ಚಂದ್ರಿಕಾ (ಪತ್ರಿಕೆ)
ಚಂದ್ರಿಕಾ ಎನ್ನುವುದು ಮಲಯಾಳಂ ಭಾಷೆಯ ಪತ್ರಿಕೆ. 1932ರ ಮಾರ್ಚ್ 26 ರಂದು ವಾರಪತ್ರಿಕೆಯಾಗಿ ಉತ್ತರ ಮಲಬಾರಿನ ತೆಲ್ಲಿಚೇರಿಯಿಂದ ಇದರ ಪ್ರಕಟನೆ ಆರಂಭವಾಯಿತು.[೧][೨] ಇದು ಪ್ರಮುಖವಾಗಿ ಮುಸ್ಲಿಂ ಲೀಗಿನ ಮುಖಪತ್ರಿಕೆಯಾಗಿದೆ.[೩] ಮುಸ್ಲಿಮರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಶೋತ್ತರಗಳ ಪೂರೈಕೆಗೆ ಇದು ಮೀಸಲಾಗಿದೆ. ಕೆ.ಕೆ. ಮಹಮದ್ ಸಾಹೇಬ್ ಇದರ ಸಂಪಾದಕರಾಗಿದ್ದರು. 1939ರಲ್ಲಿ ಚಂದ್ರಿಕಾ ದಿನಪತ್ರಿಕೆಯಾಗಿ ಪರಿವರ್ತನೆಗೊಂಡಿತು. ಆನಂತರ ಇದರ ಮಾಲೀಕತ್ವ ಖಾಸಗಿ ಪರಿಮಿತ ಕಂಪನಿಯೊಂದಕ್ಕೆ ಸೇರಿತು. ಈ ದಿನಪತ್ರಿಕೆಯ ಪ್ರಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿದ್ದವರು ಆಗ ತೆಲ್ಲಿಚೇರಿಯ ನಗರಪಾಲಿಕೆಯ ಅಧ್ಯಕ್ಷರಾಗಿದ್ದ ಜನಾಬ್ ಸಿ.ಪಿ. ಮಮ್ಮುಕಯಿ. 1946ರಲ್ಲಿ ಪತ್ರಿಕೆಯ ಕಾರ್ಯಾಲಯವನ್ನು ಕೋಳಿಕೋಡೆಯಲ್ಲಿರುವ ಅದರ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಇದರದೇ ಮುದ್ರಣಾಲಯವಿದೆ. ಅಬ್ದುಲ್ ರಹಮಾನ್ ಸಾಹೇಬ್ ಸಂಪಾದಕತ್ವವನ್ನು ಬಿಟ್ಟಾಗ ಮುಸ್ಲಿಂ ಲೀಗಿನ ಮುಖಂಡ ಸಿ.ಎಚ್. ಮಹಮದ್ ಕೋಯ ಸಂಪಾದಕರಾದರು. ಅವರು ಬಿಟ್ಟ ಮೇಲೆ ವಿ.ಸಿ. ಅಬೂಬಾಕರ್ ಸಂಪಾದಕರಾದರು.
1971ರ ಪ್ರಥಮಾರ್ಧದಲ್ಲಿ ಚಂದ್ರಿಕಾ ಪತ್ರಿಕೆಯ ನಿವ್ವಳ ಮಾರಾಟ 21,276 ಪ್ರತಿಗಳು (ಎ.ಬಿ.ಸಿ ಅಂಕಿ-ಅಂಶ) ಆಗಿತ್ತು. ಚಂದ್ರಿಕಾ ದಿನಪತ್ರಿಕೆಯ ಜೊತೆಗೆ ಸಚಿತ್ರ ವಾರಪತ್ರಿಕೆಯೂ ಪ್ರಕಟವಾಗುತ್ತದೆ. ಅದರ ಪ್ರಸಾರ 10,994 ಆಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Miller, Roland E. (1976). Mappila Muslims of Kerala: A Study in Islamic Trends. Orient Longman. pp. 161, 290 and 296–97.
- ↑ Miller, Roland E. (2015). Mappila Muslim Culture. State University of New York Press. p. 333.
- ↑ Kurian, Jose (6 October 2016). "IUML's Mouthpiece Chandrika Daily to Sell Headquarters". Deccan Chronicle.
