ಗೌರವರಕ್ಷೆ

ಗೌರವರಕ್ಷೆ ಎಂದರೆ ವಿವಿಧ ರಕ್ಷಣಾ ಮತ್ತು ಸೇವಾದಳಗಳ ಸಮವಸ್ತ್ರಧಾರಿ ಯೋಧರು ತಮ್ಮ ರಾಷ್ಟ್ರದ ಗೌರವಕ್ಕೆ ಅರ್ಹನಾದ ಅಧಿಕಾರಿ ಅಥವಾ ಪ್ರತಿಷ್ಠಿತ ವ್ಯಕ್ತಿಗೆ ವಿಶಿಷ್ಟ ಸಂದರ್ಭಗಳಲ್ಲಿ ವ್ಯಕ್ತಪಡಿಸುವ ಶಸ್ತ್ರಸಹಿತ ಇಲ್ಲವೇ ಶಸ್ತ್ರರಹಿತ ಸಾಮೂಹಿಕ ಗೌರವ (ಗಾರ್ಡ್ ಆಫ್ ಆನರ್). ಗೌರವ ರಕ್ಷೆಯನ್ನು ಯಾರು, ಯಾರಿಗೆ, ಯಾವ ಸಂದರ್ಭದಲ್ಲಿ ಕೊಡಬೇಕೆಂಬುದು ಪ್ರತಿ ರಾಷ್ಟ್ರದಲ್ಲೂ ನಿಯಮಬದ್ಧವಾಗಿ ನಿಶ್ಚಿತವಾಗಿರುತ್ತದೆ. ಭಾರತ ಗಣರಾಜ್ಯದಲ್ಲಿ ಮತ್ತು ರಾಜ್ಯಗಳಲ್ಲಿ ಈ ಕೆಳಗಿನ ವ್ಯಕ್ತಿಗಳು ಅಥವಾ ಅಧಿಕಾರಿಗಳು ಗೌರವರಕ್ಷೆಗೆ ಅರ್ಹರೆಂದು ನಿಶ್ಚಿತವಾಗಿದೆ. ಅಲ್ಲದೆ ಇತರ ದೇಶದ ಯಾವ ಗಣ್ಯ ವ್ಯಕ್ತಿಗಾದರೂ ಸರ್ಕಾರ ತೀರ್ಮಾನಿಸಿದರೆ ಇಂಥ ಗೌರವರಕ್ಷೆಯನ್ನೀಯಬಹುದು.
- ರಾಷ್ಟ್ರಾಧ್ಯಕ್ಷ,
- ಉಪರಾಷ್ಟ್ರಾಧ್ಯಕ್ಷ,
- ರಾಜ್ಯಪಾಲರು,
- ಉಪರಾಜ್ಯಪಾಲ (ಲೆಫ್ಟಿನೆಂಟ್ ಗೌರ್ನರ್),
- ಪ್ರಧಾನ ಮಂತ್ರಿ,
- ರಕ್ಷಣಾಮಂತ್ರಿ,
- ರಕ್ಷಣೋತ್ಪಾದನಾ ಮಂತ್ರಿ,
- ಉಪರಕ್ಷಣಾ ಮಂತ್ರಿ,
- ರಾಜ್ಯಗಳ ಮುಖ್ಯಮಂತ್ರಿಗಳು,
- ಪ್ರಧಾನ ದಂಡನಾಯಕ,
- ಜನರಲ್ ಆಫಿಸರ್ ಕಮ್ಯಾಂಡಿಂಗ್-ಇನ್-ಚೀಫ್ (ಪೂರ್ವ, ಪಶ್ಚಿಮ, ದಕ್ಷಿಣ ಇತ್ಯಾದಿ ವಲಯಗಳು).
- ನೌಕಾದಳ ಮತ್ತು ವಾಯುಸೇನಾ ದಳಗಳ ದಂಡನಾಯಕರು,
- ನೌಕಾದಳದ ಧ್ವಜಾಧಿಕಾರಿ.
- ನೌಕಾದಳಗಳ ಮತ್ತು ವಾಯುಸೇನಾದಳಗಳ ಉಪದಂಡನಾಯಕರು,
- ಭಾರತೀಯ ನೌಕಾದಳದ ಮುಂಬಯಿ ಮತ್ತು ಕೊಚಿನ್‌ಗಳ ಕಮಾಡೋರುಗಳು.
- ಆಯಾ ಪ್ರದೇಶಗಳ ವಾಯುಸೇನಾದಳಪತಿಗಳು.
ವಿಶ್ವವಿದ್ಯಾಲಯದ ಪದವೀದಾನ ಸಮಾರಂಭ ಭಾಷಣಕ್ಕೆ ಆಹ್ವಾನಿತರಾಗಿ ಬಂದ ಪ್ರತಿಷ್ಠಿತ ವ್ಯಕ್ತಿಗೆ, ವಾರ್ಷಿಕ ಶಿಬಿರಗಳಿಗೆ ಆಹ್ವಾನಿತರಾಗಿ ಬಂದ ಪ್ರತಿಷ್ಠಿತ ವ್ಯಕ್ತಿಗಳಿಗೆ ಮತ್ತು ಆಯಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ನ್ಯಾಷನಲ್ ಕ್ಯಾಡೆಟ್ ಕೋರ್ ಕ್ಯಾಡೆಟುಗಳು ಗೌರವರಕ್ಷೆಯನ್ನು ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಬಹುದು. ರಾಜ್ಯದ ಗೃಹಮಂತ್ರಿ ತನ್ನ ರಾಜ್ಯದ ಸಶಸ್ತ್ರ ಪೊಲೀಸರ ಗೌರವರಕ್ಷೆಯನ್ನು ಪಡೆಯಲು ಅರ್ಹರು.
ಸಂಖ್ಯೆ
[ಬದಲಾಯಿಸಿ]ಗೌರವರಕ್ಷೆಯನ್ನೀಯಬೇಕಾದ ಯೋಧರ ಸಂಖ್ಯೆಯನ್ನು ಸಹ ವರ್ಗವಾರು ನಿಷ್ಕರ್ಷಿಸಲಾಗಿದೆ. ರಾಷ್ಟ್ರಾಧ್ಯಕ್ಷರಿಗೆ ಮೂರು ಜನ ಅಧಿಕಾರಿಗಳನ್ನು ಸೇರಿದಂತೆ 153; ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಒಬ್ಬ ಅಧಿಕಾರಿ ಮತ್ತು 100 ಜನ ಯೋಧರು. ಉಳಿದ ಎಲ್ಲರಿಗೂ ಒಬ್ಬ ಅಧಿಕಾರಿ ಮತ್ತು 50 ಮಂದಿ ಯೋಧರು.
ಪೂರ್ವ ಸಿದ್ಧತೆ
[ಬದಲಾಯಿಸಿ]ಗೌರವರಕ್ಷೆಯನ್ನೀಯುವ ಯೋಧರು ಮತ್ತು ವಾದ್ಯವೃಂದದವರು ಉತ್ಸವೋಚಿತ ಸಮವಸ್ತ್ರ, ಶಸ್ತ್ರ ಮತ್ತು ವಾದ್ಯೋಪಕರಣಧಾರಿಗಳಾಗಿ ನಿಗದಿಯಾದ ಸ್ಥಳದಲ್ಲಿ ವಂದನಾವೇದಿಕೆಗೆ ಎದುರಾಗಿ ನಿಶ್ಚಿತ ದೂರದಲ್ಲಿ ಮಧ್ಯೆ ನಾಲ್ಕು ದಾಪುಗಳ ಅಥವಾ 120 ಅಂಗುಲಗಳ ಅಂತರದಲ್ಲಿ ಎರಡು ಸಾಲಾಗಿ ನಿಲ್ಲುವರು. ರಾಷ್ಟ್ರಾಧ್ಯಕ್ಷರಿಗೆ ರಕ್ಷೆಯೀಯುವ ಸಂದರ್ಭದಲ್ಲಿ ಯೋಧರ ಮುಂದಿನ ಸಾಲಿನಿಂದ ಮುಂದಕ್ಕೆ ಮಧ್ಯದಲ್ಲಿ ಎಂಟು ದಾಪುಗಳ ಅಂತರದಲ್ಲಿ ಗೌರವರಕ್ಷೆಯ ನಾಯಕ ನಿಲ್ಲುತ್ತಾನೆ. ಬಾಕಿ ಸಂದರ್ಭದಲ್ಲಿ 4-5 ದಾಪುಗಳ ಅಂತರದಲ್ಲಿ ನಿಲ್ಲುತ್ತಾನೆ. ವಾದ್ಯವೃಂದದವರು ಯೋಧರ ಮುಂದಿನ ಸಾಲಿನ ಬಲಗಡೆ ಕೊನೆಯ ನಿರ್ದೇಶಕನ ಬಲಕ್ಕೆ ಅದೇ ಸಾಲಿನಲ್ಲಿ ಏಳು ದಾಪು ಬಲಕ್ಕೆ ನೀಟಸಾಲುಗಳಲ್ಲಿ (ಕಾಲಮ್ಸ್) ನಾಲ್ಕು ಅಡ್ಡಸಾಲುಗಳಾಗಿ ನಿಲ್ಲುವರು. ನಗಾರಿ ಮೇಜರನ (ಡ್ರಮ್ ಮೇಜರ್) ಸ್ಥಾನ ಮುಂದಿನ ಅಡ್ಡಸಾಲಿನ ಮಧ್ಯದವನ ಮುಂದಕ್ಕೆ ಮೂರು ದಾಪು ಮುಂದಕ್ಕೆ ಇದೆ. ವಾದ್ಯನಾಯಕ ಅವನಿಂದ ಮುಂದಕ್ಕೆ ಎರಡು ದಾಪು ಮುಂದೆ ನಿಲ್ಲುತ್ತಾನೆ. ವಾದ್ಯದವರ ಒಟ್ಟು ಸಂಖ್ಯೆ 12+1+1 = 14.
ಗೌರವರಕ್ಷೆಯನ್ನು ಸ್ವೀಕರಿಸುವ ವ್ಯಕ್ತಿ ಬಂದು ನಿಂತುಕೊಳ್ಳುವ ವೇದಿಕೆಯ ಮುಂದಿನ ಅಂಚಿನ ಎಡಬಲಗಳಲ್ಲಿ ಎರಡು ದಾಪುಗಳ ಅಂತರದಲ್ಲಿ ಇಬ್ಬರು ಸಹಾಯಾಧಿಕಾರಿಗಳು ರಕ್ಷೆಯ ಯೋಧರಿಗೆ ಎದುರಾಗಿ ನಿಲ್ಲುವರು. ವೇದಿಕೆಗೂ, ಗೌರವರಕ್ಷೆಯ ನಾಯಕನಿಗೂ ಮಧ್ಯೆ ಸ್ಥಳಾವಕಾಶಕ್ಕೆ ತಕ್ಕಂತೆ ಕನಿಷ್ಠ ಪಕ್ಷ ಏಳು ದಾಪುಗಳ ಅಂತರವಿರಬೇಕು. ರಕ್ಷೆಯನ್ನು ಸ್ವೀಕರಿಸುವ ವ್ಯಕ್ತಿಯನ್ನು ಆಹ್ವಾನಿಸುವ ಅಧಿಕಾರಿ (ಕಂಡಕ್ಟಿಂಗ್ ಆಫಿಸರ್) ತನ್ನ ಕರ್ತವ್ಯ ನಿರ್ವಹಿಸಿ ವೇದಿಕೆಯ ಮೇಲೆ ಆತ ನಿಂತ ತರುವಾಯ ಆತನಿಗೆ ಹಿಂದೆ ಮೂರು ದಾಪು ಅಂತರದಲ್ಲಿ ಸಾವಧಾನ ಸ್ಥಿತಿಗೆ ಬಂದು ನಿಲ್ಲಬೇಕು. ಈಗ ಆವರಣವೆಲ್ಲವೂ ನಿಶ್ಯಬ್ದವಾಗಿರುತ್ತದೆ. ಎಲ್ಲ ಸಮವಸ್ತ್ರಧಾರಿಗಳೂ ಸಾವಧಾನ ಸ್ಥಿತಿಯಲ್ಲಿರುತ್ತಾರೆ.
ಪ್ರದಾನ
[ಬದಲಾಯಿಸಿ]ಪ್ರತಿಷ್ಠಿತ ವ್ಯಕ್ತಿ ವೇದಿಕೆಯ ಮೇಲೆ ಪೂರ್ವನಿಶ್ಚಿತ ಸ್ಥಾನದಲ್ಲಿ ಬಂದು ನಿಂತ ಬಳಿಕ ರಕ್ಷಾನಾಯಕನು ಸಂದರ್ಭ ಮತ್ತು ವ್ಯಕ್ತಿಯ ಸ್ಥಾನ ಪ್ರತಿಷ್ಠೆಗಳನ್ನನುಸರಿಸಿ ರಾಷ್ಟ್ರೀಯ ವಂದನೆ (ನ್ಯಾಷನಲ್ ಸೆಲ್ಯೂಟ್) ಅಥವಾ ಸಾರ್ವತ್ರಿಕ ವಂದನೆಯನ್ನು (ಜನರಲ್ ಸೆಲ್ಯೂಟ್) ಘೋಷಿಸಿ ರಕ್ಷಕ ಯೋಧರು ಶಸ್ತ್ರವಂದನೆಯನ್ನು ಅರ್ಪಿಸುತ್ತಿರುವ ಸಮಕಾಲಕ್ಕೆ ತಾನೂ ವಂದನೆಯನ್ನು ಅರ್ಪಿಸುತ್ತ ಅದೇ ಭಂಗಿಯಲ್ಲಿ ತನ್ನವರೊಡನೆ ಅಚಲವಾಗಿ ನಿಲ್ಲುತ್ತಾನೆ. ಈಗ ವಾದ್ಯವೃಂದ ರಾಷ್ಟ್ರಗೀತೆಯನ್ನು ಮೇಳದಲ್ಲಿ ನುಡಿಸುತ್ತದೆ. ಇತರ ದೇಶಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ರಕ್ಷೆ ನೀಡುವಾಗ ಪೂರ್ವನಿಶ್ಚಿತವಾಗಿದ್ದರೆ ಆಯಾ ದೇಶದ ರಾಷ್ಟ್ರಗೀತೆಯನ್ನು ನುಡಿಸಬಹುದು. ವೇದಿಕೆಯ ಮೇಲಿರುವ ಪ್ರತಿಷ್ಠಿತ ವ್ಯಕ್ತಿ ಮಾತ್ರ ಪ್ರತಿವಂದನೆಯನ್ನು ನೀಡುವುದರ ಮೂಲಕ ವಂದನೆಯನ್ನು ಸ್ವೀಕರಿಸುವನು. ಬಾಕಿಯವರೆಲ್ಲರೂ ಸಾವಧಾನ ಸ್ಥಿತಿಯಲ್ಲಿ ಅಚಲರಾಗಿ ನಿಲ್ಲಬೇಕಾಗುತ್ತದೆ. ರಾಷ್ಟ್ರಗೀತೆ ಮುಗಿದ ತರುವಾಯ ನಾಯಕನು ಶಸ್ತ್ರಗಳನ್ನು ಕೆಳಗಿಳಿಸುವ ಆಜ್ಞೆಯಿತ್ತು ತಾನೊಬ್ಬನೇ ಕ್ರಮಬದ್ಧ ಪದವಿನ್ಯಾಸದಿಂದ ಮುಂದುವರಿದು ವೇದಿಕೆಯ ಮುಂದೆ ಕನಿಷ್ಠ ಪಕ್ಷ ಮೂರು ದಾಪು ದೂರದಲ್ಲಿ ನಿಂತು ಮತ್ತೊಮ್ಮೆ ವೈಯಕ್ತಿಕ ವಂದನೆಯನ್ನು ಅರ್ಪಿಸಿ ಇಂಥ ಬೆಟಾಲಿಯನ್ನಿನ ಗೌರವರಕ್ಷೆ ತಮ್ಮ ನಿರೀಕ್ಷಣಕ್ಕೆ ಸಜ್ಜಾಗಿದೆ ಎಂದು ಪೂರ್ವನಿಶ್ಚಿತ ಭಾಷೆಯಲ್ಲಿ (ಭಾರತದಲ್ಲಿ ಹಿಂದಿ) ವರದಿ ಮಾಡಿ ಮತ್ತೆ ವಂದಿಸಿ, ಆ ಪ್ರತಿಷ್ಠಿತ ವ್ಯಕ್ತಿ ಮರುವಂದಿಸಿ ವೇದಿಕೆಯಿಂದ ಇಳಿದು ಮುಂದುವರಿಯಲು ಸಿದ್ಧನಾದ ಕೂಡಲೇ ತಾನೂ ಹಿಂತಿರುಗಿ ಆತನ ಬಳಿ ಪದವಿನ್ಯಾಸಕ್ಕೆ ತಕ್ಕಂತೆ ತನ್ನ ನಡಿಗೆಯನ್ನು ಹೊಂದಿಸಿಕೊಂಡು ಆತನ ಬಲಗಡೆಗೆ ಆದಂತೆ ಸ್ವಲ್ಪ ಮುಂದೆ ನಡೆಯುವನು. ರಾಷ್ಟ್ರಾಧ್ಯಕ್ಷರು ವಂದನೆ ಸ್ವೀಕರಿಸುವ ಸಂದರ್ಭದಲ್ಲಿ ಮಾತ್ರ ಅಂಗರಕ್ಷಕರು ಅವರ ಮುಂದೆ ಎಡಬಲಗಳಲ್ಲಿ ನಡಿಗೆಯಲ್ಲಿ ಹೋಗುವರು. ಬಾಕಿ ಸಂದರ್ಭಗಳಲ್ಲಿ ಅವರು ಸ್ವಸ್ಥಾನದಲ್ಲಿರುತ್ತಾರೆ.
ವೀಕ್ಷಣೆ
[ಬದಲಾಯಿಸಿ]ಈಗ ಪ್ರತಿಷ್ಠಿತ ವ್ಯಕ್ತಿಯು ವಾದ್ಯವೃಂದವನ್ನು ಸಮೀಪಿಸಿ ನಗಾರಿಮೇಜರನ ಹಿಂದುಗಡೆಯಿಂದ ಹಾಯ್ದು ವಾದ್ಯವೃಂದವನ್ನು ನಿರೀಕ್ಷಿಸುವನು. ಅವರೆಲ್ಲರೂ ಸಾವಧಾನ ಸ್ಥಿತಿಗಳಲ್ಲಿ ನಿಂತಿರುತ್ತಾರೆ. ವೃಂದದ ಮುಂದಿನ ಸಾಲಿನ ಎಡಗಡೆಯ ವ್ಯಕ್ತಿಯನ್ನು ದಾಟುತ್ತಿದ್ದಂತೆಯೇ ಮಿಂಚಿನ ವೇಗದಿಂದ ವಾದ್ಯನಾಯಕ ಹಿಂದಕ್ಕೆ ತಿರುಗಿ ಸನ್ನೆಯ ಆಜ್ಞೆ ಮಾಡಿ ವಾದ್ಯ ನುಡಿಸಲು ಹೇಳುತ್ತಾನೆ. ಪ್ರತಿಷ್ಠಿತ ವ್ಯಕ್ತಿ ನಿಧಾನ ನಡಿಗೆಯಲ್ಲಿ ರಕ್ಷೆಯ ಯೋಧರ ಬಲ ನಿರ್ದೇಶಕನನ್ನು ಸಮೀಪಿಸಿದಂತೆ ನಗಾರಿಯ ಪ್ರಥಮ ಹೊಡೆತದ ಸನ್ನೆಯಿಂದ ಗಕ್ಕನೆ ತಮ್ಮೆಲ್ಲರ ದೃಷ್ಟಿಯನ್ನು ಯೋಧರು ಆತನ ಮೇಲೆ ಹಾಯಿಸುತ್ತಾರೆ. ರಕ್ಷೆಯ ಯೋಧರ ಮುಂದಿನ ಸಾಲನ್ನು ಮಾತ್ರ ವ್ಯಕ್ತಿ ವೀಕ್ಷಿಸುತ್ತ ದಾಪುಗಳ ಅಂತರದಲ್ಲಿ ಮುಂದುವರಿಯುತ್ತಾನೆ. ಆತ ಮುಂದುವರಿದಂತೆ ಯೋಧರ ಶಿರಗಳೂ ದೃಷ್ಟಿಯೂ ಆತನತ್ತ ತಿರುಗುತ್ತಿರುತ್ತವೆ. ರಕ್ಷೆಯ ನಾಯಕ ಬಲಗಡೆ ಮುಂದುವರಿಯುತ್ತಿರುತ್ತಾನೆ. ಎಡಗಡೆ ಕೊನೆಯ ಎಡನಿರ್ದೇಶಕನನ್ನು ತಲುಪಿದ ಕೂಡಲೇ ನಗಾರಿತಾಡನ ಧ್ವನಿಯ ಸಂಜ್ಞೆಗೆ ಯೋಧರೆಲ್ಲರೂ ಕ್ಷಣಾರ್ಧದಲ್ಲಿ ಮುಮ್ಮುಖರಾಗುತ್ತಾರೆ. ನಿರೀಕ್ಷಣೆ ಮುಗಿಯುತ್ತದೆ.
ನಿಷ್ಕ್ರಮಣ
[ಬದಲಾಯಿಸಿ]ಈಗ ಪ್ರತಿಷ್ಠಿತ ವ್ಯಕ್ತಿ ವೇಗ ನಡಿಗೆಯಲ್ಲಿ ವೇದಿಕೆಯತ್ತ ಮುಂದುವರಿಯುತ್ತಾನೆ. ಈ ಮಧ್ಯೆ ತನ್ನನ್ನು ಹಿಂಬಾಲಿಸುತ್ತಿರುವ ರಕ್ಷೆಯ ನಾಯಕನಿಗೆ ಆತ ಹಸ್ತಲಾಘವವಿತ್ತರೆ ನಾಯಕ ಅದನ್ನು ಸ್ವೀಕರಿಸಿ, ವಂದಿಸಿ, ಅದೇ ನಡಿಗೆಯಲ್ಲಿ ತನ್ನ ಸ್ಥಾನಕ್ಕೆ ಬಂದು ಉಳಿದವರಂತೆ ಸಾವಧಾನ ಸ್ಥಿತಿಯಲ್ಲಿ ನಿಲ್ಲುತ್ತಾನೆ. ಆಹ್ವಾನ ಮಾಡುವ ಅಧಿಕಾರಿ ಈ ವೇಳೆಗೆ ವೇದಿಕೆಯಿಂದಿಳಿದು, ಉಚಿತ ಸ್ಥಳದಲ್ಲಿ ನಿಂತು, ವ್ಯಕ್ತಿಯನ್ನು ಪೂರ್ವನಿರ್ದಿಷ್ಟ ಸ್ಥಳಕ್ಕೆ ಕೊಂಡೊಯ್ಯುತ್ತಾನೆ. ಆತ ದೂರ ಸರಿದಂತೆ ಗೌರವರಕ್ಷೆಯ ನಾಯಕ ತನ್ನ ಯೋಧರಿಗೆ ಸ್ವಸ್ಥಾನಕ್ಕೆ ತೆರಳುವ ಆಜ್ಞೆಯೀಯುತ್ತಾನೆ.
ಭಾರತದಲ್ಲಿ
[ಬದಲಾಯಿಸಿ]ಜನವರಿ ೨೦೧೫ರಲ್ಲಿ, ಬರಾಕ್ ಒಬಾಮಾ ಭಾರತಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ, ವಿಂಗ್ ಕಮಾಂಡರ್ ಪೂಜಾ ಠಾಕುರ್ ಒಬ್ಬ ವಿದೇಶಿ ನಾಯಕನಿಗೆ ಗೌರವರಕ್ಷೆಯ ಮುಂದಾಳಾದ ಮೊದಲ ಮಹಿಳಾ ಅಧಿಕಾರಿಯಾದರು.[೧] ಭಾರತೀಯ ವಾಯುಸೇನೆಯಲ್ಲಿ, ಪ್ರದರ್ಶನ ಕವಾಯತು ತಂಡವಾಗಿ ಕಾರ್ಯನಿರ್ವಹಿಸುವ ಏಕೈಕ ಘಟಕವಿದೆ. ಅಧಿಕೃತವಾಗಿ ಏರ್ ವಾರಿಯರ್ ಡ್ರಿಲ್ ಟೀಮ್ (ಎಡಬ್ಲ್ಯುಡಿಟಿ) ಎಂದು ಕರೆಯಲ್ಪಡುವ ಈ ಘಟಕದ ಸ್ಥಾಪನೆ ೨೦೦೪ರಲ್ಲಾಯಿತು. ಇದು ಭಾರತೀಯ ವಾಯುಸೇನೆಯ ಗೌರವರಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ Peri, Dinakar (26 January 2015). "Pooja Thakur makes history". The Hindu. Retrieved 30 September 2018 – via www.thehindu.com.
- ↑ "Special performance by Air Warrior Drill Team". Business Standard India. Press Trust of India. 22 September 2019.
- ↑ Meena, R. P. "Rajasthan Current Affairs Yearbook 2019".
