ವಿಷಯಕ್ಕೆ ಹೋಗು

ಗ್ರಾಮ್ ವರ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಗ್ರಾಮ್‍ಧನ ಕಾಕಸ್ ಮತ್ತು ಒಂದು ಗ್ರಾಮ್ಋಣ ಕಡ್ಡಿಯ ಮೈಕ್ರೋಲೇಖ.

ಗ್ರಾಮ್ ವರ್ಣ ಎನ್ನುವುದು ಸೂಕ್ಷ್ಮಜೀವಿಗಳನ್ನು ವರ್ಣೀಕರಿಸಿ (ಸ್ಟೇನ್) ಅವುಗಳ ವರ್ಗೀಕರಣವನ್ನು ಮಾಡುವ ಒಂದು ವಿಧಾನ (ಗ್ರಾಮ್ಸ್ ಸ್ಟೇನ್). ವರ್ಣೀಕರಣಗೊಂಡ ಬ್ಯಾಕ್ಟೀರಿಯಗಳಲ್ಲಿ ಬಣ್ಣವನ್ನು ಉಳಿಸಿಕೊಳ್ಳುವಂಥವನ್ನು ಗ್ರಾಮ್‌ಧನ ಬ್ಯಾಕ್ಟೀರಿಯಗಳೆಂದೂ, ಕಳೆದುಕೊಳ್ಳುವಂಥವನ್ನು ಗ್ರಾಮ್‌ಋಣ ಬ್ಯಾಕ್ಟೀರಿಯಗಳೆಂದೂ ವಿಭೇದೀಕರಿಸುವುದು  (ಡಿಫರೆನ್ಸಿಯೇಟ್) ವಾಡಿಕೆ. ಈ ವಿಭೇದೀಕರಣ ವಿಧಾನದ ಆವಿಷ್ಕರಣವಾದದ್ದು 1884 ರಲ್ಲಿ, ಹ್ಯಾನ್ಸ್ ಕ್ರಿಶ್ಚಿಯನ್ ಯೋಕಿಮ್ ಗ್ರಾಮ್ (1853-1938) ಎಂಬ ಡೇನಿಷ್ ಬ್ಯಾಕ್ಟೀರಿಯ ವಿಜ್ಞಾನಿಯಿಂದ.[]

ವರ್ಣೀಕರಿಸಿದ ಬ್ಯಾಕ್ಟೀರಿಯಗಳನ್ನು ಆಲ್ಕೋಹಾಲ್ ಅಥವಾ ಅಸಿಟೋನಿನಂಥ ತಟಸ್ಥ ದ್ರಾವಕಗಳಿಂದ (ನ್ಯೂಟ್ರಲ್ ಸಾಲ್ವೆಂಟ್ಸ್) ವಿವರ್ಣೀಕರಿಸುವಾಗ (ಡೀಕಲರೈಸ್) ಬ್ಯಾಕ್ಟೀರಿಯಗಳು ಪ್ರದರ್ಶಿಸುವ ನಿರೋಧ ಸಾಮರ್ಥ್ಯದ ವ್ಯತ್ಯಾಸವನ್ನು ಅವಲಂಬಿಸಿ ಗ್ರಾಮ್ ವರ್ಣೀಕರಣ ವಿಧಾನ ಉಂಟು.

ವಿಧಾನದ ಹಂತಗಳು

[ಬದಲಾಯಿಸಿ]
  • ಬ್ಯಾಕ್ಟೀರಿಯಗಳ ಸ್ಥಿರ ಒರಸುಗಳನ್ನು (ಫಿಕ್ಸೆಡ್ ಸ್ಮಿಯರ್ಸ್) ಅಮೋನಿಯಮ್ ಆಕ್ಸಲೇಟ್ ಕ್ರಿಸ್ಟಲ್ ವಯೋಲೆಟ್ ಎಂಬ ಮೂಲವರ್ಣದಿಂದ ವರ್ಣೀಕರಿಸುವುದು ಮೊದಲಹಂತ.
  • ಅಮೋನಿಯಮ್ ಆಕ್ಸಲೇಟ್ ಇಲ್ಲಿ ಬಣ್ಣಗಚ್ಚಾಗಿ (ಮಾರ್ಡೆಂಟ್) ವರ್ತಿಸುವುದು. ಬಳಿಕ ಅದನ್ನು ನೀರಿನಿಂದ ತೊಳೆದು ಗ್ರಾಮನ ಅಯೋಡೀನಿನಿಂದ ಸಂಸ್ಕರಿಸುವುದು ಎರಡನೆಯ ಹಂತ.
  • ಮೂರನೆಯ ಹಂತದಲ್ಲಿ ಇದನ್ನು ಪುನಃ ನೀರಿನಲ್ಲಿ ತೊಳೆದು 95% ಆಲ್ಕೊಹಾಲಿನಿಂದ ವರ್ಣೀಕರಿಸಿದ ಬ್ಯಾಕ್ಟೀರಿಯಗಳನ್ನು ವಿವರ್ಣೀಕರಿಸಿ ತರುವಾಯ ಪ್ರತಿವರ್ಣದಿಂದ (ಕೌಂಟರ್‌ಸ್ಟೇನ್) ವರ್ಣೀಕರಿಸುತ್ತಾರೆ.[][]

ಗ್ರಾಮ್ ವರ್ಣ ಪರೀಕ್ಷೆಯ ಫಲಿತಾಂಶಗಳು

[ಬದಲಾಯಿಸಿ]

ಅನಂತರ ನೀರಿನಿಂದ ತೊಳೆದು ಒಣಗಿಸಿ ದೊರೆವ ಒರಸನ್ನು ಪರೀಕ್ಷಿಸುತ್ತಾರೆ. ಈ ಪ್ರಯೋಗದಲ್ಲಿ ಉಪಯೋಗಿಸುವ ಮೂಲವರ್ಣವನ್ನು ಬ್ಯಾಕ್ಟೀರಿಯಗಳು ವಿವರ್ಣೀಕರಿಸಿದಾಗ ಕಳೆದುಕೊಳ್ಳದಿದ್ದರೆ ಅವನ್ನು ಗ್ರಾಮ್‌ಧನ ಬ್ಯಾಕ್ಟೀರಿಯ ಎಂದೂ, ಮೂಲವರ್ಣವನ್ನು ತ್ಯಜಿಸಿ ಪ್ರತಿವರ್ಣವನ್ನು ಮಾತ್ರ ಗ್ರಹಿಸಿದರೆ ಅವನ್ನು ಗ್ರಾಮ್ಋಣ ಬ್ಯಾಕ್ಟೀರಿಯಗಳೆಂದೂ ಕರೆಯುತ್ತಾರೆ.[] ಗ್ರಾಮ್ ಋಣ ಬ್ಯಾಕ್ಟೀರಿಯಗಳಲ್ಲಿ ಆ ಗುಣ ಸ್ಥಿರವಾಗಿರುತ್ತದೆ. ಗ್ರಾಮ್‌ಧನ ಬ್ಯಾಕ್ಟೀರಿಯಗಳಾದರೋ ಕೆಲವು ವೇಳೆ ಗ್ರಾಮ್‌ಋಣದ ಗುಣವನ್ನೂ ಪ್ರದರ್ಶಿಸುವುದುಂಟು. ಬೆಳೆಯುವಾಗ ಅಥವಾ ಮುಪ್ಪಿನಿಂದ ಶಿಥಿಲವಾಗುತ್ತಿರುವಾಗ ಇಂಥ ವ್ಯತ್ಯಾಸ ಕಂಡುಬರುತ್ತದೆ. ಬಹುಶಃ ಬ್ಯಾಕ್ಟೀರಿಯ ಕೋಶಗಳ ಭಿತ್ತಿಯ ಮೇಲೆ ಆಲ್ಕೊಹಾಲ್ ಅಥವಾ ಅಸಿಟೋನ್ ಕ್ರಿಯೆ ತೋರಿಸುವುದರಿಂದ ಈ ರೀತಿ ಗ್ರಾಮ್‌ಧನ ಅಥವಾ ಋಣ ಗುಣ ಉಂಟಾಗುವುದೆಂದು ತೋರುತ್ತದೆ.[] ಗ್ರಾಮ್‌ಧನ ಬ್ಯಾಕ್ಟೀರಿಯಗಳಲ್ಲಿ ಆಲ್ಕೊಹಾಲ್ ಅಥವಾ ಅಸಿಟೋನಿನಿಂದ ಭಿತ್ತಿಯ ಒಳಗಿನ ಪದಾರ್ಥಗಳು ಹೊರ ಹೋಗದಂತೆ ತಡೆಯುವ ಸಾಮರ್ಥ್ಯವನ್ನು ಪಡೆದು ಮೂಲವರ್ಣ ವಿವರ್ಣಗೊಳ್ಳದಂತೆ ಮಾಡುತ್ತದೆ. ಗ್ರಾಮ್‌ಋಣ ಬ್ಯಾಕ್ಟೀರಿಯಗಳಲ್ಲಿ ಹೀಗಾಗದೆ ಮೂಲವರ್ಣ ಭಿತ್ತಿಯ ಮೂಲಕ ಹೊರಬಂದು ಬ್ಯಾಕ್ಟೀರಿಯ ವಿವರ್ಣಗೊಳ್ಳುತ್ತದೆ. ಬಹುಶಃ ಈ ಬ್ಯಾಕ್ಟೀರಿಯಗಳ ಭಿತ್ತಿಯಲ್ಲಿ ಮೇದಸ್ಸಿನ ಅಂಶ ಹೆಚ್ಚಾಗಿದ್ದು ಅವು ಆಲ್ಕೊಹಾಲ್ ಅಥವಾ ಅಸಿಟೋನಿನಲ್ಲಿ ಸ್ವಲ್ಪಮಟ್ಟಿಗೆ ಕರಗಿ ಹೋಗುವುದರಿಂದ ಮೂಲವರ್ಣ ಹೊರಬರುವುದೆಂದು ತೋರುತ್ತದೆ. ಆದರೆ ಖಚಿತವಾಗಿ ಹೀಗೆಯೇ ಸರಿ ಎಂದು ಹೇಳುವಂತಿಲ್ಲ.

ಗ್ರಾಮ್‌ಧನ ಬ್ಯಾಕ್ಟೀರಿಯ

[ಬದಲಾಯಿಸಿ]

ಗ್ರಾಮ್‌ಧನ ಬ್ಯಾಕ್ಟೀರಿಯಗಳಿಗೆ ಜೀವಿಪ್ರತಿರೋಧಕಗಳನ್ನೂ, ಬ್ಯಾಕ್ಟೀರಿಯೋಸ್ಟ್ಯಾಟಿಕ್ ವರ್ಣಗಳನ್ನೂ, ಹ್ಯಾಲೊಜೆನುಗಳನ್ನೂ ಪ್ರತಿರೋಧಿಸುವ ಸಾಮರ್ಥ್ಯವಿಲ್ಲ.

ಗ್ರಾಮ್‌ಧನ ಬ್ಯಾಕ್ಟೀರಿಯಗಳಿಗೆ ಈ ಕೆಳಗಿನವು ಕೆಲವು ಉದಾಹರಣೆಗಳು-ಸ್ಟಾಫಿಲೊಕಾಕೈ, ಸ್ಟ್ರೆಪ್ಟೊಕಾಕೈ, ನ್ಯೂಮೊಕಾಕೈ; ಡಿಫ್ತೀರಿಯ, ಟೆಟೆನಸುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಗಳು; ಕ್ಷಯ ಜೀವಾಣುಗಳು, ದನಗಳ ಕಾಲುಬಾಯಿ ಜ್ವರವನ್ನು ಉಂಟುಮಾಡುವ ಜೀವಾಣುಗಳು, ಇತ್ಯಾದಿ.[]

ಗ್ರಾಮ್‌ಋಣ ಬ್ಯಾಕ್ಟೀರಿಯ

[ಬದಲಾಯಿಸಿ]

ಗ್ರಾಮ್‌ಋಣ ಬ್ಯಾಕ್ಟೀರಿಯಗಳು ವಿಶಿಷ್ಟ ಅಮೈನೋ ಆಮ್ಲಗಳನ್ನು ತಯಾರಿಸಿಕೊಳ್ಳಬಲ್ಲುವು. ಆ ಗುಣ ಗ್ರಾಮ್‌ಧನ ಬ್ಯಾಕ್ಟೀರಿಯಗಳಿಗಿಲ್ಲ. ಟ್ರಿಪ್ಸಿನ್, ಪೆಪ್ಸಿನ್ ಮುಂತಾದ ಎಂಜ಼ೈಮುಗಳನ್ನು ಪ್ರತಿರೋಧಿಸುವ ಸಾಮರ್ಥ್ಯ ಗ್ರಾಮ್‌ಋಣ ಬ್ಯಾಕ್ಟೀರಿಯಗಳಿಗೆ ಕಡಿಮೆ. ಜೀವಿಪ್ರತಿರೋಧಕಗಳನ್ನು ಇವು ನಿರೋಧಿಸಬಲ್ಲುವು. ಅಲ್ಲದೆ ಈ ಬ್ಯಾಕ್ಟೀರಿಯಗಳ ಐಸೊಎಲೆಕ್ಟ್ರಿಕ್ ಸ್ಥಾನ ಗ್ರಾಮ್‌ಧನ ಬ್ಯಾಕ್ಟೀರಿಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ.

ಗ್ರಾಮ್‌ಋಣ ಬ್ಯಾಕ್ಟೀರಿಯಗಳಿಗೆ ಈ ಕೆಳಗಿನವು ಕೆಲವು ಉದಾಹರಣೆಗಳು - ಗಾನೊಕಾಕಸ್, ಮೆನಿಂಗೊಕಾಕಸ್; ನೆಗಡಿಯನ್ನು ಉಂಟುಮಾಡುವ ಜೀವಾಣು ಇನ್‌ಫ್ಲೂಯೆಂಜ, ಕಾಲರ, ಟೈಫಾಯಿಡ್, ಆಮಶಂಕೆ, ಪ್ಲೇಗ್ ಮುಂತಾದ ರೋಗಗಳನ್ನು ಉಂಟುಮಾಡುವ ಜೀವಾಣುಗಳು.

ಉಪಸಂಹಾರ

[ಬದಲಾಯಿಸಿ]

ಬ್ಯಾಕ್ಟೀರಿಯಗಳ ವಿಷಯವಾಗಿ ವ್ಯಾಸಂಗಿಸಲು ಪ್ರಾರಂಭ ಮಾಡಿದಾಗ ಅವನ್ನು ಗ್ರಾಮ್ ವರ್ಣೀಕರಿಸಿ ವಿಂಗಡಿಸುವುದು ಅಪೇಕ್ಷಣೀಯವಾಗಿತ್ತು. ಆದರೆ ಬ್ಯಾಕ್ಟೀರಿಯಗಳ ಸೂಕ್ಷ್ಮಾಧ್ಯಯನದ ಇತರ ವಿಧಾನಗಳು ಬೆಳೆದಂತೆ ಗ್ರಾಮ್ ವರ್ಣೀಕರಣ ವಿಭೇದೀಕರಣ ಅದರ ಪ್ರಾಮುಖ್ಯವನ್ನು ಕಳೆದುಕೊಂಡಂತಿದೆ. ಅಲ್ಲದೇ ಸನ್ನಿವೇಶ ವ್ಯತ್ಯಾಸಗಳಿಂದಾಗಿ ಒಂದೇ ಬ್ಯಾಕ್ಟೀರಿಯ ಗ್ರಾಮ್‌ಧನ ಗುಣದ್ದಾಗಿಯೂ, ಗ್ರಾಮ್‌ಋಣ ಗುಣದ್ದಾಗಿಯೂ ಇರಬಹುದಾದ್ದರಿಂದ ಗ್ರಾಮ್ ವರ್ಣೀಕರಣದ ಉಪಯುಕ್ತತೆ ಬಲು ಕಡಿಮೆ ಆಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Colco, R. (2006). Gram Staining. Current Protocols in Microbiology. Vol. Appendix 3. pp. Appendix 3C. doi:10.1002/9780471729259.mca03cs00. ISBN 978-0471729259. PMID 18770544. S2CID 32452815.
  2. Black, Jacquelyn G. (1993). Microbiology: Principles and Explorations. Prentice Hall. p. 65.
  3. "Medical Chemical Corporation". Med-Chem.com. Retrieved 9 March 2016.
  4. Hardy, Jay; Maria, Santa. "Gram's Serendipitous Stain" (PDF). Hardy's Diagnostics. Archived (PDF) from the original on 2017-03-24.
  5. Madigan, M. T.; Martinko, J.; Parker, J. (2004). Brock Biology of Microorganisms (10th ed.). Lippincott Williams & Wilkins. ISBN 978-0-13-066271-2.
  6. Galperin, Michael Y. (27 December 2013). "Genome Diversity of Spore-forming Firmicutes". Microbiology Spectrum. 1 (2): TBS-0015-2012-. doi:10.1128/microbiolspectrum.tbs-0015-2012. ISSN 2165-0497. PMC 4306282. PMID 26184964.



ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: