ವಿಷಯಕ್ಕೆ ಹೋಗು

ಚತುರೋಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುದ್ಧಿಯನ್ನು ಸಾಮಾನ್ಯಬುದ್ಧಿ ಚತುರಬುದ್ಧಿ ಎಂದು ವಿಂಗಡಿಸುವುದು ಹಿಂದಿನಿಂದಲೂ ಬಂದಿರುವ ವಾಡಿಕೆ. ಬುದ್ಧಿಚಾತುರ್ಯದ ಮಾತುಗಳಿಗೆ ಚತುರೋಕ್ತಿ (ವಿಟ್) ಎಂಬ ಹೆಸರು ಸಲ್ಲುತ್ತದೆ. ಗಾತ್ರ ಹಾಗೂ ಪ್ರಮಾಣದ ದೃಷ್ಟಿಯಿಂದ ಚತುರಬುದ್ಧಿ ಅಸಾಧಾರಣವೆಂದೂ, ಪ್ರತಿಭೆಗೆ (ಜೀನಿಯಸ್) ಹತ್ತಿರದವರೆಂದೂ ಕೆಲವು ಕಾಲ ಬಗೆದಿದ್ದರು. ಅದು ಕೆಲಸಮಾಡುವ ಚೂಟಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ಕ್ಷಿಪ್ರತೆ ಅದರ ಮುಖ್ಯಲಕ್ಷಣವೆಂದು ನಿರ್ದೇಶಿಸುವ ಅಭ್ಯಾಸ ಜಾರಿಗೆ ಬಂತು. ಈಗಲೂ ಬುದ್ಧಿಚಾತುರ್ಯಕ್ಕೆ ಮಿಂಚು ಉಪಮೆ, ಹಾಗೆಯೇ ಕತ್ತಿಯ ಅಲಗಿನ ಸಾದೃಶ್ಯದ ಮೂಲಕ ಅದನ್ನು ಹರಿತ, ತೀಕ್ಷ್ಣ ಎಂದು ವರ್ಣಿಸುವುದೂ ಉಂಟು. ಮಾತುಬಲ್ಲವರಲ್ಲಿ ಹಿರಿಮೆಯುಳ್ಳವನೇ ಕವಿ ಎಂಬ ತತ್ತ್ವ ಅಂಗೀಕೃತವಾಗಿದ್ದುದರಿಂದ ಕವಿತಾಶಕ್ತಿಗೂ, ಚತುರೋಕ್ತಿಗೂ ವ್ಯತ್ಯಾಸ ಅಳಿಸಿಹೋಯಿತು. 17, 18ನೆಯ ಶತಮಾನ ಪೂರ್ವ ಕವಿಯೆ ಚತುರಮತಿ, ಚತುರಮತಿಯೇ ಕವಿ.

ಯಾರಾದರೂ ಹಾಸ್ಯಪ್ರವೃತ್ತಿಯವನು ಎಂದರೆ ಚತುರೋಕ್ತಿಯನ್ನು ಮಾಡುವಲ್ಲಿ ಕುಶಲನಾದ ವ್ಯಕ್ತಿ, ಅಪ್ರಯತ್ನಿತ ಒಂದು ಸಾಲಿನ ಅಥವಾ ಏಕ ನುಡಿಗಟ್ಟಿನ ತಮಾಷೆಗಳನ್ನು ಮಾಡುವ ವ್ಯಕ್ತಿ.[][]

ಬುದ್ಧಿ ಚಾತುರ್ಯವನ್ನು ತಾರ್ಕಿಕವಾಗಿ ವಿಶ್ಲೇಷಿಸಿ, ಹುಸಿ ಚಾತುರ್ಯಕ್ಕೂ (ಫಾಲ್ಸ್ ವಿಟ್), ನಿಜ ಚಾತುರ್ಯಕ್ಕೂ (ಟ್ರೂ ವಿಟ್) ಅಂತರವನ್ನು ಗೊತ್ತು ಮಾಡಿದರು.

ಹುಸಿ ಚಾತುರ್ಯ ಮತ್ತು ನಿಜ ಚಾತುರ್ಯ

[ಬದಲಾಯಿಸಿ]

ಶಬ್ದ, ಅರ್ಥ ಎರಡರಲ್ಲಿ ಶಬ್ದಕ್ಕೇ ಹೆಚ್ಚು ಕಡಿಮೆ ಎಲ್ಲ ಪ್ರಾಧಾನ್ಯವನ್ನೂ ಕೊಟ್ಟು ತಯಾರಿಸುವ ತ್ರಾಸ ರಚನೆ ಹುಸಿ ಚಾತುರ್ಯವೆಂಬ ಖಂಡನೆಗೆ ಒಳಗಾಯಿತು. ಹನ್ನೆರಡು ವಿಧದ ಹುಸಿ ಚಾತುರ್ಯವನ್ನು ಲಾಕ್ಷಣಿಕರು ಬೆರಳಿಟ್ಟು ತೋರಿಸುತ್ತಿದ್ದರು; ಒಂದು ಸ್ವರವನ್ನೊ, ವ್ಯಂಜನವನ್ನೊ, ಪದವನ್ನೊ ಬಳಸದೆ ಬರೆದ ಪದ್ಯ; ಪದಾರ್ಥದ ಆಕೃತಿಯಂತೆ ಮುದ್ರಣ ರೂಪನ್ನು ತಾಳುವ ಕವನ; ಪ್ರತಿಧ್ವನಿ ಪದ್ಯ; ಒಂದೇ ಪದವನ್ನು ಮತ್ತೆ ಮತ್ತೆ ಉಪಯೋಗಿಸುವ ಪದ್ಯ; ಪ್ರಾಸದೊಡನೆ ಆಟವಾಡುವ ಕ್ರಮ; ಬರಿ ಪ್ರಾಸಗಳ ಪಟ್ಟಿ; ಮೊದಲಿನಿಂದ ಓದಿದರೆ ಒಂದರ್ಥ, ಕೊನೆಯಿಂದ ಹಿಂದುಮುಂದಾಗಿ ಓದಿದರೆ ವಿರುದ್ಧಾರ್ಥ ಸೂಚನೆ; ನಾನಾ ತೆರದ ಒಗಟೆ; ಕ್ಲಿಷ್ಟೋಚ್ಛಾರಣೆಯ ವಾಕ್ಯಜಾಲ-ಇಂಥವು ಕ್ಷುದ್ರ ಕವಿತ್ವವೆಂದು ತಿರಸ್ಕಾರಕ್ಕೆ ಅರ್ಹವಾದವು.

ನಿಜ ಚಾತುರ್ಯದ ಗುಣಗಳನ್ನು ಹೀಗೆ ತಪಶೀಲು ಮಾಡಿದರು:

  1. ಬೇಟೆ ನಾಯಿಯ ಸುಟಿ ಚಲನೆ;
  2. ಅಪೂರ್ವವೂ ಗೂಢವೂ ಆದ ಹೋಲಿಕೆಯ ಅರಿವು;
  3. ಚಕಿತಗೊಳಿಸುವಿಕೆ;
  4. ವಿವೇಚನೆಯ ಹತೋಟಿ;
  5. ಅರ್ಥಪ್ರಾಧಾನ್ಯದ ಸತ್ತ್ವ.

ಎಂದರೆ ಹುಸಿ ಯಾವುದು, ನಿಜ ಯಾವುದು ಎಂಬುದನ್ನು ಖಂಡಿತವಾಗಿ ನಿಷ್ಕರ್ಷಿಸಿಬಿಡುವುದು ಸಾಹಿತ್ಯಲೋಕದಲ್ಲಿ ಅಷ್ಟೊಂದು ಸುಲಭವಲ್ಲ. ಕವಿ ಉಪಯೋಗಿಸುವ ಶಬ್ದ ಸಾಧನಗಳಲ್ಲಿ ಒಂದಾದ ಶ್ಲೇಷೆಯನ್ನು (ಪನ್) ತೆಗೆದುಕೊಳ್ಳೋಣ. ಕೊಡಿಸು ಸಾಕೈದೂರನವರಿಗೆ ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ; ಅರಮನೆಯೆಂಬರ್ ಪೂರ್ಣಗೃಹವನು, ನುಡಿ ನಿಂದೆಯನೆಂಬರ್ ಪೂರ್ಣಗೃಹವನು, ನುಡಿ ನಿಂದೆಯನೆಂಬರ್; ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ-ಇವುಗಳಲ್ಲಿ ಹೆಚ್ಚು ಸ್ವಾರಸ್ಯವಿಲ್ಲ; ಸಾಮಾನ್ಯ ಬುದ್ಧಿಗೂ ಗೋಚರವಾಗಬಲ್ಲ ಅಂಶಗಳೇ ಹೊರತು ಇವು ಹೆಚ್ಚಿನವಲ್ಲ. ಆದರೆ ದ್ವಿಜವರ ಎಂಬುದನ್ನು ದ್ವಿ + ಜವರ ಎಂದೂ, ಒಬ್ಬಟ್ಟು ಎಂಬುದನ್ನು ಒಬ್ಬ + ಅಟ್ಟು ಎಂದೂ ಬಿಡಿಸಿ ಹಾಸ್ಯ ಮಾಡಿದರೆ ಅದು ಕೇವಲ ಚಮತ್ಕಾರವಲ್ಲ, ದಿಟವಾದ ಬುದ್ಧಿಚಾತುರ್ಯ. ಹಾಗೆಯೆ ಪ್ರತ್ಯುತ್ತರ (ರಿಪಾರ್ಟಿ) ಎಷ್ಟೋ ಬಾರಿ ಅರ್ಥವತ್ತಾಗುತ್ತದೆ. 'ಹೋಮರ್ ವರ್ಜಿಲರನ್ನು ಮರೆತಮೇಲೆ ಖಂಡಿತ ಜನ ತನ್ನ ಕೃತಿಗಳನ್ನು ಓದುತ್ತಾರೆ' ಎಂದು ಎರಡನೆಯ ದರ್ಜೆಯ ಕವಿಯೊಬ್ಬ ಜಂಬ ಕೊಚ್ಚಿದಾಗ ಅಲ್ಲಿದ್ದ ವಿದ್ವಾಂಸ ಪೋರ್ಸನ್ 'ನಿಜ, ನಿಜ!' ಎಂದು ಇಷ್ಟೇ ಹೇಳಿದನಂತೆ. ಅವರನ್ನು ಮರೆತ ಮೇಲೆ ತಾನೆ ಇವರನ್ನು ಓದುವುದು! ಅಂಥ ಕಾಲ ಎಂದಿಗೂ ಬಾರದು ಎಂಬ ವ್ಯಂಗ್ಯ ಈ ಉತ್ತರದಲ್ಲಿದೆ. ಪಾನಲೋಲುಪನೊಬ್ಬ ಹೋಟೆಲು ಮಾಣಿಗೆ ಹೇಳಿದನಂತೆ; ‘ಈ ಲೋಟ ಬಹಳ ದೊಡ್ಡದಾಗಿದೆ. ಅದನ್ನು ತೆಗೆದುಕೊಂಡು ಹೋಗು. ನಾನು ಸೀಸೆಯಿಂದಲೇ ಕುಡಿಯುತ್ತೇನೆ.’ ನುರಿತ ವಕೀಲನಾದ ಕರ‍್ರನ್ ಎಂಬಾತನಿಗೆ ಅಗೌರವ ಮಾಡಲೋಸುಗ ಒಬ್ಬ ನ್ಯಾಯಾಧೀಶ ತನ್ನೊಡನೆ ಬಂದಿದ್ದ ನಾಯಿಯನ್ನು ಮುದ್ದಿಸತೊಡಗಿದ; ಕರ‍್ರನ್ ತಕ್ಷಣ ತನ್ನ ಭಾಷಣವನ್ನು ನಿಲ್ಲಿಸಿದ. ಏತಕ್ಕೆ ನಿಲ್ಲಿಸಿದೆ ಎಂಬ ಪ್ರಶ್ನೆಗೆ ಕರ‍್ರನ್ ಇತ್ತ ಜವಾಬು; 'ಕ್ಷಮಿಸಿ, ನ್ಯಾಯಾಧೀಶರು ಸಹೋದರ ನ್ಯಾಯಾಧೀಶನೊಂದಿಗೆ ಮಂತ್ರಾಲೋಚನೆ ನಡೆಸುತ್ತಿದ್ದೀರಿ; ಅದಕ್ಕೋಸ್ಕರ ನಾನು ಸುಮ್ಮನಾದೆ.' ಗಾಢಾರ್ಥದ ಜೊತೆಗೆ ಹೊಸತನದ ಕಾಂತಿಯೂ ಸೇರಿಕೊಂಡರೆ ಚತುರೋಕ್ತಿ ಉತ್ತಮವಾಗುತ್ತದೆ, ರುಚಿಕರವಾಗುತ್ತದೆ.

ಬುದ್ಧಿಚಾತುರ್ಯ ನಿರ್ದ್ರವವಾದದ್ದು, ದಾಕ್ಷಿಣ್ಯವಿಲ್ಲದ್ದು, ಮರುಕಶೂನ್ಯವಾದದ್ದು ಎಂದು ನುಡಿದಿದ್ದಾರೆ. ಧ್ವಂಸ ಮಾಡುವುದೇ ಅದರ ಪ್ರಿಯ ವ್ಯಾಪಾರದಂತೆ ದಿಟ್ಟ ಕ್ರೂರ ಭರ್ತ್ಸನೆ, ಕರುಳು ಬಗಿಯುವ ಕಟಕಿ, ಹೊಡೆದು ಕೆಡಹುವ ಗೇಲಿ ಮುಂತಾದುದರ ಕಡೆಗೇ ಅದರ ಓಲವೆ ಅಧಿಕ. ಯಾವನೋ ಒಬ್ಬ ನನ್ನ ತಲೆ ಕುಲಾವಿಯಲ್ಲಿ ಏನಾದರೂ ನಗೆಪಾಟಲಾದ ಕೊರತೆ ಕಾಣಿಸುತ್ತಿದೆಯೇ? ಎಂದು ಕೇಳಿದಾಗ, ಪರಿಹಾಸಪ್ರವೀಣ ಉತ್ತರ ಹೇಳಿದಂತೆ; 'ಏನೂ ಇಲ್ಲ, ತಲೆ ವಿನಾ!' ಕೌರವ ಕೃಷ್ಣನನ್ನು ನಿಂದಿಸುವ ರೀತಿ ಇದು; 'ಪನ್ನೊಂದೆನೆಯದು ಸೂತಾವತಾರಮುಂ ಹರಿಗಾಯ್ತೆ?' ಮಹೋತ್ಸವ ಮುಗಿಯಿತೆ?-ಎಂಬ ಪ್ರಶ್ನೆಗೆ ಉತ್ತರ; ಇಲ್ಲ ಕವಿಸ್ತುತಿಯಲ್ಲಿ ಅದಕ್ಕೆ ಇನ್ನೊಂದು ದಿವಸದ ಆಯಸ್ಸಿದೆ.' ಬಿರುಸಿನಲ್ಲಿ ಅಲ್ಪಸ್ವಲ್ಪ ಭೇದವಿದ್ದರೂ ಪರುಷಚತುರೋಕ್ತಿ ಪರುಷವೇ.

18ನೆಯ ಶತಮಾನದ ಕೊನೆ, 19ನೆಯ ಶತಮಾನದ ಪ್ರಾರಂಭದಲ್ಲಿ ವಿಮರ್ಶಕರಿಗೂ, ತತ್ತ್ವಶಾಸ್ತ್ರಜ್ಞರಿಗೂ ಬುದ್ಧಿಚಾತುರ್ಯವನ್ನು (ವಿಟ್) ಹಾಸ್ಯದಿಂದ (ಹ್ಯೂಮರ್) ಪ್ರತ್ಯೇಕಿಸಿ ವರ್ಗೀಕರಣ ಮಾಡುವ ಹಂಗು ಇದ್ದಂತಿತ್ತು. ಅವರ ಚರ್ಚೆಯಿಂದ ಎದ್ದು ಬಂದ ಮುಖ್ಯಾಂಶವೇನೆಂದರೆ ಅದು ಸಹಾನುಭೂತಿಗೆ ನನ್ನ ಬಳಿಗೆ ಬರಬೇಡ ಎನ್ನುತ್ತದೆ, ಇದು ನನ್ನ ಬಳಿಗೆ ಬಾ ಎನ್ನುತ್ತದೆ; ಅದು ನೀನು! ಎಂದು ಗುಡುಗಿದರೆ, ಇದು ನೀನು ಮತ್ತು ನಾನು ಎಂಬ ಮೆಲ್ಲುಲಿ ಆಡುತ್ತದೆ. ಬುದ್ಧಿ ಚಾತುರ್ಯ ಜವೆನಲ್ ಮತ್ತು ಸ್ವಿಫ್ಟರಂತೆ ಕಠಿಣವೂ ಕರ್ಕಶವೂ ಆಗಬಹುದು; ಸಾಹಿತ್ಯ ಪ್ರಪಂಚದ ಹೆಗ್ಗುರುತು ಅದರ ಆಕರ್ಷಣೀಯ ವೈವಿದ್ಯ.

19ನೆಯ ಶತಮಾನದ ಎರಡನೆಯ ಭಾಗದಲ್ಲಿ ಬುದ್ಧಿಚಾತುರ್ಯಕ್ಕೂ, ಹುಡುಗಾಟಕ್ಕೂ ಬಾಂಧವ್ಯವೆಂಬ ಅಭಿಪ್ರಾಯ ತಲೆಯೆತ್ತಿತ್ತು. ಚತುರೋಕ್ತಿಗೆ ಮನಸೋತ ಸಾಹಿತಿ ಎಂದಿಗೂ ಗಂಭೀರವಾಗಿರಲಾರ, ಗಹನ ವಿಷಯವನ್ನು ಗ್ರಹಿಸಲಾರ, ಪ್ರತಿಪಾದಿಸಲಾರ, ಎಂದು ಸೂತ್ರಿಸಲಾರಂಭಿಸಿದರು. ಅದು ಕಾಣುವುದು ಒಂದು ಕೋನದಿಂದ ಕಂಡ ಅರೆಕೊರೆ ನಿಜಾಂಶವನ್ನು, ಅಷ್ಟೆ-ಎಂದವರ ಅಭಿಪ್ರಾಯ, ಬುದ್ಧಿಚಾತುರ್ಯ ಗಂಭೀರವಾಗಿರುವುದೊಂದೇ ಅಲ್ಲ, ಗಹನ ಸತ್ಯಾಂಶವನ್ನೂ ಹೃದಯಸ್ಪರ್ಶಿಯಾಗಿ ಬೋಧಿಸಬಲ್ಲದು- ಎಂಬ ವಿಷಯವನ್ನು ಈಗ ಎಲ್ಲರೂ ಒಪ್ಪಿಕೊಂಡಿದ್ದಾರೆ. ಆಸ್ಕರ್ ವೈಲ್ಡನ ಕಲೆ ಪ್ರಕೃತಿಯನ್ನು ಅನುಕರಿಸುವುದಿಲ್ಲ; ಪ್ರಕೃತಿ ಕಲೆಯನ್ನು ಅನುಕರಿಸುತ್ತದೆ ಎಂಬ ಚಾಟೂಕ್ತಿಯಲ್ಲಿ ಮನನೀಯವಾದ ಮನವೊಪ್ಪಿಸುವ ಚಿಂತನೆ ಮನೆಮಾಡಿಕೊಂಡಿದೆ. ಕಿಂಗ್ ಲಿಯರ್ ನಾಟಕದ ವಿದೂಷಕ ಪರಿಹಾಸ ಪಟಾಕಿಯನ್ನು ಹಾರಿಸುವ ನಕಲಿಯವನಲ್ಲ, ಬುದ್ಧಿ ಚಮತ್ಕಾರದವನಲ್ಲ, ದೊಡ್ಡ ಮಟ್ಟದ ಬುದ್ಧಿಶಾಲಿ, ಧರ್ಮವಾದಿ ದಾರ್ಶನಿಕ.

ಚತುರೋಕ್ತಿ, ಊಟಕ್ಕೆ ಅತ್ಯಗತ್ಯವಾದ ಉಪ್ಪು ಅಷ್ಟೇ ಹೊರತು ಅದೇ ಎಂದಿಗೂ ಊಟವಾಗಲಾರದು-ಎಂಬ ಎಚ್ಚರಿಕೆ ಇರಬೇಕಾದ್ದು ಅಗತ್ಯದ ಸಂಗತಿ.

ಉಲ್ಲೇಖಗಳು

[ಬದಲಾಯಿಸಿ]
  1. "wit". Merriam-Webster. Retrieved 2012-05-27.
  2. "wit". Oxford Dictionaries. Archived from the original on July 19, 2012. Retrieved 29 May 2015.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: