ವಿಷಯಕ್ಕೆ ಹೋಗು

ಗ್ರಾಮ್ಋಣ ಬ್ಯಾಕ್ಟೀರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರಾಮ್ಋಣ ಸೂಡೊಮೋನಾಸ್ ಏರುಗಿನೋಸಾ ಬ್ಯಾಕ್ಟೀರಿಯದ ಸೂಕ್ಷ್ಮದರ್ಶಕೀಯ ಚಿತ್ರ (ನಸುಗೆಂಪು-ಕೆಂಪು ಬಣ್ಣದ ಕಡ್ಡಿಗಳು)

ಗ್ರಾಮ್ಋಣ ಬ್ಯಾಕ್ಟೀರಿಯ ಎನ್ನುವವು ಬ್ಯಾಕ್ಟೀರಿಯವನ್ನು ಬೇರ್ಪಡಿಸುವ ಗ್ರಾಮ್ ವರ್ಣ ವಿಧಾನದಲ್ಲಿ ಬಳಸಲಾಗುವ ಸ್ಫಟಿಕ ಕೆನ್ನೀಲಿ ಕಲೆಯನ್ನು ಹಿಡಿದಿಟ್ಟುಕೊಳ್ಳದ ಬ್ಯಾಕ್ಟೀರಿಯ.[]

ಗ್ರಾಮ್ಋಣ ಡಿಪ್ಲೊಕಾಕೈ

[ಬದಲಾಯಿಸಿ]

ಗ್ರಾಮ್ಋಣ ಡಿಪ್ಲೊಕಾಕೈ ಎನ್ನುವುದು ನೈಸೀರಿಯೇಸೀ ಕುಟುಂಬದ ಮೂರು ಬ್ಯಾಕ್ಟೀರಿಯ ಜಾತಿಗಳ ವಿವರಣಾತ್ಮಕ ಹೆಸರು. ಇವುಗಳ ಪೈಕಿ ಜಮೆಲ್ಲ ಮತ್ತು ವೈಲೊನೆಲ್ಲ ಎಂಬ ಎರಡು ಜಾತಿಗಳು ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿ ವಾಸಿಸುತ್ತವೆ. ಇವು ಕೊಳೆತಿನಿಗಳು (ಮೃತೋಪಜೀವಿಗಳು, ಸ್ಯಾಪ್ರೊಫೈಟ್ಸ್). 3ನೆಯ ಜಾತಿಯಾದ ನೈಸೀರಿಯದಲ್ಲಿ ಎರಡು ಪ್ರಭೇದಗಳಿವೆ: ನೈ.ಗಾನೇರಿಯೆ, ನೈ. ಮೆನಿಂಜೈಟಿಡಿಸ್. ಇವುಗಳ ಸಾಮಾನ್ಯ ಹೆಸರು ಗಾನೊಕಾಕಸ್[] ಮತ್ತು ಮೆನಿಂಗೊಕಾಕಸ್. ಇವೆಲ್ಲ ಬ್ಯಾಕ್ಟೀರಿಯಗಳು ಗೋಳಾಕಾರವಾಗಿಯೂ (ಕಾಕೈ)[][][] ಜೊತೆ ಜೊತೆಯಾಗಿಯೂ (ಡಿಪ್ಲಾ) ಇರುವುದರಿಂದ ಡಿಪ್ಲೊಕಾಕೈ ಎಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಗಾನೊಕಾಕಸ್ ಮತ್ತು ಮೆನಿಂಗೊಕಾಕಸುಗಳನ್ನು ಆಮೂಲಾಗ್ರವಾಗಿ ಅಭ್ಯಸಿಸಿದ್ದರೂ ನೈಸೀರಿಯ ಪ್ರಭೇದದ ಗುಣಲಕ್ಷಣಗಳು ಇನ್ನೂ ಪೂರ್ಣವಾಗಿ ಅರ್ಥವಾಗಿಲ್ಲ. ಅದರಂತೆಯೆ ಮೈಲೊನೆಲ್ಲ ಜಾತಿಯ ಬ್ಯಾಕ್ಟೀರಿಯಗಳ ಗುಣಲಕ್ಷಣಗಳು ಕೂಡ.

ಜಮೆಲ್ಲ

[ಬದಲಾಯಿಸಿ]

ಜಮೆಲ್ಲವನ್ನು ಮೊದಲಿಗೆ ನೈಸೀರಿಯದೊಡನೆ ವರ್ಗೀಕರಿಸಿ ಇದಕ್ಕೆ ನೈ.ಹಿಮೊಲೈಸಾನ್ಸ್ ಎಂದು ಹೆಸರಿಟ್ಟಿದ್ದರು.[] ಜಮೆಲ್ಲ ಉಪದ್ರವಕಾರಿಯಲ್ಲದ ಜೀವಿ. ಸಾಧಾರಣವಾಗಿ ಮನುಷ್ಯನ ಗಂಟಲಿನ ಭಾಗದಲ್ಲಿ ವಾಸಿಸುತ್ತದೆ. ಜೀವರಸಾಯನ ಕ್ರಿಯಾವಿಧಾನಗಳಲ್ಲಿ ಈ ಜೀವಿಗೂ, ನೈಸೀರಿಯ ಜೀವಿಗಳಿಗೂ ವ್ಯತ್ಯಾಸವಿದೆಯಾದ್ದರಿಂದ ಇದನ್ನು ಬೇರೆ ಜಾತಿಯ ಸೂಕ್ಷ್ಮ ಜೀವಿ ಎಂದು ಗುರುತಿಸಬೇಕಾಯಿತು.[]

ವೈಲೊನೆಲ್ಲ

[ಬದಲಾಯಿಸಿ]

ವೈಲೊನೆಲ್ಲ ಜಾತಿಯ ಬ್ಯಾಕ್ಟೀರಿಯಗಳು ಚಿಕ್ಕ ಜೋಡಿಯ ಜೀವಿಗಳು. ಇವು ಇತರ ಡಿಪ್ಲೊಕಾಕೈಗಳಿಗಿಂತ ವಿಭಿನ್ನವಾಗಿವೆ. ಇವು ಅವಾಯುಶ್ವಸನ (ಅನೇರೋಬಿಕ್) ಉಸಿರಾಟವನ್ನು ಮಾಡಬಲ್ಲವು. ಮನುಷ್ಯ ಹಾಗೂ ಪ್ರಾಣಿಗಳ ಬಾಯಿ, ಕರುಳು ಮತ್ತು ಶುದ್ಧೀಕರಣಾಂಗಗಳ (excretory organs) ಮತ್ತು ಜನನೇಂದ್ರಿಯಗಳ ನಾಳಗಳಲ್ಲಿ ಇವು ವಾಸಿಸುತ್ತವೆ. ಈ ಜಾತಿಯ ಸುಮಾರು ಮೂವತ್ತು ಪ್ರಭೇದಗಳನ್ನು ಗುರುತಿಸಿ ವಿವರಿಸಲಾಗಿದೆ. ಇವುಗಳ ಬಾಹ್ಯಲಕ್ಷಣಗಳಲ್ಲಿಯೂ, ಶರೀರ ಕ್ರಿಯಾವಿಧಾನ ಲಕ್ಷಣಗಳಲ್ಲಿಯೂ ಬಹಳ ವ್ಯತ್ಯಾಸಗಳು ಇವೆ. ಉಪಯೋಗಿಸಿದ ಒಂದೊಂದು ರೀತಿಯ ಪೌಷ್ಟಿಕ ಮಾಧ್ಯಮದಲ್ಲೂ ಈ ಗುಣಲಕ್ಷಣಗಳು ವ್ಯತ್ಯಾಸಗೊಳ್ಳುವುದರಿಂದ ಈ ಜಾತಿಯಲ್ಲಿ ನಿಖರವಾಗಿ ಎಷ್ಟು ಪ್ರಭೇದಗಳಿವೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ನೈಸೀರಿಯ

[ಬದಲಾಯಿಸಿ]

ನೈಸೀರಿಯ ಜಾತಿಗೆ ಸೇರಿದ ಎಲ್ಲ ಜೀವಿಗಳೂ ಪೂರ್ಣ ಪರತಂತ್ರ ಜೀವಿಗಳು. ಮನುಷ್ಯ ಮತ್ತು ಪ್ರಾಣಿಗಳು ಇವುಗಳ ಆಶ್ರಯದಾತ ಜೀವಿಗಳು. ಇವು ವಾಯುಶ್ವಸನ (ಏರೋಬಿಕ್) ಉಸಿರಾಟವನ್ನು ನಡೆಸುತ್ತವೆ. ಕೆಲವು ಬಾರಿ ಸನ್ನಿವೇಶಕ್ಕೆ ಅನುಗುಣವಾಗಿ ಅವಾಯುಶ್ವಸನ ಉಸಿರಾಟವನ್ನೂ ಮಾಡಬಲ್ಲವು. ಇವುಗಳ ಕೃಷಿ ಅಷ್ಟೊಂದು ಸುಲಭವಲ್ಲ. ಆದ್ದರಿಂದ ಇವುಗಳ ಬೆಳೆವಣಿಗೆ ಸಾಮಾನ್ಯ ಆಹಾರ ವಸ್ತುಗಳಿರುವ ಕೃಷಿ ತಟ್ಟೆಗಳಲ್ಲಿ ಸಾಧ್ಯವಿಲ್ಲ. ಸಾಧಾರಣವಾಗಿ ಇವುಗಳ ಎಲ್ಲ ಪ್ರಭೇದಗಳಿಗೂ ಆಕ್ಸಿಡೇಸ್ ಧನಾತ್ಮಕ ಮತ್ತು ಇಂಡೋಲ್ ಋಣಾತ್ಮಕ ಗುಣಗಳಿವೆ. ಬಹು ಉಪದ್ರವಕಾರಿಗಳಲ್ಲದ ಪ್ರಭೇದಗಳಿವು. ಒಂದು ರೀತಿಯ ಹಳದಿ ಬಣ್ಣದ ವರ್ಣದ್ರವ್ಯವನ್ನು (ಪಿಗ್ಮೆಂಟ್) ಉತ್ಪಾದಿಸುತ್ತವೆ. ಸ್ವಾಭಾವಿಕವಾಗಿ ಸಕ್ಕರೆಯ ಹುದುಗುಕ್ರಿಯೆಯ (ಫರ್ಮೆಂಟೇಷನ್) ಆಧಾರದ ಮೇಲೆ ಇವುಗಳ ವಿವಿಧ ಬಗೆಗಳನ್ನು ವರ್ಗೀಕರಿಸಲಾಗಿದೆ. ಮನುಷ್ಯನಿಂದ ಬೇರ್ಪಡಿಸಿದ ಕೆಲವು ಮುಖ್ಯ ಪ್ರಭೇದಗಳು ನಿರ್ದಿಷ್ಟ ರೀತಿಯ ಹುದುಗು ಕ್ರಿಯಾ ವಿಧಾನಗಳನ್ನು ತೋರಿಸುತ್ತವೆ. ಗಾನೊಕಾಕಸುಗಳು ಕೇವಲ ಗ್ಲೂಕೋಸನ್ನು ಮಾತ್ರ ಹುದುಗಿಸಿದರೆ[] ಮೆನಿಂಗೊಕಾಕಸುಗಳು ಗ್ಲೂಕೋಸ್ ಮತ್ತು ಮಾಲ್ಟೋಸುಗಳೆರಡನ್ನೂ ಹುದುಗಿಸುವವು. ನೈಸೀರಿಯ ಕ್ಯಾಟರಾಲಿಸ್ ಗ್ಲೂಕೋಸನ್ನಾಗಲಿ ಮಾಲ್ಟೋಸನ್ನಾಗಲಿ ಹುದುಗಿಸಲಾರದು.

ಹೊಸ ಸ್ರಾವಕಗಳಲ್ಲಿ ದೊರೆಯುವ ಈ ಬ್ಯಾಕ್ಟೀರಿಯಗಳಲ್ಲಿ ಮಾದರಿ ಡಿಪ್ಲೊಕಾಕೈನಲ್ಲಿರುವ ಜೋಡಿ ರಚನೆಯನ್ನೂ, ಚಪ್ಪಟೆಯಾದ ಅಥವಾ ಸ್ವಲ್ಪ ಒಳಬಾಗುಳ್ಳ (ಕಾನ್‌ಕೇವ್) ಅಂಚುಗಳುಳ್ಳ ಬಾಹ್ಯಲಕ್ಷಣಗಳನ್ನೂ ಗ್ರಾಮ್ ವರ್ಣೀಕರಿಸಿದ ಒರಸುಗಳಲ್ಲಿ (ಸ್ಮಿಯರ್ಸ್) ಕಾಣಬಹುದು. ಆದರೆ ಈ ರೀತಿಯ ರಚನೆಗಳು ಸಾಮಾನ್ಯವಾಗಿ ಕೃಷಿಮಾಡಿದ ಬ್ಯಾಕ್ಟೀರಿಯಗಳಲ್ಲಿ ಕಾಣಬರುವುದಿಲ್ಲ. ಆದರೆ ಇಲ್ಲಿ ಇವು ಜೊತೆಯಾಗಿ ಅಥವಾ ನಾಲ್ಕರ ಗುಂಪುಗಳಂತೆ ಅಥವಾ ಅಂಡಾಕಾರದ ಅಥವಾ ದುಂಡಗಿರುವ ಗುಂಪುಗಳಂತೆ ಕಂಡುಬರುತ್ತವೆ.

ಗಾನೊಕಾಕಸ್ ಒಂದನ್ನು ಬಿಟ್ಟು ಇನ್ನುಳಿದ ನೈಸೀರಿಯಗಳು ಮೂಗು ಗಂಟಲಿನಲ್ಲಿ ವಾಸಿಸುವುವು. ನೈಸೀರಿಯ ಕ್ಯಾವಿಯೆ[][೧೦][೧೧][೧೨] ಮತ್ತು ನೈ. ಅನಿಮ್ಯಾಲಿಸ್ ಎಂಬ ಎರಡು ಪ್ರಭೇದಗಳನ್ನು ಗಿನಿ ಹಂದಿಯಿಂದ ಬೇರ್ಪಡಿಸಲಾಗಿದೆ. ನೈ. ಓವಿಸ್ ಎಂಬುದನ್ನು ಕೆರಾಟೋಕಂಜಂಕ್ಟಿವೈಟಿಸ್ ರೋಗದಿಂದ ನರಳುವ ಕುರಿಗಳ ಕಣ್ಣಿನಿಂದ ಪ್ರತ್ಯೇಕಿಸಲಾಗಿದೆ. ನೈ. ಕ್ಯಾಟರ‍್ಯಾಲಿಸ್, ನೈ. ಫ್ಲಾವೆಸೆನ್ಸ್ ಮತ್ತು ನೈ. ಸಬ್‍ಫ್ಲಾವಗಳನ್ನು ಮೆನಿಂಜೈಟಿಸ್ ರೋಗಿಯ ಮಿದುಳುಬಳ್ಳಿಯ ರಸದಿಂದ ಪ್ರತ್ಯೇಕಿಸಲಾಗಿದೆ.[೧೩] ಆದರೆ ಇವುಗಳ ಇರುವಿಕೆ ಬಹಳ ಅಪರೂಪ.

ನೈಸೀರಿಯ ಜಾತಿಯಲ್ಲಿ ಪ್ರಪ್ರಥಮವಾಗಿ ಕಂಡುಹಿಡಿದ ಜೀವಿ ಎಂದರೆ ಗಾನೊಕಾಕಸ್. ಆಲ್ಬರ್ಟ್ ನೈಸರ್ ಎಂಬಾತ ಗಾನರೀಯ ರೋಗಿಗಳಿಂದ ಗಾನೊಕಾಕೈಗಳನ್ನು ಪ್ರಥಮವಾಗಿ ಪ್ರತ್ಯೇಕಿಸಿದ (1879).[೧೪] ಈ ಬ್ಯಾಕ್ಟೀರಿಯ ಆಫ್ತಾಲ್ಮಿಯ ನಿಯೋನೆಟೋರಮ್ ಎಂಬ ರೋಗವನ್ನು ಉಂಟುಮಾಡುವುದು.[೧೫] ಆ್ಯಂಟನ್ ವೀಶಲ್‍ಬಾಮ್ ಎಂಬಾತ ಆರು ಜನ ಮೆನಿಂಜೈಟಿಸ್ ರೋಗಿಗಳ ಮಿದುಳುಬಳ್ಳಿ ರಸದಿಂದ ಮೆನಿಂಗೋಕಾಕಸ್ ಬ್ಯಾಕ್ಟೀರಿಯಗಳನ್ನು ಪ್ರತ್ಯೇಕಿಸಿದ (1887).[೧೬]

ನೈಸೀರಿಯ ಮೆನಿಂಜೈಟಿಡಿಸ್

ನೈಸೀರಿಯ ಮೆನಿಂಜೈಟಿಡಿಸ್ ಬ್ಯಾಕ್ಟೀರಿಯ ಕೇವಲ ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು. ಸುಮಾರು 5%ರಷ್ಟು ಜನರಲ್ಲಿ ಇವು ಮೂಗು ಗಂಟಲಲ್ಲಿ ಇರುವುದು ಕಂಡುಬಂದಿದೆ. ಮೆನಿಂಗೊಕಾಕಸ್ ಆಗಾಗ ಸಾಂಕ್ರಾಮಿಕ ಮೆನಿಂಜೈಟಿಸ್ ರೋಗವನ್ನು ಉಂಟುಮಾಡುತ್ತದೆ. ಇದು ಬಹುಮಟ್ಟಿಗೆ ನಿರ್ಬಂಧಿತ ಜನಸಂದಣಿಗಳಲ್ಲಿ ಕಂಡುಬರುವುದುಂಟು. ಉದಾಹರಣೆಗೆ ಸೈನಿಕ ಶಿಬಿರಗಳಲ್ಲಿ ಇಂಥ ತೀವ್ರತರವಾದ ರೋಗ ಶೀಘ್ರವಾಗಿ ಹರಡುವುದು ತಿಳಿದಿದೆ. ಮೆನಿಂಗೊಕಾಕೈನಲ್ಲಿ 4 ವಿವಿಧ ಬಗೆಯ ಆ್ಯಂಟಿಜೆನಿಕ್ ಗುಣಲಕ್ಷಣಗಳುಳ್ಳ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಿಗೆ A, B, C ಮತ್ತು D ಗಳೆಂದು ಹೆಸರು. ಸಾಂಕ್ರಾಮಿಕ ರೋಗಗಳಲ್ಲಿ ಸಾಮಾನ್ಯವಾಗಿ B ಬಗೆಯ ಮೆನಿಂಗೊಕಾಕೈಗಳಿರುವುವು. ಆದರೆ ಅಲ್ಲಲ್ಲಿ ಒಂಟೊಂಟಿಯಾಗಿ ಸೋಂಕು ತಗಲಿದ ರೋಗಿಗಳಲ್ಲಿ ಇಂಥ ವಿಭೇದಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಈ ಮುಂಚೆ ನಿರುಪದ್ರವಿಗಳಾಗಿಯೇ ಇದ್ದ ಜೀವಿಗಳು ಬಹುಶಃ ಉಸಿರಾಡುವ ಹಾದಿಯ ದುಗ್ಧನಾಳಗಳಿಗೆ ಪ್ರವೇಶಿಸಿ ಅಲ್ಲಿ ಬ್ಯಾಕ್ಟೀರಿಮಿಯವನ್ನು ಉಂಟುಮಾಡುತ್ತವೆ. ಅನಂತರ ಇವುಗಳಿಗೆ ಹೇಗೆ ಉಪದ್ರವಕಾರಕ ಶಕ್ತಿ ಬಂದು ಅವು ದಾಳಿಯನ್ನು ಪ್ರಾರಂಭಿಸುತ್ತವೆ ಎಂಬುದು ಇನ್ನೂ ಅರ್ಥವಾಗಿಲ್ಲ. ಜೀವಿಗಳು ರೋಗಿಯ ಮೆನಿಂಜಸ್, ಚರ್ಮ, ಕೀಲುಗಳು, ಕಣ್ಣು ಮತ್ತು ಇತರ ಅಂಗಗಳಲ್ಲಿ ಆಶ್ರಯ ಪಡೆಯಬಹುದು. ಈ ರೋಗಗಳಲ್ಲಿ ತೀವ್ರತರವಾದ ತಲೆನೋವು, ಜ್ವರ, ಚಳಿ, ಮೈಕೈನೋವು ಮುಂತಾದವು ಕಂಡುಬರುತ್ತವೆ. ಇದರಿಂದ ರೋಗಿಯ ಮೇಲೆ ಅತಿ ತೀವ್ರವಾದ ಆಘಾತವಾಗುವುದು. ಚರ್ಮದ ರಕ್ತನಾಳಗಳಲ್ಲಿ ವಾಸಿಸುವ ಈ ಬ್ಯಾಕ್ಟೀರಿಯಗಳಿಂದ ರಕ್ತಕರಣೆ, ರಕ್ತೋದ್ರೇಕ, ಚರ್ಮದಲ್ಲಿ ಬೊಕ್ಕೆಗಳಂಥ ರಚನೆಗಳು ಹುಟ್ಟಿಕೊಳ್ಳುತ್ತವೆ.

ಜೀವಿಪ್ರತಿರೋಧಕಗಳ ಸಂಶೋಧನೆಯಾದ ಮೇಲೆ ಇವುಗಳ ಹಾವಳಿ ಸ್ವಲ್ಪ ಕಡಿಮೆಯಾಗಿದೆ. ಹಿಂದಿನ ವರ್ಷಗಳಲ್ಲಿ ಮೆನಿಂಗೊಕಾಕೈಗಳಿಂದಾದ ರೋಗಗಳಿಗೆ ಸಲ್ಫೊನಮೈಡುಗಳು ಮತ್ತು ಪೆನಿಸಿಲಿನುಗಳಿಂದ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಬಹಳ ಮೆನಿಂಗೊಕಾಕೈಗಳು ಪೂರ್ಣವಾಗಿ ಸಲ್ಫೊನಮೈಡುಗಳನ್ನು ನಿರೋಧಿಸಬಲ್ಲ ಸಾಮರ್ಥ್ಯವನ್ನು ಗಳಿಸಿಕೊಂಡಿವೆ. ಇವನ್ನು ಕೊಲ್ಲಲು ಪೆನಿಸಿಲಿನ್ ಅತಿ ಹೆಚ್ಚಿನ ಮೊತ್ತದಲ್ಲಿ ಬೇಕು. ಇಲ್ಲವೆ ಬೇರೆ ಜೀವಿಪ್ರತಿರೋಧಕಗಳನ್ನು ಚಿಕಿತ್ಸೆಗೆ ಉಪಯೋಗಿಸಬೇಕು.

ನೈಸೀರಿಯ ಗಾನೊರೀಯೇ

ನೈಸೀರಿಯ ಗಾನೊರೀಯೇ ಎಂಬ ಬ್ಯಾಕ್ಟೀರಿಯ ಮಾನವನಲ್ಲಿ ಗಾನರೀಯ ಎಂಬ ಲೈಂಗಿಕ ರೋಗವನ್ನು ಉಂಟುಮಾಡುತ್ತದೆ. ಮಾನವನ ಮೂಗು ಗಂಟಲಿನಲ್ಲಿ ಇಲ್ಲದಿರುವ ಗ್ರಾಮ್‌ಋಣ ಡಿಪ್ಲೋಕಾಕಸ್ ಇದೊಂದೇ. ಪೂರ್ಣ ಪರಾವಲಂಬಿ. ಸಾಮಾನ್ಯವಾಗಿ ಮಾನವರ ದೇಹದಲ್ಲಿ ಮಾತ್ರ ಜೀವಿಸಬಲ್ಲುದು ಮತ್ತು ಹಾಗೆ ಇದ್ದಾಗ ರೋಗವನ್ನು ಉಂಟುಮಾಡಿಯೇ ತೀರುತ್ತದೆ. ಲೈಂಗಿಕ ಸಂಪರ್ಕದಿಂದ ವ್ಯಕ್ತಿಯಿಂದ ವ್ಯಕ್ತಿಗೆ ಇದು ಹಬ್ಬುತ್ತದೆ. ಅಪರೂಪವಾಗಿ ರೋಗಿಯ ಕೀವಿನಿಂದ ಸೋಂಕು ಉಂಟಾಗಬಹುದು. ಈ ರೋಗದಿಂದ ಪೀಡಿತಳಾದ ಗರ್ಭಿಣಿ ಪ್ರಸವಿಸುವಾಗ ಹುಟ್ಟುವ ಮಗುವಿನ ಕಣ್ಣುಗಳಿಗೆ ಸೋಂಕು ತಗುಲಿ ಜನನಕಾಲದ ಕಣ್ಣುನೋವು (ಆಫ್ತಾಲ್ಮಿಯ ನಿಯೋನೆಟೋರಮ್) ಉಂಟಾಗುವುದು ಸಾಮಾನ್ಯ. ಮಿಲಿಮೀಟಿರಿನ ಸಾವಿರದಲ್ಲಿ ಒಂದು ಭಾಗಕ್ಕಿಂತಲೂ ಸಣ್ಣದಾಗಿರುವ ನೈಸೀರಿಯ ಗಾನೊಕಾಕೈಗಳು ಜೊತೆ ಜೊತೆಯಾಗಿಯೇ ಒಂದಕ್ಕೊಂದು ಒತ್ತಿಕೊಂಡು ಇರುವುದರಿಂದ ಇವುಗಳ ಆಕಾರ ಹೆಚ್ಚು ಕಡಿಮೆ ಅವರೆ ಕಾಳಿನಂತಿರುತ್ತದೆ. ಅನೇಕ ವೇಳೆ ಇವು ನ್ಯೂಟ್ರೊಫಿಲ್ ಎಂಬ ರೀತಿಯ ಬಿಳಿಯ ರಕ್ತಕಣಗಳೊಳಗೆ ಇರುವುವು.[೧೭] ಒಂದೊಂದು ಬಿಳಿರಕ್ತಕಣದಲ್ಲೂ ಸುಮಾರು 20ರಿಂದ 50 ಜೊತೆ ಕಾಕೈಗಳು ಕಂಡುಬರಬಹುದು. ಆದರೆ ಬಿಳಿರಕ್ತಕಣಗಳ ಒಳಗೇ ಇರಬೇಕೆಂಬ ನಿಯಮವಿಲ್ಲ, ಸೂಕ್ಷ್ಮಜೀವಿಗಳಿಗೆ ಆಮ್ಲಜನಕ ಅವಶ್ಯ. ಇವನ್ನು ಸಾಮಾನ್ಯ ಕೃಷಿ ತಟ್ಟೆಗಳಲ್ಲಿ ಬೆಳೆಸಲಾಗುವುದಿಲ್ಲ. ಪೌಷ್ಟಿಕ ಮಾಧ್ಯಮ ರಕ್ತ ಅಥವಾ ರಕ್ತದಿಂದ ಉತ್ಪನ್ನವಾದ ದ್ರವವಾಗಿದ್ದರೆ ಮಾತ್ರ ಇವನ್ನು ಕೃಷಿ ಮಾಡಬಹುದು. ಇಲ್ಲವೇ ಚಾಕೊಲೇಟ್ ಅಗಾರ್ ಎಂಬ ವಿಶೇಷ ಮಾಧ್ಯಮವನ್ನು ಉಪಯೋಗಿಸಬೇಕು. ಇವು 550 ಸೆಂ. ನಷ್ಟು ಉಷ್ಣತೆಯನ್ನು 5 ಮಿನಿಟುಗಳ ಕಾಲ ಕೂಡ ತಡೆಯಲಾಗದೆ ನಾಶವಾಗಿ ಹೋಗುತ್ತವೆ; ಹಾಗೆಯೇ ನಿರ್ಜಲೀಕರಿಸಿದರೂ 2 ಗಂಟೆಗಳ ಕಾಲದಲ್ಲಿ ನಾಶವಾಗಿ ಹೋಗುತ್ತವೆ; ಆದರೂ ಕೀವು ಸೋಕಿದ ರೋಗಿಗಳ ಬಟ್ಟೆಬರೆಗಳಲ್ಲಿ ಕೆಲವು ದಿವಸ ಪರ್ಯಂತ ಬದುಕಿರಬಲ್ಲವು. ಆದ್ದರಿಂದ ಇವುಗಳ ಸಂಪರ್ಕದ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ಗಾನೊಕಾಕೈಗಳಲ್ಲಿ ಎರಡು ಪಂಗಡಗಳನ್ನು ಗುರುತಿಸಬಹುದು.

  • ಮೊದಲನೆಯದು ಸಾಮಾನ್ಯವಾಗಿ ರೋಗದ ತಾರುಣ್ಯದಲ್ಲೂ
  • ಎರಡನೆಯದು ನಿಡುಗಾರಿದ ರೋಗಿಗಳಲ್ಲೂ ಕಂಡು ಬರುತ್ತವೆ.

ರಾಸಾಯನಿಕ ಚಿಕಿತ್ಸೆಯ (ಕೀಮೋಥೆರಪಿ) ಯುಗಕ್ಕೆ ಮುಂಚೆ ಈ ಜೀವಿಗಳ ಉಷ್ಣಸೂಕ್ಷ್ಮತೆಯನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಕೃತಕವಾಗಿ ತೀವ್ರಜ್ವರವನ್ನು ಉಂಟುಮಾಡಲಾಗುತ್ತಿತ್ತು. ಆದರೆ ಸುಮಾರು 1930ರಿಂದೀಚೆಗೆ ಸಲ್ಫೊನಮೈಡುಗಳಿಂದ ಇವುಗಳ ಸೋಂಕಿಗೆ ಚಿಕಿತ್ಸೆ ನಡೆಯುತ್ತಿತ್ತು. 1942-43ರಲ್ಲಿ ಪೆನಿಸಿಲಿನ್ ಬಳಕೆ ಬಂದ ಬಳಿಕ ಗಾನೊಕಾಕೈಗಳ ಸೋಂಕಿಗೆ ಅದೇ ಎತ್ತಿದ ಮದ್ದಾಗಿದೆ. ಒಂದೇ ಪೆನಿಸಿಲಿನ್ ಚುಚ್ಚುಮದ್ದು ಗಾನರೀಯ ಚಿಕಿತ್ಸೆಗೆ ಸಾಕಾದರೂ ಅದೇ ರೋಗಿಯಲ್ಲಿ ಅದೇ ಕಾಲದಲ್ಲಿರಬಹುದಾದ ಇನ್ನೊಂದು ಲೈಂಗಿಕ ರೋಗವಾದ ಸಿಫಿಲಿಸಿಗೆ ಸಾಲದಾದ್ದರಿಂದ ಮತ್ತು ಈ ಚುಚ್ಚುಮದ್ದು ತಾತ್ಕಾಲಿಕವಾಗಿ ಶಮನ ಮಾಡಿ ರೋಗ ಗುಣವಾಯಿತೆಂಬ ಭ್ರಾಂತಿಯನ್ನು ಉಂಟುಮಾಡುವುದರಿಂದ ಈಚೆಗೆ ಗಾನೊಕಾಕೈಗಳ ಸೋಂಕಿಗೆ ಸಿಪ್ರೊಫ್ಲೊಕ್ಸಾಸಿನ್, ಓಫ್ಲೊಕ್ಸಾಸಿನ್, ಆಂಪಿಸಿಲಿನ್ ಉಪಯುಕ್ತವೆನಿಸಿವೆ.

ಗ್ರಾಮ್‌ಋಣ ಬ್ಯಾಸಿಲ್ಲೈಗಳು

[ಬದಲಾಯಿಸಿ]

ಆಕಾರದಲ್ಲಿ ಕಡ್ಡಿಯ ಚೂರಿನಂತೆ ಇರುವುದರಿಂದ ಇವನ್ನು ಬ್ಯಾಸಿಲ್ಲೈಗಳೆಂದು ಕರೆಯಲಾಗಿದೆ. ಇಂಥ ಬ್ಯಾಸಿಲ್ಲೈಗಳಲ್ಲಿ ಮುಖ್ಯವಾದವು ಮಾನವರಲ್ಲಿ ತೀವ್ರವಾದ ರೋಗಗಳನ್ನು ಉಂಟುಮಾಡುವ ಟೈಫಾಯಿಡ್, ಕಾಲರ, ಆಮಶಂಕೆಗಳ ಕಾರಕಗಳಾದ ಬ್ಯಾಕ್ಟೀರಿಯಗಳ ಗುಂಪು, ಇನ್‌ಫ್ಲೂಯೆಂಜ಼ಾ ಕಾರಕ ಬ್ಯಾಕ್ಟೀರಿಯ, ಪ್ಲೇಗ್ ವಿಷಾಣು ಇತ್ಯಾದಿ. ಕಾಲರ, ಟೈಫಾಯಿಡ್ ಆಮಶಂಕೆಗಳ ಬ್ಯಾಕ್ಟೀರಿಯಗಳನ್ನು ಅವುಗಳ ಕೃಷಿವಿಧಾನ ವೈವಿಧ್ಯ, ಹುದುಗು ಕ್ರಿಯೆಯ ವ್ಯತ್ಯಾಸ, ಅಂಟುಜನಕ ಸ್ವಭಾವ ಇತ್ಯಾದಿಗಳಿಂದ ಗುರುತಿಸಿ ವಿಂಗಡಿಸಲಾಗುತ್ತದೆ. ಪ್ಲೇಗ್ ವಿಷಾಣು, ಇನ್‌ಫ್ಲೂಯೆಂಜ಼ಾ ವಿಷಾಣುಗಳನ್ನೂ ಇದೇ ರೀತಿ ಗುರುತಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Baron S, Salton MR, Kim KS (1996). "Structure". In Baron S (ed.). Medical Microbiology (4th ed.). University of Texas Medical Branch at Galveston. ISBN 978-0-9631172-1-2. PMID 21413343. Archived from the original on 2021-07-06. Retrieved 2021-08-18.
  2. O'Donnell JA, Gelone SP (2009). "Bacterial Cause of PID: Gonorrhoeae". Pelvic Inflammatory Disease (in ಇಂಗ್ಲಿಷ್). Infobase Publishing. ISBN 978-1-4381-0159-0.
  3. Zapun A, Vernet T, Pinho MG (March 2008). "The different shapes of cocci". FEMS Microbiology Reviews. 32 (2): 345–360. doi:10.1111/j.1574-6976.2007.00098.x. PMID 18266741.
  4. Pommerville, J.C. (2013). Fundamentals of Microbiology (10th ed.). Sudbury, MA: Jones & Bartlett. p. 106. ISBN 9781449647964.
  5. Ryan, Kenneth James (4 January 2018). Sherris medical microbiology (7th ed.). New York: McGraw-Hill Education. ISBN 9781259859809. OCLC 983825627.
  6. Thjøtta, T; Bøe, J (1938). "Neisseria hemolysans. A Hemolytic Species of Neisseria trevisan". Acta Pathologica et Bacteriologica Scandinavica Supplement. 37: 527–531.
  7. BERGER, U. (1961-01-01). "A proposed new genus of gram-negative cocci: Gemella". International Bulletin of Bacteriological Nomenclature and Taxonomy. 11 (1): 17–19. doi:10.1099/0096266x-11-1-17.
  8. Ng LK, Martin IE (January 2005). "The laboratory diagnosis of Neisseria gonorrhoeae". The Canadian Journal of Infectious Diseases & Medical Microbiology. 16 (1): 15–25. doi:10.1155/2005/323082. PMC 2095009. PMID 18159523.
  9. George M. Garrity (2010-11-24). Bergey's Manual® of Systematic Bacteriology (2 ed.). Springer. ISBN 0387241442.
  10. ATCC
  11. UniProt
  12. Martin Dworkin; Stanley Falkow; Eugene Rosenberg; Karl-Heinz Schleifer; Erko Stackebrandt (2006-09-28). The Prokaryotes: Vol. 6: Proteobacteria: Gamma Subclass: A Handbook on the Biology of Bacteria (3 ed.). Springer. ISBN 038725496X.
  13. Branham, Sara E. (1930-04-18). "A New Meningococcus-like Organism (Neisseria flavescens n. sp.) from Epidemic Meningitis". Public Health Reports. 45 (16): 845–849. doi:10.2307/4579618. JSTOR 4579618.
  14. O'Donnell JA, Gelone SP (2009). "Bacterial Cause of PID: Gonorrhoeae". Pelvic Inflammatory Disease (in ಇಂಗ್ಲಿಷ್). Infobase Publishing. ISBN 978-1-4381-0159-0.
  15. Tan, Aik-Kah (2019-01-09). "Ophthalmia Neonatorum". New England Journal of Medicine (in ಇಂಗ್ಲಿಷ್). 380 (2): e2. doi:10.1056/NEJMicm1808613. PMID 30625059. S2CID 58654865.
  16. Manchanda V, Gupta S, Bhalla P (January 2006). "Meningococcal disease: history, epidemiology, pathogenesis, clinical manifestations, diagnosis, antimicrobial susceptibility and prevention". Indian Journal of Medical Microbiology. 24 (1): 7–19. doi:10.1016/S0255-0857(21)02464-6. PMID 16505549.
  17. Ryan KJ, Ray CG, eds. (2004). Sherris Medical Microbiology (4th ed.). McGraw Hill. ISBN 978-0-8385-8529-0.[page needed]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: