ವಿಷಯಕ್ಕೆ ಹೋಗು

ಗ್ಯಾಂಬಿಯ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಯೊಕೊಲೊ-ಕೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಗ್ಯಾಂಬಿಯ ನದಿ

ಗ್ಯಾಂಬಿಯ ಎನ್ನುವುದು ಪಶ್ಚಿಮ ಆಫ್ರಿಕದ ಒಂದು ನದಿ. ಗಿನಿ ಗಣರಾಜ್ಯದ ಫೂಟಾ ಜಲಾನ್ ಪ್ರಸ್ಥಭೂಮಿಯಲ್ಲಿ ಸಮುದ್ರಕ್ಕೆ ಕೇವಲ 150 ಮೈ. ದೂರದಲ್ಲಿ ಹುಟ್ಟಿ, ಮೊದಲು ಈಶಾನ್ಯಾಭಿಮುಖವಾಗೂ, ಅನಂತರ ಪಶ್ಚಿಮಾಭಿಮುಖವಾಗೂ, ಒಟ್ಟು ಸು. 700 ಮೈ. ದೂರ ಹರಿದು ಅಟ್ಲಾಂಟಿಕ್ ಮಹಾಸಾಗರವನ್ನು ಸೇರುತ್ತದೆ. ಅದು ಪಶ್ಚಿಮದ ಕಡೆಗೆ ತಿರುವುಗುವುದು ನೆರಿ ಚೊ ನದಿಯೊಂದಿಗೆ ಸೇರುವೆಡೆಯಲ್ಲಿ, ಅದರ ಮುಖ್ಯ ಉಪನದಿಗೆ ಗ್ರೇ. ಟೆಂಡಾ ಬೆಟ್ಟಗಳಿಂದ ಉತ್ತರಕ್ಕೆ ಹರಿದು ಗ್ಯಾಂಬಿಯ ರಾಜ್ಯದ ಎಲ್ಲೆಗೆ 25 ಮೈ. (40 ಕಿ.ಮೀ) ದೂರದಲ್ಲಿ ಗ್ಯಾಂಬಿಯ ನದಿಯನ್ನು ಸೇರುತ್ತದೆ. ರಾಜ್ಯದ ಗಡಿಯಲ್ಲಿ ವೇಗವಾಗಿ ಇಳಿಯುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳ ಮಧ್ಯೆ ನದಿಯಲ್ಲಿ ಪ್ರವಾಹ. ನದಿ ಸಮುದ್ರ ಸೇರುವೆಡೆಯಿಂದ 93 ಮೈ. (150 ಕಿಮೀ) ದೂರದಲ್ಲಿಯ ಎಲಿಫೆಂಟ್ ದ್ವೀಪದ ಬಳಿ ಅದು ಮತ್ತೆ ಪಶ್ಚಿಮದ ಕಡೆಗೆ ತಿರುಗುತ್ತದೆ. ಅಲ್ಲಿ ಸಾಮನ್ಯವಾಗಿ ನದಿಯ ನೀರು ಉಪ್ಪು. ಮಳೆಗಾಲದಲ್ಲಿ ಸಮುದ್ರದಿಂದ 130 ಕಿಮೀ. ದೂರದ ಬಲಿಂಗೊವರೆಗೆ ನೀರು ಉಪ್ಪಾಗಿರುತ್ತದೆ. ಕೆಲವು ವೇಳೆ 240 ಕಿಮೀ. ದೂರದ ಕುನ್ತೌರ್‌‌ವರೆಗೂ ನದಿ ಉಪ್ಪು ನೀರಿನಿಂದ ಕೂಡಿರುವುದುಂಟು. ನದಿಯ ಎರಡು ದಂಡೆಗಳನ್ನೂ ಗುಲ್ಮ ವೃಕ್ಷಗಳು ಆವರಿಸಿಕೊಂಡಿವೆ. ಇಲ್ಲಿ ನದಿಯ ಪಾತ್ರ ಹೆಚ್ಚು ಅಗಲ. ಎಲಿಫೆಂಟ್ ದ್ವೀಪದ ಬಳಿಯಿಂದಲೇ ನದಿಯ ಅಳಿವೆ ಪ್ರಾರಂಭವಾಗುತ್ತದೆನ್ನಬಹುದು. ಅಲ್ಲಿ 1 ಮೈ. ಅಗಲವಿರುವ ನದಿ, ಬ್ಯಾತರ್ಸ್ಟ್ ರೇವಿನ (ಬ್ಯಾತರ್ಸ್ಟ್ ಎಂಬುದು ಹಳೆಯ ಹೆಸರು, ಇದನ್ನು ಈಗ ಬಾಂಜುಲ್ ಎಂದು ಕರೆಯಲಾಗುತ್ತದೆ)[] ಬಳಿ 7 ಮೈ. ಅಗಲವಾಗಿದೆ. ಆದರೆ ಬ್ಯಾತರ್ಸ್ಟ್‌ನ್ನೊಳಗೊಂಡಿರುವ ಸೇಂಟ್ ಮೇರಿ ದ್ವೀಪದ ದಕ್ಷಿಣ ಚಾಚಿಗೂ, ಅದರ ಎದುರಿಗಿನ ದಡಕ್ಕೂ ನಡುವೆ ನದಿಯ ಅಗಲ 2 1/2 ಮೈ. ಅಳಿವೆ ಕೆಳಭಾಗದಲ್ಲಿ ಪಾತ್ರದ ನಡುವೆ 3/4 ಮೈ. ಅಗಲದ ನಾಲೆಯಲ್ಲಿ ಹಡಗು ಸಂಚಾರಕ್ಕೆ ಸೌಲಭ್ಯವುಂಟು. ಆದರೆ ಬ್ಯಾತರ್ಸ್ಟಗೂ, ಸಮುದ್ರಕ್ಕೂ ನಡುವೆ ಎರಡು ಎಡೆಗಳಲ್ಲಿ ನದಿ ತೀವ್ರವಾಗಿ ತಿರುಗುತ್ತದೆ. ನದೀಮುಖಕ್ಕೆ ಅಡ್ಡಲಾಗಿ ಇರುವ ಅಡಚಣೆಯಿಂದಾಗಿ ಹಡಗಿನ ಪ್ರವೇಶಕ್ಕೆ 26' ಅಗಲದಷ್ಟು ಮಾತ್ರ ಅವಕಾಶವುಂಟು. ಸಣ್ಣ ಹಡಗುಗಳು ಇದರ ಮೂಲಕ ಸ್ವಲ್ಪ ದೂರದವರೆಗೆ ಹೋಗಿ ಬರಬಹುದು.

ಇತಿಹಾಸ

[ಬದಲಾಯಿಸಿ]

ಕಾರ್ತೇಜ್‌ನ ಅನ್ವೇಷಕನಾದ ಹ್ಯಾನೊ ಕ್ರಿ.ಪೂ. ಐದನೇ ಶತಮಾನದ ತನ್ನ ಪ್ರಯಾಣದ ವೇಳೆ ಗ್ಯಾಂಬಿಯಾ ತಲುಪಿರಬಹುದು.[]

ಟಾಲೆಮಿಗೂ, ಅರಬ್ ಭೂಗೋಳಶಾಸ್ತ್ರಜ್ಞರಿಗೂ ಗ್ಯಾಂಬಿಯ ನದಿ ಗೊತ್ತಿತು. 1291ರ ಇಟಲಿಯ ಜಿನೋವ ನಗರದ ನಾವಿಕರು ಗ್ಯಾಂಬಿಯ ನದಿಯವರೆಗೂ ಬಂದಿದ್ದಿರಬಹುದು. ಪೋರ್ಚುಗೀಸರಂತೂ ಇದನ್ನು ಕಂಡದ್ದು ನಿಜ. ಆದರೆ ಗ್ಯಾಂಬಿಯ ನದಿಯನ್ನು ಮೊದಲು ಪರಿಶೋಧಿಸಿದವನು (1455) ವೆನಿಸಿನ ಅಲ್‍ವಿಸ್ ಕಡಮೊಸ್ತೊ. ಅನಂತರ ಒಳನಾಡನ್ನು ಪರಿಶೋಧಿಸಿದವರು ಗ್ಯಾಂಬಿಯದ ಮೂಲಕ ಹೋಗುತ್ತಿದ್ದರು. ಅವರಲ್ಲಿ ಪ್ರಮುಖನಾದವನು ಮುಂಗೊ ಪಾರ್ಕ್. ಆತ 1795 ಮತ್ತು 1805 ರಲ್ಲಿ ಕೈಗೊಂಡ ಎರಡು ಪ್ರವಾಸಗಳನ್ನೂ ಈ ನದಿಯಿಂದಲೇ ಆರಂಭಿಸಿದ.[] ಗ್ಯಾಂಬಿಯದ ಉಗಮ ಸ್ಥಳವನ್ನು ಪತ್ತೆ ಹಚ್ಚಿದವನು (1818) ಗ್ಯಾಸ್ಪರ್ಡ್ ಮೋಲೀನ್ ಎಂಬ ಫ್ರೆಂಚ್ ಪ್ರಜೆ.[] ನದಿಯ ಮಧ್ಯಭಾಗವನ್ನು ಪರಿಶೋಧಿಸಿದವರು ಆರ್. ಜೆ. ಮ್ಯಾಕ್‌ಡಾನೆಲ್ (1851) ಮತ್ತು ವಿ. ಎಸ್. ಗೌಲ್ಡ್ಸ್‌ಬರಿ (1881). ಮ್ಯಾಕ್‌ಡಾನೆಲ್ ಅದನ್ನು ಪರಿಶೋಧಿಸಿದ ಕಾಲದಲ್ಲಿ ಆ ವಸಾಹತಿನ ರಾಜ್ಯಪಾಲನಾಗಿದ್ದ.

ಉಲ್ಲೇಖಗಳು

[ಬದಲಾಯಿಸಿ]
  1. "Gambia: The Post-Colonial Period, Part III" (in English). Gambia. Archived from the original on 11 ಡಿಸೆಂಬರ್ 2022. Retrieved 11 December 2022.{{cite news}}: CS1 maint: unrecognized language (link)
  2. "Kunta Kinteh Island and Related Sites". UNESCO World Heritage Centre. United Nations Educational, Scientific, and Cultural Organization. Accessed 14/8/22.
  3. Capt. Washington. "Some Account of Mohammedu-Siseï, a Mandingo, of Nyáni-Marú on the Gambia." The Journal of the Royal Geographical Society of London, vol. 8, 1838, pp. 448–54. JSTOR, https://doi.org/10.2307/1797825. Accessed 27 Jul. 2022.
  4. Archive.org Découverte des sources du Sénégal et de la Gambie en 1818


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: