ವಿಷಯಕ್ಕೆ ಹೋಗು

ಗ್ರಿಮ್ ಸಹೋದರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೮೪೭ರಲ್ಲಿ ವಿಲ್‍ಹೆಲ್ಮ್ ಮತ್ತು ಯಾಕಾಪ್ ಗ್ರಿಮ್ (ಡ್ಯಾಗ್ವೆರೆಯೊಟೈಪ್)

ಗ್ರಿಮ್ ಸಹೋದರರು, ಯಾಕಾಪ್ ಲೂಡ್‍ವಿಗ್ ಕಾರ್ಲ್ ಗ್ರಿಮ್ (1785-1863) ಮತ್ತು ವಿಲ್‍ಹೆಲ್ಮ್ ಕಾರ್ಲ್ ಗ್ರಿಮ್ (1786-1859) ಇವರಿಬ್ಬರು ಜರ್ಮನ್ ಅಧ್ಯಾಪಕರಾಗಿದ್ದರು. ಇವರಿಬ್ಬರೂ ಒಟ್ಟಾಗಿ ಜನಪದ ಕಥೆಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಈ ಇಬ್ಬರು ಸಹೋದರರು ಸಾಹಿತ್ಯ ಪ್ರಪಂಚದಲ್ಲಿ ಗ್ರಿಮ್ ಸಹೋದರರು ಎಂದೇ ಪ್ರಖ್ಯಾತರಾಗಿದ್ದಾರೆ. ಇಬ್ಬರೂ ಪ್ರಕಾಂಡ ಪಂಡಿತರು. ಯಾಕಾಪ್ ಭಾಷಾಶಾಸ್ತ್ರ ಪಂಡಿತನಾದರೆ, ವಿಲ್‌ಹೆಲ್ಮ್ ಸಾಹಿತ್ಯ ಪಂಡಿತ. ಜಾನಪದ ಕ್ಷೇತ್ರದಲ್ಲಿ ಹಲವು ಮೊದಲುಗಳನ್ನು ಸ್ಥಾಪಿಸಿದ ಕೀರ್ತಿ ಈ ಇಬ್ಬರು ಸಹೋದರರಿಗೂ ಸೇರುತ್ತದೆ. ಇಬ್ಬರೂ ಕೂಡಿ ಜರ್ಮನಿಯ ಕಿನ್ನರ, ವೀರ ಹಾಗೂ ಮಕ್ಕಳ ಕತೆಗಳನ್ನೂ, ಗಂಧರ್ವ ಕವನಗಳು ಹಾಗೂ ಹಿಲ್ಡೆಬ್ಯಾಂಡ್‌ನ ಹಾಡು ಎಂಬ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ೮೬ ಜನಪದ ಕಥೆಗಳಿದ್ದ ಮೊದಲ ಸಂಪುಟ ೧೮೧೨ರಲ್ಲಿ ಪ್ರಕಟವಾಯಿತು.[] ೭೦ ಹೆಚ್ಚುವರಿ ಕಥೆಗಳಿರುವ ಎರಡನೇ ಸಂಪುಟ ೧೮೧೪ರಲ್ಲಿ ಪ್ರಕಟವಾಯಿತು (ಶೀರ್ಷಿಕೆ ಪುಟದಲ್ಲಿ ೧೮೧೫ ಎಂದು ದಿನಾಂಕ ಬರೆಯಲ್ಪಟ್ಟಿದೆ); ಈ ಎರಡು ಸಂಪುಟಗಳು ಮತ್ತು ಅವುಗಳ ೧೫೬ ಕಥೆಗಳನ್ನು (ಟಿಪ್ಪಣಿಯಿರುವ) ದೊಡ್ಡ ಆವೃತ್ತಿಗಳಲ್ಲಿ ಮೊದಲನೆಯವು ಎಂದು ಪರಿಗಣಿತವಾಗಿವೆ.[][] ಇಬ್ಬರಿಗೂ ಹುಟ್ಟಿನಲ್ಲಿ ಒಂದೇ ವರ್ಷ ಅಂತರ. ಇಬ್ಬರೂ ಬಾಲ್ಯದಿಂದಲೂ ಜೊತೆಯಾಗಿದ್ದುಕೊಂಡು ಸಾಹಿತ್ಯ ಸೇವೆ ಮಾಡಿದರು. ಇವರ ಸಮಾಧಿಗಳು ಬರ್ಲಿನಿನಲ್ಲಿ ಅಕ್ಕಪಕ್ಕದಲ್ಲೇ ಇವೆ.

ಜೀವನ, ಸಾಧನೆಗಳು

[ಬದಲಾಯಿಸಿ]

ಯಾಕಾಪ್ ಗ್ರಿಮ್ 1785ರ ಜನವರಿ 4ರಂದು ಜನಿಸಿದ.[] ವಿಲ್‌ಹೆಲ್ಮ್ 1786ರ ಫೆಬ್ರುವರಿ 24ರಂದು ಜನಿಸಿದ. ಇಬ್ಬರೂ ತಮ್ಮ ವಿದ್ಯಾಭ್ಯಾಸವನ್ನು ಕ್ಯಾಸಲ್‌ನ ಶಾಲೆಯೊಂದರಲ್ಲಿ ಒಟ್ಟಿಗೇ ಆರಂಭಿಸಿದರು. ಅನಂತರದ ವಿದ್ಯಾಭ್ಯಾಸ ಮಾರ್‌ಬರ್ಗಿನಲ್ಲಿ ಮುಂದುವರಿಯಿತು. ಅವರ ಮುಂದಿನ ಎಲ್ಲ ಸಾಹಿತ್ಯಿಕ, ಭಾಷಿಕ ಸಂಶೋಧನೆಗಳಿಗೆಲ್ಲ ಅನೂಕೂಲವಾಗುವಂತೆ ಫ್ರೆಡ್ರಿಕ್ ವೋನ್ ಸೇವಿಗ್‌ನಿ ಎಂಬುವನಿಂದ ಪ್ರೇರಣೆ ದೊರೆತದ್ದೂ ಇಲ್ಲಿಯೇ. ಅವರಿನ್ನೂ ವಿದ್ಯಾರ್ಥಿಗಳಾಗಿದ್ದಾಗಲೇ ಇಬ್ಬರೂ ಜೊತೆಯಾಗಿ ಮಧ್ಯಕಾಲದ ಜರ್ಮನ್ ಸಾಹಿತ್ಯವನ್ನು ಕುರಿತ ಅಧ್ಯಯನ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದರು.[] ಅದೃಷ್ಟ, ಹಾಗೂ ಪ್ರಾರಂಭದಲ್ಲಿಯೇ ದೊರೆತ ಉತ್ತೇಜನ, ಎಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಅದ್ಭುತ ಪ್ರತಿಭೆ ಇವುಗಳಿಂದಾಗಿ ಅವರು ಬಹುಕಾಲ ಜೊತೆಯಲ್ಲಿಯೇ ಇದ್ದುಕೊಂಡು ಜರ್ಮನಿಯ ರೊಮ್ಯಾಂಟಿಕ್ ಯುಗದ ಶ್ರೇಷ್ಠ ವಿದ್ವಾಂಸರೆನಿಸಿಕೊಂಡು ಲೋಕವಿಖ್ಯಾತರಾದರು.

ಕ್ಯಾಸಲ್‌ನ ಗ್ರಂಥಾಲಯದಲ್ಲಿ ಇಬ್ಬರೂ ಕೆಲವು ಕಾಲ ದುಡಿದ ಮೇಲೆ, 1830ರ ವೇಳೆಗೆ ಯಾಕಾಪ್‍ಗೆ ಗಾಟಿಂಗೆನ್‌ನಲ್ಲಿ ಗ್ರಂಥಪಾಲ ಮತ್ತು ಪ್ರಾಧ್ಯಾಪಕ ಹುದ್ದೆಯೂ ಮತ್ತು ವಿಲ್‌ಹೆಲ್ಮ್‌ಗೆ ಉಪ-ಗ್ರಂಥಪಾಲ ಹುದ್ದೆಯೂ ದೊರೆತು ಇಬ್ಬರೂ ಅಲ್ಲಿಗೆ ತೆರಳಿದರು.[] ಆದರೆ, ಕಾರಣಾಂತರಗಳಿಂದ ಏಳು ವರ್ಷಗಳ ಅನಂತರ ಅಲ್ಲಿಂದ ಹಿಂತಿರುಗಿದರು. 1841 ರ ವೇಳೆಗೆ ಇಬ್ಬರಿಗೂ ಪ್ರಾಧ್ಯಾಪಕ ಹುದ್ದೆ ದೊರೆತದ್ದರಿಂದ ಬರ್ಲಿನ್‌ಗೆ ತೆರಳಿ, ಅಲ್ಲಿ ಇತರ ಚಟುವಟಿಕೆಗಳ ಜೊತೆಯಲ್ಲಿಯೇ ಜರ್ಮನ್ ಭಾಷಾ ನಿಘಂಟು ಸಿದ್ಧತೆಯಲ್ಲಿ ತೊಡಗಿದರು.

ಈ ಸೋದರರಿಬ್ಬರೂ ಜರ್ಮನ್ ಭಾಷೆ, ಸಾಹಿತ್ಯ, ವ್ಯಾಕರಣ, ಹಾಗೂ ನಿಘಂಟು ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಸ್ಮರಣೀಯ ಕೆಲಸ ಮಾಡಿದ್ದಾರೆ. ಜನಪದ ಕಥೆಗಳ ಮೂಲವನ್ನು ಕುರಿತ ಸಿದ್ಧಾಂತದ ಬಗೆಗೆ, ಗ್ರಿಮ್ ಸಹೋದರರ ಸಿದ್ಧಾಂತ ಸಂಪೂರ್ಣ ಸತ್ಯವಲ್ಲದಿದ್ದರೂ ತೌಲನಿಕ ಭಾಷಾವಿಜ್ಞಾನದ ಫಲವಾಗಿ ಮೂಡಿ ಬಂದದ್ದಾಗಿದೆ. ಒಂದೇ ಭಾಷೆಯನ್ನಾಡುವ ಜನಾಂಗದಿಂದ ಈ ಎಲ್ಲ ಜನಪದ ಕಥೆಗಳೂ ಹುಟ್ಟಿಕೊಂಡಿರಬಹುದು ಎಂಬ ಇವರ ಅಭಿಪ್ರಾಯ ಯುರೋಪಿಯನ್ ಭಾಷೆಗಳ ಸಾದೃಶ್ಯದ ಮೂಲಕ ಜನಪದ ಕಥೆಗಳ ಸಾದೃಶ್ಯವನ್ನು ಗಮನಿಸಿ ಬಂದದ್ದು ಎಂಬುದು ಇಲ್ಲಿ ಮುಖ್ಯ ವಿಷಯ. ಜನಾಂಗದ ಮೂಲವನ್ನೂ, ಭಾಷೆಗಳ ಮೂಲವನ್ನೂ ಪತ್ತೆ ಹಚ್ಚಿದರೆ ಜನಪದ ಕಥೆಗಳ ಮೂಲವನ್ನು ಪತ್ತೆ ಹಚ್ಚಿದಂತಾಗುತ್ತದೆ ಎಂಬ ಇವರ ಸಿದ್ಧಾಂತ ಗಮನಾರ್ಹವಾದದ್ದು. ಆದರೆ ಇದನ್ನು ವಿರೋಧಿಸುವವರೂ ಇದ್ದಾರೆ. ಆದರೂ ಈ ಸೋದರರಿಬ್ಬರೂ ಜರ್ಮನ್ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಲ್ಲಿಸಿರುವ ಬಹುಮುಖ ಸೇವೆ ಅಪಾರವಾದದು.

ಪ್ರಾಧ್ಯಾಪಕ, ವೈಯಾಕರಣ, ಭಾಷಾಶಾಸ್ತ್ರಜ್ಞನಾದ ಯಾಕಾಪನ ಮನಸ್ಸು ಜರ್ಮನ್ ವ್ಯಾಕರಣ, ಭಾಷಾ ಚರಿತ್ರೆ ಹಾಗೂ ನಿಘಂಟು ರಚನೆಯಲ್ಲಿ ಹೆಚ್ಚು ಹರಿದಿತ್ತು. ಶಬ್ದವ್ಯುತ್ಪತ್ತಿಯ ಸುಸಂಬದ್ಧ ಅಭ್ಯಾಸದ ಆವಶ್ಯಕತೆಯನ್ನು ಅರಿತು ಡಾಯಿಟ್ಯೆ ಗ್ರಮಾಟಿಕ್ (Deutsche Grammatik) ಎಂಬ ಜರ್ಮನ್ ವ್ಯಾಕರಣ ಗ್ರಂಥವನ್ನು ಆತ ಪ್ರಕಟಿಸಿದ. ಆಮೇಲೆ, 1811ರಲ್ಲಿ ಪ್ರಾಚೀನ ಜರ್ಮನ್ ನಾಯಕನ ಹಾಡನ್ನು ಕುರಿತು ಲೂಬೆರ್ ಡೆನ್ ಆಲ್ಟ್‌ಡಾಯಿಟೈನ್ ಮೈಸ್ಟೆರ್‌ಗೆಸಾಂಗ್ (Über den altdeutschen Meistergesang) ಎಂಬ ಸಾಹಿತ್ಯಿಕ ಗ್ರಂಥ ಪ್ರಕಟಿಸಿದ. ಜರ್ಮನ್ ಭಾಷಾಭ್ಯಾಸದ ಮೊದಲ ಭಾಗ 1819ರಲ್ಲೂ, ವ್ಯಂಜನೋಚ್ಚಾರಕ್ಕೆ ಮಹತ್ತ್ವ ನೀಡಿದ ಎರಡನೆಯ ಪರಿಷ್ಕೃತ ಆವೃತ್ತಿ 1822ರಲ್ಲೂ ಬೆಳಕು ಕಂಡಿತು. ಈ ಪುಸ್ತಕದಲ್ಲಿ ಗ್ರಿಮ್ ಒಂದು ನಿಯಮವನ್ನು ಪ್ರತಿಪಾದಿಸಿದನು. ಇದೇ ಗ್ರಿಮ್‌ನ ನಿಯಮ ಎಂದು ಭಾಷಾಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಮೂಲೋತ್ಪತ್ತಿಯಿಂದ ಸಂಬಂಧ ಹೊಂದಿದ ಭಾಷೆಗಳಲ್ಲಿ ಒಂದೇ ತರಹದ ವ್ಯಂಜನೋಚ್ಚಾರ ಹೊಂದಿವೆ ಎಂದು ರಾಸ್ಮಸ್ ರಾಸ್ಕ್ ಕಂಡುಹಿಡಿದನಾದರೂ ಈ ತತ್ತ್ವದ ಉಪಯುಕ್ತತೆಯನ್ನು ದೃಷ್ಟಾಂತದೊಡನೆ ತೋರಿಸಿಕೊಟ್ಟ ಶ್ರೇಯಸ್ಸು ಗ್ರಿಮ್‌ಗೆ ಸಲ್ಲುತ್ತದೆ.[] (ಉದಾ: ಫಾದರ್ ಎಂಬ ಶಬ್ದದ ಎಫ್ ಹಾಗೂ ಲ್ಯಾಟಿನ್ನಿನ ಪೇತರ್‌ದಲ್ಲಿಯ ಪ್ರಿಗಳಲ್ಲಿ ಹೋಲಿಕೆ) ಒಟ್ಟಾರೆ ಗ್ರಿಮ್‌ನ ನಿಯಮ, ಭಾಷೆಭಾಷೆಗಳಲ್ಲಿಯ ಕ್ರಮಬದ್ಧತೆಯನ್ನು ಸಹಜವಾಗಿ ವಿಚಲಿಸುವ ವ್ಯಂಜನೋಚ್ಚಾರ ಕಾರಣದಿಂದಾಗಿ ಗುರುತಿಸಬಹುದೆಂದು ಸಿದ್ಧಪಡಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Joosen 2006, pp. 177–179
  2. Michaelis-Jena 1970, p. 84
  3. Zipes 2000, pp. 276–278
  4. "UPI Almanac for Friday, Jan. 4, 2019". United Press International. 4 January 2019. Archived from the original on 5 January 2019. Retrieved 4 September 2019. German folklore/fairy tale collector Jacob Grimm in 1785
  5. qtd. in Zipes 1988, p. 35
  6. Ashliman, D.L. "Grimm Brothers Home Page". University of Pittsburgh. Retrieved 11 March 2012.
  7. Allan, Keith (2013-03-28). The Oxford Handbook of the History of Linguistics (in ಇಂಗ್ಲಿಷ್). OUP Oxford. p. 151. ISBN 978-0-19-958584-7.


ಗ್ರಂಥಸೂಚಿ

[ಬದಲಾಯಿಸಿ]