ಗೌತಮ ಧರ್ಮಸೂತ್ರ
ಗೌತಮ ಧರ್ಮಸೂತ್ರವು ಈಗ ಉಪಲಬ್ಧವಿರುವ ಧರ್ಮಸೂತ್ರಗಳಲ್ಲೆಲ್ಲ ಹೆಚ್ಚು ಪ್ರಾಚೀನವೆಂದು ವಿದ್ವಾಂಸರು ಪರಿಗಣಿಸಿರುವ ಧರ್ಮಸೂತ್ರ. ಬೌದ್ಧಾಯನ ಧರ್ಮಸೂತ್ರದಲ್ಲಿಯೇ ಗೌತಮನ ಈ ಗ್ರಂಥದ ಉಲ್ಲೇಖವಿದೆ. ಇದರಲ್ಲಿ ಬೌದ್ಧಧರ್ಮದ ಉದಯದ ಪ್ರಸ್ತಾಪವೇ ಕಾಣಿಸದು. ಆದರೆ ಯವನ ಶಬ್ದ ಬರುತ್ತದೆ. ಆದ್ದರಿಂದ ಇದರ ಕಾಲ ಸುಮಾರು ಕ್ರಿ.ಪೂ. 600-400 ಎಂದು ಮಹಾಮಹೋಪಾಧ್ಯಾಯ ಪಿ.ವಿ. ಕಾಣೆ ತೀರ್ಮಾನಿಸಿದ್ದಾರೆ.[೧]
ಗೌತಮ ಧರ್ಮಸೂತ್ರ ಸಾಮವೇದದ ರಾಣಾಯಣೀಯ ಶಾಖೆಗೆ ಸೇರಿದುದು. ಆದ್ದರಿಂದ ಸಾಮವೇದಿಗಳು ಇದನ್ನು ತಮ್ಮ ಧರ್ಮಸೂತ್ರವೆಂದು ಭಾವಿಸುವುದು ಸಹಜ. ಆದರೆ ಪ್ರಾಚೀನ ವೇದವಿದ್ಯಾಚಾರ್ಯರಲ್ಲಿ ಗೌತಮನೆಂಬ ಹೆಸರಿನವರು ಅನೇಕರಿರುವುದರಿಂದ ಈ ಧರ್ಮಸೂತ್ರಕಾರ ಇವನೇ ಎನ್ನಲು ಖಚಿತವಾದ ಆಧಾರವೂ ಸಿಕ್ಕಿಲ್ಲ.
ಗೌತಮ ಧರ್ಮಸೂತ್ರ ಗ್ರಂಥ ಹಲವು ಬಾರಿ ಅಚ್ಚಾಗಿದೆ-ಸ್ಟೆನ್‌ಬ್ಲರ್ 1876; ಕಲ್ಕತ್ತ 1876; ಆನಂದಾಶ್ರಮ 1910 ಹಾಗೂ ಮೈಸೂರು ಆವೃತ್ತಿಗಳಲ್ಲಿ ಕ್ರಮವಾಗಿ ಹರದತ್ತ ಮತ್ತು ಮಸ್ಕರಿಗಳ ವ್ಯಾಖ್ಯಾನಗಳೂ ಅಚ್ಚಾಗಿವೆ.[೨]
ಗ್ರಂಥದಲ್ಲಿರುವ ವಿಷಯಗಳು
[ಬದಲಾಯಿಸಿ]ಈ ಗ್ರಂಥದಲ್ಲಿ ಬರುವ ಮುಖ್ಯವಾದ ವಿಷಯಗಳು ಹೀಗಿವೆ:
- ಧರ್ಮದ ಮೂಲಗಳು, ವ್ಯಾಖ್ಯಾನವಿಧಿ, ಚಾತುರ್ವರ್ಣದವರಿಗೆ ಉಪನಯನ ಕಾಲ, ಹಾಗೂ ನಿಯಮಿತ ಮೌಂಜಿ, ಅಜಿನ, ದಂಡಾದಿಗಳು. ಶೌಚ ಮತ್ತು ಆಚಮನ ವಿಧಿಗಳು.
- ಬ್ರಹ್ಮಚಾರಿ ನಿಯಮಗಳು, ವಿದ್ಯಾಭ್ಯಾಸದ ಅವಧಿ.
- ನಾಲ್ಕು ಆಶ್ರಮಗಳು, ಬ್ರಹ್ಮಚಾರಿ, ಭಿಕ್ಷು ಮತ್ತು ವೈಖಾನಸರ ಕರ್ತವ್ಯಗಳು.
- ಗೃಹಸ್ಥನ ಕರ್ತವ್ಯಗಳು, ವಿವಾಹಕಾಲ ಹಾಗೂ ವಿಧಿ, ಎಂಟು ಬಗೆಯ ವಿವಾಹಗಳು, ಉಪಜಾತಿಗಳು.
- ಪತ್ನೀಗಮನವನ್ನು ಕುರಿತ ವಿಧಿಗಳು, ಪಂಚಮಹಾಯಜ್ಞಗಳು, ಮಧುಪರ್ಕ, ಅತಿಥಿಸತ್ಕಾರ ಕ್ರಮ.
- ಮಾತಾಪಿತೃಗಳಿಗೆ ಹಾಗು ಗುರುವಿಗೆ ಅಭಿವಾದನ ಕ್ರಮ, ಪ್ರಯಾಣಕಾಲದ ನಿಯಮಗಳು.
- ಬ್ರಾಹ್ಮಣಧರ್ಮ, ಆಪದ್ಧರ್ಮ.
- ನಲವತ್ತು ಸಂಸ್ಕಾರಗಳು ಮತ್ತು ಎಂಟು ಗುಣಗಳು (ದಯಾ ಇತ್ಯಾದಿ).
- ಸ್ನಾತಕವ್ರತ.
- ನಾಲ್ಕುವರ್ಣಗಳ ಕರ್ತವ್ಯಗಳು, ರಾಜಧರ್ಮಗಳು.
- ಪುರೋಹಿತನ ಕರ್ತವ್ಯ.
- ಕಳ್ಳತನ, ಖೂನಿ ಮುಂತಾದ ಅಪರಾಧಗಳಿಗೆ ವಿಹಿತವಾದ ಶಿಕ್ಷೆಗಳು, ಬಡ್ಡಿ ವ್ಯವಹಾರದ ನಿಯಮಗಳು.
- ಸಾಕ್ಷಿಗಳ ಲಕ್ಷಣ.
- ಅಶೌಚ ಮತ್ತು ಸೂತಕವಿಚಾರ.
- ಐದು ಬಗೆಯ ಶ್ರಾದ್ಧಗಳು, ಶ್ರಾದ್ಧ ವಿಧಿಗಳು.
- ಉಪಾಕರ್ಮ, ಅನಧ್ಯಯನ ವಿಚಾರ.
- ಬ್ರಾಹ್ಮಣಾದಿಗಳಿಗೆ ವಿಹಿತ ಹಾಗು ನಿಷಿದ್ಧ ಆಹಾರ.
- ಸ್ತ್ರೀಕರ್ಮಗಳು, ನಿಯೋಗ ವಿಚಾರ.
- ಪ್ರಾಯಶ್ಚಿತ್ತ, ಜಪ, ತಪಾದಿಗಳು.
- ಬಹಿಷ್ಕಾರ.
- ಮಹಾಪಾತಕಗಳು ಮತ್ತು ಉಪಪಾತಕಗಳು.
- ಬ್ರಹ್ಮಹತ್ಯಾದಿಗಳಿಗೆ ಹೇಳುವ ಪ್ರಾಯಶ್ಚಿತ್ತಗಳು.
- ಸುರಾಪಾನಾದಿಗಳಿಗೆ ಹೇಳುವ ಪ್ರಾಯಶ್ಚಿತ್ತ.
- ಕೃಛ್ರ, ಅತಿಕೃಛ್ರ ಮುಂತಾದ ತೀವ್ರ ತಪಗಳು.
- ಚಾಂದ್ರಾಯಣ ವ್ರತ.
- ಸ್ತ್ರೀಧನ, ಆಸ್ತಿವಿಭಾಗ.
ಗೌತಮಧರ್ಮಸೂತ್ರ ಪೂರ್ಣವಾಗಿ ಗದ್ಯದಲ್ಲಿದೆ; ಮಿಕ್ಕ ಧರ್ಮಸೂತ್ರಗಳಂತೆ ಇಲ್ಲಿ ಸ್ವರಚಿತ ಇಲ್ಲವೆ ಉದಾಹೃತ ಶ್ಲೋಕಗಳೊಂದೂ ಇಲ್ಲ.[೩] ಇಂದಿನ ಕಾನೂನು, ಸಮಾಜಶಾಸ್ತ್ರ, ಶಿಕ್ಷಣಶಾಸ್ತ್ರ, ವೈದಿಕಧರ್ಮ, ಇವನ್ನು ಸಪ್ರಮಾಣವಾಗಿ ಅರಿಯಬೇಕೆನ್ನುವವರಿಗೆ ಇದು ಉತ್ತಮ ಪ್ರಮಾಣ ಗ್ರಂಥವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Patrick Olivelle 1999, p. xxxii.
- ↑ Patrick Olivelle 1999, p. 74.
- ↑ Robert Lingat 1973, p. 20.
ಗ್ರಂಥಸೂಚಿ
[ಬದಲಾಯಿಸಿ]- Patrick Olivelle (1999). Dharmasutras: The Law Codes of Ancient India. Oxford University Press. ISBN 978-0-19-283882-7.
- Robert Lingat (1973). The Classical Law of India. University of California Press. ISBN 978-0-520-01898-3.
