ಗ್ಡಿನ್ಯಾ

ಗ್ಡಿನ್ಯಾ ಎನ್ನುವುದು ಪೋಲೆಂಡಿನ ಒಂದು ನಗರ, ರೇವುಪಟ್ಟಣ. ಗ್ಡನ್ಸ್ಕ್ ಪ್ರಾಂತ್ಯದಲ್ಲಿ, ಡ್ಯಾನ್ಸ್‌ಗ್ ಖಾರಿಯಲ್ಲಿ, ಡ್ಯಾನ್ಸಿಗ್‌ಗೆ 10 ಮೈ. ದೂರದಲ್ಲಿದೆ. ಜನಸಂಖ್ಯೆ 2,57,000 (2021).[೧] 1919 ರ ವರ್ಸೆಲ್ಸ್ ಕೌಲಿನ ಪ್ರಕಾರ ಪೋಲೆಂಡಿಗೆ ಹಿಂದಿರುಗಿಸಲಾದ ಬಾಲ್ಟಿಕ್ ಕರಾವಳಿಯ ಸಣ್ಣ ಮೀನುಗಾರರ ಗ್ರಾಮವಾಗಿದ್ದ ಗ್ಡಿನ್ಯಾವನ್ನು ಪೋಲಿಷ್ ಸರ್ಕಾರ ಡ್ಯಾನ್ಸಿಗ್‌ಗೆ ಪ್ರತಿಯಾಗಿ ಒಂದು ಬಂದರಾಗಿ ಪರಿವರ್ತಿಸಿತು. 1924 ರಿಂದ ಈಚೆಗೆ ಅದು ಬಾಲ್ಟಿಕ್ ಕರಾವಳಿಯ ಪ್ರಮುಖ ರೇವುಪಟ್ಟಣವಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನರು ಇದನ್ನು ಆಕ್ರಮಿಸಿಕೊಂಡರು. ಇದರ ಹೆಸರು ಗೋಟೆನ್‌ಹ್ಯಾಫೆನ್ ಎಂದು ಬದಲಾವಣೆಗೊಂಡಿತು. ಹಲವು ಪೋಲಿಷರು ಕೊಲೆಗೆ ಈಡಾದರು. ಅನೇಕರು ದೇಶಭ್ರಷ್ಟರಾದರು. ಅವರ ಆಸ್ತಿಯನ್ನು ಜರ್ಮನರು ವಶಪಡಿಸಿಕೊಂಡರು. ಜರ್ಮನರು ಸೋತು ಹಿನ್ನಡೆಯುತ್ತಿದ್ದಾಗ ಬಂದರನ್ನು ಬಹುತೇಕ ನಾಶಗೊಳಿಸಿದ್ದರು. ಯುದ್ಧಾನಂತರ ಕಾಲದಲ್ಲಿ ಬಂದರು ಸ್ಥಾವರಗಳು ಮತ್ತೆ ನಿರ್ಮಿತವಾದುವು. ವಿಶ್ವಯುದ್ಧದ ನಂತರ ಗ್ರೀಕ್ ಅಂತಃಕಲಹದ ನಿರಾಶ್ರಿತರು ಈ ನಗರದಲ್ಲಿ ನೆಲೆಸಿದರು.[೨] ಈಗ ಇದು ಡ್ಯಾನ್ಸಿಗ್ ಮತ್ತು ಸಾಪಾಟ್‌ಗಳೊಂದಿಗೆ ಒಂದು ಬಂದರಾಗಿದೆ. ಇದು ಪೋಲಿಷ್ ನೌಕಾನೆಲೆ, ಪ್ರಯಾಣಿಕ ಹಡಗು ಬಂದರು. ಕಲ್ಲಿದ್ದಲು, ನಾಟಾ, ಸಕ್ಕರೆ, ರಫ್ತಾಗುತ್ತದೆ. ಕಬ್ಬಿಣ, ಅದಿರು, ಗೊಬ್ಬರ, ಆಹಾರ ಪದಾರ್ಥ ಇವು ಆಮದುಗಳು. ರಾಜ್ಯ ನೌಕಾಶಾಲೆ, ಆಳಸಾಗರ ಮೀನುಗಾರಿಕೆ ತಾಂತ್ರಿಕ ಕಾಲೇಜು, ಸಮುದ್ರ ಮೀನುಗಾರಿಕೆ ಸಂಸ್ಥೆ, ನೌಕಾ ವಸ್ತುಸಂಗ್ರಹಶಾಲೆ - ಇವು ಇಲ್ಲಿಯ ಮುಖ್ಯ ಸಂಸ್ಥೆಗಳು. ಇಲ್ಲೊಂದು ನಾಟ್ಯ ಶಾಲೆಯೂ ಇದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Local Data Bank". Statistics Poland. Archived from the original on 22 April 2019. Retrieved 21 July 2022. Data for territorial unit 2262000.
- ↑ Kubasiewicz, Izabela (2013). "Emigranci z Grecji w Polsce Ludowej. Wybrane aspekty z życia mniejszości". In Dworaczek, Kamil; Kamiński, Łukasz (eds.). Letnia Szkoła Historii Najnowszej 2012. Referaty (in ಪೊಲಿಶ್). Warsaw: IPN. p. 117.
