ಗ್ರನಾಡ

ಗ್ರನಾಡ ಎನ್ನುವುದು ದಕ್ಷಿಣ ಸ್ಪೇನಿನ ಆಂದಾಲುಸಿಯಾ ಪ್ರದೇಶದ ಒಂದು ನಗರ. ಅದೇ ಹೆಸರಿನ ಪ್ರಾಂತ್ಯದ ಮುಖ್ಯ ಪಟ್ಟಣ. ಮ್ಯಾಡ್ರಿಡ್ ನಗರದ ದಕ್ಷಿಣಕ್ಕೆ 225 ಮೈ. ದೂರದಲ್ಲಿದೆ. ಜನಸಂಖ್ಯೆ 2,33,680 (2021).[೧] ನಗರ ಸಮುದ್ರಮಟ್ಟದಿಂದ 2,421' ಎತ್ತರದಲ್ಲಿದೆ. ಸೈರಾ ನೆವೇಡ ಪರ್ವತಶೇಣಿಯ ವಾಯುವ್ಯ ಭಾಗದಲ್ಲಿ ಹೆನಿಲ್ ಮತ್ತು ದರೋ ನದಿಗಳ ಸಂಗಮಸ್ಥಾನವಿದು. ಗ್ರನಾಡದ ಮೂಲಕ ಹರಿಯುವ ದಾರೋ ನದಿಯ ಬಲಗಡೆ ಹಳೆಯ ನಗರ ಇದೆ. ಇಲ್ಲಿ ಮೋರ್ ಜನಾಂಗದವರ ಹಳೆಯ ಕಟ್ಟಡಗಳೂ, ಕಿರಿದಾದ ತಿರುವುಮುರುವಿರುವ ಬೀದಿಗಳೂ, ಸಣ್ಣ ಸಣ್ಣ ಚೌಕಗಳೂ ಇವೆ. ಗ್ರನಾಡ ಉತ್ತರದ ಕಡೆಯಲ್ಲಿ ವಿಸ್ತರಿಸಿದೆ. ಆಧುನಿಕ ಕಟ್ಟಡಗಳು ತಲೆಯೆತ್ತಿವೆ. ಆಹಾರ ಪದಾರ್ಥಗಳ ತಯಾರಿಕೆ, ಸಕ್ಕರೆ ಪರಿಷ್ಕರಣ - ಇವು ಇಲ್ಲಿಯ ಮುಖ್ಯ ಉದ್ಯಮಗಳು.[೨]
ಕಟ್ಟಡಗಳು
[ಬದಲಾಯಿಸಿ]ಗ್ರನಾಡ ನಗರದಲ್ಲಿ ಅನೇಕ ಭವ್ಯ ಕಟ್ಟಡಗಳುಂಟು. ಇವುಗಳಲ್ಲಿ ಬಹಳ ಮುಖ್ಯವಾದ್ದು ಕಥೆಡ್ರಲ್ ಕಟ್ಟಡ. ಇದು 1529-1703 ರಲ್ಲಿ ಪುನರುಜ್ಜೀವನ ಶೈಲಿಯಲ್ಲಿ ನಿರ್ಮಿತವಾಯಿತು. ಸ್ಪೇನಿನ ಖ್ಯಾತ ಕಲಾವಿದರ ಚಿತ್ರಕೃತಿಗಳು ಈ ಕಟ್ಟಡದಲ್ಲಿವೆ. ಕಥೆಡ್ರಲ್ ಬಳಕೆಯಲ್ಲೇ ಇರುವ ಚಾಪೆಲ್‌ನಲ್ಲಿ ಅರಸರ ಗೋರಿಗಳಿವೆ. ಅಪೂರ್ಣವಾಗಿರುವ 5 ನೆಯ ಚಾರ್ಲ್ಸ್‌ನ ಅರಮನೆ,[೩] ವಿಶ್ವವಿದ್ಯಾಲಯ, ಇಂಪೀರಿಯಲ್ ಕಾಲೇಜು, ಸೇಂಟ್ ಆನ್ ಮತು ಸ್ಯಾನ್ ಸಾಲ್ವಡಾರ್ ಚರ್ಚುಗಳು,[೪] ಸೇಂಟ್ ಎಲಿಜ಼ಬೆತ್ ಕಾನ್ವೆಂಟ್ - ಇವು ಇತರ ಭವ್ಯ ಕಟ್ಟಡಗಳ ಪೈಕಿ ಕೆಲವು. ಐತಿಹಾಸಿಕ ಮಹತ್ತ್ವದ್ದೂ, ಬಹು ಪ್ರಮುಖವೂ ಆದ ಸ್ಮಾರಕ ಅಲ್‌ಹಾಂಬ್ರ, ಕೆಂಪಿಟ್ಟಿಗೆಗಳನ್ನು ಉಪಯೋಗಿಸಿ ಮೋರ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕಟ್ಟಡಗಳ ಸಮೂಹ ಇದು. ಈ ಕಟ್ಟಡಗಳ ನಿರ್ಮಾಣ 1 ನೆಯ ಮುಹಮ್ಮದನ ಕಾಲದಲ್ಲಿ ಆರಂಭಗೊಂಡು,[೫][೬] 1 ನೆಯ ಯೂಸಫನ ಕಾಲದಲ್ಲಿ ಪೂರ್ಣಗೊಂಡುವು. ಅಲಂಕಾರ ಪಟ್ಟಿಕೆಗಳೂ, ಚಿತ್ರವಿಚಿತ್ರ ಅಲಂಕಾರಗಳೂ, ಬರೆಹಗಳೂ ಇಲ್ಲಿ ಕಂಡುಬರುತ್ತವೆ. ಅಲ್‌ಹಾಂಬ್ರದ ಎರಡು ವಿಭಾಗಗಳಲ್ಲಿ ಒಂದು ರಾಜರ ಮತ್ತು ರಾಜವಂಶದವರ ವಾಸಕ್ಕೂ, ಮತ್ತೊಂದು ಅಧಿಕಾರಿಗಳಿಗೂ ಸಭಾಸದರಿಗೂ ಮೀಸಲಾಗಿದ್ದುವು. ಅಲ್‌ಹಾಂಬ್ರದ ಪೊಮಿಗ್ರೇನೇಟ್ಸ್ ದ್ವಾರ, ರಾಯಭಾರಿಗಳ ಹಜಾರ, ಸಿಂಹಗಳ ಮೊಗಸಾಲೆ, ಮರ್ಟಲ್ ಪೊದರು ಸಸ್ಯಗಳ ಮೊಗಸಾಲೆ - ಇವೂ ಆಕರ್ಷಕವಾಗಿವೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ನಗರವಾದ ಇಲಿಬೆರೀಸಿನ ಪಾಳು ಪ್ರದೇಶದ ಬಳಿ ಗ್ರನಾಡವನ್ನು 7 ನೆಯ ಶತಮಾನದಲ್ಲಿ ಸ್ಥಾಪಿಸಲಾಯಿತು. 8ನೆಯ ಶತಮಾನದಲ್ಲಿ ಈ ಪ್ರದೇಶ ಮೋರರ ವಶವಾಯಿತು. 1015 ರವರೆಗೂ ಇದು ಉಮಾಯದ್ ಖಲೀಫರ ಆಳ್ವಿಕೆಗೊಳಪಟ್ಟಿತ್ತು. ಅನಂತರ ಆಲ್ಮೊರಾವಿಡರ ವಶಕ್ಕೆ ಬಂತು (1157).[೭] ಆಮೇಲೆ ನಾಸ್ರಿಡ್‌ಗಳ ಕೈಗೆ ಬಂದು (1238) ಸ್ವತಂತ್ರ ರಾಜ್ಯವೊಂದರ ರಾಜಧಾನಿಯಾಯಿತು. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಇದು ಅವರ ಸಂಸ್ಕೃತಿ ಮತ್ತು ನಾಗರಿಕತೆಗಳ ಕೇಂದ್ರ ಸ್ಥಾನವಾಗಿತ್ತು. ಇಬ್ನ್ ಖಾಲ್ದೂನ್ (1332 -1406), ಇಬ್ನ್ ಬತೂತ (1304-1368) ಮುಂತಾದ ಖ್ಯಾತ ಇತಿಹಾಸಕಾರರು ಗ್ರನಾಡದ ಸಂಸ್ಕೃತಿಗಳಿಂದ ಆಕರ್ಷಿತರಾಗಿದ್ದರು. 1492 ರಲ್ಲಿ ಫರ್ಡಿನೆಂಡ್ ದೊರೆ ಇದನ್ನು ಗೆದ್ದು ಮೋರರ ಆಳ್ವಿಕೆಯನ್ನು ಕೊನೆಗಾಣಿಸಿ, ಗ್ರನಾಡವನ್ನು ಸ್ಪೇನಿನೊಡನೆ ಸೇರಿಸಿದ. ಆಗ ಗ್ರನಾಡದ ಅವನತಿ ಆರಂಭವಾಯಿತು. ಸ್ಪೇನಿನವರ ದಾಳಿಯ ಫಲವಾಗಿ ಅಲ್‌ಹಾಂಬ್ರದ ಸೌಂದರ್ಯ ಕುಂಠಿತವಾಯಿತು. 1812 ರ ಫ್ರೆಂಚ್ ದಾಳಿಯೂ, 1821 ರಲ್ಲಿ ಸಂಭವಿಸಿದ ಒಂದು ಭೂಕಂಪವೂ ಇದರ ಹಲವು ಭಾಗಗಳನ್ನು ನಾಶಗೊಳಿಸಿದುವು.[೮] ಅಲ್‌ಹಾಂಬ್ರದ ಪುನರ್‌ನಿರ್ಮಾಣ ಕಾರ್ಯ 1828 ರಲ್ಲಿ ಪ್ರಾರಂಭವಾಯಿತು. ಅದರ ಹಿಂದಿನ ಮೌಲ್ಯಗಳ ಪುನಃಸ್ಥಾಪನೆಯ ಪ್ರಯತ್ನಗಳು ನಡೆದಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Granada in Granada (Andalucía)". City Population. Retrieved 14 April 2025.
- ↑ "Granada | province, Spain | Britannica". www.britannica.com (in ಇಂಗ್ಲಿಷ್). Archived from the original on 21 May 2022. Retrieved 15 June 2022.
- ↑ López 2011, pp. 65–70.
- ↑ "GRANADA MONUMENTS & MUSEUMS: INFORMATION, OPENING TIMES & PRICES". granadainfo.com. Archived from the original on 13 November 2021. Retrieved 13 November 2021.
- ↑ Arnold 2017, p. 234.
- ↑ García-Arenal, Mercedes (2014). "Granada". In Fleet, Kate; Krämer, Gudrun; Matringe, Denis; Nawas, John; Rowson, Everett (eds.). Encyclopaedia of Islam, Three. Brill. ISSN 1873-9830.
- ↑ Hourihane 2012.
- ↑ Chisholm (1911)
ಗ್ರಂಥಸೂಚಿ
[ಬದಲಾಯಿಸಿ]- López, Jesús Bermúdez (2011). The Alhambra and the Generalife: Official Guide. TF Editores. ISBN 9788492441129.
- Arnold, Felix (2017). Islamic Palace Architecture in the Western Mediterranean: A History. Oxford University Press. ISBN 9780190624552. Archived from the original on 24 November 2021. Retrieved 15 November 2021.
- Hourihane, Colum, ed. (2012). "Granada". Grove Encyclopedia of Medieval Art and Architecture. Oxford University Press. ISBN 978-0-19-539536-5. Retrieved 5 November 2014.
Chisholm, Hugh, ed. (1911). . Encyclopædia Britannica. Vol. 1 (11th ed.). Cambridge University Press. pp. 656–658. {{cite encyclopedia}}: Cite has empty unknown parameters:|separator=and|HIDE_PARAMETER=(help)
