ಚಂದ್ರನಾಥ ಸ್ವಾಮಿ ಬಸದಿ,ಅರಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ತುಳುನಾಡಿನ ಮಧ್ಯದಲ್ಲಿ ಹರಡಿಕೊಂಡಿರುವ ವರಾಹ ಪರ್ವತ (ಕುದುರೆಮುಖ ಬೆಟ್ಟ)ಗಳ ತಳಭಾಗದಲ್ಲಿ ಹುಟ್ಟಿ ಇಂದಿನ ಬೆಳಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಹರಿದು ಪಶ್ಚಿಮ ಸಮುದ್ರವನ್ನು ಸೇರುವ ಫಲ್ಗುಣೀ ನದಿಯ ಕಿನಾರೆಯಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿ ಈ ಪ್ರಾಚೀನ ಬಸದಿಯು ತಲೆಯೆತ್ತಿ ನಿಂತಿದೆ. ಈ ಪರಿಸರವನ್ನು ಮೂಲರ ಪಟ್ಟಣವೆಂದು ಕರೆಯುತ್ತಾರೆ. ತಾಲೂಕು ಕೇಂದ್ರ ಬಂಟ್ವಾಳದಿAದ ಸುಮಾರು ೧೦ ಕಿ. ಮೀ. ದೂರ, ಬಂಟ್ವಾಳ - ಪೊಳಲಿ ಕೈಕಂಬ ಮಾರ್ಗದಿಂದ ಅನತಿ ದೂರದಲ್ಲಿದೆ. ಸಮೀಪದಲ್ಲಿ ಶ್ರೀ ಚಂದ್ರನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಜೈನ ಧರ್ಮ ಛತ್ರ, ಈ ಬಸದಿಯ ಸುಂದರವಾದ ಒಂದು ವಸಂತ ಮಂಟಪ ಇತ್ಯಾದಿಗಳು ಇರುವುದರಿಂದ ಹಿಂದೆ ಇದೊಂದು ಜೈನ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿತ್ತೆAದು ಧಾರಾಳವಾಗಿ ಹೇಳಬಹುದು. ಬಳಿಯಲ್ಲಿ ಧೂಮಾವತಿ ದೈವದ ಆರಾಧನಾ ಸ್ಥಳವೂ ಇದೆ. ಇಲ್ಲಿಂದ ಸುಮಾರು ೭ ಕಿ. ಮೀ. ದೂರದಲ್ಲಿ ಪಂಜಿಕಲ್ಲು ಪಂಜಾಲು ಶ್ರೀ ಆದಿನಾಥ ಸ್ವಾಮಿ ಬಸದಿಯೂ, ಅಷ್ಟೇ ದೂರದಲ್ಲಿ ವಾಯುವ್ಯ ದಿಕ್ಕಿಗೆ ಮಳಲಿ ಶ್ರೀ ಅನಂತನಾಥ ಸ್ವಾಮಿ ಬಸದಿಯೂ ಇವೆ.

ಇತಿಹಾಸ[ಬದಲಾಯಿಸಿ]

ಅರಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಸ್ಥಳೀಯ ಎರಂಡಿಲ್ ಮನೆತನದವರಿಂದ ನಿರ್ಮಾಣಗೊಂಡು ಅದೇ ಮನೆತನದವರಿಂದ ನಡೆಸಲ್ಪಡುತ್ತಿದೆ. ಈ ಬಸದಿಯ ಮೂಲ ವಿಗ್ರಹ, ಅದರ ಪ್ರಭಾವಳಿ ಹಾಗೂ ಇಲ್ಲಿರುವ ಇನ್ನೂ ಕೆಲವು ಜಿನ ಬಿಂಬಗಳ ಪುರಾತತ್ವ ಅಧ್ಯಯನ ಶಾಸ್ತ್ರದ ಆಧಾರದಿಂದ ಈ ಜಿನಾಲಯವು ಸುಮಾರು ೮೦೦ ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತೆಂದು ಹೇಳಬಹುದು ಕಾಲಕ್ರಮದಲ್ಲಿ ಇದು ಜೀರ್ಣೋದ್ದಾರಗೊಂಡಿದೆ. ಎರಡು ವರ್ಷಗಳ ಹಿಂದೆ, ಮೂಡುಬಿದಿರೆಯ ಪೂಜ್ಯ. ಶ್ರೀಗಳವರ ಸಮಕ್ಷಮದಲ್ಲಿ ಪ್ರಾರ್ಥನೆ ಮಾಡಿಕೊಂಡು ಜೀರ್ಣೋದ್ಧಾರದ ಬಳಿಕ ಮೊದಲಿನಂತೆ ಅಭಿಷೇಕ, ಪೂಜ್ಯ. ಉತ್ಸವಾದಿಗಳನ್ನು ನಡೆಸಿಕೊಂಡು ಹೋಗುವುದೆಂದು ನಿಶ್ಚಯಿಸಲಾಗಿದೆ. ಈ ಮಧ್ಯೆ ೧೯೭೮ರಲ್ಲಿ ಕೆಲವು ಪುನರ್ ನಿರ್ಮಾಣದ ಕಾರ್ಯಗಳನ್ನು ಕೈಗೊಂಡು, ವಿಮಾನ ಶುದ್ದಿ, ಧಾಮ ಸಂಪ್ರೋಕ್ಷಣೆ ಇತ್ಯಾದಿಗಳನ್ನು ನಡೆಸಿದ್ದರು. [೧]

ಆಡಳಿತ[ಬದಲಾಯಿಸಿ]

ಯಾವುದೇ ಅರಸು ಮನೆತನದ ನೇರ ನಿಯಂರ್ತಣಕ್ಕೆ ಒಳಪಡದಿದ್ದ ಈ ಮನೆತನದಂತೆ, ಈ ಬಸದಿಗೆ ಸಂಬಂಧಿಸಿದ ಇನ್ನೊಂದು ಮನೆತನವೆಂದರೆ ವೇಣೂರು ಬಳಿಯ ಹೊಸಂಗಡಿಯ ಬಿನ್ನಾಣೆ ಅರಸು ಮನೆತನ. ಸಾಮಾಜಿಕ ಹಾಗೂ ಆರ್ಥಿಕ ಉನ್ನತ ಸ್ಥಿತಿಯ ಈ ಎರಡು ಮನೆಗಳು ನಡೆಸುತ್ತಿದ್ದ ಈ ಜಿನಾಲಯದಲ್ಲಿ ಹಿಂದೆ, ವಿವಿಧ ಧಾರ್ಮಿಕ ಉತ್ಸವಗಳು, ಅಭಿಷೇಕ, ಪೂಜೆ ನೋಂಪಿ, ಅಷ್ಟಾಹ್ನಿಕ, ದಶಲಕ್ಷಣ ಪರ್ವ ಇತ್ಯಾದಿಗಳೆಲ್ಲವೂ ನಡೆಯುತ್ತಿದ್ದಾಗ ಇಲ್ಲಿನ ಧರ್ಮ ಛತ್ರದಲ್ಲಿ ವಿಶೇಷವಾಗಿ ಅನ್ನದಾನವೂ ನಡೆಯುತ್ತಿತ್ತು, ದೂರ ದೂರದಿಂದ ಅನೇಕ ಅನುಕೂಲಸ್ಥ ಕುಟುಂಬಗಳು ಇಲ್ಲಿಗಾಗಮಿಸಿ, ವಿವಿದ ನೋಂಪಿ, ಪೂಜೆಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ಅನ್ಯ ಮತೀಯರೂ ಇವುಗಳಲ್ಲಿ ಪಾಲ್ಗೊಳುತಿದೆ ಇದರಿಂದ ಪ್ರಭಾವಿತರಾಗಿ, ಬಸದಿಯ ಎದುರು ನದಿ ಬಲೆ ಬೀಸಿ ಮೀನನ್ನು ಹಿಡಿಯಬಾರದು ಎಂಬ ನಿರ್ಬಂಧವನ್ನು ತಾವೇ ಹಾಕಿಕೊಂಡು ಪಾಲಿಸುತ್ತಿದ್ದಾರೆ.

ಆವರಣ[ಬದಲಾಯಿಸಿ]

ಈ ಬಸದಿಗೆ ಎರಡು ಪ್ರಾಂಗಣಗಳಿದ್ದು, ಹೊರಗಿನ ಅಂಗಣಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಇಲ್ಲಿ ಬಹು ಸುಂದರವಾದ ಒಂದು ವಸಂತ ಮಂಟಪವಿದೆ. ಅಲ್ಲಿ ಭಗವಂತನ ಪೂಜೆಗೆ ಬೇಕಾದ ಹೂಗಳನ್ನು ಬೆಳೆಸುವ ಒಂದು ಪ್ರತ್ಯೇಕ ಹೂ ತೋಟವಿದೆ, ಎದುರಿನ ಗೋಪುರಕ್ಕೆ ಜಗಲಿಯಿದು ಯಾತ್ರಿಕರಿಗೆ ತಾತ್ಕಾಲಿಕವಾಗಿ ಕುಳಿತುಕೊಳ್ಳಲು ಅನುಕೂಲವಿದೆ. ಗೋಪುರದ ಒಳಗಡೆಯಲ್ಲಿ ಕುಳಿತುಕೊಳ್ಳಲು ಹಾಗೂ ಯಾವುದೇ ಕಾರ್ಯಕ್ರಮ ನಡೆಸಲು ಬೇಕಾದ ಸ್ಥಳವಿದೆ. ಇದಕ್ಕೆ ತಾಗಿಕೊಂಡು ಒಳಾಂಗಣದ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಯಿದೆ. ಈ ಅಂಗಣದಲ್ಲಿ ಗರ್ಭಗೃಹದ ಬಲಬದಿಗೆ ಕ್ಷೇತ್ರಪಾಲನ ಸನ್ನಿಧಿಯಿದೆ. ಒಂದು ಪೀಠದ ಮೇಲೆ ನಾಗನ ಕಲ್ಲು, ಗುಂಡ ಕಲ್ಲುಗಳು ಇತ್ಯಾದಿಗಳನ್ನಿಟ್ಟು ಇದನ್ನು ರೂಪಿಸಲಾಗಿದೆ. ಇ ಬಸದಿಗೆ ಮಾನಸ್ತಂಭವೂ ಇಲ್ಲ. ಶಿಲಾಶಾಸನ ಇತ್ಯಾದಿ ಪ್ರಾಚೀನ ದಾಖಲೆಗಳೂ ಇಲ್ಲ. ಬಲಿ ಕಲ್ಲುಗಳು ಅಥವಾ ದಶ ದಿಕ್ಪಾಲಕರ ಕಲ್ಲುಗಳು ಸರಿಯಾದ ಸ್ಥಳದಲ್ಲಿವೆ. ಗೋಪುರದಿಂದ ಗರ್ಭಗೃಹದತ್ತ ಹೋಗಲು ಮೇಲೇರುವಾಗ ಎರಡೂ ಬದಿಗಳಲ್ಲಿ ಹಳೆಯದಾದ ದ್ವಾರಪಾಲಕರ ವರ್ಣಚಿತ್ರಗಳನ್ನು ಕಾಣಬಹುದು. ಇಲ್ಲಿ ಆಗಲಿ, ಒಳಗಿನ ಕಂಬಗಳಲ್ಲಾಗಲೀ ವಿಶೇಷವಾದ ಕಲಾಕೃತಿಗಳ ಕೆತ್ತನೆಯಿಲ್ಲ. ಹೆಚ್ಚಿನವು. ಮರದ ಕಂಬಗಳು. ಇಲ್ಲಿ ಘಂಟೆ, ಜಯ ಗಂಟೆಯನ್ನು ತೂಗು ಹಾಕಲಾಗಿದೆ. ಇದು ಪ್ರಾರ್ಥನಾ ಮಂಟಪ. ಮುಂದೆ ತೀರ್ಥಂಕರ ಮಂಟಪ, ಶುಕನಾಸಿ ಮತ್ತು ಗರ್ಭಗೃಹ - ಇವೆ. ಈ ಮೂರಕ್ಕೆ ಸುತ್ತುವರಿದು ಪ್ರದಕ್ಷಿಣಾ ಪಥವಿದೆ. ಇವುಗಳ ಮೇಲೆ ಭದ್ರವಾದ ಅಟ್ಟವಿದ್ದು, ಇಲ್ಲಿಂದಲೂ ಒಳಾಂಗಣದಿಂದಲೂ ನೋಡುವಾಗ, ಮೇಗಿನ ಸೆಲೆ ಇರಬಹುದೆಂದು ಕಂಡರೂ, ಅದು ಇಲ್ಲ. ಮೇಲಿನ ನೆಲೆಯಲ್ಲಿ ಇಂದು ಪ್ರತಿಷ್ಠಾಪನೆಯಾಗಲೀ ಪೂಜೆಯಾಗಲೀ ಇಲ್ಲ.

ಆಚರಣೆ[ಬದಲಾಯಿಸಿ]

ಇಲ್ಲಿ ಅಟ್ಟಳಿಗೆಯನ್ನು ನಿರ್ಮಿಸಿ ಅಟ್ಟಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಅದರಂತೆ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ತಿಕ ದೀಪೋತ್ಸವ ಹಾಗೂ ಸಮಾರಾಧನೆಯನ್ನು ನಡೆಸಲಾಗುತ್ತಿತ್ತು. ಆದರೆ ಇಲ್ಲಿ ರಥೋತ್ಸವ ಇಲ್ಲ.

ದೈವ[ಬದಲಾಯಿಸಿ]

ಬಸದಿಯ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಪದ್ಮ ಪೀಠದ ಮೇಲೆ ಭಗವಾನ್ ಚಂದ್ರನಾಥ ಸ್ವಾಮಿಯ ಪಂಚಲೋಹದ ಬಿಂಬವು ವಿರಾಜಮಾನವಾಗಿದೆ, ಖಡ್ಡಾಸನ ಭಂಗಿಯಲ್ಲಿದೆ.

ವಿನ್ಯಾಸ[ಬದಲಾಯಿಸಿ]

ಪ್ರಭಾವಳಿಯಲ್ಲಿ ಕೆಳಗಡೆ ಸ್ತಂಭಗಳ ರಚನೆಯಿದ್ದು, ಮೇಲ್ಗಡೆಯ ಅರ್ಧ ವೃತ್ತಾಕಾರದ ಪ್ರಭಾವಳಿಯಲ್ಲಿ ಹೊಯ್ಸಳ - ಪೂರ್ವ ಕಾಲದ ಸರಳ ಮಕರ ತೋರಣದ ಅಲಂಕಾರವಿದೆ. ಇದರ ಮತ್ತು ಶ್ರೀ ಸ್ವಾಮಿಯ ಮೂರ್ತಿಯ ಅಧ್ಯಯನವು ಇದು ಸುಮಾರು ೮೦೦ ವರ್ಷಗಳಷ್ಟು ಹಳೆಯದಾದ ಜಿನಾಲಯ ಎಂಬುದನ್ನು ಸೂಚಿಸುತ್ತದೆ. ಈ ಬಿಂಬದ ಸಲ ಎದುರುಗಡೆ ಎರಡು ಗಂಧಕುಟಿಗಳನ್ನು ನಿರ್ಮಿಸಿಡಲಾಗಿದೆ. ಅವುಗಳ ಪ್ರತಿ ಅಂಕಣದಲ್ಲಿಯೂ, ಸುಂದರವಾದ ಅನೇಕ ಜಿನ ಬಿಂಬಗಳಿವೆ. ಇವುಗಳಲ್ಲಿ ಹೆಚ್ಚಿನವು ಪ್ರಧಾನ ಬಿಂಬದ ಸಮಕಾಲೀನವಾದವುಗಳು ಎನ್ನಲಡ್ಡಿಯಲ್ಲ. ಕೆಲವು ಇನ್ನೂ ಹೆಚ್ಚಿನ ಪ್ರಾಚೀನತೆಯನ್ನು ಸೂಚಿಸುತ್ತವೆ. ಕೆಳಗಡೆ, ಶ್ರುತ, ಗಣಧರ ವಲಯ, ಚತುರ್ವಿಂಶತಿ ತೀರ್ಥಂಕರ ಬಿಂಬಗಳ ಸಮೂಹವಿದೆ. ಮಧ್ಯದಲ್ಲಿ ಶ್ರೀ ಪದ್ಮಾವತೀ ದೇವಿಯ ಬಿಂಬವಿದೆ. ಇದಕ್ಕೆ ವಿಶೇಷ ಪೂಜೆ ನಡೆಸಲಾಗುತ್ತದೆ. ಮೂಲ ನಾಯಕ ಶ್ರೀ ಚಂದ್ರನಾಥ ಸ್ವಾಮಿಯಂತೆ ಎದುರುಗಡೆ ನೋಡುತ್ತಿರುವ ಈ ಬಿಂಬಕ್ಕೂ ಅಲಂಕಾರಗೊಳಿಸಿ ಪೂಜೆ ನಡೆಸಲಾಗುತ್ತದೆಯೇ ಹೊರತು ಬೇರೆಯೇ ಒಂದು ದೇವ ಕೋಷ್ಠವನ್ನು ರಚಿಸಿ, ಅಲ್ಲಿ ಬಿಂಬವನ್ನು ಉತ್ತರಕ್ಕೆ ಮುಖಮಾಡಿ ಪ್ರತಿಷ್ಠಾಪಿಸಿಲ್ಲ. ಸ್ಥಳೀಯ ಧೂಮಾವತಿ ದೈವದ ಭಂಡಾರವು ವಾರ್ಷಿಕೋತ್ಸವಕ್ಕೆ ಈ ಕಡೆಗೆ ಬರುವಾಗ ಈ ಬಸದಿಯ ಎದುರು ನಿಂತು, ಭಕ್ತಿ ಸಮರ್ಪಣೆ ಮಾಡುವ ಪದ್ಧತಿ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೩೦೪-೩೦೫.