ಘ್ರಾಣ ಮತ್ತು ರುಚಿ

ವಿಕಿಪೀಡಿಯ ಇಂದ
Jump to navigation Jump to search

ಘ್ರಾಣ ಮತ್ತು ರುಚಿ ಇವು, ಮೂಗಿನಿಂದ ಮತ್ತು ನಾಲಗೆಯಿಂದ ಅನುಕ್ರಮವಾಗಿ ಅನುಭವಕ್ಕೆ ಬರುವ ವಸ್ತುಗುಣಗಳು. ವಾಸನೆಗೂ ರುಚಿಗೂ ನಿಕಟ ಸಂಬಂದ ಉಂಟು.

ಅನುಭವಗಳು[ಬದಲಾಯಿಸಿ]

ಆದರೆ ನಮಗೆ ಆಹಾರದ ಪುರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ಘ್ರಾಣ ರುಚಿಗಳೆರಡೇ ಸಾಲವು. [೧]ಜೊತೆಗೆ ನೋಟ ಶಬ್ದಗಳ ಅರಿವು ಸಹ ಬೇಕು. ಸುಗಂಧದ್ರವ್ಯಗಳ ಇಂದ್ರಿಯಾನುಭವದಲ್ಲಿ ಘ್ರಾಣಾಂಶ ಪ್ರಮುಖ. ಕೆಲವು ವಸ್ತುಗಳ ಘ್ರಾಣಾನುಭವಕ್ಕೆ ಸ್ವರ್ಶಾಂಶವೂ ಅಗತ್ಯ. ಇನ್ನೂ ವಿಚಿತ್ರವೆಂದರೆ ಹಿಂದೆಂದೂ ರುಚಿ ಅನುಭವವಿಲ್ಲದ ಪ್ರಬಲರುಚಿ ಇಲ್ಲದ ಒಂದು ರಾಸಾಯನಿಕ ವಸ್ತುವನ್ನು ಮೊದಲ ಬಾರಿ ರುಚಿ ನೋಡಿದರೆ, ಆ ವಸ್ತುವಿನ ರುಚಿ ಇಂಥದ್ದೇ ಎಂದು ಹೇಳಲು ಕಷ್ಟವಾದೀತು. ವಸ್ತುವಿನ ರಾಸಾಯನಿಕ ರಚನೆಗೂ ರುಚಿಗೂ ಸಂಬಂಧ ಉಂಟು ಎಂದು ತಿಳಿದಿದ್ದರೂ ರುಚಿಯ ಸಂಪುರ್ಣ ರಾಸಾಯನಿಕ ಹಿನ್ನೆಲೆ ಮಾತ್ರ ಅರ್ಥವಾಗಿಲ್ಲ. ಇದೇ ಘ್ರಾಣಕ್ಕೂ ಅನ್ವಯಿಸುತ್ತದೆ. ನಮ್ಮ ಘ್ರಾಣ ನರತಂತುಗಳ ತುತ್ತತುದಿಯ ಅಂಗಗಳಲ್ಲಿ ಪ್ರಾರಂಭವಾಗುತ್ತದೆ. ಲವಂಗ ಮತ್ತು ಮೆಣಸು ರುಚಿಯೊಂದಿಗೆ ಉರಿಯನ್ನೂ ಉಂಟು ಮಾಡುತ್ತವೆ. ಉರಿ ರುಚಿಗೆ ಸೇರಿದ್ದಲ್ಲ. ಉಪ್ಪು, ಹುಳಿ, ಸಿಹಿ ಮತ್ತು ಕಹಿಗಳು ರುಚಿಗೆ ಸೇರಿದ್ದು. ಉರಿಯಾದರೋ ರಾಸಾಯನಿಕ ಪ್ರಚೋದಿತ. ವಾಸನೆ ಮತ್ತು ರುಚಿಗಳಿಗೆ ರಾಸಾಯನಿಕ ಹಿನ್ನೆಲೆ ಯಿರುವುದರಿಂದಲೇ ಕೆಳದರ್ಜೆಯ ಜೀವಿಗಳು ತಮಗೆ ಹಿತವಾದ ಪದಾರ್ಥಗಳನ್ನು ಅಂಗೀಕರಿಸಲು ಮತ್ತು ಅಹಿತವಾದವನ್ನು ತ್ಯಜಿಸಲು ಸಾಧ್ಯವಾಗುತ್ತದೆ.

ಘ್ರಾಣ[ಬದಲಾಯಿಸಿ]

ಸ್ತನಿಗಳಲ್ಲಿ ಘ್ರಾಣಗ್ರಾಹಿಕೋಶಗಳು (ಆಲ್ಫ್ಯಾಕ್ಟರಿ ಸೆಲ್ ರಿಸೆಪ್ಟರ್ಸ್) ಮೂಗಿನ ಹೊಳ್ಳೆಗಳ ಮೇಲ್ಭಾಗದಲ್ಲಿ ಅಡಕವಾಗಿವೆ. ಇವು ಘ್ರಾಣ ಪೊರೆಯಲ್ಲಿ ಸುಮಾರು 2-5 ಚದರ ಸೆಂಟಿಮೀಟರಿನಷ್ಟು ಕ್ಷೇತ್ರದ ಮಚ್ಚಿಗಳಲ್ಲಿವೆ. ಘ್ರಾಣಗ್ರಾಹಿಕೋಶಗಳು ನೀಳವಾಗಿ ತೆಳ್ಳಗಿವೆ. ಇವುಗಳ ತುದಿಗಳಿಂದ, ಸೂಕ್ಷ್ಮ ಕೂದಲಂತಿರುವ ಅನೇಕ ಎಳೆಗಳು. ಮೂಗಿನ ಲೋಳೆಪೊರೆಯಿಂದ ಹಾದು ಹೊರ ಚಾಚುತ್ತವೆ. [೨]ಈ ಕೋಶವನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡಿದರೆ ಪ್ರತಿ ಕೋಶದಲ್ಲೂ ಸುಮಾರು ನೂರಾರು ಎಳೆಗಳು ಇರುವುದನ್ನು ಕಾಣಬಹುದು. ಈ ಕೋಶಗಳ ಮತ್ತೊಂದು ತುದಿ ಮೊನಚಾಗಿ ಕಡೆಗೆ ನರತಂತುವಾಗಿ ಮಾರ್ಪಟ್ಟು, ಇದೇ ರೀತಿ ಇತರ ಘ್ರಾಣಗ್ರಾಹಿ ಕೋಶಗಳಿಂದ ಹೊರಡುವ ನರತಂತುಗಳೊಂದಿಗೆ ಘ್ರಾಣನರವಾಗಿ ಘ್ರಾಣಮುಕುಲವನ್ನು (ಆಲ್ಫ್ಯಾಕ್ಟರಿ ಬಲ್ಬ್) ಸೇರುತ್ತವೆ. ಮಿದುಳಿನ ನೇರಸಂಪರ್ಕವಿರುವ ನರಗಳಲ್ಲಿ ಒಂದಾದ ಟ್ರೈಜಮೈನಲ್ ನರದ ತಂತುಗಳು ಸಹ ಮೂಗಿನ ಹೊಳ್ಳೆ ಹಾಗೂ ಘ್ರಾಣಕ್ಷೇತ್ರದಲ್ಲಿ ಹರಡಿ ಉರಿಯ ಪ್ರಚೋದನೆಯಲ್ಲಿ ಭಾಗವಹಿಸುತ್ತವೆ. ಅತ್ಯಲ್ಪ ವಾಸನೆ ಇಲ್ಲವೇ ಕಿರುಕುಳ ಕೊಡುವಷ್ಟು ಉದ್ರೇಕಿಸುವ ವಾಸನೆಗಳು ಕೂಡ ಟ್ರೈಜಮೈನಲ್ ನರತಂತುಗಳ ಹಾಗೂ ಘ್ರಾಣನರತಂತುಗಳ ತುತ್ತತುದಿಯ ಅಂಗಗಳನ್ನು ಪ್ರಚೋದಿಸುತ್ತವೆ. ವಾಸನೆ ಬೀರುವ ಪದಾರ್ಥದ ಅಣುಗಳು ನಾವು ಸಾಧಾರಣವಾಗಿ ಉಸಿರಾಡುವಾಗ ಉತ್ಪತ್ತಿಯಾಗುವ ವಾಯುಸುಳಿಗಳಲ್ಲಿ ಸಿಕ್ಕು ಘ್ರಾಣಕ್ಷೇತ್ರಕ್ಕೆ ಅಪ್ಪಳಿಸುತ್ತವೆ. ಅಣುಗಳು ತುತ್ತತುದಿಯ ಅಂಗಗಳನ್ನು ಮುಟ್ಟಿದ ಕೂಡಲೆ ಅಲ್ಲಿ ಅಲ್ಪ ವಿದ್ಯುತ್ ಪ್ರವಾಹ ಹುಟ್ಟುತ್ತದೆ. ಇದನ್ನು ನರಗಳ ಕಂತೆ ಮಿದುಳಿನಲ್ಲಿರುವ ಘ್ರಾಣಕೇಂದ್ರಕ್ಕೆ ತತ್ಕ್ಷಣ ಸಾಗಿಸುತ್ತದೆ. ಈ ಕೇಂದ್ರ ವಿದ್ಯುತ್ ಪ್ರವಾಹವನ್ನು ವಿಘಟಿಸಿ ವಿವಿಧ ವಾಸನೆಗಳಾಗಿ ಗುರುತಿಸುವುದು.[೩]

ಬಾಷ್ಪಗುಣ[ಬದಲಾಯಿಸಿ]

ಒಂದು ಪದಾರ್ಥ ವಾಸನೆ ಬೀರಬೇಕಾದರೆ ಅದಕ್ಕೆ ಸ್ವಲ್ಪಮಟ್ಟಿಗಾದರೂ ಬಾಷ್ಪಗುಣ ಇರಬೇಕು. ಆದರಿಂದ ಅಣುಗಳು ಹೊರಬಿದ್ದು ವಾಯುಸುಳಿಗಳ ಮೂಲಕ ಮೂಗಿನ ಹೊಳ್ಳೆಗಳಿಗೆ ಪ್ರವೇಶಿಸಬೇಕು. ನೀರಿನಲ್ಲಿಯೂ ಜಿಡ್ಡಿನಲ್ಲಿಯೂ ಕರುಗುವ ವಸ್ತುಗಳಿಗೆ ಅಧಿಕ ವಾಸನೆ ಉಂಟು. ಆದರೆ ವಾಸನೆಯೇ ಇಲ್ಲದ ಇಂಥ ವಸ್ತುಗಳೂ ಇವೆ. ವಾಸನೆ ಬೀರುವ ಪದಾರ್ಥಗಳ ಭೌತ ಅಥವಾ ರಾಸಾಯನಿಕ ವೈಶಿಷ್ಟ್ಯಗಳೇನೆಂಬುಂದು ಇನ್ನೂ ತಿಳಿದಿಲ್ಲ. ರಾಸಾಯನಿಕ ಧಾತುಗಳಲ್ಲಿ ಕೇವಲ ಏಳು ವಸ್ತುಗಳಿಗೆ ಮಾತ್ರ ವಾಸನೆ ಉಂಟು. ಫೊರೀನ್, ಕ್ಲೋರೀನ್, ಬ್ರೋಮೀನ್, ಅಯೋಡೀನ್, ಓಜೋ಼ನ್ ರೂಪದಲ್ಲಿರುವ ಆಕ್ಸಿಜನ್, ರಂಜಕ ಹಾಗೂ ಆರ್ಸೆನಿಕ್, ವಾಸನೆ ಬೀರುವ ರಾಸಾಯನಿಕಗಳಲ್ಲಿ ಅನೇಕವು ಆಗಾರ್ಯ್ನಿಕ್ ಗುಂಪಿಗೆ ಸೇರಿದವು. ಬಹುಶಃ ರಾಸಾಯನಿಕ ವ್ಯವಸ್ಥೆ. ರೂಪ, ಅಣುಗಳು ಇತ್ಯಾದಿ ಅವುಗಳಿಂದ ಬರುವ ವಾಸನೆಗೆ ಕಾರಣವಾಗಿದೆ. ಅತ್ಯಂತ ಅಲ್ಪಪ್ರಮಾಣದ ವಾಸನೆಯೂ ಘ್ರಾಣಕೇಂದ್ರವನ್ನು ಚೋದಿಸಬಲ್ಲದು. ರುಚಿಗಿಂತ ಘ್ರಾಣಸಕ್ತಿ 10,000 ಪಾಲಿನಷ್ಟು ಸೂಕ್ಷ್ಮ. ವಾತಾವರಣದ ಉಷ್ಣತೆಯೂ ಆವಿಯ ಸಾಂದ್ರತೆಯೂ ವಾಸನೆಯ ಗುಣಮಟ್ಟವನ್ನು ನೀರ್ಧರಿಸಬಲ್ಲವು. ಉದಾಹರಣೆಗೆ, ಸುಗಂಧದ್ರವ್ಯಗಳನ್ನು ತಯಾರಿಸುವಾಗ ಅವು ಸುಲಭವಾಗಿ ವಾಸನೆ ಬೀರಿ ಅಲ್ಪಕಾಲದಲ್ಲೇ ಅಳಿದು ಹೋಗಬೇಕೇ ಅಥವಾ ಸ್ವಲ್ಪ ಕಾಲ ಇದ್ದು ತರುವಾಯ ಇಲ್ಲದಂತಾಗಬೇಕೇ ಎಂಬುದನ್ನು ನಿರ್ಧರಿಸಿ ಸೂಕ್ತ ವಸ್ತುಗಳೊಂದಿಗೆ ಸುಗಂಧಗಳನ್ನು ಬೆರೆಸುತ್ತಾರೆ. ಆಲ್ಕೊಹಾಲ್ ಜೊತೆಗೆ ಬೆರೆಸಿದರೆ ಅದರ ಬಾಷ್ಪಶೀಲ ಗುಣದಿಂದಾಗಿ ವಾಸನೆ ಜಾಗ್ರತೆ ಮಾಯವಾಗುತ್ತದೆ. ನೀರಿನೊಂದಿಗೆ ಅತ್ಯಲ್ಪ ಪ್ರಮಾಣದಲ್ಲಿ ಇಂಡೋಲ್ ಸೇರಿಸಿ ದ್ರವ್ಯಗಳನ್ನು ಬೆರೆಸಿದರೆ ದೀರ್ಘಕಾಲ ವಾಸನೆ ಉಳಿಯಲು ಅವಕಾಶ ಉಂಟು (ಕ್ಲಿಂಗಿಂಗ್ ಓಡರ್).[೪]

ಬಗೆಗಳು[ಬದಲಾಯಿಸಿ]

ಯಾವುದಾದರೂ ರಾಸಾಯನಿಕ ಅಥವಾ ಕಂಪು ಬೀರುವ ಕಾರ್ಖಾನೆಗೆ ಭೇಟಿ ಕೊಟ್ಟರೆ ಮೊಟ್ಟ ಮೊದಲು ವಾಸನೆ ಬಂದು ನಮಗೆ ಅಪ್ಪಳಿಸಿ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಆದರೆ ಸ್ವಲ್ಪ ಕಾಲದ ಬಳಿಕ ಈ ವಾಸನೆಯ ಅನುಭವವೇ ಮಾಯವಾಗಿ ಹೋಗುವುದು. ನೀಲಗಿರಿ ತೈಲದ ವಾಸನೆ ಮೂಸಿ ತರುವಾಯ ಕರ್ಪುರವನ್ನು ಮೂಸಿದರೆ ಇದರ ವಾಸನೆಯನ್ನು ಗುರುತಿಸುವುದು ಕಷ್ಟವಾದೀತು. ಸಾವಿರಾರು ರೀತಿಯ ವಾಸನೆಗಳಿವೆ. ಅವೆಲ್ಲವನ್ನೂ ವರ್ಗೀಕರಿಸುವುದು ಸಾಧ್ಯವಾಗಲಾರದಾದರೂ ಕೆಲವು ವಾಸನೆಗಳು ಮಾತ್ರ ಪ್ರಧಾನವಾಗಿರಬೇಕೆಂಬ ಅಂಶ ಮನನವಾಗಿದೆ. ವಾಸನೆಗಳ ವರ್ಗೀಕರಣ ವ್ಯಕ್ತಿಯ ಅನುಕೂಲತೆಗೆ ಸೇರಿದ್ದು. ಹೆನ್ನಿಂಗ್ ಎಂಬಾತ ಸುಮಾರು 400ಕ್ಕೂ ಅಧಿಕ ಸಂಖ್ಯೆಯ ವಾಸನೆಗಳ ವಿಚಾರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ಅಧ್ಯಯನ ಮಾಡಿದ್ದಾನೆ. ಆತ ವಾಸನೆಯನ್ನು ಆರು ಗುಂಪುಗಳಾಗಿ ವಿಂಗಡಿಸಿದ : ಹಣ್ಣು, ಹೂ, ಹೊಲಸು, ರಾಳ, ಸಂಬಾರ, ಸೀದ (ಸುಟ್ಟ) ಪದಾರ್ಥಗಳ ವಾಸನೆಗಳು.

ಘ್ರಾಣಸಾಮರ್ಥ್ಯ ಮತ್ತು ವ್ಯಕ್ತಿವರ್ತನೆ[ಬದಲಾಯಿಸಿ]

ವಾಸನೆ ಹಿಡಿದು ತನ್ನ ವರ್ತನೆ ರೂಪಿಸಿಕೊಳ್ಳುವುದನ್ನು ಕೆಳವರ್ಗಗಳ ಪ್ರಾಣಿಗಳಲ್ಲಿ ಕಾಣಬಹುದು. ಸ್ನೇಹಿತ ಅಥವಾ ಶತ್ರು ಎಂಬುದನ್ನು ಕೀಟಗಳು ತಮ್ಮ ಘ್ರಾಣಸಾಮಥರ್ಯ್ದಿಂದಲೇ, ತಿಳಿದುಕೊಳ್ಳುತ್ತವೆ. ಕೆಲವು ಜಾತಿಯ ಇರುವೆಗಳ ಗ್ರಾಹಕತಂತುಗಳನ್ನು ತೆಗೆದುಬಿಟ್ಟರೆ ಅವು ತಮ್ಮ ತಮ್ಮಲ್ಲೇ ಕಚ್ಚಾಡಿ ನಾಶಹೊಂದುವುದುಂಟು. ಜೇನ್ನೊಣಗಳು ತಮ್ಮ ಗೂಡಲ್ಲದೆ ಅನ್ಯ ಗೂಡಿನೊಳಗೆ ನುಗ್ಗಿದರೆ ಅವು ಪರಕೀಯ ಕೀಟಗಳೆಂದು ಆ ಗೂಡಿನ ಜೇನ್ನೊಣಗಳು ಘ್ರಾಣಸಾಮಥರ್ಯ್ದಿಂದಲೇ ನಿರ್ಧರಿಸಿ ಅವನ್ನು ಕೊಂದುಹಾಕುತ್ತವೆ. ಜೇನ್ನೊಣಗಳಿಗೆ ಗ್ರಾಹಕತಂತುಗಳ ಜೊತೆಗೆ ಹೊಟ್ಟೆಯ ತುದಿಯಲ್ಲಿ ಮತ್ತೊಂದು ಘ್ರಾಣಾಂಗವೂ ಉಂಟು. ಇವು ಅವುಗಳ ಆಹಾರಾನ್ವೇಷಣೆಯಲ್ಲಿ ಸಹಾಯಕವಾಗುತ್ತವೆ.[೫]

ವಾಸನೆಗೂ ಲೈಂಗಿಕ ಆಕರ್ಷಣೆ ಮತ್ತು ನಡತೆಗೂ ನಿಕಟ ಸಂಬಂಧವಿದೆ. ಹೆಣ್ಣು ಗಂಡುಗಳ ಗ್ರಾಹಕ ತಂತುಗಳಲ್ಲಿರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಇಲ್ಲಿ ಗಮನಿಸ ಬಹುದು. ಕಾಡುಗಳಲ್ಲಿರುವ ಸಸ್ತನಿ ಪ್ರಾಣಿಗಳು ಇತರ ಪ್ರಾಣಿಗಳನ್ನು ಆಕರ್ಷಿಸಲು ತಮ್ಮ ಘ್ರಾಣಗ್ರಂಥಿಗಳನ್ನು ಉಪಯೋಗಿಸಿಕೊಳ್ಳುತ್ತವೆ. ಮೃಗಗಳ ಬೆದೆಗಾಲದ ಅರಿವು ಮೂಡುವುದು ವಾಸನೆಯಿಂದಲೇ. ಋತುಚಕ್ರದ ವಿವಿಧ ವೇಳೆಗಳಲ್ಲಿ ಹೆಣ್ಣಿನ ವಾಸನೆ ವ್ಯತ್ಯಾಸ ಆಯಾ ಕಾಲದ ಅಂತಸ್ಸ್ರಾವಗಳನ್ನು ಅವಲಂಬಿಸಿದೆ.

ರುಚಿ[ಬದಲಾಯಿಸಿ]

ಬಾಯಿಯ ಒಳಗಿರುವ ರುಚಿಮೊಗ್ಗುಗಳು (ಟೇಸ್ಟ್ ಬಡ್ಸ್) ನಮಗೆ ರುಚಿಯ ಅರಿವನ್ನು ಉಂಟುಮಾಡುವ ಅಂಗಗಳು. ಇವು ಜೀವಕೋಶಗಳ ಗುಚ್ಛ. ಇವುಗಳ ಆಕಾರ ಬೋಗುಣಿಯಂತೆ. ಈ ಕೋಶಗಳು ನಾಲಗೆಯಲ್ಲಿ ಅಡಕವಾಗಿದ್ದು ರುಚಿರಂಧ್ರಗಳ ಮೂಲಕ ಬಾಯ ಒಳಕ್ಕೆ ತೆರೆಯುತ್ತವೆ. ಈ ಗುಚ್ಛದಲ್ಲಿರುವ ಜೀವಕೋಶಗಳು ಎರಡು ವಿಧ : ತಳಪಾಯದಲ್ಲಿರುವ ಆಸರೆಕೋಶಗಳು ಹಾಗೂ ರುಚಿಗ್ರಾಹಕ (ಗಸ್ಟೇಟರಿ) ಸೂಕ್ಷ್ಮತಂತು ಕೋಶಗಳು. ಇವುಗಳ ತುದಿಯಲ್ಲಿ ನವಿರಾದ ಕೂದಲಿನ ಎಳೆ ರುಚಿರಂಧ್ರದ ಹೊರಗೆ ಚಾಚಿರುತ್ತದೆ. ಮನುಷ್ಯನ ಮತ್ತು ಸಸ್ತನಿ ಪ್ರಾಣಿಗಳ ನಾಲಗೆಗಳಲ್ಲಿ ಫಂಗಿಫಾರಮ್, ಪೋಲಿಯೇಟ್ಮತ್ತು ಸರ್ಕಂವ್ಯಾಲೇಟ್ ಪ್ಯಾಪಿಲ್ಲೆ ಎಂಬ ಉಬ್ಬುಗಳ ಮೇಲೆ ಹಾಗೂ ಅವುಗಳ ಪಕ್ಕಗಳಲ್ಲಿ ರುಚಿಮೊಗ್ಗುಗಳು ಇವೆ. ಅಲ್ಲದೆ ನಾಲಗೆ ಗಂಟಲುಗಳ ಮೇಲ್ಮೈಯಲ್ಲೂ ಅಡಕವಾಗಿರಬಹುದು. ರುಚಿಮೊಗ್ಗುಗಳನ್ನು ಹೊಗುವ ಜ್ಞಾನವಾಹಿ ನರತಂತು ರುಚಿಮೊಗ್ಗುಗಳ ಕೋಶಗಳ ಸುತ್ತ ಹೆಣೆದುಕೊಂಡು ಆವರಿಸಿ ಒಂದಲ್ಲ ಒಂದು ರುಚಿಗ್ರಾಹಕ ಕೋಶದೊಡನೆ ಸಂಪರ್ಕಿಸಿರುತ್ತದೆ. ನಾಲಗೆಯ ನರವನ್ನು ತುಂಡುಮಾಡಿದರೆ ನರತಂತುಗಳೂ ರುಚಿಮೊಗ್ಗುಗಳೂ ಕ್ಷೀಣಿಸಿ ಹೋಗುತ್ತವೆ. ನರವನ್ನು ಪುನಃ ಸೂಕ್ತರೀತಿಯಲ್ಲಿ ಕೂಡಿಸಿದರೆ ಆ ಜಾಗದಲ್ಲೇ ಇರುವ ಮೇಲುಪೊರೆಯ ಕೋಶಗಳಿಂದ ರುಚಿಮೊಗ್ಗುಗಳು ಪುನಃ ರೂಪುಗೊಳ್ಳುತ್ತವೆ.[೬][೭]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಜೀವಕ್ರಿಯಶಾಸ್ತ್ರ

  1. http://kidshealth.org/kid/talk/qa/taste_buds.html
  2. https://www.ncbi.nlm.nih.gov/pubmedhealth/PMH0072592/
  3. https://books.google.com/books?id=6M3NSNm6MlkC&pg=PA959
  4. https://books.google.com/books?id=vW6rXFvm4sQC&pg=PT299
  5. https://www.npr.org/sections/thesalt/2013/11/12/244789655/why-can-we-taste-bitter-flavors-turns-out-it-s-still-a-mystery
  6. https://www.ncbi.nlm.nih.gov/pmc/articles/PMC3325276
  7. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಘ್ರಾಣ ಮತ್ತು ರುಚಿ