ವಿಷಯಕ್ಕೆ ಹೋಗು

ಚಂದ ಬರದಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೃಥ್ವಿರಾಜ್ ಚೌಹಾಣ್ ಒಂದು ಹುಲಿಯನ್ನು ಬೇಟೆಯಾಡುತ್ತಿರುವ ವರ್ಣಚಿತ್ರ. ಅವನ ಪಕ್ಕದಲ್ಲಿ ಚಂದ ಬರದಾಯಿ ಇದ್ದಾನೆ, ಜೋಧ್‍ಪುರ್, ಸು. ೧೮೩೦

ಚಂದ ಬರದಾಯಿ ಹಿಂದಿಯ ಮೊದಲ ಮಹಾಕಾವ್ಯವೆಂಬ ಅತ್ಯುಕ್ತಿಗೆ ಪಾತ್ರವಾಗಿರುವ ಪೃಥ್ವೀರಾಜ ರಾಸೋ ಎಂಬ ದೀರ್ಘಕಾವ್ಯದ ಕರ್ತೃವೆಂದು ಈತ ಪ್ರಸಿದ್ಧ; ಕೊನೆಯ ಹಿಂದೂ ಚಕ್ರವರ್ತಿಯಾದ ಪೃಥ್ವೀರಾಜನ ಸ್ನೇಹಿತ ಹಾಗೂ ಆಸ್ಥಾನ ಕವಿ[] ಆಗಿದ್ದನೆಂದೂ ಹೇಳಲಾಗಿದೆ. ಇವರಿಬ್ಬರೂ ಒಂದೇ ದಿನ ಹುಟ್ಟಿ ಒಂದೇ ದಿನ ಸತ್ತರೆಂದೂ ಚಂದನ ಮರಣಾನಂತರ,[] ಅವನ ಮಗನಾದ ಜಲ್ಹಣ ಈ ಕಾವ್ಯವನ್ನು ಪೂರೈಸಿದನೆಂದೂ ಹೇಳಲಾಗಿದೆ. ಈ ಕೃತಿಯ ವೈಶಿಷ್ಟ್ಯವೇನೆಂದರೆ, ಕವಿಯಾಗುವ ವ್ಯಕ್ತಿಯೇ ಕಾವ್ಯದ ಒಂದು ಪಾತ್ರವೂ ಆಗಿರುವುದು. ಪೃಥ್ವೀರಾಜನಿಗೆ ಈತ ಮಿತ್ರನೂ ಹೌದು ಮಾರ್ಗದರ್ಶಿಯೂ ಹೌದು. ಈತನ ಪಾತ್ರ ಕಾವ್ಯದಲ್ಲಿ ಪ್ರತ್ಯೇಕಿಸಿ ನೋಡುವುದು ಸಾಧ್ಯವಾಗುವುದಿಲ್ಲ. ಕವಿಗೆ ಸಂಬಂಧಿಸಿದ ಐತಿಹಾಸಿಕ ವಿವರಗಳು ಅಷ್ಟಾಗಿ ಲಭ್ಯವಾಗಿಲ್ಲದಿರುವುದೂ ಇದಕ್ಕೆ ಕಾರಣ.

ಕವಿಯ ಅಸ್ತಿತ್ವ ಮತ್ತು ವ್ಯಕ್ತಿತ್ವ

[ಬದಲಾಯಿಸಿ]

ಕವಿಯ ಅಸ್ತಿತ್ವ ಮತ್ತು ವ್ಯಕ್ತಿತ್ವಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಕಾಣಿಸಿಕೊಂಡಿವೆ. ಪೃಥ್ವೀರಾಜನ ಆಸ್ಥಾನದಲ್ಲಿದ್ದ ಕಾಶ್ಮಿರೀ ಕವಿ ಜಯಾನಕ ರಚಿಸಿರುವ ಪೃಥ್ವಿರಾಜ ವಿಜಯದಲ್ಲಿ ಚಂದ ಬರದಾಯಿಯ ಹೆಸರು ಕಾಣದೊರೆಯುವುದಿಲ್ಲ. ಒಂದೆಡೆಯೇನೋ ಚಂದ್ರಕ ಎಂಬ ಹೆಸರು ಉಲ್ಲೇಖಿತವಾಗಿದೆಯಾದರೂ ಅದು ಕಾಶ್ಮೀರದ ಚಂದ್ರಕನೆಂಬ ಮತ್ತೊಬ್ಬ ಕವಿಯ ಹೆಸರಾಗಿರಬೇಕೆಂದು ವಿದ್ವಾಂಸರು ಭಾವಿಸಿದ್ದಾರೆ. ಚಂದ ಪೃಥ್ವೀರಾಜನ ತಂದೆಯಾದ ಸೋಮೇಶ್ವರನ ಆಸ್ಥಾನಿಕನಾಗಿದ್ದ ಹಾಗೂ ಪೃಥ್ವೀರಾಜನ ಸ್ನೇಹಿತನೂ ಮಂತ್ರಿಯೂ ಆಗಿದ್ದ. ನಾಗೌರ್‌ನಲ್ಲಿ ಪೃಥ್ವೀರಾಜ ಚಂದನಿಗೆ ಜಮೀನನ್ನು ದಾನವಾಗಿ ಕೊಟ್ಟಿದ್ದ. ಇಂದಿಗೂ ಆತನ ವಂಶದವರು ಅಲ್ಲಿ ವಾಸವಾಗಿದ್ದಾರೆ ಎಂದು ಹರಪ್ರಸಾದಶಾಸ್ತ್ರಿಗಳು ಹೇಳಿದ್ದಾರೆ. ಈ ಸ್ಥಿತಿಯಲ್ಲಿ ಚಂದ ಬರದಾಯಿ ಎಂಬ ಹೆಸರಿನ ಕವಿಯೇನಾದರೂ ಇದ್ದಿದ್ದರೆ ಆತ ಪೃಥ್ವೀರಾಜನ ಆಸ್ಥಾನದಲ್ಲಿದ್ದಿರಬೇಕು ಅಥವಾ ಜಯಾನಕ ಕಾಶ್ಮೀರಕ್ಕೆ ಹಿಂದಿರುಗಿದ ಮೇಲೆ ಈತ ಬಂದಿರಬೇಕು ಎಂದು ಮಾತ್ರ ಹೇಳಬಹುದಾಗಿದೆ. ಪೃಥ್ವೀರಾಜನ ಮಗನಾದ ಗೋವಿಂದರಾಜನ ಇಲ್ಲವೆ ಆತನ ಸೋದರ ಹರಿರಾಜ ಇಲ್ಲ ಈ ಇಬ್ಬರಲ್ಲಿ ಯಾರಾದರೂ ಒಬ್ಬರ ವಂಶದಲ್ಲಿ ಚಂದನೆಂಬ ವಂದಿಮಾಗಧನಿದ್ದು ಆತ ತನ್ನ ಪೂರ್ವಜನಾದ ಪೃಥ್ವೀರಾಜನ ಶೌರ್ಯಾದಿಗಳನ್ನು ವರ್ಣಿಸುವ ಕೆಲವೊಂದು ರಚನೆಗಳನ್ನು ಮುಂದಿರಿಸಿದ್ದಿರಬೇಕು. ಮುಂದೆ ಬಹುಮಟ್ಟಿಗೆ ಕಲ್ಪಿತವಾದ 'ಭಟ್ಟ ಭಣಂತ' ಕೃತಿ ಸಿದ್ಧವಾಗುತ್ತ ಬಂದು ಅವೆಲ್ಲವನ್ನೂ ಒಂದುಗೂಡಿಸಿ ಹಾಗೂ ಚಂದನ ಮತ್ತು ಪೃಥ್ವೀರಾಜರನ್ನು ಸಮಕಾಲೀನರನ್ನಾಗಿಸಿ ರಾಸೋ ಎಂಬ ಹೆಸರಿನ ಈ ಬೃಹತ್ ಕೃತಿಯನ್ನು ಕಟ್ಟಿ ನಿಲ್ಲಿಸಿರಬೇಕು ಎಂದು ಆಚಾರ್ಯ ರಾಮಚಂದ್ರ ಶುಕ್ಲರು ಅಭಿಪ್ರಾಯಪಡುತ್ತಾರೆ. ಬಾಬೂ ರಾಮನಾರಾಯಣ ದೂಗಡ್ ಅವರು ಚಂದನ ಪದ್ಯಗಳು ಎಲ್ಲೆಲ್ಲೊ ಚೆದರಿಹೋಗಿದ್ದುವು; ಅವನ್ನು ಮಹಾರಾಣಾ ಅಮರಸಿಂಹರು ಒಂದುಗೂಡಿಸಿದರು-ಎಂದು ಕೃತಿಯ ಒಂದು ಪ್ರತಿಯಲ್ಲಿ ಹೇಳಿದೆ ಎಂದಿದ್ದಾರೆ. ಈಚೆಗೆ ಮುನಿ ಜಿನವಿಜಯರು ಜಯಚಂದ ಪ್ರಬಂಧವೆಂಬ ಕೃತಿಯೊಂದರಲ್ಲಿ ಚಂದನ ನಾಲ್ಕು ಪದ್ಯಗಳು ಉದ್ಧೃತವಾಗಿರುವುದನ್ನು ತೋರಿಸಿ ಕೊಟ್ಟಿದ್ದಾರೆ. ಭಟ್ಟ ಕೇದಾರನ ಜಯಚಂದ ಪ್ರಕಾಶದಲ್ಲಿಯೂ ಒಂದೆಡೆ ಚಂದ ಮತ್ತು ಭಟ್ಟ ಕೇದಾರರ ಸಂಭಾಷಣೆ ಕಾಣದೊರೆಯುತ್ತದೆ. ಹೀಗಾಗಿ ವಾದವಿವಾದಗಳ ನಡುವೆಯೂ ಚಂದನೆಂಬ ಕವಿಯೊಬ್ಬನಿಂದ ಈ ಕೃತಿ ಭಾಗಶಃ ರಚಿತವಾಗಿದ್ದಿರಬೇಕೆಂದು ನಂಬಬಹುದಾಗಿದೆ. ಒಟ್ಟಿನಲ್ಲಿ ಬಹುಮತಾಭಿಪ್ರಾಯದಂತೆ ಇದು 1470ರಲ್ಲಿ ರಚಿತವಾಗಿದ್ದಿರಬಹುದಾದ ಕಾವ್ಯ.

ಪೃಥ್ವೀರಾಜ ರಾಸೋ

[ಬದಲಾಯಿಸಿ]

ರಾಸೋದ ಕಥಾನಕದಲ್ಲಿಯಂತೂ ಈ ಕವಿ ಪೃಥ್ವೀರಾಜನೊಡನೆ ಯುದ್ಧ ಕ್ಷೇತ್ರಕ್ಕೂ ತೆರುಳುತ್ತಾನೆ.[] ಸಂಯೋಗೀತೆಯೊಡನೆ ವಿಲಾಸದಲ್ಲಿ ಮುಳುಗಿದ್ದ ಪೃಥ್ವೀರಾಜನಿಗೆ ಘೋರಿಯ ಕುತಂತ್ರಗಳ ನೆನಪು ಮಾಡಿಕೊಟ್ಟು, ಆತನನ್ನು ಎಚ್ಚರಿಸುತ್ತಾನೆ; ಕಣ್ಣು ಕಳೆದುಕೊಂಡಿದ್ದ ಪೃಥ್ವೀರಾಜನ ಮೂಲಕ ಘೋರಿಯನ್ನು ಕೊಲ್ಲಿಸುವವನೂ ಇವನೆ. ವಿಮರ್ಶಕರೊಬ್ಬರು ಹೇಳಿರುವಂತೆ, ರಾಸೋದ ಪೃಥ್ವೀರಾಜ ಏನಾದರೂ ಆಗಿರಲಿ, ಅದಕ್ಕೆ ಈತನೇ ಕಾರಣ.

ಪ್ರಾಮಾಣಿಕತೆ ಮತ್ತು ಐತಿಹಾಸಿಕತೆ

[ಬದಲಾಯಿಸಿ]

ಪೃಥ್ವಿರಾಜ ರಾಸೋದ ಪ್ರಾಮಾಣಿಕತೆ ಮತ್ತು ಐತಿಹಾಸಿಕತೆಗಳ ಬಗ್ಗೆ ವಿದ್ವಾಂಸರು ಪ್ರಬಲ ಸಂದೇಹಗಳನ್ನು ಮುಂದಿಟ್ಟಿರುವುದರಿಂದ

(ಉದಾ:

  1. ಅಬೂ ಪರ್ವತದ ರಾಜರು ಜೇತ ಮತ್ತು ಸಲಕ ಎಂದು ಕಾವ್ಯದಲ್ಲಿ ಹೆಳಿದೆ. ಆದರೆ ಇದಕ್ಕೆ ಶಾಸನಗಳಲ್ಲಿ ಆಧಾರವಿಲ್ಲ. ಅಷ್ಟೇ ಅಲ್ಲ, ಆಗ ವಾಸ್ತವವಾಗಿ ಆಳುತ್ತಿದ್ದ ಧಾರಾವರ್ಷ ಪರಮಾರನ ಉಲ್ಲೇಖವಿಲ್ಲ;
  2. ಗುಜರಾತಿನ ರಾಜ ಭೀಮಸೇನನನ್ನು ಕೊಲ್ಲಲಾಯಿತು ಎಂದು ಕಾವ್ಯದಲ್ಲಿ ಉಕ್ತವಾಗಿದೆ. ಆದರೆ, ಆತ ಮುಂದೆಯೂ ಬಹುಕಾಲ ಬದುಕಿದ್ದನೆಂದು ಶಾಸನಗಳು ಹೇಳುತ್ತವೆ;[]
  3. ಕಾವ್ಯದ ಪ್ರಕಾರ ಶಹಾಬುದ್ದೀನ್ ಘೋರಿ ಪೃಥ್ವೀರಾಜನ ಶಬ್ದವೇಧಿ ಬಾಣದಿಂದ ಸಾಯುತ್ತಾನೆ; ಆದರೆ ಠಕ್ಕರ ಕೈಗೆ ಸಿಕ್ಕಿ 1203ರಲ್ಲಿ ಸತ್ತನೆಂಬುದು ಐತಿಹಾಸಿಕ ಸತ್ಯ;[]
  4. ಪೃಥ್ವೀರಾಜನ ತಂಗಿಯಾದ ಪೃಥಾಕುವರಿಯ ಪತಿ ರಾಜಾ ಸಮರಸಿಂಹ ತೀರಿಕೊಂಡ ವೃತ್ತಾಂತ ಕಾವ್ಯದಲ್ಲಿ ಬರುತ್ತದೆ. ಆದರೆ 1278-1285ರ ನಡುವಣ ಅವಧಿಯಲ್ಲೂ ಅಂದರೆ ಪೃಥ್ವೀರಾಜ ಸತ್ತ ಅನೇಕ ವರ್ಷಗಳ ತರುವಾಯವೂ ಆತ ರಾಜ್ಯಭಾರ ಮಾಡುತ್ತಿದ್ದನೆಂದು ಶಾಸನ ಹೇಳುತ್ತದೆ;[]
  5. ಅಂತೆಯೇ, ಕೃತಿಯಲ್ಲಿ ನಮೂದಿತವಾಗಿರುವ ಇತರ ತಾರೀಖುಗಳೂ ತಪ್ಪುತಪ್ಪಾಗಿವೆ.)

ಅಬೂವಿನ ಯಜ್ಞಕುಂಡದಿಂದ ನಾಲ್ಕು ಕ್ಷತ್ರಿಯ ವಂಶಗಳ ಉತ್ಪತ್ತಿಯಾಗುವುದರಿಂದ ಹಿಡಿದು ಪೃಥ್ವೀರಾಜನ ಮರಣದವರೆಗೆ ರಾಸೋದ ಕಥೆ ವಿಸ್ತರಿಸಿಕೊಂಡಿದೆ. ಹೀಗಾಗಿ, ಇದು 96 ಸರ್ಗಗಳ ಸುಮಾರು ಎರಡೂವರೆ ಸಾವಿರ ಪುಟಗಳಷ್ಟು ದೀರ್ಘವಾದ ಬಹುಕವಿಕೃತವಾದ ದೀರ್ಘಕಾವ್ಯವಾಗಿ ಪರಿಣಮಿಸಿದೆ. ಪ್ರಾಚೀನ ಕಾವ್ಯ ಸಂಪ್ರದಾಯವನ್ನು ಅನುಸರಿಸಿ ಗಿಳಿಗಳ ನಡುವಣ ಸಂವಾದದ ರೂಪದಲ್ಲಿ ಕಥಾನಕವನ್ನು ಸಾದರಪಡಿಸಲಾಗಿದೆ. ವೀರಕಾವ್ಯದ ವಿಶದಕಲ್ಪನೆ ಈ ಕಾವ್ಯದಿಂದ ಮೂಡುವಂತೆ ಹಿಂದೀ ಸಾಹಿತ್ಯದ ಬೇರಾವ ಕೃತಿಯಿಂದಲೂ ಮೂಡುವುದಿಲ್ಲವೆಂಬ ಸಂಗತಿ ಈ ಕಾವ್ಯದ ವೈಶಿಷ್ಟ್ಯ ಮತ್ತು ಮಹತ್ತ್ವಗಳನ್ನು ಹೆಚ್ಚಿಸಿದೆ. ಪೃಥ್ವೀರಾಜ ಸಂಯೋಗಿತೆಯರ ಅನುರಾಗ, ವಿರಹ, ಸಂಯೋಗಿತಾಹರಣ, ಯುದ್ಧಾನಂತರದಲ್ಲಿ ಅವರ ಮಿಲನ ಪ್ರೇಮವಿಲಾಸಗಳು, ಶಹಾಬುದ್ದೀನ್ ಘೋರಿಯ ಆಕ್ರಮಣ ಮತ್ತು ಯುದ್ದ-ಇವೇ ಮೊದಲಾದ ಪ್ರಸಂಗಗಳ ಚಿತ್ತಾಕರ್ಷಕ ವರ್ಣನೆ ಓದುಗರನ್ನು ಉತ್ಸಾಹ ಮತ್ತು ಆನಂದಗಳ ವೀಚಿಯ ಮೇಲೆ ತೇಲಿಸಿಕೊಂಡು ಹೋಗುತ್ತದೆ. ಶೃಂಗಾರ ಮತ್ತು ವೀರರಸಗಳ ಅಭಿವ್ಯಕ್ತಿಗೆ ಪ್ರಾಧಾನ್ಯ ದೊರೆತಿದೆಯಾದರೂ ಇತರ ರಸಗಳೂ ಈ ಕಾವ್ಯದಲ್ಲಿ ಮೈದಳೆದಿವೆ. ಕವಿಯ ವರ್ಣನ ಕೌಶಲ ಅಸಾಧಾರಣವಾಗಿದ್ದು ಆತನ ಕಾವ್ಯಶಕ್ತಿಯ ಬಗೆಗೆ ಗೌರವವನ್ನು ಮೂಡಿಸುತ್ತದೆ. ಈ ದೃಷ್ಟಿಯಿಂದ ಈ ಕಾವ್ಯದಲ್ಲಿ ಮೂಡಿಬಂದಿರುವ ಪ್ರಕೃತಿವರ್ಣನೆ-ಅದರಲ್ಲಿಯೂ ಷಡ್ ಋತುಗಳ ವರ್ಣನೆ-ಗಮನಾರ್ಹವಾಗಿದೆ. ಸಮಗ್ರ ಕಾವ್ಯಕ್ಕೆ ಒಂದೇ ಛಂದಸ್ಸನ್ನು ಬಳಸದೆ ಕವಿತ್ತ (ಛಪ್ಪೆಯ), ದೂಹಾ, ತೋಮರ, ತ್ರೋಟಕ, ಗಾಹಾ, ಆರ್ಯಾ ಮೊದಲಾದ ಛಂದಸ್ಸುಗಳನ್ನು ಅಗತ್ಯಾನುಗುಣವಾಗಿ ಬಳಸಿರುವುದರಿಂದ ವೈವಿಧ್ಯಕ್ಕೂ ಎಡೆದೊರೆತಿದೆ. ಅಂತೆಯೇ ಭಾಷೆ ಮತ್ತು ಶೈಲಿಗಳೂ ಮನೋಹರವಾಗಿವೆ. ಕಾವ್ಯದಲ್ಲಿ ನಿರೂಪಿತವಾಗಿರುವ ಸಂಗತಿಗಳ ಐತಿಹಾಸಿಕ ಸತ್ಯಾಸತ್ಯತೆಗಳ ವಿಷಯ ಹೇಗಾದರೂ ಇರಲಿ, ಹೃದಯವನ್ನು ಸೆರೆ ಹಿಡಿದು ನಿಲ್ಲಿಸಬಲ್ಲ ಚುಂಬನಶಕ್ತಿ ಇದರ ಕಥಾನಕದಲ್ಲಿ ಇದೆಯೆಂಬುದು ಹೆಜ್ಚೆ ಹಜ್ಜೆಗೂ ಓದುಗನ ಅನುಭವನಕ್ಕೆ ಬರುತ್ತದೆ. ಇಂಥ ವೈಶಿಷ್ಟ್ಯಗಳನ್ನೊಳಗೊಂಡ ರಸಸ್ಯಂದಿ ಕಾವ್ಯವಾಗಿರುವುದರಿಂದಲೇ ಇದು ಹಿಂದೀ ಸಾಹಿತ್ಯದ ಆದಿಕಾಲದ ವಿಶಿಷ್ಟ ಕೃತಿಯೆಂಬ, ಸುಂದರ ಕಾವ್ಯವೆಂಬ ಕೀರ್ತಿಗೆ ಪಾತ್ರವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Raj kavi can be translated as "court poet" or "royal sage" and identified a courtier who was expected both to provide advice to the king and to compose "official" histories that glorified the king. Raj kavi were expected to accompany the king while hunting and making war. His role also may have included that of a balladeer who encouraged and exhorted the warriors to bravery in battle by reciting the great deeds of their leaders and illustrious clan forebears. In general see Bloomfield, Morton W. and Dunn, Charles W. (1992) Role of the Poet in Early Societies (2nd edition) D.S. Brewer, Cambridge, England, ISBN 0-85991-347-3
  2. Cynthia Talbot 2015, p. 14.
  3. Gopal, Madan (1996) Origin and Development of Hindi/Urdu Literature Deep & Deep Publications, New Delhi, India, page 8, OCLC 243899911
  4. Dasharatha Sharma 1959, p. 76.
  5. Dasharatha Sharma 1959, p. 87.
  6. Cynthia Talbot 2015, p. 156.


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: