannette V. 2000. Roseate Spoonbill (Platalea ajaja), The Birds of North America Online (A. Poole, Ed.). Ithaca: Cornell Lab of Ornithology. Retrieved 2009-11-12. (subscription required)
- ↑ Birds Australia (21 December 2005). "Yellow-billed Spoonbill". Birds in Backyards. Sydney, New South Wales: Australian Museum. Retrieved 19 August 2011.
- ↑ "African Spoonbill." Archived July 7, 2011, ವೇಬ್ಯಾಕ್ ಮೆಷಿನ್ ನಲ್ಲಿ. Honoluluzoo.org. Accessed June 2011.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Spoonbill videos on the Internet Bird Collection
