ಚಬ್ ಮೀನು
ಚಬ್ ಮೀನು ಎನ್ನುವುದು ಸಿಪ್ರಿನಿಫಾರ್ಮಿಸ್ ಗಣದ ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಅನೇಕ ಜಾತಿಯ ಮೀನುಗಳಿಗಿರುವ ಸಾಮಾನು ಹೆಸರು. ಇವು ಸಿಹಿ ನೀರು ಮೀನುಗಳು; ಸಣ್ಣಪುಟ್ಟ ನದಿಗಳಲ್ಲಿಯೂ, ಝರಿಗಳಲ್ಲಿಯೂ ವಾಸಿಸುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯಭಾಗ, ಯೂರೋಪ್ ಮುಂತಾದೆಡೆಗಳಲ್ಲಿ ಇವುಗಳ ವ್ಯಾಪ್ತಿ ಉಂಟು.
ದೇಹರಚನೆ
[ಬದಲಾಯಿಸಿ]ತೆಳು ಶರೀರ, ಮೋಟು ತಲೆ, ಗಟ್ಟಿಯಾದ ದವಡೆಗಳು, ಗಂಟಲ ಹಲ್ಲುಗಳು (ಫ್ಯಾರಿಂಜಿಯಲ್ ಟೀತ್), ದವಡೆಯ ಹಿಂಭಾಗದಲ್ಲಿ ತೆಳುವಾದ ಸ್ಪರ್ಶ ರೋಮಗಳು (ಬಾರ್ಬಲ್ಸ್), ಮುಳ್ಳುಗಳಿಲ್ಲದ ಈಜುರೆಕ್ಕೆ, ಉದ್ದವಾದ ಮತ್ತು ಚೂಪಾಗಿ ಕಾಣುವ ಎದೆಯ ಈಜುರೆಕ್ಕೆ, ಕವಲೊಡೆದ ಬಾಲದ ಈಜುರೆಕ್ಕೆ, ಮೈತುಂಬ ಹುರುಪೆಗಳು, - ಇವು ಈ ಮೀನುಗಳ ಪ್ರಮುಖ ಲಕ್ಷಣಗಳು. ಇವು ಭಾರತ ದೇಶದ ಗೆಂಡೆ ಮೀನುಗಳನ್ನು ಹೋಲುತ್ತವೆ. ಸುಮಾರು 4 ರಿಂದ 12 ಇಂಚು ಬೆಳೆಯುತ್ತವೆ.
ಆಹಾರ
[ಬದಲಾಯಿಸಿ]ಕೀಟ ಡಿಂಬಗಳು, ಸಣ್ಣಗಾತ್ರದ ಇತರೆ ಮೀನುಗಳು, ಮತ್ತು ಹಲವು ಬಗೆಯ ಜಲಸಸ್ಯಗಳು ಈ ಮೀನುಗಳ ಆಹಾರ. ಕೆಲವೊಮ್ಮೆ ತಮ್ಮ ಮರಿಗಳನ್ನೇ ತಿನ್ನುವುದುಂಟು.
ಸಂತಾನೋತ್ಪತ್ತಿ
[ಬದಲಾಯಿಸಿ]ಸಂತಾನೋತ್ಪತ್ತಿಯ ಕಾಲದಲ್ಲಿ ಹೆಣ್ಣು ಮೀನುಗಳ ಪಾರ್ಶ್ವ ಮತ್ತು ಉದರ ಭಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸರೋವರ ಇಲ್ಲವೆ, ಕೊಳದ ಅಂಚಿನಲ್ಲಿ, ಅಥವಾ ನದಿಗಳ ನಿಂತ ನೀರಿನ ಮಡುಗಳಲ್ಲಿ, ತಳಭಾಗದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನಿಟ್ಟು ಅದರ ಮೇಲೆ ಮೊಟ್ಟೆಗಳನ್ನಿಡುವುದು ಇದರ ಕ್ರಮ. ಸಾಮಾನ್ಯವಾಗಿ ವಸಂತ ಋತು ಈ ಮೀನುಗಳ ಸಂತಾನೋತ್ಪತ್ತಿಯ ಕಾಲ.
ಪ್ರಭೇದಗಳು
[ಬದಲಾಯಿಸಿ]ಚಬ್ ಮೀನುಗಳಲ್ಲಿ ಅನೇಕ ಪ್ರಭೇದಗಳಿವೆ. ಸೆಮಾಟಿಲಸ್ ಅಟ್ರೊಮ್ಯಾಕ್ಯುಲೇಟಸ್, ಸೆ. ಕಾರ್ಪೊರಾಲಿಸ್ ಜಾತಿಯ ಮೀನುಗಳನ್ನು ಸಾಮಾನ್ಯವಾಗಿ ಬೆಟ್ಟದ ಝರಿಯ ಚಬ್ (ಫಾಲ್ ಫಿಶ್) ಎಂದು ಕರೆಯಲಾಗುತ್ತದೆ. ಸಣ್ಣ ನದಿಗಳಲ್ಲಿ, ಕಲ್ಲುಗಳಿಂದ ಕೂಡಿದ ತಳವಿರುವ ಮಡುಗಳಲ್ಲಿ ಇವು ವಾಸಿಸುತ್ತವೆ.[೧] ಇದು ಒಂದು ಒಳ್ಳೆಯ ಬೇಟೆ ಮೀನು (ಗೇಮ್ ಫಿಶ್). ಟ್ರೌಟ್ ಮೀನಿನ ಅಭಾವದಲ್ಲಿ ಇವುಗಳನ್ನು ಬೇಟೆಯಾಡುವುದುಂಟು. ವಸಂತದಲ್ಲಿ ಇವುಗಳ ತಲೆಯ ಮೇಲೆ ಗಂತಿಗಳು ಬೆಳೆಯುತ್ತವೆ. ನಿಶೇಚಿತ ಅಂಡಗಳ ಸುತ್ತ ಗಂಡು ಮೀನು ಜಲ್ಲಿಯಿಂದ ಗೂಡನ್ನು ನಿರ್ಮಿಸುತ್ತವೆ.
ಬರ್ಮಡ ಚಬ್ ಮೀನು ಸ್ವಚ್ಛವಾದ ಝರಿಗಳಲ್ಲಿ ಕಾಣಸಿಗುವ ಮೀನುಗಳು. ಹೆರಿಂಗ್ ಮೀನುಗಳ ಗುಂಪಿನಲ್ಲಿ ಸಾಮಾನ್ಯವಾಗಿ ಸುತ್ತಾಡುತ್ತಿದ್ದರೂ ಅವುಗಳನ್ನು ಬೇಟೆಯಾಡುವುದಿಲ್ಲ. ಸುಮ್ಮನೆ ಕುತೂಹಲದಿಂದ ಹೆರಿಂಗ್ ಮೀನುಗಳನ್ನು ಹಿಂಬಾಲಿಸುತ್ತವೆ.
ಸ್ಯಾಕ್ರಮೆಂಟೊ ಚಬ್ (ದಪ್ಪವಾದ ಚಬ್) ಕ್ಯಾಲಿಫೋರ್ನಿಯಾ ಕಣಿವೆಯ ನದಿಗಳಲ್ಲಿ ಧಾರಾಳವಾಗಿ ಸಿಗುತ್ತಿತ್ತು. ಪೆಸಿಫಿಕ್ ಡ್ರೈನೇಜ್‌ನಲ್ಲಿ ಕಂಡುಬರುತ್ತಿದ್ದ ಮಿನ್ನೊ ಕುಟುಂಬದ ಕೆಲವೇ ಮೀನುಗಳಲ್ಲಿ ಇದೂ ಒಂದು. ಇದರ ಹುರುಪೆಗಳ ಮೇಲೆ ಗಾಢ ಬಣ್ಣದ ಮಚ್ಚೆಗಳಿದ್ದವು. ಇದರ ಉದ್ದ ಸುಮಾರು 12 ಇಂಚು. ಬಣ್ಣ ಮಬ್ಬು ಕಂದು.
ಬ್ರಿಟಿಷ್ ಕೊಲಂಬಿಯಾದ ಮೈಲೊಕಿಲಸ್ ಕಾರಿನಸ್,[೨][೩] ಯೂರೋಪ್‌ನ ಲ್ಯೂಸಿಸ್ಕಸ್ ಸಿಫಾಲಸ್,[೪] ಉತ್ತರ ಅಮೆರಿಕದ ಹೈಬಾಪ್ಸಿಸ್ ಗಿಲ್ ಮತ್ತು ಪಿಫ್‌ಟೆಲಿಸ್, ಅಮೆರಿಕ ಸಂಯುಕ್ತ ಸಂಸ್ಥಾನದ ನಾಕೊಮಿಸ್ ಇವು ಪ್ರಮುಖ ಬಗೆಯ ಚಬ್ ಮೀನುಗಳು.[೫][೬]
ಉಪಯೋಗಗಳು
[ಬದಲಾಯಿಸಿ]ಎಲ್ಲ ಚಬ್ ಮೀನುಗಳೂ ಒಳ್ಳೆಯ ಎರೆ ಪ್ರಾಣಿಗಳಾಗಿ ಉಪಯುಕ್ತವೆನಿಸಿವೆ.[೭] ದೊಡ್ಡಗಾತ್ರಕ್ಕೆ ಬೆಳೆಯುವ ಚಬ್‍ಗಳನ್ನು ವಿನೋದಕ್ಕಾಗಿ ಅಥವಾ ಆಹಾರಕ್ಕಾಗಿ ಬೇಟೆಯಾಡುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Becker, George C. (1983). Fishes of Wisconsin. Madison: University of Wisconsin. pp. 437–441.
- ↑ "Peamouth - Mylocheilus caurinus". Montana Field Guide. Montana Natural Heritage Program and Montana Fish, Wildlife and Parks. Retrieved 21 November 2017.
- ↑ Froese, Rainer; Pauly, Daniel (eds.) (2017). "Mylocheilus caurinus" in FishBase. November 2017 version.
- ↑ Rainer Froese; Daniel Pauly, eds. (2017). "Squalius cephalus (Linnaeus, 1758) Chub". Fishbase. Retrieved 3 December 2017.
- ↑ NatureServe (2013). "Nocomis asper". IUCN Red List of Threatened Species. 2013: e.T202272A18230447. doi:10.2305/IUCN.UK.2013-1.RLTS.T202272A18230447.en. Retrieved 18 November 2021.
- ↑ Froese, Rainer; Pauly, Daniel (eds.) (2016). "Nocomis asper" in FishBase. October 2016 version.
- ↑ Hatch, Jay T. "Fishes of Minnesota-Hornyhead chub". academics.cehd.umn.edu.
