ಚತುರ್ದಂಡೀ
ಕರ್ನಾಟಕ ಸಂಗೀತದ ಶಾಸ್ತ್ರೀಯ ಗಾನಸಂಪ್ರದಾಯ ಹಿಂದಕ್ಕೆ ಚತುರ್ದಂಡೀ ಗಾನವೆಂದು ಕರೆಯಲ್ಪಡುತ್ತಿತ್ತು. ದಂಡಿ ಎಂದರೆ ಒಂದಕ್ಕೊಂದು ಎಣೆಯಾಗಿ ಮೇಳೈಸಿಕೊಂಡಿರುವುದು ಎಂದರ್ಥ. ರಾಗಾಲಾಪನೆ, ಠಾಯೆ, ಗೀತ, ಪ್ರಬಂಧಗಳೆಂಬ ನಾಲ್ಕು ಅಂಗಗಳು ಶಾಸ್ತ್ರೋಕ್ತ ವಿಧಾನದಿಂದ ಸಮನ್ವಯವಾಗಿ ಸೇರಿಕೊಂಡಿರುವುದೇ ಚತುರ್ದಂಡೀ ಗಾನ.[೧] ಈ ಒಂದೊಂದು ಅಂಗಗಳಿಗೂ ಶಾಸ್ತ್ರದಲ್ಲಿ ವಿಶಿಷ್ಟ ಲಕ್ಷಣಗಳು ನಿರೂಪಿಸಲ್ಪಟ್ಟಿವೆ. ಕ್ರಿ.ಶ. 17ನೆಯ ಶತಮಾನದ ಮಧ್ಯಕಾಲದಲ್ಲಿ ತಂಜಾವೂರಲ್ಲಿ ಆಳಿದ ವಿಜಯ ರಾಘವ ನಾಯಕನ ಆಶ್ರಿತನಾಗಿದ್ದ ವೆಂಕಟಮಖಿ (ವೆಂಕಟೇಶ್ವರ ದೀಕ್ಷಿತ) ತಾನು ರಚಿಸಿದ ಸಂಗೀತಶಾಸ್ತ್ರ ಗ್ರಂಥಕ್ಕೆ ಚತುರ್ದಂಡೀಪ್ರಕಾಶಿಕೆ ಎಂದೇ ಹೆಸರು ಕೊಟ್ಟಿರುತ್ತಾನೆ,[೨] ಮತ್ತು ಅದರ ನಾಲ್ಕು ಅಧ್ಯಾಯಗಳಲ್ಲಿ ಪ್ರತ್ಯೇಕವಾಗಿ ಈ ನಾಲ್ಕು ಅಂಗಗಳ ಲಕ್ಷಣಗಳನ್ನು ವಿಸ್ತರಶಃ ಕೊಟ್ಟಿರುತ್ತಾನೆ.
ಚತುರ್ದಂಡೀ ಲಕ್ಷಣಗಳು
[ಬದಲಾಯಿಸಿ]ಕ್ರಿ.ಶ. 1729-35ರಲ್ಲಿ ತಂಜಾವೂರನ್ನು ಆಳಿದ ತುಕ್ಕೋಜೀ ಮಹಾರಾಜ ತನ್ನ ಸಂಗೀತ ಸಾರಮೃತವೆಂಬ ಶಾಸ್ತ್ರಗ್ರಂಥದಲ್ಲಿ ಚತುರ್ದಂಡೀ ಗಾನದ ವಿಶಿಷ್ಟ ಲಕ್ಷಣಗಳನ್ನು ಸೋದಾಹರಣವಾಗಿ ನಿರೂಪಿಸಿರುತ್ತಾನೆ:
ಆರೋಹಾವರೋಹಮೂರ್ಛನಾತಾನ ಯೋರಯಂ ಸಂದರ್ಭೋತ್ರ ಸಮಗಚ್ಫತೇ
ಆಯಂ ಸಂದರ್ಭೋನ ಸಂಗಚ್ಛತ ಇತ್ಯೇತನ್ನಿಶ್ಚಯಾರ್ಥಂ ಪ್ರಾಚೀನ ಗೀತ
ಪ್ರಬಂಧಠಾಯಾಲಾಪರೂಪಚತುರ್ದಂಡೀ ಸೂಲಾದಿ ಪ್ರಭೃತ್ಯುದಾಹರಣಲೇಖನೇನ
ಸ್ಫುಟಂ ಯಥಾ ಭವತಿ ತಥಾ ಲಿಖ್ಯತೇ
ಈ ಗ್ರಂಥಗಳಲ್ಲಿ ಹೇಳುವ ಪ್ರಕಾರ ಆ ಲಕ್ಷಣಗಳು ಸಂಕ್ಷೇಪವಾಗಿ ಹೀಗಿರುತ್ತವೆ.
ಸ್ವರಗಳು-ಅನುಮಂದರಸ್ಥಾನದ ದೈವತ ಸ್ವರದಿಂದ ತಾರಾಸ್ಥಾನದ ಷಡ್ಜದವರೆಗೆ ಹದಿನೇಳು ಸ್ವರಗಳು ಮಾತ್ರ ಚತುರ್ದಂಡೀಗಾನದಲ್ಲಿ ಪ್ರಯೋಜ್ಯಗಳಾಗಿರುವವೆಂದು ವೆಂಕಟಮಖಿ ಹೇಳುತ್ತಾನೆ:
ಗಾಯಕಾಸ್ತು ಸ್ವರಾನ್ ಸಪ್ತ ಮಂದ್ರಸ್ಥಾನಸಮದ್ಭವಾನ್|
ಮಧ್ಯಸ್ಥಾನಸ್ವರಾನ್ ಸಪ್ತ ತಾರಾಷಡ್ಜಂ ತಥಾಪರಂ |
ಧನೀಚೈವಾನುಮಂದ್ರಸ್ಥಾನೇವಂ ಸಪ್ತದಶಸ್ವರಾನ್ |
ಸಮಾದಾಯ ಚತುರ್ದಂಡೀ ಗಾನಂ ಸರ್ವೇಪಿ ಕುವೃತೇ |
ಆಲಾಪ - ಆಕ್ಷಿಪ್ತಿಕೆ, ರಾಗವರ್ಧಿನಿ, ಪ್ರಥಮ ವಿದಾರಿ, ದ್ವಿತೀಯ ವಿದಾರಿ ಎಂದು ನಾಲ್ಕು ಹಂತಗಳಲ್ಲಿ ದಂಡೀಗಾನದ ಆಲಾಪನೆ ಪರಿಪೂರ್ಣವಾಗುತ್ತದೆ. ದೇಶೀ ರೂಢಿಯಲ್ಲಿ ಇವಕ್ಕೆ ಕ್ರಮವಾಗಿ ಆಯತ್ತ್ವ, ಎಡುಪ್ಪು, ಒಂದನೆಯ ಮುಕ್ತಾಯಿ, ಎರಡನೆಯ ಮುಕ್ತಾಯಿ ಎಂಬ ಸಂಜ್ಞೆಗಳಿವೆ. ಈ ಒಂದೊಂದು ವಿಧಾನದಲ್ಲಿಯೂ ಮಾಡತಕ್ಕ ವಿಶಿಷ್ಟ ಸ್ವರಸಂಚಾರಗಳಿಗೆ ತಾನಗಳೆಂದು ಹೆಸರು. ಈ ತಾನಗಳಲ್ಲಿ ಯಾವುದೊಂದು ಸ್ವರವನ್ನು ಆಧಾರವಾಗಿಟ್ಟುಕೊಳಲಾಗುವುದೋ ಅದಕ್ಕೆ ಸ್ಥಾಯಿಯೆಂದು ಹೆಸರು. ರಾಗಾರಂಭದ ಆಕ್ಷಿಪ್ತಿಕೆಯಲ್ಲಿ ಮೊದಲಾಗಿ ಮಧ್ಯಸ್ಥಾನದ ಷಡ್ಜಸ್ವರವನ್ನು ಸ್ಥಾಯಿಯಾಗಿಟ್ಟುಕೊಂಡು ತಾರ ಷಡ್ಜದವರೆಗಿನ ಎಂಟು ಸ್ವರಗಳಲ್ಲಿ ಆರೋಹ ಕ್ರಮದ ಗಮಕಾಲಂಕಾರ ಪ್ರಯೋಗಗಳನ್ನು ಮಾಡಿ ಅದೇ ಸ್ವರಸೋಪಾನಗಳಲ್ಲಿ ಕೆಳಗಿಳಿದು ಮಧ್ಯ ಷಡ್ಜದಲ್ಲಿ ನ್ಯಾಸಗೊಳಿಸುವುದು. ಅನಂತರ ಅವರೋಹಕ್ರಮದಲ್ಲಿ ಮಂದ್ರ ಷಡ್ಜದವರೆಗೆ ಸಂಚರಿಸಿ ಪುನಃ ಮೇಲಕ್ಕೇರಿ ಮಧ್ಯ ಷಡ್ಜದಲ್ಲೇ ವಿರಮಿಸುವುದು. ಅನಂತರ ಇದೇ ರೀತಿ ಮಂದ್ರನಿಷಾದ, ಮತ್ತು ಧೈವತಗಳನ್ನು ಸ್ಥಾಯಿಯನ್ನಾಗಿಟ್ಟುಕೊಂಡ ಮೇಲೆ ಕೆಳಗೆ ಎಂಟು ಸ್ವರಗಳಲ್ಲಿ ತಾನ ವಿಸ್ತಾರ ಮಾಡಿ ಮಧ್ಯ ಷಡ್ಜದಲ್ಲಿ ಮುಕ್ತಾಯಗೊಳಿಸಿದಲ್ಲಿಗೆ ರಾಗದ ಸ್ಥೂಲ ಚಿತ್ರಣವಾಗುವುದು.
ರಾಗವರ್ಧಿನಿ (ಎಡುಪ್ಪು) - ಇದರಲ್ಲಿ ಮಂದ್ರಷಡ್ಜವನ್ನು ಸ್ಥಾಯಿಯಾಗಿಟ್ಟುಕೊಂಡು ಮೇಲಕ್ಕೆ ತಾರಷಡ್ಜದವರೆಗೆ ಹಂತಹಂತವಾಗಿ ತಾನಗಳನ್ನು ವಿಸ್ತರಿಸುತ್ತ ರಾಗದ ಅಂಗೋಪಾಂಗಗಳನ್ನು ಚಿತ್ರಿಸಿ ತರಂಗಿತ ಸಂಚಾರಗಳಿಂದ ಕೆಳಗಿಳಿದು ಮಧ್ಯ ಷಡ್ಜದಲ್ಲಿ ನ್ಯಾಸ ಮಾಡುವುದು. ಈ ನ್ಯಾಸ ವಿಧಾನವನ್ನೇ ಎರಡನೆಯ ಮುಕ್ತಾಯಿಯೆಂದು ಕರೆಯಲಾಗಿದೆ. ಆಕ್ಷಿಪ್ತಿಕೆಯ ಕೊನೆಯಲ್ಲಿ ಮಾಡುವ ಸ್ವರನ್ಯಾಸ ವಿಧಾನ ಒಂದನೆಯ ಮುಕ್ತಾಯಿಯೆಂದು ಕರೆಯಲ್ಪಡುತ್ತದೆ.
ಠಾಯೆ - ರಾಗದ ಒಂದೊಂದೂ ಅವಯವವನ್ನು ಬೇರೆಬೇರಾಗಿ ಬಿಡಿಸಿ ತೋರಿಸುವುದಕ್ಕೆ ಠಾಯೆ ಎಂದು ಹೆಸರು. ಆದುದರಿಂದಲೇ ರಾಗಸ್ವಾಯವಃ ಸ್ಥಾಯಃ - ಎಂದು ಶಾಸ್ತ್ರದಲ್ಲಿ ಇದರ ಲಕ್ಷಣವನ್ನು ಹೇಳಲಾಗಿದೆ. ಸಂಸ್ಕೃತದ ಸ್ಥಾಯವೇ ದೇಶೀಯಲ್ಲಿ ಠಾಯೆಯೆಂದು ವ್ಯವಹರಿಸಲ್ಪಟ್ಟಿದೆ. ಇದರಲ್ಲಿ ಆಯಾ ರಾಗಕ್ಕೆ ನಿರ್ದಿಷ್ಟವಾದ ಸ್ವರಗಳಲ್ಲಿ ಯಾವುದನ್ನಾದರೂ ಸ್ಥಾಯಿಯಾಗಿ ಕಲ್ಪಿಸಿಕೊಂಡು ಅದರ ಹಿಂದೆ ಮುಂದೆ ನಾಲ್ಕು ಸ್ವರಗಳಲ್ಲಿ ಮಾತ್ರ ಖಂಡಖಂಡವಾಗಿ ತಾನವಿತಾನಗಳನ್ನು ರಚಿಸಲಾಗುವುದು. ಒಂದರ ಮೇಲೊಂದರಂತೆ ಬೇರೆ ಬೇರೆ ಸ್ವರಗಳನ್ನು ಸ್ಥಾಯಿಯಾಗಿಟ್ಟುಕೊಂಡು ವಿಸ್ತರಿಸಲ್ಪಡುವ ಈ ಠಾಯೆಗಳು ಅನವಧಿ ಸಂಖ್ಯೆಯಲ್ಲಾಗುತ್ತವೆ. ಇವುಗಳಲ್ಲಿ ಹೆಚ್ಚಿನವು ಹಲವು ರಾಗಗಳಿಗೆ ಸಾಮಾನ್ಯವಾಗಿ ಸಲ್ಲುವುದುಂಟು.
ಗೀತ - ಗಾನದಲ್ಲಿ ಮೊದಲಾಗಿ ಆಲಾಪ, ಠಾಯೆಗಳನ್ನು ವಿಸ್ತರಿಸಿದ ಅನಂತರ ಗೀತಗಳನ್ನು ಹಾಡುವುದು ಕ್ರಮ. ಗೀತಗಳೆಂದರೆ ಧ್ರುವಾದಿ ಸಾಲಗ (ಸೂಳ) ತಾಳದ ರಚನೆಗಳು. ಇವು ಸ್ವರ ಪಾಟಾದಿಕೂಟಗಳಿಲ್ಲದೆ ಹಿತಮಿತವಾದ ವರ್ಣಾಲಂಕಾರಗಳಿಂದ ಸರಳವಾಗಿ ಹಾಡಲ್ಪಡತಕ್ಕಂಥವು. ಇವು ಅಕ್ಷರ ಸಾಂದ್ರತೆಯುಳ್ಳವಾಗಿ ಸಾಹಿತ್ಯ ಪ್ರಧಾನವಾದ ರಚನೆಗಳಾಗಿರುತ್ತವೆ. ಇವುಗಳ ಮಧ್ಯದಲ್ಲಿ ನಾದವಿಸ್ತಾರಕ್ಕೆ ಅವಕಾಶವಿರುವುದಿಲ್ಲ. ಚರಣದ ಕೊನೆಯಲ್ಲಿಯಾದರೂ ರಾಗ ವಿಸ್ತಾರ ಮಾಡುವ ಸಂಪ್ರದಾಯವಿಲ್ಲ. ತಾಳಭೇದಗಳಿಂದ ಈ ಗೀತಗಳು ಅನೇಕ ವಿಧವಾಗಿವೆ ಮತ್ತು ಆಯಾ ತಾಳಗಳ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಈ ತಾಳಗಳು ಧ್ರುವ, ಮಟ್ಟ, ಪ್ರತಿಮಟ್ಟ, ನಿಸ್ಸಾರು, ಅಟ್ಟ, ರಾಸ, ಏಕ ಎಂದು ಏಳು ವಿಧ. ಧ್ರುವಗೀತದಲ್ಲಿ 16 ಭೇದಗಳೂ, ಮಟ್ಟ ಅಥವಾ ಮಂಠ ಗೀತದಲ್ಲಿ 6, ಪ್ರತಿಮಟ್ಟದಲ್ಲಿ 4, ನಿಸ್ಸಾರುವಿನಲ್ಲಿ 6, ಅಟ್ಟಗೀತದಲ್ಲಿ 6, ರಾಸಗೀತದಲ್ಲಿ 6, ರಾಸಗೀತದಲ್ಲಿ 6, ಏಕತಾಲಿಯಲ್ಲಿ 3-ಹೀಗೆ ಅವಾಂತರ ಭೇದಗಳಿರುತ್ತವೆ. ಅವುಗಳ ಪ್ರತ್ಯೇಕ ಹೆಸರುಗಳು ಈ ಕೆಳಗಿನಂತಿವೆ:
ಧ್ರುವ-ಜಯಂತ, ಶೇಖರ, ಉತ್ಸಾಹ, ಮಧುರ, ಕುಂತಲ, ನಿರ್ಮಲ, ಕೋಮಲ, ಚಾರ, ನಂದನ, ಚಂದ್ರಶೇಖರ, ಕಾಮದ, ವಿಜಯ, ಕಂದರ್ಪ, ಜಯಮಂಗಲ, ತಿಲಕ, ಲಲಿತ.[೩]
ಮಟ್ಟ-ಜಯಪ್ರಿಯ, ಮಂಗಲ, ಸುಂದರ, ವಲ್ಲಭ, ಕಲಾಪ, ಕಮಲ.
ಪ್ರತಿಮಟ್ಟ-ಅಮರ, ತಾರ, ವಿಚಾರ, ಕುಂತ.
ನಿಸ್ಸಾರು-ವೈಕುಂದ, ಅನಂದ, ಕಾಂತಾರ, ಸಮರ, ವಾಂಛಿತ, ವಿಶಾಲ,
ಅಟ್ಟ-ನಿಶ್ಯಂಕ, ಶಂಖ, ಲೀಲ, ಚಾರ, ಮಕರಂದ, ವಿಜಯ.
ರಾಸ- ವಿನೋದ, ವರದ, ನಂದ, ಕಂಬುಜ.
ಏಕ-ರಮಾ, ಚಂದ್ರಿಕಾ, ವಿಪುಲಾ.
ಪ್ರಬಂಧ-ಚತುರ್ಧಾತುಗಳಿಂದಲೂ, ಷಡಂಗಳಿಂದಲೂ ನಿಬದ್ಧವಾದ ರಚನೆಯಾದರೆ ಅದನ್ನು ಪ್ರಬಂಧವೆಂದು ಕರೆಯಲಾಗುವುದು. ಧಾತುಗಳೆಂದರೆ ಈಗ ಪ್ರಚಲಿತವಾಗಿರುವ ಸಂಗೀತದ ಕೀರ್ತನೆಗಳಲ್ಲಿ ಪಲ್ಲವಿ, ಅನುಪಲ್ಲವಿ, ಮಧ್ಯದ ಚರಣ, ಕೊನೆಯ ಚರಣವೆಂದು ಕರೆಯಲ್ಪಡುವಂಥ ನಾಲ್ಕು ಭಾಗಳಾಗಿರುತ್ತವೆ. ಅವಕ್ಕೆ ಕ್ರಮವಾಗಿ ಉದ್ಗ್ರಾಹ, ಮೇಲಾಪಕ, ಧ್ರುವ, ಆಭೋಗಗಳೆಂದು ಹೆಸರು.[೪] ಉದ್ಗ್ರಾಹವೆಂಬುದು ಪ್ರಬಂಧದ ಮೊದಲ ಭಾಗ, ಎತ್ತುಗಡೆಯ ಚರಣವೆಂದೂ ಇದನ್ನು ಕರೆಯುವುದುಂಟು. ಎರಡನೆಯ ಮೇಲಾಪಕವೆಂದರೆ ಉದ್ಗ್ರಾಹವನ್ನೂ, ಮುಂದಿನ ಧ್ರುವ ಚರಣವನ್ನೂ ಮೇಳೈಸುವ, ಎಂದರೆ ಒಂದಾಗಿ ಸೇರಿಸುವ ಮಧ್ಯಂತರದ ಸೊಲ್ಲು ಎಂದರ್ಥ; ಅನುಪಲ್ಲವಿ ಹಾಗೂ ಸಂಧಿವಾಕ್ಯವೆಂದೂ ಇದಕ್ಕೆ ಹೆಸರುಂಟು. ಧ್ರುವವೆಂದರೆ ಮಧ್ಯದ ಚರಣ. ಇದು ಮಿಕ್ಕವುಗಳಿಂದೆಲ್ಲ ದೊಡ್ಡದು ಮತ್ತು ಮುಖ್ಯಾರ್ಥವನ್ನು ಪ್ರತಿಪಾದಿಸುವಂಥಾದ್ದು. ಆಭೋಗವೆಂಬುದು ಕೊನೆಯ ಚರಣ. ಇದರಲ್ಲಿ ಪ್ರಬಂಧ ಕರ್ತೃವಾದ ವಾಗ್ಗೇಯಕಾರನ ಅಂಕಿತ, ಬಿರುದಾವಳಿ ಹಾಗೂ ಅವನ ಇಷ್ಟದೇವತೆಯ ಹೊಗಳಿಕೆ ಇರುತ್ತವೆ. ಇದನ್ನು ಹಾಡಿದಲ್ಲಿಗೆ ಪ್ರಬಂಧಗಾನ ಕೊನೆಗೊಳ್ಳುವುದು.
ಪ್ರಬಂಧದ ಷಡಂಗಗಳೆಂದರೆ ಕ್ರಮವಾಗಿ ಸ್ವರ, ಬಿರುದ, ಪದ, ತಾಲ, ತೇನ, ಪಾಟಗಳು.[೫] ಸ್ವರವೆಂದರೆ ಆಯಾ ರಾಗಕ್ಕೆ ನಿರ್ದಿಷ್ಟವಾದ ಸರಿಗಮಪದನಿ ಎಂಬ ಸ್ವರಾಕ್ಷರಗಳು.[೬][೭] ಬಿರುದವೆಂದರೆ ಧೈರ್ಯಶೌರ್ಯಾದಿ ಗುಣಕೀರ್ತನೆ. ಯಾರ ಗುಣಕೀರ್ತನೆಯಾಗಿ ಆ ಪ್ರಬಂಧ ರಚಿಸಲ್ಪಟ್ಟಿದೆಯೋ ಆ ವ್ಯಕ್ತಿಯನ್ನು ಅಥವಾ ದೇವರನ್ನು ಸಂಬೋಧಿಸುವ ಒಂದು ಸೊಲ್ಲೂ ಇದರಲ್ಲಿ ಸೇರಿಕೊಂಡಿರಬೇಕೆಂಬ ನಿಯಮವಿದೆ. ಪದವೆಂದರೆ ಕ್ರಿಯಾಕಾರಕ ರೂಪದಲ್ಲಿರುವ ಅರ್ಥಪ್ರತಿಪಾದಕವಾದ ವಾಕ್ಯ ಅಥವಾ ಪದರಚನೆ. ತೇನವೆಂದರೆ ಆಲಾಪ ರೂಪದ ನಾದ ವಿಸ್ತಾರದಲ್ಲಿ ಮಧ್ಯಮಧ್ಯ ಉಚ್ಚರಿಸಲಾಗುವ ತ, ದ, ರಿ, ನ, ತೇನ, ತೋನ್ನ, ಎಂಬಂಥ ಅಕ್ಷರಗಳು. ಓಂ ತತ್ಸತ್ , ತತ್ತ್ವಮಸಿ ಎಂಬ ಬ್ರಹ್ಮಸೂಚಕವಾದ ವೇದಾಂತ ವಾಕ್ಯದ ಸಂಕ್ಷಿಪ್ತ ಚಿಹ್ನೆಯಾಗಿ ಈ ಅಕ್ಷರಗಳು ಉಚ್ಚರಿಸಲ್ಪಡುವುದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಪಾಟವೆಂದರೆ ವೀಣೆ ಮೃದಂಗಾದಿ ವಾದ್ಯ ಧ್ವನಿಗಳ ಅನುಕರಣೆಯಾಗಿ ಬಾಯಲ್ಲಿ ಉಚ್ಚರಿಸುವ ತಕದಿಮಿ, ಜಣತಕ, ತಿನ್ನಕ, ದಿಂನ್ನಾಂ, ಇತ್ಯಾದಿ ಪಾಟಾಕ್ಷರಗಳು. ರೂಢಿಯಲ್ಲಿ ಇದಕ್ಕೆ ಬಾಯಿತಾಳ, ಕೊನುಗೋಲ್ ಎಂದೂ ಹೆಸರುಂಟು. ತಾಳವೆಂದರೆ ಗುರುಲಘ್ವಾದಿಕಾಲನಿಯಮದಿಂದ ಕೈಯ ಬೆರಳೆಣಿಕೆ, ಘಾತ, ಪಾತಗಳ ಮೂಲಕ ನಿರೂಪಿಸಲ್ಪಡುವ ಶುದ್ಧ ಸಾಲಗ ಹಾಗೂ ಮಾರ್ಗದೇಶೀ ಎಂಬ ಎರಡು ವಿಧದ ತಾಳಭೇದಗಳು.[೮]
ಪ್ರಬಂಧವೆಂಬುದರಲ್ಲಿ ಈ ನಾಲ್ಕು ಧಾತುಗಳಲ್ಲಿ, ಷಡಂಗಗಳಲ್ಲಿ ಎಲ್ಲವೂ ಇದ್ದೇ ತೀರಬೇಕೆಂಬ ನಿಯಮವಿರುವುದಿಲ್ಲ. ಪ್ರಧಾನವಾದ ಕೆಲವಕ್ಕೆ ಮಾತ್ರ ಲೋಪವಿರಬಾರದೆಂದು ಹೇಳಲಾಗಿದೆ. ಧಾತುಗಳಲ್ಲಿ ಉದ್ಗ್ರಾಹ, ಧ್ರುವ ಇವೆರಡು ಇರಲೇಬೇಕು. ಅಂಗಗಳಲ್ಲಿ ಪದ, ತಾಲಗಳೆಂಬ ಎರಡು ಮುಖ್ಯವಾದುವು. ಸ್ತರ, ಪಾಟ, ತೇನಗಳು ರಚನೆಯಲ್ಲಿದಿದ್ದರೆ ಹಾಡುವಾಗ ಗಾಯಕ ತನ್ನ ಮನೋಧರ್ಮದಿಂದ ಬೇಕಾದುವನ್ನು ರಚಿಸಿಕೊಳ್ಳಬಹುದೆಂದು ತಾತ್ಪರ್ಯ. ಹೀಗೆ ರಚನೆಯಲ್ಲಿ ಅಂಗಗಳ ನ್ಯೂನತೆಯಿರುವುದನ್ನು ಹೊಂದಿಕೊಂಡು ಪ್ರಬಂಧಗಳು ಐದು ಜಾತಿಗಳಾಗಿ ವರ್ಗೀಕರಿಸಲ್ಪಟ್ಟಿವೆ. ಎರಡನೆಯ ಅಂಗಗಳಿರುವುದಾದರೆ ಅದಕ್ಕೆ ತಾರಾವಲೀಜಾತಿಯೆಂದೂ, ಮೂರು ಅಂಗಗಳಿರುವುದಕ್ಕೆ ಭಾವನೀ ಜಾತಿಯೆಂದೂ, ನಾಲ್ಕು ಅಂಗಗಳಿರುವುದಕ್ಕೆ ಆನಂದಿನೀಜಾತಿಯೆಂದು, ಆರೂ ಅಂಗಗಳು ಸಂಪೂರ್ಣವಾಗಿದ್ದರೆ ಅದಕ್ಕೆ ಮೇದಿನೀಜಾತಿಯೆಂದೂ ಹೆಸರು. ಈ ಒಂದೊಂದು ಜಾತಿಗಳಲ್ಲಿ ಪ್ರಸಿದ್ಧವಾದ ಪ್ರಬಂಧಗಳ ಹೆಸರುಗಳು ಈ ಮುಂದೆ ಕೊಟ್ಟಂತಿರುತ್ತವೆ.
ಮೇದಿನೀಜಾತಿ - ಶ್ರೀರಂಗ, ಶ್ರೀವಿಲಾಸ, ಪಂಚಭಂಗಿ, ಪಂಚಾನನ, ಉಮಾತಿಲಕ, ಕರಣ, ಸಿಂಹಲೀಲಕ-7.
ಆನಂದಿನೀಜಾತಿ - ಪಂಚತಾಲೇಸ್ವರ, ವರ್ಣಸ್ವರ, ವಸ್ತು, ವಿಜಯ, ತ್ರಿಪದ, ಹರವಿಲಾಸ, ಚತುರ್ಮುಖ, ಪದ್ಧಡಿ, ಶ್ರೀವರ್ಧನ, ಹರ್ಷವರ್ಧನ-10.
ದೀಪನಿಜಾತಿ - ಸುದರ್ಶನ, ಸ್ವರಾಂಕ, ತ್ರಿಭಂಗಿ, ಕಂದುಕ, ವದನ-5.
ಭಾವನೀಜಾತಿ - ವರ್ಣ, ಗದ್ಯ, ಕಂದ, ಕೈವಾಡ, ಅಂಕಚಾರಿಣಿ, ವರ್ತನೀ, ಆರ್ಯಾ, ಗಾಥಾ, ಕ್ರೌಂಚಪದ, ಕಲಹಂಸ, ತ್ರೋಟಕ, ಹಂಸಲೀಲ, ಚತುಷ್ಟದಿ, ವೀರಶ್ರೀ, ಮಂಗಲಾಚಾರ, ದಂಡಕ-16.
ತಾರಾವಲೀಜಾತಿ - ಏಲಾ, ಡೇಂಕೀ, ಜೋಬಂಡ, ಲಂಭ, ರಾಸ, ಏಕತಾಲಿಕ, ಚಕ್ರವಾಕ, ಸ್ವರಾರ್ಥ, ಮಾತೃಕಾ, ಧ್ವನಿಕುಟ್ಟಿನೀ, ತ್ರಿಪದಿ, ಷಟ್ಪದಿ, ಝಂಪಡ, ಚಚ್ಚರೀ, ಚರ್ಯಾ, ರಾಹಡೀ, ಧವಲ, ಮಂಗಲ, ಓವೀ, ಲೋಲ್ಲೀ, ಡೋಲ್ಲರಿ, ದಂತಿ-22.
ಈ ಜಾತಿಗಳಲ್ಲಿಯೂ ದ್ವಿಧಾತುಕ, ತ್ರಿಧಾತುಕ, ಚತುರ್ಧಾತುಕವೆಂಬ ವಿಭಿನ್ನ ಲಕ್ಷಣಗಳಿರುವುದರಿಂದ ಅನೇಕ ಅವಾಂತರ ಭೇದಗಳನ್ನು ಹೇಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.thehindu.com/entertainment/music/lec-dem-on-chaturdandi-prakashika/article25788496.ece
- ↑ Subramanian 1999, p. 135.
- ↑ https://sreenivasaraos.com/2015/05/10/music-of-india-a-brief-outline-part-eleven/
- ↑ https://sreenivasaraos.com/tag/udgraha/
- ↑ https://sreenivasaraos.com/tag/prabandha/
- ↑ "[Answered] What is the full form of SA,RA,GA,MA,PA,DHA,NI,SA - Brainly.in". 28 July 2018.
- ↑ Randel 2003, pp. 814–815.
- ↑ https://naadnartan.in/wp-content/uploads/2023/06/D.-Anantha-Rao-1.pdf
ಗ್ರಂಥಸೂಚಿ
[ಬದಲಾಯಿಸಿ]- Subramanian, L. (1999). "The reinvention of a tradition: Nationalism, Carnatic music and the Madras Music Academy, 1900-1947". Indian Economic & Social History Review. 36 (2): 131–163. doi:10.1177/001946469903600201. S2CID 144368744.
- Randel, Don Michael (2003). The Harvard Dictionary of Music (fourth ed.). Cambridge, MA: Harvard University Press. ISBN 978-0-674-01163-2.
