ಚಂದ್ರಭಟ್ಟ
ಕನ್ನಡ ಸಾಹಿತ್ಯದಲ್ಲಿ ಚಂದ್ರಭಟ್ಟ ಎಂಬ ಹೆಸರು ಕೆಲವು ಕೃತಿಗಳಲ್ಲಿ ಮತ್ತು ಶಾಸನಗಳಲ್ಲಿ ಕಂಡುಬರುತ್ತದೆ.[೧] ಈಗ ಉಪಲಬ್ಧವಿರುವ ಪ್ರಮಾಣಗಳಿಂದ ಚಂದ್ರಭಟ್ಟ ಎಂಬ ಇಬ್ಬರು ಕವಿಗಳು ಇದ್ದುದು ತಿಳಿಯುತ್ತದೆಯೇ ಹೊರತು ಅವರು ಯಾವ ಗ್ರಂಥಗಳನ್ನು ಬರೆದಿದ್ದಾರೆಂಬುದು ಖಚಿತವಾಗಿ ತಿಳಿಯುವುದಿಲ್ಲ.
ಚಂದ್ರಭಟ್ಟ ಎಂಬ ಮೊದಲನೆಯವನು
[ಬದಲಾಯಿಸಿ]ಸು. 1025ರಲ್ಲಿದ್ದ ದುರ್ಗಸಿಂಹ ಪೂರ್ವಕವಿಗಳನ್ನು ಹೇಳುವಾಗ ಕನ್ನಡ ಕವಿಗಳ ಸಾಲಿನಲ್ಲಿ ಒಬ್ಬ ಚಂದ್ರನನ್ನು (ಭಟ್ಟ) ಹೆಸರಿಸುತ್ತಾನೆ. 1049ರಲ್ಲಿದ್ದ ಶ್ರೀಧರಾಚಾರ್ಯ ತನ್ನ ಜಾತಕ ತಿಲಕದಲ್ಲಿ ಪೂರ್ವಕವಿಗಳನ್ನು ನೆನೆಯುವಾಗ ಅಂಬುಜಾರಿ (ಅಂಬುಜ+ಅರಿ=ಚಂದ್ರ) ಎಂಬ ಹೆಸರನ್ನು ಹೇಳುತ್ತಾನೆ. ದುರ್ಗಸಿಂಹ ಮತ್ತು ಶ್ರೀಧರಾಚಾರ್ಯರು ಹೇಳುವ ಚಂದ್ರನೇ ಚಂದ್ರಭಟ್ಟ ಎಂದು ಹೇಳಬಹುದಾದರೆ ಈತನ ಕಾಲ ಸುಮಾರು 1000 ಅಥವಾ ಅದಕ್ಕಿಂತ ಸ್ವಲ್ಪ ಹಿಂದೆ ಆಗಬಹುದು.
ಚಂದ್ರಭಟ್ಟ ಎಂಬ ಎರಡನೆಯವನು
[ಬದಲಾಯಿಸಿ]ಸು. 1185ರಲ್ಲಿದ್ದ ರುದ್ರ ಭಟ್ಟ, ಸು. 1260ರಲ್ಲಿದ್ದ ಕೇಶಿರಾಜ ಮತ್ತು ಸು. 1300ರಲ್ಲಿದ್ದ ರಟ್ಟಕವಿ-ಇವರ ಕೃತಿಗಳಲ್ಲಿ ಚಂದ್ರಭಟ್ಟ ಎಂಬ ಹೆಸರು ಸ್ಪಷ್ಟವಾಗಿ ಕಾಣಿಸುತ್ತದೆ. ರುದ್ರಭಟ್ಟನು ಪೂರ್ವ ಕವಿಗಳನ್ನು ಹೇಳುವಾಗ ಚಂದ್ರಭಟ್ಟನ ಜತಿ .......... ಮತ್ಕೃತಿಯೊಳಿರ್ಕೆ ಎನ್ನುತ್ತಾನೆ. ಚಂದ್ರಭಟ್ಟನ ........ ಸುಮಾರ್ಗಮಿದಱೊಳೆ ಲಕ್ಷ್ಯಂ ಎಂದು ಶಬ್ದಮಣಿದರ್ಪಣದಲ್ಲಿ ಕೇಶಿರಾಜ ಹೇಳಿದ್ದಾನೆ.[೨][೩] ರಟ್ಟಕವಿ ತನ್ನ ರಟ್ಟಮತದಲ್ಲಿ ಚಂದಿರಭಟ್ಟರ ದಯೆಯಿಂ ಸಂದೆಯ ಮಣಮಿಲ್ಲದಂತು ಕಲ್ವುದು ಮೞಿಯಂ ಎಂದು ಹೇಳಿದ್ದಾನೆ. ರಟ್ಟಕವಿಯ ಈ ಮಾತಿನ ಆಧಾರದಿಂದ, ಚಂದ್ರಭಟ್ಟ ಮಳೆಗೆ ಸಂಬಂಧಿಸಿದಂತೆ ಒಂದು ವೃಷ್ಟಿ ಶಾಸ್ತ್ರಗ್ರಂಥವನ್ನು ಬರೆದಿರಬಹುದು. ರುದ್ರಭಟ್ಟ ಮತ್ತು ಕೇಶಿರಾಜರು ಹೇಳುವ ಜತಿ ಮತ್ತು ಸುಮಾರ್ಗಗಳಿಂದ ಖ್ಯಾತನಾದ ಚಂದ್ರಭಟ್ಟ ಮತ್ತು ರಟ್ಟಕವಿ ಹೇಳುವ ಚಂದ್ರಭಟ್ಟ ಒಬ್ಬನೇ ಇರಬಹುದು.
ಶಾಸನ
[ಬದಲಾಯಿಸಿ]ಧಾರವಾಡ ಜಿಲ್ಲೆಯ ಹೊಟ್ಟೂರಿನ ರಾಜವಲ್ಲಭ ಬರೆದ ಶಾಸನವೊಂದನ್ನು ಚಂದ್ರಭಟ್ಟ ವಿಸ್ತರಿಸಿ ತಿದ್ದಿ ಬರೆದುದು ಆ ಶಾಸನದ ಅಂತ್ಯಪದ್ಯದಿಂದ ತಿಳಿಯುತ್ತದೆ. ಈ ಶಾಸನದಲ್ಲಿ ಚಂದ್ರಭಟ್ಟನಿಗೆ ವಾಕ್ಪತಿ ಎಂಬ ವಿಶೇಷಣವಿದೆ. ಶಾಸನದ ಕಾಲ 1067. ಮತ್ತೊಂದು ಶಾಸನ ಇದೇ ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಕೋಟವುಮಚಿಗಿ ಗ್ರಾಮಕ್ಕೆ ಸೇರಿದ್ದು. ಇದರ ಕಾಲ 1099. ಈ ಶಾಸನದ ಕೊನೆಯ ಭಾಗದಲ್ಲಿ ಅಪೂರ್ಣವಾಗಿರುವ ಒಂದು ಕಂದಪದ್ಯ..........ಚಂದ್ರಭಟ್ಟ ಕವಿ ವಿರಚಿಸಿದಂ ಎಂದು ಹೇಳುತ್ತದೆ.
ರುದ್ರಭಟ್ಟ, ಕೇಶಿರಾಜ ಮತ್ತು ರಟ್ಟಕವಿಗಳು ಹೇಳಿರುವ ಚಂದ್ರಭಟ್ಟ ಹಾಗೂ ಶಾಸನಗಳಲ್ಲಿ ಕಂಡುಬರುವ ಚಂದ್ರಭಟ್ಟ ಒಬ್ಬನೇ ಆಗಿರುವ ಸಾಧ್ಯತೆಗಳೇ ಹೆಚ್ಚು. ಈ ಚಂದ್ರಭಟ್ಟ ಮತ್ತು ದುರ್ಗಸಿಂಹ, ಶ್ರೀಧರಾಚಾರ್ಯ ಇವರು ಹೇಳಿದ ಚಂದ್ರ (ಭಟ್ಟ) ಇವರಿಬ್ಬರೂ ಬೇರೆ ಬೇರೆ ಎಂದು ಹೇಳಬಹುದು.
ಉಲ್ಲೇಖಗಳು
[ಬದಲಾಯಿಸಿ]ಗ್ರಂಥಸೂಚಿ
[ಬದಲಾಯಿಸಿ]- Narasimhacharya, R (1988) [1988]. History of Kannada Literature. New Delhi, Madras: Asian Educational Services. ISBN 81-206-0303-6.
