ಗೌವರ್

ಗೌವರ್ ಎನ್ನುವುದು ವೇಲ್ಸಿನ ಪಶ್ಚಿಮ ಗ್ಲಮಾರ್ಗನಿನ ಒಂದು ಪರ್ಯಾಯ ದ್ವೀಪ; ಗ್ರಾಮೀಣ ಜಿಲ್ಲೆ. ಇದರ ಉತ್ತರದಲ್ಲಿ ಬರ‍್ರೀ ಖಾರಿಯೂ ದಕ್ಷಿಣದಲ್ಲಿ ಬ್ರಿಸ್ಟಲ್ ಕಾಲುವೆಯೂ ಇವೆ. ಈ ಪರ್ಯಾಯದ್ವೀಪದ ಬಹುಭಾಗ ಶಿಲಾಮಯ. 150' - 450' ಎತ್ತರದ ಪ್ರಸ್ಥಭೂಮಿ ಇದನ್ನು ಬಹುತೇಕ ಆವರಿಸಿಕೊಂಡಿದೆ. 600' ಗಿಂತ ಎತ್ತರದ ಗಿರಿಶ್ರೇಣಿಗಳಿವೆ. ಗೌವರಿನ ಹಲವು ಸಣ್ಣ ನದಿಗಳು ರಭಸದಿಂದ ಹರಿಯುತ್ತವೆ. ಪ್ರಸ್ಥಭೂಮಿ ನೆಲವನ್ನು ಆಳವಾಗಿ ಕೊರೆದಿವೆ. ದಕ್ಷಿಣ ಗೌವರಿನ ಕರಾವಳಿ ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಇಲ್ಲಿ ಪ್ರವಾಸೋದ್ಯಮ ವಿಶೇಷವಾಗಿ ಬೆಳೆದಿದೆ. ರಜಾ ದಿನಗಳಲ್ಲಿ ದೂರದ ಜನ ಇಲ್ಲಿ ಬಂದು ವಾಸಿಸುತ್ತಾರೆ. ಅವರಿಗಾಗಿ ಅಲ್ಲಲ್ಲಿ ವಿಶ್ರಾಂತಿಧಾಮಗಳನ್ನೂ, ಉಪವನಗಳನ್ನೂ ನಿರ್ಮಿಸಲಾಗಿದೆ. ಸಮುದ್ರತೀರದ ಕೆಲವು ಪ್ರಪಾತ ಪ್ರದೇಶಗಳನ್ನು ರಾಷ್ಟ್ರೀಯ ಟ್ರಸ್ಟ್‌ಗಳೆಂದು ಸಾರಿ ಅವನ್ನು ರಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗೌವರ್ ಜನ ತಮ್ಮ ಮೂಲಭಾಷೆ, ಉಡುಪು ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ.
ಉತ್ತರ ಕರಾವಳಿಯು ಮುಖ್ಯವಾಗಿ ಉಪ್ಪು ಜೌಗು ನೆಲವಾಗಿದೆ. ಇದನ್ನು ಯುಕೆ ಕಾನೂನಿನಡಿ ೨೦೨೧ರಲ್ಲಿ,[೧][೨] ಮತ್ತು ಇಯು ಕಾನೂನಿನಡಿ ೨೦೨೩ರಲ್ಲಿ ಮೂಲದ ಸಂರಕ್ಷಿತ ಅಂಕಿತವೆಂದು[೩] ನೋಂದಾಯಿತವಾದ ಗೌವರ್ ಉಪ್ಪು ಜೌಗು ನೆಲದ ಕುರಿಮರಿಯನ್ನು ಬೆಳೆಸಲು ಬಳಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಆದಿಮಾನವನ ವಾಸಸ್ಥಾನವಾಗಿ ಗೌವರ್ ಜಿಲ್ಲೆಗೆ ಒಂದು ಇತಿಹಾಸವಿದೆ. 1823 ರಲ್ಲಿ ಪೆವಿಲ್ಯಾಂಡಿನ ಗೋಟ್ಸ್ ಹೋಲ್ ಗುಹೆಯಲ್ಲಿ ಪ್ರಾಚೀನ ಶಿಲಾಯುಗದ ಮಾನವನದೆಂದು ನಿರ್ಣಯಿಸಲಾದ ಒಂದು ಅಸ್ಥಿಪಂಜರ ಸಿಕ್ಕಿತು.[೪] ಇದು ಪೆವಿಲ್ಯಾಂಡಿನ ರೆಡ್ ಲೇಡಿ ಎಂದು ಪ್ರಸಿದ್ಧವಾಯಿತು. ಆದರೆ ಇದು ಪುರುಷನ ಅಸ್ಥಿಯೆಂದು ಈಗ ನಂಬಲಾಗಿದೆ. ಗೌವರಿನ ಪಶ್ಚಿಮ ದಿಣ್ಣೆ ನೆಲದಲ್ಲಿ ಅನೇಕ ಗೋರಿಕಲ್ಲುಗಳೂ, ಬೇರೆಬೇರೆ ಯುಗಗಳ ಗೋರಿದಿಬ್ಬಗಳೂ ಸಿಕ್ಕಿವೆ. ಕಬ್ಬಿಣ ಯುಗದಲ್ಲೂ, ಅನಂತರದ ಯುಗಗಳಲ್ಲೂ ಇಲ್ಲಿಯ ಮಲೆತಲೆಗಳ ಮೇಲೆ ಮಾನವ ವಸತಿ ಇತ್ತು. ರೋಮನರ ಕಾಲದಲ್ಲಿ ಗೌವರಿನ ಲೌಗರ್‌ನಲ್ಲಿ ಜನವಸತಿಯಿತ್ತು. ಆಯ್ಸ್‌ಟರ್‌ಮೌತ್‌ನಲ್ಲಿ ಒಂದು ಕುಟೀರ ಸಿಕ್ಕಿದೆ. ರೋಮನರ ನಿರ್ಗಮನಕ್ಕೂ, ನಾರ್ಮನರ ಆಗಮನಕ್ಕೂ ನಡುವಣ ಕಾಲದಲ್ಲಿ ಕೆಲ್ಟಿಕ್ ಕ್ರೈಸ್ತಮತ ಇಲ್ಲಿ ಪ್ರಸಾರವಾಯಿತು. ಆಗ ಇಲ್ಲಿ ಹಲವು ಚರ್ಚುಗಳ ನಿರ್ಮಾಣವಾಯಿತು. ಇದಲ್ಲದೆ ಗೌವರಿನ ಕರಾವಳಿಯಲ್ಲಿ ಸ್ಕಾಂಡೀನೇವಿಯನ್ ಆಕ್ರಮಣದ ಹಲವು ಕುರುಹುಗಳು ಕಂಡುಬರುತ್ತವೆ. ಸ್ಕಾಂಡೀನೇವಿಯನ್ ಹೆಸರುಗಳನ್ನು ಹೋಲುವ ಹಲವು ಸ್ಥಳನಾಮಗಳು ಇಲ್ಲಿವೆ. 1100ರ ಅನಂತರ ವಾರ್‌ವಿಕ್‌ನ ಅರ್ಲ್ ಹೆನ್ರಿ ಡಿ ನ್ಯೂಬರ್ಗ್ ಗೌವರನ್ನು ಗೆದ್ದುಕೊಂಡ. 1536 ರಲ್ಲಿ ಗೌವರನ್ನು ಗ್ಲಮಾರ್ಗನ್ ಕೌಂಟಿಯಲ್ಲಿ ಸೇರಿಸಲಾಯಿತು.
16 ಮತ್ತು 17 ನೆಯ ಶತಮಾನಗಳಲ್ಲಿ ಉತ್ತರ ಗೌವರಿನಲ್ಲಿ ಅಲ್ಪಸ್ವಲ್ಪ ಕಲ್ಲಿದ್ದಲು ಗಣಿ ಕೆಲಸ ನಡೆಯುತ್ತಿತ್ತು. ಮೂಲತಃ ಇದು ಒಂದು ಕೃಷಿ ಪ್ರಧಾನ ಜಿಲ್ಲೆ. ಮಿಶ್ರ ವ್ಯವಸಾಯ, ಹೈನದ ಉತ್ಪತ್ತಿ, ಮುಖ್ಯ. ಬಿಷಪ್‌ಸ್ಟನ್ ಮತ್ತು ರೊಸಿಲಿಗಳಲ್ಲಿ ಮಾರಾಟಕ್ಕಾಗಿ ತರಕಾರಿ ಬೆಳೆಯುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Gower salt marsh lamb receives protected status". BBC News. 11 August 2021. Retrieved 11 August 2021.
- ↑ "Welsh Gower Salt Marsh Lamb first new registration under new UK Geographical Indication schemes". Department for Environment, Food & Rural Affairs. 11 August 2021.
The meat gains its unique characteristics from specific vegetation and environment of the salt marshes on the north Gower coastline, where the lambs graze over long distances for more than half of their lifetime.
- ↑ "Commission Implementing Regulation (EU) 2023/1547 of 26 July 2023 entering a name in the register of protected designations of origin and protected geographical indications ('Gower Salt Marsh Lamb' (PDO))". European Commission. 27 July 2023. Retrieved 29 July 2023.
- ↑ "Ancient skeleton was 'even older'". BBC News. 30 October 2007. Retrieved 29 December 2010.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Gower Hidden History blog
- Gower Wildlife blog
- Visual Guide to Gower
- BBC Gower website Archived 3 September 2012 ವೇಬ್ಯಾಕ್ ಮೆಷಿನ್ ನಲ್ಲಿ.
- The official website of The Gower Society
