ಚಕ್ಕೆ

ಚಕ್ಕೆ ಎಂದರೆ ಶಿಲಾಯುಗ ಸಂಸ್ಕೃತಿಗಳ ಕಾಲದಲ್ಲಿ ಬಳಕೆಯಲ್ಲಿದ್ದ ಕೆಲವು ರೀತಿಯ ಆಯುಧಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಕಲ್ಲುಫಲಕ. ಚಕ್ಕೆ ಎಂದರೆ ಸಂಘಟ್ಟನ ಅಥವಾ ಒತ್ತಡದ ಮೂಲಕ ವಾಸ್ತವಿಕ ಚೂರಿನಿಂದ ತೆಗೆಯಲಾದ ಕಲ್ಲಿನ ಭಾಗ.[೧]: 255 ಉಂಡೆ ಕಲ್ಲೊಂದರಿಂದ ತೆಗೆದ ಚಕ್ಕೆಗಳ ಅಂಚುಗಳನ್ನು ಚೂಪುಮಾಡಿ ಹೆರೆಯುವ ಆಯುಧ, ಭರ್ಜಿಯ ಮೊನೆ, ಕೊರೆಯುವ ಉಳಿ ಮುಂತಾದ ಆಯುಧಗಳನ್ನು ತಯಾರಿಸಲಾಗುತ್ತಿತ್ತು. ಪೂರ್ವ ಶಿಲಾಯುಗದುದ್ದಕ್ಕೂ ಈ ರೀತಿಯ ಆಯುಧಗಳನ್ನು ತಯಾರಿಸುತ್ತಿದ್ದರೂ ಅದರ ಅಂತ್ಯ ಕಾಲದಲ್ಲಿ ಆಯುಧಗಳನ್ನು ಹೆಚ್ಚಾಗಿ ಉದ್ದವಾಗಿಯೂ, ತೆಳುವಾಗಿಯೂ, ಸಮಾನಾಂತರ ಅಂಚುಗಳುಳ್ಳವಾಗಿಯೂ ಇದ್ದ ಕಲ್ಲುಚಕ್ಕೆಗಳಿಂದ ಮಾಡಲಾಗುತ್ತಿತ್ತು. ಇಂಥ ಚಕ್ಕೆಗಳನ್ನು ಕೂರಲಗು ಫಲಕಗಳೆಂದು (ಬ್ಲೇಡ್) ಕರೆಯಲಾಗಿದೆ. ಮಧ್ಯ ಶಿಲಾಯುಗ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿದ್ದ ಚಕ್ಕೆಕಲ್ಲಿನ ಆಯುಧಗಳು ಸಣ್ಣವಾಗಿದ್ದುವು. ಅನೇಕ ರೀತಿಯ ಆಯುಧಗಳ ತಯಾರಿಕೆಗೆ ಅವನ್ನು ಬಳಸಲಾಗುತ್ತಿತ್ತು. ಪೂರ್ವ ಶಿಲಾಯುಗ ಸಂಸ್ಕೃತಿಯನ್ನು ಯೂರೋಪಿನಲ್ಲಿ ತಿರುಳ್ಗಲ್ಲಿನ ಆಯುಧಗಳ (ಕೋರ್ ಟೂಲ್) ಮತ್ತು ಚಕ್ಕೆಕಲ್ಲಿನ ಆಯುಧಗಳ (ಫ್ಲೇಕ್ ಟೂಲ್) ಸಂಸ್ಕೃತಿಗಳೆಂದು ವಿಭಾಗಿಸುವುದುಂಟು. ಚಕ್ಕೆಕಲ್ಲಿನ ಆಯುಧಗಳ ಸಂಸ್ಕೃತಿಗಳಲ್ಲಿ ಕ್ಲಾಕ್ಟೋನಿಯನ್, ಲೆವಾಲ್ವಾಸಿಯನ್, ಮಾಸ್ಟೀರಿಯನ್ ಮುಖ್ಯವಾದವು. ಆದರೆ ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಎರಡು ರೀತಿಯ ಸಂಸ್ಕೃತಿಗಳು ಒಟ್ಟೊಟ್ಟಿಗೆ ರೂಢಿಯಲ್ಲಿದ್ದುವು. ಆಫ್ರಿಕ ಮತ್ತು ಭಾರತಗಳಲ್ಲಿ ಮಧ್ಯಶಿಲಾಯುಗದಲ್ಲಿ ಬಹುಮಟ್ಟಿಗೆ ಎಲ್ಲ ಆಯುಧಗಳನ್ನೂ ಚಕ್ಕೆಗಳಿಂದಲೇ ತಯಾರಿಸಲಾಗುತ್ತಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Andrefsky, W. (2005) Lithics: Macroscopic Approaches to Analysis. 2d Ed. Cambridge, Cambridge University Press
