ವಿಷಯಕ್ಕೆ ಹೋಗು

ಗ್ಯಾಂಟನ ಕಾರ್ಯ ಮತ್ತು ಬೋನಸ್ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಯಾಂಟನ ಕಾರ್ಯ ಮತ್ತು ಬೋನಸ್ ಪದ್ಧತಿ ಎನ್ನುವುದು ವೈಜ್ಞಾನಿಕ ವ್ಯವಸ್ಥಾಪನೆಯ ಪಿತನೆನಿಸಿದ ಫ್ರೆಡರಿಕ್ ಟೇಲರನೊಂದಿಗೆ ಕೆಲಸ ಮಾಡುತ್ತಿದ್ದ ಹೆನ್ರಿ ಎಲ್ ಗ್ಯಾಂಟ್ ಎಂಬವನು ರೂಪಿಸಿದ ಕೂಲಿ ಪಾವತಿ ಪದ್ಧತಿ (ಗ್ಯಾಂಟ್ ಟ್ಯಾಸ್ಕ್ ಅಂಡ್ ಬೋನಸ್ ಸಿಸ್ಟೆಂ).[][] ಒಂದು ಕಾರ್ಖಾನೆಯಲ್ಲಿಯ ಕೆಲಸದ ಸ್ವರೂಪ ಮತ್ತು ಪರಿಸ್ಥಿತಿಗಳ ಅಧ್ಯಯನಮಾಡಿ, ಅತ್ಯಂತ ಸಮರ್ಪಕ ಪರಿಸ್ಥಿತಿಯಲ್ಲಿ ಒಬ್ಬ ಪ್ರಸಾಮಾನ್ಯ ಕಾರ್ಮಿಕನ ಸಾಮರ್ಥ್ಯ ಎಷ್ಟಿರುತ್ತದೆಂಬುದನ್ನು ನಿರ್ಧರಿಸಲಾಗುತ್ತದೆ. ಇದರ ಆಧಾರದ ಮೇಲೆ ಒಂದು ನಿಗದಿಯಾದ ಸಮಯದಲ್ಲಿ ನಿರ್ದಿಷ್ಟವಾದ ಕಾರ್ಯವನ್ನು ಮಾಡಲಾಗುತ್ತದೆ. ಒಬ್ಬ ಕಾರ್ಮಿಕ ಆ ಕಾರ್ಯವನ್ನು ಆ ಸಮಯದಲ್ಲಿ ಮುಗಿಸಿದ ಪಕ್ಷದಲ್ಲಿ ಅವನಿಗೆ ಅವನ ಕೂಲಿಯ ಜೊತೆಗೆ ಆ ಕಾರ್ಯಕ್ಕೆ ಗೊತ್ತುಮಾಡಲಾದ ಶಿಷ್ಟ ಸಮಯದ (ಸ್ಟಾಂಡರ್ಡ್ ಟೈಂ) ಸೇ. 25 ರಿಂದ ಸೇ.50ರ ವರೆಗೆ ಅಧಿಕ ಸಮಯದ ಸಂಭಾವನೆ ಲಭ್ಯವಾಗುತ್ತದೆ. ಇದು ಅಧ್ಯಂಶ ಅಥವಾ ಬೋನಸ್. ನಿಗದಿಯಾದ ಸಮಯದಲ್ಲಿ ನಿರ್ದಿಷ್ಟವಾದ ಕೆಲಸವನ್ನು ಅವನು ಮಾಡದಿದ್ದ ಪಕ್ಷದಲ್ಲಿ ಅವನಿಗೆ ನಿಗದಿಯಾದ ದರದಲ್ಲಿ ಕೂಲಿ ಮಾತ್ರ ದೊರಕುತ್ತದೆ. ಹೀಗಾಗಿ, ಅಷ್ಟೇನೂ ದಕ್ಷನಲ್ಲದ ಕಾರ್ಮಿಕನಿಗೆ ಕನಿಷ್ಠ ವೇತನದ ಖಾತರಿ ಇರುತ್ತದೆ. ಇದು ಮಾನವೀಯ ದೃಷ್ಟಿಯಿಂದ ಅಗತ್ಯ. ಆದರೆ ದಕ್ಷನಾದ ಕಾರ್ಮಿಕನಿಗೆ ಅವನ ದಕ್ಷತೆಗೆ ಅನುಗುಣವಾಗಿ ಅಧಿಕ ಸಂಪಾದನೆ ಆಗುತ್ತದೆ. ಅವನ ದಕ್ಷತೆಗೆ ತಕ್ಕ ಪ್ರತಿಫಲ ಲಭ್ಯವಾಗುತ್ತದೆ.

ಸಮೀಕರಣಗಳು

[ಬದಲಾಯಿಸಿ]

ನಿಗದಿಯಾದ ಮಟ್ಟದವರೆಗೆ ಕಾರ್ಮಿಕನ ಸಂಪಾದನೆ (E) ಅವನ ಕೆಲಸದ ವೇಳೆ (T) ಮತ್ತು ನಿಗದಿಯಾದ ಕೂಲಿದರ (R)-- ಇವಕ್ಕೆ ಅನುಗುಣವಾಗಿರುತ್ತದೆ. ಎಂದರೆ:

E = TR

ಕಾರ್ಮಿಕನ ನಿಗದಿಯಾದ ಮಟ್ಟವನ್ನು ನಿಲುಕಿದರೆ ಅಥವಾ ಅದನ್ನೂ ಮೀರಿದರೆ ಅವನ ಸಂಪಾದನೆಗೂ (E), ನಿಗದಿಯಾದ ಅವಧಿಯ ಕೂಲಿದರಕ್ಕೂ (R), ನಿಗದಿಯಾದ ಕಾರ್ಯವನ್ನು ಪೂರೈಸಲು ನಿರ್ಧರಿಸಲಾದ ಶಿಷ್ಟ ಸಮಯಕ್ಕೆ (S) ಇರುವ ಸಂಬಂಧವನ್ನು ಮುಂದಿನ ಸಮೀಕರಣ ಸೂಚಿಸುತ್ತದೆ:

E = (S+pS) R

(ಮೇಲಣ ಸಮೀಕರಣದಲ್ಲಿ p ಎಂಬುದು ಕಾರ್ಯವನ್ನು ಪೂರೈಸಲು ನಿಗದಿಯಾದ ಶಿಷ್ಟಸಮಯದ ಶತಾಂಶ)

ಉದಾಹರಣೆಗಳು

[ಬದಲಾಯಿಸಿ]

ಒಂದು ಮೋಟಾರು ಕಾರ್ಖಾನೆಯಲ್ಲಿ ಒಬ್ಬ ಪ್ರಸಾಮಾನ್ಯ ಕಾರ್ಮಿಕ 8 ಗಂಟೆಗಳ ದುಡಿತದ ದಿನದಲ್ಲಿ 32 ಚಕ್ರಗಳನ್ನು ಜೋಡಿಸಬಹುದೆಂದು ನಿರ್ಧರಿಸಲಾಗಿದೆಯೆಂದೂ, ಅವನ ದಿನಗೂಲಿ ದರ ರೂ. 8 (ಗಂಟೆಗೆ 1 ರೂ.) ಎಂದೂ, ನಿರ್ಧರಿಸಲಾದ ಸಮಯದ ಸೇ. 25 ರಷ್ಟು ಬೋನಸ್ಸನ್ನು ನೀಡಲು ಕಾರ್ಖಾನೆ ತೀರ್ಮಾನಿಸಿದೆಯೆಂದು ಭಾವಿಸೋಣ. ಒಂದು ಚಕ್ರವನ್ನು ಜೋಡಿಸಲು ನೀಡಲಾದ ಸಮಯ 0.25 ಗಂಟೆ. A ಎಂಬ ಒಬ್ಬ ಕಾರ್ಮಿಕ 8 ಗಂಟೆಗಳ ದುಡಿತದ ದಿನದಲ್ಲಿ 30 ಚಕ್ರಗಳನ್ನಷ್ಟೇ ಜೋಡಿಸಿದರೆ ಅವನಿಗೆ ಆ ದಿನದ ಕೂಲಿ ಮಾತ್ರ (ರೂ. 8) ದೊರಕುತ್ತದೆ.  B ಎಂಬ ಇನ್ನೊಬ್ಬ ಕೆಲಸಗಾರ 8 ಗಂಟೆಗಳ ದುಡಿತದ ದಿನಕ್ಕೆ ನಿಗದಿಯಾದ 32 ಚಕ್ರಗಳನ್ನು ಆ ಆವಧಿಯಲ್ಲಿ ಜೋಡಿಸಿ ಪೂರೈಸಿದರೆ ಅವನ ಸಂಪಾದನೆ ಹೀಗಿರುತ್ತದೆ:

E = ರೂ. (8 + 1/4x8) x 1 = ರೂ. 10

C ಎಂಬುವನು 8 ಗಂಟೆಗಳ ದಿನದಲ್ಲಿ 36 ಚಕ್ರಗಳನ್ನು ಜೋಡಿಸಿದ ಪಕ್ಷದಲ್ಲಿ, ಅಷ್ಟು ಸಂಖ್ಯೆಯ ಚಕ್ರಗಳನ್ನು ಜೋಡಿಸಲು ನೀಡಲಾದ ಶಿಷ್ಟ ಸಮಯದ (0.25x36 ಗಂಟೆ) ಕೂಲಿಯ ಜೊತೆಗೆ ಆ ಸಮಯದ ಸೇ.25 ರಷ್ಟಕ್ಕೆ ( ಗಂಟೆ) ಸಲ್ಲಬೇಕಾದ ಕೂಲಿಯನ್ನು ಬೋನಸ್ಸಾಗಿ ಕೊಡಲಾಗುತ್ತದೆ:

E = ರೂ.  X 1 = ರೂ. 11¼

ಶಿಷ್ಟಮಟ್ಟಕ್ಕಿಂತ ಕಡಿಮೆ ಉತ್ಪಾದಿಸುವ ಕಾರ್ಮಿಕನಿಗೆ ದಿನದ ದರದ ಕೂಲಿಯ ಭರವಸೆ ಇರುವುದೂ, ಶಿಷ್ಟಮಟ್ಟದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉತ್ಪಾದಿಸುವವನಿಗೆ ಉತ್ಪಾದನಾಗುಣವಾದ ಕೂಲಿ ದೊರಕುವುದೂ ಈ ಪದ್ಧತಿಯ ವೈಶಿಷ್ಟ್ಯ. ಇದೊಂದು ಸರಳ ವಿಧಾನ. ಮಾನವೀಯ ದೃಷ್ಟಿ, ಹೆಚ್ಚು ದಕ್ಷತೆಯಿಂದ ಕೆಲಸ ಮಾಡಲು ಉತ್ತೇಜನ-- ಎರಡಕ್ಕೂ ಇದರಲ್ಲಿ ಹೊಂದಿಸಲಾಗಿದೆ. ಕೆಲಸಗಾರ ಹೆಚ್ಚು ದಕ್ಷನೂ, ಕುಶಲನೂ ಆಗುವಂತೆ ತರಬೇತು ನೀಡುವುದಕ್ಕೂ ಗಮನ ನೀಡಲಾಗುತ್ತದೆ. ಒಬ್ಬ ಫೋರ್‌ಮನನ (ಕಾರ್ಯ ಪ್ರಮುಖ ಅಥವಾ ಮೇಸ್ತ್ರಿ) ಅಧೀನದಲ್ಲಿರುವ ಕೆಲಸಗಾರರ ಪೈಕಿ ನಿರ್ದಿಷ್ಟ ಸಂಖ್ಯೆಯ ಕಾರ್ಮಿಕರು ಬೋನಸ್ ಸಂಪಾದಿಸಿದರೆ ಅಂಥ ಫೋರ್‌ಮನನಿಗೂ ಬೋನಸ್ ನೀಡಲಾಗುವುದರಿಂದ, ತನ್ನ ಕೈಕೆಳಗಿನ ಕಾರ್ಮಿಕರು ಹೆಚ್ಚು ದಕ್ಷರಾಗುವಂತೆ ಮಾಡಲೂ, ಉತ್ಪಾದನೆಗೆ ಇರುವ ತಡೆಗಳನ್ನು ನಿವಾರಿಸಲೂ ಅವನಿಗೆ ಕಣಿಗು, ಉತ್ತೇಜನ ನೀಡಿದಂತಾಗುತ್ತದೆ.

ಉಪಸಂಹಾರ

[ಬದಲಾಯಿಸಿ]

ಗ್ಯಾಂಟನ ಕೂಲಿ ಪಾವತಿ ವಿಧಾನ ಅನೇಕ ಕಾರ್ಖಾನೆಗಳಲ್ಲಿ ಯಶಸ್ವಿಯಾಗಿದೆಯಾದರೂ ಕಾರ್ಮಿಕರಲ್ಲಿ ಬೋನಸ್ ಸಂಪಾದಿಸುವವರು, ಸಂಪಾದನೆ ಮಾಡಲಾಗದವರು ಎಂಬ ಎರಡು ವರ್ಗಗಳನ್ನು ನಿರ್ಮಿಸುವುದಾದ್ದರಿಂದ ಇದು ಒಳ್ಳೆಯ ಪದ್ಧತಿ ಅಲ್ಲವೆಂದು ಟೀಕಿಸಲಾಗಿದೆ. ಆದರೆ ದಕ್ಷತೆಗೆ ಉತ್ತೇಜನ ನೀಡುವ ಎಲ್ಲ ಪದ್ಧತಿಗಳಲ್ಲೂ ಇಂಥ ಅಂತರ ಅನಿವಾರ್ಯವೆಂಬುದು ಈ ಟೀಕೆಗೆ ನೀಡಲಾಗಿರುವ ಉತ್ತರ.

ಉಲ್ಲೇಖಗಳು

[ಬದಲಾಯಿಸಿ]
  1. https://www.tutorsglobe.com/homework-help/cost-accounting/gantt-task-and-bonus-system-7958.aspx
  2. "ಆರ್ಕೈವ್ ನಕಲು". Archived from the original on 2017-06-25. Retrieved 2025-05-27.