ಘನಮಠದ ಶಿವಯೋಗಿ

ವಿಕಿಪೀಡಿಯ ಇಂದ
Jump to navigation Jump to search


ಒಬ್ಬ ಶಿವಶರಣ. ಹೈದರಾಬಾದ್ ಜಿಲ್ಲೆಯ ದೋರ್ವಾಡ ಗ್ರಾಮದಲ್ಲಿ 1828ರಲ್ಲಿ ಜನಿಸಿದ. ತಂದೆ ವೀರಯ್ಯ; ತಾಯಿ ವೀರಾಂಬೆ. ಹುಟ್ಟು ಹೆಸರು ನಾಗಭೂಷಣಯ್ಯ. ೭ನೆಯ ವರ್ಷದಲ್ಲಿ ದೀಕ್ಷೆ ಪಡೆದ. ಹನ್ನೆರಡನೆಯ ವಯಸ್ಸಿನಲ್ಲಿ ಘನಮಠದ ಚರವರ್ಯ ಸದ್ಗುರುಗಳ ಆಶೀರ್ವಾದಕ್ಕೆ ಪಾತ್ರನಾದ. ಬಸವಣ್ಣನವರ ದಿವ್ಯಜೀವನ ಈತನ ಬಾಳನ್ನೆಲ್ಲ ಆವರಿಸಿತ್ತು. ಈತ ಕಲ್ಯಾಣದ ಸುತ್ತಮುತ್ತಲಿನ ಪ್ರದೇಶಗಳಾದ ಕಲ್ಬುರ್ಗಿ, ಬಿಜಾಪುರ, ರಾಯಚೂರು, ಜಿಲ್ಲೆಗಳಲ್ಲಿ ಹೆಚ್ಚಾಗಿ ಸಂಚಾರಮಾಡಿದ. ಚಿತ್ರಾಲಿ, ಸಂಗಮೇಶ್ವರ, ತಾಳಿಕೋಟೆ, ಬಾಗೇವಾಡಿ, ಬಳ್ಳಾರಿ, ಸೊನ್ನಲಾಪುರ, ಕುಂಟೋಜಿ, ಹುನುಗುಂದ, ಇಲಕಲ್ಲ, ಮೊದಲಾದ ಊರುಗಳಿಗೆ ಹೋಗಿದ್ದನೆಂಬುದಕ್ಕೆ ಆಧಾರಗಳು ಸಿಗುತ್ತವೆ.

ಈತ ತೆಲಗುದೇಶದಿಂದ ಬಂದವನಾದುದರಿಂದ ಕನ್ನಡನಾಡನ್ನು ಪ್ರವೇಶಿಸಿದಾಗ ಭಾಷಾಸಮಸ್ಯೆಯನ್ನು ಎದುರಿಸಬೇಕಾಯಿತು. ಬಸವಾದಿ ಪ್ರಮಥರ ವಚನಸಾಹಿತ್ಯದಲ್ಲಿ ಆಳವಾದ ಜ್ಞಾನವನ್ನು ಪಡೆಯಬೇಕೆಂಬ ಉತ್ಕಟ ಬಯಕೆ ನಡುವಯಸ್ಸಿನಲ್ಲಿ ಕನ್ನಡ ಕಲಿಯಲು ಈತನನ್ನು ಪ್ರೇರೇಪಿಸಿತು. ಯರಗೋಳಮಠದ ರೇವಣಸಿದ್ಧಯ್ಯ ಎಂಬವರಲ್ಲಿ ವಿಧಿಪುರ್ವಕವಾಗಿ ಕನ್ನಡ ಕಲಿತುದಲ್ಲದೆ ಕಾವ್ಯ ಪುರಾಣಗಳ ಸಾರವನ್ನೂ ವಚನಗಳ ತಿರುಳನ್ನೂ ಗ್ರಹಿಸಿದ. ಹೋದಲ್ಲೆಲ್ಲ ಈತನ ಹೆಗಲ ಮೇಲೆ ಬಸವಣ್ಣನವರ ವಚನಗಳ ಒಂದು ಸಂಗ್ರಹ ಸದಾ ಇರುತ್ತಿತ್ತಂತೆ. ಕಾವ್ಯರಚನೆಯ ಸಾಮಥರ್ಯ್ವಿತ್ತಾಗಿ ಈತ ಅನೇಕ ಹಾಡುಗಳನ್ನು ಕಟ್ಟಿ ಹಾಡಿದುದಲ್ಲದೆ, ಭಕ್ತಿಸುಧಾಸಾರ ಎಂಬ ಗ್ರಂಥವನ್ನು ರಚಿಸಿದನೆಂದು ತಿಳಿದುಬರುತ್ತದೆ.

ಶಿವಜ್ಞಾನ, ಶಿವಾನುಭವ, ತತ್ತ್ವಬೋಧನೆ ಈತನ ವ್ಯಕ್ತಿತ್ವದ ಒಂದು ಮುಖವಾದರೆ, ರೈತರ ಕ್ಷೇಮಾಭ್ಯುದಯ ಇನ್ನೊಂದು ಮುಖವಾಗಿತ್ತು. ವ್ಯವಸಾಯದ ವಿವಿಧ ಸಮಸ್ಯೆಗಳ ಅರಿವು ಈತನಿಗೆ ಚೆನ್ನಾಗಿತ್ತು. ವಿಶೇಷವಾಗಿ, ಬಾವಿ ತೋಡುವಾಗ ರೈತರು ಈತನ ಸಲಹೆಯನ್ನು ಪಡೆಯುತ್ತಿದ್ದರು. ಈತ ವ್ಯವಸಾಯದಲ್ಲಿದ್ದ ತನ್ನ ಅಪಾರ ಜ್ಞಾನ ವ್ಯರ್ಥವಾಗಬಾರದೆಂದು ಭಾವಿಸಿ ತನ್ನ ಶಿಷ್ಯರಲ್ಲಿ ಒಬ್ಬನಾದ ಸಿದ್ಧರಾಮಪ್ಪ ಕುನ್ನಾಳ ಎಂಬಾತನಿಂದ ಕೃಷಿಜ್ಞಾನದೀಪಿಕೆ ಎಂಬ ಗ್ರಂಥವನ್ನು ಬರೆಯಿಸಿದ. ಶಿವಯೋಗಿ ತನ್ನ ಅಂತ್ಯಕಾಲದಲ್ಲಿ ಲಿಂಗಸುಗೂರು ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ತಂಗಿದ್ದಾಗ ಶಂಕರಪ್ಪಗೌಡ ಎಂಬಾತನ ಮನೆಯಲ್ಲಿ ಕರುಣಪ್ರಸಾದ ಸಮಯದಲ್ಲಿ ಈತನಿಗೂ ನೀರಡಗುಂಭದ ಚನ್ನಬಸವಸ್ವಾಮಿಗೂ ವಾದ ನಡೆಯಿತು. ಕೊನೆಯಲ್ಲಿ ೧೮೮೦ರಲ್ಲಿ ಇಬ್ಬರೂ ಒಟ್ಟಾಗಿ ಲಿಂಗೈಕ್ಯರಾದರೆಂದು ತಿಳಿದುಬರುತ್ತದೆ.

ಭಕ್ತರಿಗೆ ಶಿವಜ್ಞಾನ, ಶಿವಾಚಾರಗಳನ್ನು ಬೋಧಿಸುತ್ತ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತ ಸುಮಾರು ಮೂವತ್ತೈದು ವರ್ಷಗಳ ಕಾಲ ಜನಾನುರಾಗವನ್ನು ಗಳಿಸಿ ತನ್ನ ಇಹಲೋಕಯಾತ್ರೆಯನ್ನು ಮುಗಿಸಿದ. ಈತನ ಜೀವನದ ಕುರುಹಾಗಿ ಈಗ ಕುಂಟೋಜಿಯಲ್ಲಿ ಈತನ ಪಾದುಕೆಗಳೂ ಸಂತೆಕೆಲ್ಲೂರಿನಲ್ಲಿ ಈತನ ಗದ್ದುಗೆಯೂ ಉಳಿದಿವೆ. (ಬಿ.ವಿ.ವಿ.ಬಿ.)