ಗೋಂಡ್ವಾನ ವ್ಯವಸ್ಥೆ
ಗೋಂಡ್ವಾನ ವ್ಯವಸ್ಥೆ ಎನ್ನುವುದು ಮಧ್ಯ ಪ್ರದೇಶ, ಬಿಹಾರ, ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹರಡಿರುವ ಕಲ್ಲಿದ್ದಲಿನ ಸ್ತರಗಳನ್ನೊಳಗೊಂಡ ಶಿಲಾ ಸಮುದಾಯ. ಮಧ್ಯ ಪ್ರದೇಶದ ಗೋಂಡ ಜನಾಂಗದವರು ವಾಸಿಸುತ್ತಿದ್ದ ಕಡೆ ಈ ಶಿಲೆಗಳನ್ನು ಮೊದಲು ಗುರುತಿಸಿದ್ದರಿಂದ ಈ ಹೆಸರು ಬಂದಿದೆ. ಹೆಸರಿಟ್ಟವ ಮೆಡ್ಲಿಕಾಟ್ (1872).[೧] ಆದರೆ ಈ ಹೆಸರು ಪ್ರಕಾಶಕ್ಕೆ ಬಂದುದು 1876ರಲ್ಲಿ ಪ್ರಚುರವಾದ ಫೀಸ್ಟ್‌ಮ್ಯಾಂಟಲನ ಬರಹದಲ್ಲಿ. ಗೋಂಡ್ವಾನ ಶಿಲೆಗಳನ್ನು ತೋರಿಸುವ ದಕ್ಷಿಣ ಇಂಡಿಯ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಅಂಟಾರ್ಕ್ಟಿಕ ಈ ಎಲ್ಲ ಭೂಖಂಡಗಳೂ ಹಿಂದೆ ಒಟ್ಟುಗೂಡಿದ್ದುವೆಂಬ ವಾದ ಉಂಟು. ಆದ್ದರಿಂದ ಆ ಬೃಹತ್ ಭೂಖಂಡಕ್ಕೆ ಗೋಂಡ್ವಾನ ಖಂಡ ಎಂಬ ಹೆಸರು ಬಂದಿದೆ. ಗೋಂಡ್ವಾನ ವ್ಯವಸ್ಥೆಗೆ ಸೇರಿದ ಶಿಲೆಗಳೆಲ್ಲವೂ ಒಳನಾಡಿನಲ್ಲಿ ನದಿ ಮತ್ತು ಸರೋವರ ತಳಗಳಲ್ಲಿ ರೂಪುಗೊಂಡಿವೆ. ಕಲ್ಲು ಮತ್ತು ಮಣ್ಣು ಶೇಖರವಾದಂತೆ ತಳ ಕುಸಿದುದರಿಂದ ಹೆಚ್ಚು ಶಿಲಾ ವಸ್ತು ಶೇಖರವಾಗಲು ಅನುಕೂಲವಾಯಿತು. ಸೀಳುಗಳ ನಡುವಿನ ಭಾಗ ಕುಸಿದುದರ ಫಲವಾಗಿ ಕಲ್ಲಿದ್ದಲಿನ ಪದರಗಳನ್ನೊಳಗೊಂಡ ಈ ವರ್ಗದ ಶಿಲೆಗಳು ಕ್ಷಯಿಸಿ ಹೋಗದೆ ಇನ್ನೂವರೆಗೆ ಉಳಿದುಕೊಂಡು ಬಂದಿವೆ.
ಹರವು
[ಬದಲಾಯಿಸಿ]ಗೋಂಡ್ವಾನ ವ್ಯವಸ್ಥೆಯ ಶಿಲೆಗಳು ಮುಖ್ಯವಾಗಿ ಮೂರು ವಲಯಗಳಲ್ಲಿ ಕಂಡುಬರುತ್ತವೆ.
- ಮೊದಲನೆಯದು ಪೂರ್ವ-ಪಶ್ಚಿಮವಾಗಿ ದಾಮೋದರ, ಸೋನೆ ಮತ್ತು ನರ್ಮದಾ ಕಣಿವೆ ಪ್ರದೇಶಗಳನ್ನು ಒಳಗೊಂಡಿದೆ.
- ಎರಡನೆಯದು ಗೋದಾವರಿ ಕಣಿವೆಯಿಂದ ಈಶಾನ್ಯ-ಆಗ್ನೇಯ ದಿಕ್ಕಿನಲ್ಲಿ ವ್ಯಾಪಿಸಿದೆ.
- ಮೂರನೆಯದಾದರೋ ಗೋದಾವರಿ ಕಣಿವೆ ಮತ್ತು ರಾಜಮಹಲ್ ಸೇರುವಿಕೆಯಿಂದ ಆಗಿದೆ.
ಈ ಮೂರು ವಲಯಗಳಲ್ಲಿ ಅಲ್ಲದೆ ನೇಪಾಳ, ಭೂತಾನ್, ಅಸ್ಸಾಂ, ಕಾಶ್ಮೀರ, ಬಲೂಚಿಸ್ತಾನದಲ್ಲಿ ಹಿಮಾಲಯ ಶ್ರೇಣಿಯ ಮುಂದಿನ ಭಾಗದಲ್ಲಿ ಗೋಂಡ್ವಾನ ವರ್ಗದ ಶಿಲೆಗಳು ಅಲ್ಲಲ್ಲಿ ಕಾಣುತ್ತವೆ. ದಕ್ಷಿಣ ಭಾರತದ ಪೂರ್ವ ತೀರದಲ್ಲಿಯೂ, ಮೇಲುವರ್ಗದ ಗೋಂಡ್ವಾನ ಶಿಲೆಗಳು ಕಟಕ್, ಮದರಾಸು, ಮತ್ತು ಕನ್ಯಾಕುಮಾರಿಯ ಬಳಿಯೂ ಕಾಣುತ್ತವೆ. ಗೋಂಡ್ವಾನ ವ್ಯವಸ್ಥೆಯು ಹರವಿನಲ್ಲಿ ಕಿರಿದಾಗಿ ಕಂಡರೂ ಸ್ತರಪಂಕ್ತಿ 6067-9100 ಮೀ ವರೆಗೂ ದಪ್ಪವಾಗಿದೆ. ಕಾಲಾವಧಿ ಕಾರ್ಬಾನಿಫೆರಸ್, ಟ್ರಿಯಾಸಿಕ್, ಜುರಾಸಿಕ್ ಮತ್ತು ಕ್ರಿಟೇಷಸ್ ಕಲ್ಪಗಳ ಪರ್ಯಂತ ವ್ಯಾಪಿಸಿದೆ. ಅದೇ ಕಾರಣವಾಗಿ ಗೋಂಡ್ವಾನ ವ್ಯವಸ್ಥೆಯನ್ನು ಪೇಲಿಯೊಜ಼ೋಯಿಕ್ (ಪ್ರಾಚೀನ ಜೀವಿಕಲ್ಪ), ಮೀಸೋಜ಼ೋಯಿಕುಗಳಂತೆ (ಮಧ್ಯ ಜೀವಿಕಲ್ಪ) ಮುಖ್ಯವಾದ ಶಿಲಾ ವ್ಯವಸ್ಥೆಯನ್ನಾಗಿ ಪರಿಗಣಿಸಲಾಗಿದೆ.
ವಿಭಜನೆ
[ಬದಲಾಯಿಸಿ]ಗೋಂಡ್ವಾನ ವ್ಯವಸ್ಥೆಯನ್ನು ಎರಡು ಮುಖ್ಯ ವರ್ಗಗಳನ್ನಾಗಿ ವಿಭಜಿಸಲಾಗಿದೆ. ಕೆಳಗಿನ ವರ್ಗಗಳಲ್ಲಿ ಗ್ಲಾಸಾಪ್ಟರಿಸ್ ಎಂಬ ಸಸ್ಯ ಜಾತಿಯೂ, ಮೇಲಿನ ವರ್ಗದಲ್ಲಿ ಟೈಲೊಫಿಲ್ಲಮ್ ಎಂಬ ರಾಜಮಹಲ್ ತರದ ಸಸ್ಯಜಾತಿಯೂ ಕಂಡುಬರುತ್ತವೆ. ಈ ಮೇಲು ಮತ್ತು ಕೆಳವರ್ಗದ ಗೋಂಡ್ವಾನ ಶಿಲೆಗಳನ್ನು ಮತ್ತೆ ಎರಡು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೆಳವರ್ಗದಲ್ಲಿ ಸೇರಿರುವ ವಲಯಗಳು ಕೆಳಗಿನಿಂದ ಮೇಲಕ್ಕೆ, ತಾಲ್ಚೀರ್, ದಾಮೂದ (Damuda) ಮತ್ತು ಪಾಂಚೆಟ್ ವಲಯಗಳು;[೨] ಮೇಲುವರ್ಗದಲ್ಲಿ ಮಹದೇವ, ರಾಜಮಹಲ್ ಮತ್ತು ಜಬಲಪುರ ವಲಯಗಳು.[೩] ಈ ಪ್ರತಿಯೊಂದು ವಲಯದಲ್ಲಿಯೂ ಮತ್ತೆ ಬೇರೆ ಬೇರೆ ಸ್ತರ ಪಂಕ್ತಿಗಳನ್ನು ಗುರುತಿಸಲಾಗಿದೆ. ಈ ಮುಖ್ಯ ವಲಯಗಳನ್ನೂ, ಪಂಕ್ತಿಗಳನ್ನೂ ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
ಕ್ರಿಟೇಷಸ್ ... ಜಬಲಪುರ ... ಉಮಿಯ ಜಬಲಪುರ ಜುರಾಸಿಕ್ ... ... ... ಕೋಟ ರಾಜಮಹಲ್ ಟ್ರಯಾಸಿಕ್ ... ಮಹದೇವ ... ಮಲೇರಿ ಪಚಮಾರ್ಹಿ ಪರ್ಮಿಯನ್ ... ದಾಮೂದ ... ರಾಣಿಗಂಜ್ ಬಂಜೆಸ್ತರ ಬರಾಕರ್ ಕಾರ್‌ಹಾರ್‌ಬಾರಿ[೪] ಕಾರ್ಬಾನಿಫೆರಸ್ ... ತಾಲ್ಚೀರ್ ... ರಿಕ್ಟ ತಾಲ್ಚೀರ್ ಗುಂಡುಸ್ತರ
ತಾಲ್ಚೀರ್ ವಲಯ
[ಬದಲಾಯಿಸಿ]ಇದು ಗೋಂಡ್ವಾನ ವ್ಯವಸ್ಥೆಯಲ್ಲಿ ಅತಿ ಕೆಳಗಿನದು.[೫] ಈ ಸ್ತರವನ್ನು ಒರಿಸ್ಸ ರಾಜ್ಯದ ತಾಲ್ಚೀರ್ ಬಳಿ ಮೊದಲಿಗೆ ಗುರುತಿಸಲಾಯಿತು. ಗುಂಡುಗಳ ರಾಶಿಯಿಂದ ಇದು ಮೊದಲಾಗುತ್ತದೆ. ಇದರ ಮೇಲೆ ಕ್ರಮವಾಗಿ 152-273 ಮೀ. ವರೆಗೂ ದಪ್ಪದ ಮರಳುಗಲ್ಲು ಮತ್ತು ಜೇಡುಕಲ್ಲಿನ ಸ್ತರಗಳು ಕಾಣುತ್ತವೆ. ಗುಂಡು ಕಲ್ಲಿನ ರಾಶಿ 15-200 ಮೀ. ವರೆಗೂ ದಪ್ಪವಾಗಿದೆ. ಹಿಮಗಲ್ಲಿನ ನೂಕುನುಗ್ಗಲಿಗೆ ಒಳಪಟ್ಟು ನುಣುಪಾದಂಥ ನಾನಾತರದ ಗುಂಡು ಕಲ್ಲುಗಳು ಕಾಣುವುದರಿಂದ ಈ ವಲಯದ ಶಿಲೆಗಳು ಶೇಖರವಾಗುವ ಕಾಲದಲ್ಲಿ ದಕ್ಷಿಣ ಇಂಡಿಯದ ಬಹುಭಾಗ ಹಿಮಗಲ್ಲಿನಿಂದ ಆವೃತವಾಗಿತ್ತೆಂದು ಊಹಿಸಲು ಅವಕಾಶ ಉಂಟು. ಹಿಮ ಕರಗಿ ಹುಟ್ಟಿಕೊಂಡು ವಿಶಾಲ ಸರೋವರಗಳಲ್ಲಿ ದಾಮೂದ ಮತ್ತು ಈಚಿನ ಸ್ತರಗಳು ಶೇಖರವಾದುವು.
ದಾಮೂದ ವಲಯ
[ಬದಲಾಯಿಸಿ]ದಾಮೋದರ ನದಿಯ ಕಣಿವೆಯಲ್ಲಿ ಈ ವರ್ಗದ ಶಿಲೆಗಳನ್ನು ಮೊದಲಿಗೆ ಗುರುತಿಸಿದುದರಿಂದ ಈ ಹೆಸರು ಬಂದಿದೆ. ದೇಶದ ಮುಖ್ಯ ಕಲ್ಲಿದ್ದಲಿನ ಪದರಗಳು ಅಡಗಿರುವುದು ಈ ವರ್ಗದ ಶಿಲೆಗಳಲ್ಲಿ. ಇವನ್ನು ನಾಲ್ಕು ಮುಖ್ಯ ಭಾಗಗಳಾಗಿ ವಿಂಗಡಿಸಿದೆ; ಕಾರ್‌ಹಾರ್‌ಬಾರಿ, ಬರಕಾರ್, ಬಂಜೆಸ್ತರ ಮತ್ತು ರಾಣಿಗಂಜ್. ಗೋಂಡ್ವಾನ ವ್ಯವಸ್ಥೆಯಲ್ಲಿ ವಿಶಾಲವಾಗಿ ಹರಡಿರುವ ಸ್ತರವರ್ಗವೆಂದರೆ ಇದೇ.
ಕಾರ್‌ಹಾರ್‌ಬಾರಿ ಸ್ತರ: ಈ ಸ್ತರಗಳು ತಾಲ್ಚೀರ್ ಸ್ತರಗಳ ಮೇಲೆ ತಂಗಿವೆ. ಗಿರಿಧಿ ಕಲ್ಲಿದ್ದಲ ಗಣಿಯ ಬಳಿ ಇವನ್ನು ಕಾಣಬಹುದು. ಕಲ್ಲಿದ್ದಲಿನ ಪದರಗಳಿರುವ ಮೇಲಿನ ಬರಕಾರ್ ಪಂಕ್ತಿಗೂ, ಇವಕ್ಕೂ ನಡುವೆ ಮರಳುಗಲ್ಲಿನ ಪದರವಿದೆ. ಈ ಸ್ತರಗಳಲ್ಲಿ ಕೂಡ ಕೆಲವು ಕಲ್ಲಿದ್ದಲಿನ ಪದರಗಳಿವೆ. ಕರನಪುರಾ (Karanpura), ಹುತಾರ, ದವಲತ್‌ಗಂಜ್, ಉಮೇರಿಯ, ಮೊಹಪಾನಿ ಮತ್ತು ಷಹಪುರ ಕಲ್ಲಿದ್ದಿನ ಪದರಗಳು ಕಾರ್‌ಹಾರ್‌ಬಾರಿ ಸ್ತರ ಪಂಕ್ತಿಗೆ ಸೇರಿದವು.
ಬರಕಾರ್: ರಾಣಿಗಂಜ್ ಕಲ್ಲಿದ್ದಲಿನ ಪ್ರದೇಶವನ್ನು ಹಾದು ಹೋಗುವ ಬರಕಾರ್ ನದಿಯ ಬಳಿ 758.33ಮೀಗೂ ದಪ್ಪದ ಈ ವರ್ಗದ ಶಿಲೆಗಳು ಕಾಣುತ್ತವೆ. ಝರಿಯಾ ಕಲ್ಲಿದ್ದಲ ಗಣಿ ಇರುವುದು ಈ ವರ್ಗದ ಶಿಲೆಗಳಲ್ಲಿ. ಇಲ್ಲಿ ಕಲ್ಲಿದ್ದಲಿನ ಸುಮಾರು 24 ಬೇರೆ ಬೇರೆ ಸ್ತರಗಳನ್ನು ಗುರುತಿಸಲಾಗಿದೆ. ಒಂದೊಂದು ಸ್ತರವೂ 1.21ಮೀ ಗಳಿಗಿಂತ ಹೆಚ್ಚು ದಪ್ಪವಾಗಿದೆ. ಬರಕಾರ್ ಸ್ತರಗಳು ಭಾರತದಲ್ಲಿ ದೊರೆಯುವ ಎಲ್ಲ ಕಲ್ಲಿದ್ದಲಿಗೂ ಮುಖ್ಯ ಆಧಾರ. ಈ ಸ್ತರಗಳಲ್ಲಿನ ಮರಳುಗಲ್ಲುಗಳಲ್ಲಿ ಗತಕಾಲದ ಮರಗಳ ಬುಡಗಳು ಮತ್ತು ಕೆಳಗೆ ಬಿದ್ದ ದಿಮ್ಮಿಗಳು ಕಾಣುತ್ತವೆ. ಬೊಕಾರೋ ಬಳಿಯ ಕಾರ್ಗಲಿ ಕಲ್ಲಿದ್ದಲಿನ ಸ್ತರ 30.33 ಮೀ ಗೂ ದಪ್ಪವಾಗಿದೆ. ಬರಕಾರ್ ಸ್ತರಗಳು ಒಳನಾಡ ಸರೋವರಗಳಲ್ಲಿ ನಿಕ್ಷೇಪಗೊಂಡಂತೆ ಕಾಣುತ್ತವೆ. ನದಿಗಳು ಕೊಚ್ಚಿ ತಂದ ಸಸ್ಯವರ್ಗ ಸರೋವರ ತಳದಲ್ಲಿ ಒಟ್ಟುಗೂಡಿ ಮೇಲೆ ಶೇಖರವಾದ ಮರಳುಗಲ್ಲುಗಳ ಒತ್ತಡದಿಂದ ಗಟ್ಟಿಗೊಂಡು ಕಲ್ಲಿದ್ದಲಿನ ಸ್ತರಗಳಾಗಿ ಮಾರ್ಪಟ್ಟಿದೆ.
ಬಂಜೆ ಸ್ತರಗಳು: ಬರಕಾರ್ ಸ್ತರಗಳ ಮೇಲೆ 607 ಮೀ. ಗೂ ದಪ್ಪದ ಕಬ್ಬಿಣ ಸಂಬಂಧದ ಜೇಡುಕಲ್ಲು ಕಾಣುತ್ತದೆ. ಕಲ್ಲಿದ್ದಲಿನ ಸ್ತರಗಳಿರುವ ಕೆಳಗಿನ ಬರಕಾರ್ ವರ್ಗಕ್ಕೂ, ಮೇಲಿನ ರಾಣಿಗಂಜ್ ವರ್ಗಕ್ಕೂ ನಡುವೆ ಕಲ್ಲಿದ್ದಲಿನ ಗುರುತೇ ಇಲ್ಲದಂಥ ಈ ಸ್ತರಗಳಿಗೆ ಬಂಜೆ ಸ್ತರಗಳು ಎಂದು ಹೆಸರು. ಕೆಲವು ಕಡೆ ಕಬ್ಬಿಣ ಹೆಚ್ಚಿರುವ ಈ ಜೇಡು ಕಲ್ಲನ್ನು ಕಬ್ಬಿಣದ ಅದುರಾಗಿ ಉಪಯೋಗಿಸುತ್ತಾರೆ. ಈ ಜೇಡಿನಲ್ಲಿ ಸುಮಾರು 35% ರಿಂದ 40% ರಷ್ಟು ಕಬ್ಬಿಣದ ಅಂಶ ಇದೆ. ಈ ಸ್ತರಗಳನ್ನು, ಝರಿಯಾ ಮತ್ತು ಕರನಪುರ ಕಲ್ಲಿದ್ದಲಿನ ಗಣಿ ಪ್ರದೇಶದಲ್ಲಿ ಗುರುತಿಸಬಹುದು.
ರಾಣಿಗಂಜ್ ಸ್ತರ: ಈ ಸ್ತರಗಳು ಚೆನ್ನಾಗಿ ತೋರುವುದು ರಾಣಿಗಂಜಿನ ಬಳಿ. ಇವು 910 ಮೀ. ಗೂ ಹೆಚ್ಚು ದಪ್ಪವಾಗಿವೆ. ಮುಖ್ಯವಾಗಿ ನುಣ್ಣನೆಯ ಮರಳುಗಲ್ಲುಗಳು, ಜೇಡು ಮತ್ತು ಕಲ್ಲಿದ್ದಲಿನ ಸ್ತರಗಳು ಇಲ್ಲಿ ಕಾಣುತ್ತವೆ. ರಾಣಿಗಂಜ್ ಬಳಿ ಮಾತ್ರ ಮುಖ್ಯ ಕಲ್ಲಿದ್ದಲಿನ ಪದರಗಳು ಇವೆ.
ಪಾಂಚೆಟ್ ಸ್ತರ
[ಬದಲಾಯಿಸಿ]ಇವು ರಾಣಿಗಂಜ್ ಸ್ತರಗಳ ಮೇಲೆ ಕಾಣುತ್ತವೆ. ಮುಖ್ಯವಾಗಿ ಮರಳುಗಲ್ಲು, ಜೇಡುಶಿಲೆಗಳಿಂದ ಕೂಡಿದೆ. ಇದರಲ್ಲಿ ಕಲ್ಲಿದ್ದಲು ಕಾಣುವುದಿಲ್ಲ.
ಮೇಲು ಗೋಂಡ್ವಾನ ಪದರಗಳಲ್ಲಿ ಮುಖ್ಯವಾದವು ಮಹದೇವ ಮತ್ತು ಜಬಲಪುರ ಸ್ತರಗಳು. ಈ ಶಿಲೆಗಳಲ್ಲಿ ಸಿಗುವ ಸಸ್ಯಾವಶೇಷಗಳಿಗೂ ಕೆಳಗಿನ ದಾಮೂದ, ತಾಲ್ಚೀರ್ ವರ್ಗದಲ್ಲಿ ದೊರೆಯುವ ಸಸ್ಯಾವಶೇಷಗಳಿಗೂ ವ್ಯತ್ಯಾಸ ಉಂಟು. ಈ ಮೇಲು ಗೋಂಡ್ವಾನ ಪದರಗಳಲ್ಲಿ ಕಲ್ಲಿದ್ದಲಿನ ಸೂಚನೆ ಕಾಣುವುದಿಲ್ಲ. ಕೆಲವು ಕಡೆ ಕಂಡರೂ ಅವು ಸಣ್ಣವು, ಉಪಯೋಗಕ್ಕೆ ಬರತಕ್ಕಂಥವಲ್ಲ.
ಅಗ್ನಿ ಶಿಲೆಗಳು: ಗೋಂಡ್ವಾನ ಸ್ತರಗಳನ್ನು ಭೇದಿಸಿ ಕೆಲವು ಅಗ್ನಿಶಿಲೆಗಳು ಕಾಣುತ್ತವೆ. ಇವು ಕಲ್ಲಿದ್ದಲನ್ನು ಸುಟ್ಟು ಕರಿಕು (ಕೋಕ್) ಮಾಡಿಬಿಟ್ಟಿವೆ. ಇವನ್ನು ಸ್ಥಳೀಯರು ಯಾಮ ಎಂದು ಕರೆಯುತ್ತಾರೆ.
ಆರ್ಥಿಕ ಪ್ರಾಮುಖ್ಯ
[ಬದಲಾಯಿಸಿ]ಗೋಂಡ್ವಾನ ವರ್ಗದ ಶಿಲೆಗಳು ಪ್ರಸಿದ್ಧಿಯಾಗಿರುವುದು ಅವುಗಳಲ್ಲಿರುವ ಕಲ್ಲಿದ್ದಲಿನ ಸ್ತರಗಳಿಂದ. ಭಾರತದಲ್ಲಿ ಪ್ರತಿ ವರ್ಷ 8,50,00,000 ಟನ್ನುಗಳಷ್ಟು ಕಲ್ಲಿದ್ದಲು ಉತ್ಪತ್ತಿಯಾಗುತ್ತದೆ. ಈ ಕಲ್ಲಿದ್ದಲಲ್ಲಿ ಬಹುಭಾಗ ಗೋಂಡ್ವಾನ ವರ್ಗದ ಅದರಲ್ಲೂ ಬರಕಾರ್ ಮತ್ತು ರಾಣಿಗಂಜ್ ವರ್ಗದ ಶಿಲೆಗಳಿಂದ ಬರುತ್ತದೆ. ಕಲ್ಲಿದ್ದಲಿನ ಬಹುಭಾಗದಲ್ಲಿ ಬೂದಿ ಅಂಶ ಹೆಚ್ಚು. ಆದ್ದರಿಂದಾಗಿ ಕಬ್ಬಿಣ ಕರಗಿಸುವುದಕ್ಕೆ ಅದು ಅಷ್ಟಾಗಿ ಉಪಯೋಗವಾಗುವುದಿಲ್ಲ. ಝರಿಯಾ, ಗಿರಿಧಿ ಮತ್ತು ಬೊಕಾರೋ ಬಳಿ ದೊರೆಯುವ ಕಲ್ಲಿದ್ದಲು ಉತ್ತಮ ದರ್ಜೆಯದು. ಕಬ್ಬಿಣ ಕರಗಿಸಲು ಉಪಯೋಗಕ್ಕೆ ಬರುವಂಥದು. ಮಿಕ್ಕಂತೆ ಕಲ್ಲಿದ್ದಲು ನೀರು ಕಾಯಿಸಿ ಹಬೆಯನ್ನು ಉತ್ಪಾದಿಸುವುದಕ್ಕೆ ಯೋಗ್ಯವಾದುದು. ಆವಿಯಿಂದ ನಡೆಯುವ ರೈಲು ಎಂಜಿನ್ನುಗಳಿಗೂ, ವಿದ್ಯುತ್ತನ್ನು ಉತ್ಪಾದಿಸುವುದಕ್ಕೂ ಕಲ್ಲಿದ್ದಲು ವಿಶೇಷವಾಗಿ ಉಪಯೋಗವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Suess 1885, p. 768: "Wir nennen es Gondwána-Land, nach der gemeinsamen alten Gondwána-Flora, … "(We name it Gondwána-Land, after the common ancient flora of Gondwána …)
- ↑ https://shomish.com/study-materials.php/geological-features-of-peninsular-india
- ↑ https://egyankosh.ac.in/bitstream/123456789/69607/1/Unit-7.pdf
- ↑ http://palaeontologicalsociety.in/vol33/v7.pdf
- ↑ https://www.simoticlasses.com/2021/09/gondwana-system.html
ಗ್ರಂಥಸೂಚಿ
[ಬದಲಾಯಿಸಿ]- Suess, E. (1885). Das Antlitz der Erde (The Face of the Earth) (in ಜರ್ಮನ್). Vol. 1. Leipzig, Germany: G. Freytag. Retrieved 3 September 2017.