ಗ್ರೀಕ್ ಛಂದಸ್ಸು
ಗ್ರೀಕ್ ಮತ್ತು ಲ್ಯಾಟಿನ್ ಛಂದಸ್ಸು ಎಂದರೆ ಯಾವುದರಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಕವನಗಳನ್ನು ರಚಿಸಲಾಯಿತೋ ಆ ವಿವಿಧ ಛಂದೋಗತಿಗಳಿಗೆ ಬಳಸಲಾದ ಒಟ್ಟಾರೆ ಪದ.[೧]
ಗ್ರೀಕ್ ಕಾವ್ಯಗಳಲ್ಲಿ ಸ್ಥೂಲವಾಗಿ ಎರಡು ಬಗೆಯ ಪದಸರಣಿ ಕಾಣಬರುತ್ತದೆ. ಒಂದೇ ತೆರನ ಸಾಲು ಉದ್ದಕ್ಕೂ ತಿರುತಿರುಗಿ ಬರುವ ಪಂಕ್ತಿಧಾಟಿ (ಸ್ಟೈಕಿಕ್ ವರ್ಸ್); ಹಲವು ಸಾಲುಗಳು ಕೂಡಿ ಆದ ವೃತ್ತ ಧಾಟಿ (ಲಿರಿಕ್ ಅಥವಾ ಸ್ಟ್ಯಾಂಜಾಯಿಕ್ ವರ್ಸ್). ಮೊದಲನೆಯದು ವಾಚನಕ್ಕೂ, ಎರಡನೆಯದು ಗಾಯನಕ್ಕೂ ಅನುರೂಪ ಸಾಧನವಾಗಿದ್ದುವು. ಪಂಕ್ತಿಗಳನ್ನೂ, ವೃತ್ತಗಳನ್ನೂ ವಿಶ್ಲೇಷಿಸಿ ಅಂಶಗಳಿಗೆ ಹೆಸರು ಕೊಟ್ಟು ಛಂದಸ್ಸಿನ ಸಿದ್ಧಾಂತ ನಿಶ್ಚಯಿಸಿ ಒಂದು ಶಾಸ್ತ್ರ ಎದ್ದು ಬಂದದ್ದು ಕ್ರಿ. ಶ. 7ನೆಯ ಶತಮಾನದಲ್ಲಿ; ಹೆಫೀಸ್ಟಿಯನ್ ಎಂಬ ಘನ ವಿದ್ವಾಂಸ ಛಂದಸ್ಸನ್ನು ಕುರಿತು 48 ಸಂಪುಟಗಳ ಉದ್ಗ್ರಂಥ ಬರೆದಿದ್ದನಂತೆ. ಅವನ ಮತ್ತು ಇತರರ ಗ್ರಂಥಗಳ ಚೂರುಪಾರು ಅವಶೇಷವೇ ಗ್ರೀಕ್ ಛಂದೋವ್ಯಾಸಂಗಿಗಳಿಗೆ ಆಧಾರ. ನಾಲ್ಕಾರು ಶತಮಾನಗಳ ಹಿಂದಣ ಕವಿತ್ವ ವ್ಯವಹಾರ ಹೆಫೀಸ್ಟಿಯನ್ ಮೊದಲಾದ ಪಂಡಿತರಿಗೆ ಎಷ್ಟರಮಟ್ಟಿಗೆ ಗೊತ್ತಿದ್ದಿತೋ ಹೇಳಲಾಗದು. ಆದರೂ ಅವರ ಮಾರ್ಗದರ್ಶನಕ್ಕೆ ಈಚಿನವರು ಒಪ್ಪದೆ ಹೋದರೆ ಪೂರ್ಣ ಅಜ್ಞಾನವೇ ಇನ್ನೊಂದು ದಾರಿ. ಆದ್ದರಿಂದ ನಿಜವೊ ಸುಳ್ಳೊ, ಅರ್ಧ ನಿಜವೋ ಅಂತೂ ಗ್ರೀಕ್ ಛಂದಸ್ಸಿನ ಈ ವಿವರವನ್ನು ಎಲ್ಲರೂ ಬಳಸುತ್ತ ಬಂದಿದ್ದಾರೆ.
ಗ್ರೀಕ್ ಛಂದಸ್ಸಿನ ಮೂಲಾಂಶ ಮಾತ್ರೆ (ಕ್ವಾಂಟಿಟಿ) ಅರ್ಥಾತ್ ಉಚ್ಚಾರಾಂಶ ತೆಗೆದುಕೊಳ್ಳುವ ಕಾಲ.[೨] ಆ ಮಾನದಿಂದ, ಹ್ರಸ್ವ, ದೀರ್ಘ ಎಂಬ ಭೇದ ಉಚ್ಚಾರಾಂಶಗಳಿಗೆ ಉಂಟಾಯಿತು. ದೀರ್ಘ ತೆಗೆದುಕೊಳ್ಳುವ ಕಾಲ ಹ್ರಸ್ವದ ಎರಡರಷ್ಟು ಎಂದು ಎಣಿಕೆ (ಸಂಸ್ಕೃತದ ಲಘು, ಗುರುಗಳನ್ನು ನೆನೆಯಬಹುದು) ಹ್ರಸ್ವ, ದೀರ್ಘ ಉಚ್ಚಾರಾಂಶಗಳು ಕೂಡಿ ಗುಂಪು ಅಥವಾ ಗಣ (ಪೌಸ್ ಅಥವಾ ಫುಟ್) ಆಗುತ್ತದೆ. ಹಲವು ಗಣಗಳ ಕಿರು ಸರಪಣಿಯೇ ಪಂಕ್ತಿ ಅಥವಾ ಪಾದ (ಸ್ಟೈಕೋಸ್; ವರ್ಸ್). ಗಣಗಳಲ್ಲಿ ಹನ್ನೆರಡು ವಿಧದವು ಮುಖ್ಯ. ಹ್ರಸ್ವಕ್ಕೆ ᴗ ಎಂಬುದೂ, ದೀರ್ಘಕ್ಕೆ - ಎಂಬುದೂ ಲೇಖನ ಸಂಕೇತ:
- ಅಯಾಂಬ್: ᴗ-
- ಟ್ರೋಕಿ: -ᴗ
- ಸ್ಪಾಂಡಿ: - -
- ಡ್ಯಾಕ್ಟಿಲ್: -ᴗᴗ
- ಆನಪೀಸ್ಟ್: ᴗᴗ-
- ಟ್ರೈಬ್ರಾಕ್: ᴗᴗᴗ
- ಕ್ರೀಟಿಕ್: -ᴗ-
- ಬಾಕ್ಕಿಯಾಕ್: ᴗ - -
- ಕೋರಿಯಾಂಬ್: -ᴗᴗ-
- ಪಿಯನ್:-ᴗᴗᴗ ಅಥವಾ ᴗᴗᴗ-
- ಎಪಿಟ್ರೈಟ್: -ᴗ- -
- ಡಾಕ್ಮಿಯಾಕ್:ᴗ - - ᴗ -
ಗಣದಲ್ಲಿ ಬರುವ ಹ್ರಸ್ವ, ದೀರ್ಘ ಉಚ್ಚಾರಾಂಶಗಳ ಪರಸ್ಪರ ಪ್ರಮಾಣದ ಮೇಲೆ ಗಣಗಳು ವಿಂಗಡವಾಗುತ್ತಿದ್ದವು. ಒಂದು ದೀರ್ಘ ಎರಡು ಹ್ರಸ್ವಗಳಿಗೆ ಸಮ ಎಂಬ ಸೂತ್ರದಿಂದ, ಡ್ಯಾಕ್ಟಿಲ್, ಸ್ಪಾಂಡಿ, ಆನಪೀಸ್ಟ್, ಮೂರೂ ಐಸಾನ್ ಅಥವಾ ಸಮಪ್ರಮಾಣ ಗಣ. ಅಯಾಂಬ್, ಟ್ರೋಕಿ, ಟ್ರೈಬ್ರಾಕ್ ಮೂರೂ ಡಿಪ್ಲಾಸಿಯಾನ್ ಅಥವಾ ದುಪ್ಪಟ್ಟು ಪ್ರಮಾಣ ಗಣ. ಕ್ರೀಟಿಕ್, ಪಿಯನ್, ಬಾಕ್ಕಿಯಾಕ್ ಮೂರೂ ಮೂರು: ಎರಡು ಅಥವಾ ಎರಡು: ಮೂರು ಪ್ರಮಾಣದ ಗಣ. ಎಮಿಯೋಸಿ, ಯಾನ್, ಎಪಿಟ್ರೈಟ್, ಡಾಕ್ಮಿಯಾಕ್‌ಗಳಿಗೆ ಸಂಯುಕ್ತ ಗಣ ಎಂಬ ಅಂಕಿತವಿದೆ.
ಒಂದು ಗಣಕ್ಕೆ ಬದಲಾಗಿ ಇನ್ನೊಂದು ಗಣವನ್ನು ಇಡುವುದು ನಿಯಮಬದ್ಧವಾಗಿತ್ತು; ಎಂದರೆ ಅದರ ಕಾಲ ಇದರ ಕಾಲದಿಂದ ಹೆಚ್ಚು ಕಡಿಮೆ ಆಗಕೂಡದು. ಡ್ಯಾಕ್ಟಿಲ್ಲಿಗೆ ಬದಲು ಸ್ಪಾಂಡಿ ಬರಬಹುದು, ಕ್ರೀಟಿಕ್ಕಿಗೆ ಬದಲು ಪಿಯನ್, ಅಯಾಂಬಿಗೂ, ಟ್ರೋಕಿಗೂ ಬದಲು ಟ್ರೈಬ್ರಾಕ್- ಹೀಗೆ.
ಇತರ ಕೆಲವು ಪಾದಗಳ ಉದಾಹರಣೆಗಳು
[ಬದಲಾಯಿಸಿ]ಪಂಕ್ತಿಗಳ ವಿಚಾರದಲ್ಲಿ ಗ್ರೀಕರ ಲೆಕ್ಕಚಾರ ಹೀಗಿತ್ತು: ಅಯಾಂಬ್, ಟ್ರೋಕಿ, ಆನಪೀಸ್ಟ್ ಇವು ಎರಡೆರಡು ಬಂದರೆ ಅದೊಂದು ಮೆಟ್ರಾನ್ ಎಂದರೆ ಏಕಾಂಶ ಅಥವಾ ಏಕಮಾನ; ಅದಕ್ಕೆ ಡೈಪೊಡಿ (dipody) ಎಂಬುದು ಛಂದೋನಾಮ.[೩] ಡ್ಯಾಕ್ಟಿಲ್, ಸ್ಪಾಂಡಿ ಒಂದೊಂದೇ ಒಂದು ಏಕಾಂಶ. ಆದ್ದರಿಂದ ಅಯಾಂಬಿಕ್ ಟೆಟ್ರಾಮೀಟರ್ ಎಂಬುದು ಎಂಟು ಅಯಾಂಬುಗಳ ಪಾದ.[೪] ಡ್ಯಾಕ್ಟಿಲಿಕ್ ಹೆಕ್ಸಾಮೀಟರ್ ಎಂಬುದಾದರೂ ಆರೇ ಡ್ಯಾಕ್ಟಿಲಿಕ್ಕುಗಳ ಪಾದ.
ತನಗೆ ಉಚಿತವೆಂದು ತೋರಿಬಂದ ಯಾವ ಲಕ್ಷಣದ ಪಂಕ್ತಿಯನ್ನಾದರೂ ಬಳಸಿಕೊಳ್ಳುವ ಸ್ವಾತಂತ್ರ್ಯ ಕವಿಗೆ ಇದ್ದರೂ ಒಂದೊಂದು ಕಾವ್ಯಪ್ರಕಾರಕ್ಕೆ ಒಂದೊಂದು ತೆರನ ಪಂಕ್ತಿ ಅಚ್ಚುಕಟ್ಟಾಗಿ ಹೊಂದಿಕೊಂಡು ಅದಕ್ಕೆ ಮೀಸಲಿಟ್ಟಂತೆ ನಡೆದುಬಂತು. ಭವ್ಯಕಾವ್ಯ (ಎಪಿಕ್) ಉಪಯೋಗಿಸಿಕೊಂಡದ್ದು ಡ್ಯಾಕ್ಟಿಲಿಕ್ ಹೆಕ್ಸಾಮೀಟರ್ -- ಆರು ಡ್ಯಾಕ್ಟಿಲ್‌ಗಳ ಪಾದ.[೫] ಅಲ್ಲೊ ಇಲ್ಲೊ ಒಂದು ಸ್ಪಾಂಡಿ ಡ್ಯಾಕ್ಟಿಲ್ಲಿಗೆ ಬದಲಾಗಿ ಬರುತ್ತಿತ್ತು. ಕೊನೆಯ ಗಣ ಸ್ಪಾಂಡಿ ಎಂದೇ ಪರಿಗಣನೆ. ಪಾದದ ಮಧ್ಯೆ ಬಹುತೇಕ ಮೂರನೆಯ ಅಥವಾ ನಾಲ್ಕನೆಯ ಗಣದೊಳಗೆ ಒಂದು ಉಸಿರ್ದಾಣ ಅಥವಾ ವಿರಾಮ (ಸೀಜ಼ುರಾ) ಕಡ್ಡಾಯವಾಗಿತ್ತು.[೬] ಅಲ್ಲದೆ ಉಪವಿರಾಮ ಬರಬಹುದಾಗಿಯೂ ಇತ್ತು. ಬೇಕೆನ್ನಿಸಿದಾಗ ಮುಖ್ಯವಿರಾಮದಿಂದ ಪಂಕ್ತಿಗೆ ಎರಡು ಅಸಮ ಭಾಗ (ಕಮಾ) ಲಭಿಸುತ್ತಿತ್ತು.
ಆರು ಡ್ಯಾಕ್ಟಿಲ್‌ಗಳ ಒಂದನೆಯ ಪಂಕ್ತಿ, ಐದು ಡ್ಯಾಕ್ಟಿಲ್‌ಗಳ ಎರಡನೆಯ ಪಂಕ್ತಿ ಕೂಡಿ ಒಂದು ದ್ವಿಪದಿ ಆಗುತ್ತಿತ್ತು. ಅದು ಶೋಕಗೀತಗಳಿಗೆ ಬಳಸಲ್ಪಟ್ಟಿತಾಗಿ ಅದಕ್ಕೆ ಶೋಕಗೀತದ ದ್ವಿಪದಿ (ಎಲಿಜೆಯಿಕ್ ಕಪ್ಲೆಟ್) ಎಂದೇ ಹೆಸರು.
ನಾಟಕಗಳಲ್ಲಿ ಸಂಭಾಷಣಾ ಭಾಗಕ್ಕೆ ಸಮಂಜಸವೆಂದು ಕಂಡುಬಂದ ಪಂಕ್ತಿ ಅಯಾಂಬಿಕ್ ಟ್ರಿಮೀಟರ್- ಆರು ಅಯಾಂಬುಗಳ ಪಾದ. ಅದರ ರಚನಾಕ್ರಮ ಇದು:
ᴗ - ᴗ - | ᴗ - ᴗ - | ᴗ - ᴗ -
ಐದನೆಯ ಉಚ್ಚಾರಾಂಶದ ಅನಂತರ ಒಂದು ವಿರಾಮ ಸಾಮಾನ್ಯವಾಗಿ ಇರುತ್ತಿತ್ತು. ಕಾಮೆಡಿಗಳಲ್ಲಿ ಗಣಪಲ್ಲಟಕ್ಕೆ ಹೆಚ್ಚು ಅವಕಾಶ ಸಿಗುತ್ತಿತ್ತು. ಅಯಾಂಬಿನ ಬದಲು ಆನಪೀಸ್ಟ್ ಧಾರಾಳವಾಗಿ ಬರಬಹುದಾಗಿತ್ತು, ಕೊಟ್ಟಕೊನೆಯ ಅಯಾಂಬ್ ವಿನಾ. ಗಂಭೀರನಾಟಕದಲ್ಲಿ ಟ್ರೋಕೈಯಿಕ್ ಟೆಟ್ರಾಮೀಟರ್ ಎಂಟು ಟ್ರೋಕಿಗಳ ಕೂಟ ಪಂಕ್ತಿಯಾಗುತ್ತಿತ್ತು, ಹಲವುವೇಳೆ, ಅದರ ರಚನೆ ಹೀಗಿರುತ್ತಿತ್ತು:
- ᴗ - x | - ᴗ - x || - ᴗ - x | - ᴗ -
ಆನಪೀಸ್ಟೂ, ಟ್ರೈಬ್ರಾಕೂ ಬದಲಾಗಿ ಬರುವ ರಿಯಾಯತಿಗೆ ಮಿತಿ ಇರಲಿಲ್ಲ.
ಯುದ್ಧ ಪ್ರಚೋದನೆಗೂ, ಸೈನಿಕರ ನಡಿಗೆಗೂ ಆನಪೀಸ್ಟ್ ಪ್ರಮುಖವಾದ ಪಂಕ್ತಿ ಒಪ್ಪಾಗಿತ್ತು. ಹ್ರಸ್ವ ಉಚ್ಚಾರಾಂಶ ಹೆಜ್ಜೆ ಎತ್ತುವಾಗ, ದೀರ್ಘ ಉಚ್ಚಾರಾಂಶ ಹೆಜ್ಜೆ ಇಳಿಸಿ ನೆಲ ಘಟ್ಟಿಸುವಾಗ, ತಾಳದ ಹುಸಿ ಏಟುಗಳಂತೆ ಮೋಪಾಗಿ ಹೊಂದಿಕೊಳ್ಳುತ್ತಿದ್ದವು. ಕದನಗೀತದಲ್ಲಿ ರೋದನದ ಭಾಗ ಇದ್ದಾಗ ಸ್ಪಾಂಡಿಗಳು ಹೆಚ್ಚಾಗಿ ಬಂದು ವಿಲಂಬ ಗಾಂಭೀರ್ಯದ ಅಭಿವ್ಯಕ್ತಿಗೆ ನೆರವಾಗುತ್ತಿದ್ದವು.
ಕವಿಗಳ ಹೆಸರಿನಲ್ಲಿರುವ ವೃತ್ತಗಳು
[ಬದಲಾಯಿಸಿ]ಭಾವಗೀತದಲ್ಲೂ, ನೃತ್ಯಗೀತದಲ್ಲೂ ನಾನಾಬಗೆಯ ಪಂಕ್ತಿ ಬೇಕಾಗುತ್ತಿತ್ತು ಎಂದು ಹೇಳಬೇಕಾಗಿಲ್ಲ. ಒಂದೇ ವೃತ್ತದಲ್ಲಿ ಹಲವು ತೆರನ ಪಂಕ್ತಿಗಳನ್ನು ಜೋಡಿಸುವುದಕ್ಕೆ ಅಭ್ಯಂತರವಿರಲಿಲ್ಲ. ಸ್ಯಾಫೊ, ಆಲ್ಕಿಯಸ್ ತಮ್ಮದೇ ಆದ ವೃತ್ತಕ್ಕೆ ಹೆಸರಾದರು.
- ᴗ | - x | - ᴗ ᴗ | - ᴗ | - x
ಇಂಥ ಮೂರು ಪಂಕ್ತಿ, ಕೊನೆಗೆ ಅಡಾನಿಕ್ ಎಂಬ ಈ ಪಂಕ್ತಿ:
- ᴗ ᴗ | - ᴗ .
ᴗ - | - ᴗ | - ᴗ | - ᴗ ᴗ | - ᴗ | -
ಇಂಥ ಪಂಕ್ತಿ ಮತ್ತೆರಡು, ತದನಂತರ
ᴗ | - ᴗ | - ᴗ | - ᴗ | - ᴗ
- ᴗ ᴗ | - ᴗ ᴗ | - ᴗ | - ᴗ
ಪಿಂಡರ್ ಬಳಸಿಕೊಂಡ ಪಂಕ್ತಿಗಳಿಗೆ ಬಲು ವೈವಿಧ್ಯವಿತ್ತಲ್ಲದೆ ಎಪಿಟ್ರೈಟ್ ಗಣ ಅಧಿಕವಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ https://antigonejournal.com/wp-content/uploads/2021/05/Metre-I-II.pdf
- ↑ The Editors of Encyclopaedia Britannica. "metre". Encyclopedia Britannica, 17 Dec. 2024, https://www.britannica.com/art/metre-prosody. Accessed 30 September 2025.
- ↑ Collins English Dictionary.
- ↑ Andrews, Ethan Allen (1878). Grammar of the Latin Language (in ಇಂಗ್ಲಿಷ್). Houghton, Osgood & Company. p. 352.
- ↑ M. L. West (1987). Introduction to Greek Metre. Oxford University Press, Walton St., Oxford OX2 6DP: Clarendon Press. ISBN 0-19-872132-3.
{{cite book}}: CS1 maint: location (link) - ↑ D. S. Raven (1962). Greek Metre An Introduction. 24 Russell Square, London: Faber and Faber.
{{cite book}}: CS1 maint: location (link)
