ವಿಷಯಕ್ಕೆ ಹೋಗು

ಗ್ರಾಮ್ ಅಣುತೂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಾಮ್ ಶುದ್ಧ ಪದಾರ್ಥ ಒಂದರ ಅಣುತೂಕ ಎಷ್ಟೋ ಅಷ್ಟು ಗ್ರಾಮ್ ಆ ಪದಾರ್ಥ (ಗ್ರಾಮ್ ಮಾಲಿಕ್ಯುಲರ್ ವೇಟ್). ಇದಕ್ಕೆ ಗ್ರಾಮ್ ಅಣುತೂಕ ಎಂದು ಹೆಸರು. ಇಲ್ಲಿ ಅಣುತೂಕ ಎಂದರೆ ಅಣುವಿನ ನಿರಪೇಕ್ಷ ತೂಕವಲ್ಲ ಎಂಬುದನ್ನು ಒತ್ತಿ ಹೇಳುವುದು ಅಗತ್ಯ. ಅಣುಗಳು ಅತ್ಯಂತ ಚಿಕ್ಕ ಚಿಕ್ಕ ಕಣಗಳಾದ್ದರಿಂದ ಅವುಗಳ ನಿರಪೇಕ್ಷ ತೂಕಗಳು, ಎಂದರೆ ಗ್ರಾಮ್ ಅಥವಾ ಔನ್ಸುಗಳಲ್ಲಿ ನಿರ್ದೇಶಿಸಬಹುದಾದ ಅವುಗಳ ನಿಜ ತೂಕಗಳು, ಅತ್ಯಂತ ಕಡಿಮೆ ಇರುತ್ತವೆ. ಸರಳ ಅಣುಗಳ ತೂಕಗಳು ಸಾಮಾನ್ಯವಾಗಿ 10-23 ಗ್ರಾಮಿನಿಂದ 10-20 ಗ್ರಾಮುವರೆಗೆ ಇರುತ್ತವೆ. ಈ ಕಾರಣದಿಂದ ನಾವು ವ್ಯವಹಾರದಲ್ಲಿ ಅಣುವಿನ ಸಾಪೇಕ್ಷ ತೂಕಗಳನ್ನು ಬಳಸುತ್ತೇವೆ ಮತ್ತು ಅವನ್ನೇ ಅಣುತೂಕಗಳೆಂದು ಕರೆಯುತ್ತೇವೆ. ಹಿಂದೆ ಈ ಸಾಪೇಕ್ಷ ತೂಕಗಳ ನಿರ್ಧಾರಕ್ಕೆ ಹೈಡ್ರೊಜನ್ ಪರಮಾಣುವಿನ ನಿರಪೇಕ್ಷ ತೂಕವನ್ನು ಪ್ರಮಾಣಕವಾಗಿ ತೆಗೆದುಕೊಳ್ಳುತ್ತಿದ್ದರು. ಅಂದರೆ, ಯಾವುದೇ ಪದಾರ್ಥದ ಒಂದು ಅಣುವಿನ ತೂಕ ಹೈಡ್ರೊಜನ್ ಪರಮಾಣುವಿನ ತೂಕದ ಎಷ್ಟರಷ್ಟಿರುವುದೋ ಆ ಸಂಖ್ಯೆಯನ್ನು ಆ ಪದಾರ್ಥದ ಅಣುತೂಕ ಎಂದು ಪರಿಗಣಿಸಲಾಗುತ್ತಿತ್ತು. ಕಾಲಕ್ರಮದಲ್ಲಿ ಹೈಡ್ರೊಜನ್ ಪರಮಾಣುವಿನ ತೂಕಕ್ಕೆ ಬದಲಾಗಿ ಆಕ್ಸಿಜನ್ ಪರಮಾಣುವಿನ ತೂಕದ 1/16 ಭಾಗವನ್ನು ಆಧಾರವಾಗಿ ತೆಗೆದುಕೊಳ್ಳಲಾಯಿತು.[] ಈಗ ಅಂಗೀಕರಿಸಲಾಗಿರುವ ಪ್ರಮಾಣಕ C-12 ಐಸೊಟೋಪಿನ 1/12 ಭಾಗ. ಸಾಪೇಕ್ಷ ತೂಕ ಕೇವಲ ಒಂದು ಸಂಖ್ಯೆಯಷ್ಟೆ. ಆ ಸಂಖ್ಯೆ ಎಷ್ಟೋ ಅಷ್ಟು ಗ್ರಾಮ್ ಆ ಪದಾರ್ಥಕ್ಕೆ ಅದರ ಗ್ರಾಮ್ ಅಣುತೂಕ ಎಂದು ಹೆಸರು. ಇದನ್ನು ಗ್ರಾಮ್ ಅಣು (ಗ್ರಾಮ್ ಮಾಲಿಕ್ಯೂಲ್) ಎಂದೂ, ಮೋಲ್ ಎಂದೂ ಕೆಲವು ವೇಳೆ ಕರೆಯುತ್ತಾರೆ.

ಒಂದು ಮೋಲ್ ಯಾವ ಪದಾರ್ಥವನ್ನು ತೆಗೆದುಕೊಂಡರೂ ಅದರಲ್ಲಿರುವ ಅಣುಗಳ ಸಂಖ್ಯೆ ಸ್ಥಿರ: 6.023 X 1023. ಇದಕ್ಕೆ ಅವೊಗ್ಯಾಡ್ರೊ ಸಂಖ್ಯೆ ಎಂದು ಹೆಸರು.[][] ಆದ್ದರಿಂದ ರಾಸಾಯನಿಕ ಕ್ರಿಯೆಗಳಲ್ಲಿ ಅಥವಾ ಇನ್ನಾವುದೇ ಪ್ರಯೋಗಗಳಲ್ಲಿ ವಿವಿಧ ಪದಾರ್ಥಗಳನ್ನು (ಧಾತುಗಳೇ ಆಗಲಿ, ಸಂಯುಕ್ತಗಳೇ ಆಗಲಿ) ಮೋಲುಗಳ ನಿರ್ದಿಷ್ಟ ಪ್ರಮಾಣಗಳಲ್ಲಿ ತೆಗೆದುಕೊಂಡರೆ, ಆ ಪದಾರ್ಥಗಳ ಅಣುಗಳ ಸಂಖ್ಯೆಗಳೂ ಅದೇ ಪ್ರಮಾಣಗಳಲ್ಲಿರುತ್ತವೆ. ಮೋಲುಗಳ ಬಳಕೆಯಲ್ಲಿರುವ ಮುಖ್ಯ ಅನುಕೂಲವೆಂದರೆ ಇದೇ.

ಉಲ್ಲೇಖಗಳು

[ಬದಲಾಯಿಸಿ]
  1. Busch, Kenneth (May 2, 2003). "Units in Mass Spectrometry" (PDF). Current Trends in Mass Spectrometry. 18 (5S): S32-S34 [S33]. Retrieved 29 April 2023.
  2. Richard P. Feynman: The Feynman Lectures on Physics, Volume II
  3. Max Born (1969): Atomic Physics, 8th ed., Dover ed., reprinted by Courier in 2013; 544 pages. ISBN 978-0486318585
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: