ವಿಷಯಕ್ಕೆ ಹೋಗು

ಗ್ರಿಮಾಲ್ಡಿ ಫಾಸಿಲುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊನ್ಯಾಕೊದಲ್ಲಿನ ಮ್ಯೂಸಿ ಡ ಆಂಥ್ರಾಪಾಲಜಿಯಲ್ಲಿ ಪ್ರದರ್ಶಿಸಲಾಗಿರುವ ಗ್ರಿಮಾಲ್ಡಿ ಪಳೆಯುಳಿಕೆಗಳು

ಗ್ರಿಮಾಲ್ಡಿ ಫಾಸಿಲುಗಳು ಎನ್ನುವವು ಇಟಲಿ ದೇಶದ ಮೆಂಟೋನಿನ ಪೂರ್ವ ಭಾಗದಲ್ಲಿನ ಗ್ರಿಮಾಲ್ಡಿ ಎಂಬಲ್ಲಿರುವ ನಾಲ್ಕು ಗುಹೆಗಳಲ್ಲಿ ದೊರೆತ ಮಾನವ ಅವಶೇಷಗಳು. ಹದಿನಾರು ವ್ಯಕ್ತಿಗಳ ಫಾಸಿಲುಗಳು ಇಲ್ಲಿ ದೊರೆತಿವೆ. ಮೇಲಿನ ಪೇಲಿಯೊಲಿಥಿಕ್ ನಿಕ್ಷೇಪಗಳಲ್ಲಿ ಇವನ್ನು ಕಾಣಲಾಗಿದೆ. ಈ ಫಾಸಿಲುಗಳ ಸಂವಾದೀ ಮಾನವರು ಹಿಮಕಾಲದ (ಗ್ಲೇಶಿಯಲ್) ಉತ್ತರಾರ್ಧದಲ್ಲಿದ್ದರೆಂದು ಹೇಳಲಾಗಿದೆ. ಅಂದರೆ ಈಗ್ಗೆ ಸುಮಾರು 30,000-40,000 ವರ್ಷಗಳ ಹಿಂದೆ ಗ್ರಿಮಾಲ್ಡಿ ಗವಿಗಳಲ್ಲಿ ಅವರು ವಾಸವಾಗಿದ್ದರೆಂದು ತರ್ಕಿಸಬಹುದು.[] ಅಲ್ಲಿ ಒಲೆ, ಹತ್ಯಾರುಗಳ ಮುಂತಾದವುಗಳು ಕುರುಹಗಳು ಸಹ ಇವೆ. ಇವೆಲ್ಲವೂ ಪ್ಲೀಸ್ಟೊಸಿನ್ ಕಾಲದವು. ಈ ಫಾಸಿಲುಗಳ ಜೊತೆಯ ವಸ್ತುಗಳು ಔರಿಗ್ನೇಸಿಯನ್ ಸಂಸ್ಕೃತಿಯವು. ಇಲ್ಲಿ ಸಿಕ್ಕಿರುವ ಫಾಸಿಲುಗಳಲ್ಲಿ ಕ್ರೋಮ್ಯಾಗ್ನನ್ ಬುಡಕಟ್ಟಿನ ಮಾನವರ ಕಂಕಾಲಗಳು ಹೆಚ್ಚಾಗಿವೆ. ಇದೇ ತರಹದ ಫಾಸಿಲುಗಳು ಯುರೋಪಿನಲ್ಲಿ ಸಹ ದೊರೆತಿವೆ. ಆ ಮಾನವರು ಈಗಿನ ಕೆಲವು ಯುರೋಪಿಯನ್ನರ ಪೂರ್ವಜರು. ಅವುಗಳ ತಲೆಬುರುಡೆಗಳ ಉದ್ದ, ಹಣೆಯ ಭಾಗ ತಗ್ಗು, ಮುಖ ಚಿಕ್ಕದ್ದು; ಪುಷ್ಟವಾದ ಎಲುಬುಗಳು ಇದ್ದವು. ಗ್ರೊಟ್ಟಿ ಡಿ ಎನ್‍ಪ್ಯಾಂಟ್ ಗವಿಯ ಅತಿ ಕೆಳಭಾಗದಲ್ಲಿ ಸಿಕ್ಕಿದ ಎರಡು ಕಂಕಾಲುಗಳು ಮಾತ್ರ ಬೇರೆಯಾಗಿದ್ದವು. ಇವು ಕುಳ್ಳ ಗಾತ್ರದವು. ಮುಖದಲ್ಲಿ ಚಾಚುದವಡೆಗಳಿದ್ದವು. ಗ್ರಿಮಾಲ್ಡಿ ಬುಡಕಟ್ಟಿನ ಮಾನವರು ನೀಗ್ರೋ ಬುಡಕಟ್ಟಿನವರೆಂದೂ, ಅವರು ಕ್ರೋಮ್ಯಾಗ್ನನ್ ಮಾನವರಿಗಿಂತ ಹಿಂದಿನವರೆಂದೂ ವರ್ನ್ ಎಂಬ ವಿದ್ವಾಂಸನ ಅಭಿಪ್ರಾಯ.[] ಆದರೆ ಬೇರಾವ ನೀಗ್ರೊ ಫಾಸಿಲುಗಳು ಯುರೋಪಿನಲ್ಲಿ ದೊರೆಯದಿದ್ದರಿಂದ ಈ ಅಭಿಪ್ರಾಯ ಸಾಕಷ್ಟು ವಿವಾದವನ್ನು ಎಬ್ಬಿಸಿತು (1960). ನೀಗ್ರೊ ರೀತಿಯದು ಎನ್ನುವ ಫಾಸಿಲುಗಳಲ್ಲಿನ ಚಾಚುದವಡೆಗಳು ಮುಖ್ಯವಾಗಿ ಆ ಮಾನವರ ಮರಣೋತ್ತರ ವಿಕೃತಿಗಳಿರಬಹುದೆಂದೂ ಹಾಗಿಲ್ಲದೇ ಇದ್ದರೆ ಅವು ಪ್ರಾಚೀನ ಕ್ರೋಮ್ಯಾಗ್ನನ್ ಮಾನವರದೇ ಆಗಿರಬಹುದೆಂದೂ ಪರಿಗಣಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Wells, H.G. (1920). "The Later Postglacial Palæolithic Men, the First True Men". The Outline of History, Being a Plain History of Life and Mankind. pp. 65–76. But at the Grimaldi cave, near Mentone, were discovered two skeletons also af the later Palaeolithic Period, ...
  2. Verneau, R. (1909): Les fouilles du Prince de Monaco aux Baoussé Roussé. Un nouveau type humain. L'anthropologie no 13, pages 561-585