ಗ್ರಾಟ್ಸ್

ಗ್ರಾಟ್ಸ್ ಎನ್ನುವುದು ಆಸ್ಟ್ರಿಯ ದೇಶದ ಎರಡನೆಯ ದೊಡ್ಡ ನಗರ. ಸ್ಟಿರಿಯ ಒಕ್ಕೂಟ ರಾಜ್ಯದ ರಾಜಧಾನಿ. ವಿಯೆನ್ನದ ನೈಋತ್ಯಕ್ಕೆ 112 ಮೈ. ದೂರದಲ್ಲಿ, ಮೂರ್ ನದಿಯ ಎರಡೂ ದಂಡೆಗಳ ಮೇಲಿದೆ. ಜನಸಂಖ್ಯೆ 3,06,068 (1 ಜನವರಿ 2025).[೧]
ಭೂಗೋಳ
[ಬದಲಾಯಿಸಿ]ದಟ್ಟ ಕಾಡಿನಿಂದ ಕೂಡಿದ ಸ್ಟಿರಿಯನ್ ಆಲ್ಪ್ಸ್ ಶ್ರೇಣಿಯ ದಕ್ಷಿಣಕ್ಕೆ ಮೂರ್ ಕಣಿವೆಯ ಮುಖದ ಬಳಿ ಇರುವ ಈ ಪಟ್ಟಣದ್ದು ಮಹತ್ತ್ವದ ಸನ್ನಿವೇಶ. ಇದರ ಮುಂದೆ ವಿಶಾಲವೂ, ಫಲವತ್ತೂ ಆದ ಗ್ರೇಸರ್‌ಫೆಲ್ಟ್ ಮೈದಾನ ಹಬ್ಬಿದೆ.
ಆಕರ್ಷಣೆಗಳು, ಸಾರಿಗೆ
[ಬದಲಾಯಿಸಿ]ಪಟ್ಟಣದ ಉತ್ತಮ ಸ್ಥಳ ಷ್ಲಾಸ್‌ಬರ್ಗ್ (1552'). ಇದು ಸ್ಟಿರಿಯನ್ ಆಲ್ಪ್ಸ್‌ನ ಒಂದು ಹೊರ ಕವಲು. ಇಲ್ಲಿ ಹಲವು ಸುಂದರ ಉದ್ಯಾನವನಗಳುಂಟು. ಷ್ಲಾಸ್‌ಬರ್ಗಿನ ದಕ್ಷಿಣ ಇಳಿಜಾರಿನಲ್ಲಿ 1561 ರಲ್ಲಿ ನಿರ್ಮಿತವಾದ ಒಂದು ಗಡಿಯಾರ ಗೋಪುರವೂ,[೨] ಅದರ ಶಿಖರದ ಮೇಲೆ 1588 ರಲ್ಲಿ ಕಟ್ಟಲಾದ ಒಂದು ಘಂಟಾಗೋಪುರವೂ ಇವೆ.[೩] ಇದರ ಗಂಟೆಯ ತೂಕ 4 ಟನ್. ಷ್ಲಾಸ್‌ಬರ್ಗಿನ ಪಶ್ಚಿಮದಲ್ಲಿ ಮೂರ್ ನದಿಯೂ, ಪೂರ್ವದಲ್ಲಿ ಉದ್ಯಾನವೂ ಇವೆ. ನಗರದಲ್ಲಿ ಇತಿಹಾಸ ಪ್ರಸಿದ್ಧವಾದ ಅನೇಕ ಕಟ್ಟಡಗಳಿವೆ. 16 ನೆಯ ಶತಮಾನದಲ್ಲಿ ಪುನರುಜ್ಜೀವನ ಶೈಲಿಯಲ್ಲಿ ಕಟ್ಟಲಾದ ಲ್ಯಾಂಡ್‍ಹೌಸ್, 15 - 17 ನೆಯ ಶತಮಾನಗಳ ಆಯುಧ ಶಾಲೆ, ಜರ್ಮನ್ ಪುನರುಜ್ಜೀವನ ಶೈಲಿಯಲ್ಲಿ 19 ನೆಯ ಶತಮಾನದಲ್ಲಿ ಕಟ್ಟಲಾದ ಪುರಭವನ, 11 ನೆಯ ಶತಮಾನದಲ್ಲಿ ನಿರ್ಮಿಸಲಾದ, ಈಗ ಸರ್ಕಾರಿ ಕಚೇರಿಯಾಗಿರುವ ಕೋಟೆಮನೆ, 15 ನೆಯ ಶತಮಾನದಲ್ಲಿ ಸೇಂಟ್ ಏಜೀಡಿಯಸ್ ಕಥೆಡ್ರಲ್[೪][೫] - ಇವು ಮುಖ್ಯವಾದವು. ಗ್ರಾಟ್ಸ್‌ನಲ್ಲಿ ಒಂದು ವಿಶ್ವವಿದ್ಯಾಲಯವೂ, ಅನೇಕ ಶಾಲಾ ಕಾಲೇಜುಗಳೂ ಉಂಟು. ವಿಶ್ವವಿದ್ಯಾಲಯ 1586 ರಷ್ಟು ಹಳೆಯದು.[೬] ನಾಟ್ಯ ಶಾಲೆ, ಚಿತ್ರಶಾಲೆಗಳು ಇವೆ.
ಗ್ರಾಟ್ಸ್ ನಗರ ವಿಯೆನ್ನ - ಮಾರಿಬೊರ್ ರೈಲು ಮಾರ್ಗದಲ್ಲಿ ಒಂದು ಮುಖ್ಯ ನಿಲ್ದಾಣ. ಇಲ್ಲಿಂದ ಸ್ಲೊವೇನಿಯದ ಲ್ಯೂಬ್ಲಿಯಾನಾ, ಇಟಲಿಯ ಟ್ರಿಯೆಸ್ಟ್ ಮತ್ತು ಹಂಗರಿಯ ಸೋಂಬಾಟ್‌ಹೇಗಳಿಗೆ ರೈಲ್ವೆ ಸಂಪರ್ಕವುಂಟು. ವಿಮಾನ ನಿಲ್ದಾಣ ಇರುವುದು ಗ್ರಾಟ್ಸ್‌ನ ದಕ್ಷಿಣಕ್ಕೆ 5 ಮೈ. ದೂರದಲ್ಲಿ.
ವ್ಯಾಪಾರ
[ಬದಲಾಯಿಸಿ]ಕಬ್ಬಿಣ - ಉಕ್ಕು, ಸೂಕ್ಷ್ಮ ಸಲಕರಣೆ, ಭಟ್ಟಿ, ಚರ್ಮ, ಕಾಗದ, ಬಟ್ಟೆ - ಇವು ಇಲ್ಲಿಯ ಮುಖ್ಯ ಉದ್ಯಮಗಳು. ರೈಲ್ವೇ ಕಾಯಾಗಾರಗಳು ಇವೆ. ಮದ್ಯ, ಹಣ್ಣು ಇವುಗಳಿಗೆ ವ್ಯಾಪಾರಕೇಂದ್ರ.
ಇತಿಹಾಸ
[ಬದಲಾಯಿಸಿ]9 ನೆಯ ಶತಮಾನದಲ್ಲಿ ಬಹುಶಃ ಇಲ್ಲೊಂದು ಕೋಟೆಯಿತ್ತು. ಆ ಶತಮಾನದಲ್ಲಿ ಇದರ ಹೆಸರು ಮೊಟ್ಟಮೊದಲಿಗೆ ಕಾಣಬರುತ್ತದೆ. ಇದು ಪಟ್ಟಣದ ಹಕ್ಕು ಗಳಿಸಿದ್ದು 1240 ರಲ್ಲಿ.
ಇದು ಅನೇಕ ವರ್ಷಗಳ ಕಾಲ ಸ್ಟಿರಿಯದ ಕೇಂದ್ರವಾಗಿತ್ತು. 16 ನೆಯ ಶತಮಾನದಲ್ಲಿ ಇಲ್ಲಿ ಕೋಟೆಕೊತ್ತಲಗಳು ನಿರ್ಮಿತವಾದವು. ಪ್ರಸಿದ್ಧ ಜರ್ಮನ್ ಖಗೋಳ ಶಾಸ್ತ್ರಜ್ಞ ಯೋಹಾನ್ ಕೆಪ್ಲರ್ ಈ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ.[೭] ನೆಪೋಲಿಯಾನಿಕ್ ಯುದ್ಧಗಳ ಕಾಲದಲ್ಲಿ 1797 ಮತ್ತು 1805 ರಲ್ಲಿ ಗ್ರಾಟ್ ಫ್ರೆಂಚರಿಗೆ ವಶವಾಗಿತ್ತು. 19 ನೆಯ ಶತಮಾನದಲ್ಲಿ ಈ ನಗರ ತುಂಬ ಬೆಳೆಯಿತು. ಇದಕ್ಕೆ ನಗರದ ಸ್ಥಾನ ಲಭ್ಯವಾದ್ದು 1850 ರಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Zahlen + Fakten: Bevölkerung, Bezirke, Wirtschaft, Geografie - Stadtportal der Landeshauptstadt Graz".
- ↑ "Graz Uhrturm". Austria-Forum (in ಜರ್ಮನ್). Retrieved 26 November 2019.
- ↑ "Graz Glockenturm". Austria-Forum (in ಜರ್ಮನ್). Retrieved 26 November 2019.
- ↑ Brunnthaler, Christian. "Dom und Kathedrale zum Heiligen Ägydius". graz-dom.graz-seckau.at (in ಜರ್ಮನ್). Retrieved 2025-06-22.
- ↑ "Dom Graz". Austria-Forum (in ಜರ್ಮನ್). Retrieved 2025-06-22.
- ↑ "University of Graz". Catholic Encyclopedia (New Advent). 1909. Retrieved 7 January 2017.
- ↑
Clerke, Agnes Mary (1911). . Encyclopædia Britannica. Vol. 15 (11th ed.). pp. 749–751. {{cite encyclopedia}}: Cite has empty unknown parameters:|HIDE_PARAMETER=and|separator=(help)
