ಚಂಪಾ (ಪ್ರದೇಶ)

ಚಂಪಾ ಎನ್ನುವುದು ವಿಯಟ್ನಾಮಿನ ಆಗ್ನೇಯ ಭಾಗದಲ್ಲಿ ಟೂರೇನ್ ರೇವುಪಟ್ಟಣದಿಂದ ಕೇಪ್ ವರೆಲ್ಲವರೆಗಿನ ಕರಾವಳಿ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿದ್ದ ಹೆಸರು. ಇಂಡೋನೇಷ್ಯದ ಚಾಮ್ ಜನಾಂಗದವರು ಅಲ್ಲಿ ವಾಸಿಸುತ್ತಿದ್ದರು. ಅವರ ಸಂಸ್ಕೃತಿ ಬಹಳಮಟ್ಟಿಗೆ ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿತ್ತು.
ಚೀನಿಯರ ಇತಿಹಾಸಗಳಲ್ಲಿ ಕ್ರಿ.ಶ. 3ನೆಯ ಶತಮಾನದ ವೇಳಗೆ ಲಿನ್‍ಯಿ ಎಂಬ ಹೆಸರಿನಲಿ ಈ ರಾಜ್ಯದ ಮೊತ್ತಮೊದಲ ಉಲ್ಲೇಖ ದೊರೆಯುತ್ತದೆ.[೧] ಅಮರಾವತಿ (ಕ್ವಾಂಗ್ ನಾಮ್), ವಿಜಯ (ಬಿನ್ ದಿನ್), ಕೌಥರ (ನ್ಹ ತ್ರಂಗ್) ಮತ್ತು ಪಂಡುರಂಗ (ಫನ್ ರಂಗ್) ಎಂಬ ನಾಲ್ಕು ವಿಭಾಗಗಳನ್ನು ಇದು ಒಳಗೊಂಡಿತ್ತು. ಇಲ್ಲಿಯ ರಾಜಮನೆತನಗಳು ಪ್ರಬಲವಾದುವು. ಕ್ರಮೇಣ ಈ ಭಾಗಗಳೆಲ್ಲ ಒಂದೇ ಆಧಿಪತ್ಯಕ್ಕೊಳಪಟ್ಟುವು. 14ನೆಯ ಶತಮಾನದವರೆಗೆ ಹೆಚ್ಚು ಕಡಿಮೆ ಸ್ವತಂತ್ರ ರಾಜ್ಯವಾಗಿದ್ದ ಇದು ಅನಂತರ ವಿಯಟ್ನಾಂ ಜನರ ಅಧೀನಕ್ಕೆ ಒಳಪಟ್ಟಿತು.
ಆರಂಭ
[ಬದಲಾಯಿಸಿ]ಮೂರನೆಯ ಶತಮಾನದ ಆರಂಭದವರೆಗೂ ಈ ಪ್ರದೇಶ ಚೀನಿಯರ ಅಂಕೆಯಲ್ಲಿತ್ತು. ಹಾನ್ ಮನೆತನ ಸು. 220ರ ವೇಳೆಗೆ ಚೀನದಲ್ಲಿ ಅಂತ್ಯಗೊಂಡಿತು.[೨] ಇದರ ಪ್ರಯೋಜನ ಪಡೆದ ಚಾಮ್ ಜನರು ತಮ್ಮದೇ ಆದ ರಾಜ್ಯವನ್ನು ಚಂಪಾದಲ್ಲಿ ಆರಂಭಿಸಿದರು. ಆದರೂ ಚೀನದ ಅರಸರು ಇವರ ಮೇಲೆ ಆಗಿಂದಾಗ್ಗೆ ದಾಳಿ ಮಾಡಿ ಇವರು ತಮ್ಮ ಸಾರ್ವಭೌಮತ್ವವನ್ನು ಒಪ್ಪುವಂತೆ ಮಾಡುತ್ತಿದ್ದರು. ತಮ್ಮ ರಾಯಭಾರಿಗಳನ್ನು ಚೀನಕ್ಕೆ ಕಳುಹಿಸಿ, ಕ್ರಮವಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸಿ, ಚಂಪಾದ ಅರಸರು ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಗಳಾದರು.
ಅರಸರು
[ಬದಲಾಯಿಸಿ]ಚೀನದ ಲೇಖಕರ ಬರೆವಣಿಗೆಗಳಲ್ಲಿ ವರ್ಮ ಎಂದು ಅಂತ್ಯಗೊಳ್ಳುವ ಚಂಪಾ ದೇಶದ ಅರಸರ ಹೆಸರುಗಳು ಕಂಡುಬಂದಿವೆಯಾಗಿ ಇವರು ಭಾರತೀಯರಾಗಿರಬಹುದೆಂದು ಊಹಿಸಲಾಗಿದೆ. ಚಂಪಾದ ಮೊದಲ ಅರಸ ಫಾನ್ ಹಾಂಗ್ ಸು. 270ರಲ್ಲಿ ಕಾಣಿಸಿಕೊಳ್ಳುತ್ತಾನೆ.[೩]: 323 ಟಾನ್‍ಕಿನ್ ವಿರುದ್ಧ ಈತ ದಾಳಿ ನಡೆಸಿದ. ಆದರೆ ಅಲ್ಲಿಯವರು ಇವನನ್ನು ಕೆಲಕಾಲಾನಂತರ ಓಡಿಸಿದರು. ಅನಂತರ ಫಾನ್ ಯಿ 50 ವರ್ಷಗಳಿಗೂ ಹೆಚ್ಚುಕಾಲ ಆಳಿದ. ಅವನ ಮಂತ್ರಿಯಾಗಿದ್ದ ವೆನ್ ಅವನ ಉತ್ತರಾಧಿಕಾರಿಯಾದ (336).[೪] 349ರಲ್ಲಿ ಅವನ ಮಗ ಫಾನ್ ಫೊ ರಾಜ್ಯವಾಳತೊಡಗಿದ. ಚೀನೀಯರ ವಿರುದ್ಧ ಹೋರಾಡಿ ತಂದೆ ಗೆದ್ದಿದ್ದ ಪ್ರದೇಶಗಳನ್ನು ಈತ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿಸಿತು. ನಿರಂತರವಾಗಿ ಚೀನದೊಡನೆ ಯುದ್ಧ ಮಾಡುವುದರಲ್ಲಿ ಈತ ತನ್ನ ಆಳ್ವಿಕೆಯ ಬಹು ಭಾಗವನ್ನು ಕಳೆದ. ಅನಂತರ ಈತನ ಮಗ ಫಾನ್ ಹು-ತ ಪಟ್ಟಕ್ಕೆ ಬಂದ. ಚಂಪಾ ದೇಶದ ಇತಿಹಾಸದಲ್ಲಿ ಇವನು ಪ್ರಮುಖ.
ಆ ಕಾಲದ ಅನೇಕ ಸಂಸ್ಕೃತ ಶಾಸನಗಳು ಚಂಪಾದಲ್ಲಿ ದೊರೆತಿವೆ. ಇವುಗಳಲ್ಲಿ ಈ ಅರಸರ ಭಾರತೀಯ ಹೆಸರುಗಳಿವೆ. ಫಾನ್ ಹು-ತ ಎಂಬುವನೇ ಸಂಸ್ಕೃತ ಶಾಸನದ ಶ್ರೀ ಭದ್ರವರ್ಮ. ಇವನು ಶ್ರೀಮಾರ ರಾಜಕುಲಕ್ಕೆ ಸೇರಿದವನೆಂದು ಹೇಳಲಾಗಿದೆ. ಚೊ ದಿನ್ ಎಂಬಲ್ಲಿ ದೊರೆತ ಎರಡು ಶಾಸನಗಳು ಧರ್ಮ ಮಹಾರಾಜ ಭದ್ರವರ್ಮನ ಭದ್ರೇಶ್ವರಿ ಸ್ವಾಮಿ ಹೆಸರುಗಳನ್ನೊಳಗೊಂಡಿದೆ. ಈತ ಭದ್ರೇಶ್ವರಸ್ವಾಮಿ ದೇವಾಲಯವನ್ನು ಕಟ್ಟಿಸಿದ. ಭದ್ರವರ್ಮನ ಸಂತಾನಕ್ಕೆ ಶುಭವಾಗಲೆಂದು ಪ್ರಾರ್ಥನೆ ಒಂದು ಶಾಸನದಲ್ಲಿ ಇದೆ. ಇನ್ನೊಂದು ಶಾಸನವನ್ನು "ಶಿವದಾಸೋ ಬದ್ಧ್ಯತೇ" ಎಂದು ಓದಿ. ಶಿವನ ಪ್ರೀತ್ಯರ್ಥವಾಗಿ ನರನೊಬ್ಬನನ್ನು ಬಲಿ ಕೊಡುವುದನ್ನು ಇದು ಸೂಚಿಸುತ್ತದೆ ಎಂದು ಕೆಲವರು ಮೊದಲು ಅದಕ್ಕೆ ಅರ್ಥ ನೀಡಿದ್ದರು. ಆದರೆ ವಾಸ್ತವವಾಗಿ ಈ ಶಾಸನ "ಶಿವದಾಸೋ ವಂದ್ಯತೇ" ಎಂದಿದೆಯೆಂದೂ ಅರಸ ಶಿವಭಕ್ತನಾಗಿದ್ದನೆಂದಷ್ಟೇ ಸೂಚಿಸುತ್ತದೆ ಎಂದೂ ಇತ್ತೀಚೆಗೆ ತೋರಿಸಲಾಗಿದೆ. ಮೆಸಾನ್ ಎಂಬಲ್ಲಿ ಈತ ಭದ್ರೇಶ್ವರ ಸ್ವಾಮಿಯ ದೇವಾಲಯವನ್ನು ಕಟ್ಟಸಿದನೆಂದು ಅಲ್ಲಿ ದೊರೆತ ಶಾಸನ ತಿಳಿಸುತ್ತದೆ.[೫]: 29 ಅರಸನ ಹೆಸರನ್ನೇ ದೇವಾಲಯಗಳಿಗೆ ಇಡುವ ಪದ್ಧತಿ ಇಲ್ಲಿ ಆರಂಭವಾದದ್ದು ಗಮನಾರ್ಹ. ಭದ್ರೇಶ್ವರಾಲಯ ಅಗ್ನಿಗೆ ಆಹುತಿಯಾಯಿತೆಂದು ಅನಂತರದ ಶತಮಾನದಲ್ಲಿ ಆಳಿದ ಶಂಭುವರ್ಮನೆಂಬುವನು ಇದನ್ನು ಜೀರ್ಣೋದ್ಧಾರ ಮಾಡಿದನೆಂದೂ ಅಲ್ಲಿಯ ಇನ್ನೊಂದು ಶಾಸನದಲ್ಲಿ ಹೇಳಿದೆ.[೬]: 326 ಈ ದೇವಾಲಯ ಆಗ ಶಂಭು ಭದ್ರೇಶ್ವರ ಎನಿಸಿಕೊಂಡಿತು. 24 ಸಾಲುಗಳ ಆ ಶಾಸನ, ಪದ್ಯ-ಗದ್ಯ ಮಿಶ್ರಿತ ಸಂಸ್ಕೃತದಲ್ಲಿದೆ. ಮಂದಾಕ್ರಾಂತ, ಮಾಲಿನಿ ಮತ್ತು ಉಪೇಂದ್ರವಜ್ರ ವೃತ್ತಗಳನ್ನು ಅದರಲ್ಲಿ ಬಳಸಲಾಗಿದೆ. ಭದ್ರವರ್ಮ ಮತ್ತು ಶಂಭುವರ್ಮರ ನಡುವೆ ರುದ್ರವರ್ಮನೆಂಬ ಇನ್ನೊಬ್ಬ ಅರಸ ಆಳಿದ. ಅವರ ಪರಸ್ಪರ ಸಂಬಂಧಗಳು ತಿಳಿದಿಲ್ಲ. ಅವರ ಕಾಲದಲ್ಲಿ ಚೀನೀ ಅರಸರೊಂದಿಗೆ ಮೇಲಿಂದ ಮೇಲೆ ನಡೆದ ಕದನಗಳು ಅವರ ಬಲವನ್ನು ಕುಗ್ಗಿಸಿದುವು. ದಕ್ಷನಾದ ಅರಸನಿಲ್ಲದೆ ಆಂತರಿಕ ಕಲಹಗಳುಂಟಾದುವು. ಭದ್ರವರ್ಮನಿಂದ ಆರಂಭವಾದ ಈ ಅರಸರ ಆಳ್ವಿಕೆ ಅಂತ್ಯಗೊಂಡಿತು. ಈ ವಂಶದ ಅರಸರಲ್ಲಿ ಪ್ರಭಾಸಧರ್ಮ ಪ್ರಮುಖನಾದವನು. ವಿಕ್ರಾಂತವರ್ಮನೆಂಬ ಹೆಸರಿನಿಂದ ಖ್ಯಾತನಾದ ಈತ ವಿಷ್ಣು ದೇವಾಲಯಗಳನ್ನು ಕಟ್ಟಿಸಿದ.[೭] ವೈಷ್ಣವಧರ್ಮ ಇವನ ಕಾಲದಲ್ಲಿ ಹೆಚ್ಚಾಗಿ ಪ್ರಚಾರವಾಯಿತು.
ಪಂಡುರಂಗ ಮನೆತನ
[ಬದಲಾಯಿಸಿ]8ನೆಯ ಶತಮಾನದಲ್ಲಿ ಇಲ್ಲಿ ಪಂಡುರಂಗ ಮನೆತನ ಅಸ್ತಿತ್ವಕ್ಕೆ ಬಂತು. ಚೀನದ ಇತಿಹಾಸಕಾರರು ಈ ರಾಜ್ಯವನ್ನು ಮೊದಲಿನಂತೆ ಲಿನ್‍ಯಿ ಎಂದು ಕರೆಯದೆ ಹ್ವಾನ್ ವಾಂಗ್ ಎಂದು ಕರೆದಿದ್ದಾರೆ. ಪಂಡುರಂಗ ಮನೆತನ ಚಂಪಾದಲ್ಲಿ ಆಳಿದ ಐದನೆಯ ವಂಶವೆಂದು ಕೆಲವರು ಗಣಿಸಿದ್ದಾರೆ. ಪೃಥ್ವೀಂದ್ರವರ್ಮ ಅವರ ಮೊದಲ ಅರಸ. ಈ ಕಾಲದಲ್ಲಿ ಶೈವಮತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತು. ಲಿಂಗಗಳ ಪ್ರತಿಷ್ಠೆ ಮಾಡಿ, ಅವಕ್ಕೆ ವಿವಿಧ ಆಕೃತಿಗಳ ಲೋಹದ ಮುಖವಾಡಗಳನ್ನು ಹೊದಿಸುವ ಪದ್ಧತಿ ಆರಂಭವಾಯಿತು. ಜಾವಾ ದ್ವೀಪದ ನಾವಿಕರು ಚಂಪಾದ ಮೇಲೆ ದಾಳಿ ಮಾಡಿ ಅಲ್ಲಿಯ ದೇವಾಲಯದ ದ್ರವ್ಯವನ್ನು ದೋಚಿದಾಗೊಮ್ಮೆ ಸತ್ಯವರ್ಮನೆಂಬ ಅರಸ ಅವರನ್ನು ಸೋಲಿಸಿ, ಅವರನ್ನು ಬೆಂಕೊಂಡು, ಅವರು ಸಮುದ್ರದಲ್ಲಿ ಎಸೆದು ಹೋದ ದೇವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಿದ.[೮][೯][೧೦][೧೧] ಸತ್ಯವರ್ಮನ ಬಳಿಕ ಇಂದ್ರವರ್ಮ ಮತ್ತು ಹರಿವರ್ಮರು ಆಳಿದರು. ಹರಿವರ್ಮ ಜಾವಾದ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದನಲ್ಲದೆ, ಚೀನ ಮತ್ತು ಕಾಂಬೋಡಿಯಗಳ ವಿರುದ್ಧವಾಗಿಯೂ ಸೈನ್ಯಾಚರಣೆ ನಡೆಸಿದ.[೧೨]
ಇಮ್ಮಡಿ ಇಂದ್ರವರ್ಮ (854-808) ಆರನೆಯ ಭೃಗುವಂಶದ ಮೂಲಪುರುಷ.[೧೩] ಈ ವಂಶದ ಅರಸರು ಅನೇಕ ಹೊಸ ದೇವಾಲಯಗಳನ್ನು ಕಟ್ಟಿಸಿದ್ದಲ್ಲದೆ ಭಗ್ನವಾಗಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದರು. ಹತ್ತನೆಯ ಶತಮಾನದ ಆರಂಭದಲ್ಲಿ (907) ಚೀನದ ಟಾಂಗ್ ಮನೆತನ ಅಳಿದು ಅನ್ನಾಂ ಜನರ ರಾಜ್ಯ ಪ್ರಬಲವಾಯಿತು. ಈ ಹೊಸ ರಾಜ್ಯಕ್ಕೂ, ಭೃಗುವಂಶದ ಅರಸರಿಗೂ ನಡುವೆ ವಿರಸವೇರ್ಪಟ್ಟು, ಪರಮೇಶ್ವರವರ್ಮ ಅನ್ನಾಂ ರಾಜ್ಯದ ರಾಯಭಾರಿಯನ್ನು ಸೆರೆಮನೆಯಲ್ಲಿ ಇಟ್ಟನೆಂಬ ಕಾರಣದಿಂದ[೧೪] ಆ ರಾಜ್ಯದ ಅರಸನಾದ ಲೆ ಹೋನ್ ಚಂಪಾವನ್ನು ಮುತ್ತಿ, ಪರಮೇಶ್ವರವರ್ಮವನ್ನು ಕೊಂದ. ರಾಜಧಾನಿಯಾದ ಇಂದ್ರಪುರವನ್ನು ನಾಶಮಾಡಿದ.[೧೫][೧೬] ಇದರ ಫಲವಾಗಿ ಚಂಪಾದಲ್ಲಿ ಸ್ವಲ್ಪಕಾಲ ಅರಾಜಕತೆ ಉಂಟಾಯಿತು. ಲೂ ಕಿ-ಟಾಂಗ್ ಎಂಬ ಅನ್ನಾಂ ನಾಯಕನೊಬ್ಬ ಚಂಪಾದ ಅರಸನೆಂದು ಘೋಷಿಸಿಕೊಂಡು ಆಳತೊಡಗಿದ.
ಆದರೆ ವಿಯ (ಬಿನ್ ದಿನ್) ಎಂಬ ನಗರದಲ್ಲಿ ಚಾಮ್ ಪ್ರಜೆಯೊಬ್ಬ ಪ್ರಾಮುಖ್ಯ ಗಳಿಸಿ, ಹರಿವರ್ಮನೆಂಬ ಹೆಸರಿನಿಂದ ಚಂಪಾರಾಜ್ಯದ ಅರಸನಾದ. ಅವನನ್ನು ಅಡಗಿಸಲು ಮಾಡಿದ ಯತ್ನಗಳು ನಿರರ್ಥಕವಾದುವು. ಈತ ಏಳನೆಯ ವಂಶದ ಮೊದಲ ಅರಸ. ಇವನಿಗೆ ಚೀನದ ಅರಸ ಮನ್ನಣೆ ನೀಡಿದ. ಕ್ರಮೇಣ ಈತ ರಾಜಧಾನಿಯನ್ನು ಇಂದ್ರಪುರಕ್ಕೆ ಬದಲಾಯಿಸಿದನಾದರೂ, ಅನಂತರ ಬಂದ ವಿಜಯಶ್ರೀ ಎಂಬುವನು ಅನ್ನಾಂ ರಾಜ್ಯದ ಆಕ್ರಮಣಗಳಿಗೆ ಹೆದರಿ ಪುನಃ ವಿಜಯನಗರಕ್ಕೆ ರಾಜಧಾನಿಯನ್ನು ಬದಲಾಯಿಸಬೇಕಾಯಿತು. 1041ರಲ್ಲಿ ವಿಜಯಶ್ರೀ ಮರಣ ಹೊಂದಿದ ಬಳಿಕ ಚೀನದ ಅರಸರ ಸಹಾಯದಿಂದ ಇಮ್ಮಡಿ ಜಯಸಿಂಹವರ್ಮ ಪಟ್ಟಕ್ಕೆ ಬಂದ. ಆದರೆ ಅವನ ಮೇಲೆ ದಂಡೆತ್ತಿ ಬಂದ ಅನ್ನಾಂ ಸೈನ್ಯ ರಾಜಧಾನಿಯನ್ನು ಆಕ್ರಮಿಸಿ ಅವನನ್ನು ಕೊಂದು ರಾಜ್ಯವನ್ನು ಕೊಳ್ಳೆ ಹೊಡೆಯಿತು.[೧೭][೧೮] ಇದರೊಂದಿಗೆ ಏಳನೆಯ ಅರಸುಮನೆತನ ಅಂತ್ಯಗೊಂಡಿತು.
ಎಂಟನೆಯ ಮನೆತನ ಜಯಪರಮೇಶ್ವರ ವರ್ಮನಿಂದ ಆರಂಭವಾಯಿತು. ಈತ ಆಂತರಿಕ ದಂಗೆಗಳನ್ನು ಅಡಗಿಸಿ, ಚೀನ ಮತ್ತು ಅನ್ನಾಮ್‍ಗಳಿಗೆ ರಾಯಭಾರಿಗಳನ್ನು ಕಳುಹಿಸಿ ಅವುಗಳ ಅರಸರ ಸ್ನೇಹ ಬೆಳೆಸಿದ. ಈ ಮನೆತನದ ಕೊನೆಯ ಅರಸ ಮುಮ್ಮಡಿ ರುದ್ರವರ್ಮ. 1069ರಲ್ಲಿ ಈತನಿಗೂ ಅನ್ನಾಂ ರಾಜ್ಯದ ಅರಸನಿಗೂ ನಡುವೆ ಭೀಕರ ಕದನ ಉಂಟಾಗಿ ಅನ್ನಾಂ ಅರಸನಾದ ಲಿ ಥಾನ್ ತೋನ್ ರಾಜಧಾನಿಯನ್ನು ಮುತ್ತಿ, ಇವನನ್ನು ಸೆರೆಹಿಡಿದು ರಾಜಧಾನಿಯನ್ನು ನಾಶಗೊಳಿಸಿದ. ರುದ್ರವರ್ಮ ತನ್ನ ರಾಜ್ಯದ ಬಹುಭಾಗವನ್ನು ಕಳೆದುಕೊಂಡ. ಆತ ಬಿಡುಗಡೆ ಹೊಂದಿ ಹಿಂದಿರುಗಿದನಾದರೂ ಚಂಪಾ ರಾಜ್ಯದ ಪರಿಸ್ಥಿತಿ ಹದಗೆಟ್ಟಿತು.
ಥಾಂಗ್ ಈ ರಾಜ್ಯದ ಒಂಬತ್ತನೆಯ ವಂಶದ ಮೊದಲ ಅರಸ. ಈತ ನಾಲ್ಕನೆಯ ಹರಿವರ್ಮನೆಂಬ ಹೆಸರಿನಿಂದ ಆಳತೊಡಗಿದ. ಈತ ಅನ್ನಾಂ ದೇಶದೊಡನೆ ಮಿತ್ರತ್ವ ಸಾಧಿಸಿ, ತನ್ಮೂಲಕ ರಾಜ್ಯದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡಿ, ರಾಜ್ಯದ ಪ್ರಗತಿಗೆ ಹೇತುವಾದ.[೧೯] ಮಧ್ಯೇಮಧ್ಯೇ ತೊಡಕುಗಳುಂಟಾದರೂ 13ನೆಯ ಶತಮಾನದ ಮಧ್ಯಭಾದವರೆಗೂ ಈ ಎರಡೂ ರಾಜ್ಯಗಳ ನಡುವಣ ಸಂಬಂಧ ಒಟ್ಟಿನಲ್ಲಿ ಸುಮುಖವಾಗಿತ್ತು. ಆದರೆ ಖ್ಮೇರ್ ಜನಾಂಗದವರು ತಮ್ಮ ಪ್ರಭುತ್ವವನ್ನು ಚಂಪಾ ರಾಜ್ಯದ ಮೇಲೆ ಹೇರಲು ಯತ್ನಿಸಿ ಚಂಪಾದ ಹೊಸ ಶತ್ರುಗಳಾದರು.
1145ರಲ್ಲಿ ಅಂಗ್‍ಕೋರ್‌ನ ಇಮ್ಮಡಿ ಸೂರ್ಯವರ್ಮ ಚಂಪಾವನ್ನು ಮುತ್ತಿ 3ನೆಯ ಜಯ ಇಂದ್ರವರ್ಮನನ್ನು ಹೊರದೂಡಿದ.[೨೦]: 75–76 ನಾಲ್ಕೈದು ವರ್ಷಗಳ ಕಾಲ ಈ ರಾಜ್ಯದ ಉತ್ತರ ಭಾಗ ಅವನ ವಶದಲ್ಲಿತ್ತು. ಆದರೆ ಪಂಡುರಂಗದಲ್ಲಿ ಹೊಸ ಮನೆತನವನ್ನಾರಂಭಿಸಿದ (1147) ಜಯಹರಿ ವರ್ಮ ಮೂರು ನಾಲ್ಕು ವರ್ಷಗಳಲ್ಲಿ ವಿಜಯವನ್ನು ಆಕ್ರಮಿಸಿ ರಾಜ್ಯವನ್ನು ಒಟ್ಟುಗೂಡಿಸಿದ.[೨೧] 1167ರಲ್ಲಿ ಹರಿವರ್ಮನ ಮಗನನ್ನು ಬದಿಗೆ ಸರಿಸಿ ರಾಜನಾದ ಜಯ ಇಂದ್ರವರ್ಮ ಕಂಬುಜದ ಮೇಲೆ ಸೇಡು ತೀರಿಸಿಕೊಳ್ಳಲು ಸನ್ನದ್ಧನಾಗಿ 1177ರಲ್ಲಿ ಮೆಕಾಂಗ್ ಪ್ರದೇಶವನ್ನು ದಾಟಿ ಅಂಗ್‌ಕೋರ್ ನಗರವನ್ನು ಮುತ್ತಿ ಕೊಳ್ಳೆಹೊಡೆದ.[೨೨]: 120 [೨೩]: 163–164, 166 ಇದು ಚಂಪಾ ಹಾಗು ಕಂಬುಜ ದೇಶಗಳ ನಡುವಣ ವಿರೋಧವನ್ನು ಹೆಚ್ಚಿಸಿತು. 13ನೆಯ ಶತಮಾನದ ಆದಿಭಾಗದಲ್ಲಿ ಕಂಬುಜದ ಕೈ ಮೇಲಾಗಿ ಚಂಪಾ ತನ್ನ ವ್ಯಕ್ತಿತ್ವವನ್ನು ಎರಡು ದಶಕಗಳ ಕಾಲ ಕಳೆದುಕೊಂಡಿತು. 1220ರ ಬಳಿಕ 2ನೆಯ ಜಯ ಪರಮೇಶ್ವರವರ್ಮನ ಕಾಲದಲ್ಲಿ ಚಂಪಾ ಪುನಃ ಚೇತರಿಸಿಕೊಂಡಿತಾದರೂ ಅವನ ಅನಂತರ ಬಂದ ಅರಸರ ಕಾಲದಲ್ಲಿ ಮಂಗೋಲರು ಕುಬ್ಲೈ ಖಾನನ ನೇತೃತ್ವದಲ್ಲಿ ಈ ಪ್ರದೇಶದ ಮೇಲೆ ನುಗ್ಗಿದರು. ಹಲವಾರು ಘರ್ಷಣೆಗಳ ಬಳಿಕ ಚಂಪಾ ರಾಜ್ಯ ದುರ್ಬಲವಾಯಿತು. 14ನೆಯ ಶತಮಾನದ ಆರಂಭದಲ್ಲಿ ಅನ್ನಾಂ ರಾಜ್ಯ ಮತ್ತೊಮ್ಮೆ ಪ್ರಬಲವಾಗಿ ಚಂಪಾವನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತು. ಚಂಪಾ ರಾಜ್ಯದ ಆನಂತರದ ಇತಿಹಾಸ ಆಂತರಿಕ ಕಲಹಗಳಿಂದ ಕೂಡಿದ್ದಾಗಿದೆ. 15ನೆಯ ಶತಮಾನದ ಕೊನೆಗೆ ಈ ರಾಜ್ಯ ಅನ್ನಾಂ ರಾಜ್ಯದಲ್ಲಿ ಸೇರಿಹೋಯಿತು.
ಸಂಸ್ಕೃತಿ
[ಬದಲಾಯಿಸಿ]ಚಂಪಾ ರಾಜ್ಯದಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ಬಹಳಮಟ್ಟಿಗೆ ಕಂಡುಬಂದಿದೆ. ಅಲ್ಲಿ ದೊರೆತ ಅನೇಕ ಶಾಸನಗಳು ಸಂಸ್ಕೃತ ಭಾಷೆಯಲ್ಲಿವೆ. ಅಲ್ಲಿಯ ದೇವಾಲಯಗಳು ಮತ್ತು ಮೂರ್ತಿಶಿಲ್ಪಗಳು ಭಾರತೀಯ ಶೈಲಿಯಿಂದ ಪ್ರಭಾವಿತವಾದವು. ಕ್ರಿ.ಶ. 4ನೆಯ ಶತಮಾನದಲ್ಲಿ ಆಳಿದ ಗುಪ್ತ ಅರಸರು ಈ ಸಂಸ್ಕೃತಿ ಪ್ರಸಾರಕ್ಕೆ ಕಾರಣರೆಂದು ಊಹಿಸಲಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿಯ ಶಾಸನಗಳ ಲಿಪಿ, ಭಾಷೆ ಮುಂತಾದವುಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಪಲ್ಲವರೂ, ಕರ್ನಾಟಕದಲ್ಲಿ ಆಳಿದ ಕದಂಬ ಹಾಗೂ ಬಾದಾಮಿಯ ಚಾಳುಕ್ಯರೂ ಈ ಸಂಸ್ಕೃತಿ ಪ್ರಸಾರ ಕಾರ್ಯದಲ್ಲಿ ನೆರವಾಗಿದ್ದರೆಂಬ ವಿಷಯ ಗೋಚರವಾಗುತ್ತದೆ. ಶೈವ-ವೈಷ್ಣವ ಧರ್ಮಗಳೇ ಅಲ್ಲದೆ ಬೌದ್ಧಮತದ ಪರಿಚಯ ಸಹ ಅಲ್ಲಿಯ ಜನರಿಗೆ ಇತ್ತು. ಅಲ್ಲಿ ಅನೇಕ ಬೌದ್ಧ ಸ್ತೂಪಗಳಿದ್ದುವೆಂದು ಚೀನೀ ಯಾತ್ರಿಕರ ಬರೆವಣಿಗೆಗಳಿಂದ ತಿಳಿದಿದೆ. ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಆ ಜನರನ್ನು ಆಕರ್ಷಿಸಿದ್ದುವು. ಭಾರತದ ಧರ್ಮಶಾಸ್ತ್ರಗಳ, ಸಾಹಿತ್ಯ ಕೃತಿಗಳ ಪರಿಚಯ ಅವರಿಗೆ ಇತ್ತು. ಈ ವಿಷಯ ಅವರ ಶಾಸನಗಳಲ್ಲಿಯ ಉಲ್ಲೇಖಗಳಿಂದ ತಿಳಿದುಬಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Champa – ancient kingdom, Indochina". 17 July 2023.
- ↑ Hinsch (2002), pp. 24–25.
- ↑ Higham, C., 2014, Early Mainland Southeast Asia, Bangkok: River Books Co., Ltd., ISBN 9786167339443
- ↑ Chapuis, Oscar (1995-08-30). A History of Vietnam: From Hong Bang to Tu Duc (in ಇಂಗ್ಲಿಷ್). Bloomsbury Academic. ISBN 978-0-313-29622-2.
- ↑ Maspero, G., 2002, The Champa Kingdom, Bangkok: White Lotus Co., Ltd., ISBN 9747534991
- ↑ Higham, C., 2014, Early Mainland Southeast Asia, Bangkok: River Books Co., Ltd., ISBN 9786167339443
- ↑ Goodall & Griffiths 2013, p. 429.
- ↑ Ralph Bernard Smith (1979). Early South East Asia: essays in archaeology, history, and historical geography. Oxford University Press. p. 447. ISBN 978-0-19-713587-7.
- ↑ Charles Alfred Fisher (1964). South-east Asia: a social, economic, and political geography. Methuen. p. 108. ISBN 9789070080600.
{{cite book}}
: ISBN / Date incompatibility (help) - ↑ Ronald Duane Renard; Mahāwitthayālai Phāyap. Walter F. Vella Fund; University of Hawaii at Manoa. Center for Asian and Pacific Studies (1986). Anuson Walter Vella. Walter F. Vella Fund, Payap University. p. 121.
- ↑ Golzio 2004, p. 37.
- ↑ Coedès 1975, p. 104.
- ↑ Hall 1981, p. 203.
- ↑ Coedès 1968, p. 124.
- ↑ Maspero 2002, p. 57.
- ↑ Kiernan 2019, p. 146.
- ↑ Lafont 2007, p. 156.
- ↑ Coedès 1975, p. 140.
- ↑ Coedès 1975, p. 154.
- ↑ Maspero, G., 2002, The Champa Kingdom, Bangkok: White Lotus Co., Ltd., ISBN 9747534991
- ↑ Cœdès 1968, p. 164.
- ↑ Higham, C., 2001, The Civilization of Angkor, London: Weidenfeld & Nicolson, ISBN 9781842125847
- ↑ Coedès, George (1968). Walter F. Vella (ed.). The Indianized States of Southeast Asia. trans.Susan Brown Cowing. University of Hawaii Press. ISBN 978-0-8248-0368-1.
ಗ್ರಂಥಸೂಚಿ
[ಬದಲಾಯಿಸಿ]- Hinsch, Bret (2002), Women in Imperial China, Lanham: Rowman & Littlefield Publishers, ISBN 978-0-7425-1872-8.
- Goodall, Dominic; Griffiths, Arlo (2013). "Études du Corpus des inscriptions du Campā. V. The Short Foundation Inscriptions of Prakāśadharman-Vikrāntavarman, King of Campā" (PDF). Indo-Iranian Journal. 56 (3–4): 419–440. doi:10.1163/15728536-13560307.
- Golzio, Karl-Heinz (2004), Inscriptions of Campā based on the editions and translations of Abel Bergaigne, Étienne Aymonier, Louis Finot, Édouard Huber and other French scholars and of the work of R. C. Majumdar. Newly presented, with minor corrections of texts and translations, together with calculations of given dates, Shaker Verlag
- Coedès, George (1975), Vella, Walter F. (ed.), The Indianized States of Southeast Asia, University of Hawaii Press, ISBN 978-0-824-80368-1
- Hall, Daniel George Edward (1981), History of South East Asia, Macmillan Education, Limited, ISBN 978-1-349-16521-6
- Kiernan, Ben (2019), Việt Nam: a history from earliest time to the present, Oxford University Press, ISBN 978-0-19005-379-6
- Maspero, Georges (2002), The Champa Kingdom, White Lotus Co., Ltd, ISBN 978-9-747-53499-3
- Lafont, Pierre-Bernard (2007), Le Campā: Géographie, population, histoire, Indes savantes, ISBN 978-2-84654-162-6
ಹೊರಗಿನ ಕೊಂಡಿಗಳು
[ಬದಲಾಯಿಸಿ]- "Research on Champa and its Evolution" (PDF).
- Website of the Asia Research Institute, including the working paper "Champa Revised" by Michael Vickery, and the draft translation "Champa in the Song hui-yao" by Geoff Wade
- Ken, Danny Wong Tze (11 March 2004). "Vietnam-Champa Relations and the Malay-Islam Regional Network in the 17th–19th Centuries". Kyoto Review of Southeast Asia.
- The Survivors of a Lost Civilisation
