ವಿಷಯಕ್ಕೆ ಹೋಗು

ಗ್ರೀಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರೀಬ್‍ಗಳು
Temporal range: ಮುಂಚಿನ ಮಯೋಸೀನ್ – ಹೋಲೋಸೀನ್, 23.03–0 Ma
ಗ್ರೇಟ್ ಕ್ರೆಸ್ಟಡ್ ಗ್ರೀಬ್ (ಪಾಡಿಸೆಪ್ಸ್ ಕ್ರಿಸ್ಟೇಟಸ್)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯಾ
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಏಕಮೂಲ ವರ್ಗ: ನೀಯೋಏವೀಸ್
ಏಕಮೂಲ ವರ್ಗ: ಮಿರಾಂಡಾರ್ನಿಥೀಸ್
ಗಣ: ಪಾಡಿಸಿಪೆಡಿಫಾರ್ಮೀಸ್
Fürbringer, 1888
ಕುಟುಂಬ: ಪಾಡಿಸಿಪೆಡಿಡೀ
Bonaparte, 1831
Type genus
ಪಾಡಿಸೆಪ್ಸ್
ಉಪ ಏಕಮೂಲ ವರ್ಗಗಳು
  • ಹುನುಕಾರ್ನಿಸ್
  • ಮಯೋಬ್ಯಾಪ್ಟಸ್
  • ಮಯೋಡೈಟೀಸ್
  • ಪ್ಲಯೋಲಿಂಬಸ್
  • ಥಿಯಾರ್ನಿಸ್
  • ಪಾಡಿಲಿಂಬಿನಿ
  • ಪಾಡಿಸಿಪೆಡಿನಿ

ಗ್ರೀಬ್ ಎನ್ನುವುದು ಪಾಡಿಸಿಪೆಡಿಫಾರ್ಮೀಸ್ ಗಣದ ಪಾಡಿಸಿಪೆಡಿಡೀ ಕುಟುಂಬಕ್ಕೆ ಸೇರಿದ 4 ಜಾತಿಯ ಜಲವಾಸಿ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು. ಪ್ರಪಂಚಾದ್ಯಂತ ವ್ಯಾಪಿಸಿದೆ. ಈ ಹಕ್ಕಿಗಳ ವಾಸ ಜೊಂಡು ಮುಂತಾದ ಸಸ್ಯಗಳಿರುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲಿ. ಜಲಚರ ಹಕ್ಕಿಗಳಲ್ಲೆಲ್ಲ ಇವು ವಿಕಾಸದ ದೃಷ್ಟಿಯಿಂದ ಬಹಳ ಹಿಂದುಳಿದವು ಎಂದು ಪರಿಗಣಿಸಲಾಗಿದೆ.

ದೇಹರಚನೆ

[ಬದಲಾಯಿಸಿ]

ಇವುಗಳ ಗಾತ್ರ ಹೆಚ್ಚುಕಡಿಮೆ ಪಾರಿವಾಳದಷ್ಟು. ತಮ್ಮ ನುಣ್ಣನೆ ಹೊಳೆಯುವ ದೇಹ, ಉದ್ದವಾಗಿ ತೆಳುವಾದ ಕತ್ತು ಹಾಗೂ ಮೋಟಾದ ಮತ್ತು ಚೂಪಾದ ಕೊಕ್ಕಿನಿಂದಾಗಿ ಇವು ಇತರ ಜಲವಾಸಿ ಹಕ್ಕಿಗಳಿಂದ ಭಿನ್ನವಾಗಿವೆ. ಗ್ರೀಬ್‌ಗಳ ಮೈಮೇಲೆ ಬಲು ಮೃದುವಾದ ಮತ್ತು ಹೊಳೆಯುವ ಗರಿಗಳ ದಪ್ಪ ಹೊದಿಕೆಯಿದೆ.[] ಕೆಲವು ಪ್ರಭೇದಗಳಲ್ಲಿ ತಲೆಯ ಆಚೀಚೆ ಇಲ್ಲವೆ ಕತ್ತಿನ ಬಳಿ ಉದ್ದನೆಯ ಗರಿಗಳ 'ಕೊಂಬು', 'ಕುಚ್ಚು' ಇಲ್ಲವೆ 'ಕೊರಳಪಟ್ಟಿ'ಗಳಿವೆ. ಇವುಗಳಲ್ಲಿ ಬಾಲವೇ ಇಲ್ಲ. ಅಪರೂಪಕ್ಕೆ ಒಂದೆರಡು ಬಾಲದ ಗರಿಗಳಿರಬಹುದು. ಇದರಿಂದಾಗಿ ಗ್ರೀಬ್‌ಗಳು ಈಜುವಾಗ ಮತ್ತು ಹಾರುವಾಗ ದಿಕ್ಕನ್ನು ಬದಲಿಸಲು ತಮ್ಮ ಪಾದಗಳನ್ನು ಬಳಸುತ್ತವೆ. ಗ್ರೀಬ್‌ಗಳ ಇನ್ನೊಂದು ಸ್ವಾರಸ್ಯಕರ ಲಕ್ಷಣ ಇವುಗಳ ಪಾದಗಳು. ಬೇರೆ ರೀತಿಯ ಜಲವಾಸಿ ಪಕ್ಷಿಗಳಲ್ಲಿ ಕಾಲ್ಬೆರಳು ಒಂದು ರೀತಿಯ ಚರ್ಮಿಲ ಪೊರೆಯಿಂದ ಕೂಡಿಕೊಂಡಿದ್ದು ಜಾಲಪಾದವಾಗಿದ್ದರೆ, ಗ್ರೀಬ್‌ಗಳಲ್ಲಿ ಪ್ರತಿ ಕಾಲ್ಬೆರಳಿನ ಅಕ್ಕಪಕ್ಕಗಳಲ್ಲಿ ಕೊಂಬಿನಂಥ ವಸ್ತುವಿನಿಂದ ಕೂಡಿದ ಮಡಿಪುಗಳಿವೆ. ಈ ಲಕ್ಷಣಕ್ಕೆ ಹಾಲೆಯುಳ್ಳ ಜಾಲ ವಿನ್ಯಾಸ (ಲೋಬ್ಡ್ ವೆಬಿಂಗ್) ಎಂದು ಹೆಸರು. ಗ್ರೀಬ್‌ಗಳ ರೆಕ್ಕೆಗಳು ಬಲು ಚಿಕ್ಕವು. ಇದರಿಂದಾಗಿ ಇವು ಚೆನ್ನಾಗಿ ಹಾರಲಾರವು. ಹಾರುವಾಗ ರೆಕ್ಕೆಗಳನ್ನು ಪಟಪಟನೆ ವೇಗಗತಿಯಿಂದ ಬಡಿದು ಸದ್ದುಮಾಡುತ್ತ ಚಲಿಸುತ್ತವೆ. ನೀರನ್ನು ಬಿಟ್ಟು ಮೇಲಕ್ಕೆ ಹಾರುವುದೂ ಇವಕ್ಕೆ ಬಹಳ ಕಷ್ಟ. ಆದ್ದರಿಂದ ಇವು ಅಪಾಯದಿಂದ ತಪ್ಪಿಸಿಕೊಳ್ಳುವಾಗ ಹಾರುವುದಕ್ಕಿಂತ ನೀರಿನಲ್ಲಿ ಮುಳುಗುವುದೇ ಹೆಚ್ಚು.

ಸಣ್ಣಪುಟ್ಟ ಮೀನು, ಕೀಟಗಳ ಡಿಂಬಗಳು, ಕ್ರಸ್ಟೇಸಿಯ ಪ್ರಾಣಿಗಳು-ಇವು ಪ್ರಧಾನ ಆಹಾರ. ಇವು ಆಹಾರವನ್ನು ಹಿಡಿಯಲು ನೀರಿನಲ್ಲಿ 15' ಗಳಿಗೂ ಹೆಚ್ಚು ಆಳಕ್ಕೆ ಮುಳುಗಬಲ್ಲವಲ್ಲದೆ ನೀರಿನೊಳಗೆ 30 ಸೆಕಂಡಿಗೂ ಹೆಚ್ಚು ಕಾಲ ಇರಬಲ್ಲವು.

ಪಕ್ಷಿಯ ಗುಣಗಳು

[ಬದಲಾಯಿಸಿ]

ಇವುಗಳ ಅತ್ಯಂತ ವಿಚಿತ್ರ ಗುಣವೆಂದರೆ ಸ್ವಂತ ಗರಿಗಳನ್ನೇ ತಿನ್ನುವುದು. ಪ್ರತಿಯೊಂದು ಹಕ್ಕಿಯ ಹೊಟ್ಟೆಯಲ್ಲೂ ಇಂಥ ಗರಿಗಳ ಮುದ್ದೆಯನ್ನು ಕಾಣಬಹುದು. ಇವು ತಿನ್ನುವ ಮೀನು ಇತ್ಯಾದಿಗಳ ಮೂಳೆ ಹಾಗೂ ಅಜೀರ್ಣವಾದ ಭಾಗಗಳು ಹಕ್ಕಿ ನುಂಗುವ ಗರಿಗಳ ಆಧಾರದ ಮೇಲೆ ಗುಳಿಗೆಗಳಂತಾಗುತ್ತವೆ. ಹಕ್ಕಿ ಈ ಗುಳಿಗೆಗಳನ್ನು ಉಗುಳುತ್ತದೆ.[] ಗೂಬೆಗಳಲ್ಲಿ ಸಹ ಈ ಚರ್ಯೆಯನ್ನು ಕಾಣಬಹುದು. ಕೆಲವೇ ದಿವಸ ವಯುಸ್ಸಾದ ಮರಿಹಕ್ಕಿಗಳ ಹೊಟ್ಟೆಯಲ್ಲೂ ಅವುಗಳ ತಂದೆತಾಯಿಗಳ ಗರಿಗಳಿರುವುದು ಕಂಡುಬಂದಿದೆ.

ಗ್ರೀಬ್‌ಗಳು ನೀರಿನಲ್ಲಿ ಈಜುವಾಗ ದೇಹದ ಅರ್ಧಭಾಗವನ್ನು ಮುಳುಗಿಸಿಕೊಂಡು ಬಿರಟೆ ತೇಲುತ್ತವೆ. ಆದರೆ ಅಪಾಯದ ಸುಳಿವು ಕಂಡು ಬಂದರೆ ಕಣ್ಣು ಮತ್ತು ಕೊಕ್ಕು ಮಾತ್ರ ನೀರಿನ ಮೇಲಿರುವಂತೆ ನಿಧಾನವಾಗಿ ಮತ್ತು ನಿಶ್ಯಬ್ದವಾಗಿ ಮುಳುಗಿ ಮರೆಯಾಗುತ್ತವೆ. ಬೇಟೆಗಾರರು ಬಂದೂಕು ಹಾರಿಸಿದಾಗ ಬಂದೂಕಿನ ಬೆಳಕು ಕಂಡ ಕ್ಷಣದಲ್ಲೇ ಮಿಂಚಿನಂತೆ ನೀರಿನೊಳಕ್ಕೆ ಮುಳುಗಿ ಗುಂಡಿನಿಂದ ತಪ್ಪಿಸಿಕೊಳ್ಳುವ ಚುರುಕುತನವೂ ಗ್ರೀಬ್‌ಗಳಿಗಿದೆ.

ಕಹಳೆ ಊದಿದಂತೆ, ಸಿಳ್ಳು ಹಾಕಿದಂತೆ, ಕೆಲವು ಸಲ ಕೆನೆಯುವಂತೆ, ಕಪ್ಪೆಗಳ ವಟಗುಟ್ಟುವಿಕೆಯಂತೆ ಹಲವಾರು ಬಗೆಗಳಲ್ಲಿ ಇವು ಸದ್ದನ್ನು ಮಾಡಬಲ್ಲವಾದರೂ ಸಾಮಾನ್ಯವಾಗಿ ನಿಶ್ಯಬ್ದವಾಗಿರುವುದೇ ಹೆಚ್ಚು.

ಸಂತಾನೋತ್ಪತ್ತಿ

[ಬದಲಾಯಿಸಿ]

ಗ್ರೀಬ್‌ಗಳು ತಮ್ಮ ವಿಶಿಷ್ಟ ರೀತಿಯ ಪ್ರಣಯಾಚರಣೆಗೆ ಹೆಸರುವಾಸಿಯಾಗಿವೆ. ಗಂಡು ಹೆಣ್ಣುಗಳೆರಡೂ ತಮ್ಮ ಕುಚ್ಚು ಇಲ್ಲವೆ ಕೊಂಬುಗಳನ್ನು ವಿಸ್ತರಿಸಿಕೊಂಡು ವಿಚಿತ್ರ ಭಂಗಿಗಳಲ್ಲಿ ಹಲವಾರು ಗಂಟೆಗಳ ಕಾಲ ನರ್ತಿಸುತ್ತ ಒಂದನ್ನೊಂದು ಸುತ್ತುವರಿದು ಆಕರ್ಷಿಸುತ್ತವೆ. ಅಲ್ಲದೆ ಜೊಂಡು ಮುಂತಾದ ಜಲಸಸ್ಯಗಳನ್ನು ಸಂಗ್ರಹಿಸಿ ಹೆಣೆದು ಒರಟೊರಟಾದ ತೇಲುಗೂಡನ್ನು ನಿರ್ಮಿಸುತ್ತವೆ. ಗೂಡು ಬಲುದೂರ ಚಲಿಸಿಹೋಗದಂತೆ ಕೆಲವು ಸಲ ಜೊಂಡಿಗೆ ಕಟ್ಟಿಹಾಕುವುದೂ ಉಂಟು. ಗೂಡುಗಳ ನಿರ್ಮಾಣ ಮುಗಿದಮೇಲೆ ಹೆಣ್ಣು 3-10 ಮೊಟ್ಟೆಗಳನ್ನಿಡುತ್ತದೆ. ಗಂಡುಹೆಣ್ಣುಗಳೆರಡೂ ಗೂಡಿನ ಬಳಿಯೇ ಇದ್ದು ಮೊಟ್ಟೆಗಳನ್ನು ಕಾಯುತ್ತವೆ. ಆಹಾರಕ್ಕಾಗಿ ಬೇರೆಡೆಗೆ ಹೋಗಬೇಕಾದಾಗ ಮೊಟ್ಟೆಗಳನ್ನು ಕಡ್ಡಿ ಜಲಸಸ್ಯ ಮುಂತಾದವುಗಳಿಂದ ಮುಚ್ಚಿ ಮರೆಮಾಡುವುದುಂಟು. 20-30 ದಿವಸಗಳ ಅನಂತರ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ. ಮರಿಗಳ ಪಾಲನೆ ಗಂಡು ಮತ್ತು ಹೆಣ್ಣುಹಕ್ಕಿಗಳೆರಡಕ್ಕೂ ಸೇರಿದ್ದು. ಆಹಾರಾನ್ವೇಷಣೆಯಲ್ಲಿ ತೊಡಗಿದಾಗ ಮರಿಗಳನ್ನು ತಮ್ಮ ಬೆನ್ನ ಮೇಲೆ ಕೂರಿಸಿಕೊಂಡು ತಿರುಗಾಡುತ್ತವೆ. ಕೆಲವು ಸಲ ರೆಕ್ಕೆಗಳ ಕೆಳಗೆ ಅಡಗಿಸಿಕೊಳ್ಳುವುದೂ ಉಂಟು. ಅಪಾಯವೊದಗಿದಾಗ ಮರಿಗಳ ಸಹಿತವಾಗಿ ನೀರಿನಲ್ಲಿ ಮುಳುಗಿಬಿಡುತ್ತವೆ. ಹಲವಾರು ವಾರಗಳ ಅನಂತರ ಮರಿಗಳು ಸ್ವತಂತ್ರ ಜೀವನ ನಡೆಸಲು ಆರಂಭಿಸುತ್ತವೆ.[][]:14–16[]:113–114

ಗ್ರೀಬ್‌ಗಳನ್ನು ಅವುಗಳ ಮೃದುವಾದ ಗರಿಗಳಿಗಾಗಿ, ಮಾಂಸಕ್ಕಾಗಿ ಹಿಂದೆ ಬೇಟೆಯಾಡುವುದಿತ್ತು. ಆದರೆ ಈಗ ಗರಿಗಳಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಇವುಗಳ ಬೇಟೆ ನಿಂತಿದೆ.

ಮುಖ್ಯ ಪ್ರಭೇದಗಳು

[ಬದಲಾಯಿಸಿ]

ಗ್ರೀಬ್ ಪ್ರಭೇದಗಳಲ್ಲಿ ಮುಖ್ಯವಾದವು ಇವು:

  1. ಪಾಡಿಸೆಪ್ಸ್ ಕ್ರಿಸ್ಟೇಟಸ್ (ಗ್ರೇಟ್ ಕ್ರೆಸ್ಟೆಡ್ ಗ್ರೀಬ್) - ಆಸ್ಟ್ರೇಲಿಯ, ನ್ಯೂಜೀಲೆಂಡ್ ಮತ್ತು ಆಫ್ರಿಕಗಳಲ್ಲಿ ಕಾಣಬರುತ್ತದೆ.
  2. ಪಾಡಿಸೆಪ್ಸ್ ಗ್ರಿಸೆಗೀನ (ರೆಡ್ ನೆಕ್ಡ್ ಗ್ರೀಬ್) - ಉತ್ತರ ಅಮೆರಿಕದಲ್ಲಿರುವಂಥದು.
  3. ಪಾಡಿಸೆಪ್ಸ್ ಆರಿಟಸ್ (ಹಾರ್‌ನ್ಡ್ ಗ್ರೀಬ್) - ಯೂರೇಷಿಯ, ಉತ್ತರ ಅಮೆರಿಕದಲ್ಲಿ ವಾಸಿಸುತ್ತದೆ.[][][]
  4. ಪಾಡಿಸೆಪ್ಸ್ ರೂಫಿಕಾಲಿಸ್ (ಲಿಟ್‌ಲ್ ಗ್ರೀಬ್, ಡಾಬ್‌ಚಿಕ್) - ಆಫ್ರಿಕ, ಯೂರೋಪ್, ಈಸ್ಟ್ ಇಂಡೀಸ್, ಭಾರತ, ಶ್ರೀಲಂಕಾ, ಬರ್ಮಗಳಲ್ಲಿ ಕಾಣದೊರೆಯುತ್ತದೆ.
  5. ಪಾಡಿಲಿಂಬಸ್ ಪಾಡಿಸೆಪ್ಸ್ (ಪೈಡ್-ಬಿಲ್‌ಡ್ ಗ್ರೀಬ್) - ಕೆನಡದಿಂದ ಹಿಡಿದು ಆರ್ಜಂಟೀನವರೆಗಿನ ಪ್ರದೇಶಗಳಲ್ಲಿ ಕಾಣಬರುತ್ತದೆ.[]
  6. ಈಕ್ಮೊಫೋರಸ್ ಆಕ್ಸಿಡೆಂಟ್ಯಾಲಿಸ್ (ವೆಸ್ಟರ್ನ್ ಗ್ರೀಬ್) - ಅಮೆರಿಕದ ಮೂಲವಾಸಿ.

ಉಲ್ಲೇಖಗಳು

[ಬದಲಾಯಿಸಿ]
  1. Freedman, Bill; Frost, Randall (2021). The Gale Encyclopedia of Science. Vol. 3 (6th ed.). Gale eBooks. p. 2067.
  2. Simmons (1956). "Feather-eating and Pellet-formation in the Great Crested Grebe". Br. Birds. 49: 432–435. Archived from the original on 2016-04-15. Retrieved 2013-02-22.
  3. Johnsgard, P. (1987). Diving Birds of North America. Nebraska: University of Nebraska Press. ISBN 9780803225664.
  4. Ogilvie, M. A. (2002). Grebes of the World. Bruce Coleman Books. ISBN 978-1872842035.
  5. Fjeldså, J. (2004). The Grebes. Oxford: Oxford University Press. ISBN 978-0198500643.
  6. del Hoyo, J.; Elliot, A.; Sargatal, J. (1992). Handbook of the Birds of the World. Vol. 1. Lynx Edicions. pp. 193–194. ISBN 978-84-87334-10-8.
  7. "Horned Grebe Podiceps auritus". Birdlife International. 2015.
  8. Cramp, Stanley (1977). Handbook of the Birds of Europe, the Middle East and North Africa: Volume 1 Ostrich to ducks. Oxford London New York: Oxford University Press. pp. 97–105. ISBN 0-19-857358-8.
  9. "Grebes". International Ornithological Congress. Retrieved 2015-01-06.

ಹೊರಗಿನ ಕೊಂಡಿಗಳು

[ಬದಲಾಯಿಸಿ]





ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
    "https://kn.wikipedia.org/w/index.php?title=ಗ್ರೀಬ್&oldid=1345842" ಇಂದ ಪಡೆಯಲ್ಪಟ್ಟಿದೆ