ಗೋಲಿ (ಆಂಧ್ರ ಪ್ರದೇಶ)

ಗೋಲಿ ಎನ್ನುವುದು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿರುವ, ಬೌದ್ಧಸ್ತೂಪದ ಅವಶೇಷಗಳುಳ್ಳ ಪ್ರಸಿದ್ಧ ಗ್ರಾಮ. ಹಿಂದೆ ಇದು ಗುಂಟೂರು ಜಿಲ್ಲೆಯ ಪಲ್ನಾಡ್ ತಾಲ್ಲೂಕಿನಲ್ಲಿತ್ತು. ಇದು ಕೃಷ್ಣಾನದಿಯ ಗೊಲ್ಲಾರು ಎಂಬ ನದಿಯ ದಡದ ಮೇಲಿದೆ. ಇಲ್ಲಿಯ ಜನಸಂಖ್ಯೆ 5,726 (2011).[೧] 1877ರಲ್ಲಿ ರಾಬರ್ಟ್ ಸಿವೆಲ್ ಇಲ್ಲಿದ್ದ ಬೌದ್ಧಸೂಪ್ತವನ್ನು ಪತ್ತೆ ಹಚ್ಚಿದ. 1926ರಲ್ಲಿ ಪ್ರಸಿದ್ಧ ಚರಿತ್ರಕಾರ ಜಿ.ಜೆ. ಡೂಬ್ರೆ ಈ ಸ್ತೂಪವನ್ನು ಅಗೆಸಿ ಇದರಲ್ಲಿದ್ದ ಶಿಲ್ಪ ಫಲಕಗಳನ್ನೆಲ್ಲ ಮದ್ರಾಸ್ ಸರ್ಕಾರದ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಿದ. ಇಂದಿಗೂ ಅವು ಅಲ್ಲಿ ಪ್ರದರ್ಶಿತವಾಗಿವೆ.
ಸ್ತೂಪದ ಬಗ್ಗೆ
[ಬದಲಾಯಿಸಿ]ಗೋಲಿಯ ಸ್ತೂಪ ಪೂರ್ತಿಯಾಗಿ ನಷ್ಟವಾಗಿದೆ. ಈಗ ಉಳಿದಿರುವುದು ಆ ಸ್ತೂಪವನ್ನಲಂಕರಿಸಿದ್ದ ಶಿಲ್ಪಗಳು ಮಾತ್ರ. ಇವು ಆಂಧ್ರದ ಆ ಕಾಲದ ಇತರ ಶಿಲ್ಪಗಳಂತೆ ಬಿಳಿಯ ಸುಣ್ಣಕಲ್ಲಿನಿಂದ ಮಾಡಿದವು.[೨] ಅಮರಾವತಿ ಶಿಲ್ಪಶೈಲಿಯ ಕೊನೆಯ, ಎಂದರೆ ನಾಲ್ಕನೆಯ, ಹಂತಕ್ಕೆ ಗೋಲಿಯ ಶಿಲ್ಪಗಳು ಸೇರುತ್ತವೆಂಬುದು ವಿದ್ವಾಂಸರ ಮತ. ಎಂದರೆ ಕ್ರಿ.ಶ. 3ನೆಯ ಶತಮಾನದ ಹೊತ್ತಿಗೆ ಈ ಶಿಲ್ಪಗಳು ನಿರ್ಮಾಣವಾಗಿದ್ದಿರಬೇಕೆಂದು ತಿಳಿದುಬರುತ್ತದೆ.
ಅಲ್ಲಿಯ ಶಿಲ್ಪ ಫಲಕಗಳಲ್ಲಿ ವೆಸ್ಸಂತರ ಜಾತಕ, ಚಡ್ಡಂತಜಾತಕ, ಬುದ್ಧ ಮದಿಸಿದ ನಳಗಿರಿಯ ಸೊಕ್ಕನ್ನು ಮುರಿದು ಸಾಧುವಾಗಿ ಮಾಡುತ್ತಿರುವ ದೃಶ್ಯ, ಬುದ್ಧ ಯಶೋಧರೆಯನ್ನು ಸಂಧಿಸುತ್ತಿರುವುದು, ಸುಜಾತೆ ಬೋಧಿಸತ್ತ್ವನಿಗೆ ಆಹಾರ ಕೊಡುತ್ತಿರುವುದು, ಬುದ್ಧನ ಧರ್ಮಬೋಧೆ ಮುಂತಾದವು ಬಹು ಮುಖ್ಯವಾದವು. ಅಮರಾವತಿಯ ಶಿಲ್ಪಿಗಳೇ ಇವನ್ನೂ ಕೆತ್ತಿದರೋ ಎನ್ನುವ ಸಂದೇಹ ಬರುವಷ್ಟು ಮಟ್ಟಿಗೆ ಇವು ಅಲ್ಲಿಯ ಶಿಲ್ಪಗಳನ್ನು ಹೋಲುತ್ತವೆ. ಬೌದ್ಧಸ್ತೂಪವೊಂದಕ್ಕೆ ಸ್ತ್ರೀಯರು ನಮಸ್ಕರಿಸುತ್ತಿರುವ ಶಿಲ್ಪ ಬಹು ರಮ್ಯವಾಗಿದೆ. ಬುದ್ಧ ನಳಗಿರಿಯನ್ನು ಪಳಗಿಸುತ್ತಿರುವ ದೃಶ್ಯವೂ ಚೆನ್ನಾಗಿದೆ. ಇಲ್ಲಿ ದೊರಕಿರುವ ಚೈತ್ಯಫಲಕದಲ್ಲಿ ಐದು ಆಯಕ ಸ್ತಂಭಗಳು ಮತ್ತು ಅಲಂಕಾರಗಳು ಕಾಣಬರುತ್ತವೆ. ಇದರ ಆಧಾರದ ಮೇಲೆ ಊಹಿಸುವುದಾದರೆ ಗೋಲಿಯ ಸ್ತೂಪವೂ ಆಯಕ ಸ್ತಂಭಗಳನ್ನೊಳಗೊಂಡು ಅಲಂಕಾರಯುತವಾಗಿದ್ದಿರಬೇಕೆಂದು ಹೇಳಬಹುದು. ಶಿಲ್ಪ ಫಲಕಗಳಲ್ಲಿ ಶೇಷವಾಗಿ ಆಕರ್ಷಿಸುವುದೆಂದರೆ ಅವುಗಳಲ್ಲಿಯ ಪ್ರಾಣಿಗಳ ಚಿತ್ರಗಳು. ಹಸು, ಕುದುರೆ, ಆನೆ, ಮೊಲ, ಹಂಸ, ಎತ್ತು ಮುಂತಾದ ಪ್ರಾಣಿಗಳು ಚೆನ್ನಾಗಿ ಶಿಲ್ಪಿತವಾಗಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "District Census Handbook – Guntur" (PDF). Census of India. pp. 201, 212. Archived from the original (PDF) on 25 August 2015. Retrieved 10 April 2023.
- ↑ Ramachandran, T.N. (1929). Buddhist sculptures from a stupa near Goli village, Guntur district (PDF). Bulletin of the Madras Government Museum, New Series, General section. Vol. 1, Part 1. Madras Government Museum. Archived from the original on 17 October 2022. Retrieved 10 April 2023.
{{cite book}}: CS1 maint: bot: original URL status unknown (link)
