ವಿಷಯಕ್ಕೆ ಹೋಗು

ಗ್ಯಾಸ್ಟ್ರೋಟ್ರೈಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಯಾಸ್ಟ್ರೋಟ್ರೈಕ
ಒಂದು ಗ್ಯಾಸ್ಟ್ರಟ್ರಿಕ್‍ನ ಅದೀಪ್ತಕ್ಷೇತ್ರದ ಛಾಯಾಚಿತ್ರ
ಥೌಮಾಸ್ಟೊಡರ್ಮಾ ರ್‍ಯಾಮುಲಿಫ಼ೆರಮ್‌ನ ಶೋಧನ ಇಲೆಕ್ಟ್ರಾನ್ ಸೂಕ್ಷ್ಮಲೇಖ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯಾ
ಉಪಸಾಮ್ರಾಜ್ಯ: ಯೂಮೆಟಜ಼ೋವಾ
ಏಕಮೂಲ ವರ್ಗ: ಪ್ಯಾರಾಹೊಕ್ಸೋಜ಼ೋವಾ
ಏಕಮೂಲ ವರ್ಗ: ಬೈಲ್ಯಾಟರಿಯಾ
ಏಕಮೂಲ ವರ್ಗ: ನೆಫ಼್ರೊಜ಼ೋವಾ
(ಶ್ರೇಣಿಯಿಲ್ಲದ್ದು): ಪ್ರೋಟೊಸ್ಟೋಮಿಯಾ
(ಶ್ರೇಣಿಯಿಲ್ಲದ್ದು): ಸ್ಪೈರೇಲಿಯಾ
ಏಕಮೂಲ ವರ್ಗ: ರೌಫ಼ೋಜ಼ೋವಾ
ವಿಭಾಗ: ಗ್ಯಾಸ್ಟ್ರೋಟ್ರೈಕ
Metschnikoff, 1865[]
ಗಣಗಳು
  • ಕೀಟೊನೋಟಿಡಾ
  • ಮ್ಯಾಕ್ರೊಡಸಿಯಿಡಾ

ಗ್ಯಾಸ್ಟ್ರೋಟ್ರೈಕ ಎನ್ನುವುದು ಆಸ್ಕೆಲ್‌ಮಿಂಥೀಸ್ ದುಂಡುಹುಳು ವಿಭಾಗಕ್ಕೆ ಸೇರಿದ ಒಂದು ವರ್ಗ. ೨೦೧೧ರ ವೇಳೆಗೆ ಸುಮಾರು 790 ಪ್ರಭೇದಗಳನ್ನು ವಿವರಿಸಲಾಗಿತ್ತು.[]

ದೈಹಿಕ ಗುಣಲಕ್ಷಣಗಳು

[ಬದಲಾಯಿಸಿ]

ಇವೆಲ್ಲವೂ ಸೂಕ್ಷ್ಮಗಾತ್ರದ ಅಕಶೇರುಕಗಳು. ಸಿಹಿನೀರು ಮತ್ತು ಉಪ್ಪು ನೀರಿನಲ್ಲಿ ಜೀವಿಸುತ್ತವೆ. ದೇಹ ನೀಳಾಕಾರದ್ದು. ಇದರಲ್ಲಿ ವಲಯ ವಿಭಜನೆಯಿಲ್ಲ. ದೇಹದ ಹಿಂಭಾಗದಲ್ಲಿ ಇಬ್ಭಾಗವಾದ ಬಾಲವಿದೆ. ಬಾಲದಲ್ಲಿರುವ ಗ್ರಂಥಿಗಳು ಸ್ರವಿಸುವ ದ್ರವದ ಸಹಾಯದಿಂದ ಈ ಪ್ರಾಣಿಗಳು ಆಸರೆಗಳಿಗೆ ಅಂಟುತ್ತವೆ. ದೇಹದ ಕೆಳಭಾಗದಲ್ಲಿ ನೀಳವಾದ ಶಿಲಕೆಗಳ ಪಟ್ಟೆಗಳಿವೆ. ಇವು ಪ್ರಾಣಿಗಳ ಚಲನೆಗೆ ನೆರವಾಗುತ್ತವೆ. ದೇಹದ ಮೇಲ್ಭಾಗದ ಪಾರದರ್ಶಕ ಕ್ಯೂಟಿಕಲ್ ಪೊರೆಯ ಮೇಲೆ ಅನೇಕ ಬಿರುಗೂದಲುಗಳಿವೆ. ದೇಹಾಂತರಾವಕಾಶ ಮಿಥ್ಯಾಸ್ವರೂಪದ್ದು. ದೇಹದ ಮುಂದಿನ ತುದಿಯಲ್ಲಿ ಬಾಯಿಯಿದೆ. ಇದರ ಸುತ್ತ ಸೂಕ್ಷ್ಮವಾದ ಮತ್ತು ಸಂವೇದನಾಶಕ್ತಿಯುಳ್ಳ ಕೂದಲಿನಂಥ ರಚನೆಗಳಿವೆ. ನೀರಿನಲ್ಲಿ ಬೆಳೆಯುವ ಸೂಕ್ಷ್ಮಜೀವಿಗಳೇ ಇವುಗಳ ಆಹಾರ. ಉಪ್ಪುನೀರಿನಲ್ಲಿ ವಾಸಿಸುವ ಪ್ರಭೇದಗಳು ದ್ವಿಲಿಂಗಿಗಳು. ಆದರೆ ಸಿಹಿನೀರುವಾಸಿಗಳು ಏಕಲಿಂಗಿಗಳು ಹಾಗೂ ಇವುಗಳಲ್ಲಿ ಹೆಣ್ಣುಗಳು ಮಾತ್ರ ಕಂಡುಬರುತ್ತವೆ. ಇದರಿಂದ ಇವುಗಳಲ್ಲಿ ಪಿತೃರಹಿತ ಪ್ರಜನನಕ್ರಿಯೆ ಮಾತ್ರ ನಡೆಯುತ್ತವೆ. ಈ ಗುಂಪಿನ ಪ್ರಾಣಿಗಳಲ್ಲಿನ ಮೊಟ್ಟೆಗಳ ಹೊರಕವಚ ಗಟ್ಟಿಯಾಗಿದ್ದು ಇತರ ವಸ್ತುಗಳಿಗೆ ಅಂಟಿಕೊಳ್ಳಲು ಸಹಾಯಕವಾಗುವ ರಚನೆಗಳನ್ನು ಪಡೆದಿವೆ. ಇವುಗಳ ಜೀವನಚರಿತ್ರೆಯಲ್ಲಿ ರೂಪಪರಿವರ್ತನೆಯಿಲ್ಲ.

ಉಪವರ್ಗಗಳು

[ಬದಲಾಯಿಸಿ]

ಗ್ಯಾಸ್ಟ್ರೋಟ್ರೈಕದಲ್ಲಿ ಮ್ಯಾಕ್ರೊಡಸಿಯಾಯ್ಡಿಯ ಮತ್ತು ಕೀಟೊನಾಯ್ಡಿಯ ಎಂಬ ಎರಡು ಉಪವರ್ಗಗಳಿವೆ.[] ಮ್ಯಾಕ್ರೊಡಸಿಸ್ ಮತ್ತು ಕೆಫಲೊಡಸಿಸ್ ಮೊದಲನೆಯ ಉಪವರ್ಗಕ್ಕೆ ಉದಾಹರಣೆಗಳಾದರೆ, ಕೀಟೋನೋಟಸ್ ಮತ್ತು ನಿಯೋಡಸಿಸ್ ಎರಡನೆಯ ಉಪವರ್ಗಕ್ಕೆ ಉದಾಹರಣೆಗಳು.

ಉಲ್ಲೇಖಗಳು

[ಬದಲಾಯಿಸಿ]
  1. Todaro, Antonio (2013). "Gastrotricha". WoRMS. World Register of Marine Species. Retrieved 2014-01-26.
  2. Zhang, Z.-Q. (2011). "Animal biodiversity: An introduction to higher-level classification and taxonomic richness" (PDF). Zootaxa. 3148: 7–12. doi:10.11646/zootaxa.3148.1.3. Archived (PDF) from the original on 2022-10-09.
  3. Ruppert, Edward E.; Fox, Richard, S.; Barnes, Robert D. (2004). Invertebrate Zoology, 7th edition. Cengage Learning. pp. 753–757. ISBN 978-81-315-0104-7.{{cite book}}: CS1 maint: multiple names: authors list (link)


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: