ಚಕ್ರಕ
ಚಕ್ರಕ ಎನ್ನುವುದು ಅಸಾಧು ತರ್ಕಗಳಲ್ಲಿ ಅಥವಾ ತರ್ಕಾಭಾಸಗಳಲ್ಲಿ ಒಂದು. ನಾವು ಯಾವುದನ್ನು ಸಕಾರಣವಾಗಿ ತರ್ಕದ ಮೂಲಕ ಸ್ಥಾಪಿಸಬೇಕಾಗಿದೆಯೋ ಅದಕ್ಕೆ ಸರಿಯಾದ ಕಾರಣ ಕೊಡದೆ ಸಾಧಿಸಬೇಕಾದುದನ್ನೇ ಅಂದರೆ ಸಾಧ್ಯವನ್ನೇ ಅದಕ್ಕೆ ಕಾರಣವಾಗಿ ಕುರಿತಾಗ ಇಲ್ಲವೆ ಬೇಡಿದಾಗ ಈ ದೋಷ ಉಂಟಾಗುತ್ತದೆ.[೧] ಇದನ್ನು ಪಾಶ್ಚಾತ್ಯ ತಾರ್ಕಿಕರು ಸರ್ಕ್ಯುಲರ್ ರೀಸನಿಂಗ್ ಎಂದು ಕರೆದಿದ್ದಾರೆ. ಸಾಧಿಸಬೇಕಾದುದಕ್ಕೆ ಕಾರಣ ಕೊಡಲು ಸುತ್ತಿ ಬೇಸತ್ತು ಕಾರಣ ಕೊಡಲಾಗದೆ ಹೋದಾಗ ಸಾಧ್ಯವನ್ನೇ ಅದಕ್ಕೆ ಆಧಾರವಾಗಿ ಬೇಡುವುದು ಇಂಥ ತರ್ಕದ ರೀತಿ.
ಉದಾಹರಣೆ
[ಬದಲಾಯಿಸಿ]
ಒಂದು ಉದಾಹರಣೆ. ಬೆಟ್ಟದಲ್ಲಿ ಬೆಂಕಿ ಇದೆ ಎಂಬುದು ಸಾಧಿಸಬೇಕಾದದ್ದು. ಏಕೆ? ಎಂದು ಕೇಳಿದರೆ ಅದಕ್ಕೆ ಕಾರಣವಾಗಿ (ಹೇತುವಾಗಿ) ಹೊಗೆಯನ್ನು ಕುರಿಯಲಾಗುವುದು. ಅನಂತರ ಹೊಗೆ ಇದ್ದ ಕಡೆಗಳಲ್ಲೆಲ್ಲ ಬೆಂಕಿ ಇದೆ. ಹೊಗೆ ಇಲ್ಲದ ಕಡೆಗಳಲ್ಲಿ ಬೆಂಕಿ ಇಲ್ಲ ಎಂದು ತೋರಿಸಿದಲ್ಲಿ ಹೊಗೆಗೂ, ಬೆಂಕಿಗೂ ಅವಿನಾಭಾವ ಸಂಬಂಧವಿದೆಯಾದ್ದರಿಂದ ಬೆಟ್ಟದಲ್ಲಿ ಹೊಗೆ ಇರುವುದರಿಂದ ಅಲ್ಲಿ ಅಗತ್ಯವಾಗಿ ಬೆಂಕಿ ಇದ್ದೇ ಇದೆ ಎಂದು ಸ್ಥಿರಪಡಿಸಿದಂತಾಗುತ್ತದೆ. ಇದು ಸಾಧು ತರ್ಕ. ಬೆಂಕಿ ಇದೆ ಎಂಬುದಕ್ಕೆ ಸರಿಯಾದ ಕಾರಣ ಕೊಡದೆ, ಅಗ್ನಿ ಇರುವುದರಿಂದ ಅಲ್ಲಿ ಬೆಂಕಿ ಇದೆ-ಎಂದು ಸಾಧ್ಯ ಪದಕ್ಕೆ ಸಮಾನ ಅರ್ಥವುಳ್ಳ ಬೇರೊಂದು ಪದವನ್ನು ಕಾರಣವಾಗಿ ಕೊಟ್ಟಾಗ ಸಾಧ್ಯಪದಕ್ಕೆ ಅದನ್ನೇ ಕಾರಣವಾಗಿ ಯಾಚಿಸಲಾಗುತ್ತದೆಯಾದ್ದರಿಂದ ಆ ತರ್ಕ ಚಕ್ರಕ ದೋಷಕ್ಕೆ ಎಡೆಕೊಡುತ್ತದೆ.
ಲಕ್ಷಣ ನಿರೂಪಣೆಯಲ್ಲಿ
[ಬದಲಾಯಿಸಿ]ಲಕ್ಷಣ ನಿರೂಪಣೆಯಲ್ಲೂ (ಡೆಫನಿಷನ್) ಇದೇ ಬಗೆಯ ದೋಷವನ್ನು ನಾವು ಕಾಣಬಹುದು. ಅದಕ್ಕೆ ಪಾಶ್ಚಾತ್ಯ ತಾರ್ಕಿಕರು ಕೊಟ್ಟಿರುವ ಹೆಸರು ಸರ್ಕ್ಯುಲರ್ ಡೆಫನಿಷನ್ ಎಂದು. ಮನುಷ್ಯ ಎಂಬ ಪದಕ್ಕೆ ಆಲೋಚಿಸುವ ಪ್ರಾಣಿ ಎಂಬುದು ಸಾಧುವಾದ ಲಕ್ಷಣ ನಿರೂಪಣೆ. ಅದರ ಬದಲು ಮನುಷ್ಯ ಎಂಬ ಪದಕ್ಕೆ ಲಕ್ಷಣವಾಗಿ ಮಾನವ ಎಂಬ ಪದವನ್ನು ಕುರಿತರೆ, ಚಕ್ರಕ ದೋಷವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Dowden, Bradley (27 March 2003). "Fallacies". Internet Encyclopedia of Philosophy. Archived from the original on 9 October 2014. Retrieved April 5, 2012.
