ಗ್ರಾವೆಟ್ಟಿಯನ್
ಗ್ರಾವೆಟ್ಟಿಯನ್ ಎನ್ನುವುದು ಫ್ರಾನ್ಸಿನ ನೈಋತ್ಯ ಭಾಗದಲ್ಲಿರುವ ಡಾರ್ಡಾನಿ ಬಳಿ ಕೌಜ್ ಕಣಿವೆಯ ಲಾ ಗ್ರಾವೆಟ್ಟಿ ಎಂಬಲ್ಲಿ, ಮುಖ್ಯವಾಗಿ ಗುಹೆಗಳಲ್ಲಿ ವಾಸಿಸುತ್ತಿದ್ದ ಜನರ ಸಂಸ್ಕೃತಿ.[೧] ಇದು ವಾಸ್ತವವಾಗಿ ಒಂದು ಸಂಸ್ಕೃತಿಯೆನಿಸಿಕೊಳ್ಳುವಷ್ಟು ವ್ಯಾಪಕವಲ್ಲವಾದರೂ ಪ್ರಾಗಿತಿಹಾಸ ಕಾಲದ ಒಂದು ಜನಸಮುದಾಯದ ಉತ್ಪನ್ನವೆಂದು ಊಹಿಸಲು ಸಾಧ್ಯವಾಗುವ ಮಟ್ಟಿಗೆ ಒಂದೇ ಬಗೆಯ ಉಪಕರಣಗಳನ್ನು ಈ ಜನ ತಯಾರಿಸುತ್ತಿದ್ದರು. ಇದು ಪ್ರಾಚೀನ ಶಿಲಾಯುಗದ ಸಂಸ್ಕೃತಿಯ ಮೇಲಿನ ಹಂತಕ್ಕೆ ಸೇರಿದ್ದು; ಇದೇ ಹಂತದ ಆರಿಗ್ನೇಷಿಯನ್ ಸಂಸ್ಕೃತಿಯ ಅನಂತರ ಬಂದದ್ದು.[೨][೩] ಫ್ರೆಂಚ್ ಪರಿಭಾಷೆಯಲ್ಲಿ ಇದು ಮೇಲಣ ಪೆರಿಗೋರ್ಡಿಯನ್ ಸಂಸ್ಕೃತಿಯ ಅತ್ಯಂತ ಪೂರ್ವದ ಹಂತ. ಕಿರಿದಾದ ಚೂಪಾದ ಮೊನೆಯಿರುವ ಬೆಣಚುಕಲ್ಲಿನ ಚಾಕುವಿನಾಕಾರದ ಉಪಕರಣಗಳು ಇದರ ಕೊಡುಗೆ. ಇವು ಚಾಟೆಲ್‍ಪೆರೋನಿಯನ್ ಸಂಸ್ಕೃತಿಗೆ ಸೇರಿದ ಉಪಕರಣಗಳಿಗಿಂತ ಸೊಗಸಾದವೂ, ವ್ಯವಸ್ಥಿತ ಆಕಾರವುಳ್ಳವೂ, ಮೊಂಡಾದ ಹಿಡಿಗಳಿಂದ ಕೂಡಿದವೂ ಆಗಿವೆ. ಮೇಲಣ ಪೆರಿಗೋರ್ಡಿಯನ್ ಸಂಸ್ಕೃತಿಯ ಎಲ್ಲ ಹಂತಗಳ ಉಪಕರಣಗಳನ್ನೂ ಗ್ರಾವೆಟ್ಟಿಯನ್ ಎಂದು ಹೇಳುವುದೂ ಉಂಟು. ವಾಸ್ತವವಾಗಿ ಗ್ರಾವೆಟ್ಟಿಯನ್ ಎಂದು ಹೇಳಬಹುದಾದ ಸಂಸ್ಕೃತಿ ಕ್ರಿ.ಪೂ. 25000ಕ್ಕಿಂತ ಸ್ವಲ್ಪ ಹಿಂದಿನದು.
ಸಂಸ್ಕೃತಿ
[ಬದಲಾಯಿಸಿ]ಇದಕ್ಕೆ ಸಮನಾದ, ಪೂರ್ವ ಗ್ರಾವೆಟ್ಟಿಯನ್ ಎಂದು ಕರೆಯಬಹುದಾದ ಸಂಸ್ಕೃತಿಯೊಂದು ಇದೇ ಕಾಲದಲ್ಲಿ ರಷ್ಯದ ದಕ್ಷಿಣ ಭಾಗದ ಮೈದಾನಗಳಲ್ಲಿ ನೆಲೆಗೊಂಡು ಅಭಿವೃದ್ಧಿಹೊಂದುತ್ತಿತ್ತು. ಪೂರ್ವ ಗ್ರಾವೆಟ್ಟಿಯನ್ ಬೇಟೆಗಾರರು ಪಶ್ಚಿಮಾಭಿಮುಖವಾಗಿ ಆಲ್ಪ್ಸ್ ಹಾಗೂ ಕಾರ್ಪೇತಿಯನ್ ಪ್ರದೇಶಗಳತ್ತ ವಲಸೆ ಹೋಗಲು ಪ್ರಾರಂಭಿಸಿದರು. ಇವರು ರಷ್ಯದ ದಕ್ಷಿಣ ಭಾಗದಲ್ಲಿ ಹಾಗೂ ಮೊರೇವಿಯದಲ್ಲಿ (ಚೆಕೊಸ್ಲವಾಕಿಯ) ಬೃಹದ್ಗಜಗಳನ್ನು ಬೇಟೆಯಾಡುವುದರಲ್ಲಿ ವಿಶೇಷ ಪರಿಶ್ರಮ ಪಡೆದಿದ್ದರು. ಆದರೆ ಫ್ರಾನ್ಸಿನ ಪೂರ್ವ ಭಾಗದ ಗ್ರಾವೆಟ್ಟಿಯನರು ಕಾಡುಕುದುರೆಗಳನ್ನು ಬೇಟೆಯಾಡುವುದರಲ್ಲಿ ನಿಸ್ಸೀಮರಾಗಿದ್ದರು.
ಪ್ರಾಚೀನ ಶಿಲಾಯುಗದ ಮೇಲುಭಾಗದ ಸಂಸ್ಕೃತಿಯ ಜನರಂತೆ ಗ್ರಾವೆಟ್ಟಿಯನರು ಕಲಾಕುಶಲಿಗಳೂ, ಉತ್ತಮ ಅಭಿರುಚಿಯುಳ್ಳವರೂ ಆಗಿದ್ದರು. ದಂತದಿಂದ ವಿಶಿಷ್ಟ ಆಕಾರದ ಬಳೆ, ಕಡಗ ಮೊದಲಾದವನ್ನು ಕೊರೆಯುತ್ತಿದ್ದರು. ಕಲ್ಲು ಮತ್ತು ದಂತಗಳಲ್ಲಿ ವಿಕಟಾಕಾರದ, ಆದರೆ ರಮಣೀಯವಾದ ಕುಬ್ಜ ಸ್ತ್ರೀವಿಗ್ರಹಗಳನ್ನು ಬಿಡಿಸುತ್ತಿದ್ದರು.
ಕ್ರೊ-ಮ್ಯಾಗ್ನನ್ ಹಾಗೂ ಮಾಗ್ಡಲೀನಿಯನರಂತೆ ಗ್ರಾವೆಟ್ಟಿಯನರು ಕೆಂಪು ಬಣ್ಣವನ್ನು ಬಹಳವಾಗಿ ಬಳಸುತ್ತಿದ್ದರು. ಆಫ್ರಿಕನ್ ಹಾಗೂ ಆಸ್ಟ್ರೇಲಿಯನ್ ಮೂಲನಿವಾಸಿಗಳಂತೆ ಶರೀರಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಕೊರೆದ ರಂಧ್ರಗಳಿರುವ ಚಿಪ್ಪು, ಪಳೆಯುಳಿಕೆ, ಪ್ರಾಣಿಗಳ ದಂತಗಳು-ಇವುಗಳಿಂದ ಕಂಠಾಭರಣಗಳನ್ನೂ, ಕೇಶಾಭರಣಗಳನ್ನೂ ಧರಿಸುತ್ತಿದ್ದರು. ಇವರು ಫ್ರಾನ್ಸಿನ ಗುಹೆಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಚಿತ್ರಗಳನ್ನು ಡಾರ್ಡಾನಿ ಪ್ರದೇಶದ ಲಾಸ್ಕಾ ಮುಂತಾದ ಗುಹೆಗಳಲ್ಲಿ ಕಾಣಬಹುದು.[೪][೫][೬]
ಉಲ್ಲೇಖಗಳು
[ಬದಲಾಯಿಸಿ]- ↑ Kipfer, Barbara Ann. "Encyclopedic Dictionary of Archaeology". Kluwer Academic/Plenum Publishers, 2000. P. 216. ISBN 978-0-3064-6158-3
- ↑ Jacobi, R.M.; Higham, T.F.G.; Haesaerts, P.; Jadin, I.; Basell, L.S. (2015). "Radiocarbon chronology for the Early Gravettian of northern Europe: New AMS determinations for Maisières-Canal, Belgium". Antiquity. 84 (323): 26–40. doi:10.1017/S0003598X00099749. S2CID 163089681.
- ↑ Pike, A. W. G.; Hoffmann, D. L.; Garcia-Diez, M.; Pettitt, P. B.; Alcolea, J.; De Balbin, R.; Gonzalez-Sainz, C.; De Las Heras, C.; Lasheras, J. A.; Montes, R.; Zilhao, J. (2012). "U-Series Dating of Paleolithic Art in 11 Caves in Spain". Science. 336 (6087): 1409–13. Bibcode:2012Sci...336.1409P. doi:10.1126/science.1219957. PMID 22700921. S2CID 7807664.
- ↑ Dirsmith, Suzanne Roe, Dirsmith, FAAR NA, Ron (2016). Who we are - How did we get here - Why does it matter now: Living and Working in Harmony with Nature The power of our surroundings to shape our lives ... the human spirit to thrive. p 14. internetarchivebooks; inlibrary; printdisabled. ISBN 9781530094103.
{{cite book}}: CS1 maint: multiple names: authors list (link) - ↑ "Lascaux Cave Paintings: Layout, Meaning, Photographs – Dating – Chronological questions about the age of Lascaux's cave paintings, over what period they were created, and the identity of the oldest art in the complex, are still being debated..." Visual arts cork com. Archived from the original on 30 December 2016. Retrieved 28 December 2016.
- ↑ Lascaux, France. These paintings are estimated to be around 17,300 years old. Ancient-wisdom. 2000. Archived from the original on 28 December 2016. Retrieved 27 December 2016.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Picture Gallery of the Paleolithic (reconstructional palaeoethnology) Archived 14 June 2017 ವೇಬ್ಯಾಕ್ ಮೆಷಿನ್ ನಲ್ಲಿ., Libor Balák at the Czech Academy of Sciences, the Institute of Archaeology in Brno, The Center for Paleolithic and Paleoethnological Research
- Cave sites in France
