ಗ್ರನೈಕಸ್ ಕದನ

ಗ್ರನೈಕಸ್ ಕದನ ಎನ್ನುವುದು ಗ್ರನೈಕಸ್ ನದಿಯ ದಂಡೆಯ ಮೇಲೆ ಮ್ಯಾಸಿಡೋನಿಯದ ಅಲೆಗ್ಸಾಂಡರ್ ಮಹಾಶಯನಿಗೂ, ಪರ್ಷಿಯದ ಸೇನೆಗೂ ನಡುವೆ ಕಿ.ಪೂ. 334 ರಲ್ಲಿ ನಡೆದ ಕದನ. ಇದರಲ್ಲಿ ಪರ್ಷಿಯನ್ ಸೇನೆಗೆ ಸೋಲುಂಟಾಯಿತು.
ಅಲೆಗ್ಸಾಂಡರ್ ತನ್ನ ಪರ್ಷಿಯಾದ ದಂಡಯಾತ್ರೆಗಾಗಿ ಭಾರಿ ಸೈನ್ಯವನ್ನು ಸಜ್ಜುಗೊಳಿಸಿದ್ದ. ಅವನ ಸೇವೆಯಲ್ಲಿ ರಾವುತರು, ಭಲ್ಲೆಯವರು ಮತ್ತು ಬಿಲ್ಲಾಳುಗಳಿದ್ದರು. ಪರ್ಷಿಯನ್ ಸೇನೆ 20,000 ಗ್ರೀಕ್ ಕೂಲಿಯ ಕಾಲಾಳುಗಳು, 20,000 ಅಶ್ವಸೈನಿಕರಿಂದ ಕೂಡಿತ್ತೆಂದು ಏರಿಯನ್ ಎಂಬ ಗ್ರೀಕ್ ಇತಿಹಾಸಕಾರ ಹೇಳಿದ್ದಾನೆ. ಅವರ ಸೇನೆ ಗ್ರನೈಕಸ್ ನದಿಯ ಬಲದಂಡೆಯಲ್ಲಿ ಬಿಡಾರ ಹೂಡಿತ್ತು. ಅಲೆಗ್ಸಾಂಡರನ ಭಾರಿ ಸೈನ್ಯವನ್ನು ನೋಡಿದ ಪರ್ಷಿಯನ್ನರು ತಮ್ಮ ಎಡಕಕ್ಷೆಯನ್ನು ಬಲಪಡಿಸಿಕೊಂಡು ಸಜ್ಜಾದರು. ಉಗ್ರವಾದ ಹೋರಾಟ ಪ್ರಾರಂಭವಾಯಿತು. ಮ್ಯಾಸಿಡೋನಿಯನ್ನರು ಭಲ್ಲೆಯ ಮಳೆಯನ್ನು ಎದುರಿಸಿ ಪ್ರಯಾಸದಿಂದ ನದಿದಂಡೆಯನ್ನು ಏರಿದರು. ಅಲೆಗ್ಸಾಂಡರ್ ತನ್ನ ಸೇನಾಬಲವನ್ನು ಹೆಚ್ಚಿಸಿಕೊಂಡು ಪರ್ಷಿಯನ್ ಸೇನಾಧಿಕಾರಿಗಳಿದ್ದ ಭಾಗದ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ. ಪರ್ಷಿಯನ್ ದೊರೆ ಡೇರಿಯಸನ ಅಳಿಯನೂ, ಅವನ ಸಂಬಂಧಿಯೊಬ್ಬನೂ ಅಲೆಗ್ಸಾಂಡರಿನಿಂದ ಹತರಾದರು.[೧][೨] ಸಾವಿನ ದವಡೆಯಲ್ಲಿ ಸಿಕ್ಕಿದ್ದ ಅಲೆಗ್ಸಾಂಡರನನ್ನು ಅಶ್ವಸೇನೆಯ ನಾಯಕ ಕ್ಲೈಟಸ್ ರಕ್ಷಿಸಿದ.[೩][೪][೫]
ಆದರೆ ಕೊನೆಗೂ ಪರ್ಷಿಯನ್ನರು ಹಿಮ್ಮೆಟ್ಟಬೇಕಾಯಿತು. ಪಾರ್ಶ್ವಗಳಲ್ಲಿದ್ದ ಸೈನಿಕರು ಪಲಾಯನ ಮಾಡಿದರು. ಅಲೆಗ್ಸಾಂಡರನ ಉಳಿದ ಸೇನೆ ಸುಲಭವಾಗಿ ನದಿಯನ್ನು ದಾಟಿ ಪರ್ಷಿಯನ್ನರ ಕೂಲಿ ಸೈನಿಕರನ್ನು ಸುತ್ತುವರಿಯಿತು. ಕೈಸೆರೆಯಾದ ಗ್ರೀಕ್ ಕೂಲಿ ಸೈನಿಕರನ್ನು ಅವನು ಮ್ಯಾಸಿಡೋನಿಯಕ್ಕೆ ಕಷ್ಟದ ದುಡಿಮೆಗೆ ಕಳುಹಿಸಿದ. ಥೀಬ್ಸಿನ ಸೈನಿಕರನ್ನು ಬಿಡುಗಡೆ ಮಾಡಿದ. ಮ್ಯಾಸಿಡೋನಿಯನ್ನರು ಈ ಯುದ್ಧದಲ್ಲಿ ಹೆಚ್ಚಿನ ಕಷ್ಟ ನಷ್ಟಗಳನ್ನು ಅನುಭವಿಸಲಿಲ್ಲವೆಂದು ಅವರು ಕೇವಲ 115 ಜನರನ್ನು ಕಳೆದುಕೊಂಡರೆಂದೂ ಏರಿಯನ್ ಹೇಳಿದ್ದಾನೆ.[೬] ಈ ಗೆಲುವಿಗಾಗಿ ದೇವತೆಗಳಿಗೆ, ಮುಖ್ಯವಾಗಿ ಅಥೆನ ದೇವತೆಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಅಲೆಗ್ಸಾಂಡರ್ ಅಥೆನ್ಸಿಗೆ 300 ಜೊತೆ ಯುದ್ಧಕವಚಗಳನ್ನು ಕಳುಹಿಸಿಕೊಟ್ಟ.
ಉಲ್ಲೇಖಗಳು
[ಬದಲಾಯಿಸಿ]- ↑ Arrian, 1.15.7, 16.3
- ↑ Diodorus, 17.20.2, 21.3 (wrongly naming him Spithrodates)
- ↑ Mothe, Gordon De la (1993). Reconstructing the Black Image (in ಇಂಗ್ಲಿಷ್). Trentham Books. ISBN 978-0-948080-61-6.
- ↑ Arrian, Anabasis Alexandri, i. 12, 15, 16
- ↑ Plutarch, The Life of Alexander, 16.
- ↑ Arrian 1884, 1.16.4.
ಗ್ರಂಥಸೂಚಿ
[ಬದಲಾಯಿಸಿ]ಹೊರಗಿನ ಕೊಂಡಿಗಳು
[ಬದಲಾಯಿಸಿ]
