ವಿಷಯಕ್ಕೆ ಹೋಗು

ಚಂದ್ರರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರರಾಜ ಎನ್ನುವವನು ಮದನತಿಲಕ ಎಂಬ ಕಾಮಶಾಸ್ತ್ರದ ಕರ್ತೃ.[][][] ಈತ ಚಾಳುಕ್ಯರ ಮನೆತನದಲ್ಲಿ ಚೋಳಕುಲವಿಲಯಕಾಲಂ, ಮಾಳವರಾಜಕಶೂಲಂ ಮೊದಲಾದ ವಿಶೇಷಣಗಳಿಂದ ಪ್ರಸಿದ್ಧನಾಗಿರುವ ಜಯಸಿಂಹ ರಾಜನ (1015-42) ಮಾಂಡಲಿಕರಲ್ಲಿ ಒಬ್ಬನಾದ, ಪಂಚಮಹಾಶಬ್ದಗಳ ಮರ್ಯಾದೆಯನ್ನು ಪಡೆದಿದ್ದ ರೇಚ ಅಥವಾ ರೇಚಿಗ ಎಂಬವನ ಪೋಷಣೆಯಲ್ಲಿ ಕೃತಿರಚನೆ ಮಾಡಿದ.[] ಆದ್ದರಿಂದ ಈತನ ಕಾಲ, ಸ್ಥೂಲವಾಗಿ 11ನೆಯ ಶತಕದ ಪೂವಾರ್ಧ.

ಈತ ಮತದಿಂದ, ವಾಜಿ ಗೋತ್ರದವನಾದ ಬ್ರಾಹ್ಮಣ. ಕವಿತಾಮಹಾರ್ಣವ, ಪ್ರತ್ಯಕ್ಷ ಕಂದರ್ಪ-ಈ ಮುಂತಾದುವು ಈತನ ನೆಚ್ಚಿನ ಬಿರುದುಗಳು. ವ್ಯಾಕರಣ, ಅರ್ಥಶಾಸ್ತ್ರ, ಗಣಿತ, ಅಲಂಕಾರ, ಕಾವ್ಯ, ನಾಟಕ, ಕಾಮಶಾಸ್ತ್ರ, ನೃತ್ಯ, ಗೀತ, ಹಯಶಾಸ್ತ್ರ, ಅದ್ವೈತ, ಗಾಂಧರ್ವವಿದ್ಯೆ, ತರ್ಕಶಾಸ್ತ್ರ, ಇಂದ್ರಜಾಲ, ವೈದ್ಯ, ವಾದ್ಯ, ಶಕುನ-ಈ ಹಲವು ವಿದ್ಯೆಗಳನ್ನು ಬಲ್ಲೆನೆಂದು ಹೇಳಿಕೊಂಡಿರುವುದು ನೋಡಿದರೆ ಈತ ದೊಡ್ಡ ಪಂಡಿತನಾಗಿದ್ದನೆಂದು ಭಾವಿಸಬಹುದು. ಅಲ್ಲದೆ ಶುದ್ಧಚರಿತ್ರ, ಸಂಪ್ರದಾಯಶೀಲ, ಪರಹಿತಾಸಕ್ತ ಮತ್ತು ಸತ್ಯಸಂಧ ಎಂಬುದಾಗಿ ಲೋಕ ತನ್ನನ್ನು ಮೆಚ್ಚಿಕೊಂಡಿದ್ದಿತೆಂದು ತಾನೇ ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ.

ಈತನದಾಗಿ ತಿಳಿದಿರುವುದೂ, ದೊರೆತಿರುವುದೂ ಮದನತಿಲಕ ಒಂದೇ. ಕನ್ನಡ ಭಾಷೆಯ ಕಾಮಶಾಸ್ತ್ರ ಗ್ರಂಥಗಳಲ್ಲಿ ಇದೇ ಮೊತ್ತಮೊದಲನೆಯದು. ಶಿವನೂ, ಆ ಬಳಿಕ ತನ್ನ ಪೋಷಕ ರೇಚ ಮಹೀಶನೂ, ತಂತಮ್ಮ ಕಾಂತೆಯರಿಗೆ ಹೇಳಿದ ಕಾಮತತ್ತ್ವವನ್ನೇ ತಾನು ನಿರೂಪಿಸುತ್ತಿರುವುದಾಗಿ ಹೇಳಿರುವುದು ಸಂಪ್ರದಾಯದ ಮಾತು. ವಾತ್ಸ್ಯಾಯನ ಮೊದಲಾದವರು ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಹಲವು ಕಾಮಶಾಸ್ತ್ರ ಗ್ರಂಥಗಳಿಂದ ಉಚಿತವಾದಷ್ಟು ಅಂಶಗಳನ್ನು ಸಂಗ್ರಹಿಸಿಯೂ, ಸ್ವಕೀಯವಾಗಿ ಕೆಲವಂಶಗಳನ್ನು ಹೊಸದಾಗಿ ಸೇರಿಸಿಯೂ, ಪ್ರಾಯಶಃ ಈ ಗ್ರಂಥವನ್ನು ಚಂದ್ರರಾಜ ಬರೆದಿದ್ದಾನೆ-ಎಂದು ಹೇಳಬಹುದು. ಕೃತಿಕರ್ತನ ಮಾತಿನಲ್ಲಿ ಈ ಕೃತಿ, ಪ್ರಾಚೀನರ ಶಾಸ್ತ್ರದಲ್ಲಿ ಆಗಮಿಕ ಲೌಕಿಕ ವಿರೋಧಮಂ ಕಳೆದು ಸಾರಾಂಶಮಂ ಕೊಂಡು ಪಲವು ಮತಂಗಳನೊಂದುಮಾಡಿ' ಬರೆದಿದ್ದಾಗಿದೆ. ಕೃತಿಯನ್ನು ತಿದ್ದಿದವ ಬ್ರಹ್ಮ.

ಮದನತಿಲಕ

[ಬದಲಾಯಿಸಿ]

ಮದನತಿಲಕದಲ್ಲಿ 18 ಅಧಿಕರಣಗಳೂ, ನಾನಾ ಛಂದಸ್ಸಿನ 500 ಗದ್ಯಪದ್ಯಗಳೂ ಇವೆಯೆಂದು ಕವಿಯ ಹೇಳಿಕೆ. ಆದರೆ ದೊರೆತು ಪ್ರಕಟವಾಗಿರುವ ಪುಸ್ತಕದಲ್ಲಿ 11 ಅಧಿಕರಣಗಳೂ, ಕಡಿಮೆ ಸಂಖ್ಯೆಯ ಗದ್ಯ ಪದ್ಯಗಳೂ ಕಂಡುಬರುತ್ತಿವೆ. ಮೂಲವಾದ ಎರಡು ಹಸ್ತಪ್ರತಿಗಳಲ್ಲಿಯೂ ಬಗೆಬಗೆಯ ಸ್ಖಾಲಿತ್ಯಗಳೂ, ಗ್ರಂಥ ಪಾತಗಳೂ ಬಹುವಾಗಿದ್ದು ಗ್ರಂಥಸ್ವರೂಪವೇ ಅನಿರ್ದಿಷ್ಟವಾಗಿದೆ. ಹೀಗಿದ್ದೂ ಹಲವು ದೃಷ್ಟಿಗಳಿಂದ ಇದು ಕನ್ನಡ ಸಾಹಿತ್ಯದಲ್ಲಿ ಒಂದು ಉಪಯುಕ್ತವಾದ ಕೃತಿಯಾಗಿದೆ. ಗ್ರಂಥ ಪ್ರಯೋಜನವನ್ನು ಹೀಗೆ ಪಟ್ಟಿ ಮಾಡಬಹುದು:

  1. ಚಾಳುಕ್ಯ ಚಕ್ರವರ್ತಿ ಜಯಸಿಂಹ ಮತ್ತು ಆತನ ಸಾಮಂತ ರೇಚನೃಪ ಇವರ ಚರಿತ್ರೆಗೆ ಒಂದು ಸಾಹಿತ್ಯಕ ಆಕರವಾಗಿದೆ.
  2. ಹನ್ನೊಂದನೆಯ ಶತಮಾನದ ಕನ್ನಡ ಭಾಷೆ, ಸಾಹಿತ್ಯ, ಸಾಮಾಜಿಕ ಜೀವನ, ಸಂಸ್ಕೃತಿಗಳ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯಿದೆ.
  3. ಕನ್ನಡದಲ್ಲಿ ಬಹು ವಿರಳವಾದ ಚಿತ್ರಕವಿತ್ವದ ನಿದರ್ಶನಗಳು ದೊರೆಯುತ್ತವೆ: ಚಕ್ರವೃತ್ತ, ಮುರಜಿಬಂಧ, ಪಣವಬಂಧ, ಗೋಮೂತ್ರಿಕೆ, ಅರ್ಧಪಾದ, ಗತಪ್ರತ್ಯಾಗತ, ಜತ್ತರಟ್ಟ (?), ಏಕಾಕ್ಷರಿ-ದ್ವ್ಯಕ್ಷರಿ-ತ್ರ್ಯಕ್ಷರಿ, ನಿರೋಷ್ಠ್ಯ, ಓಕಾರಾಂತ ಕಂದ ಪ್ರಭೇದಗಳು ಇತ್ಯಾದಿ.
  4. ಕನ್ನಡ ಕಾವ್ಯಗಳಲ್ಲಿ ಬಹುವಿರಳವಾಗಿ ಮಾತ್ರ ಬಳಿಕೆಯಾಗಿರುವ ಹಾಗೂ ಬಳಕೆಯಾಗಿಲ್ಲದ ಕೆಲವು ವರ್ಣವೃತ್ತಗಳು ಕಂಡುಬರುತ್ತವೆ: ಊರ್ಜಿತ, ಕಲ್ಪಲತೆ, ಕಳಕಂಠ, ಕಳಹಂಸ, ಕುಂತಳೆ, ಕೋಕಿಳ, ಕೌಮುದಿ, ಚಿತ್ರಲತೆ, ತ್ರೋಟಕ, ದ್ರುತವಿಳಂಬಿತ, ದೌತಿಕೆ, ಮರಣಿರಂಗ, ವನಮಯೂರ, ಕ್ರೌಂಚಪದ, ವಿದ್ಯುನ್ಮಾಲೆ ಇತ್ಯಾದಿ (ಉತ್ಕೃತಿಯೊಳಗಿನ ವರ್ಣವೃತ್ತಗಳು); ಲಲಿತ (ಮಾಲಾವೃತ್ತಗಳು); ತ್ರಿಪದೋನ್ನತಿ (ವಿಷಮವೃತ್ತ); ಮಹಾಕಾವ್ಯದ ಅನುಷ್ಟುಪ್.
  5. ವಿರಳವಾದ ದೇಶೀಯ ವೃತ್ತಜಾತಿಗಳಿಗೆ ನಿದರ್ಶನಗಳು ಕಾಣುತ್ತವೆ: ಮೂಲಷಟ್ಪದಿ, ಎಡೆಯಕ್ಕರ, ನಡುವಣಕ್ಕರ, ಚೌಪದಿ.
  6. ಒಂದು ಬಗೆಯ ವೃತ್ತಜಾತಿಯಿಂದ ಹಲವು ಬಗೆಯ ವೃತ್ತಗಳನ್ನು ಹೊರಡಿಸಬಹುದೆಂಬ ಸಾಧ್ಯತೆಯನ್ನು ತೋರುತ್ತದೆ.

ವಸ್ತುವಿನ ದೃಷ್ಟಿಯಿಂದ ಚಂದ್ರರಾಜನ ಮದನತಿಲಕ ಬಹು ಸಾಮಾನ್ಯವಾಗಿ ತೋರಿದರೂ, ಚಿತ್ರಕವಿತ್ವ ಮತ್ತು ಅದಕ್ಕಿಂತ ಮಿಗಿಲಾಗಿ ವಿವಿಧ ಛಂಧಃ ಪ್ರಯೋಗಗಳ ದೃಷ್ಟಿಯಿಂದ ಕನ್ನಡ ಸಾಹಿತ್ಯದ ಉಪಯುಕ್ತ ಕೃತಿಗಳಲ್ಲಿ ತನ್ನ ಸ್ಥಾನವನ್ನು ಚಿರಸ್ಥಾಯಿಯಾಗಿ ಮಾಡಿಕೊಂಡಿದೆ. ಚಂದ್ರರಾಜನ ವೈಯಕ್ತಿಕತೆ, ಘನತೆಗಳು ನಿಂತಿರುವುದೂ ಅಲ್ಲಿಯೇ.

ಉಲ್ಲೇಖಗಳು

[ಬದಲಾಯಿಸಿ]
  1. Narasimhacharya, 1988, pp. 61–65
  2. Rice, 1921, p. 33
  3. Sastri (1955), p357
  4. Rice E.P. (1921), p. 33


ಗ್ರಂಥಸೂಚಿ

[ಬದಲಾಯಿಸಿ]
  • Narasimhacharya, R. (1988). History of Kannada Literature. New Delhi: Penguin Books. ISBN 81-206-0303-6.
  • Rice, E. P. (1982) [1921]. Kannada Literature. New Delhi: Asian Educational Services. ISBN 81-206-0063-0.
  • Nilakanta Sastri, K.A. (2002) [1955]. A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: