ಘಿಯಾಸ್-ಉದ್-ದೀನ್ ಬಹಾದುರ್ ಷಾ
ಘಿಯಾಸ್-ಉದ್-ದೀನ್ ಬಹಾದುರ್ ಷಾ ಬಂಗಾಳದಲ್ಲಿ ಆಳಿದ ಒಬ್ಬ ಸುಲ್ತಾನ. ಷಂಸ್-ಉದ್-ದೀನ್ ಫಿರೋಜ಼ನ ಒಬ್ಬ ಮಗ.
ಜೀವನ
[ಬದಲಾಯಿಸಿ]ತಂದೆ ಬದುಕಿರುವಾಗಲೇ ಇವನೂ, ಇವನ ಸೋದರರಲ್ಲೊಬ್ಬರಾಗಿದ್ದ ಷಿಹಾಬ್-ಉದ್-ದೀನ್ ಬುಘ್‌ದಾನೂ ಅನುಕ್ರಮವಾಗಿ ಸೊನಾರ್‌ಗಾಂವ್ ಮತ್ತು ಲಖ್‌ನಾವತಿಗಳಲ್ಲಿ ದಂಗೆ ಎದ್ದರು (1310-14). ಫಿರೊಜ಼್ 1315ರಲ್ಲಿ ಲಖ್‌ನಾವತಿಯ ಮೇಲೆ ತನ್ನ ಹತೋಟಿ ಸ್ಥಾಪಿಸಿದನಾದರೂ, 1317-18ರಲ್ಲಿ ಷಿಹಾಬ್-ಉದ್-ದೀನ್ ಅದನ್ನು ಆಳುತ್ತಿದ್ದ. 1322ರಲ್ಲಿ ಅಥವಾ ಅನಂತರ ಫಿರೊಜ಼್ ತೀರಿಕೊಂಡಾಗ ನಾಸಿರ್-ಉದ್-ದೀನ್ ಮತ್ತು ಷಿಹಾಬ್-ಉದ್-ದೀನರನ್ನು ಬಿಟ್ಟು ಬಹುಶಃ ಉಳಿದೆಲ್ಲ ಸೋದರರನ್ನೂ ಘಿಯಾಸ್-ಉದ್-ದೀನ್ ಷಾ ಕೊಂದು ಲಖ್‍ನಾವತಿ ಮತ್ತು ಸೊನಾರ್‌ಗಾಂವ್ ಎರಡರಲ್ಲೂ ಆಳತೊಡಗಿದ.
ಫಿರೊಜ಼್ ಷಾನ ಮರಣಾನಂತರ ಷಿಹಾಬ್-ಉದ್-ದೀನ್ ಸಿಂಹಾಸನವನ್ನೇರಿದನೆಂದೂ, ಆದರೆ ಷಾಹನ ಕೊನೆಯ ಮಗ ಘಿಯಾಸ್-ಉದ್-ದೀನ್ ಬಹಾದುರ್ ಬುರಾ (ಕಪ್ಪು) ಸಿಂಹಾಸನವನ್ನಾಕ್ರಮಿಸಿಕೊಂಡು ತನ್ನ ಬಹುತೇಕ ಸೋದರರನ್ನು ಕೊಂದನೆಂದೂ, ಅವನ ಸೋದರರಲ್ಲಿ ಇಬ್ಬರಾದ ಷಿಹಾಬ್-ಉದ್-ದೀನ್ ಮತ್ತು ನಸೀರ್-ಉದ್-ದೀನ್ ದೆಹಲಿಯ ಸುಲ್ತಾನ ಘಿಯಾಸ್-ಉದ್-ದೀನ್ ತುಘಲಕನ ಬಳಿಗೆ ಓಡಿಹೋದರೆಂದು, ತುಘಲಕ್ ಅವರೊಂದಿಗೆ ಘಿಯಾಸ್-ಉದ್-ದೀನ್ ಬಹಾದುರನ ಮೇಲೆ ದಂಡೆತ್ತಿ ಹೋದನೆಂದು ಇಬ್ನ್ ಬತೂತ ಬರೆದಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಬೇರೆ ಯಾವ ಆಧಾರಗಳೂ ಇಲ್ಲ. ಲಖ್‍ನಾವತಿಯ ಕೆಲವು ಆಸ್ಥಾನಿಕರು ತಾವು ಪಡುತ್ತಿದ್ದ ಪಾಡನ್ನು ಕುರಿತು ದೆಹಲಿಯ ಸುಲ್ತಾನನಿಗೆ ದೂರು ಹೊತ್ತರೆಂದೂ, ಘಿಯಾಸ್-ಉದ್-ದೀನನ ದಬ್ಬಾಳಿಕೆಯನ್ನು ಕೊನೆಗೊಳಿಸಲು ಸುಲ್ತಾನ ದಂಡೆತ್ತಿ ಹೋದನೆಂದೂ ಬರನೀ ಹೇಳುತ್ತಾನೆ.
ಅಂತೂ ದೆಹಲಿಯ ಸುಲ್ತಾನ ಬಂಗಾಳದ ಮೇಲೆ ತನ್ನ ಒಡೆತನ ಸ್ಥಾಪಿಸಲು 1324ರಲ್ಲಿ ದಂಡೆತ್ತಿ ಹೋದ. ಅವನ ಸೇನೆ ಲಖ್‌ನಾವತಿಯನ್ನು ತಲುಪಿದಾಗ ಬಹಾದುರ್ ನಗರದಿಂದ ಹೊರಬಂದು ದೆಹಲಿಯ ಸೇನೆಯೊಂದಿಗೆ ಕಾದಿದ. ಅವನಿಗೆ ಸೋಲಾಯಿತು. ಓಡಿ ಹೋಗಲು ಯತ್ನಿಸಿ ಅವನು ಸೆರೆ ಸಿಕ್ಕಿದ.[೧] ದೆಹಲಿಯ ಸಾಮಂತನಾಗಿ ನಸೀರ್-ಉದ್-ದೀನ್ ಲಖ್‍ನಾವತಿಯಿಂದ ಆಳತೊಡಗಿದ.
ಬಂಗಾಳದಿಂದ ಹಿಂದಿರುಗುತ್ತಿದ್ದಾಗ ಘಿಯಾಸ್-ಉದ್-ದೀನ್ ತುಘಲಕ್ ದುರಂತಕ್ಕೀಡಾದ. ಮಹಮ್ಮದ್-ಬಿನ್-ತುಘಲಕ್ ದೆಹಲಿಯ ಸುಲ್ತಾನನಾದ ಮೇಲೆ ಬಹಾದುರನನ್ನು ಬಿಡುಗಡೆ ಮಾಡಿ, ತನ್ನ ಸಾಮಂತನಾಗಿ ಸೊನಾರ್‌ಗಾಂವ್‌ನಿಂದ ಆಳಲು ಅವನಿಗೆ ಅವಕಾಶ ನೀಡಿದನೆಂದೂ, ಜೊತೆಗೆ ಬಹ್ರಾಂ ಖಾನನನ್ನು ತನ್ನ ಪ್ರತಿನಿಧಿಯಾಗಿ ಅಲ್ಲಿಟ್ಟನೆಂದೂ ತಿಳಿದು ಬರುತ್ತದೆ. ಸುಮಾರು ಮೂರು ವರ್ಷಗಳ ಕಾಲ, 1327-28ರ ವರೆಗೆ, ಅವನು ಬಹ್ರಾಂ ಖಾನನೊಂದಿಗೆ ಸ್ನೇಹವಾಗಿ ಆಡಳಿತ ನಡೆಸಿದನಲ್ಲದೆ ತನ್ನ ಮತ್ತು ಮಹಮ್ಮದ್-ಬಿನ್-ತುಘಲಕನ ಹೆಸರಿನಲ್ಲಿ ಸಂಯುಕ್ತವಾಗಿ ನಾಣ್ಯಗಳನ್ನು ಚಲಾವಣೆಗೆ ತಂದ. ಆದರೆ ದೆಹಲಿಯ ಸುಲ್ತಾನನಿಗೆ ಅಧೀನನಾಗಿಯೇ ಮುಂದುವರಿಯಲೊಲ್ಲದೆ, ಅವನಿಂದ ಸ್ವತಂತ್ರನಾಗಲು ಸಮಯ ಕಾಯುತ್ತಿದ್ದ. ಅವನ ಅಣ್ಣ ನಸೀರ್-ಉದ್-ದೀನ್‌ನನನ್ನು ಸುಲ್ತಾನ ಪದಚ್ಯುತನನ್ನಾಗಿ ಮಾಡಿದಾಗ ಘಿಯಾಸ್-ಉದ್-ದೀನ್ ಬಹಾದುರ್ ಷಾ ತನಗೂ ಆ ಪಾಡು ಬರದಿರಲೆಂದು ಸ್ವಾತಂತ್ರ್ಯ ಗಳಿಸಲು ಯತ್ನಿಸಿದ. ಬಹ್ರಾಂ ಖಾನ್ ಇವನನ್ನು ಸೋಲಿಸಿ ಕೊಂದು, ಇವನ ಚರ್ಮವನ್ನು ಸುಲಿದು ದೆಹಲಿಯ ಸುಲ್ತಾನನಿಗೆ ಕಳಿಸಿದನೆಂದು ಈಸಾಮೀ ಎಂಬ ಚರಿತ್ರಕಾರ ಬರೆಯುತ್ತಾನೆ. ಆದರೆ ಬಹ್ರಾಂ ಖಾನ್ ಇವನನ್ನು ಕೊಲ್ಲಲಿಲ್ಲವೆಂದೂ, ಕೆಲವು ಷರತ್ತುಗಳನ್ನು ವಿಧಿಸಿ ಸುಲ್ತಾನ ಇವನನ್ನು ಬಿಡುಗಡೆ ಮಾಡಿದನೆಂದೂ, ಫಿಯಾಸ್-ಉದ್-ದೀನ್ ತನ್ನ ಮಗನನ್ನು ದೆಹಲಿಯಲ್ಲಿ ಒತ್ತೆಯಾಗಿಡಬೇಕೆಂಬುದು ಷರತ್ತುಗಳಲ್ಲೊಂದೆಂದೂ, ಈ ಷರತ್ತನ್ನು ಘಿಯಾಸ್-ಉದ್-ದೀನ್ ಪಾಲಿಸದಿದ್ದಾಗ ಸುಲ್ತಾನ ಇವನ ವಿರುದ್ಧ ಸೈನ್ಯ ಕಳಿಸಿದನೆಂದೂ ಇಬ್ನ್ ಬತೂತ ಬರೆದಿದ್ದಾನೆ. ಬಹಾದುರನ ಮರಣಾನಂತರ ಹತ್ತು ವರ್ಷಗಳ ಕಾಲ ಬಂಗಾಲ ದೆಹಲಿಗೆ ಅಧೀನವಾಗಿತ್ತು.[೨] ಅಲ್ಲಿ ಶಾಂತ ಪರಿಸ್ಥಿತಿಯಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ % BE% E0% A6% A4% E0% A6% BE% E0% A6% B0_% E0% A6% 96% E0% A6% BE% E0% A6% A8 | Title = Tatar Khan - Banglapedia | Website = bn. banglapedia.org | Collection-Date = 2021-02-20}
- ↑ Khan, Muazzam Hussain (2012). "Ghiyasuddin Bahadur Shah". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.
